ಭಾಗ -2

  • ಶಿಕ್ರಾನ್ ಶರ್ಫುದ್ದೀನ್ ಎಂ.
    ( +91 8197789965
    ಪಾಂಡೇಶ್ವರ, ಮಂಗಳೂರು


ದೇವತೆಗಳಾಗಲಿ, ಭಕ್ತರಾಗಲಿ ಎಲ್ಲರನ್ನೂ ಇಲ್ಲಿ ಅಸತ್ಯರೆಂದು ಪರಿಣಮಿಸಲಾಗಿದೆ!
ವಿಮರ್ಶಿಸಿ, ಅನುಭವಿಸಿ ಈ ಇಹದ ಬದುಕೇ ಅಸತ್ಯವೆಂದು ಸಾಬೀತುಪಡಿಸಲಾಗಿದೆ!

ಅಭಿಮಾನಿಗಳು ಪರಿಚಯವಿದ್ದೂ ಅಪರಿಚಿತರಂತೆ ವರ್ತಿಸುತ್ತಿರುವುದನ್ನು ಗಮನಿಸಿದರೆ,
ಕಲ್ಲಿನ ಪ್ರತಿಮೆಗಳನ್ನು ಹೊರತುಪಡಿಸಿ, ಉಳಿದೆಲ್ಲವೂ ಅಸತ್ಯವೆಂದು ಪರಿಣಮಿಸಲಾಗಿದೆ!

ಕಲಾವಿದನು- ಕಲ್ಲು ಪ್ರತಿಮೆಯನ್ನು ಕೆತ್ತಿಸಿ, ತನ್ನ ಕಲಾಕೃತಿಗೆ ಮುಗುಳ್ನಗು ನೀಡುವನು;
ತನ್ನದೇ ಕೃತಿಯನ್ನು ಪ್ರದರ್ಶಿಸುತ್ತಾ, ಕಲಾವಿದ ಅದು ಅಸತ್ಯವೆಂದು ಸಾಬೀತುಪಡಿಸುವವನು!

ಅವಳ ಆ ಕಾವ್ಯಸಾಲುಗಳು ಸತ್ಯವನು ಸಾಬೀತುಪಡಿಸುತ್ತಿರುವುದನ್ನು ಗಮನಿಸಿ,
ಕಂಡ ಕನಸುಗಳನ್ನು ಹೊರತುಪಡಿಸಿ, ಉಳಿದೆಲ್ಲವೂ ಅಸತ್ಯವೆಂದು ಪರಿಣಮಿಸಲಾಗಿದೆ!


7.
(2015-16 ಸಾಲಿನ ದರ್ಶನ ಕವನ ಸ್ಪರ್ಧೆಯಲ್ಲಿ ಮೂರನೇ ಪ್ರಶಸ್ತಿ ಗಳಿಸಿದ ಕವನ)

ಅಳಲೆಕಾಯಿ ಪಂಡೀತರನ್ನು ಕಂಡವರು ತಲೆಯಲ್ಲೇ ಎಂದೂ ಮರೆಯಲಿಲ್ಲ
ಆ ಕಣ್ಣಿಗೆ ಮಣ್ಣೆರೆಚುವವರಲ್ಲಿ ‘ಮಾನವ’ರ್ಯಾರೆಂದು ಕಾಣಸಿಗುತ್ತಿರಲಿಲ್ಲ…

ನನ್ನನ್ನು ಇರಿದ ಅವರ ನಗ್ನ ಕಠಾರಿ ಅಂದು ಸಿಕ್ಕರೂ ಕೂಡ;
ಅವರನ್ನು ಪ್ರಶ್ನಿಸುವವರಿರಲಿಲ್ಲ, ನನ್ನನ್ನು ಸಂತೈಸುವವರಿರಲಿಲ್ಲ…

ಅಂಗಿ ಒದ್ದೆಯಾಗಿತ್ತು, ಸ್ರವಿಸುತ್ತಿರುವ ಗಾಯಗಳಿಂದ;
ನೊಂದ ಕಣ್ಣಿನಿಂದ ಬಿದ್ದ ಹನಿಯೂ ರಕ್ತವಲ್ಲದೇ ಮತ್ತೇನಲ್ಲ…

ಗಿಡುಗಗಳು ಹಾರಿದವು ಶಿಖರ ಚುಂಬಿಸಲು. ಆದರೆ,
ಪ್ರತಿಭಟಿಸಿದ ಘರ್ಜನೆಯಲ್ಲಿ ಅಪಾಯವಿತ್ತು; ಕೆಚ್ಚು ಧೈರ್ಯವಿರಲಿಲ್ಲ…

ಸೂರ್ಯೋದಯವಾಗುವುದು ಕಗ್ಗತ್ತಲಿರುಳು ತೊಡೆದ ಬಳಿಕ,
ನುಸುಕು ದಿವ್ಯ ಬೆಳಕು ಹರಡಿಸುವುದು. ಎಂದೂ ಕತ್ತಲಲ್ಲ…

ಆರಿದ ನಂದಾದೀಪವನು ಪೌರುಷ ಶೂರತ್ವ ಮತ್ತೆ ಬೆಳಗಿಸಿಯೇ ತೋರಿಸಿತು!
ಪರರ ಗೋರಿ ಅಗಿದವರೇ, ಅದರೊಳಗೆ ಚಿರನಿದ್ರೆ ಮಲಗಿದರು. ನಾನಂತೂ ಅಲ್ಲ…

