ಕಥೆ

ಹಂಝ ಮಲಾರ್

ಅದೆಷ್ಟೋ ವರ್ಷದ ನಂತರ ನಾನು ನನ್ನೂರಿಗೆ ಕಾಲಿಟ್ಟಾಗ ಅಲ್ಲಿನ ಬದಲಾವಣೆಗಳನ್ನು ಕಂಡು ನನ್ನ ಕಣ್ಣುಗಳು ನಂಬದಾದವು. ನಾನು ನನ್ನೂರಿಗೆ ಬಂದಿದ್ದೇನೋ ಅಥವಾ ದಾರಿ ತಪ್ಪಿ ಬೇರೆ ಊರಿಗೆ ಕಾಲಿಟ್ಟಿದ್ದೇನೋ ಎಂಬ ಸಂಶಯ ಬರುವಷ್ಟರ ಮಟ್ಟಿಗೆ ನನ್ನೂರು ಬದಲಾಗಿತ್ತು.
ಸುತ್ತಲೂ ಕಣ್ಣಾಡಿಸಿದೆ. ಬಹುತೇಕ ಮುಖಗಳು ಅಪರಿಚಿತವಾಗಿತ್ತು. ರಿಕ್ಷಾ ಚಾಲಕರಂತೂ ಬಕಪಕ್ಷಿಯಂತೆ ನನ್ನನ್ನು ನೋಡುತ್ತಿದ್ದರು. ನನ್ನ ಬಳಿ ಹೇಳಿಕೊಳ್ಳುವಂತಹ ಲಗೇಜ್ ಇರಲಿಲ್ಲ. ಹೆಚ್ಚೆಂದರೆ ಒಂದು ಸೂಟ್‍ಕೇಸ್ ಇತ್ತು. ತುಸು ಭಾರವಾಗಿದ್ದರೂ ಕೈಗೆತ್ತಿಕೊಂಡು ನಡೆದೇನೋ ಎಂಬ ಹುಂಬು ವಿಶ್ವಾಸವಿತ್ತು.
ನಮ್ಮ ಮನೆ ಬಸ್ ತಂಗುದಾಣದಿಂದ ಒಂದುವರೆ ಕಿ.ಮೀ. ದೂರದಲ್ಲಿದೆ. ಗುಡ್ಡ ಹತ್ತಿಳಿಯುವ ಒಳ ದಾರಿಯೂ ಇದೆ. ಬಾಲ್ಯದಲ್ಲಿ ನಾನು ಈ ಗುಡ್ಡವನ್ನು ಹತ್ತಿಳಿದದ್ದಕ್ಕೆ ಲೆಕ್ಕವಿಲ್ಲ. ನನ್ನ ಬಾಲ್ಯದ ದಿನದಲ್ಲಿ ಮಂಗಳೂರಿನಿಂದ ಇನೋಳಿ ರೂಟಿಗೆ ಕೇವಲ ಎರಡೇ ಎರಡು ಬಸ್ಸಿತ್ತು. ಇನೋಳಿ ಪದವಿನಿಂದ ಬಸ್ ಹೊರಡಲು ಐದು ನಿಮಿಷವಿರುವಾಗ ಚಾಲಕ ದೊಡ್ಡದೊಂದು ಹಾರ್ನ್ ಹಾಕುತ್ತಿದ್ದ. ಆಗ ಹೀಗಿನಂತೆ ಕಾಂಕ್ರೀಟ್ ಕಟ್ಟಡಗಳಿರಲಿಲ್ಲ. ಹಾಗಾಗಿ ಹಾರ್ನ್ ಒಂದೆರೆಡು ಕಿ.ಮೀ. ದೂರಕ್ಕೆ ಕೇಳಿಸುತ್ತಿತ್ತು. ಹಾಗೇ ಬಸ್ಸಿನಲ್ಲಿ ಪ್ರಯಾಣಿಸುವವರು ಲಗುಬಗನೆ ಮನೆಯಿಂದ ಹೊರಟು ಒಳದಾರಿಯಾಗಿ ನುಸುಳಿಕೊಂಡು ದೊಡ್ಡ ದೊಡ್ಡ ಗಾತ್ರದ ಜಲ್ಲಿ ತುಂಬಿದ ರಸ್ತೆಯ ಬಳಿ ಬಂದು ಕೈ ಅಡ್ಡ ತೋರಿಸುತ್ತಿದ್ದರು. ಆವಾಗ ನಿರ್ದಿಷ್ಟ ಪ್ರಯಾಣಿಕರ ತಂಗುದಾಣ ಅಥವಾ ಬಸ್ ನಿಲುಗಡೆ ಅಂತೇನೂ ಇರಲಿಲ್ಲ. ಮನೆ, ಅಂಗಡಿ, ಬಾಗಿಲು… ಹೀಗೆ ಎಲ್ಲೆಂದರಲ್ಲಿ ಪ್ರಯಾಣಿಕರು ನಿಲ್ಲಿಸಿ ಎಂದು ಹೇಳಿದ ಕಡೆ ಚಾಲಕ ಬಸ್ ನಿಲ್ಲಿಸುತ್ತಿದ್ದ. ಕೈ ಅಡ್ಡ ತೋರಿಸಿದೊಡನೆ ಹತ್ತಿಸಿಕೊಳ್ಳುತ್ತಿದ್ದ.
