ಯೋಗೇಶ್ ಮಾಸ್ಟರ್
(ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ)

ಭಾರತದಲ್ಲಿ ‘ಅಸತೋಮ ಸದ್ಗಮಯ, ತಮಸೋಮ ಜ್ಯೋತಿರ್ಗಮಯ, ಮೃತ್ಯೋರ್ಮ ಅಮೃತಂಗಮಯ’ ಎಂಬುದು ಬಹಳ ಮಂದಿ ತಿಳಿದಿರುವ ಸರಳ ಪ್ರಾರ್ಥನೆ. ತಾತ್ವಿಕವಾಗಿ ಒಪ್ಪಿಗೆಯ ರೀತಿಯಲ್ಲಿ ಈ ಪ್ರಾರ್ಥನೆ ಒಂದು ಸಂಕೇತವಾಗಿದೆ. ಅಸತ್ಯದಿಂದ ಸತ್ಯದ ಕಡೆಗೆ ನಡೆಯುವ, ಕತ್ತಲೆಯಿಂದ ಬೆಳಕಿನ ಕಡೆಗೆ ನಡೆಯುವ, ಮೃತ್ಯುವಿನಿಂದ ಅಮೃತತ್ವದ ಕಡೆಗೆ ನಡೆಯುವ ಆಶಯ ಇದಾಗಿದೆ. ಕತ್ತಲೆ ಅಜ್ಞಾನದ ಸಂಕೇತವಾದರೆ, ಜ್ಞಾನದ ಸಂಕೇತವನ್ನಾಗಿ ಬೆಳಕನ್ನು ಆಯ್ದುಕೊಂಡಿದ್ದೇವೆ.

ಜನಪ್ರಿಯವಾಗಿ ಅಥವಾ ವ್ಯಾಪಕವಾಗಿ ಹೊರಗೆ ಕಾಣುವಷ್ಟು ಆಶಯದ ಪರದೆಯನ್ನು ಸರಿಸಿ ಸೂಕ್ಷ್ಮವಾಗಿ ಒಳಗೆ ನೋಡಲು ಯತ್ನಿಸಬಹುದು. ಆಗ, ಜಗತ್ತಿನ ಸತ್ಯ ಬೆಳಕಲ್ಲ ಎಂಬುದು ತಿಳಿಯುತ್ತದೆ. ಈ ಲೋಕ ಬೆಳಕಿನದಲ್ಲ. ಕತ್ತಲೆಯದು. ನಮ್ಮ ಭೂಮಿಯೂ ಕೂಡಾ ಸೌರ ಕುಟುಂಬದಲ್ಲಿರುವ ಕಾರಣದಿಂದ ಭೂಮಿಯ ಮೇಲೆ ಬೆಳಕೆಂಬುದು ಚಲಿಸುತ್ತಿರುತ್ತದೆ. ಆದರೆ ಅದು ಇರುವುದೇ ವಿಶ್ವದ ಕತ್ತಲೆಯಲ್ಲಿ. ಬೆಳಕಿಗೆ ಅಸ್ತಿತ್ವವಿಲ್ಲ. ಅದು ಬರುತ್ತದೆ ಹೋಗುತ್ತದೆ. ಸೂರ್ಯನಂತೆ ಬೆಳಕಿನ ಕಾಯಗಳು ಈ ವಿಶ್ವದಲ್ಲಿ ಇದ್ದರೂ ಅವೇ ಸ್ವಯಂಪ್ರಭೆಯ ಕಾಯಗಳಾಗಿವೆಯೇ ಹೊರತು ಅವೇ ಅಸ್ತಿತ್ವವಲ್ಲ. ಹಾಗೆ ವಿಶ್ವದ ಅಸ್ತಿತ್ವವನ್ನು ನೋಡಿದರೆ ಅದು ಕತ್ತಲೆ. ಬಂದು ಹೋಗುವ ಅಥವಾ ಅಸ್ತಿತ್ವದ ಸಣ್ಣ ಭಾಗವಾಗಿರುವ ಬೆಳಕನ್ನು ಸತ್ಯಕ್ಕೆ ಹೋಲಿಸಿ, ವಿರಾಟ್ ಸ್ವರೂಪದ ಕತ್ತಲೆಯನ್ನು ಅಸತ್ಯಕ್ಕೆ ಹೋಲಿಸುವುದಕ್ಕೆ ಇಲ್ಲಿ ತಗಾದೆ ಇರುವುದು.

ಇನ್ನೂ ಜ್ಞಾನವನ್ನು ಬೆಳಕಿಗೆ ಹೋಲಿಸುವುದರಲ್ಲಿ ಮತ್ತು ಅಜ್ಞಾನವನ್ನು ಕತ್ತಲೆಗೆ ಹೋಲಿಸುವಲ್ಲಿ ಒಂದಷ್ಟು ಜಾಣತನ ಇದೆ. ಜ್ಞಾನ ಸೀಮಿತ ಮತ್ತು ಅಜ್ಞಾನ ಅನಂತ. ಬೆಳಕು ಸೀಮಿತ ಮತ್ತು ಕತ್ತಲೆ ಅನಂತ. ಯಾರೋ ಒಬ್ಬ ಮೇಧಾವಿ ಅಪಾರ ಜ್ಞಾನಿಯಾಗಿರಬಹುದು, ಅವನು ಅನಂತ ಜ್ಞಾನಿಯಾಗಲಾರ.

