ಪುಸ್ತಕ ವಿಮರ್ಶೆ -ಮಹಮ್ಮದ್ ಶರೀಫ್ ಕಾಡುಮಠ

ಲೇಖಕರು; ಪ್ರಸನ್ನ ಹೆಗ್ಗೋಡು ಕೃತಿ; ಶೂದ್ರರಾಗೋಣ ಬನ್ನಿ ಪ್ರಕಾಶಕರು ; ಒಂಟಿದನಿ ಪ್ರಕಾಶನ
ಬೆಲೆ; ರೂ. 140.

‘ಶೂದ್ರರಾಗೋಣ ಬನ್ನಿ’ ಒಂದು ಅತ್ಯುತ್ತಮ, ಉಪಯುಕ್ತ ಕೃತಿ. ಮಹತ್ವದ ಕೃತಿಯೂ ಹೌದು. ಆಧುನಿಕ ತಂತ್ರಜ್ಞಾನಗಳ ಜೊತೆಗೆ ಯಂತ್ರ ನಾಗರಿಕತೆಗೆ ಮನಸೋತು ಅವುಗಳಿಂದ ಅಭಿವೃದ್ಧಿಯನ್ನು ಆಶಿಸುತ್ತಾ, ಇರುವ ನೆಮ್ಮದಿಯನ್ನು ಕಳೆದುಕೊಂಡು ಮತ್ತೆ ಅದರದೇ ಹುಡುಕಾಟದಲ್ಲಿ ಮುಳುಗೇಳುತ್ತಾ ಬದುಕುತ್ತಿರುವ ಇಪ್ಪತ್ತೊಂದನೆಯ ಶತಮಾನದ ಸಮಾಜಕ್ಕೆ ‘ಮರುಭೂಮಿಯ ಮರೀಚಿಕೆ’ಯೆಂಬಂತೆ ಈ ಕೃತಿ ರಚಿತಗೊಂಡಿದೆ. ಪ್ರಸನ್ನ ಅವರ ಈ ಯಶಸ್ವಿ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಗಾಂಧಿವಾದಿಯಾಗಿ ಗಾಂಧಿ ಹಾದಿ ಹಿಡಿದು ಸಾಗಿ ಆಧುನಿಕತೆಯ ಅಬ್ಬರದ ನಡುವೆಯೂ ಶ್ರಮಸಹಿತ ಸರಳ ಬದುಕಿನ ಸವಿಯನ್ನು ಉಣ್ಣುತ್ತಿರುವ ಅನುಭವಗಳ ದಾಖಲೆ, ಈ ಕೃತಿಯ ಕುರಿತು ಮತ್ತು ಶ್ರಮಸಹಿತ ಸರಳ ಬದುಕಿನ ಕುರಿತು ಇನ್ನಷ್ಟು ಆಸಕ್ತಿಯನ್ನು ಹೆಚ್ಚಿಸುತ್ತದೆ.

