ತಲ್ಹಾ ಇಸ್ಮಾಯಿಲ್ ಕೆ.ಪಿ
ಟ್ರಸ್ಟಿ, ಸೆಂಟರ್ ಫಾರ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಅನಾಲಿಸೀಸ್

ಸರಕಾರಕ್ಕೆ ನೀಡಲಾದ ಮೂರನೇ ಶಿಫಾರಸ್ಸು- ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ಪ್ರಧಾನವಾಗಿ ಕಲಿಕೆಗೆ ಮಾತ್ರ ತೊಡಗಿಸಿಕೊಂಡು ಎಲ್ಲಾ ರೀತಿಯ ಕಲಿಕೇತರ ಕೆಲಸಗಳಿಂದ ಅವರನ್ನು ಮುಕ್ತಗೊಳಿಸಬೇಕು.

ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಆರ್.ಟಿ.ಈ ಕಾಯ್ದೆ 2009ರ ಪ್ರಕರಣ 27ರ ಅನ್ವಯ- ದಶವಾರ್ಷಿಕ ಜನಗಣತಿ, ವಿಪತ್ತು ಪರಿಹಾರ ಕಾರ್ಯಗಳು ಅಥವಾ ಸಂದರ್ಭಾನುಸಾರ ಸ್ಥಳೀಯ ಪ್ರಾಧಿಕಾರ ಅಥವಾ ರಾಜ್ಯ ವಿಧಾನ ಮಂಡಲ ಅಥವಾ ಸಂಸತ್ತು ಚುನಾವಣೆಗಳಿಗೆ ಸಂಬಂಧಿಸಿದ ಕರ್ತವ್ಯಗಳನ್ನು ಹೊರತು ಪಡಿಸಿ ಉಳಿದ ಯಾವುದೇ ಶಿಕ್ಷಣೇತರ ಉದ್ದೇಶಗಳಿಗಾಗಿ ಸರಕಾರಿ ಶಾಲಾ ಶಿಕ್ಷಕರನ್ನು ವಿನೋಯೋಗಿಸಬಾರದು ಎಂದಾಗಿದೆ. ಆದರೆ, ಇಂದು ಸುಮಾರು 20ಕ್ಕಿಂತಲು ಹೆಚ್ಚಿನ ವಿಧದ ಕೆಲಸ ಕಾರ್ಯಗಳನ್ನು ಸರಕಾರಿ ಶಾಲಾ ಶಿಕ್ಷಕರು ಮಾಡಬೇಕಾದ ಅಗತ್ಯತೆ ಇದೆ. ಸರಕಾರವು ಸರಕಾರಿ ಶಿಕ್ಷಕರನ್ನು ಆ ಕೆಲಸಗಳನ್ನು ನಿರ್ವಹಿಸುವಂತೆ ನಿರ್ಬಂಧಿಸುತ್ತಿರುವುದು ಖೇದನೀಯ ಸಂಗತಿ.

ಮೊದಲೇ ಶಿಕ್ಷಕರ ಕೊರತೆಯಿಂದ ತತ್ತರಿಸಿರುವ ಶಾಲೆಗಳಲ್ಲಿ, ಇರುವ ಅಲ್ಪ ಶಿಕ್ಷಕರಿಗೆ ಈ ರೀತಿ 20 ವಿಧದ ಕೆಲಸವನ್ನು ನೀಡಿದಾಗ, ಅವರು ಅದನ್ನು ನಿರ್ವಹಿಸುವಾಗಲೇ ಶಾಲಾ ಸಮಯ ಮುಗಿದು ಹೋಗಬಹುದು. ಶಿಕ್ಷಕರ ಮೇಲಾಧಿಕಾರಿಗಳಾಗಿರುವ ತಮ್ಮನ್ನೇ ಶಿಕ್ಷಣಾಧಿಕಾರಿಗಳೆಂದು ಹೇಳುವ ಬಿ.ಇ.ಓ, ಡಿಡಿಪಿಐ ಅಪರೂಪಕ್ಕೊಮ್ಮೆ ಶಾಲೆಗಳಿಗೆ ಭೇಟಿ ಕೊಡುತ್ತಾರೆ. ಅವರು ಹೋಗಿ ಶಾಲೆಯ ಲೆಕ್ಕಾಚಾರಗಳನ್ನು ತೆಗೆಯುವುದು ಮತ್ತು ಶಿಕ್ಷಕರನ್ನು ಬೆದರಿಸುವಂತಹ ಕೆಲಸಗಳನ್ನು ಮಾಡುತ್ತಾರೆಯೇ ಹೊರತು ಇನ್ನೇನೂ ಇಲ್ಲ.

