ಅನೇಕ ದಶಮಾನಗಳಿಂದ ಭಾರತೀಯರಲ್ಲಿ ರಾಜಕೀಯವಾಗಿ ಪದೇ ಪದೇ ಚರ್ಚೆ, ವಾದ-ಪ್ರತಿವಾದ, ಮಾಧ್ಯಮ ಚರ್ಚೆ,ಗಲಭೆ ಹಿಂಸೆಗಳಿಗೆ ಕಾರಣವಾಗಿದ್ದ ಬಾಬರಿ ಆಸ್ತಿ ಹಕ್ಕಿನ ತೀರ್ಪು ಈಗ ಪ್ರಕಟವಾಗಿದೆ. ಈ ತೀರ್ಪು ಬರುತ್ತದೆ ಎಂದು ತಿಳಿಯುತ್ತಿರುವಂತೆಯೇ ದೇಶದ ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು, ಸಂಘಟನೆಗಳು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದು ತಿಳಿದೇ ಇದೆ. ಅದಲ್ಲದೆ ಪೊಲೀಸ್ ಇಲಾಖೆಯು ಕೂಡ ಮುಂಜಾಗ್ರಾತ ಕ್ರಮವಾಗಿ ಹಲವೆಡೆ ಸೆಕ್ಷನ್ 144 ಮತ್ತು ಸಾಮಾಜಿಕ ಜಾಲತಾಣದ ಮೇಲೆ ತೀವ್ರ ನಿಗಾ ವಹಿಸಿತ್ತು. ಜೊತೆಗೆ ರಾಜ್ಯದ ಎಲ್ಲ ಶಾಲಾ-ಕಾಲೇಜಿಗೆ ರಜೆ ಘೋಷಿಸಿ ತೀರ್ಪಿನ ವಾತಾವರಣವನ್ನು ಸೃಷ್ಟಿ ಮಾಡಲಾಗಿತ್ತು.

ಹಿನ್ನಲೆ:
1528 ರಲ್ಲಿ ಮೀರ್ ಬಾಖಿಯು ಬಾಬರಿ ಮಸೀದಿಯನ್ನು ಅಯೋಧ್ಯೆಯಲ್ಲಿ ಕಟ್ಟಿಸಿದ್ದನು. 1850 ರಲ್ಲಿ ಪ್ರಪ್ರಥಮವಾಗಿ ವಿವಾದವೊಂದು ಭುಗಿಲೆದ್ದಿತು. ಈ ಪ್ರಕ್ರಿಯೆಯಲ್ಲಿ ಹಿಂದುಗಳ ಗುಂಪೊಂದು ಮಸೀದಿಯ ಮೇಲೆ ದಾಳಿ ಮಾಡಿತು ಮತ್ತು ಮಸೀದಿ ಇರುವ ಜಾಗವು ತಮಗೆ ಮಂದಿರ ನಿರ್ಮಾಣಕ್ಕಾಗಿ ಬಿಟ್ಟು ಕೊಡಬೇಕೆಂದು ಬೇಡಿಕೆ ಇಟ್ಟಿತು. ಆದರೆ ಆ ಬೇಡಿಕೆಯನ್ನು ವಸಾಹತು ಸರಕಾರ ನಿರಾಕರಿಸಿತು. ನಂತರ 1949 ರ ಡಿಸೆಂಬರ್ 22 ರಲ್ಲಿ ರಾಮ ಮತ್ತು ಸೀತೆಯ ಮೂರ್ತಿಯನ್ನು ಮಸೀದಿಯೊಳಗಿಟ್ಟು ಅದು ಅಲ್ಲಿ ಉದ್ಭವವಾಗಿದೆಯೆಂದು ಜನರಿಗೆ ನಂಬಿಸಲಾಯಿತು. ಆಗಿನ ಪ್ರಧಾನಿ ಪಂಡಿತ್ ನೆಹರುರವರು ಅಕ್ರಮವಾಗಿ ಇಡಲಾಗಿದ್ದ ಮೂರ್ತಿಯನ್ನು ತೆರವುಗೊಳಿಸಲು ಆದೇಶಿಸುತ್ತಾರೆ. ಆದರೆ ಸ್ಥಳೀಯ ಸಂಸದರಾಗಿದ್ದ ಕೆ.ಕೆ.ಕೆ ನಾಯರ್ ಕೋಮು ಗಲಭೆ ನಡೆಯಬಹುದೆಂಬ ಕಾರಣ ನೀಡಿ ಆ ಆದೇಶವನ್ನು ನಿರಾಕರಿಸುತ್ತಾರೆ. ನಂತರ ಪೊಲೀಸ್ ಇಲಾಖೆ ಹಿಂದು ಮತ್ತು ಮುಸ್ಲಿಮರಿಗೆ ಒಳಗೆ ಪ್ರವೇಶಿಸದಂತೆ ವಿವಾದಿತ ಸ್ಥಳದ ಬಾಗಿಲು ಮುಚ್ಚುತ್ತದೆ. ಈ ಸಂದರ್ಭದಲ್ಲಿ ಸುನ್ನಿ ವಕ್ಫ್ ಬೋರ್ಡ್ ಮತ್ತು ಎ.ಬಿ.ಆರ್.ಎಮ್ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡುತ್ತದೆ. ಆ ಸ್ಥಳವನ್ನು ವಿವಾದಿತ ಸ್ಥಳಯೆಂದು ಘೋಷಿಸಿ ಮುಚ್ಚಿ ಬಿಡಲಾಗುತ್ತದೆ.