‘ಈ ಪುಸ್ತಕವು ನನ್ನಲ್ಲಾಗುತ್ತಿರುವ ಬದಲಾವಣೆಗಳ ದಾಖಲೆಯೂ ಹೌದು.’ ಎಂಬ ಮುನ್ನುಡಿಯ ಕೊನೆಯ ವಾಕ್ಯ ಪ್ರಸನ್ನ ಅವರ ಅನುಭವಗಳ ದಾಖಲೆಗಳ ಕುರಿತು ಸುಳಿವು ನೀಡುತ್ತದೆ. ಪ್ರಸ್ತುತ ಸಮಾಜದಲ್ಲಿ ಶ್ರಮಜೀವಿಗಳಿಗಿಂತ ಹೆಚ್ಚಾಗಿ ಸುಲಭಜೀವಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ಶ್ರಮಜೀವಿಗಳೇ ಸುಲಭಜೀವಿಗಳಾಗಲು ತುಡಿಯುತ್ತಿದ್ದಾರೆ. ಯಂತ್ರನಾಗರಿಕತೆಯೇ ಇವಕ್ಕೆ ಮುಖ್ಯ ಕಾರಣ. ಹಳ್ಳಿಯ ಯುವಕರು ಶ್ರಮಸಹಿತ ಸರಳ ಜೀವನವನ್ನು ನಿರ್ಲಕ್ಷಿಸಿ ಸುಲಭಜೀವನದ ಕನಸು ಕಾಣುತ್ತಾ ನಗರದ ಕಡೆ ಧಾವಿಸಿ ಯಂತ್ರಗಳ ಜೊತೆ ಸೆಣಸಾಡಿ ಸಂಪಾದಿಸಲು ಸಾಧ್ಯವಾಗದೆ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿರುವ ವಾಸ್ತವವನ್ನು ಲೇಖಕರು ಬಹಳ ಸ್ಪಷ್ಟವಾಗಿ ತಿಳಿಸುತ್ತಾರೆ. ಮಾನಸಿಕ ಶ್ರಮ ಮತ್ತು ದೈಹಿಕ ಶ್ರಮಗಳ ನಡುವೆ ವ್ಯತ್ಯಾಸಗಳಿವೆ. ಮಾನಸಿಕ ಶ್ರಮದ ಮೂಲಕ ಸಂಪಾದನೆ ಅತಿಸುಲಭ, ಅದರಲ್ಲೂ ದೈಹಿಕ ಶ್ರಮಕ್ಕಿಂತ ಸುಲಭ ಎಂಬ ಜನರ ಭಾವನೆ, ಮತ್ತು ಮಾನಸಿಕ ಬಳಲಿಕೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲಾಗುವ ಪರಿಣಾಮಗಳು ದೈಹಿಕ ಶ್ರಮದಿಂದಾಗುವ ಉಪಯೋಗ ಇವೆಲ್ಲವನ್ನೂ ಬಹಳ ಸೂಕ್ಷ್ಮ ರೀತಿಯಲ್ಲಿ ಅರಿತುಕೊಂಡು ಲೇಖಕರು ವಿವರಿಸುತ್ತಾರೆ. ಕೃತಿಯ ಹೆಸರು ‘ಶೂದ್ರರಾಗೋಣ ಬನ್ನಿ’ ಎಂದು ಎಲ್ಲರನ್ನೂ ಶ್ರಮಸಹಿತ ಸರಳ ಬದುಕಿನ ಕಡೆಗೆ ಪ್ರೀತಿಯಿಂದ ಕರೆಯುತ್ತದೆ. ಇಲ್ಲಿ ಲೇಖಕರು ‘ಶೂದ್ರತ್ವ’ ಎಂಬುದನ್ನು ಒಂದು ಜಾತಿಯ ಅರ್ಥದಲ್ಲಿ ಚಿತ್ರಿಸದೆ ಶ್ರಮದ ಅರ್ಥವನ್ನು ಪರಿಚಯಿಸಿದ್ದಾರೆ. (ಗ್ರಾಮವಾಸದಲ್ಲಿ ಶ್ರಮದ ನಿಜ ಅರ್ಥ ತಿಳಿದೆ ನಾನು, ಅರ್ಥಾತ್ ಶೂದ್ರತ್ವದ ನಿಜ ಅರ್ಥ ತಿಳಿದೆ. ಪುಟ 12)

