
“ಪ್ರತಿಭೆಗಳು ನೀರೊಳಗಿನ ಗುಳ್ಳೆಯಂತೆ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅದು ತನ್ನಿಂದ ತಾನೇ ಮೇಲೆ ಬರುತ್ತದೆ. ಕಠಿಣ ಪರಿಶ್ರಮ ಮತ್ತು ತ್ಯಾಗ ಮುಖ್ಯವಾಗಿ ಪ್ರತಿಯೊಬ್ಬನಲ್ಲಿದ್ದರೆ ಸಾಕು.” ಇದು ನನ್ನ ಮಾತಲ್ಲ `ಸೀಕ್ರೇಟ್ ಸೂಪರ್‍ಸ್ಟಾರ್’ ಸಿನಿಮಾದಲ್ಲಿ ಶಕ್ತಿಕುಮಾರ್ ಇನ್‍ಶಿಯಾಳಲ್ಲಿ ಹೇಳುವ ಮಾತು. ಒಂದು ಪ್ರತಿಭೆಯನ್ನು ಇಟ್ಟುಕೊಂಡು ಹಲವಾರು ವಿಷಯಗಳನ್ನು ಚರ್ಚಿಸಿ ಪ್ರೇಕ್ಷಕರನ್ನು ಕಣ್ಣೀರು ಭರಿಸುವ ಸಿನಿಮಾಗಳಲ್ಲಿ `ಸೀಕ್ರೇಟ್ ಸೂಪರ್‍ಸ್ಟಾರ್’ ಆ ಪಟ್ಟಿಗೆ ಸೇರುತ್ತದೆ. ಎಳೆಯ ಪ್ರಾಯ ಎಂದರೆ ಹಲವಾರು ಕನಸುಗಳನ್ನು ಹೊತ್ತು ಸಂಚರಿಸುವ ಸಂಪೂರ್ಣ ಸ್ವಾತಂತ್ರ್ಯ ಭರಿತವಾದ ಜೀವನ. ಪ್ರತಿಯೊಬ್ಬನಲ್ಲೂ ಒಂದೊಂದು ವಿಭಿನ್ನವಾದ ಕಲೆಯಿರುತ್ತದೆ. ಆ ಪ್ರತಿಭೆಯ ಯಶಸ್ಸಿಗೆ ಬಾಲ್ಯದಲ್ಲಿ ಹಲವಾರು ಕನಸುಗಳ ಕಲ್ಪನೆಯನ್ನು ಜೋಡಿಸಿ ಸಂತೃಪ್ತಗೊಳ್ಳುತ್ತೇವೆ. ಕೆಲವೊಂದು ಆಂತರಿಕ ಸಮಸ್ಯೆಗಳು ತಮ್ಮ ಕನಸಿನ ಯಶಸ್ಸಿಗೆ, ಪ್ರತಿಭೆಗೆ ಮುಳ್ಳಾಗಿ ಪರಿಣಮಿಸುತ್ತದೆ. ಅವು ಎಲೆಮರೆಕಾಯಿಯಂತೆ ಬದುಕಿನ ಉದ್ದಕ್ಕೂ ಮರೆಯಾಗಿರುತ್ತದೆ.
ಇನ್‍ಶಿಯಾ ಎಂಬ ಪ್ರತಿಭಾವಂತೆ ಹಾಡುಗಾರ್ತಿಯ ಕನಸಿನೊಂದಿಗೆ ಸಂಚರಿಸುವ `ಸೀಕ್ರೇಟ್ ಸೂಪರ್‍ಸ್ಟಾರ್’ ಕಥೆಯು ಮಗುವಿನ ಬದುಕಿನಲ್ಲಿ ನಡೆಯುವ ದುರಂತಮಯ ಸನ್ನಿವೇಶಗಳನ್ನು ವಿವರಿಸುತ್ತದೆ. ತಂದೆ ತಾಯಿಯ ಜಗಳ. ತಾಯಿಯ ಅತಿಯಾದ ಪ್ರೀತಿ ಮತ್ತು ತಂದೆಯ ಘೋರ ವರ್ತನೆ ಇನ್‍ಶಿಯಾಳ ಬದುಕಿನಲ್ಲಿ ದೊಡ್ಡ ಪರಿಣಾಮ ಬೀರುತ್ತದೆ. ಹೆಣ್ಣು ಮಗುವು ದೊಡ್ಡದಾಗಿ ಬೆಳೆಯುತ್ತಿದ್ದಂತೆ ಅವಳಿಗೊಂದು ಮದುವೆ ಮಾಡಿಸಿ ಕೌಟುಂಬಿಕ ಜೀವನಕ್ಕೆ ದೂಡಿ ತನ್ನ ಮೇಲಿರುವ ಭಾರವನ್ನು ಇಳಿಸಿ ಮುಕ್ತವಾಗಬೇಕೆಂದು ಹಲವು ಅಪ್ಪಂದಿರ ಆಗ್ರಹ ಇಲ್ಲಿಯೂ ಅದೇ ವಿಷಯವನ್ನು ಹೃದಯ ಮುಟ್ಟುವ ಶೈಲಿಯಲ್ಲಿ ಈ ಚಿತ್ರ ಹೇಳುತ್ತದೆ. ಮಗಳ ಪ್ರತಿಭೆಗಿಂತ ಅಪ್ಪನ ಮೇಲಿರುವ ಜವಾಬ್ಧಾರಿಯ ಹೊರೆ ಮುಖ್ಯವಾಗಿರುತ್ತದೆ. ಹೆಣ್ಣು ಮಕ್ಕಳು ಹೆತ್ತವರ ಆಗ್ರಹ ಮತ್ತು ಬಲವಂತಕ್ಕೆ ಮಣಿದು ತಮ್ಮ ಕನಸುಗಳನ್ನು ಹಿಸುಕಿ ಹಾಕಬೇಕು. ಧಾರ್ಮಿಕ ಕಟ್ಟುಪಾಡುಗಳು, ವಿಚಾರಗಳು, ವಿಧಿ ವಿಧಾನಗಳು ಸಣ್ಣ ಪುಟ್ಟ ಮಕ್ಕಳ ಪ್ರತಿಭೆಗಳ ಮೇಲೂ ದೊಡ್ಡ ಗೋಡೆಯಂತೆ ಎದ್ದು ನಿಲ್ಲುತ್ತದೆ ಎಂಬುವುದು ಈ ಚಿತ್ರ ವಿವರಿಸುವ ಇನ್ನೊಂದು ಗಮನಾರ್ಹ ವಿಷಯ. ತಂದೆ-ತಾಯಿ ಅಥವಾ ಗಂಡ-ಹೆಂಡತಿ ನಡುವಿನ ಆಂತರಿಕ ಗಲಭೆ ಮತ್ತು ಸಮಸ್ಯೆಗಳನ್ನು ಮಕ್ಕಳ ಮುಂದೆ ಪ್ರದರ್ಶಿಸಿದರೆ ಆ ಮಕ್ಕಳಲ್ಲಿ ಯಾವ ರೀತಿ ದ್ವೇಷ ರೋಷ ಹುಟ್ಟಿಕೊಂಡು ಜೀವನ ಜಿಗುಪ್ಸೆ ಭರಿತವಾಗಿರುತ್ತದೆ ಎಂಬುವುದು ಈ ಚಿತ್ರದ ಇನ್ನೊಂದು ಮಗ್ಗುಲು. ತಾಯಿಯಂದಿರಿಗಿರುವ ಭಾವನಾತ್ಮಕ ಸಂಬಂಧ, ಗೆಳೆತನವನ್ನು ತಮ್ಮನೊಂದಿಗಿರುವ ಹರಟೆ ಸುಂದರವಾಗಿ ವಿವರಿಸಿದೆ. ಸಪ್ನ ರೇ, ಮೆ ಕೋನ್ ಹೂಂ ಹಾಡುಗಳು ಬಹಳ ಸುಂದರವಾಗಿ ಮೂಡಿ ಬಂದಿದೆ “ಮೇರಿಪ್ಯಾರಿ ಅಮ್ಮಿ ತೂಹೆ” ಎಂಬ ಹಾಡು. ಇನ್ನಷ್ಟು ನಮ್ಮ ತಾಯಂದಿರ ನೆನಪಿನ ಕಡೆಗೆ ಒಯ್ಯುತ್ತದೆ. ತಮ್ಮ ಮಕ್ಕಳ ಪ್ರತಿಭೆಯನ್ನು ಇತರರು ಗುರುತಿಸಿ ಪತ್ಸಾಹಿಸುವುದಕ್ಕಿಂತ ನಾವು ಗುರುತಿಸಿ ಪ್ರೋತ್ಸಾಹಿಸಿ ಬೆಳೆಸಿದರೆ ಅದಕ್ಕಿಂತ ದೊಡ್ಡ ತ್ಯಾಗ ನಾವು ನಮ್ಮ ಮಕ್ಕಳಿಗೆ ಮಾಡುವುದೇನು ಇಲ್ಲ. ಶಕ್ತಿ ಕುಮಾರ್ ಆಗಿ ಅಮೀರ್ ಖಾನ್, ಇನ್‍ಶಿಯಾ ಳಾಗಿ ಝಾಇರಾ ವಾಸಿಮ್, ರಾಜ್ ಅರ್ಜುನ್ ತಂದೆಯ ಪಾತ್ರದಲ್ಲಿ ಅಮ್ಮನ ಪಾತ್ರದಲ್ಲಿ ಮೆಹರ್ ವಿಜಿ ಕಬೀರ್ ಶೈಕ್ ಪುಟ್ಟ ತಮ್ಮನ ಪಾತ್ರದಲ್ಲಿ ಉತ್ತಮವಾಗಿ ತಮ್ಮ ಪಾತ್ರಗಳಿಗೆ ಶಕ್ತಿ ತುಂಬಿದ್ದಾರೆ
ಕುಟುಂಬ ಸಮೇತ ನೋಡಬಹುದಾದ ಅತ್ಯುತ್ತಮ ಚಿತ್ರ.