• ಇಸ್ಮತ್ ಪಜೀರ್

ಎಲ್ಲಾ ಕಾರ್ಮಿಕ ಬಂಧುಗಳಿಗೂ “ಮೇ ಡೇ” ಶುಭಾಶಯಗಳು..

ಆಧುನಿಕ ಜಗತ್ತಿನಲ್ಲಿ ಕಾರ್ಮಿಕರ ಪರವಾದ ಅತ್ಯಂತ ನ್ಯಾಯಪರ ಧ್ವನಿಯಾಗಿ ಗುರುತಿಸಲ್ಪಡುವ ವ್ಯಕ್ತಿತ್ವ ಕಾರ್ಲ್ ಮಾರ್ಕ್ಸ್‌ನದು.‌ಅದೆಷ್ಟು ಬಲವಾದ ನಂಬಿಕೆಯೆಂದರೆ ಕಮ್ಯೂನಿಸಮನ್ನು ಒಪ್ಪದವರೂ ಇದನ್ನು ಒಳಗೊಳಗೇ ಒಪ್ಪುತ್ತಾರೆ. ಸುಮ್ಮನೆ ಒಂದು ಉದಾಹರಣೆ ನೋಡಿ. ನೀವು ಭಾರತದ ಕಮ್ಯೂನಿಸ್ಟ್‌ ಪಕ್ಷದ ಕಾರ್ಮಿಕ ಘಟಕದ ಸದಸ್ಯರುಗಳ ವಿವರ ತೆಗೆದು ನೋಡಿದರೆ ನಿಮಗೆ ಆಶ್ಚರ್ಯವಾಗಬಹುದು. ಕಮ್ಯೂನಿಸ್ಟ್‌ ಲೇಬರ್ ವಿಂಗ್‌ಗೆ ಇಷ್ಟು ಸದಸ್ಯರಿದ್ದಾರಾ ಎಂದು ನೀವು ಅರೆಕ್ಷಣ ತಬ್ಬಿಬ್ಬಾಕಬೇದೀತು.ಇಷ್ಟು ದೊಡ್ಡ ಸಂಖ್ಯೆಯ ಸದಸ್ಯರಿದ್ದೂ ಭಾರತದಲ್ಲಿ ಕಮ್ಯೂನಿಸ್ಟ್‌ ಪಕ್ಷ ಯಾಕೆ ಈ ಹೀನಾಯ ಸ್ಥಿತಿಗಿಳಿದಿದೆಯೆಂದು ಯೋಚಿಸದಿರಲಾರಿರಿ. ಎಲ್ಲರಿಗೂ ಗೊತ್ತು ಕಮ್ಯೂನಿಸ್ಟ್ ಪಕ್ಷದಷ್ಟು ದೊಡ್ಡ ಧ್ವನಿಯಲ್ಲಿ ಕಾರ್ಮಿಕರ ಪರ ಧ್ವನಿಯೆತ್ತುವ ಪಕ್ಷ ಇನ್ನೊಂದಿಲ್ಲ ಎಂದು. ಆದರೆ ನೀವೊಮ್ಮೆ ಪ್ರವಾದಿ (ಸ)ರ ಕಾರ್ಮಿಕ ನೀತಿಯ ಕುರಿತು ಪ್ರಾಮಾಣಿಕವಾಗಿ ಮತ್ತು ಪೂರ್ವಾಗ್ರಹ ರಹಿತರಾಗಿ ಅಭ್ಯಸಿಸತೊಡಗಿದರೆ ನಿಮಗೆ ಆಶ್ಚರ್ಯವಾಗದಿರದು. ಅರೇ ಇದೇನು…ಕಾರ್ಲ್ ಮಾರ್ಕ್ಸ್ ನ ಕಾರ್ಮಿಕ ಸಿದ್ದಾಂತವು ಇದರ ಮುಂದೆ ಏನೇನೂ ಅಲ್ಲ ಎಂದು ನೀವು ಎಂದು ನೀವು ಉದ್ಘರಿಸದಿರಲಾರಿರಿ..