ಸುತ್ತಮುತ್ತ ಗುಡ್ಡ, ನಡುವೆ ಗುಹೆಯಂತಿದ್ದ ಅರಸ್ತಾನದ ಜನರು ಬಸ್ ಹಿಡಿಯಬೇಕಾದರೆ “ಪದವು” ಹತ್ತಬೇಕು. ಅಲ್ಲಿ ಗ್ರಾಮ ಪಂಚಾಯತ್ ಕಟ್ಟಡದ ಪಕ್ಕದಲ್ಲಿ ಪಂಚಾಯತ್‍ಗೆ ಸೇರಿದ ಹಳೆಯ ವಾಣಿಜ್ಯ ಕಟ್ಟಡ ಮತ್ತು ಖಾಸಗಿ ಕಟ್ಟಡವೊಂದು ಬಿಟ್ಟರೆ ಮತ್ತೇನೂ ಇರಲಿಲ್ಲ. ಸರಕಾರಿ ಮತ್ತು ಖಾಸಗಿ ಕಟ್ಟಡದಲ್ಲಿ ಒಂದು ಸಣ್ಣ ಹೊಟೇಲ್, ಜಿನಸಿ ಅಂಗಡಿ, ಸೆಲೂನ್, ವೈದ್ಯರ ಕ್ಲಿನಿಕ್, ಟೈಲರ್ ಅಂಗಡಿ ಮಾತ್ರವಿತ್ತು. ಜನರು ತಮ್ಮ ಎಲ್ಲ ಅಗತ್ಯತೆಗಳನ್ನು ಇಲ್ಲಿ ಪೂರೈಸಿಕೊಳ್ಳುತ್ತಿದ್ದರು.
ಬೆಳಗ್ಗೆ ಮತ್ತು ಸಂಜೆ ಹೊತ್ತು ಜನರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಮಧ್ಯಾಹ್ನ ಬಿಕೋ ಎಂಬಂತಹ ವಾತಾವರಣ. ರಾತ್ರಿಯ ಬಸ್ ಈ ಪ್ರದೇಶವನ್ನು ದಾಟಿ ಹೋದ ಬಳಿಕ ನರಪಿಳ್ಳೆಯೂ ಇರುವುದಿಲ್ಲ. ಹಾಗಾಗಿ ಎಲ್ಲ ವ್ಯಾಪಾರಿಗಳು ತಕ್ಷಣ ಬಾಗಿಲು ಹಾಕಿ ಮನೆಗೆ ಹೆಜ್ಜೆ ಹಾಕುತ್ತಿದ್ದರು.
ಗ್ರಾಮ ಪಂಚಾಯತ್ ಜತೆ ಜನರ ಸ್ಪಂದನ ಅಷ್ಟೇನೂ ಇರಲಿಲ್ಲ. ಹಾಗಾಗಿ ಅದರ ಬಾಗಿಲು ತಡವಾಗಿ ತೆರೆದರೂ ಯಾರೂ ಪ್ರಶ್ನಿಸುತ್ತಿರಲಿಲ್ಲ. ಪತ್ರಿಕೆಗಳ “ಓದುಗರ ಪುಟ”ಕ್ಕೆ ಬರೆದು ಹಾಕುವೆ ಎಂದು ಯಾರೂ ಎಚ್ಚರಿಕೆ ನೀಡುತ್ತಿರಲಿಲ್ಲ. ಪಂಚಾಯತ್ ಕಚೇರಿ ಇದ್ದ ಕಾರಣದಿಂದಲೋ ಏನೋ ಜನರ ಬಾಯಲ್ಲಿ ಈ ಪ್ರದೇಶಕ್ಕೆ ಪಂಚಾಯತಾಫೀಸು ಎಂಬ ಹೆಸರು ಬಂದಿತ್ತು.
ಆದರೆ, ಈಗ ಈ ಪ್ರದೇಶ ಸಂಪೂರ್ಣ ಬದಲಾಗಿದೆ. ಹಳೆಯ ಕಟ್ಟಡಗಳು ನೆಲಸಮವಾಗಿದೆ. ಹೊಸ ಕಟ್ಟಡಗಳು ತಲೆ ಎತ್ತಿವೆ. ರಖಂ ಮತ್ತು ಹೋಲ್‍ಸೇಲ್ ಜಿನಸಿ ಅಂಗಡಿಗಳು, ಫ್ಯಾನ್ಸಿ ಸ್ಟೋರ್, ಬೇಕರಿ, ಮೊಬೈಲ್ ಶಾಪ್, ಶೂ, ಚಪ್ಪಲಿ ಅಂಗಡಿ, ಸ್ಟೀಲ್ ಪಾತ್ರೆ ಅಂಗಡಿಗಳು… ಹೀಗೆ ಏನುಂಟು, ಏನಿಲ್ಲ? ಮೂರ್ನಾಲ್ಕು ಹೊಟೇಲ್‍ಗಳು, ಐದಾರು ಸಣ್ಣ ಪುಟ್ಟ ಜಿನಸಿ ಅಂಗಡಿಗಳು, ಸಿಮೆಂಟ್, ಸ್ಯಾನಿಟರಿ ಶಾಪ್, ಕೋಳಿ ಫಾರಂ, ಲಾಂಡ್ರಿಂಗ್, ಫೈನಾನ್ಸ್, ಬಾಡಿಗೆ ಮನೆ ಕಟ್ಟಡಗಳು, ಖಾಸಗಿ ಮೊಬೈಲ್‍ಗಳ ಟವರ್‍ಗಳು… ಒಟ್ಟಿನಲ್ಲಿ ನನ್ನ ಕಣ್ಣುಗಳಿಗೆ ಅವಾಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹತ್ತಕ್ಕೂ ಅಧಿಕ ರಿಕ್ಷಾಗಳು ಪಾರ್ಕ್‍ನಲ್ಲಿ ಕ್ಯೂ ನಿಂತಿದ್ದವು. ಒಂದೆರೆಡು ಜೀಪು ಕೂಡ ಇತ್ತು. ಹಳೆಯ ಪಳೆಯುಳಿಕೆಗಳನ್ನು ನೆನಪಿಸುವ ಹಾಗೆ, ಒಂದೆರಡು ಗೂಡಂಗಡಿಗಳೂ ಅಲ್ಲಿತ್ತು. ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳಿಗೆ ಆಧುನೀಕರಣದ ಸೋಂಕು ತಗುಲಿತ್ತು. ಎಲ್ಲದಕ್ಕೂ ಗಾಜಿನ ಲೇಪವಿತ್ತು. ಇವೆಲ್ಲದರ ಮಧ್ಯೆ ನನಗೆ ನೆನಪಾದದ್ದು, ಬಾವಾಕರ ಅಂಗಡಿ/ ಹೊಟೇಲ್. ನನ್ನ ಕಣ್ಣುಗಳು ಅದಕ್ಕಾಗಿ ತಡಕಾಡಿದವು.
