ಶೆಹಝಾದ್ ಶಕೀಬ್, ಮೈಸೂರು
ಟ್ರಸ್ಟಿ, ಸೆಂಟರ್ ಫಾರ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಅನಾಲಿಸೀಸ್

ಅದೊಂದು ನಿಭಿಡತೆಯ ವಾರದ ಶುಕ್ರವಾರ ಸಂಜೆಯಾಗಿತ್ತು. ನಾನು ನನ್ನ ಊರಿನ ಕಡೆಗೆ ಹೊರಟಿದ್ದೆ. ಜೋರಾಗಿ ಹಾರ್ನ್ ಸದ್ದಾಗುವುದರೊಂದಿಗೆ ರೈಲಿನ ಸಿಗ್ನಲ್ ಲೈಟು ಹಸಿರು ಬಣ್ಣಕ್ಕೆ ತಿರುಗಿ, ಹೊಗೆಯನ್ನು ಉಗುಳಿತು. ರೈಲು ಚಲಿಸಲು ಪ್ರಾರಂಭವಾಯಿತು. ನಾನು ಕಿಟಕಿಯ ಪಕ್ಕದ ಸೀಟಿನಲ್ಲಿ ಕುಳಿತು ಎಂದಿನಂತೆ ಓದಲು ಪುಸ್ತಕವೊಂದನ್ನು ಕೈಗೆತ್ತಿಕೊಂಡೆ. ನಾನು ಪುಟ ತಿರುವುತ್ತಾ ಓದುತ್ತಿದ್ದಾಗ, ನನ್ನ ಪಕ್ಕದ ಸೀಟಿನಲ್ಲಿ ಕುಳಿತಿರುವ ವ್ಯಕ್ತಿಯೊಬ್ಬರು ನಿರಂತರವಾಗಿ ನನ್ನನ್ನೇ ದಿಟ್ಟಿಸುತ್ತಿದ್ದರು. ಕಡೆಗೆ ಅವರು ಕೇಳಿಯೇ ಬಿಟ್ಟರು, ಯಾವ ಪರೀಕ್ಷೆಗೆ ಸಿದ್ಧತೆಯನ್ನು ನಡೆಸುತ್ತಿರುವಿರಿ? ಯಾವ ಕೋರ್ಸನ್ನು ಮಾಡುತ್ತಿರುವಿರಿ? ಅವರು ಮಾತು ಮುಂದುವರಿಸುತ್ತಾ, ಯಾತ್ರೆಯ ಸಮಯದಲ್ಲೂ ನೀನು ಹೇಗೆ ಓದಬಲ್ಲೆ? ನೀನು ಖಂಡಿತವಾಗಿಯೂ ರ಼್ಯಾಂಕ್ ಪಡೆದವನೇ ಇರಬೇಕು? ಅಥವಾ ನಿನ್ನ ಎಲ್ಲಾ ಪರೀಕ್ಷೆಗಳಲ್ಲಿ ಕನಿಷ್ಠ 90%ಕ್ಕಿಂತ ಅಧಿಕ ಅಂಕವನ್ನು ಗಳಿಸಿರಬಹುದು? ನಿನಗೆ ಉತ್ತಮ ಭವಿಷ್ಯವಿದೆ, ನೀನು ಒಳ್ಳೆಯ ಉದ್ಯೋಗವನ್ನು ಪಡೆಯುವಿ…ಹ್ಞಾಂ… ಆದರೆ ನನ್ನ ಮಗ ನಿನ್ನ ಹಾಗೆ ಅಲ್ಲ. ಆತ ಕಲಿಯುವುದೇ ಇಲ್ಲ. ಆತನು ನಿನ್ನಂತೆ ಶೈಕ್ಷಣಿಕವಾಗಿ ಆಸಕ್ತಿಯನ್ನು ಹೊಂದಲು ಏನು ಮಾಡಬೇಕೆಂದು ನೀನು ನನಗೆ ತಿಳಿಸುವೆಯಾ? ಎಂದೆಲ್ಲಾ ಹೇಳಿದರು. ನಾನು ಗಾಬರಿಗೊಂಡೆ. ಮೊದಲು ನನಗೆ ಖುಷಿಯೂ ಆಯಿತು. ಯಾಕೆಂದರೆ ಮೊದಲ ಸಲ ಯಾರೋ ನನ್ನನ್ನು ಯುವ ವಿದ್ಯಾರ್ಥಿಯಂತೆ ಕಂಡರು. ಸಾಮಾನ್ಯವಾಗಿ ಗಂಭೀರವಾಗಿರುವ ಹಿರಿಯ ವ್ಯಕ್ತಿಯಾಗಿಯೇ ನನ್ನನ್ನು ಕಾಣುತ್ತಾರೆ. ಆದರೆ, ನಾನು ಹಾಗಿಲ್ಲ… ನಾನು ನನ್ನ ಸಹಯಾತ್ರಿಕನಿಗೆ ಸಣ್ಣ ನಗುವಿನೊಂದಿಗೆ ಸರ್…ನಾನು ಎಂ.