ಇರಲಿ, ಉಪಮೆಗಳು, ಸಂಕೇತಗಳು, ವಿವರಣೆಗಳು, ವ್ಯಾಖ್ಯಾನಗಳನ್ನೆಲ್ಲಾ ವಾಸ್ತವವೆಂದೇನೂ ಒಪುö್ಪವ ಅಗತ್ಯವಿಲ್ಲ. ಅವು ಸತ್ಯವಾಗಿರಬೇಕೆಂದೇನೂ ಇಲ್ಲ. ಆದರೆ, ವಿಷಯ ವಸ್ತುವನ್ನು ವಿವಿಧ ಮಗ್ಗಲುಗಳಿಂದ ತಿಳಿದುಕೊಳ್ಳಲು ಅವು ನೆರವಾಗುತ್ತವೆ.

ಇಷ್ಟು ಪೀಠಿಕೆ ಬೇಕಾಗಿದ್ದು ಕತ್ತಲೆಯನ್ನು ನಕಾರಾತ್ಮಕ ಅಥವಾ ಋಣಾತ್ಮಕ ಎಂದೂ, ಬೆಳಕನ್ನು ಸಕಾರಾತ್ಮಕ ಅಥವಾ ಧನಾತ್ಮಕವೆಂದೂ ಪರಿಗಣಿಸುವ ಜನಪ್ರಿಯ ಮತ್ತು ವ್ಯಾಪಕ ಪರಿಕಲ್ಪನೆಯನ್ನೇ ಮುಂದಿಟ್ಟುಕೊಂಡು, ಅದನ್ನೇ ಆದರಿಸಿಕೊಂಡು ಮಗುವಿನ ಮತ್ತು ಮನುಷ್ಯನ ವರ್ತನೆ ಮತ್ತು ಮನಸ್ಥಿತಿಗಳಿಗೆ ಆರೋಪಿಸುವಂತಹ ಕೆಲವು ವಿಷಯಗಳನ್ನು ಸೀಳಲು.

ಈಸೋಪನ ನೀತಿ ಕತೆಗಳಲ್ಲಿ ಒಂದು ಕತೆ ಇದೆ. ದಾಸನಾಗಿದ್ದ ಒಬ್ಬ ಯುವಕ ತನ್ನ ದಾಸ್ಯದಿಂದ ತಪ್ಪಿಸಿಕೊಂಡು ಒಂದು ಗುಹೆಯಲ್ಲಿ ಬಚ್ಚಿಟ್ಟುಕೊಂಡಿದ್ದಾಗ ಒಂದು ಗಾಯಗೊಂಡಿದ್ದ ಸಿಂಹವನ್ನು ಕಂಡ. ಸಿಂಹದ ಅಂಗಾಲಿಗೆ ಗಾತ್ರದ ಮುಳ್ಳೊಂದು ಚುಚ್ಚಿಕೊಂಡು ಅದು ಬಾಧೆ ಪಡುತ್ತಿತ್ತು. ಸಿಂಹದ ಬಗ್ಗೆ ಭಯವಾದರೂ ಆ ಯುವಕ ಧೈರ್ಯವಹಿಸಿ ಕರುಣೆಯಿಂದ ಆ ಮುಳ್ಳನ್ನು ಕಿತ್ತು ಉಪಚಾರ ಮಾಡಿ ಸಿಂಹಕ್ಕೆ ನೋವಿನಿಂದ ಮುಕ್ತಗೊಳಿಸಿದ. ಮುಂದೊಮ್ಮೆ ಆ ಯುವಕ ತನ್ನ ಯಜಮಾನರಿಗೆ ರೋಮನ್ನಿನ ಆಳುವ ಮಂದಿ ಅವನ ಬಂಧಿಸಿ, ಸ್ಟೇಡಿಯಂನಲ್ಲಿ ಸಿಂಹಕ್ಕೆ ಬಿಟ್ಟಾರು. ಸಿಂಹವು ದಾಸರನ್ನು ಆಕ್ರಮಣ ಮಾಡುವಾಗ, ಅವರು ಅದರಿಂದ ತಪ್ಪಿಸಿಕೊಂಡು ಹೆಣಗಾಡುವುದು, ಅದು ಅವರನ್ನು ಹಿಡಿದು, ಹರಿದು ಬಗಿದು ಮುಕ್ಕುವುದು ಒಂದು ಜನಪ್ರಿಯ ಮನರಂಜನೆ. ಆದರೆ ಆ ದಾಸನು ಮುಳ್ಳು ತೆಗೆದು ಉಪಚರಿಸಿದ ಸಿಂಹವೇ ಅದಾಗಿದ್ದು, ಅದು ಅವನ ಕೊಲ್ಲದೇ ಆತನೊಂದಿಗೆ ಪ್ರೀತಿಯಿಂದ ವರ್ತಿಸಿ ಅವನ ಉಪಕಾರ ಸ್ಮರಣೆ ಮಾಡಿತು.