ಅಂದೊಮ್ಮೆ, ಶಾಲೆಗೆ ಬಿ.ಇ.ಓ ರವರು ಬರುತ್ತಿದ್ದಾರೆಂಬ ಮಾಹಿತಿ ಪಡೆದು ನಾನು ಅವರನ್ನು ಸ್ವಾಗತಿಸಿ ಶಾಲೆಯ ಪರಿಸ್ಥಿತಿಯ ಬಗ್ಗೆ ವಿವರಿಸಿ, ಶಾಲಾ ಎಸ್.ಡಿ.ಎಂ.ಸಿ ಸದಸ್ಯರನ್ನು ಭೇಟಿಯಾಗಲು ಹೇಳಿದೆ. ಅವರು ಶಾಲಾ ಎಸ್.ಡಿ.ಎಂ.ಸಿ ಯನ್ನು ಭೇಟಿಯಾಗುವ ಗೋಜಿಗೇ ಹೋಗಲಿಲ್ಲ. ಬದಲಾಗಿ, ಪೊಲೀಸ್ ಅಧಿಕಾರಿಯ ರೀತಿ ವಿಚಾರಣೆ ಮಾಡಿ ಹೊರಡಲು ತಯಾರಾದರು. ಆಗ ನಾನು, ನೀವು ಈ ರೀತಿ ಶಿಕ್ಷಕರನ್ನು ವಿಚಾರಿಸುವುದಕ್ಕಿಂತ ಮುಂಚೆ ನೀವು ಅವರಿಗೆ ನೀಡಿರುವ ಸೌಲಭ್ಯಗಳು ಹಾಗು ಅವರಿಗೆ ಆಗುವ ತೊಂದರೆಗಳ ಕುರಿತು ವಿಚಾರಿಸಿ ತಕ್ಕುದಾದ ಪರಿಹಾರ ಸೂಚಿಸ ಬೇಕಿತ್ತಲ್ಲವೇ ಎಂದು ಪ್ರಶ್ನಿಸಿದೆ. ಆಗ ಅವರು ಸಿಟ್ಟಿನಿಂದ ಅದು ನೀವು ಹೇಳ ಬೇಕಾಗಿಲ್ಲ ಎಂದರು. ಆಗ ನಾನು ಸ್ವಾಮಿ, ಅಮಾವಾಸೆಗೊಮ್ಮೆ ಹುಣ್ಣಿಮೆಗೊಮ್ಮೆ ಬರುವ ನೀವು ಏನು ಮಾಡುತ್ತಿದ್ದೀರೆಂದು ನನಗೆ ಚೆನ್ನಾಗಿ ಗೊತ್ತು. ಈ ಶಾಲೆಯ ಶಿಕ್ಷಕರ ಹುದ್ದೆ ಹಲವು ವರ್ಷಗಳಿಂದ ಖಾಲಿ ಇದೆ. ಬೋಧಕೇತರ ಸಿಬಂದ್ದಿ ಶಾಲೆಯ ಎಲ್ಲಾ ದಾಖಲೆಯ ನಿರ್ವಹಣೆಯಿಂದ ಹಿಡಿದು ಶೌಚಾಲಾಯ ಶುಚಿಗೊಳಿಸುವ ತನಕ ಎಲ್ಲಾ ಕೆಲಸಗಳನ್ನು ಈ ಶಾಲೆಯ ಶಿಕ್ಷಕರು ಮತ್ತು ಮಕ್ಕಳೇ ಮಾಡಬೇಕು. ಇನ್ನು ಶಾಲೆಯಲ್ಲಿ ತಡೆಗೋಡೆ ಇಲ್ಲದಿರುವುದರಿಂದ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶಾಲೆ ಪ್ರಾರಂಭವಾಗುವುದಕ್ಕಿಂತ ಅರ್ಧಗಂಟೆ ಮುಂಚಿತವಾಗಿಯೇ ಸ್ಟಡೀ ಕ್ಲಾಸ್ ಎಂದು ಜಾನುವಾರುಗಳು ಶಾಲೆಯ ಅಂಗಳದಲ್ಲಿ ದಿನನಿತ್ಯ ಹಾಕುತ್ತಿರುವ ಮಲ-ಮೂತ್ರಗಳನ್ನು ಶುಚಿಗೊಳಿಸುತ್ತಾರೆ ಎಂದಾಗ, ನನ್ನನ್ನು ದಿಟ್ಟಿಸಿ ನೋಡಿ ನೋಡುವ ಸಾರ್, ಹೇಗಾದರೂ ಈ ಶಾಲೆಗೆ ತಡೆಗೋಡೆ ನಿರ್ಮಿಸಲು ಹೇಳುತ್ತೇನೆ ಎಂದು ಹೋದವರು ಇಂದಿಗೂ ಪತ್ತೆಯೇ ಇಲ್ಲ.

