ಯೋಗೇಶ್ ಮಾಸ್ಟರ್

(ಬರಹಗಾರರು, ಮತ್ತು ಸಾಮಾಜಿಕ ಹೋರಾಟಗಾರರು)

ಸಂಸ್ಕೃತಿ ಎಂಬ ಪದ ವಿವಿಧ ರೀತಿಯ ಮಾನಸಿಕ ಅನುಭವಗಳನ್ನು ನೀಡಿದೆ ಮತ್ತು ನೀಡುತ್ತಿದೆ. ಅದು ಬಹಳ ಉನ್ನತವಾಗಿಯೂ, ಅನಿವಾರ್ಯವಾಗಿಯೂ, ಕ್ಲೀಶೆಯಾಗಿಯೂ, ವೈಜ್ಞಾನಿಕವಾಗಿಯೂ, ವೈಚಾರಿಕವಾಗಿಯೂ, ಅವೈಜ್ಞಾನಿಕವಾಗಿಯೂ, ಅವೈಚಾರಿಕವಾಗಿಯೂ, ಬೇಕಾಗಿಯೂ, ಬೇಡವಾಗಿಯೂ, ಒಂದೊಂದು ಸಮಯಕ್ಕೆ ಒಂದೊಂದು ರೀತಿ ಅರ್ಥವನ್ನು ಬದಲಾಯಿಸಿಕೊಳ್ಳುವಂತಹ ವಿಷಯವಾಗಿಯೂ, ಅರ್ಥವೇ ಇಲ್ಲದಂತದ್ದಾಗಿಯೂ, ಅನರ್ಥವಾಗಿಯೂ, ಯಾವುದ್ಯಾವುದಕ್ಕೋ ಅನ್ವರ್ಥವಾಗಿಯೂ ಪ್ರಕಟಗೊಳ್ಳುತ್ತಲೇ ಇದೆ.

ಅದನ್ನು ಯಾವುದಾದರು ಒಂದು ರೀತಿಯಲ್ಲಿ ಒಬ್ಬರು ಅರ್ಥ ಮಾಡಿಕೊಂಡರೆ ಮತ್ತೊಬ್ಬರು ಮಾಡಿಕೊಂಡಿರುವ ಅರ್ಥವನ್ನು ನೋಡಿದರೆ ತಮ್ಮಿಬ್ಬರಲ್ಲಿ ಯಾರದು ತಪ್ಪು ಯಾರದು ಸರಿ ಎಂಬ ಪ್ರಾಶ್ನಿಕ ಸಂಘರ್ಷವು ಹುಟ್ಟುತ್ತದೆ.
ಹಟವಾದಿಯು ತನ್ನದನ್ನೇ ಸರಿ ಎಂದು ಅದನ್ನು ಮತ್ತಷ್ಟು ವ್ಯಾಖ್ಯಾನಕ್ಕೊಳಪಡಿಸುತ್ತಾ, ಸಂಕೀರ್ಣಗೊಳಿಸುತ್ತಾ, ಇಲ್ಲವಾಗಿರಬಹುದಾಗಿರುವಂಹ ವಿಸ್ತಾರಗಳಿಗೆ ಹಿಗ್ಗಿಸುತ್ತಾ, ಸರಳವಾದ ವಸ್ತುವನ್ನು ಜಗ್ಗುತ್ತಾ ತಾನು ನೀಡುವ ಅರ್ಥಕ್ಕೆ ವ್ಯತ್ಯಾಸವಾಗಿ ಅರ್ಥ ನೀಡುವ ವ್ಯಕ್ತಿಯನ್ನು ಅಥವಾ ವಿಚಾರವನ್ನು ಕುಗ್ಗಿಸಲು ಯತ್ನಿಸುತ್ತಾನೆ. ಅದು ಅವನ ಮಟ್ಟಿಗೆ ಯಶಸ್ಸನ್ನೂ ಕೊಡುತ್ತದೆ. ಹಟವಾದಿಯ ವಿರುದ್ಧವಾಗಿರುವ ಪ್ರಗತಿಶೀಲ ವಿಚಾರವಂತ ತಾನು ಕಂಡುಕೊಂಡಿರುವ ಅರ್ಥವನ್ನೇ ಸರಿ ಎಂದು ಇತರರಿಗೆ ಮನವೊಲಿಸುವ ಧಾವಂತವಿರಲಿ, ತಾನೇ ಮನಗಂಡಿರುವುದಿಲ್ಲ. ತಾನು ಈಗ ಸಧ್ಯಕ್ಕೆ ಮಾಡಿಕೊಂಡಿರುವ ಮನವರಿಕೆಯು ಮುಂದೆ ಬದಲಾಗಬಹುದು, ಹೊಸ ಹೊಳಹುಗಳು ದಕ್ಕಿದಾಗ ಈಗಿನದು ಇಲ್ಲವಾಗಿ ಮತ್ತೊಂದು ಮೂಡಬಹುದು ಎಂಬ ಸಲಿಲತೆಯ ಮನೋಭಾವವನ್ನು ಹೊಂದಿರುತ್ತಾನೆ. ಆದ್ದರಿಂದ ತನ್ನದ್ದನ್ನು ಗಟ್ಟಿಯಾಗಿ ಕೂಗಿ ಹೇಳುವದಕ್ಕೆ ಕೊರಳನ್ನೆತ್ತುವುದಿಲ್ಲ. ಹೀಗಾಗಿ ಹಟದ ವಿಚಾರವಾದಿ ಮತ್ತು ಪ್ರಗತಿಶೀಲ ವಿಚಾರವಂತನ ನಡುವೆ ಸ್ಪರ್ಧೆ ಮೂಡುವ ಮೊದಲೇ ಹಟವಾದಿಯು ಗೆದ್ದುಬಿಟ್ಟಿರುತ್ತಾನೆ. ಹೀಗೆ ಗೆದ್ದಿರುವ ಹಟವಾದಿಯ ವ್ಯಾಖ್ಯಾನ ಮತ್ತು ಅರ್ಥೈಸುವಿಕೆಗಳಲ್ಲಿ ಅರ್ಥವೂ ಇರುವುದಿಲ್ಲ ಮತ್ತು ಸರಳವಾಗಂತೂ ಮೊದಲೇ ಇರುವುದಿಲ್ಲ. ಹಾಗಾಗಿ ಭಾರತೀಯ ಸಂಸ್ಕೃತಿ ಎಂದು ಘಂಟಾಘೋಷವಾಗಿ ಮಾತಾಡುವವರಿಗೆ ಸಂಸ್ಕೃತಿ ಎಂಬುದರ ಬಗ್ಗೆ ಸ್ಪಷ್ಟತೆಯೇ ಇರುವುದಿಲ್ಲ. ಆದರೆ, ಸಂಸ್ಕೃತಿ ಎಂಬ ಶಬ್ದ ನಾನಾ ಕಾರಣಕ್ಕೆ ಬೇಕಾಗುತ್ತಿರುತ್ತದೆ. ಹಟಮಾರಿತನವನ್ನು ಗಟ್ಟಿಗೊಳಿಸಿಕೊಳ್ಳಲು, ಸಮಜಾಯಿಶಿಕೊಟ್ಟುಕೊಳ್ಳಲು, ಸಮರ್ಥಿಸಿಕೊಳ್ಳಲು, ಸಂಮೋಹಗೊಳಿಸಲು, ಸಂಘಟನೆಯನ್ನು ಸದೃಢಗೊಳಿಸಲು, ರಾಜಕೀಯವಾಗಿ ಧೃವೀಕರಣಗೊಳ್ಳಲು, ತಪ್ಪುಗಳನ್ನು ಮಾಡಲು, ತಪ್ಪುಗಳನ್ನು ಮಾಡದಿರಲು; ಹೀಗೆ ವಿವಿಧ ಉದ್ದೇಶಗಳಿಗೆ ಯರ‍್ಯಾರೋ ಉಪಯೋಗಿಸುವರು.