ಒಂದು ವೇಳೆ ಆ ಯುವಕ ಸಿಂಹಕ್ಕೆ ಉಪಕಾರ ಮಾಡಿಲ್ಲದೇ ಹೋಗಿದ್ದಲ್ಲಿ ಅದು ಅವನ ಕೊಲ್ಲುತ್ತಿತ್ತು. ಆದ್ದರಿಂದ ನಾವು ಕರುಣಿಸುವ ಉಪಕಾರ ಮಾಡಬೇಕು. ಆಗ ನಮಗೆ ಕರುಣೆಯ ಉಪಕಾರ ಮರಳಿ ಬರುವುದು ಎಂದು ಮಕ್ಕಳಿಗೆ ನಾವು ಬೋಧಿಸುತ್ತೇವೆ. ಮನುಷ್ಯರಿಗೆ ಮಾತ್ರವೇ ಉಪಕಾರ ಸ್ಮರಣೆ, ಋಣ ಇತ್ಯಾದಿ, ನೈಸರ್ಗಿಕವಾದ ಪ್ರಾಣಿಗಳಲ್ಲಿ ಅವೆಲ್ಲಾ ಇಲ್ಲ ಎಂದೆಲ್ಲಾ ಏನೂ ಅಂದುಕೊಳ್ಳುವುದು ಬೇಡ. ವಿಷಯ ಮುಟ್ಟಿಸಲು ಮಾಧ್ಯಮವಾಗಿ ಈ ಕತೆ ಬೇಕಿದೆ. ಭಯಕ್ಕೊಳಗಾಗಿ ಸಹಾಯ ಮಾಡದೇ ಇರಬೇಡ. ಧೈರ್ಯದಿಂದ ಕರುಣೆ ತೋರಿಸು, ಉಪಕಾರ ಮಾಡು ಎಂದು ಪ್ರಯೋಚಿಸುವ ಕತೆ ಇದು.

ಹೆದರುವುದು, ಓಡುವುದು, ಆಕ್ರಮಣ ಮಾಡಬಹುದು ಎಂದುಕೊಂಡು ಅದು ದಾಳಿ ಮಾಡುವ ಮುನ್ನವೇ ಪ್ರತ್ಯಾಕ್ರಮಣ ಮಾಡುವುದು; ಈ ವಿವಿಧ ನಕಾರಾತ್ಮಕವಾದ ಬಗೆಗಳೆಲ್ಲವೂ ನೈಸರ್ಗಿಕವೇ ಸರಿ. ಹೆದರದೇ ಇರುವುದು, ಓಡದಿರುವುದು, ಆಕ್ರಮಣದ ಭಯವಿಲ್ಲದೇ ಉಪಕರಿಸುವುದು; ಈ ರೀತಿಯ ವರ್ತನೆಗೆ ಒಂದು ಹೀರೋಯಿಕ್ ಮನಸ್ಥಿತಿ ಇರಬೇಕು. ಕಥಾನಾಯಕನ ವರ್ತನೆ ಇದಾಗಿರುತ್ತದೆ. ಮನುಷ್ಯನೆಂಬ ಸಮಾಜಜೀವಿ ಮತ್ತು ಸಿಂಹವೆಂಬ ಕಾಡುಪ್ರಾಣಿಯ ನೈಸರ್ಗಿಕ ಕ್ರಮದಲ್ಲಿ ಹೆದರುವುದು ಸಹಜ ಕ್ರಿಯೆಯಾದರೆ, ಧೈರ್ಯವಾಗಿರುವುದಕ್ಕೆ ಬೇಕಾದ ಗಟ್ಟಿತನಕ್ಕೆ ಪ್ರೇರೇಪಣೆ ಬೇಕು. ಮನುಷ್ಯನಿಗೆ ಪುಕ್ಕಲುತನ ಸಹಜ. ಧೈರ್ಯವಂತಿಕೆ ಸಾಧನೆ. ಅದೇ ರೀತಿಯಲ್ಲಿ ನಾವು ಯಾವ್ಯಾವುದನೆಲ್ಲಾ ನಕಾರಾತ್ಮಕವೆಂದು ಕರೆಯುತ್ತೇವೆಯೋ ಅವೆಲ್ಲವೂ ನೈಸರ್ಗಿಕವೇ. ಸಕಾರಾತ್ಮಕವೆಂಬುದಕ್ಕೆ ತರಬೇತಿ ಬೇಕು. ಬೀಳುವುದು ಸುಲಭ ಮತ್ತು ಸಹಜ. ಏಳುವುದಕ್ಕೆ ಪರಿಶ್ರಮಬೇಕು. ನಕಾರಾತ್ಮಕ ಗುಣಗಳು ಎಂದು ಯಾವುದನ್ನೆಲ್ಲಾ ಕರೆಯುತ್ತೇವೆಯೋ, ಅವು ಯಾರಲ್ಲಿ ಇರುತ್ತದೆಯೋ ಅವರನ್ನು ಖಂಡಿಸುವುದರಲ್ಲಿ, ದಂಡಿಸುವುದರಲ್ಲಿ ಉತ್ಸಾಹ ತಾಳುವ ಬದಲು ಅವರಿಗೆ ಸಾಧಿಸಲು ಬೇಕಾದ ತರಬೇತಿಯ ಬಗ್ಗೆ ಆಸಕ್ತಿ ತಾಳಬೇಕಾಗಿದೆ. ಅದರಲ್ಲೂ ಮಗುವಿನ ವಿಷಯದಲ್ಲಿ ವಿಶೇಷಾಸಕ್ತಿ ತಾಳಬೇಕಿದೆ.