ಈ 20 ರೀತಿಯ ಕಾರ್ಯಕ್ರಮಗಳಿಗಿಂತಲೂ ಭಿನ್ನವಾದ ಎಷ್ಟೋ ಕಾರ್ಯಗಳನ್ನು ಸರಕಾರಿ ಶಾಲಾ ಶಿಕ್ಷಕರು ನಿರ್ಭಂದಿತರಾಗಿ ಮಾಡಬೇಕಾದ ಅವಶ್ಯಕತೆ ಇದೆ ಎಂಬುವುದು ಈ ಒಂದು ಉದಾಹರಣೆಯಿಂದ ನಮಗೆ ಅರ್ಥವಾಗುತ್ತದೆ. ಈ 20 ರೀತಿಯ ಕೆಲಸಗಳು ಒಂದನೇಯದಾಗಿ ಅಕ್ಷರ ದಾಸೋಹ ಕಾರ್ಯಕ್ರಮ ಹಾಗು ದಾಖಲೆ ನಿರ್ವಹಣೆ, ಎರಡನೇಯದಾಗಿ ಕ್ಷೀರ ಭಾಗ್ಯ ಕಾರ್ಯಕ್ರಮ ಹಾಗು ದಾಖಲೆ ನಿರ್ವಹಣೆ, ಮೂರನೇಯದಾಗಿ ಶೌಚಾಲಯ ಮತ್ತು ಕಡಿಯುವ ನೀರಿನ ನಿರ್ವಹಣೆ ಎಂಬೆಲ್ಲಾ ಕೆಲಸಗಳು ದಿನನಿತ್ಯ ಮಾಡುವ ಕೆಲಸಗಳಾಗಿರುವುದರಿಂದ ಪ್ರತಿದಿನ ಶಿಕ್ಷಕರ ಬೋಧನೆಯ ಸಮಯದ ಒಂದು ಭಾಗವನ್ನು ಅವರು ಅದಕ್ಕಾಗಿ ಮೀಸಲಿಡಬೇಕಾಗುತ್ತದೆ. ಒಂದು ವೇಳೆ-

  • ಶೂ, ಬೈಸಿಕಲ್, ಸಮವಸ್ತ್ರ, ಪಠ್ಯಪುಸ್ತಕ ವಿತರಣೆ, ಮಾತ್ರೆ ವಿತರಣೆ, ಬ್ಯಾಂಕ್‍ನೊಂದಿಗೆ ಶಾಲೆಯ ವ್ಯವಹಾರದಂತಹ ಕೆಲಸಗಳಿದ್ದರೆ ಅಂದು ಮಕ್ಕಳ ಅರ್ಧದಿನ ಹಾಳಾದಂತೆಯೇ. ಏಕೆಂದರೆ ಈ ಎಲ್ಲಾ ಕೆಲಸಗಳಿಗೆ ಬಹಳಷ್ಟು ಸಮಯ ಬೇಕಾಗುತ್ತದೆ ಎಂಬುವುದು ನಮಗೆ ಚೆನ್ನಾಗಿ ತಿಳಿದಿದೆ.

ನಾನೊಮ್ಮೆ ನನ್ನ ಗೆಳೆಯನ ಬಳಿ ನೀನು ಏಕೆ ಶಿಕ್ಷಕನಾಗ ಬಯಸುವೀ ಎಂದು ಕೇಳಿದೆ. ಆಗ ಆತ ಸ್ವಾಮಿ ನನಗೆ ಹೆಂಡ್ತಿ ಮಕ್ಕಳಿದ್ದಾರೆ, ತಂದೆ-ತಾಯಿಯಿದ್ದಾರೆ ಅವರ ಜೊತೆ ಪ್ರೀತಿಯಿಂದ ಕೆಲವು ಸಮಯ ಕಳೆಯ ಬೇಕಾದರೆ ಶಿಕ್ಷಕನಾದರೆ ಒಳ್ಳೆಯದು. ಯಾಕೆಂದರೆ, ಪ್ರತಿ ವರ್ಷ ಮೂರು ತಿಂಗಳು ರಜೆ ಸಿಗುತ್ತದೆ ಒಬ್ಬ ಬಿಸಿಬೆಸ್ ಮ್ಯಾನ್‍ಗೆ ಅಥವಾ ಪೊಲೀಸ್ ಅಧಿಕಾರಿ ಅಥವಾ ಇನ್ಯಾವುದೇ ಕೆಲಸದಲ್ಲಿದ್ದರೆ ವರ್ಷದಲ್ಲಿ ಮೂರು ತಿಂಗಳು ರಜೆ ಸಿಗುವುದಿಲ್ಲ ಎಂದಿದ್ದ. ಆಗ ನಾನು ಶಿಕ್ಷಕರ ಹುದ್ದೆ ಉತ್ತಮ ಹುದ್ದೆ. ಅವರಿಗೇನು ತೊಂದರೆ ಇರುವುದಿಲ್ಲ ಎಂದೆನಿಸಿದ್ದೆ. ಆದರೆ,