ಎನ್.ಸಿ ಯಲ್ಲಿ ಕೆಲಸ ಮಾಡುತ್ತಿದ್ದೇನೆ, ತಕ್ಷಣ ಭವಿಷ್ಯದಲ್ಲಿ ನನಗೆ ಯಾವುದೇ ಪರೀಕ್ಷೆಯನ್ನು ಬರೆಯಲೂ ಇಲ್ಲ ಎಂದು ತಿಳಿಸಿದೆ. ನಾನು ಮಾತು ಮುಂದುವರಿಸುವುದಕ್ಕಿಂತ ಮೊದಲೇ ಆತನ ಸ್ಟೇಷನ್ ಬಂದು ಬಿಟ್ಟಿತು. ಆತ ಗೊಂದಲಕ್ಕೀಡಾಗಿ ನನ್ನ ಕೈಯಲ್ಲಿರುವ ಪುಸ್ತಕವನ್ನು ಮತ್ತು ನನ್ನ ಮುಖವನ್ನೊಮ್ಮೆ ನೋಡಿ, ಹಾರೈಸಿ ಇಳಿದು ಹೋದ.
ನಾನು ಯಾತ್ರೆ ಮುಂದುವರಿಸಿದಂತೆ, ಯಾಕೆ ನನ್ನ ಸಹಯಾತ್ರಿಕ ನನ್ನ ಕೈಯಲ್ಲಿ ಪುಸ್ತಕವನ್ನು ಕಂಡು ನಾನು ಪರೀಕ್ಷೆಗೆ ತಯಾರಿ ನಡೆಸುತ್ತಿರುವುದಾಗಿ, 90% ಅಂಕ, ಒಳ್ಳೆಯ ಭವಿಷ್ಯ ಎಂದೆಲ್ಲಾ ಭಾವಿಸಿದ. ನನಗೆ ನನ್ನ ಕಾಲೇಜು ದಿನಗಳು ನೆನಪಾಯಿತು. ಅದೇನೇ ಇರಲಿ, ಪುಸ್ತಕದಲ್ಲಿ ಒಳ್ಳೆಯ ವೃತ್ತಾಂತ ಇದ್ದುದರಿಂದ ನಾನು ಓದುವುದನ್ನು ಮುಂದುವರಿಸಿದೆ. ಅಂತಿಮವಾಗಿ ನಾನು ನನ್ನ ಊರನ್ನು ತಲುಪಿದೆ. ಮರುದಿನ ಮಧ್ಯಾಹ್ನ ನನ್ನ ಮಿತ್ರ ನನಗೆ ಕರೆ ಮಾಡಿ, ಸಂತೋಷಭರಿತ ಧ್ವನಿಯೊಂದಿಗೆ ಆತ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ವಿಚಾರವನ್ನು ಸಾರಿದ. ನನ್ನ ಪರಿಶ್ರಮಗಳಿಗೆ ಫಲದಕ್ಕಿತು. ನಾನು ಪರೀಕ್ಷೆಗಾಗಿ ಟ್ಯೂಷನಿನಲ್ಲಿ ತುಂಬಾ ಸಮಯವನ್ನು ವ್ಯಯಿಸಿದ್ದೇನೆ ಮತ್ತು ಅನೇಕ ರಾತ್ರಿಗಳು ಕಣ್ಣಿಗೆ ಎಣ್ಣೆ ಹಚ್ಚಿ ಕಳೆದಿದ್ದೇನೆ. ಈಗ ನಾನು ತುಂಬಾ ಖುಷಿಯಾಗಿದ್ದೇನೆ ಎಂದನು.
ನಾನು ಆತನನ್ನು ಅಭಿನಂದಿಸಿ, ಭೇಟಿಯಾಗುವುದಾಗಿ ಮಾತು ಕೊಟ್ಟು, ಕರೆ ಮುಗಿಸಿದೆ.