ನೀತಿಕತೆಗಳೆಲ್ಲಾ ಈ ವಿಶೇಷ ತರಬೇತಿಗಳ ಬಗ್ಗೆಯೇ ಆಸಕ್ತಿ ತಳೆದಿದ್ದು.

ಪಾರಿವಾಳವೊಂದು ನೀರಿನಲ್ಲಿ ಮುಳುಗುತ್ತಿದ್ದ ಇರುವೆಗೆ ಎಲೆಯೊಂದನ್ನು ಎಸೆಯಿತು. ಮುಳುಗದೇ ಇರುವೆಯು ಬದುಕಿತು. ಮುಂದೊಂದು ದಿನ ಬೇಟೆಗಾರನೊಬ್ಬ ಪಾರಿವಾಳಕ್ಕೆ ಬಾಣವನ್ನೆಳೆದು ಗುರಿ ಇಟ್ಟಾಗ, ಅದೇ ಇರುವೆ ಅವನ ಕಾಲನ್ನು ಕಚ್ಚಿ ಅವನು ಹೂಡಿದ್ದ ಬಾಣ ಗುರಿ ತಪ್ಪುವಂತೆ ಮಾಡಿ ಪಾರಿವಾಳವನ್ನು ರಕ್ಷಿಸಿತು.

ಇದು ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರ. ಉಪಕಾರ ಮಾಡಿದಕ್ಕೆ ಉಪಕಾರವೆಂಬ ನಿರ್ಬಂಧವಿದೆ. ನಕಾರಾತ್ಮಕವಾಗಿ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುವಂತೆ ಉಪಕಾರಕ್ಕೆ ಪ್ರತ್ಯುಪಕಾರವೆನ್ನುವುದು ಸಹಜವಾದ ಅಥವಾ ಸಾಮಾನ್ಯವಾದ ಗುಣವಾಗುವುದಿಲ್ಲ. ಅದಕ್ಕೆ ಪಶುತ್ವದ ಮನುಷ್ಯನಿಗೆ ಮುಂದೊಂದು ದಿನ ಉಪಕಾರ ಮಾಡುವರು ಆಸೆಯಿಂದ ಮುಕ್ತಿಕೊಡಿಸಲು ಮತ್ತೊಂದು ಕತೆ ರೂಪುಗೊಂಡಿತು.

ನದಿಯೊಂದರಲ್ಲಿ ಸ್ನಾನ ಮಾಡುತ್ತಿದ್ದ ಸಂನ್ಯಾಸಿಯೊಬ್ಬ ನೀರಿನಲ್ಲಿ ಮುಳುಗುತ್ತಿದ್ದ ಅಥವಾ ಕೊಚ್ಚಿಕೊಂಡು ಹೋಗುತಲಿದ್ದ ಚೇಳೊಂದನ್ನು ಕಂಡ. ಅದು ಸತ್ತು ಹೋಗಬಾರದು ಎಂಬ ಕರುಣೆಯಿಂದ ಅದನ್ನು ಎತ್ತಿ ದಡದ ಮೇಲೆ ಹಾಕಲು ಸಂನ್ಯಾಸಿ ಪ್ರಯತ್ನಿಸಿದಾಗ ಚೇಳು ಕುಟುಕಿತು. ನೋವಿನಿಂದ ಸಂನ್ಯಾಸಿ ಕೈ ಬಿಟ್ಟ. ಅದು ಮತ್ತೆ ನೀರಿಗೆ ಬಿತ್ತು. ಅವನು ಮತ್ತೆ ಮತ್ತೆ ಉಳಿಸಲು ಪ್ರಯತ್ನಿಸಿದಾಗಲೂ ಅದು ಕುಟುಕಿ ಕುಟುಕಿ ಅವನು ಕೈ ಒದರಿ ಅದು ನೀರಿಗೇ ಬೀಳುತ್ತಿತ್ತು. ಈ ಪ್ರಸಂಗವನ್ನು ದಡದಲ್ಲಿ ನಿಂತು ನೋಡುತ್ತಿದ್ದವರೊಬ್ಬರು “ಅದು ಅಷ್ಟೊಂದು ಕುಟುಕಿ ನಿಮಗೆ ನೋವುಂಟು ಮಾಡುತ್ತಿದೆ. ಹೋದರೆ ಹೋಗಲಿ ಎಂದು ಬಿಟ್ಟುಬಿಡಬಾರದೇ?” ಎಂದು ಕೇಳಿದರು.

ಅದಕ್ಕೆ ಸಂನ್ಯಾಸಿ, “ಚೇಳೊಂದು ಸಾಯುವಂತಹ ಸಮಯದಲ್ಲಿಯೂ ತನ್ನ ಕುಟುಕುವ ಸ್ವಭಾವವನ್ನು ಬಿಡುತ್ತಿಲ್ಲ. ಮನುಷ್ಯನಾಗಿ ನಾನು ನನ್ನ ಸ್ವಭಾವವನ್ನು ಹೇಗೆ ಬಿಡಲಿ?” ಎಂದು ಕೇಳಿದ.

ಚೇಳನ್ನು ಉಳಿಸುವುದು ಮನುಷ್ಯನಿಗೆ ಪ್ರಕೃತಿಯ ನೀತಿಯೇನೂ ಅಲ್ಲ. ಆದರೆ ಉಳಿಸುವ ನೀತಿಯನ್ನು ತನ್ನ ಸ್ವಭಾವವನ್ನಾಗಿಸಿಕೊಳ್ಳುವ ತುಡಿತ ಮತ್ತು ಅಗತ್ಯ ಅವನಿಗೆ ಇದೆ. ನೈಸರ್ಗಿಕವಾಗಿಲ್ಲದ ನೈತಿಕತೆಯನ್ನು ಮನುಷ್ಯನ ಸಮಾಜಕ್ಕೆ ಬೇಕಿದೆ.

ಅನೈತಿಕತೆ ಸುಲಭ ಮತ್ತು ಸಾಮಾನ್ಯ. ನೈತಿಕತೆ ಎಂಬುದು ತರಬೇತಿ ಹೊಂದಿ ಪಡೆಯಬೇಕಾಗಿರುವಂತಹ ವಿಶೇಷ ಗುಣಮಟ್ಟ.

ಎಲ್ಲರೂ ವಿಚಾರಣೆಗೆ ಒಳಪಟ್ಟಿಲ್ಲವಾದ ಕಾರಣದಿಂದಾಗಿ ಕಾರಾಗೃಹದ ಒಳಗೆ ಇರುವ ಅಪರಾಧಿಗಳು ಮತ್ತು ತಪ್ಪಿತಸ್ಥರು ಎಂದು ಎನಿಸಿಕೊಳ್ಳುವ ಮಂದಿ ಸಂಖ್ಯೆಯು ಹೊರಗೆ ಇರುವ ಮಂದಿಯ ಸಂಖ್ಯೆಗಿಂತ ಕಡಿಮೆ ಇದೆ.

ಕೊಂದು ಹಾಕಿಬಿಡುವಷ್ಟು ಕೋಪವಿದ್ದರೂ ಕೊಲ್ಲುವ ಧೈರ್ಯವಿಲ್ಲದೇ ಇರುವವನು ಕರುಣಾಶಾಲಿಯೇ?

ಜೈನ ಕವಿ ಜನ್ನನ ಯಶೋಧರ ಚರಿತೆಯಲ್ಲಿನ ಹಿಂಸಾರಭಸಮತಿಯಾದ ಅರಸನೇ ಈ ಜನರು. ಇರಲಿ, ಯಶೋಧರಚರಿತೆಯ ಮುಖ್ಯ ಪಾತ್ರವಾದ ಯಶೋಧರ ತನ್ನ ರಾಣಿ ಅಮೃತಮತಿ ಗಜಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಅಷ್ಟಾವಂಕನ ಮೋಹಿಸಿದಳು. ಇದನ್ನು ತಿಳಿದ ಯಶೋಧರ ತಾಯಿ ಚಂದ್ರಮತಿಯ ಬಳಿ ವಿಷಯ ತಿಳಿಸದೇ ತನ್ನ ಬೇಸರದ ಕಾರಣ ಕೆಟ್ಟಕನಸು ಎಂದ. ಆ ಕೆಟ್ಟ ಕನಸಿನ ಬಾಧೆಯ ಪರಿಹಾರಕ್ಕೆ ಚಂಡಿಗೆ ಪ್ರಾಣಿ ಬಲಿಯನ್ನು ಕೊಡಬೇಕೆಂದು ತಾಯಿ ಚಂದ್ರಮತಿ ಹೇಳಿದಳು. ಆದರೆ ಅಹಿಂಸೆಯೇ ಧರ್ಮದ ಬುನಾದಿಯಾಗಿರುವ ಜೈನ ಧರ್ಮಾವಲಂಬಿಯಾದ ಯಶೋಧರ ಒಪ್ಪಲಿಲ್ಲ. ಆದರೆ ಮಗನ ಮೇಲಿನ ಪ್ರೀತಿಯಿಂದ, ಅವನಿಗೇನೋ ವಕ್ಕರಿಸಿರುವ ಕೇಡಿನಿಂದ ಅವನ ಬಿಡುಗಡೆಗೊಳಿಸಬೇಕು ಎಂಬ ಕಾಳಜಿಯಿಂದ ಒಂದು ಹಿಟ್ಟಿನ ಕೋಳಿಯನ್ನಾದರೂ ಬಲಿ ಕೊಡು ಎಂದಳು. ಹಿಟ್ಟಿನ ಕೋಳಿಯನ್ನು ಬಲಿಗೊಟ್ಟಾಗ ಅದು ಕ್ಕೊಕ್ಕೊಕ್ಕೋ ಎಂದು ಕೂಗುತ್ತಾ ಪ್ರಾಣ ಬಿಡುತ್ತದೆ. ಕತೆಯಲ್ಲಿ ಅದರಲ್ಲೊಂದು ಬೇರೆ ಯಾವುದೋ ಚೈತನ್ಯ ಬಂದು ಸೇರಿಕೊಳ್ಳುವ ಪ್ರಸಂಗವಿದೆ.