ಅದೊಂದು ಮನೆಯ ರೂಪ ತಾಳಿದ ಅಂಗಡಿ/ಹೊಟೇಲ್ ಆಗಿತ್ತು. ಅಲ್ಲಿ ಸಿಗದ ವಸ್ತುಗಳೇ ಇಲ್ಲ ಎನ್ನಬಹುದು. ಸೂಜಿಯಿಂದ ಹಿಡಿದು ಹಾರೆ ಪಿಕ್ಕಾಸುಗಳು ಕೂಡ ಮಾರಾಟಕ್ಕೆ ಸಿಗುತ್ತಿದ್ದವು. ಒಂದೆಡೆ ಬೀಡಿ ಬ್ರಾಂಚ್, ಇನ್ನೊಂದೆಡೆ ಹೊಟೇಲ್ ಕೂಡ ಇತ್ತು. ಬೀಡಿಯ ಎಲೆಯ ಬಂಡಲ್‍ಗಳು, ಅಕ್ಕಿ, ಈರುಳ್ಳಿಯ ಗೋಣಿಗಳನ್ನು ಗೋಡೆಗೆ ತಾಗಿಸಿ ಅಟ್ಟಿಗಟ್ಟಿಡುವುದನ್ನು ನೋಡುವುದೇ ಹಬ್ಬ. ಊಟ, ಬಗೆ ಬಗೆಯ ತಿಂಡಿ, ಚಹ ಎಲ್ಲವೂ ಅಲ್ಲಿ ಲಭ್ಯ. ಬಾವಾಕ ಕ್ಯಾಶ್ ಕೌಂಟರ್‍ನಲ್ಲಿ ಕೂರುತ್ತಾರೆ. ಅಪರೂಪಕ್ಕೊಮ್ಮೆ ಬೀಡಿಗಳನ್ನು ಚೆಕ್‍ಅಪ್ ಮಾಡುತ್ತಾರೆ. ಉಳಿದಂತೆ ಎಲ್ಲವನ್ನೂ ಅವರ ಮಗ ಪೊಡಿಮೋನು ನಿಭಾಯಿಸುತ್ತಾನೆ. ಮನೆ ಮಂದಿ ಆತನನ್ನು ಪ್ರೀತಿಯಿಂದ ಪೊಡಿಮೋನು ಅಂತ ಕರೆದಿದ್ದರು. ಹಾಗಾಗಿ ಆತನ ಹೆಸರು ಏನು ಅಂತ ಹೆಚ್ಚಿನವರಿಗೆ ಗೊತ್ತಿಲ್ಲ.
“ಬನ್ನಿ ಸಾರ್…” ರಿಕ್ಷಾ ಚಾಲಕನೊಬ್ಬ ನನ್ನನ್ನು ಕರೆದ.
ನಾನು ಅವನ ಮುಖವನ್ನು ಓದಲು ಪ್ರಯತ್ನಿಸಿದೆ. ಇವ ಇದ್ದಿಯಾಕನ ಪುಳ್ಳಿಯೋ, ಸುಲೈಮಾಕನ ಅಳಿಯನೋ ಏನೋ ಎಂದು ಮನಸ್ಸಿನಲ್ಲೇ ಪ್ರಶ್ನಿಸಿಕೊಳ್ಳತೊಡಗಿದೆ. ಹಾಗೇ ಕಿರುನಗೆ ಬೀರಿದೆ. ಅವನೂ ನಕ್ಕು “ದೂರ ಸಾರ್?” ಎಂದು ಕೇಳಿದ.
“ಇಲ್ಲಿ ಬಾವಾಕನ ಅಂಗಡಿ,ಹೊಟೇಲ್ ಇತ್ತಲ್ಲ. ಅದು ಕಾಣಿಸುತ್ತಿಲ್ಲ”-ನಾನು ತೊದಲಿದೆ.
“ಅದನ್ನೀಗ ಆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ” ಎನ್ನುತ್ತಾ ಕಟ್ಟಡವೊಂದನ್ನು ತೋರಿಸಿದ.
“ಬಾವಾಕ ಎಲ್ಲಿ?”
“ಅವರು ತೀರಿ ಹೋಗಿ ಐದಾರು ವರ್ಷವಾಯಿತು. ಅಂದಹಾಗೆ, ತಾವು ಯಾರು ಅಂತ ಗೊತ್ತಾಗಲಿಲ್ಲ. ಅವರು ನಿಮ್ಮ ಸಂಬಂಧಿಕರಾ?”