ವ್ಯಕ್ತಿಯೊಬ್ಬನು ಮಾಡುವ ಕೆಲಸವಾಗಲಿ, ಆಲೋಚನೆಯಾಗಲಿ ತನಗಾಗಿ ಮಾಡಿಕೊಳ್ಳುವಾಗ ತನ್ನ ಸ್ವಭಾವಕ್ಕೆ ಅನುಗುಣವಾಗಿ, ತನ್ನ ವ್ಯಕ್ತಿಗತವಾಗಿರುವಂತಹ ಬೇಕು ಬೇಡಗಳಿಗೆ ಅನುಗುಣವಾಗಿ ಆಲೋಚನೆಗಳನ್ನೂ ಮತ್ತು ಕೆಲಸಗಳನ್ನೂ ಮಾಡುತ್ತಿರುತ್ತಾನೆ. ಆದರೆ ವ್ಯಕ್ತಿಯೊಬ್ಬನು ತನಗಲ್ಲದೆ ಯಾವುದೇ ಸ್ವಭಾವವನ್ನು ಅಥವಾ ಅಗತ್ಯವನ್ನು ಸಮೂಹಕ್ಕೆ ನಿರ್ದೇಶಿಸುವಾಗ ಸಂಸ್ಕೃತಿಯ ಹೆಸರೆತ್ತುತ್ತಾನೆ. ಒಬ್ಬನೇ ಆಲೋಚನೆ ಮತ್ತು ಕೆಲಸ ಮಾಡುವಾಗ ಸಂಸ್ಕೃತಿಯಲ್ಲಿರುವ ಸಂಸ್ಕೃತಿ ಸಮೂಹದ ಜೊತೆಗೆ ಮಾತಾಡುವಾಗ ನೆನಪಿಗೆ ಬರುತ್ತದೆ. ಇದು ಏಕೆ?

ವ್ಯಕ್ತಿಯಲ್ಲಿ ಗುಣಗಳಿರುತ್ತವೆ. ಸ್ವಭಾವಗಳಿರುತ್ತವೆ. ತನ್ನ ಬದುಕು ಮತ್ತು ಜೀವನದ ವಿನ್ಯಾಸಕ್ಕೆ ತಕ್ಕಂತಹ ಆಲೋಚನೆಗಳಿರುತ್ತವೆ. ಅದಕ್ಕೆ ಪೂರಕವಾಗಿ ಕೆಲಸಗಳನ್ನು ಮಾಡುತ್ತಿರುತ್ತಾನೆ. ಆದರೆ ಅವನು ಜೀವಂದಿರುವುದಕ್ಕೆ ಅಥವಾ ಬದುಕು ಮಾಡುವುದಕ್ಕೆ ಬೇಕಾದಂತಹ ಆಲೋಚನೆಗಳನ್ನು, ಸಾಮಗ್ರಿಗಳನ್ನು ಅಥವಾ ಪೂರಕ ವಸ್ತುಗಳನ್ನು ಸಂಸ್ಕೃತಿ ಎಂಬ ಪರಿಭಾಷೆ ಅಥವಾ ಒಂದು ಭ್ರಾಮಕವಾದಂತಹ ಆಲೋಚನೆ ಕೊಡುತ್ತದೋ ಇಲ್ಲವೋ ಎಂಬುದು ಅವನಿಗೆ ಬಹಳ ಮುಖ್ಯ. ಆದರೆ ಒಂದಂತೂ ಸ್ಪಷ್ಟ. ಸಂಸ್ಕೃತಿಎಂಬುದು ಒಂದು ಪರಿಭಾಷೆಯೇ ಹೊರತು ಒಂದು ವಸ್ತುವಂತೂ ಅಲ್ಲ. ಆದರೆ, ಪರಿಭಾಷೆಗಳು, ಪರಿಕಲ್ಪನೆಗಳು ವ್ಯಕ್ತಿಯ ಮನಸ್ಸಿನಲ್ಲಿ ಮತ್ತು ವ್ಯಕ್ತಿಗಳ ಸಮೂಹವಾದ ಸಮಾಜದ ಸಂಕಲಿತ ಮನಸ್ಸಿನಲ್ಲಿ ಕ್ರಿಯಾತ್ಮಕವಾಗಿರುವುದರಿಂದ ಇದರ ಸ್ಪಷ್ಟತೆಯ ಬಗ್ಗೆ ಗಮನ ಹರಿಸಲೇಬೇಕು. ಸಂಸ್ಕೃತಿಯು ಎಷ್ಟು ಭ್ರಾಮಕವೋ, ಹುಸಿಯೋ, ಕಾಲ್ಪನಿಕವೋ, ನಿಜವೋ; ಎಂತದ್ದೇ ಆಗಿರಲಿ, ವ್ಯಕ್ತಿಯು ತನ್ನಲ್ಲಿ ಯಾವುದೇ ವಿಷಯ ಅಥವಾ ಮನೋವ್ಯಾಪಾರಗಳು ಪುನರಾವರ್ತನೆಗೊಳ್ಳುವಂತಹ ಗುಣಸ್ವಭಾವವನ್ನು ಹೊಂದಿರುವುದರಿಂದ ಕ್ರಿಯೆ ಮತ್ತು ಪ್ರತಿಕ್ರಿಯೆಗಳಿಗೆ ಮಿಗಿಲಾಗಿ ಬಹಳ ಪರಿಣಾಮಕಾರಿಯಾದ ಪ್ರಕ್ರಿಯೆ ಎಂಬುದನ್ನು ಹೊಂದಿರುತ್ತಾನೆ.

