ಕಥೆ : ಶ್ರೇಯ ಕುಂತೂರ್

ಅದೊಂದು ಮಳೆಗಾಲ, ಆರ್ಭಟಿಸುತ್ತಿರುವ ಗುಡುಗು;
ಧಳಧಳಿಸುತ್ತಿರುವ ಮಿಂಚು; ಆಕಾಶದಿಂದ ಭೂಮಿಯನ್ನು
ಬರಸೆಳೆದು ಅಪ್ಪಿಕೊಳ್ಳಲು ಹವಣಿಸುವಂತೆ ತೋರುವ ಮಳೆ ಕ್ಷಣ
ನೇರದ ಚಿತ್ರಣ. ನಂತರ, ವರುಣನ ನರ್ತನದಿಂದ ಮೊದಲು ತತ್ತರಿಸಿದಂತೆ
ಕಂಡ ಪ್ರಕೃತಿಯು ಈಗ ನಿಧಾನವಾಗಿ ಆ ತಾಳಕ್ಕೆ ಮೈಮರೆತಂತೆ ಕಂಡಿತು. ಸಿಡಿಲಿನ ಆರ್ಭಟವು ಕಡಿಮೆಯಾಯಿತು. ಮಳೆ ಹನಿಗಳು ಶಾಂತವಾಗಿ ಪ್ರಕೃತಿಯ ಮೈದಡವುತ್ತಿತ್ತು. ಇವೆಲ್ಲದಕ್ಕೂ ಸಾಕ್ಷಿಯಾಗಿ
ಅಲ್ಲೊಂದು ಮನೆಯ ಕೋಣೆಯಲ್ಲಿ ಅವಳು’ ಕುಳಿತಿದ್ದಳು. ಕಿಟಕಿಯ ಬಳಿ ಮೂಕಳಾಗಿ ಕುಳಿತು ವರುಣನ ಜಲಧಾರೆಗೆ ಪುಟ್ಟ ಕೊಡುಗೆಯಾಗಿ ಕಣ್ಣೀರನ್ನು ಸುರಿಸುತ್ತಿದ್ದಳು. ಸುತ್ತಲೂ ಎಲ್ಲರೂ ಇದ್ದು ಸಹ ಅವಳು ಒಬ್ಬಂಟಿಗಳಾಗಿದ್ದಳು. ಅವಳ ಕಣ್ಣೀರು ಯಾಕಾಗಿರಬಹುದು? ಅವಳ ಜೀವನದಲ್ಲೂ ಏನಾದರೂ ಕಹಿ ಘಟನೆಗಳು ಇದ್ದಿರಬಹುದಲ್ಲವೇ? ಹೌದು. ಮೊದಲು ತನ್ನೆಲ್ಲಾ ಕ್ರೌರ್ಯವನ್ನು ತೋರಿ ನಂತರ ಇದ್ದಕ್ಕಿದ್ದಂತೆ ಶಾಂತವಾದ ಮಳೆಯು ಆಕೆಯ ನೆನಪನ್ನು ಬಿಚ್ಚಿಟ್ಟಿತ್ತು. ಹಿಂದೆ ಇಂತಹುದೇ ಒಂದು ದಿನ ಆಕೆಯು ಯಾರದ್ದೋ ಅಟ್ಟಹಾಸಕ್ಕೆ ಕ್ರೌರ್ಯಕ್ಕೆ ಬಲಿಯಾಗಿದ್ದಳು. ಯಾವುದೋ ಮನುಷ್ಯಮೃಗಗಳ ಕಾಮದಾಸೆಗೆ ಅವಳು ಬಲಿಯಾಗಿದ್ದಳು. ಅವಳೆಂಬ ಅರಳಿದ ಹೂವು ಅಂದೇ ಮುದುಡಿತ್ತು. ಆದರೆ ಯಾವುದೋ ಜನ್ಮದ ಪುಣ್ಯವೋ ಪಾಪವೋ ಎಂದು ತಿಳಿಯದಂತೆ ಅವಳು ಬದುಕುಳಿದಿದ್ದಳು. ಅಂದಿನಿಂದ ಅವಳ ಬದುಕಿನಲ್ಲಿಯೂ ಮಳೆಗಾಲದ ಚಿತ್ರಣವಾಗಿತ್ತು. ಅವಳ ಮನೆ ಮಂದಿ ಬಚ್ಚಿಡಲು ತೀರ್ಮಾನಿಸಿದ ಅತ್ಯಾಚಾರ’ದ ರಹಸ್ಯವನ್ನು ಸ್ವಲ್ಪದಿನಗಳ ಬಳಿಕ ತಾನೇ ಬಿಚ್ಚಿಟ್ಟಳು; ನ್ಯಾಯದ ನಿರೀಕ್ಷೆಯಲ್ಲಿ. ಅಂದು ಎಲ್ಲರೂ ಪ್ರತಿಭಟಿಸಿದರು; ಗುಡುಗಿನಂತೆ ಆರ್ಭಟಿಸಿದರು; ಮಾಧ್ಯಮಗಳು ಮಿಂಚಿನಂತೆ ವಾಕ್ ಪ್ರಹಾರವನ್ನು ನಡೆಸಿದವು; ಕೆಲವರು ಆಕೆ ಧೈರ್ಯವನ್ನು ಶ್ಲಾಘಿಸಿದರು; ಇನ್ನೂ ಕೆಲವರು ಆಕೆಯ ನಡೆ ನುಡಿಯನ್ನೂ, ಉಡುಪನ್ನೂ ದೂಷಿಸಿದರು. ಇದೆಲ್ಲವನ್ನೂ ಸಹಿಸಿ ಮುನ್ನಡೆದ ಅವಳು ಕೊನೆಗೆ ಉಳಿದಂತೆ ನಿರಾಸೆಯನ್ನುಂಡಳು. ಒಂದೆರಡು ವಾರ ಆಕೆಗೆ ಪರವಿರೋಧವಾಗಿ ಎದ್ದ ಸ್ವರಗಳೆಲ್ಲವೂ ಕ್ಷೀಣಿಸುತ್ತಾ ಸ್ತಬ್ಧವಾದವು. ಇತ್ಯರ್ಥವಾಗದೆ ಮೂಲೆ ಸೇರಿದ ಕೇಸ್‍ಫೈಲುಗಳ ಜೊತೆಯಲ್ಲಿ ಅವಳ ಫೈಲೂ ಸಾಕ್ಷ್ಯಾಧಾರವಿಲ್ಲದೆ ನ್ಯಾಯವಂಚಿತವಾಗಿ ಮೂಲೆ ಸೇರಿದೆ. ಅಂದೂ ಆಕೆ ಇವೆಲ್ಲದಕ್ಕೂ ಮೂಕ ಪ್ರೇಕ್ಷಕಳಾಗಿದ್ದಳು. ಎಲ್ಲವೂ ಸಹಜವಾಯಿತು. ಎಲ್ಲರೂ ಶಾಂತರಾದರು. ಸಮಾಜದಲ್ಲಿನ ಕ್ರೌರ್ಯ
ನರ್ತನಕ್ಕೆ ಒಗ್ಗಿಕೊಂಡಂತೆ ಎಲ್ಲರೂ ಸ್ವಕಾರ್ಯಗಳಲ್ಲೇ ನಿರತರಾದರು.