  • ಜನಗಣತಿ, ಚುನಾವಣಾ ಕರ್ತವ್ಯ, ಮಕ್ಕಳ ಗಣತಿ ಎಂಬೆಲ್ಲಾ ಕೆಲಸಗಳಿಗೆ ತಿಂಗಳು ಗಟ್ಟಲೆ ಬೇಕಾಗುತ್ತದೆ. ಹೆಚ್ಚಿನಾಂಶ ರಾಜಾವಧಿಯಲ್ಲಿಯೇ ಶಿಕ್ಷಕರು ಈ ಕೆಲಸವನ್ನು ನಿರ್ವಹಿಸುತ್ತಾರೆ. ಅವರಿಗೆ ರಜೆ ಎಂಬುವುದು ಇಲ್ಲವೇ? ಅವರಿಗೆ ಕುಟುಂಬ ಇಲ್ಲವೇ? ಜನಪ್ರತಿನಿಧಿಗಳು ಅವರನ್ನು ಯಂತ್ರಗಳೆಂದು ಪರಿಗಣಿಸಿದ್ದಾರೆಯೇ? ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಜನಪ್ರತಿನಿಧಿಗಳು ಮತ್ತು ಸಮಾಜ ಈ ರೀತಿ ಅನ್ಯಾಯ ಮಾಡುವುದೇಕೆ?
  • ವಿವಿಧ ಅನುದಾನಗಳ ಸಮರ್ಪಕ ವೆಚ್ಚ ಹಾಗು ದಾಖಲೆ ನಿರ್ವಹಣೆ, ವೆಚ್ಚವಾದ ಅನುದಾನಗಳ ಲೆಕ್ಕಪತ್ರ ಹಾಗು ದಾಖಲೆ ನಿರ್ವಹಣೆಯಂತಹ ಕೆಲಸಗಳನ್ನು ಶಿಕ್ಷಕರಿಗೆ ನೀಡಲಾಗಿದೆ. ಕೆಲವರಂತು ಶಾಲೆ ಅಭಿವೃದ್ಧಿ ಹೊಂದಲಿಲ್ಲ ಎಂಬುವುದನ್ನು ಶಿಕ್ಷಕರು ಶಾಲೆಯನ್ನು ಅಭಿವೃದ್ಧಿಗೊಳಿಸಲಿಲ್ಲ ಎಂದು ಶಿಕ್ಷಕರನ್ನು ದೂರುವವರೂ ಇದ್ದಾರೆ. ಹಾಗಿರುವಾಗ ಈ ಶಿಕ್ಷಕರ ಸಮಸ್ಯೆಗಳನ್ನು ಅವರು ನಿರ್ವಹಿಸಬೇಕಾಗಿರುವಂತಹ ಕೆಲಸಗಳಲ್ಲಿ ಕಡಿತಗೊಳಿಸಬೇಕಾದೆ ಹಾಗೂ ಆರ್.ಟಿ.ಈ ಯ ಪ್ರಕರಣ 27ರ ಅನ್ವಯ ಇರುವಂತಹ ಕೆಲಸಗಳನ್ನು ಕೂಡ ಒಂದು ವೇಳೆ ಸರಕಾರವು ಇತರರಿಗೆ ವಹಿಸಿಕೊಟ್ಟರೆ ಸರಕಾರಿ ಶಾಲಾ ಶಿಕ್ಷಕರಿಗೆ ಒಂದಿಷ್ಟು ನೆಮ್ಮದಿ ದೊರೆಯಬಹುದು.

 

 

 

LEAVE A REPLY

Please enter your comment!
Please enter your name here