ನಾನು ಇದುವರೆಗೂ ಆಲೋಚಿಸಿರದ, ಊಹಿಸಿರದ ಹಲವಾರು ಸಂಗತಿಗಳನ್ನು ಪದಗಳ ಅರ್ಥದಿಂದ ಹಿಡಿದು ಅದು ದುರ್ಬಲ ಸಮಾಜದಲ್ಲಿ ವ್ಯರ್ಥವಾಗುತ್ತಿರುವ, ಬಳಕೆಯಾಗುತ್ತಿರುವ ರೀತಿಯ ಕುರಿತು ಸರಳವಾದ ಶೈಲಿಯಲ್ಲಿ ತಿಳಿಹೇಳಿರುವುದನ್ನು ಕಂಡರೆ ಅವರ ತಿಳುವಳಿಕೆಯ, ಜ್ಞಾನದ ಕುರಿತು ಅಚ್ಚರಿ ಮೂಡುತ್ತದೆ. ಜೊತೆಗೆ ಅವರ ಜ್ಞಾನದ ಅಗಾಧತೆಗೆ ಅವರು ನಡೆದ ಸರಳ ಬದುಕಿನ ಮಾರ್ಗದ ಅಪಾರ ಅನುಭವಗಳೇ ಕಾರಣ ಎಂಬುದು ಅರ್ಥವಾಗುತ್ತದೆ. ಕೃತಿಯು ನಾಲ್ಕು ಭಾಗಗಳನ್ನು ಒಳಗೊಂಡಿದೆ. ಮೊದಲೆರಡು ಭಾಗಗಳು ಹಲವು ವಿಚಾರಗಳನ್ನು ಉಳಿದೆರಡು ಭಾಗಗಳು ಕೆಲವು ವಿಚಾರಗಳನ್ನು ಓದುಗರಿಗೆ ತೆರೆದಿಡುತ್ತವೆ. ಕೆಲವು ಎಂದ ಮಾತ್ರಕ್ಕೆ ನಿರ್ಲಕ್ಷ್ಯ ಮಾಡುವಂತಿಲ್ಲ. ಈ ಕೃತಿಯಲ್ಲಿ ಯಾವುದನ್ನೂ ಮುಖ್ಯವಲ್ಲ ಎಂದು ಹೇಳಿ ಕೈಬಿಡುವಂತಿಲ್ಲ. ಕೈಬಿಡಬೇಕಾದಂತಹ ಸಾಮಾನ್ಯ ವಿಚಾರಗಳೇ ಅಲ್ಲಿಲ್ಲ. ಎಲ್ಲವೂ ಮುಖ್ಯವಾದುವುಗಳೇ. ಜಾತಿವ್ಯವಸ್ಥೆ ಲೇಖಕರ ಮನಸ್ಸನ್ನು ಬಹಳವಾಗಿ ಕಾಡಿದೆ.

ಶ್ರಮಸಹಿತ ಸರಳ ಬದುಕಿನಲ್ಲಿ ಜಾತಿವ್ಯವಸ್ಥೆಯಿಂದ ಮುಕ್ತರಾಗಲು ಲೇಖಕರು ಒಂದು ಹಾದಿಯನ್ನು ತೋರಿಸುತ್ತಾರೆ. ಎಲ್ಲರೂ ಮೇಲೇರುವ ಬದಲು ಮೇಲಿರುವ ಎಲ್ಲರನ್ನೂ ಕೆಳಗಿಳಿಸುವುದು, ಎಲ್ಲರೂ ಕೆಳಗಿಳಿದ ನಂತರ ಏಣಿಯನ್ನೇ ಕಿತ್ತೆಸೆಯುವುದು. ಇದೊಂದು ಆಶಯ, ಒಂದು ಆದರ್ಶ. ಮಾತ್ರವಲ್ಲ, ಸರಳ ಬದುಕಿಗೆ ಇದು ಅನಿವಾರ್ಯ ಕೂಡಾ ಹೌದು. ಕೃತಿಯ ಎರಡನೆ ಭಾಗದ ಕಡೆಯ ಕೆಲವು ಪುಟಗಳಲ್ಲಿ ಲೇಖಕರು ಜೆ.ಸಿ. ಕುಮಾರಪ್ಪನವರ ಲೇಖನವೊಂದರ ಭಾವಾನುವಾದವನ್ನು ವಿವರಿಸುತ್ತಾರೆ. ಅಲ್ಲಿ ಜಾತಿವ್ಯವಸ್ಥೆಯ ಕುರಿತು ಹೀಗೆ ಬರೆದಿದ್ದಾರೆ. ಜಾತಿವ್ಯವಸ್ಥೆಯೆಂಬುದು ನಿಮ್ಮೂರಿನ ತೇರಿದ್ದಂತೆ. ತೇರಿನ ಒಳಗೆ ದೇವರ ಮೂರ್ತಿ, ತೇರಿನ ಮೇಲೆ ಗೋಪುರ, ಗೋಪುರದ ಮೇಲೆ ಕಲಶ ಇತ್ಯಾದಿ. ತೇರಿನ ಕೆಳಗೆ ಮರದ ಗಾಲಿಗಳು. ಗಾಲಿ ದಲಿತ, ಕಲಶ ಬ್ರಾಹ್ಮಣ, ಎಳೆಯುತ್ತಲೇ ಇದ್ದೇವೆ ರೈತನ ಮೂರ್ತಿ ಹೊತ್ತ ಜಾತಿವ್ಯವಸ್ಥೆಯೆಂಬ ತೇರನ್ನು. ಈ ಕೃತಿಯಲ್ಲಿ ಸಾಮಾನ್ಯವಾಗಿ ಎಲ್ಲಾ ವಿಷಯಗಳೂ ಓದುಗರಿಗೆ ಇಷ್ಟವಾಗುವಂಥವುಗಳೇ.