ಆದರೆ ಅವಳು’ … ದುಃಖದ ಅಲೆಯನ್ನು ತನ್ನೆದೆಯಲ್ಲಿಯೇ ಅದುಮಿಟ್ಟುಕೊಂಡು ನೊಂದು ನೊಂದು ನೀರಾದಳು. ಒಬ್ಬಂಟಿಗಳಾಗಿದ್ದ ಅವಳಲ್ಲಿ ಇದ್ದಕ್ಕಿದ್ದಂತೆ ಯಾವುದೋ ಅಮಾನುಷ ಶಕ್ತಿಸಂಚಾರವಾಯಿತು. ಮುದುಡಿ ಹೋಗಿದ್ದ ತನ್ನ ಮನಸ್ಸಿಗೆ ತಾನೇ ನೀರೆರೆದು ಸದೃಢಳಾದಳು. ಅತ್ಯಾಚಾರಕ್ಕೊಳಗಾದವರ ಪಟ್ಟಿಯಲ್ಲಿ ಎಳೆಯ ಮಗುವನ್ನು ಹಣ್ಣು ಮುದುಕಿಯನ್ನು ನೋಡಿದಾಗ, ತನ್ನ ಸ್ಥಿತಿಗೆ ತನ್ನ ಮುಖವೋ, ಧರಿಸಿದ ಉಡುಪೂ, ನಡೆದ ರೀತಿಯೋ ಕಾರಣವಲ್ಲವೆಂದು ಬದಲಾಗಿ ಈ ಸಮಾಜವು ಪುರುಷರನ್ನು ಬೆಳೆಸಿದ ರೀತಿಯೇ ಕಾರಣವೆಂದೂ ಅರಿತುಕೊಂಡಳು. ಆದ್ದರಿಂದಲೇ ಆತ್ಮಹತ್ಯೆಯ ಆಲೋಚನೆ ಮಾಡಿದ್ದ ಅವಳು. ತಾನೂ ತನಗೆ ನಷ್ಟವಾಗಲು ಏನೂ ಇಲ್ಲ; ಬದಲಾಗಿ ಗಳಿಸಬಹುದಾದುದು ಏನೋ ಇದೆ ಎಂದು ತನ್ನನ್ನು ಹೇಳಿ ಕಲಿಸಿದಾಗ ಅ ವ ಳಲ್ಲಿ ಧೈರ್ಯದ ಹೊಸ ನೆರಳೊಂದು ಆವರಿಸಿತು. ಹೊಸ ಜೀವನದ ಆಸೆ ಚಿಗುರೊಡೆಯಿತು. ಅವಳು’ ಈಗ ಸ್ವಾವಲಂಬಿ; ಧೈರ್ಯಶಾಲಿ … ಆದರೂ ಆ ವರುಣನ ನರ್ತನವೂ ಶಾಂತತೆಯೂ ಅವಳ ಜೀವನದ ಮಳೆಗಾಲವನ್ನು ನೆನಪಿಸುತ್ತಿತ್ತು; ಕಣ್ಣಂಚನ್ನು ನೆನೆಯಿಸುತ್ತಿತ್ತು; ನಂತರ ಮತ್ತಷ್ಟು ಧೈರ್ಯವನ್ನು ಉತ್ಸಾಹವನ್ನು ತುಂಬುತ್ತಿತ್ತು.
ಅವಳು ಬಲಿಪಶುವಲ್ಲ ; ಅವಳು ಬದುಕುಳಿದವಳು

1 COMMENT

Leave a Reply to Mahammad Ismail Cancel reply

Please enter your comment!
Please enter your name here