ಹಿಟ್ಟಿನ ಕೋಳಿಯನ್ನು ಬಲಿಗೊಟ್ಟರೇನು? ನಿಜವಾದ ಕೋಳಿಯನ್ನು ಬಲಿಗೊಟ್ಟರೇನು? ಬಲಿ ಕೊಡುವಂತಹ ಮನಸ್ಥಿತಿ ಅಲ್ಲಿದೆ. ಬಲಿ ಕೊಡುವ ಕ್ರಿಯೆಯಲ್ಲಿ ಬಲಿಯಾಗುವವರಿಗೊಂದು ಸ್ಥಿತಿ ಮತ್ತು ಬಲಿ ಕೊಡುವವರಿಗೊಂದು ಸ್ಥಿತಿ ಸಿಗುತ್ತದೆ. ಹಿಟ್ಟಿನ ಕೋಳಿಯ ಬಲಿಯ ಸಂದರ್ಭದಲ್ಲಿ ಬಲಿಯಾದ ಕೋಳಿಯ ಮೂಲಕ ಬಲಿ ಕೊಟ್ಟವನ ಮನಸ್ಸಿಗೆ ಒದಗುವ ಫಲಸ್ಥಿತಿಯನ್ನು ತಪ್ಪಿಸಲಾಗದು ಎಂಬ ಸಂದೇಶವನ್ನು ಪಡೆಯಬಹುದು.

ಜನ ಹೊತ್ತು ಕಳೆಯಲು ಆಟವಾಡುತ್ತಿರುತ್ತಾರೆ. ಒಳಾಂಗಣವಾಗಲಿ, ಹೊರಾಂಗಣವಾಗಲಿ, ಆಟದಲ್ಲಿ ತಾನು ಗೆಲ್ಲಬೇಕೆಂದು ಏನೋ ಒಂದು ಕಿಲಾಡಿತನ ಮಾಡುತ್ತಾರೆ. ಟ್ರಿಕ್ ಮಾಡುತ್ತಾರೆ. ಅದೊಂದು ತಮಾಷೆಯ ಮೋಸ. ಆ ಗೆಲುವಿನಿಂದ ಯಾವ ಖಜಾನೆಯೂ ಸಿಗುವುದಿಲ್ಲ, ಯಾವ ಸಾಮ್ರಾಜ್ಯದ ಪಟ್ಟ ದೊರಕುವುದಿಲ್ಲ. ಯಾರೂ ಬಿರುದು ಬಾವಲಿಗಳನ್ನಿತ್ತು ಹೊತ್ತು ಮೆರೆಯುವುದಿಲ್ಲ. ಹೊತ್ತು ಕಳೆಯುವ ಆ ಆಟದಲ್ಲಿ ಗೆಲುವಿನ ಆನಂದವನ್ನು ತಮ್ಮದಾಗಿಸಿಕೊಳ್ಳಲು ಆ ಮೋಸ ಮಾಡುತ್ತಾರೆ. ತಮಾಷೆಗೆ ಆಟದಲ್ಲಿ ಮಾಡುವ ಮೋಸಕ್ಕಾಗಲಿ, ವ್ಯಾಪಾರ ಮತ್ತು ವ್ಯವಹಾರದಲ್ಲಾಗಲಿ ಹಣದ ಹರಿವು ಇರುವ ವಹಿವಾಟಿನಲ್ಲಿ ಮಾಡುವ ಮೋಸಕ್ಕಾಗಲಿ ವ್ಯತ್ಯಾಸ ಇದೆಯೇ? ಈ ಹೊತ್ತು, ಮಕ್ಕಳೊಂದಿಗೋ ಅಥವಾ ಯಾರೊಂದಿಗೋ ಕಳೆಯುವ ಆಟದ ಹೊತ್ತು ಜೀವನದ ಭಾಗವಲ್ಲವೇ? ಆಡುತ್ತಿರುವ ವ್ಯಕ್ತಿಯ ವ್ಯಕ್ತಿತ್ವವು ಇಲ್ಲಿ ಸರಳವಾಗಿ ಬದಲಾಗಿ ಅಲ್ಲೆಲ್ಲೋ ದೊಡ್ಡ ವ್ಯವಹಾರದಲ್ಲಿ ಮಹತ್ತರವಾಗಿ ಅಥವಾ ಪ್ರಬುದ್ಧವಾಗಿ ರೂಪುಗೊಳ್ಳುತ್ತದೆಯೇ? ಆಟದಲ್ಲೇ ಆಗಲಿ, ವಹಿವಾಟಿನಲ್ಲೇ ಆಗಲಿ ಮೋಸ ಮಾಡುವುದು, ಆಟದಲ್ಲಿ ನನಗೇ ಗೆಲುವು ಸಿಗಬೇಕೆಂಬುದು, ವ್ಯವಹಾರದಲ್ಲಿ ತನಗೇ ಲಾಭವಾಗಬೇಕೆಂಬುದು ಒಂದು ಮನಸ್ಥಿತಿ. ಗೆದ್ದವನ ಆನಂದ ಸೋತವನ ನಿರಾಸೆಯನ್ನು ಅಣಕಿಸುತ್ತದೆ. ಲಾಭ ಪಡೆದವನ ವಿಜಯ ನಷ್ಟವಾದವನ ನೋವನ್ನು ಅಪಮಾನಿಸುತ್ತದೆ. ಅವನ ವಿಜಯ ಇವನ ಅಪಮಾನವನ್ನು ಕೆರಳಿಸುತ್ತದೆ. ಅದು ಕಾಯುತ್ತಿರುತ್ತದೆ ಅವನ ಮೇಲೆ ಸೇಡು ತೀರಿಸಿಕೊಳ್ಳಲು. ಇವನು ಮಲಗಿರಲಿ, ಎದ್ದಿರಲಿ, ಓಡಾಡುತ್ತಿರಲಿ, ತಿನ್ನುತ್ತಿರಲಿ ಮನಸ್ಸಿನ ನೆಲಮಾಳಿಗೆಯಲ್ಲಿ ಸಂಚಿನ ಸಭೆ ಚುರುಕಾಗಿರುತ್ತದೆ. ಹೊಂಚು ಹಾಕುತ್ತಲೇ ಇರುವ ಅದು ಎಲ್ಲಾದರೂ ಅವಕಾಶ ಸಿಕ್ಕಾಗ ತನ್ನ ಸಂಚನ್ನು ಚಲಾಯಿಸಿಬಿಡುತ್ತದೆ. ಆದರೆ ಸೇಡು ತೀರಿಸಿಕೊಳ್ಳುವುದು ಅನೈಸರ್ಗಿಕ ಅಪರಾಧವೇನಲ್ಲ.

