ನಸೀಬ ಗಡಿಯಾರ್

ಮಹಿಳೆಯರಿಗೆ ಕಿವಿಮಾತು

ಪ್ರತಿ ವರ್ಷದ ಈದ್ ಆಚರಣೆಯು ಬಹಳ ಅದ್ದೂರಿಯಿಂದ ನಮ್ಮ ಮುಸ್ಲಿಂ ಬಂಧು ಮಿತ್ರರು ಸೇರಿ ಆಚರಿಸುತ್ತಿದ್ದೆವು . ಪ್ರತಿ ಬಾರಿಯ ಶಾಪಿಂಗನ್ನು ಉಪವಾಸದ ಹತ್ತನೇ ದಿನದಂದೇ ತಯಾರಿ ಮಾಡಿಕೊಳ್ಳುತ್ತಿದ್ದೆವು. ಮಕ್ಕಳಿಗೆ, ಮೊಮ್ಮಕ್ಕಳಿಗೆ, ತಂದೆ ತಾಯಿಗೆ ಹಾಗೂ ಅಜ್ಜ ಅಜ್ಜಿಗೆ, ಎಂದು ಹೊಸ ಬಟ್ಟೆಯ ತಯಾರಿ ನಡೆಯುತ್ತಿತ್ತು. ಮನೆಮಂದಿ ಎಲ್ಲರೂ ಒಗ್ಗೂಡಿ ಶಾಪಿಂಗಿಗೆ ತೆರಳುತ್ತಿದ್ದೆವು. ಸಾಕಷ್ಟು ಅತ್ಯಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದೆವು. ಹಬ್ಬವನ್ನು ಕುಟುಂಬಿಕರಲ್ಲರೂ ಸೇರಿ ಸಂಭ್ರಮದಿಂದ ಆಚರಿಸುತ್ತಿದ್ದೆವು. ಕೊರೊನ ಸೋಂಕು ವಿಶ್ವ ದಾದ್ಯಂತ ವ್ಯಾಪಿಸಿರುವ ಕಾರಣದಿಂದ ಆದೌ ಜನ ಸಂದಣಿಯ ಕಾರಣಕ್ಕೆ ಇನ್ನು ಹೆಚ್ಚಾಗಿ ವ್ಯಾಪಿಸುವುದು ಬೇಡವೆಂದು ಈ ಬಾರಿ ಶಾಪಿಂಗ್ ಬೇಡವೆಂದು ಪ್ರತಿಯೊಬ್ಬರು ಕಟ್ಟುನಿಟ್ಟಾದ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ. ಈ ತೀರ್ಮಾನದ ಹಿಂದೆ ಒಳ್ಳೆಯ ಉದ್ದೇಶವಿದೆ. ಪ್ರತಿಯೊಬ್ಬರೂ ಇದರ ಬಗ್ಗೆ ತುಂಬಾನೇ ಜಾಗರೂಕತೆಯ ಕ್ರಮವನ್ನು ಕೈಗೊಂಡಿದ್ದಾರೆ. ಪ್ರತಿದಿನವು ನಮ್ಮ ಮುಸ್ಲಿಂ ಸಹೋದರಿಯರಿಗೆ ಎಚ್ಚರಿಸುತ್ತಿದ್ದಾರೆ. ಪ್ರಿಯ ಸಹೋದರಿಯರೇ ಈ ಮುನ್ನೆಚ್ಚರಿಕೆಗೆ ಕಾರಣವು ಈಗಾಗಲೇ ನಮಗೆಲ್ಲರಿಗೂ ಮನದಟ್ಟಾಗಿದೆ. ಈದ್ ಶಾಪಿಂಗ್ ಸಂಭ್ರಮವು ಮೊದಲೆಲ್ಲಾ ಮಾಡಿದ್ದೇವೆ, ಇನ್ನು ಮುಂದಕ್ಕೂ ಮಾಡಬಹುದು ಆದರೆ ಈಗಿರುವ ಪರಿಸ್ಥಿತಿಗೆ ಶಾಪಿಂಗ್ ಸರಿಯಲ್ಲ. ಯಾಕೆ ಮಾರಕವಾದ ರೋಗದ ಎದುರು ನಾವು ಜಯಶಾಲಿಯಾಗಿ ತೋರಿಸಬಾರದು?