ಈ ವಿವಾದವು ಮುಂದುವರಿದು 1980ರಲ್ಲಿ ವಿಶ್ವ ಹಿಂದು ಪರಿಷತ್ ಬಾಬರಿ ಮಸೀದಿಯ ಸ್ಥಳವನ್ನು ತಮ್ಮದೆಂದು ಒಂದು ಆಂದೋಲನವನ್ನು ಹುಟ್ಟಿ ಹಾಕಿತು. ನಂತರದಲ್ಲಿ ಜನ ಸಂಘದ ಮೂಲಕ ಅದು ರಾಜಕೀಯ ಆಂದೋಲನ ವಾಗಿ ಪರಿವರ್ತನೆಗೊಂಡಿತು. 1992 ಡಿಸೆಂಬರ್ ರಲ್ಲಿ ಬಿಜೆಪಿ ನಾಯಕ ಎಲ್.ಕೆ ಆಡ್ವಾಣಿ ನೇತೃತ್ವದಲ್ಲಿ ಸುಮಾರು 1,50000 ವಿ.ಎಚ್.ಪಿ, ಬಿಜೆಪಿ ಮತ್ತು ಬಜರಂಗದಳದ ಕರಸೇವಕರನ್ನು ವಿವಾದಿತ ಸ್ಥಳಕೆ ಅಕ್ರಮವಾಗಿ ಪ್ರವೇಶಿಸಿ ಬಾಬರಿ ಮಸೀದಿಯ ಗುಂಬಜ್ ಮೇಲೆ ಹತ್ತಿ ಧ್ವಂಸಗೊಳಿಸಲಾಗುತ್ತದೆ. ಈ ಗಲಭೆಯ ಭಾಗವಾಗಿ ಸುಮಾರು 2000 ಕ್ಕಿಂತ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಗಲಭೆಯ ಭಾಗವಾಗಿ ದೇಶದ ಅನೇಕ ಭಾಗಗಳಲ್ಲಿ ಗಲಭೆಗಳು ಸಂಭವಿಸುತ್ತದೆ.

ನ್ಯಾಯಾಲಯದಲ್ಲಿ ಈ ಬಗ್ಗೆ ದಾವೆಗಳು ನಡೆದು 2010 ಸೆಪ್ಟಂಬರ್ 30 ರಂದು ಅಲಹಬಾದ್ ಹೈಕೋರ್ಟ್ ವಿವಾದಿತ ಸ್ಥಳವನ್ನು ಮೂರು ಭಾಗವಾಗಿ ಹಂಚುವಂತೆ ತೀರ್ಮಾನ ನೀಡುತ್ತದೆ. ಹಿಂದೂ ಮಹಾಸಭಾ ಪ್ರತಿನಿಧಿಸುತ್ತಿದ್ದ ರಾಮಲಲ್ಲಾಗೆ 1/3 ಭಾಗ, ಸುನ್ನಿ ವಕ್ಫ್ ಬೋರ್ಡ್ ಗೆ 1/3 ಭಾಗ, ನಿರ್ಮೋಹಿ ಅಖಾಡಕ್ಕೆ 1/3 ಭಾಗ ಎಂದು ವಿಧಿಸಲಾಯಿತು. ಈ ತೀರ್ಪನ್ನು ಪ್ರಶ್ನಿಸಿ ಅಖಿಲಾ ಭಾರತ ಹಿಂದೂ ಮಹಾ ಸಭಾ ಮತ್ತು ಸುನ್ನಿ ವಕ್ಫ್ ಬೋರ್ಡ್ ಸುಪ್ರೀಮ್ ಕೋರ್ಟಿನಲ್ಲಿ ಡಿಸೆಂಬರ್ 2010 ರಲ್ಲಿ ಮೇಲ್ಮನವಿ ಸಲ್ಲಿಸಿತು. ಸುಪ್ರೀಮ್ ಕೋರ್ಟ್ ಅರ್ಜಿ ಸ್ವೀಕರಿಸಿ ವಿವಾದಿತ ಸ್ಥಳದ ತೀರ್ಪನ್ನು ನಿಲ್ಲಿಸಿ ಯಾಥಾಸ್ಥಿತಿ ಕಾಪಾಡುವಂತೆ ಸೂಚನೆ ನೀಡುತ್ತದೆ. ನಂತರ 2019 ಆಗಸ್ಟ್ 6 ರಂದು ಸರ್ವೋಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ರಂಜನ್ ಗೋಗಯ್ ರವರ ನೇತೃತ್ವದಲ್ಲಿ ಐದು ಜನರ ನ್ಯಾಯಪೀಠ ಅಂತಿಮ ವಿಚಾರಣೆಯನ್ನು ಕೈಗೊಂಡಿತು. ನಿರಂತರ 40 ದಿನದ ವಿಚಾರಣೆ ನಡೆದು ಅಕ್ಟೋಬರ್ 16,2019 ರಂದು ಅಂತಿಮ ತೀರ್ಪು ಕಾಯ್ದಿರಿಸಿ ಇಂದು (ನವೆಂಬರ್9,2019) ತೀರ್ಪನ್ನು ಪ್ರಕಟಿಸಿತು.