ಅನೇಕ ವ್ಯಕ್ತಿಗಳ ಗುಂಪೇ ಸಮಾಜವಾಗಿರುವುದರಿಂದ, ಸಮಾಜಕ್ಕೂ ಕೂಡಾ ಪುನರಾವರ್ತನೆಗೊಳ್ಳುವ ಗುಣಸ್ವಭಾವವಿದೆ. ಅದೂ ಕೂಡ ಪ್ರಕ್ರಿಯೆಗೆ ಒಳಗಾಗುವ ಸ್ವಭಾವವನ್ನು ಹೊಂದಿದೆ. ಯಾವುದೇ ಗುಣಸ್ವಭಾವಗಳು, ಆಲೋಚನೆಗಳು, ರೀತಿ ನೀತಿಗಳು ಪುನರಾವರ್ತಿತವಾಗುತ್ತಾ ಸಂಕಲಿತವಾಗಿ ಪ್ರಕ್ರಿಯೆಗೊಳ್ಳುವ ಒಂದು ಪರಿಕಲ್ಪನೆಗೆ ನಮ್ಮ ಪರಿಭಾಷೆಯಲ್ಲಿ ಸಧ್ಯಕ್ಕೆ ಸಂಸ್ಕೃತಿ ಎಂದು ಹೆಸರಿಟ್ಟು ಕರೆಯೋಣ.

ಸರಿ, ಈ ಸಂಸ್ಕೃತಿ ಎಂಬುದು ರೂಪುಗೊಂಡಿರುವುದೋ, ರೂಪಿಸುವುದೋ? ಎರಡೂ ಸರಿ. ಮೊದಲು ಪ್ರಕ್ರಿಯೆಯ ಮೂಲಕ ತಾನಾಗಿ ರೂಪುಗೊಂಡಿರುತ್ತದೆ. ನಂತರ ಸಮಾಜದ ಸದಸ್ಯರು ಅದನ್ನು ಉದ್ದೇಶ ಪೂರ್ವಕವಾಗಿ ರೂಪಿಸುತ್ತಾ ಗಟ್ಟಿಗೊಳಿಸಿಕೊಳ್ಳುತ್ತಾ ಹೋಗುತ್ತಾರೆ.
ಅಂದಹಾಗೆ, ಧರ್ಮದಂತೆಯೇ, ಸಂಸ್ಕೃತಿಯೂ ಕೂಡಾ ನೈಸರ್ಗಿಕವಲ್ಲ, ಕೃತಕ ಎಂದಾಯ್ತು. ಕೃತಕವಾಗಿರುವುದನ್ನೇ ಗಮನವಿಟ್ಟು ಪದೇ ಪದೇ ಅಭ್ಯಾಸ ಮಾಡಬೇಕಾಗಿರುವುದು. ನೈಸರ್ಗಿಕವಾಗಿರುವುದನ್ನು ಅಭ್ಯಾಸ ಮಾಡುವ ಅಗತ್ಯವಿರುವುದಿಲ್ಲ. ಉಸಿರಾಡುವುದನ್ನು, ತಿನ್ನುವುದನ್ನು, ಮಲಗುವುದನ್ನು, ನಿದ್ರೆಯಿಂದ ಏಳುವುದನ್ನು ಅಭ್ಯಾಸ ಮಾಡುವ ಅಗತ್ಯವಿಲ್ಲ. ಆದರೆ, ಹೇಗೆ ತಿನ್ನುವುದು? ಏನನ್ನು ತಿನ್ನುವುದು? ಹೇಗೆ ಮಲಗುವುದು? ಹೇಗೆ ಏಳುವುದು? ಎದ್ದ ಕೂಡಲೇ ಏನು ಮಾಡುವುದು? ಎಂಬುದನ್ನೆಲ್ಲಾ ಅಭ್ಯಾಸಗೊಳಿಸಬೇಕು. ಒಂದೊಂದು ಸಮೂಹದವರು ಒಂದೊಂದು ರೀತಿಯಲ್ಲಿ ಇವನ್ನು ಮಾಡುತ್ತಾರೆ. ಹಾಗೆ ಮಾಡುಮಾಡುತ್ತಾ ಅದನ್ನೆಲ್ಲಾ ತಮ್ಮ ರೀತಿಯೆಂದು ತಮ್ಮ ಸಮೂಹದ ಎಲ್ಲರ ಮನಸ್ಸಿನಲ್ಲಿ ಛಾಪಿಸುತ್ತಾರೆ. ಹೀಗೆ ಛಾಪಿತವಾದ ಒಂದು ಪರಿಕಲ್ಪನೆಯನ್ನು ನೀವು ಸಂಸ್ಕೃತಿ ಎಂದರೆ ಏನೂ ಸಮಸ್ಯೆ ಇಲ್ಲ.