ಅದರಲ್ಲೂ ನನಗೆ ಹೆಚ್ಚು ಇಷ್ಟವಾದದ್ದು ‘ಅನುಭವ ಕಥನ’ (ಪುಟ 59). ಈ ಲೇಖನದಲ್ಲಿ ಪ್ರಸನ್ನರವರು ತಮ್ಮ ಶ್ರಮಸಹಿತ ಸರಳ ಬದುಕಿನ ಅನುಭವಗಳ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದಾರೆ. ಅವರ ದಿನನಿತ್ಯದ ಬದುಕಿನಲ್ಲಿ ಸರಳತೆಯನ್ನು ಮೈಗೂಡಿಸಿಕೊಂಡ ಬಗೆ, ಯಂತ್ರ ಕಳಚುವುದನ್ನು ಒಂದು ಆಟದಂತೆ ಪರಿಗಣಿಸಿಕೊಂಡು ಆದಷ್ಟು ಯಂತ್ರಗಳಿಂದ ದೂರವಿದ್ದು ಬದುಕುವುದನ್ನು ರೂಢಿಮಾಡಿಕೊಂಡದ್ದು, ಅನಿವಾರ್ಯ ಎನ್ನುವಲ್ಲಿ ಮಾತ್ರ ಸಣ್ಣಪುಟ್ಟ ಯಂತ್ರಗಳನ್ನು ಬಳಸುವಂಥದ್ದು. ಈ ರೀತಿಯ ಅನುಭವಗಳ ದಾಖಲೆ ಓದುಗರಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕುತೂಹಲವನ್ನು ಸೃಷ್ಟಿಸುತ್ತದೆ. ‘ನಾವೂ ಹೀಗೆ ಮಡಿದರೆ ಹೇಗೆ ?’ ಎಂಬ ಯೋಚನೆಯಂತೂ ಬಂದೇ ಬರುತ್ತದೆ. ಭಾಗ ಮೂರರಲ್ಲಿ ಮೊದಲ ಲೇಖನ ‘ತಲೆಕೆಳಗಾದ ಬದುಕು’ಓದುಗರ ಮನಸ್ಸನ್ನು ತಟ್ಟಬಲ್ಲ ಪರಿಣಾಮಕಾರಿ ಲೇಖನ.
ಸರಳತೆಯ ಬದುಕನ್ನೇ ಮುಂದುವರಿಸುವಲ್ಲಿ ಲೇಖಕರು ಎದುರಿಸಿದ ಸವಾಲುಗಳು, ಒಂದೆರಡು ತಮ್ಮದೇ ನಾಟಕಗಳ ಸಾರ, ಪ್ರತ್ಯಕ್ಷವಾಗಿ ಕಂಡು ಕಾಡಿದ ದೃಶ್ಯಗಳನ್ನು ಬಹಳ ಚಿಕ್ಕದಾದ ರೀತಿಯಲ್ಲಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಮನುಷ್ಯನ ಆಲಸ್ಯಕ್ಕೆ ಬಲಿಯಾಗುವ ಪ್ರಾಣಿಗಳ ಕುರಿತು ತಾನು ಕಂಡ ಹಸುವೊಂದರ ಬಗ್ಗೆ ಉದಾಹರಿಸುತ್ತಾರೆ. ಎಲ್ಲ ವಸ್ತುಗಳಿಗೂ ಪ್ಲಾಸ್ಟಿಕ್ ಬಳಸುವ ಮನುಷ್ಯ ತಿಂಡಿ ತಂದು ತಿಂದ ಮೇಲೆ ಪ್ಲಾಸ್ಟಿಕನ್ನು ಬೀದಿಗೆಸೆಯುತ್ತಾನೆ. ಆದರೆ ತಿಂಡಿಯ ಪರಿಮಳಕ್ಕೆ ಸೋತ ಹಸುವು ಪ್ಲ್ಲಾಸ್ಟಿಕನ್ನು ತಿನ್ನುತ್ತದೆ. ಭಾರತದಲ್ಲಿ ಗೋವಧೆ ನಡೆಯುತ್ತಿರುವ ಮಾದರಿ ಇದು ಎನ್ನುತ್ತಾರೆ ಲೇಖಕರು. ಭಾಗ ನಾಲ್ಕರಲ್ಲಿ ‘ಭೂಮಿಯೆಂಬುದು ಬೆಚ್ಚಗಿನ ಮನೆ’ ಎಂಬ ಅತೀ ಪುಟ್ಟ ಲೇಖನದ ಕೊನೆಯ ಸಾಲು ಇರುವುದೊಂದೇ ಭೂಮಿ: ಬಳಿಸಿಕೊಂಡರೂ ಒಂದೇ, ಹಾಳುಗೆಡವಿದರೂ ಒಂದೇ.
ಇಂದು ನಾವು ನಮ್ಮ ಬಾಳಿಗಾಗಿ ಭೂಮಿಯನ್ನು ಹಾಳುಗೆಡವುತ್ತಿದ್ದೇವೆ. ಪ್ರಕೃತಿಯ ನಾಶದಿಂದಾಗಿ ಜಾಗತಿಕ ತಾಪಮಾನ ಹೆಚ್ಚಿ ಅಪಾಯಕಾರಿ ಘಟ್ಟವನ್ನು ತಲುಪುತ್ತಿದ್ದೇವೆ. ಎಲ್ಲರಿಗೂ ಗೊತ್ತು ತಾನು ಮಾಡುತ್ತಿರುವುದು ತಪ್ಪು ಎಂದು. ಆದರೂ ಮಾಡುತ್ತೇವೆ. ಇತರರಿಗಿಂತ ತಾವೇನೂ ಕಮ್ಮಿಯಿಲ್ಲ ಎಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಾ ನಮಗರಿವಿಲ್ಲದೆ ‘ಬೆಳಕಿನಿಂದ ಕತ್ತಲಿನೆಡೆಗೆ’ ಹೆಜ್ಜೆಯಿಡುತ್ತಿದ್ದೇವೆ. ಹೊಸತಲ್ಲದ ಹೊಸತನ್ನು ಹುಡುಕುತ್ತಾ ಜಗತ್ತು ಇಷ್ಟು ಮುಂದುವರಿದರೂ ಹಳತಿಗೆ ಹಿಂದಿರುಗುವ ಕಠಿಣ ಪ್ರಯತ್ನಕ್ಕೆ ಸುಲಭ ದಾರಿಯನ್ನು ಈ ಕೃತಿ ತೋರಿಸಿಕೊಡುತ್ತದೆ. ಒಟ್ಟಿನಲ್ಲಿ ಈ ಕೃತಿಯು ಸಂಪೂರ್ಣವಾಗಿ ‘ಸರಳ’ ಕೃತಿ. ಎಲ್ಲ ರೀತಿಯಲ್ಲೂ ಸರಳವಾದದ್ದು. ಮುಖಪುಟದಿಂದ ಹಿಡಿದು ಹಿಂಬದಿ ಪುಟದವರೆಗೆ ಒಟ್ಟು ಕೃತಿಯ ವಿನ್ಯಾಸ ಸರಳವಾಗಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ತನ್ನಿಂದಾದಷ್ಟು, ತಿಳಿದಿರುವಷ್ಟು ಮಾಹಿತಿ ಮುನ್ನೆಚ್ಚರಿಕೆಗಳನ್ನು ಜನರಿಗೆ ಮುಟ್ಟಿಸಬೇಕೆಂಬ ಹಂಬಲ ಈ ಕೃತಿಯಲ್ಲಿ ಎದ್ದು ಕಾಣುತ್ತದೆ.