“ದುಡಿದವನ ಬೆವರ ಹನಿ ಆರುವ ಮುನ್ನ ಆತನ ವೇತನ ನೀಡಿ ಬಿಡಿ” ಎಂಬುವುದು ಅತ್ಯಂತ ಪ್ರಸಿದ್ಧ ಪ್ರವಾದಿ ನುಡಿ. ಪ್ರವಾದಿವರ್ಯರ ಕಾರ್ಮಿಕ ಪರ ನೀತಿಯನ್ನರಿಯಲು ಇದೊಂದೇ ವಾಕ್ಯ ಸಾಕು. ಪ್ರವಾದಿವರ್ಯರ ಕಾರ್ಮಿಕ ಪರ ಸಂದೇಶಗಳು ನೂರಾರು ಇವೆಯಾದರೂ, ಇದೊಂದೇ ಸಂದೇಶ ಸಾಕು ಪ್ರವಾದಿವರ್ಯರ ಕಾರ್ಮಿಕ ನೀತಿಯನ್ನರಿಯಲು… ಮಾರ್ಕ್ಸ್ ತನ್ನ ದಾಸ್ ಕ್ಯಾಪಿಟಲ್‌ನಾದ್ಯಂತ ಬರೆದ ಕಾರ್ಮಿಕ ಪರ ಸಿದ್ಧಾಂತಗಳು ಇದೊಂದೇ ಪ್ರವಾದಿ ನುಡಿಯ ಮುಂದೆ ಪೇಲವವಾಗಿ ಕಾಣುತ್ತವೆ.

ಜಗತ್ತಿನಲ್ಲಿ ಕೇವಲ ಎರಡು ಧರ್ಮಗಳು ಮಾತ್ರ ದುಡಿಮೆಯನ್ನು ಆರಾಧನೆಯೆಂದು ಪರಿಗಣಿಸಿವೆ. ಅದರಲ್ಲಿ ಇಸ್ಲಾಂ ಮೊದಲನೆಯದಾದರೆ, ಲಿಂಗಾಯತ ಧರ್ಮ ಎರಡನೆಯದ್ದು. ಲಿಂಗಾಯತ ಧರ್ಮ ಕರ್ನಾಟಕ,ಮಹಾರಾಷ್ಟ್ರ , ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಮಾತ್ರ ವ್ಯಾಪಿಸಿದೆ. ಇಸ್ಲಾಂ ಹಾಗಲ್ಲ, ಅದು ಲೋಕವ್ಯಾಪಿ. ಅದಕ್ಕೆ ನಿರ್ದಿಷ್ಟ ಗಡಿಗಳಿಲ್ಲ.
ಬಸವಣ್ಣನವರು ಕಾಯಕವೇ ಕೈಲಾಸ ಎಂದರು. ಅರ್ಥಾತ್ ದುಡಿಮೆಯೇ ಮೋಕ್ಷ ಅಥವಾ ಸ್ವರ್ಗ ಎಂದು ಘೋಷಿಸಿ ದುಡಿಯುವ ವರ್ಗದ ಪರ ನಿಂತರು. ಪ್ರವಾದಿವರ್ಯರು ” ನೀವು ನಿಮ್ಮ ಮತ್ತು ನಿಮ್ಮ ಕುಟುಂಬದ ಹಸಿವು ತಣಿಸಲು ಮತ್ತು ಬೇಕು ಬೇಡಗಳನ್ನು ಪೂರೈಸಲು ಪ್ರಾಮಾಣಿಕವಾಗಿ ದುಡಿಯುವ ದುಡಿಮೆಯೂ ಶ್ರೇಷ್ಠ ಆರಾಧನೆಗಳಲ್ಲೊಂದಾಗಿದೆ” ಎಂದು ಘೋಷಿಸಿದರು.