ಭಾರತೀಯ ಸಂಸ್ಕೃತಿ:

ಪದೇ ಪದೇ ನಾವು ಕೇಳುವಂತಹ ಭಾರತೀಯ ಸಂಸ್ಕೃತಿ ಎಂಬುದೇ ಇಲ್ಲ. ಭಾರತದಂತಹ ದೇಶಕ್ಕೆ ಒಂದು ಸಂಸ್ಕೃತಿ ಇಲ್ಲ. ಎಂದೆಂದಿಗೂ ಇರಲಾಗದು. ಎಲ್ಲೆಂಲ್ಲಿಂದಲೋ, ಆಹಾರ ಹುಡುಕಿಕೊಂಡು, ಸಂಘರ್ಷಗಳಿಂದ ತಪ್ಪಿಸಿಕೊಂಡು, ಸಂಪನ್ಮೂಲಗಳಿಗಾಗಿ, ವ್ಯಾಪಾರಕ್ಕಾಗಿ, ಅಧಿಪತ್ಯಕ್ಕಾಗಿ; ಹೀಗೆ ಏಕೇಕೋ ಬಂದವರೆಲ್ಲಾ ತಳವೂರಿದರು.

ವಿವಿಧ ಭೌಗೋಳಿಕ ಪ್ರಭಾವದಿಂದ ರೂಪುಗೊಂಡ ಅವರ ವಿವಿಧ ರೀತಿಯ ಮೂಲಗುಂಪುಗಳು ಸಂತತಿ ಅಥವಾ ಜನಾಂಗಗಳನ್ನು ಗುರುತಿಸಿಕೊಂಡರು ಅಥವಾ ಗುರುತಿಸಲ್ಪಟ್ಟಾರು. ತಮ್ಮ ತಮ್ಮ ಕೆಲಸಗಳಿಗೆ ಅನುಗುಣವಾಗಿ, ಒಟ್ಟಾಗಿ ಕಂಡುಕೊಂಡ ಅಗತ್ಯಗಳಿಗೆ ಅನುಗುಣವಾಗಿ ಗುಂಪುಗಳಾದರು. ಸ್ಥಳದಿಂದ ಸ್ಥಳಗಳಿಗೆ ಅಲೆದಾಡುತ್ತಿದ್ದ ಈ ಸಮೂಹಗಳು ಎಲ್ಲೆಲ್ಲೋ ಇರುತ್ತಿದ್ದರು, ಯರ‍್ಯಾರನ್ನೋ ಬೆರೆಯುತ್ತಿದ್ದರು. ಹೀಗಾಗಿ ಯಾವ ಸಮೂಹವೂ ಕೂಡಾ ತನ್ನ ಜನಾಂಗದ ಶುದ್ಧತೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ಇಲ್ಲಿನ ಶುದ್ಧತೆಯ ಪದ ಪ್ರಯೋಗ ಬೆರಕೆ ಇಲ್ಲದ ಎಂದಷ್ಟೇ ಹೊರತು ಪಾವಿತ್ರ್ಯತೆ ಎಂಬುದಲ್ಲ. ಶುದ್ಧತೆಯು ಭೌತಿಕವಾಗಿ ಪರಿಗಣಿಸಲ್ಪಟ್ಟರೆ, ಪಾವಿತ್ರ್ಯತೆಯು ಮಾನಸಿಕವಾಗಿ ಪರಿಗಣಿಸಲ್ಪಡುತ್ತದೆ. ಒಟ್ಟಾರೆ ಯಾವ ಸಮೂಹಗಳೂ ತಮ್ಮ ಸಂತತಿಯನ್ನು ಮುಂದುವರಿಸುವಾಗ ಶುದ್ಧತಳಿಯ ಜನಾಂಗವನ್ನು ಅನುವಂಶೀಯವಾಗಿ ಮುಂದುವರಿಸಲಾಗಲಿಲ್ಲ.