ನಿನ್ನೆ ರಾತ್ರಿ ರೈಲಿನಲ್ಲಿ ನಡೆದ ಮಾತುಕತೆ ಮತ್ತು ನನ್ನ ಗೆಳೆಯ ಪರೀಕ್ಷೆಯಲ್ಲಿ ತೇರ್ಗಡೆಯಾದುದರ ಆನಂದಪರವಶವಾದ ಸಾರುವಿಕೆ ನನ್ನನ್ನು ಆಶ್ಚರ್ಯಗೊಳಿಸಿತು. ನಂತರದಲ್ಲಿ ನನಗೆ ಅರಿವಾಯಿತು, ಶಿಕ್ಷಣ ಅಭಿವೃದ್ಧಿಗಾಗಿಯಲ್ಲ. ಬದಲಾಗಿ, ಶಿಕ್ಷಣ ತನ್ನಲ್ಲಿಯೇ ಒಂದು ಅಭಿವೃದ್ಧಿಯಾಗಿದೆ. ನಾವು ಶಿಕ್ಷಣವನ್ನು ನೋಡುವ ರೀತಿಯೇ ಸಮಸ್ಯೆಯಿಂದ ಕೂಡಿದ್ದಾಗಿದೆ.
ಶಾಲೆಯ ತರಗತಿಗಳಿಗೆ ಹಾಜರಾಗಿ, ಅಲ್ಲಿಂದ ವೇಗವಾಗಿ ಖಾಸಗಿ ಟ್ಯೂಷನ್ ಕಡೆಗೆ ತೆರಳಿ ಮತ್ತೆ ಅಲ್ಲಿಂದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗಾಗಿ ಓಡುವುದು. ಇದು ಅನೇಕ ಭಾರತೀಯ ವಿದ್ಯಾರ್ಥಿಯ ದೈನಂದಿನ ಪರಿಸ್ಥಿತಿಯಾಗಿದೆ. ಇದು ಮಕ್ಕಳಿಂದ ಬಾಲ್ಯವನ್ನು ಕಸಿದುಕೊಂಡಿದೆ. ವರ್ಷಂಪ್ರತಿ ಭಾರತದಲ್ಲಿ ಮಕ್ಕಳು ಈ ಪೀಡನೆಗೆ ಬಲಿಯಾಗುತ್ತಿದ್ದಾರೆ. ಉತ್ತಮ ಶೇಕಡ ಅಂಕ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು, ಒಳ್ಳೆಯ ಉದ್ಯೋಗ ಗಳಿಸುವುದು ಇವುಗಳು ಮಾತ್ರ ಶ್ರೇಷ್ಠತೆ ಮತ್ತು ಯಶಸ್ಸಿನ ಮಾನದಂಡಗಳಲ್ಲವೆಂದು ನಾವು ಅರಿಯಬೇಕಿದೆ. ಇದು ಒಂದೇ ಆಯಾಮದ ನಾಗರೀಕರನ್ನು ಸೃಷ್ಟಿಸುತ್ತಿದೆ. ನಾವು ಒಂದು ದೇಶವಾಗಿ, ಒಂದಿಡೀ ಪೀಳಿಗೆಯನ್ನು ಒಂದೇ ಆಯಾಮವನ್ನಾಗಿಸುವುದರೊಂದಿಗೆ ಬೆಂಕಿಯೊಂದಿಗೆ ಆಡುತ್ತಿದ್ದೇವೆ. ಮಕ್ಕಳ ವಿವಿಧ ಆಯಾಮಗಳ ಮೇಲೆ ಮತ್ತು ಸಂಪೂರ್ಣ ವ್ಯಕ್ತಿತ್ವದ ಮೇಲೆ ಗಮನ ನೀಡುವಂತಹ ಶಿಕ್ಷಣದ ಮಾದರಿಗಳು ಬೇಕಾಗಿದೆ. ಅಲ್ಲದೆ ಈಗಿನ ಮಾದರಿಗಳನ್ನು ಬದಲಾಯಿಸಬೇಕಿದೆ.