“ಅಲ್ಲ”
“ಹಾಗಿದ್ದರೆ, ತಮಗೆ ಅವರು ಹೇಗೆ ಗೊತ್ತು?”
ನಾನು ಮಾತನಾಡಲಿಲ್ಲ.
“ತಮಗೆ ಎಲ್ಲಿಗೆ ಹೋಗಬೇಕಿತ್ತು” ಮತ್ತೆ ಆತನೇ ಮಾತನಾಡಲು ಪ್ರಯತ್ನಿಸಿದ.
“ನನಗೆ ಬಂಡಸಾಲೆ ಮೊೈದಿನಾಕರ ಮನೆಗೆ ಹೋಗಬೇಕಾಗಿತ್ತು”
“ಬನ್ನಿ ಹತ್ತಿ… ಹೆಚ್ಚೇನೂ ಇಲ್ಲ. ಕೇವಲ 20 ರೂಪಾಯಿ ಅಷ್ಟೆ”-ಆತ ವ್ಯವಹಾರಕ್ಕಿಳಿದ.
“ನಿನ್ನ ಹೆಸರೇನು, ಯಾರ ಮಗ?” ನಾನು ಕೇಳಿದೆ.
ನನ್ನ ಈ ಅನಿರೀಕ್ಷಿತ ಪ್ರಶ್ನೆಯಿಂದ ಗಲಿಬಿಲಿಗೊಂಡಂತಾದ ಆತ ಅದನ್ನು ತೋರ್ಪಡಿಸದೆ ‘ನಿಯಾಝ್ ಅಂತ, ರಹಿಮಾಕರ ಕಿರಿಯ ಮಗ” ಅಂತ ಹೇಳಿದ.
“ಯಾವ ರಹಿಮಾಕ? ಕೆಳಗಿನ ಮಾರ್ಗದ ರಹಿಮಾಕನಾ?”
“ಹೌದು”
“ಒ…ಹೋ… ಹಾಗಿದ್ದರೆ, ನೀವು ಸೀದಿಬೋಬನ ಪುಳ್ಳಿಯಾ?”
“ತಮಗೆ ಈ ಊರು ಪರಿಚಯ ಆದಂತಿದೆ”
“ಹೌದು. ನನಗೆ ಈ ಊರು ಪರಿಚಯವಿದೆ. ಯಾಕೆಂದರೆ, ನಾನು ಈ ಊರವ. ಆದರೆ, ಊರಿನ ಮೂರನೆಯ ಪೀಳಿಗೆಗೆ ನನ್ನ ಪರಿಚಯವಿಲ್ಲ”- ನಾನು ನೇರವಾಗಿ ಹೇಳಿದೆ.
ರಿಕ್ಷಾ ಚಾಲಕ ನನ್ನನ್ನು ಮತ್ತೆ ಕಣ್ಬಿಟ್ಟು ನೋಡಿದ. ಅಷ್ಟರಲ್ಲಿ ನನ್ನ ಸುತ್ತಮುತ್ತ ಹತ್ತಾರು ಮಂದಿ ಗುಂಪು ಸೇರಿದ್ದರು. ನನ್ನ ಹಾವಭಾವ, ಮಾತು ಗಮನಿಸಿ ಯಾವುದೋ ಸರಕಾರಿ ಅಧಿಕಾರಿಯಾಗಿರಬೇಕು ಎಂದು ಭಾವಿಸಿದಂತಿತ್ತು. ಆದಾಗ್ಯೂ “ಏನು…ಯಾರು?” ಎಂದು ನಿಯಾಝ್‍ನಲ್ಲಿ ಕಣ್ಣಿನಲ್ಲೇ ಪ್ರಶ್ನಿಸಿದರು.
“ಎಷ್ಟು ಕಲಿತಿದ್ದೀಯಾ?” ನಾನು ಕೇಳಿದೆ.
ರಿಕ್ಷಾ ಚಾಲಕ ಉತ್ತರಿಸಲಿಲ್ಲ.
“ಹಾಲಿಗೆ ಬಂದವನಿಗೆ ಆಕಳಿನ ಬೆಲೆ ಯಾಕಂತೆ?” ಒಬ್ಬ ವ್ಯಂಗವಾಡಿದ. ಇನ್ನೊಬ್ಬ “ಛೆ..” ಎನ್ನುತ್ತಾ ಆತನ ಬಾಯ್ಮುಚ್ಚಿಸಿದ.
“ಮತ್ತೆಂಥ, ನಾನೊಂದು ಅರ್ಧಗಂಟೆಯಿಂದ ನೋಡುತ್ತಿದ್ದೇನೆ. ಒಳ್ಳೆಯ ಸಿಐಡಿ ಥರ ಪ್ರಶ್ನಿಸುತ್ತಾರೆ” -ನಡುವೆ ಇನ್ನೊಬ್ಬ ಬಾಯಿ ಹಾಕಿದ.
ಕೋಪ ಬಂದರೂ, ಊರಿನ ಮಕ್ಕಳು ಎಂಬ ವಿಶೇಷ ಮಮತೆಯಿಂದ ರಿಯಾಯಿತಿ ತೋರಿದೆ.