ಆದರೂ ಅಗತ್ಯ ಮತ್ತು ಅನಿವಾರ್ಯ ಕಾರಣಗಳಿಂದ ಸಮೂಹಗಳಾದವರು ಅಲ್ಲಿ ಬದುಕಿರಲು ಕೆಲವು ತಮ್ಮ ವ್ಯಕ್ತಿಗತವಾದಂತಹ ಆಗ್ರಹ ಮತ್ತು ಆವೇಶಗಳನ್ನು ಹತ್ತಿಕ್ಕಿಕೊಳ್ಳುವ ಅನಿವಾರ್ಯತೆ ಮತ್ತು ಅಗತ್ಯತೆಯಿಂದಾಗಿ ಕೆಲವು ಚೌಕಟ್ಟುಗಳನ್ನು ಕಟ್ಟಿಕೊಂಡರು. ವ್ಯಕ್ತಿಗತವಾಗಿ ಚೌಕಟ್ಟುಗಳನ್ನು ಹೊಂದಿದಂತೆ ಸಮೂಹವೂ ಕೂಡಾ ಚೌಕಟ್ಟುಗಳನ್ನು ಹೊಂದಿದ್ದೇ ಅಲ್ಲದೇ ಭೌಗೋಳಿಕವಾಗಿಯೂ ಕೂಡಾ ಎಲ್ಲೆಗಳನ್ನು ಗೀರಿಕೊಂಡಿತು.

ಪ್ರಾಣಿಗಳ ಸಹಜ ಸ್ವಭಾವ ತನ್ನ ಎಲ್ಲೆಗಳನ್ನು ಗುರುತಿಸಿಕೊಳ್ಳುವುದು. ನಗರಗಳಲ್ಲಿರುವ ನಾಯಿಗಳಿಂದ ಹಿಡಿದು, ಕಾಡುಗಳಲ್ಲಿರುವ ಸಿಂಹಗಳವರೆಗೂ ಎಲ್ಲೆಗಳನ್ನು ಗುರುತಿಸಿಕೊಳ್ಳುವ ಸ್ವಭಾವವಿದೆ. ಹೇಗೆ ಕ್ರೌರ್ಯ, ಹಿಂಸೆ, ಘರ್ಷಣೆ, ತನಗೇ ಬೇಕೆಂಬ ಸ್ವಾರ್ಥಗಳೆಲ್ಲವೂ ನೈಸರ್ಗಿಕವಾಗಿರುತ್ತದೆಯೋ ಹಾಗೆಯೇ ಎಲ್ಲೆಗಳನ್ನು ಗುರುತಿಸಿಕೊಳ್ಳುವುದೂ ಕೂಡಾ ಪ್ರಾಣಿಗಳಲ್ಲಿ ನೈಸರ್ಗಿಕವಾಗಿರುವಂತಹ ರೂಢಿ. ಯಾವುದೇ ರೀತಿಯಲ್ಲಿ ಸೀಮೆಗಳನ್ನು ಗುರುತಿಸಿಕೊಳ್ಳುವುದರಲ್ಲಿ ಕ್ರೌರ್ಯವಿದೆ, ಘರ್ಷಣೆ ಮತ್ತು ಸ್ವಾರ್ಥ ಇವೆ. ಇನ್ನು ಗಡಿಗಳನ್ನು ಹೊಂದಿರುವ ದೇಶಗಳೂ ಇದಕ್ಕೆ ಹೊರತಿಲ್ಲ ಎಂದು ಬೇರೆ ಹೇಳಬೇಕಾಗಿಲ್ಲ.