ಕಾರ್ಲ್ ಮಾರ್ಕ್ಸ್ ದುಡಿಮೆಗೂ ಒಂದು ಸಮಯದ ಮಿತಿ ಹಾಕಿದ. ಅದಕ್ಕಿಂತ ಹೆಚ್ಚು ದುಡಿಸುವುದು ಕಾರ್ಮಿಕ ನೀತಿಗೆ ವಿರುದ್ಧ ಎಂದು ಘೋಷಿಸಿದ. ಪ್ರವಾದಿವರ್ಯರು ” ಇಸ್ಲಾ‌ಮಿಕ್ ರಿಪಬ್ಲಿಕ್‌ನಲ್ಲಿ ಒಬ್ಬ ಮುಸ್ಲಿಂ ಮಾಲೀಕ ಒಬ್ಬ ಅಮುಸ್ಲಿಂ ಕಾರ್ಮಿಕನನ್ನು ನಿಗದಿತ ಸಮಯಕ್ಕಿಂತ ಒಂದಿನಿತು ಹೆಚ್ಚು ಕಾಲ ದುಡಿಸಿದರೂ ನಾನು ನಾಳೆ ಅಲ್ಲಾಹನ ನ್ಯಾಯಾಲಯದಲ್ಲಿ ನಿಗದಿತ ಕಾಲಕ್ಕಿಂತ ಹೆಚ್ಚು ದುಡಿಸಲ್ಪಟ್ಟ ಅಮುಸ್ಲಿಂ ಕಾರ್ಮಿಕನ ಪರವಾಗಿ ನಿಲ್ಲುವೆ” ಎಂದು ಸ್ಪಷ್ಟವಾಗಿ ಘೋಷಿಸಿದರು. ಇಸ್ಲಾಮಿನ ಕಾರ್ಮಿಕ ನೀತಿ ಜಗತ್ತಿನ ಯಾವುದೇ ಧರ್ಮದ ಮತ್ತು ಯಾವುದೇ ಪ್ರದೇಶದ ಕಾರ್ಮಿಕನನ್ನು ಸಮಾನವಾಗಿ ನೋಡುತ್ತದೆ ಎಂಬುವುದನ್ನು ನಾವು ಈ ಮೇಲಿನ ಪ್ರವಾದಿ ಘೋಷಣೆಯಿಂದ ಅರಿಯಲು ಸಾಧ್ಯ. ಕಾರ್ಲ್‌ಮಾರ್ಕ್ಸ್‌ನ ಕಾರ್ಮಿಕ ನ್ಯಾಯಕ್ಕೆ ಕಮ್ಯೂನಿಸಂ ಅಸ್ತಿತ್ವದಲ್ಲಿರುವೆಡೆ ಮಾತ್ರ ಬೆಲೆಯಿರುತ್ತದೆ. ಇಸ್ಲಾಂ ಲೋಕವ್ಯಾಪಿ ಧರ್ಮವಾದುದರಿಂದ ಇಸ್ಲಾಮಿನ ಕಾರ್ಮಿಕ ನೀತಿಗಾಗಲೀ, ಇತರ ಯಾವುದೇ ಬೋಧನೆಗಳಿಗಾಗಲೀ ನಿರ್ದಿಷ್ಟ ಗಡಿಗಳಿಲ್ಲ. ಅದು ಇಸ್ಲಾಮಿನಂತೆಯೇ ಸರ್ವವ್ಯಾಪಿ.