“ಏಯ್… ಸುಮ್ಮನೆ ಯಾಕೆ ಗುಂಪು ಸೇರ್ತೀರಿ? ಪೊಲೀಸ್ ಬೀಟ್‍ನ ಸಮಯವಾಯಿತು. ನಿಮಗೆಲ್ಲಾ ಪೊಲೀಸರ ಬೆತ್ತದ ರುಚಿ ಬೇಕಾ?”-ಇನ್ನೊಬ್ಬ ಕೇಳಿದ.
ಒಂದಿಬ್ಬರು ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ಭಾವಿಸಿ ದೂರ ಸರಿದರು. ನಾನು ಕಲ್ಲಿನಂತೆ ಇನ್ನೂ ಅಲ್ಲೇ ನಿಂತಿದ್ದೆ. ಯುವಕರ ಯಾವ ಕೊಂಕು ನುಡಿಗಳೂ ನನಗೆ ಕಿರಿಕಿರಿ ಉಂಟು ಮಾಡಲಿಲ್ಲ. ಅಷ್ಟರಲ್ಲಿ “ಏ… ಹೈದರ್… ನೋಡು, ಇವರು ನಿನ್ನ ಅಜ್ಜನ ಮನೆ ಕೇಳ್ತಾರೆ” ಎಂದು ನಿಯಾಝ್ ಕೂಗಿ ಹೇಳಿದ.
ತೆಳ್ಳಗಿನ ಬೆಳ್ಳಗಿನ 18ರ ಹರೆಯದ ಹೈದರ್ ಎರಡು ಹೆಜ್ಜೆ ಮುಂದೆ ಬಂದು ನನ್ನನ್ನು ನೋಡುತ್ತಲೇ ಸುಮ್ಮನೆ ನಿಂತ.
“ಬಾ.. ಹೈದರ್… ಓ… ಇಲ್ಲಿಂದ ಕಾಲು ದಾರಿಯಲ್ಲಿ ನಡೆದುಕೊಂಡು ಹೋದರೆ, ಮನೆಗೆ ತಲುಪಬಹುದಲ್ಲಾ?” ನಾನು ಉಸುರಿದೆ.
“ಈಗ ಇಲ್ಲಿ ಯಾವ ಕಾಲುದಾರಿಯೂ ಇಲ್ಲ. ಎಲ್ಲ ರಸ್ತೆಯಾಗಿ ಮಾರ್ಪಟ್ಟಿದೆ”-ಹೈದರ್ ಮೆಲ್ಲನೆ ಹೇಳಿ, ನನ್ನ ಜತೆ ಹೆಜ್ಜೆ ಹಾಕಲು ಹಿಂಜರಿದ.
“ಈವತ್ತು ನೀನು ಕ್ರಿಕೆಟ್ ಆಡವಾಡದಿದ್ದರೆ ಏನೂ ಆಗದು. ಅವರು ರಿಕ್ಷಾದಲ್ಲಂತೂ ಹೋಗುವಂತೆ ಕಾಣುತ್ತಿಲ್ಲ. 10 ನಿಮಿಷ ಅಲ್ಲವಾ, ಕರೆದುಕೊಂಡು ಹೋಗು” ಎಂದು ರಿಕ್ಷಾ ಚಾಲಕ ನಿಯಾಝ್ ನನ್ನ ಸಹಾಯಕ್ಕೆ ನಿಂತ.
“ನಿನ್ನ ಅಜ್ಜ ಬಂಡಸಾಲೆ ಮೊೈದಿನಾಕನನ್ನು ನೀನು ನೋಡಿದ್ದೀಯಾ?”
“ಹೌದು… ಸಣ್ಣದಿರುವಾಗ ನೋಡಿದ ನೆನಪು”
“ನಿನಗೆ ನನ್ನ ಗುರುತು ಸಿಗಲಿಲ್ಲಾಂತ ಕಾಣುತ್ತದೆ. ಸಂಬಂಧದಲ್ಲಿ ನಾನು ನಿನಗೆ ಅಜ್ಜನಾಗಬೇಕು. ಅಂದರೆ, ನಿನ್ನ ಅಜ್ಜನ ಖಾಸಾ ತಮ್ಮ ನಾನು”
ಹೈದರ್ ನಂಬದಾದ. ರಿಕ್ಷಾ ಚಾಲಕ ನಿಯಾಝ್ ಕೂಡ ಎವೆಯಿಕ್ಕದೆ ನನ್ನನ್ನು ನೋಡಿದ. ಇತರರೂ ಆಶ್ಚರ್ಯದ ಕಣ್ಬಿಟ್ಟರು.
“ಮನೆಯಲ್ಲಿ ಈಗ ಯಾರ್ಯಾರು ಇದ್ದಾರೆ?”-ನಾನು ಕೇಳಿದೆ.
“ಅಪ್ಪ… ಅಮ್ಮ, ನಾನು, ತಮ್ಮ”
“ಅಪ್ಪ ಹೇಗಿದ್ದಾನೆ. ನನ್ನ ಬಗ್ಗೆ ಏನಾದರು ಹೇಳಿದ್ದು ನೆನಪುಂಟಾ?”
“ಇಲ್ಲ”
“ಇರಲಿ… ನಾವು ಮನೆಗೆ ಹೋಗೋಣ”
“ಕಾಕಾ… ರಿಕ್ಷಾ ಹತ್ತಿ”- ನಿಯಾಝ್ ಕೂಗಿದ.