ಸಮೂಹಗಳಲ್ಲಿ ಬದುಕುವುದು ನೈಸರ್ಗಿಕವಾದರೆ, ಸಮೂಹಗಳು ರೂಪಿಸಿಕೊಂಡ ದೇಶವೆಂಬುದಾಗಲಿ, ಸಂಸ್ಕೃತಿ ಮತ್ತು ಧರ್ಮವಾಗಲಿ ಕೃತಕ.
ಸರಿ, ಈಗ ಅರ್ಥ ಮಾಡಿಕೊಳ್ಳಬೇಕಾಗಿರುವುದಿಷ್ಟು. ಮನುಷ್ಯನಿಗೆ ಸಮಾಜವು ಸಹಜ. ಸಂಸ್ಕೃತಿಯು ಕೃತಕ.
ಇನ್ನು ಭಾರತೀಯ ಸಂಸ್ಕೃತಿ ಎಂಬುದು ಮತ್ತಷ್ಟು ದೊಡ್ಡ ಸುಳ್ಳು. ಭಾರತೀಯ ಸಂಸ್ಕೃತಿಯ ಹೆಸರಿನಲ್ಲಿ ಏನನ್ನೇ ಗಟ್ಟಿಗೊಳಿಸಲು ಯಾರು ಯತ್ನಿಸುತ್ತಾರೋ ಅವರು ಸುಳ್ಳನ್ನು ಆಧರಿಸಿದ್ದಾರೆಂದೇ ಅರ್ಥ. ನಮ್ಮ ದೇಶದಲ್ಲಿ ಕೊರಗರ ಸಂಸ್ಕೃತಿ, ಕೊಡವರ ಸಂಸ್ಕೃತಿ, ಹಕ್ಕಿಪಿಕ್ಕಿಗಳ, ಹೆಳವರ, ಶಿಳ್ಳೆಕ್ಯಾತರ, ವೈದಿಕರ ಸಂಸ್ಕೃತಿಗಳೆಂಬುವಿವೆ. ಆದರೆ ಭಾರತೀಯ ಸಂಸ್ಕೃತಿ ಎಂಬುದಿಲ್ಲ. ಯಾವುದೋ ಒಂದು ವೈದಿಕರದ್ದೋ ಅಥವಾ ಹೆಳವರದ್ದೋ ಭಾರತದ ಸಂಸ್ಕೃತಿ ಎನ್ನಲು ಬರುವುದಿಲ್ಲ. ಭಾರತಕ್ಕೆ ಸಂಸ್ಕೃತಿ ಇಲ್ಲ. ಗಡಿಗಳಿವೆ. ಗೀರಿಕೊಂಡಿರುವ ಆ ಗಡಿಗಳಲ್ಲಿ ಸಾವಿರಾರು ಸಂಸ್ಕೃತಿಗಳಿವೆ.