ಪ್ರವಾದಿವರ್ಯರು ದುಡಿಮೆಯ ಶ್ರೇಷ್ಟತೆಯನ್ನು ತನ್ನ ಒಂದು ವಚನದಲ್ಲಿ ಹೀಗೆ ಬಣ್ಣಿಸುತ್ತಾರೆ. “ನೀವು ಸೇವಿಸುವ ಆಹಾರಗಳಲ್ಲಿ ಅತ್ಯಂತ ಶ್ರೇಷ್ಠ ಆಹಾರ ನಿಮ್ಮ ಸ್ವಂತ ಪರಿಶ್ರಮದಿಂದ ಸಂಪಾದಿಸಿದ ಆಹಾರ”. ಇದು ಬಹಳ ಸ್ಪಷ್ಟವಾಗಿ ದುಡಿಮೆಯನ್ನು ಪ್ರೋತ್ಸಾಹಿಸುವುದಕ್ಕೆ ಒಂದು ನಿದರ್ಶನ. ಇಸ್ಲಾಂ ಅನ್ನದ ಒಂದು ಅಗುಳನ್ನೂ ವ್ಯರ್ಥಗೊಳಿಸಬಾರದು ಎಂದು ಆದೇಶಿಸುತ್ತದೆ. ಕಾರ್ಲ್ ಮಾರ್ಕ್ಸ್ ಕಾರ್ಮಿಕರಿಗಾಗಿ ನ್ಯಾಯ ಕೇಳುತ್ತಾನೆ, ಆದರೆ ದುಡಿಮೆಯಿಂದ ಸಂಪಾದಿಸಿದ ಆಹಾರದ ಶ್ರೇಷ್ಟತೆಯ ಕುರಿತು ಮಾತನಾಡುವುದಿಲ್ಲ.

ಮಾರ್ಕ್ಸ್ ಕಾರ್ಮಿಕನ ಸಾಮರ್ಥ್ಯದ ಕುರಿತಂತೆಯೂ ಮಾತನಾಡುತ್ತಾನೆ. ಅದನ್ನೇ ಪ್ರವಾದಿವರ್ಯರು ಹೀಗೆ ಪ್ರತಿಪಾದಿಸಿದ್ದರು. ” ಓರ್ವ ಕಾರ್ಮಿಕ‌ನ ಮೇಲೆ ಆತನ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊರೆಯನ್ನು ಹೇರಬಾರದು” .
ಮತ್ತೆ ಮುಂದುವರಿದು ಹೇಳುತ್ತಾರೆ ” ನಿಮ್ಮ ನೌಕರನಿಗೆ ನೀವು ವಹಿಸಿದ ಕೆಲಸವು ಆತನ ಸಾಮರ್ಥ್ಯಕ್ಕಿಂತ ಮಿಗಿಲಾದುದಾದರೆ ಆತನ ಕೆಲಸದಲ್ಲಿ ನೀವೂ ಕೈ ಜೋಡಿಸಬೇಕು. ” ಪ್ರವಾದಿವರ್ಯರ ಬೋಧನೆಯ ಪ್ರಕಾರ ನಾನು ಮಾಲೀಕನೆಂದು ನಾನು ಸುಮ್ಮನೆ ಕೂರಲಾಗದು. ಮಾರ್ಕ್ಸ್ ಮಾಲೀಕನೂ ಕಾರ್ಮಿಕನೊಂದಿಗೆ ಕೈ ಜೋಡಿಸಬೇಕೆಂದು ಪ್ರತಿಪಾದಿಸುವುದಿಲ್ಲ. ಮಾರ್ಕ್ಸ್‌ನ ವರ್ಗ ಸಂಘರ್ಷದ ವ್ಯಾಖ್ಯೆಯು ಕೆಲವೊಮ್ಮೆ ಶಕ್ತಿಕುಂದಿದಂತೆ ಕಾಣಲು ಇದೂ ಒಂದು ಕಾರಣ.

ಕಾರ್ಲ್‌ಮಾರ್ಕ್ಸ್ ಕಾರ್ಮಿಕನಿಗೂ ಮಾಲೀಕನಿಗೂ ಸಮಾನ ನ್ಯಾಯ ಬೇಕೆಂದು ಪ್ರತಿಪಾದಿಸಿದರೆ, ಪ್ರವಾದಿವರ್ಯರು “ನೀವು ಉಣ್ಣುವುದನ್ನು ಮತ್ತು ಉಡುವುದನ್ನೇ ನಿಮ್ಮ ಸೇವಕರಿಗೂ ಉಣ್ಣಿಸಿರಿ ಮತ್ತು ಉಡಿಸಿರಿ” ಎಂದು ಸ್ಪಷ್ಟ ವಾಕ್ಯಗಳಲ್ಲಿ ಆದೇಶಿಸುತ್ತಾರೆ.