“ಬೇಡ… ನಿಯಾಝ್… ನನಗೆ ಈ ಊರನ್ನು ಮತ್ತೆ ಕಣ್ಣಾರೆ ಕಾಣಬೇಕು. ರಿಕ್ಷಾದಲ್ಲಿ ಪ್ರಯಾಣಿಸಿದರೆ ಅದನ್ನೆಲ್ಲಾ ಕಾಣಲು ಸಾಧ್ಯವಿಲ್ಲ”
“ನೀವೀಗ ಬಂದದ್ದಷ್ಟೆ. ತುಂಬಾ ಸುಸ್ತಾಗಿದ್ದೀರಿ. ಈಗ ರಿಕ್ಷಾದಲ್ಲಿ ಬನ್ನಿ. ನಾಳೆ ಬೇಕಾದರೆ ಊರಿಡೀ ತಿರುಗಾಡಿ” ಎಂದ.
ಅಂತೂ ನಾನು ರಿಕ್ಷಾ ಹತ್ತಿದೆ. ನನ್ನ ಜತೆ ಹೈದರ್ ಕೂಡ ಮುದುಡಿ ಕುಳಿತ. ಐದೇ ಐದು ನಿಮಿಷದಲ್ಲಿ ಮನೆಯ ಮುಂದೆ ರಿಕ್ಷಾ ನಿಂತಿತು. ನಾನು ಐವತ್ತರ ನೋಟು ನಿಯಾಝ್‍ನತ್ತ ತುರುಕಿದೆ. ಆದರೆ, ಆತ ನನ್ನಿಂದ ಹಣ ಪಡೆಕೊಳ್ಳಲು ನಿರಾಕರಿಸಿದ.
“ನೀವು ಮಿಲಿಟ್ರಿಯಲ್ಲಿದ್ದ ಶರ್ಫುದ್ದೀನಾಕ ಅಲ್ವಾ? ನಿಮ್ಮ ಬಗ್ಗೆ ನನ್ನ ತಂದೆ ಆಗಾಗ ಹೇಳ್ತಾ ಇದ್ದರು. ನಮ್ಮೂರಲ್ಲಿ ಮಿಲಿಟ್ರಿಗೆ ಸೇರಿದವರಲ್ಲಿ ನೀವೇ ಮೊದಲಿಗರಂತೆ. ಅವರ ದೇಹ ನೋಡಬೇಕಿತ್ತು, ಅವರ ನಡೆ, ನುಡಿ ನೋಡಬೇಕಿತ್ತು ಅಂತ ಆಗಾಗ ತಂದೆ ಹೇಳುತ್ತಿದ್ದರು. ಆದರೆ, ನಿಮ್ಮನ್ನು ನಾನು ಕಣ್ಣಾರೆ ನೋಡಿಯೇನು ಅಂತ ಭಾವಿಸಿರಲಿಲ್ಲ. ನೀವಿನ್ನು ಇಲ್ಲೇ ಇರ್ತೀರಾ… ಅಥವಾ?”-ನಿಯಾಝ್ ಕೇಳಿದ.
“ನಾನು ಹುಟ್ಟಿ ಬೆಳೆದ ಈ ನೆಲದ ನೆನಪು ಬಲವಾಗಿ ಕಾಡಿದ ಮೇಲೆ ಅಲ್ಲಿರಲು ನನ್ನಿಂದ ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಇಲ್ಲಿಗೆ ಬಂದುಬಿಟ್ಟೆ. ಇಲ್ಲೇ ಇರುವೆ, ಕೊನೆಯುಸಿರೆಳೆಯುವೆ”-ನನ್ನ ಕಣ್ಣು ಮಂಜಾಯಿತು.
“ಈ ಕಡೆ ಬಾರದೆ ತುಂಬಾ ವರ್ಷವಾಯಿತಾ?”- ನಿಯಾಝ್ ಪ್ರಶ್ನಿಸಿದ.
“ಹೌದು… ಬರೋಬ್ಬರಿ ನಲ್ವತ್ತು ವರ್ಷವಾಯಿತು. ಯಾಕೋ ಮಿಲಿಟ್ರಿಗೆ ಸೇರಿದ ಮೇಲೆ ನಾನು ಈ ಊರಿನ ಸಂಪರ್ಕ ಕಡಿದುಕೊಂಡೆ. ಆದರೆ, ನೆಲದ ನೆನಪು ನನ್ನನ್ನು ಬಿಡಲಿಲ್ಲ. ಈ ಇಳಿವಯಸ್ಸಿನಲ್ಲಿ ನಮಗೆ ಚೈತನ್ಯ ನೀಡುವ, ಉತ್ಸಾಹ ತುಂಬುವ ಸಂಗತಿಗಳೆಂದರೆ ನೆಲದ ನೆನಪುಗಳೆ. ಬಾಲ್ಯದ ಆ ದಿನಗಳನ್ನು ಎಂದಾದರು ಮರೆಯಲು ಸಾಧ್ಯವಾ? ನನಗೀಗ 84ರ ಹರೆಯ. ನೋಡು ಹೇಗಿದ್ದೇನೆ? ನಾನೇನು ದಿನಾ ಮೂರು ಹೊತ್ತು ಮಾಂಸ ತಿಂದು ಕಾಲ ಕಳೆದವನಲ್ಲ. ತಿಳಿಗಂಜಿಯೇ ನನ್ನ ಆರೋಗ್ಯದ ಗುಟ್ಟು ಎಂದರೆ ತಪ್ಪಾಗಲಾರದು”-ರಿಕ್ಷಾದಲ್ಲಿ ಪ್ರಯಾಣಿಸುವಾಗ ಹೇಳಿದ ನನ್ನೀ ಮಾತು ಆತನಲ್ಲಿ ಕುತೂಹಲ ಹುಟ್ಟಿಸಿರಬೇಕು. ಹಾಗಾಗಿ ಆತ ನನ್ನೆಲ್ಲಾ ಮಾತುಗಳನ್ನು ತದೇಚೇಕಚಿತ್ತದಿಂದ ಆಲಿಸುತ್ತಿದ್ದ.