ಸೇಡು ತೀರಿಸಿಕೊಳ್ಳುವುದು ಸಹಜ. ಕ್ಷಮಿಸುವುದಕ್ಕೆ ವಿಶೇಷ ತರಬೇತಿ ಬೇಕು. ಸ್ವಾರ್ಥ, ಅಸೂಯೆ, ಮತ್ಸರ, ಕಾಮುಕತೆ, ಲೋಭ, ಕ್ರೌರ್ಯ, ಅಹಂಕಾರ; ಇವೆಲ್ಲಾ ವಿಶ್ವದ ಕತ್ತಲಿನಷ್ಟೇ ಸತ್ಯವಾದ್ದರಿಂದ ಪರೋಪಕಾರ, ದಯೆ, ಕರುಣೆ, ಔದಾರ್ಯ, ಕ್ಷಮೆ, ಶಾಂತಿ, ಅಹಿಂಸೆ, ವಿನಮ್ರತೆಯಂತಹ ಗುಣಗಳನ್ನು ಮನುಷ್ಯನ ಸ್ವಭಾವವಾಗಿಸಿ ಸಮಾಜದ ಗುಣಮಟ್ಟವನ್ನು ಹೆಚ್ಚಿಸಿ ಒಂದು ಕ್ರಮದಲ್ಲಿಡಲು ಧರ್ಮಗಳು, ರೀತಿ ರಿವಾಜುಗಳು, ನ್ಯಾಯ ವಿಚಾರಣೆಗಳು, ಸಾಮಾಜಿಕ ಸಂಸ್ಥೆಗಳು ಟೊಂಕಕಟ್ಟಿ ನಿಂತವು.

ಆದರೂ ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡುವ ಆಶಯಕ್ಕಿಂತ ತನಗೆ ಅಪಕಾರ ಮಾಡಿದವರಿಗೆ ಪ್ರತಿಯಾಗಿ ತೊಂದರೆಯೊಡ್ಡುವ ಸೇಡು ಹೆಚ್ಚು ಆಗ್ರಹಪೂರ್ವಕವಾಗಿ ಸಮಾಜದಲ್ಲಿದೆ.