ಪವಿತ್ರ ಖುರ್‌ಆನ್ ಪ್ರವಾದಿವರ್ಯರನ್ನು ರಹ್ಮತುಲ್ಲಿಲ್ ಆಲಮೀನ್ ಅರ್ಥಾತ್ ಲೋಕಾನುಗ್ರಹಿ ಎಂದು ಘೋಷಿಸಿದೆ. ಜಗತ್ತಿನ ಯಾವ ಕಾರ್ಮಿಕ ನೀತಿಯೂ ದುಡಿಯವ ಪ್ರಾಣಿಗಳ ಕುರಿತಂತೆ ಕಾಳಜಿಯುಕ್ತ ಸಿದ್ಧಾಂತ ಮಂಡಿಸಿಲ್ಲ. ಪ್ರವಾದಿವರ್ಯರಾದರೋ ಅದನ್ನೂ ಸ್ಪಷ್ಟವಾಗಿ ಬೋಧಿಸಿದ್ದಾರೆ. ” ನಿಮ್ಮ ಒಂಟೆ, ಕತ್ತೆ ಅಥವಾ ಇನ್ಯಾವುದೇ ಪ್ರಾಣಿಯ ಮೇಲೂ ಅದರ ಸಾಮಥ್ಯಕ್ಕಿಂತ ಹೆಚ್ಚಿನ ಹೊರೆ ಹೊರಿಸಬೇಡಿ”.
ಪವಿತ್ರ ಖುರ್‌ಆನ್‌ ಅದನ್ನೇ “ನೀವು ಭೂಮಿಯಲ್ಲಿರುವವರ ಮೇಲೆ ಕರುಣೆ ತೋರಿರಿ, ಆಕಾಶದಲ್ಲಿರುವವನು ನಿಮ್ಮ ಮೇಲೆ ಕರುಣೆ ತೋರುವನು”.. ಎಂದು ಸ್ಪಷ್ಟ ವಾಕ್ಯಗಳಲ್ಲಿ ಬೋಧಿಸುತ್ತದೆ.

ಪ್ರವಾದಿವರ್ಯರು ಜೀತ ಪದ್ಧತಿಯನ್ನು ನಿರುತ್ಸಾಹಗೊಳಿಸುತ್ತಾರೆ ಮತ್ತು ಜೀತ ವಿಮುಕ್ತಿಯು ಅತ್ಯಂತ ಪುಣ್ಯ ಕಾರ್ಯವೂ ಆಗಿದೆ ಎಂದು ಬೋಧಿಸಿದ್ದಾರೆ. ಯಾವುದೇ ವಿಧದ ಪಾಪ ಪರಿಹಾರದ ಸಂದರ್ಭದಲ್ಲೂ ಜೀತವಿಮುಕ್ತಿಯ ಕುರಿತಂತೆ ಪ್ರವಾದಿವರ್ಯರು ಒತ್ತಿ ಹೇಳುತ್ತಾರೆ. ಒಳಿತಿನ ಮೂಲಕ ಕೆಡುಕನ್ನು ಅಳಿಸುವ ವಿಧಾನಕ್ಕೆ ಪ್ರವಾದಿವರ್ಯರು ಅತ್ಯಂತ ಮಹತ್ವ ನೀಡಿದ್ದನ್ನು ಅವರ ಬೋಧನೆಗಳಲ್ಲಿ ಆಗಾಗ ಕಾಣಲು ಸಾಧ್ಯ.