ತೀರ್ಪಿನ ಮುಖ್ಯಾಂಶಗಳು:

ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತದ ಪೀಠದಲ್ಲಿ ನ್ಯಾಮೂರ್ತಿಗಳಾದ ಎಸ್ ಎ ಬೊಬ್ಡೆ, ಡಾ, ಚಂದ್ರಚೂಡ್, ಅಶೋಕ್ ಭೂಷಣ್, ಎಸ್.ಎ ನಜೀರ್ ಅವರನ್ನು ಒಳಗೊಂಡಿತು. ಈ ತೀರ್ಪು ಸರ್ವಾನುಮತದಿಂದ ಪ್ರಕಟಿಸಲಾಯಿತು.

1. ಬಾಬರಿ ಮಸೀದಿ ಸ್ಥಳಕ್ಕಾಗಿ ದಾವೆ ಹೂಡಿದ್ದ ಶಿಯಾ ವಕ್ಫ್ ಬೋರ್ಡ್ ಮತ್ತು ನಿರ್ಮೊಹಿ ಅಖಾಡದ ಅರ್ಜಿಯನ್ನು ವಜಾಗೊಳಿಸಿ ರಾಮಲಲ್ಲಾ ಮತ್ತು ಸುನ್ನಿ ವಕ್ಫ್ ಬೋರ್ಡನ್ನು ಮುಖ್ಯ ಅರ್ಜಿದಾರರೆಂದು ಪರಿಗಣಿಸಿತು.
2. ಪುರಾತತ್ವ ಇಲಾಖೆಯ ಉತ್ಖನನದ ಪುರಾವೆಗಳ ಆಧಾರದ ಮೇಲೆ ಮಸೀದಿಯ ಅಡಿಯಲ್ಲಿ ಒಂದು ರಚನೆಯಿತ್ತು ಅದು ಇಸ್ಲಾಮಿಕ್ ಶೈಲಿಯನ್ನು ಹೋಲುದಿಲ್ಲವೆಂದು ಕೋರ್ಟ್ ಹೇಳಿತು.
3. ಹಿಂದುಗಳು ಅಯೋಧ್ಯೆಯನ್ನು ರಾಮ ಜನ್ಮಭೂಮಿಯೆಂದು ಒಪ್ಪಿಕೊಂಡಿರುವುದರಲ್ಲಿ ಯಾವುದೇ ವಿವಾದ ಇಲ್ಲ ಎಂದು ನ್ಯಾಯಲಯ ಹೇಳಿತು.
4. ಸರಕಾರದ ನಿಗಾದಲ್ಲಿ ಮೂರು ತಿಂಗಳಿನ ಒಳಗಾಗಿ ಟ್ರಸ್ಟ್ ವೊಂದನ್ನು ರಚಿಸಿ ವಿವಾದಿತ ಜಾಗದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಹೇಳಿತು.
5. ರಾಮಲಲ್ಲಾನನ್ನು ವಿವಾದಿತ ಜಾಗದ ಮಾಲಿಕನೆಂದು ಘೋಷಿಸಿ ರಾಮ ಜನ್ಮ ಭೂಮಿ ನ್ಯಾಸಕ್ಕೆ 2.77 ಎಕರೆ ವಿವಾದಿತ ಜಮೀನನ್ನು ವಹಿಸಿಕೊಡಲಾಯಿತು. ಸರಕಾರ ರಚಿಸುವ ಟ್ರಸ್ಟ್ ನಲ್ಲಿ ನಿರ್ಮೋಹಿ ಅಖಾಡಕ್ಕೆ ಮಾನ್ಯತೆ ನೀಡಬಹುದೆಂದು ತಿಳಿಸಿತು.
6. ತೀರ್ಪಿನಲ್ಲಿ ಮಸೀದಿಯೊಳಗೆ ಮೂರ್ತಿ ಇರಿಸಿದ್ದು ಮತ್ತು ಮಸೀದಿಯನ್ನು ಧ್ವಂಸಗೊಳಿಸಿದ್ದು ಕಾನೂನು ಬಾಹಿರವೆಂದು ತಿಳಿಸಿತು.
7. ಸುನ್ನಿ ವಕ್ಫ್ ಬೋರ್ಡ್ ಗೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಪರ್ಯಾಯವಾಗಿ ಸೂಕ್ತ 5 ಎಕರೆ ಸ್ಥಳವನ್ನು ನೀಡಲು ಸರಕಾರಕ್ಕೆ ಆದೇಶಿಸಿತು.