ನಮ್ಮ ಭವ್ಯವಾದ ಭಾರತೀಯ ಸಂಸ್ಕೃತಿ ಎಂದು ಹೇಳುವುದು ನಗೆಪಾಟಲು ಮತ್ತು ಅರ್ಥಹೀನ. ಭಾರತವೆಂದು ಗೀಚಿಕೊಂಡಿರುವ ಗೆರೆಗಳಲ್ಲಿರುವ ಸಾವಿರಾರು ಸಂಸ್ಕೃತಿಗಳಲ್ಲಿ ಯಾವುದೊಂದೂ ಭವ್ಯವಲ್ಲ ಅಥವಾ ಹೀನವಲ್ಲ. ಒಂದು ಸಂಸ್ಕೃತಿಯ ಭವ್ಯತೆ ಮತ್ತೊಂದು ಸಂಸ್ಕೃತಿಯವರಿಗೆ ಹೀನತೆಯಾಗಿ ತೋರಬಹುದು. ಇನ್ನು ಭಾರತದಲ್ಲಿರುವ ಎಲ್ಲಾ ಸಂಸ್ಕೃತಿಗಳನ್ನು ಒಟ್ಟಾಗಿಸಿಕೊಂಡೇ ಭಾರತೀಯ ಸಂಸ್ಕೃತಿ ಎಂದು ಸಂಕಲಿತವಾಗಿ ಹೇಳುವುದಾಗಿದ್ದರೆ ಅವುಗಳಲ್ಲಿ ಯಾವುದೇ ಸಂಘರ್ಷಗಳಿರಬಾರದಿತ್ತು. ಆದರೆ ಭಿನ್ನತೆಗಳ ನಡುವೆ ಸಂಘರ್ಷಗಳನ್ನಿಟ್ಟುಕೊಂಡು ಒಂದು ಒಟ್ಟು ರೂಪದ ಚಿತ್ರಣವನ್ನು ಕೊಡುವುದು ಬೂಟಾಟಿಕೆ ಅಥವಾ ಅಪ್ರಮಾಣಿಕ ರೂಪಕವಾಗುತ್ತದೆ.
ಒಬ್ಬ ವ್ಯಕ್ತಿ ಮಗುವಾಗಿದ್ದಾಗ ಎಂದಿಗೂ ತಲೆಕೆಡಿಸಿಕೊಳ್ಳದ ಸಂಸ್ಕೃತಿ ಎಂಬ ವಿಷಯವು ಆತ ವಯಸ್ಕನಾದಾಗ ಹೇಗೆ ಪುನರಾವರ್ತಿತವಾಗಿ ಉಚ್ಚರಿಸುತ್ತಿರುತ್ತಾನೆ ಎಂಬುದರ ಬಗ್ಗೆ ಗಮನ ಹರಿಸಬೇಕಾಗಿದೆ. ವಯಸ್ಕನ ಸಂಸ್ಕೃತಿಯ ಪರಿಕಲ್ಪನೆಯು ಹುಸಿ ಮತ್ತು ಅದು ಮಗುವಿನ ಸಹಜತೆಯನ್ನು ಕೊಲ್ಲುವ ಕಾರಣದಿಂದಾಗಿ ಸಂಸ್ಕೃತಿಯ ಬಗ್ಗೆ ಸ್ಪಷ್ಟ ದೃಷ್ಟಿಯನ್ನು ಹೊಂದಬೇಕಾಗಿದೆ.
ಇನ್ನು ಭಾರತದಂತಹ ದೇಶಕ್ಕಂತೂ ಸಂಸ್ಕೃತಿ ಆಧಾರಿತ ಸಮಾಜವಾಗಲಿ, ಧರ್ಮ ಆಧಾರಿತ ಸಮಾಜವಾಗಲಿ ಖಂಡಿತ ಬೇಡವೇ ಬೇಡ. ಒಂದು ಪ್ರಯೋಗದ ಕಾರಣಕ್ಕಾದರೂ ಬೇಕಾಗಿರುವುದು ಎಂದರೆ ಅದು ಶಿಶು ಪ್ರಧಾನ ಸಮಾಜ. ಸಮಾಜಕ್ಕೊಂದು ಸಂಸ್ಕೃತಿ ಬೇಕೇಬೇಕೆಂದರೆ, ಶಿಶು ಮಾನ್ಯತೆಯ ಹೊಸ ಸಂಸ್ಕೃತಿಯನ್ನು ರೂಪಿಸಿಕೊಂಡು ರೂಢಿಸಿಕೊಳ್ಳಬೇಕಾಗುತ್ತದೆ.

_ ಮುಂದುವರಿಯುವುದು.

LEAVE A REPLY

Please enter your comment!
Please enter your name here