ಎಲ್ಲಾ ಬದಲಾವಣೆಗಳನ್ನು ನಿಂತ ನಿಲುವಿನಲ್ಲೇ ತರಲಾಗದು. ಅದನ್ನು ನಿರುತ್ಸಾಹಗೊಳಿಸುತ್ತಾ ಸಮುದಾಯದ ಮನದಲ್ಲಿ ಅಚ್ಚೊತ್ತುವಂತೆ ಮಾಡಿ ಬಿಡಬೇಕು. ಪ್ರವಾದಿವರ್ಯರು ಜೀತವಿಮುಕ್ತಿ ಅತ್ಯಂತ ಪುಣ್ಯಕಾರ್ಯವಾಗಿದೆ ಎಂದು ನಿರ್ದೇಶಿಸಿದ್ದರೆ ಜೀತಪದ್ಧತಿಯನ್ನು ಒಂದು ವಿಧದ ಕೆಡುಕು ಎಂದು ನಾವು ಅರ್ಥೈಸಲು ಸಾಧ್ಯ. ಒಂದು ವೇಳೆ ಅದು ಕೆಡುಕಲ್ಲದಿದ್ದರೆ ಅವರು ಯಾಕೆ ಮತ್ತೆ ಮತ್ತೆ ಜೀತವಿಮುಕ್ತಿಗೆ ಮಹತ್ವ ಕೊಟ್ಟು ಮಾತನಾಡುತ್ತಿದ್ದರು.?
ನೀವು ಕಡ್ಡಾಯ ವೃತ ಅನುಷ್ಟಾನಿಸಲು ಸಾಧ್ಯವಾಗದಿದ್ದರೆ ಅದನ್ನು ಮತ್ತೆ ಯಾವತ್ತಾದರೂ ಸಂದಾಯ ಮಾಡಲೇಬೇಕು. ಒಂದು ವೇಳೆ ನಿಮ್ಮ ದೈಹಿಕ ಸಾಮರ್ಥ್ಯ ಅದಕ್ಕೆ ಅನುವು ಮಾಡಿಕೊಡದಿದ್ದರೆ, ನಿಮ್ಮಲ್ಲಿ ಆರ್ಥಿಕ ಚೈತನ್ಯವಿದ್ದರೆ ನೀವು ಜೀತವಿಮುಕ್ತಿ ಮಾಡಬೇಕೆಂದು ನಿರ್ದೇಶಿಸಿದ್ದರ ಹಿನ್ನೆಲೆಯಲ್ಲಿ ಜೀತವಿಮುಕ್ತಿ ಎಷ್ಟು ಪುಣ್ಯದಾಯಕ ಎಂದು ನಾವು ಅರ್ಥೈಸಬಹುದು.