ಉಪಸಂಹಾರ:

ಇದೊಂದು ಐತಿಹಾಸಿಕ ತೀರ್ಪು. ಏಕೆಂದರೆ ನ್ಯಾಯಾಲಯವು ಪುರಾವೆಗಳಿಗಿಂತ ಹೆಚ್ಚಾಗಿ ನಂಬಿಕೆಯನ್ನು ಆಧಾರವಾಗಿ ನೀಡಿ ತೀರ್ಪು ಪ್ರಕಟಿಸಿತು. ತೀರ್ಪಿನ ಆರಂಭದಲ್ಲಿ ಪುರಾತತ್ವದ ಉತ್ಖನನವನ್ನು ಮತ್ತು ಇತರ ಸಾಕ್ಷಿಗಳ ಆಧಾರದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆಯೆಂದು ಹೇಳಿ ಕೊನೆಯಲ್ಲಿ ಮಸೀದಿ , ಧ್ವಂಸ ಮಸೀದಿಯೊಳಗೆ ಮೂರ್ತಿ ಇಟ್ಟದ್ದು ಕಾನೂನು ಬಾಹಿರವಾಗಿ ಇದ್ದರು ಹಿಂದುಗಳು ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದಾನೆಂದು ನಂಬುದರಿಂದ ಅವರಿಗೆ ವಿವಾದಿತ ಸ್ಥಳವನ್ನು ನೀಡಬೇಕೆಂದು ಹೇಳಿರುವುದು ಪ್ರಶ್ನಾರ್ಹ. ರಾಮಲಲ್ಲಾವು ದಾವೆಯಲ್ಲಿ ವಿವಾದಿತ ಸ್ಥಳವನ್ನು ತಮಗೆ ನೀಡಬೇಕೆಂದು ಕೇಳಿರುವುದಕ್ಕೆ, ನ್ಯಾಯಾಲಯ ಆ ಜಾಗದಲ್ಲಿ ರಾಮ ಮಂದಿರವನ್ನು ಸರಕಾರದ ನಿಗಾದಲ್ಲಿ ನಿರ್ಮಿಸಬೇಕೆಂಬ ತೀರ್ಪನ್ನು ನೀಡಿರುವುದು ಪ್ರಶ್ನೆಗಳಿಗೆ ಎಡೆ ಮಾಡುತ್ತದೆ. ಇದು ಬಹುಸಂಖ್ಯಾತರ ಧ್ವನಿಯ ಆಧಾರವಾಗಿ ಅಲ್ಪ ಸಂಖ್ಯಾತರ ನ್ಯಾಯವನ್ನು ಕಡೆಗಣಿಸಲಾಗಿದೆಯೇ ಎಂಬ ಪ್ರಶ್ನೆ ಹುಟ್ಟು ಹಾಕುವುದು ಸಹಜ. ಬಾಬರಿ ಮಸೀದಿಯ ಸ್ಥಳದಲ್ಲಿ ಒಂದು ರಚನೆ ಇತ್ತು ಆದರೆ ಅದು ದೇವಸ್ಥಾನವಾಗಿತ್ತೆಂದು ಸಾಬೀತು ಪಡಿಸಲಾಗದೆ ಇರುವಾಗ ವಿವಾದಿತ ಸ್ಥಳವನ್ನು ಸಂಪೂರ್ಣವಾಗಿ ನಂಬಿಕೆ ಆಧಾರದಲ್ಲಿ ಕೊಟ್ಟಿರುವುದು ಪ್ರಶ್ನೆಗೆ ಎಡೆ ಮಾಡುತ್ತದೆ.

LEAVE A REPLY

Please enter your comment!
Please enter your name here