ಮಕ್ಕಳ ಲೋಕದಲ್ಲಿಯೂ ಇದು ಏನೂ ಹೊಸತಲ್ಲ. ತನಗೆ ಚಾಕೊಲೇಟೋ ಅಥವಾ ಗೊಂಬೆಯನ್ನೋ ಕೊಟ್ಟನೆಂದೋ, ಆಟದಲ್ಲಿ ತನಗೆ ಪಾಯಿಂಟ್ಸ್ ಹೆಚ್ಚು ಒದಗಿಸಿದನೆಂದು ಆ ಮತ್ತೊಬ್ಬನಿಗೆ ಕೃತಜ್ಞತಾಪೂರ್ವಕವಾಗಿ ತಾನೂ ಚಾಕೊಲೆಟ್, ಗೊಂಬೆ ಅಥವಾ ಪಾಯಿಂಟ್ಸ್ಗಳನ್ನು ಮರಳಿಸಲು ಅದಕ್ಕೆ ಆಲೋಚನೆ ಬರುವುದಿಲ್ಲ. ಅವನಿಂದ ತನ್ನ ಚಾಕೊಲೆಟ್ ನೆಲದ ಪಾಲಾಗಿದ್ದರೆ, ಅವನದನ್ನು ಕಿತ್ತುಕೊಂಡು ತಿನ್ನುವ ಅಥವಾ ತಿನ್ನಲಾಗದಿದ್ದರೂ ಕಿತ್ತು ನೆಲಕ್ಕೊಗೆಯುವ ಕೋಪ, ತನ್ನ ಗೊಂಬೆಯನ್ನು ಮುರಿದವನ ಗೊಂಬೆಯನ್ನು ತಾನೂ ಮುರಿಯುವ ರೋಷ ಸಾಮಾನ್ಯವಾಗಿರುತ್ತದೆ.

ಅದೊಂದು ಚಾಕೊಲೆಟ್ ಕೊಟ್ಟಿದ್ದ ಮಗು, ಇಂದು ತನಗೆ ಕೊಡದೇ ತಿನ್ನುತ್ತಿರುವ ಮಗುವಿನ ಬಳಿ ದೈನ್ಯದಿಂದ ಕೇಳುತ್ತಿರುತ್ತದೆ. “ನಾನು ಅವತ್ತು ನಿನಗೆ ಚಾಕೊಲೆಟ್ ಕೊಟ್ಟಿರಲಿಲ್ಲವಾ? ನೀನು ಇವತ್ತು ನನಗೆ ಕೊಡುದಿಲ್ವಾ?” ಎಂದೂ, “ನಾನು ನನಗೆ ಮುಂದೆ ಸಿಕ್ಕಿದಾಗ ನಿನಗೂ ಕೊಡುತ್ತೇನೆ” ಎಂದೂ ಒಂದಷ್ಟು ಗೋಗರೆದರೆ, ಬಿಂಕದಿಂದ ಈ ಮಗು ಒಂದಿಷ್ಟು ಒಗೆಯಬಹುದು. ಖಾತರಿ ಇಲ್ಲ. ಇದನ್ನು ದೊಡ್ಡವರಲ್ಲಿ ಕಾಣಲಾರೆವೇ?

ಕತ್ತಲೆಯ ಅಸ್ತಿತ್ವದಲ್ಲಿ ಬಂದು ಹೋಗುವ ಬೆಳಕನ್ನು ಸತ್ಯವೆಂದು ಭ್ರಮಿಸುವುದಕ್ಕಿಂತಲೂ ಬೆಳಕಿನ ಅಗತ್ಯತೆಯನ್ನು ಮನಗಂಡು ಅದನ್ನು ಹುಟ್ಟಿಸಿಟ್ಟುಕೊಂಡಿರಬೇಕಾಗಿರುವುದು ಒಂದು ಅನಿವಾರ್ಯವಾಗಿದೆ. ರಾತ್ರಿಯಲ್ಲಿ ಕೃತಕ ಹಗಲನ್ನು ವ್ಯವಸ್ಥೆ ಮಾಡಿಕೊಳ್ಳುವುದು ಬೇಕಿದೆ.

ನೈಸರ್ಗಿಕವಾಗಿವಾಗಿರುವ ಮನುಷ್ಯರ ಸಮಾಜದಲ್ಲಿ ಅಗತ್ಯವಾಗಿರುವ ಅನೈಸರ್ಗಿಕತೆಯನ್ನು ಸ್ವಭಾವಕ್ಕೊಳಪಡಿಸಲು ಮಗುವಿಗೆ ತರಬೇತಿ ನೀಡಬೇಕಿದೆ. ನಾವು ದೊಡ್ಡವರು ಅದರಲ್ಲಿ ಪ್ರವೀಣರೆಂದೇನಲ್ಲ. ಆದರೆ ಅವರಿಗೆ ಕಲಿಸುವ ಬದ್ಧತೆಯನ್ನು ನಾವು ಹೊಂದಿದರೆ ನಮಗೆ ಶಿಸ್ತಿನಿಂದ ಕಲಿಯಲು ಸಾಧ್ಯ ಎಂದು. ಈ ಕಾರಣಕ್ಕೆ ನಾನು ಶಿಶುಪ್ರಧಾನ ಸಮಾಜವನ್ನು ಕನವರಿಸುತ್ತಿರುವುದು.

LEAVE A REPLY

Please enter your comment!
Please enter your name here