ಓದುತ್ತಾ ಹೋದಂತೆ ಕೃತಿ ಸರಳತೆಯ ಜಗತ್ತಿನಂತೆ ಬಾಸವಾಗುತ್ತದೆ. ಈ ಕೃತಿಯು ಎಷ್ಟು ಜನರನ್ನು ತಲುಪುತ್ತದೆಯೋ ಅಷ್ಟರ ಮಟ್ಟಿಗೆ ಸಮಾಜ,ವ್ಯಕ್ತಿ ಅಥವಾ ಓದುಗರಲ್ಲಿ ಖಂಡಿತವಾಗಿಯೂ ಒಂದಿಷ್ಟಾದರೂ ಬದಲಾವಣೆಯನ್ನು ಕಾಣಲು ಸಾಧ್ಯವಾಗುತ್ತದೆ. ಕೊನೆಯದಾಗಿ, ಯಂತ್ರಗಳು ಆಳುತ್ತಿರುವ ಇಂದಿನ ಜಗತ್ತಿನಲ್ಲಿ ಯಂತ್ರಗಳನ್ನು ತೊರೆದು ಸುಲಭ ಜೀವನವನ್ನು ಬಿಟ್ಟು ಶ್ರಮಸಹಿತ ಸರಳ ಬದುಕಿಗೆ ಮರಳುವುದೆಂದರೆ? ಇದು ಸಾಧ್ಯವೇ? ಹೇಗೆ ಸಾಧ್ಯ? ಎಂಬೆಲ್ಲಾ ಪ್ರಶ್ನೆಗಳನ್ನು ಮನಸ್ಸಿನೊಳಗಿಟ್ಟುಕೊಂಡೇ ಅವಕ್ಕೆ ಉತ್ತರಿಸುವವರಿಲ್ಲವೆಂದು ಭಾವಿಸಿಕೊಂಡು ಜನರು ಬದುಕುತ್ತಿದ್ದಾರೆ. ಈ ರೀತಿಯ ಎಲ್ಲಾ ಗೊಂದಲಗಳನ್ನು ಒಂದೊಂದಾಗಿ ತಾಳ್ಮೆಯಿಂದ ಬಗೆಹರಿಸುತ್ತಾ, ಕೆಲವೊಂದಕ್ಕೆ ನಮ್ಮೊಳಗೇ ಚಿಂತನೆಯ ಬೆಳಕು ಹಚ್ಚುವಂತೆ ಮಾಡುತ್ತಾ ಮುಂದುವರಿಯುವ ಈ ಸರಳ ಸುಂದರ ಕೃತಿ ಶ್ರಮಸಹಿತ ಸರಳ ಬದುಕಿನ ದಾರಿಗೆ ಬೆಳಕು ಚೆಲ್ಲುವ ಕೃತಿ, ಮಾತ್ರವಲ್ಲದೆ, ಜಗತ್ತಿನ ಪ್ರಶ್ನಾರ್ಥಕ ನೋಟಕ್ಕೆ ಸೂಕ್ತವಾದ ಉತ್ತರ ಎನ್ನಬಹುದು.

LEAVE A REPLY

Please enter your comment!
Please enter your name here