ನಿರೀಕ್ಷೆಗಳ ಹೊರೆಯಿಂದಾಗಿ ಮತ್ತು ಭಯ ತುಂಬಿದ ಭವಿಷ್ಯದಿಂದಾಗಿ, ಮಕ್ಕಳು ಭಯದ ಸ್ಥಿತಿಯಲ್ಲಿದ್ದಾರೆ. ಮಕ್ಕಳು ಕೇವಲ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಮತ್ತು ಒತ್ತಡಕ್ಕೆ ಹಾಗು ಅವರಿಗೆ ತುಂಬಿಸಲ್ಪಡುತ್ತಿರುವುದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುವುದನ್ನು ಕಲಿಯುತ್ತಿದ್ದಾರೆ. ಅಲ್ಲದೆ, ಅವರಿಗೆ ಆಲೋಚಿಸಲು, ಪ್ರತಿಬಿಂಬಿಸಲು ಅಥವಾ ಕ್ರಿಯಾತ್ಮಕವಾದ ಮತ್ತು ಸಾಮಾಜಿಕವಾದ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಲ್ಲಳು ಸಮಯವೇ ಇಲ್ಲ. ಆ ಭಯವು ಅವರಲ್ಲಿ ಮನೋವೈಜ್ಞಾನಿಕವಾದ ಕಗ್ಗಂಟನ್ನು ಮತ್ತು ಮಾನಸಿಕ ಸಮಸ್ಯೆಗಳನ್ನು ಸೃಷ್ಟಿಮಾಡಿದೆ. ಕೆಲವು ತೀವ್ರವಾದ ಸಂಧರ್ಭಗಳಲ್ಲಿ ಅದು ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ. ಅಲ್ಲದೆ, ಇದರ ಆವರ್ತನದ ಮಟ್ಟದಲ್ಲಿ ಏರಿಕೆಯಾಗುತ್ತಿದೆ.

ನಮ್ಮ ಹೆಚ್ಚಿನ ಶಾಲೆಯ ಪಠ್ಯಕ್ರಮದಲ್ಲಿ ಮತ್ತು ಕೋರ್ಸುಗಳಲ್ಲಿ ನೈತಿಕ ವಿಜ್ಞಾನ ಇಲ್ಲ ಹಾಗು ನಮ್ಮ ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಮಕ್ಕಳನ್ನು ಜವಾಬ್ದಾರಿಯುತ ಮತ್ತು ಉತ್ತಮ ಪ್ರಜೆಗಳಾಗಿ ತರಬೇತಿ ನೀಡುವುದರಲ್ಲಿ ವಿಫಲವಾಗಿದೆ. ನಾವು ಈ ಮೂಲಕ ಸ್ವತಂತ್ರವಾಗಿ ಆಲೋಚಿಸಬಲ್ಲ ನಾಗರಿಕರನ್ನು ಬಿಡಿ, ಕೌಶಲ್ಯವನ್ನು ಕಲಿಯದ/ಸ್ವಾಧೀನ ಪಡಿಸಿಕೊಳ್ಳದ ಮತ್ತು ಕೇವಲ ಪರೀಕ್ಷೆಗಳನ್ನು ಪಾಸು ಮಾಡಲು ಕಲಿತ ಸೋಮಾರಿಗಳನ್ನು ಹುಟ್ಟು ಹಾಕುತ್ತಿದ್ದೇವೆ. ಇದು ದೇಶಕ್ಕೆ ಉತ್ತಮ ಭವಿಷ್ಯವನ್ನು ತೋರಿಸುವುದಿಲ್ಲ.
ನಾವು ಶಿಕ್ಷಣದ ಫಲಿತಾಂಶಗಳ ಕುರಿತು ಮತ್ತು ಶಿಕ್ಷಿತ ವ್ಯಕ್ತಿ ಹೇಗಿರಬೇಕೆಂಬುವುದರ ಕುರಿತು ಗಂಭೀರವಾಗಿ ವಿಚಾರ ಮಾಡಬೇಕಿದೆ. ನಾಝಿ ಶಿಬಿರದಲ್ಲಿ ಕೊಂದವರು ಯಾರೂ ಕೂಡ ಅನಕ್ಷರಸ್ಥರೋ ಅಥವಾ ಅಶಿಕ್ಷಿತ ರಾಕ್ಷಸರೋ, ದೆವ್ವಗಳೋ ಆಗಿರಲಿಲ್ಲ. ಬದಲಾಗಿ ಅವರೆಲ್ಲರೂ ತರಬೇತಿ ಪಡೆದ ನರ್ಸ್‍ಗಳು, ಶಿಕ್ಷಿತ ವೈದ್ಯ ಮತ್ತು ಕಾಲೇಜು ಪದವೀಧರರಾಗಿದ್ದರು. ನಾವು ನಮ್ಮ ಶಿಕ್ಷಣದ ಪರಿಕಲ್ಪನೆಯ ಕುರಿತು ಪುನರ್‍ಚಿಂತನೆ ಮತ್ತು ಮರುಕಲ್ಪನೆ ನಡೆಸಬೇಕಿದೆ. ನಾವು ಸಂಪೂರ್ಣವಾದ ಪಲ್ಲಟಗಳು ತರುವಂತಹ ಶಿಕ್ಷಣದ ಮಾದರಿಗಳಾಗಿ ಬೇಡಿಕೆಯಿಡಬೇಕು ಮತ್ತು ಹುಡುಕಾಡಬೇಕು. ಅಲ್ಲದೆ, ನಿರ್ದಿಷ್ಟ ರೂಪ ಅಥವಾ ಲಕ್ಷಣಕ್ಕೆ ತರುವ ಅಚ್ಚಿಗೆ ಬಲವಂತವಾಗಿ ಪುನರ್ ನಿರ್ಮಾಣ ಮಾಡಿ, ಹೊಂದಿಸಿಕೊಳ್ಳುವ ಕರಗಿಸಿದ ಲಾವದ ರೀತಿಯಲ್ಲಿ ಮಕ್ಕಳನ್ನು ಕಾಣಬಾರದು. ಮಾನವೀಯ ಮಕ್ಕಳನ್ನು ನಿರ್ಮಾಣ ಮಾಡುವಲ್ಲಿ ಮತ್ತು ತನ್ನ ಜೀವನದ ಪರಮ ಉದ್ದೇಶವನ್ನು ಪರಿಚಯಿಸುವಲ್ಲಿ ವಿಫಲವಾದ ಶಿಕ್ಷಣದಲ್ಲಿ ಏನು ಓದಿದರೇನು ಮತ್ತು ಬರೆದರೇನು? ಇತಿಹಾಸ ಅಥವಾ ಗಣಿತ ಕಲಿತರೇನು? ಬಿಟ್ಟರೇನು?
ಸಮಯವು ಮೀರಿ ಹೋಗುವ ಮುನ್ನವೆ ನಾವು ಶಿಕ್ಷಣದ ನೈಜ ಉದ್ದೇಶವನ್ನು ಗುರುತಿಸಬೇಕಿದೆ ಮತ್ತು ನಮ್ಮ ಗ್ರಹಿಕೆಗಳನ್ನು ಬದಲಾಯಿಸಬೇಕಿದೆ. ಶಿಕ್ಷಣವು ನಮ್ಮ ಆಲೋಚನೆಗಳನ್ನು ತೆರೆಯುತ್ತದೆಂದಾದರೆ, ಅದು ನಮ್ಮ ಹೃದಯಗಳಿಗೆ ಪರಿಶುದ್ಧತೆಯನ್ನು ನೀಡಬೇಕು. ಶಿಕ್ಷಣವು ನಮಗೆ ಕೌಶಲ್ಯವನ್ನು ನೀಡುತ್ತದೆ ಎಂದಾದರೆ, ಅದು ನಮಗೆ ಪ್ರಾಮಾಣಿಕತೆಯನ್ನು ದೊರಕಿಸಿಕೊಡಬೇಕು. ಶಿಕ್ಷಣವು ನಮ್ಮ ಸಂಬಂಧವನ್ನು ಜಗತ್ತಿನೊಂದಿಗೆ ಬೆಸೆಯುತ್ತದೆ ಎಂದಾದರೆ, ಅದು ನಮ್ಮ ಕುಟುಂಬದ ಸದಸ್ಯರೊಂದಿಗೆ ನಮ್ಮನ್ನು ಜೋಡಿಸಬೇಕು. ಶಿಕ್ಷಣವು ನಮ್ಮ ಬದುಕನ್ನು ಉತ್ತಮವಾಗಿಸುತ್ತದೆ ಎಂದಾದರೆ, ಅದು ನಮ್ಮ ಜೀವನವನ್ನು ಒಳಿತಾಗಿಸಬೇಕು. ಶಿಕ್ಷಣವು ನಮಗೆ ಇತರರೊಂದಿಗೆ ಸ್ಪರ್ಧಿಸಲು ಕಲಿಸುತ್ತದೆ ಎಂದಾದರೆ, ಅದು ನಮಗೆ ಪರಿಪೂರ್ಣತೆಯನ್ನು ಹೊಂದಲು ಹೇಳಿಕೊಡಬೇಕು. ಶಿಕ್ಷಣವು ನಮಗೆ ಉತ್ತಮವಾಗಿ ಕಲಿಯುವ ಸಾಮಥ್ರ್ಯವನ್ನು ಕಲ್ಪಿಸುತ್ತದೆ ಎಂದಾದರೆ, ಅದು ನಮಗೆ ಆಳವಾದ ಅರ್ಥೈಸುವಿಕೆಯನ್ನು ಸಾಧ್ಯವಾಗಿಸಬೇಕು.

LEAVE A REPLY

Please enter your comment!
Please enter your name here