ಕಾರ್ಲ್‌ಮಾರ್ಕ್ಸ್‌ನ ಕಾರ್ಮಿಕ ನೀತಿಯು ಕಾರ್ಮಿಕರ ಒಳಿತನ್ನೇ ಬಯಸುತ್ತದೆ ಎಂಬುವುದರಲ್ಲಿ ಸಂದೇಹವಿಲ್ಲ. ಆದರೆ ಅದು ಬರಬರುತ್ತಾ ಅರಾಜಕತೆಗೂ ಕಾರಣವಾಗಿದೆ ಎನ್ನುವುದಕ್ಕೆ ‍ಚರಿತ್ರೆ ಸಾಕ್ಷ್ಯವೊದಗಿಸುತ್ತದೆ. ಮಾರ್ಕ್ಸ್ ಸಿದ್ದಾಂತ ಮತ್ತು ಅಧಿಕಾರಸ್ಥ ಮಾರ್ಕ್ಸ್‌ವಾದಿಗಳ ಬೆಂಬಲವಿದೆಯೆಂದು ಕಾರ್ಮಿಕರು ಉಂಟು ಮಾಡಿದ ಕಾರಣರಹಿತ ಸಂಘರ್ಷ ಮತ್ತು ಅನ್ಯಾಯವನ್ನು ನಾವು ಭಾರತದಲ್ಲಿ ಕಮ್ಯೂನಿಸ್ಟ್‌ ಪಕ್ಷ ಅಧಿಕಾರದಲ್ಲಿದ್ದ ಕೇರಳದಲ್ಲಿ ನಾವು ಕಂಡಿದ್ದೇವೆ ಮತ್ತು ಕಾಣುತ್ತಿದ್ದೇವೆ. ರೈಲು ನಿಲ್ದಾಣದಲ್ಲಿ‌ ಕೂಲಿ ಮಾಡುವ ಸಂಘಟಿತ ಕಾರ್ಮಿಕರು ಪ್ರಯಾಣಿಕರು ಅವರ ಲಗೇಜನ್ನು ಅವರೇ ಹೊತ್ತೊಯ್ದಾಗ ಗಲಾಟೆ ಮಾಡಿ ಅವರನ್ನು ದೋಚುವುದು ನಮಗೆ ಧಾರಾಳವಾಗಿ ಕಾಣಸಿಗುತ್ತದೆ. ಅದೆಷ್ಟು ಮೇರೆ ಮೀರುತ್ತದೆಯೆಂದರೆ ಪ್ರಯಾಣಿಕ ತನ್ನ ಲಗೇಜನ್ನು ಹೊತ್ತು ಆತ ಹೋಗಲಿರುವ ವಾಹನಕ್ಕೆ ತಲುಪಿಸುವವರೆಗೆ ಸುಮ್ಮನೇ ನೋಡುತ್ತಾ ಆತನನ್ನು ಹಿಂಬಾಲಿಸಿ, ಆತ ತನ್ನ ಲಗೇಜನ್ನು ವಾಹನಕ್ಕೆ ತುಂಬಿಸಿದ ಕೂಡಲೇ ಆತನನ್ನು ತಡೆದು ನಮ್ಮ ಕೂಲಿ ಕೊಡು ಎಂದು ಗಲಾಟೆ ಮಾಡುತ್ತಾರೆ. ಅಂದರೆ ದುಡಿಯದೇ ವೇತನ ಕೇಳುತ್ತಾರೆ. ಆತ ಪ್ರತಿಯಾಗಿ ಮಾತನಾಡಿದರೆ ” ನಿಮ್ಮ ಲಗೇಜನ್ನು ನೀವೇ ಹೊತ್ತೊಯ್ದರೆ ನಾವು ಹೇಗೆ ಹೊಟ್ಟೆ ತುಂಬಿಸಬೇಕು” ಎಂದು ಪ್ರಶ್ನಿಸುತ್ತಾರೆ. ಪ್ರತಿಯೊಬ್ಬ ಪ್ರಯಾಣಿಕನೂ, ಪ್ರತಿಯೊಬ್ಬ ಮಾಲೀಕನು ಧನಿಕನಾಗಿರಬೇಕೆಂದಿಲ್ಲ. ಮಾಲೀಕನೊಬ್ಬ ಯಾವ ಕೆಲಸಕ್ಕೆ ಜನರನ್ನು ನೇಮಿಸಬೇಕು ಎನ್ನುವುದನ್ನು ಆತನೇ ನಿರ್ಧರಿಸುವ ಹಕ್ಕನ್ನು ಹೊಂದಿದ್ದಾನೆ. ಅದಕ್ಕಾಗಿ ಬಲವಂತಪಡಿಸುವುದು ಆತನ ಹಕ್ಕಿನ ಉಲ್ಲಂಘನೆಯಾಗುತ್ತದೆ. ಕಾರ್ಮಿಕರಿಗೆ ಅವರದ್ದೇ ಆದ ನ್ಯಾಯಯುತ ಹಕ್ಕುಗಳಿರುವಂತೆಯೇ, ಮಾಲೀಕನಿಗೂ ಆತನದೇ ಆದ ಹಕ್ಕುಗಳಿರುತ್ತವೆ ಎನ್ನುವುದನ್ನೂ ಕಾರ್ಮಿಕ ವರ್ಗ ಅರ್ಥೈಸಬೇಕಿದೆ.