ಹತ್ತಾರು ಸಲಕೆಗಳನ್ನು ಜೋಡಿಸಿ ತೀರಾ ತೆಳ್ಳಗಿನ ಸರಳಿನಿಂದ ಕಟ್ಟಿದ “ತಟ್ಟಿ” ಎಂಬ ಹೆಸರಿನ ಗೇಟನ್ನು ತೆರದು, ಸಣ್ಣದಾದ “ಪಾಲ” ದಾಟಿ ಅಂಗಳ ಹತ್ತುತ್ತಲೇ ಹೈದರ್ ಬಿರುಸಿನ ಹೆಜ್ಜೆ ಹಾಕಿ,”ಉಮ್ಮಾ… ಉಮ್ಮಾ…” ಎಂದು ಕರೆಯುತ್ತಾ ಒಳಹೋದ.
ಅಲ್ಲಿಂದ ಉತ್ತರ ಬಾರದಿದ್ದರೂ ನಾನು ಆ ಮನೆಯೊಳಗೆ ಕಾಲಿಟ್ಟೆ. ಹಾಗೇ ಗೋಡೆ, ಬಾಗಿಲು, ಕಿಟಕಿಯತ್ತ ಮೂಗು ಸವರುತ್ತಾ ಹಳೆಯ ವಾಸನೆಗಳನ್ನು ಆಘ್ರಾಣಿಸಲು ಪ್ರಯತ್ನಿಸಿದೆ. ಅಷ್ಟರಲ್ಲಿ, ಇಬ್ರಾಹಿಂ ಬಂದು “ಕುಂಞಬ” ಎಂದ.
“ಒಹ್… ಹೇಗಿದ್ದೀಯಾ?” ಎನ್ನುತ್ತಿದ್ದಂತೆಯೇ ಆತನ ಹೆಂಡತಿ ಪಾತುಮ್ಮ ಹೊರ ಬಂದಳು.
“ಈ ಶರ್ಫುದ್ದೀನ್ ಇನ್ನೂ ಜೀವಂತವಾಗಿದ್ದಾನೆ ಎಂದು ನಿಮಗೆ ಅಚ್ಚರಿ ಅಲ್ವೇ?”-ನಾನು ಕೇಳಿದೆ.
“ಇಲ್ಲ… ಹಾಗೇನಿಲ್ಲ”-ಇಬ್ರಾಹಿಂ ಮಾತು ಮುಂದುವರಿಸಲಾಗದೆ ಪೆಚ್ಚಾಗಿ ನಿಂತ.
“ಕನಿಷ್ಠ ಮನೆಗೆ ಬಂದವರನ್ನು ಕೂತ್ಕೊಳ್ಳಿ ಎನ್ನಿರೋ…”-ನನ್ನ ಧ್ವನಿಯಲ್ಲಿ ಸ್ವಲ್ಪ ಗಡುಸಿತ್ತು.
ಇಬ್ರಾಹಿಂ ಆವಾಗಲೂ ಮೌನಿಯಾದ. ನನ್ನ ಪಿತ್ತ ನೆತ್ತಿಗೇರಿತ್ತು. ಆದರೂ ತಾಳ್ಮೆ ವಹಿಸಿದೆ. ಪಾತುಮ್ಮ ಮತ್ತು ಹೈದರ್ ಹೆದರಿದಂತೆ ಕಂಡು ಬಂದರು.
“ನೋಡು… ನನ್ನ ಮಾತು ಕೇಳು. ಮುದುಕನಿಗೆ ಅರಳುಮರಳು ಎಂದು ಭಾವಿಸಬೇಡ. ನಾನೇನು ಮುಖಸ್ತುತಿಗಾಗಿ ಈ ಮಾತುಗಳನ್ನಾಡುತ್ತಿಲ್ಲ. ಕೊನೆಯ ದಿನಗಳಲ್ಲಿ ಆಸ್ತಿ ಲಪಟಾಯಿಸಲು ಬಂದ ಎಂದು ಭಾವಿಸಬೇಡ. ಇದು ನನ್ನ ಅಪ್ಪ ಅಂದರೆ ನಿನ್ನ ಅಜ್ಜ ಕಟ್ಟಿದ ಮನೆ. ನನ್ನ ಅಣ್ಣ ಅಂದರೆ ನಿನ್ನ ಅಪ್ಪ ತೀರಿ ಹೋದ ಮೇಲೆ ನೀನು ಈ ಮನೆಯಲ್ಲೇ ಇದ್ದೀಯ. ಅದರಲ್ಲಿ ತಪ್ಪೇನೂ ಇಲ್ಲ. ನನ್ನ ಇನ್ನಿಬ್ಬರು ಅಣ್ಣಂದಿರು ಅಂದರೆ ನಿನ್ನ ಚಿಕ್ಕಪ್ಪಂದಿರನ್ನು ಅಂದಿನ ಬಿಳಿಕಾಕರು ಬಲವಂತವಾಗಿ ಸೈನ್ಯಕ್ಕೆ ಸೇರಲು ಒತ್ತಾಯಿಸಿದ್ದರಿಂದ ಹತಾಶೆಗೊಂಡು ನದಿಯನ್ನು ಈಜಿ ಪಾರಾಗಲು ಆಚೆ ದಾಟಲು ಯತ್ನಿಸುತ್ತಿರುವಾಗ ಸುಳಿಗೆ ಸಿಲುಕಿ ಇಹಲೋಕ ತ್ಯಜಿಸಿದರು. ನಿನ್ನ ಅಪ್ಪನ ಕಾಲು ಊನವಾಗಿದ್ದರಿಂದ ಬಿಳಿಕಾಕರು