ನನ್ನದೊಂದು ಗಜ ಭೂಮಿ ನಿಷ್ಟುರಿಗಳು ಕಬಳಿಸಿದರೇನು ಮಹಾ?
ಸೋಮ-ತಾರೆಗಳಾಚೆಯೂ ಬ್ರಹ್ಮಾಂಡವಿದೆ; ಈ ಭೂಮಿಯೊಂದೇ ಅಲ್ಲ…


8.
ಮತ್ತದೇ ಮಬ್ಬಾದ ರಾತ್ರಿ, ಮಾತುಗಳು ತಾರೆಗಳ ಕುರಿತು
ತಾರೆಗಳೊಂದಿಗೆ ಅಮೂಲ್ಯ ಮುತ್ತು ರತ್ನಗಳ ಕುರಿತು

ಮಾತುಗಳಲ್ಲಿ ಕಟ್ಟಿದರು ಭವ್ಯಭವನ ತಾರೆಗಳ ಗೊಂಚಲಿನಲ್ಲಿ
ಮಾತು ಮುಗಿದಂತೆ ಯೋಚಿಸಿದರು ತಮ್ಮ ಜೋಪಡಿಗಳ ಕುರಿತು

ಹಿಂಬದಿಯೂ ಅಂಧಕಾರವಿತ್ತು ಮುಂಬದಿಯೂ ಅಂಧಕಾರವಿತ್ತು
ಆ ಅಂಧಕಾರದಲ್ಲೂ ಮಾತುಗಳು ತಾರೆಗಳ ಕುರಿತು

ತಾರೆಗಳ ಮಾತು, ಮಾತುಗಳಲ್ಲಿ ಮುತ್ತು – ರತ್ನಗಳಂತೆ. ಆದರೆ,
ಅಂಧಕಾರದ ಖಂಡನೆಯಲ್ಲಿ ಯೋಚಿಸಿದರು ತಮ್ಮ ಮಾತುಗಳ ಕುರಿತು

ಈ ಮಿನುಗುವ ಕವನ, ಉರಿಯುವ ಅಭಿಲಾಷೆ ಅಭಿವ್ಯಕ್ತಿಪಡಿಸಿದಂತೆ
ಕಾವ್ಯಸಾಲುಗಳು ಜೀರ್ಣಗೊಳ್ಳದಿದ್ದರೂ, ಮಾತುಗಳು ತಾರೆಗಳ ಕುರಿತು


9.
ಸುಲಲಿತವಾಗಿ ಕಳೆದು ಹೋದ ಸ್ವರ್ಣ ದಿನಗಳನ್ನು ಗಮನಿಸಲೇ ಇಲ್ಲ
ಕಳೆದು ಹೋದ ಆ ದಿನಗಳು ವಿಫಲವಾಗಿತ್ತೆಂದು ಗಮನಿಸಲೇ ಇಲ್ಲ!

ಸಿಹಿವೆಂದುಕೊಂಡ ಕಳೆದ ದಿನಗಳು ನಿಜವಾಗಿ ವಿಷಭರಿತವಾಗಿತ್ತು
ಆ ದಿನಗಳಲ್ಲಿ ವಿಷ ತುಂಬಿಸಿದವರು ಯಾರೆಂದು ಗಮನಿಸಲೇ ಇಲ್ಲ

ಆವರಿಸಿದ ಕಗ್ಗತ್ತಲನ್ನು ಎದುರಿಸಲು ಬೆಳಗಿಸಿದೆ ಹಣತೆಯೊಂದನ್ನು
ಬೆಳಗಿಸಿದ ಆ ಹಣತೆ ಪ್ರಕಾಶಿಸಿತು ಎಲ್ಲಿಯವರೆಗೆ ಗಮನಿಸಲೇ ಇಲ್ಲ

ಎದುರುಗೊಂಡ ಸೋಲುಗಳನ್ನು ಆಲಂಗಿಸಿಕೊಳ್ಳುವುದು ಕಷ್ಟಕರವಾಗಿತ್ತು
ಅಲ್ಲದೆ, ಆ ಸೋಲುಗಳಲ್ಲಿ ಅಡಗಿದ ನೀತಿ-ಮೌಲ್ಯಗಳು ಗಮನಿಸಲೇ ಇಲ್ಲ


10.
ಅತೀಯಾದ ನಿರೀಕ್ಷೆಗಳು ನೇಣಿನಂತೆ ಕಾಡತೊಡಗಿದವು!
ನೀಡಿದ ವಚನಗಳು, ಹಳೆ ನೆನಪುಗಳು ಕಾಡತೊಡಗಿದವು!

ಒಂಟಿತನದ ನಿಷ್ಶಬ್ಧತೆಯಲಿ ಶಾಂತನಾಗಿ ಬದುಕಬಹುದಿತ್ತು,
ನೆನಪುಗಳ ನಿಂದನೆಗಳು ಆಲೋಚನೆಗಳಾಗಿ ಕಾಡತೊಡಗಿದವು!

ರಾತ್ರಿಯಲಿ ತಾರೆಗಳು ಮಿಂಚುವುದೆಂದು ಕೇಳಿದ್ದೆ. ಆದರಿಂದು,
ಕಗ್ಗತ್ತಲಿರುವ ಭವಿತವ್ಯದ ಆತಂಕಗಳು ಕಾಡತೊಡಗಿದವು…!

ಪ್ರಸ್ತುತ ಸ್ಥಿತಿಯನು ನಗುನಗುತ ಎದುರಿಸಬಹುದಿತ್ತು. ಆದರೆ,
ಅಸಹನೀಯ ಕಹಿ ನೆನಪಿನ ಹೊರೆಗಳು ಕಾಡತೊಡಗಿದವು!


LEAVE A REPLY

Please enter your comment!
Please enter your name here