ಮಾರ್ಕ್ಸ್ ಕಾರ್ಮಿಕರ ಹಕ್ಕುಗಳನ್ನು ಪ್ರತಿಪಾದಿಸುವ ನೆಪದಲ್ಲಿ ಮಾಲೀಕನ ಹಕ್ಕುಗಳನ್ನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳದಿರುವುದು ಮಾರ್ಕ್ಸ್‌ವಾದದ ಮಿತಿ. ಪ್ರವಾದಿವರ್ಯರು ಬಹಳ ಸ್ಪಷ್ಟವಾಗಿ “ನಿಮ್ಮ ಶ್ರಮವಿಲ್ಲದ ಒಂದೊಂದು ಪೈಸೆಯೂ ನಿಮಗೆ ನಿಷಿದ್ದ” ಎಂದು ಬೋಧಿಸಿದ್ದಾರೆ. ಕಾರ್ಮಿಕನೋರ್ವ ತಾನು ಪಡೆಯುವ ವೇತನಕ್ಕೆ ಸಾಕಾಗುವಷ್ಟು ದುಡಿಯದಿದ್ದರೆ ಅದು ಆತ ತನ್ನ ಮಾಲೀಕನಿಗೆ ಮಾಡುವ ದ್ರೋಹವಾಗುತ್ತದೆ. ಪ್ರವಾದಿವರ್ಯರು ಇದನ್ನು ಕಟುವಾಗಿ ವಿರೋಧಿಸಿದ್ದಾರೆ.

ಕಾರ್ಲ್‌ಮಾರ್ಕ್ಸ್‌ನ ಕಾರ್ಮಿಕ ನೀತಿಯನ್ನೂ, ಪ್ರವಾದಿ ಮುಹಮ್ಮದ್ (ಸ)ರ ಕಾರ್ಮಿಕ ನೀತಿಯನ್ನೂ ತುಲನಾತ್ಮಕವಾಗಿ ಅಧ್ಯಯನ ಮಾಡಿದಾಗ ಮಾರ್ಕ್ಸ್‌ನ ಸಿದ್ಧಾಂತಗಳಲ್ಲಿ ಪ್ರವಾದಿವರ್ಯರ ಬೋಧನೆಯ ಪ್ರಭಾವ ದಟ್ಟವಾಗಿರುವುದನ್ನು ನಾವು ಕಾಣಲು ಸಾಧ್ಯ. ಪ್ರವಾದಿವರ್ಯರಾದರೋ ಒಂದು ಅನಾಗರಿಕ ಸಮುದಾಯವನ್ನು ಸಂಸ್ಕರಿಸಿದವರು. ಮಾರ್ಕ್ಸ್ ಹಾಗಲ್ಲ, ಮಾರ್ಕ್ಸ್‌ನ ಕಾಲದಲ್ಲಿ ನ್ಯಾಯ, ನೀತಿ,ಹಕ್ಕು ಇತ್ಯಾದಿಗಳ ಕುರಿತಂತೆ ಅರಿತುಕೊಳ್ಳುವ ಪ್ರಜ್ಞೆ ಜನರಲ್ಲಿತ್ತು. ಮಾರ್ಕ್ಸ್‌ನದ್ದು ಸಿದ್ಧಾಂತವಾದರೆ ಪ್ರವಾದಿವರ್ಯರದ್ದು ಕಡ್ಡಾಯ ವಿಶ್ವಾಸ. ಸಿದ್ಧಾಂತ ಒಪ್ಪಲೇಬೇಕಾದುದೇನಲ್ಲ. ಧಾರ್ಮಿಕ ನೆಲೆಗಟ್ಟಿನ ಬೋಧನೆಗಳನ್ನು ಆ ಧರ್ಮವನ್ನು ಅನುಸರಿಸುವರು ಒಪ್ಪಲೇಬೇಕು…

LEAVE A REPLY

Please enter your comment!
Please enter your name here