ಸಹೋದರಿಯರೇ.. ಶಾಪಿಂಗ್ ಎಂದು ಒಂದುಗೂಡಿ ಗುಂಪಾಗಿ ಸೇರಿ ಮಹಾಮಾರಿಯಾದ ರೋಗವನ್ನು ನಾವಾಗಿಯೇ ಕೈಬೀಸಿ ಕರೆದುಕೊಳ್ಳುವುದು ತಪ್ಪಲ್ಲವೇ. ಪ್ರತಿಯೊಬ್ಬರು ಇದರ ಹಿಂದಿನ ಉದ್ದೇಶವೇನೆಂದು ಮನದಟ್ಟು ಮಾಡಿಕೊಂಡು ನನಗೆ ಈ ಬಾರಿಯ ಶಾಪಿಂಗ್ ಬೇಡ ಎಂದು ಕಟ್ಟುನಿಟ್ಟಾದ ನಿರ್ಧಾರವನ್ನು ನಾವಾಗಿಯೇ ತೆಗೆದುಕೊಂಡಾಗ ಈ ಮಾರಕವಾದ ಸೋಂಕಿನಿಂದ ನಾವೆಲ್ಲರೂ ಮುಕ್ತಿ ಹೊಂದಬಹುದು.
ನನ್ನ ಸಹೋದರಿಯರೇ… ಈ ಸಂಭ್ರಮವನ್ನು ಮುಂದಿನ ಈದ್ ಹಬ್ಬಕ್ಕೆ ಆಚರಿಸೋಣ, ಆದರೆ ಈಗ ಜಾಗರೂಕರಾಗದೆ ಅಡ್ಡಾದಿಡ್ಡಿ ಓಡಾಡಿದರೆ ನಾವೇ ಈ ಜಗತ್ತಿಗೆ ವಿದಾಯ ಹೇಳಬೇಕಾಗುತ್ತದೆ. ನಾವೇ ಇಲ್ಲದಿದ್ದರೆ ಇನ್ನು ಮುಂದಿನ ಈದ್ ಹೇಗೆ ಆಚರಿಸಲು ಸಾಧ್ಯ?
ಅದಕ್ಕಾಗಿಯೇ ನಮ್ಮ ಜಾಗರೂಕತೆಯನ್ನು ನಾವು ಮಾಡಿಕೊಳ್ಳೋಣ. ಈ ಬಾರಿಯ ಉಪವಾಸವು ಬಹಳ ದುಃಖಕರವಾದ ನೆನಪಾಗಿ ಉಳಿಯುವುದು ಖಂಡಿತ. ಕಾರಣ ಮಸೀದಿಗೆ ತೆರಳುವ ಆ ಸುಂದರ ನೋಟವಿಲ್ಲ, ಕುಟುಂಬಸ್ಥರೆಲ್ಲರೂ ಸೇರಿ ಮಾಡುವ ಇಫ್ತಾರ್ ಕಾರ್ಯಕ್ರಮವು ಇಲ್ಲ, ಇನ್ನು ಬಹಳ ನೋವು ತಂದಂತಹ ಘಟನೆಯೆಂದರೆ ಈ ಬಾರಿಯ ತರಾವೀಹ್ ನಮಾಜ್ ಕೂಡ ಇಲ್ಲ. ಹೀಗಿರುವ ವೇಳೆ ಹೊಸ ಬಟ್ಟೆಯ ಸಂಭ್ರಮ ನಮಗೆ ಬೇಕೆ? ಮಹಿಳೆಯರೇ ಈ ಬಾರಿಯ ಈದ್ ಆಚರಣೆ ಸರಳವಾಗಿಯೇ ಆಚರಿಸೋಣ ಅದರಲ್ಲಿ ಯಾವುದೇ ರೀತಿಯ ಬೇಸರವೂ ಬೇಡ ಏಕೆಂದರೆ ನಮ್ಮ ಹಿತಕ್ಕಾಗಿ ಈ ನಿಯಮವನ್ನು ನಾವು ಕೈಗೊಳ್ಳಬೇಕಾಗುತ್ತದೆ. ಜಗತ್ತಿನಲ್ಲೆಡೆ ದಿನೇದಿನೇ ಕೊರೋನ ಸೋಂಕು ಹೆಚ್ಚುತ್ತಲೇ ಇದೆ. ಭಾರತದ ಸೋಂಕು ಪ್ರಮಾಣವು ಚೀನಾವನ್ನು ತಲುಪುವ ಹಂತಕ್ಕೆ ಬಂದುಬಿಟ್ಟಿದೆ. ಇನ್ನೂ ಕೂಡ ನಾವು ಜಾಗರೂಕರಾಗದಿದ್ದರೆ ಸಾವು ನಮ್ಮ ಮನೆಬಾಗಿಲಿಗೆ ಬಂದು ಬಿಡುತ್ತದೆ, ನಮ್ಮ ದೇಶದ ರಕ್ಷಣೆಯು ನಮ್ಮ ಕೈಯಲ್ಲೇ ಇದೆ ನಾವು ಬದಲಾಗುವುದರ ಬದಲು ನಾನು ಬದಲಾಗುವೆ ಎನ್ನುವ ನಿರ್ಧಾರವನ್ನು ಕೈಗೊಂಡರೆ ದೇಶ ತಾನಾಗಿಯೇ ಬದಲಾಗುತ್ತದೆ. ನಮ್ಮಿಂದ ಆದಷ್ಟು ಜಾಗರೂಕತೆಯನ್ನು ಕಾಪಾಡಿಕೊಂಡು ಮನೆಯಿಂದ ಹೊರಬರದೆ ಕೊರೋನ ವಿರುದ್ಧ ಹೋರಾಡೋಣ.
ಮಹಿಳೆಯರೇ ,ಈದ್ ಶಾಪಿಂಗಿನ ಹೆಸರಿನಲ್ಲಿ ಸೋಂಕಿಗೆ ಬಲಿಯಾಗದಿರಿ. ಆಚರಣೆಯನ್ನು ಸರಳಗೊಳಿಸಿ. ಪ್ರಿಯ ಸಹೋದರಿಯರೇ ನಿಮ್ಮೆಲ್ಲರಲ್ಲಿಯೂ ಒಂದು ಕಳಕಳಿಯ ವಿನಂತಿ ಈ ಬಾರಿ ಶಾಪಿಂಗ್ ಎಂಬ ಹೆಸರಿನಲ್ಲಿ ಗುಂಪಾಗಿ ಸೇರುವುದು .ಎಲ್ಲಾ ಎಚ್ಚರಿಕೆಯ ಮೀರಿ, ಏನು ಆಗದು ಎಂಬ ದುರಹಂಕಾರದಿಂದ ಶಾಪಿಂಗ್ ಎಂದು ಓಡಾಡಬೇಡಿ….
ಸರ್ವಶಕ್ತನಾದ ಅಲ್ಲಾಹನಲ್ಲಿ ಈ ಮಾರಕವಾದ ರೋಗದಿಂದ ಮುಕ್ತಿಗೊಳ್ಳಲು ಪ್ರಾರ್ಥಿಸೋಣ. ನಮ್ಮಲ್ಲರನ್ನು ಸರ್ವಶಕ್ತನಾದ ಅಲ್ಲಾಹನು ಕಾಪಾಡಲಿ

LEAVE A REPLY

Please enter your comment!
Please enter your name here