ಅವನನ್ನು ಕೈಬಿಟ್ಟರು. ನಾನೋ ಧೈರ್ಯದಿಂದ ಬಿಳಿಕಾಕರ ಪಡೆ ಸೇರಿದೆ. ಹಾಗಂತ ನಾನವರಿಗೆ ನಿಷ್ಠೆಯಿಂದಿದ್ದೆ ಅಂತಲ್ಲ. ಅಲ್ಲಿನ ಎಲ್ಲ ಮಾಹಿತಿಗಳನ್ನು ಕದ್ದು ಮುಚ್ಚಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ನಮ್ಮವರಿಗೆ ತಲುಪಿಸುತ್ತಿದ್ದೆ. ದೇಶಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ನಾನು ಬಿಳಿಕಾಕರ ಪಡೆಯಲ್ಲಿದ್ದೆ. ಬಳಿಕ ದೇಶದ ಸೈನ್ಯ ಸೇರಿದೆ. ನಾನವರಿಗೆ ಸಕಾಲದಲ್ಲಿ ಮಾಹಿತಿ ತಲುಪಿಸುತ್ತಿದ್ದ ಕಾರಣ ನಮ್ಮ ದೇಶದ ನಾಯಕರಿಗೆ ನಾನು ಶತ್ರುವಾಗಿ ಕಾಣಿಸಲಿಲ್ಲ. ನಿವೃತ್ತಿಯವರೆಗೂ ನಿಷ್ಠೆಯಿಂದ ದುಡಿದೆ. ನಿವೃತ್ತಿಯ ನಂತರ ದೆಹಲಿಯಲ್ಲೇ ಕಾಲ ಕಳೆದೆ. ಯಾಕೋ ಇತ್ತೀಚೆಗೆ ಈ ನೆಲದ ನೆನಪು ಬಲವಾಗಿ ಕಾಡತೊಡಗಿತು. ನನಗೆ ಮದುವೆಯಾಗುವ ಭಾಗ್ಯ ಸಿಕ್ಕಿರಲಿಲ್ಲ. ಹಾಗಂತ ಮಕ್ಕಳಿಲ್ಲ ಅಂತಲ್ಲ. ನಾನು ಸಾಕಿದ ಇಬ್ಬರು ಮಕ್ಕಳಿದ್ದಾರೆ. ಅವರಿಗೆ ಮದುವೆಯಾಗಿದೆ. ಸ್ವಂತ ಕಾಲ ಮೇಲೆ ಅವರು ನಿಂತಿದ್ದಾರೆ. ನನ್ನ 14ನೇ ವಯಸ್ಸಿನಲ್ಲಿ ನಾನು ಈ ಊರು ತೊರೆದೆ. 70 ವರ್ಷದ ಬಳಿಕ ಇದೀಗ ಮರಳಿ ನೆಲೆ ನಿಲ್ಲಲು ಬಂದಿದ್ದೇನೆ. ಹಾಗಂತ ನಾನು ಈ ಊರಿಗೆ ಬಂದಿಲ್ಲ ಅಂತಲ್ಲ. ಒಂದೆರೆಡು ಬಾರಿ ಬಂದ ನೆನಪು. ಆವಾಗ ನಿನಗಿನ್ನೂ ಮದುವೆ ಆಗಿರಲಿಲ್ಲ. ಆದರೆ, ಚಿಕ್ಕಪ್ಪ ಅಂತ ಒಬ್ಬ ಸೈನ್ಯದಲ್ಲಿದ್ದಾನೆ. ಜೀವಂತವಾಗಿದ್ದಾನೆ ಅಂತ ನಿನಗೆ ಚೆನ್ನಾಗಿ ಗೊತ್ತಿತ್ತು. ತಿಂಗಳಿಗೊಮ್ಮೆ ನಾನು ಈ ಮನೆಯ ವಿಳಾಸಕ್ಕೆ ಪತ್ರ ಬರೆಯುತ್ತಿದ್ದೆ. ಆದರೆ, ನಿನ್ನ ಅಪ್ಪ ತೀರಿ ಹೋದಾಗ ನನಗೆ ತಿಳಿಸಲೇ ಇಲ್ಲ. ಬಹುಶ: ಆಸ್ತಿಯ ಪಾಲು ಕೇಳಲು ಚಿಕ್ಕಪ್ಪ ಬಂದಾರು ಅಂತ ನಿನಗೆ ಅನಿಸಿರಬಹುದು. ಅಲ್ವಾ?”-ನನ್ನ ಈ ಅನಿರೀಕ್ಷಿತ ಮಾತಿಗಳು ಇಬ್ರಾಹಿಂನ ನಾಲಗೆ ತತ್ತರಿಸುವಂತೆ ಮಾಡಿತ್ತು.
“ನಾನು ಬರೆದ ಪತ್ರಕ್ಕೆ ಅಣ್ಣನಿಂದ ಮರುತ್ತರ ಬಾರದಿದ್ದಾಗ ಏನೋ ಘಟಿಸಿರಬಹುದು ಎಂದು ಭಾವಿಸಿದೆ. ಮೂರ್ನಾಲ್ಕು ಪತ್ರಕ್ಕೂ ಉತ್ತರ ಬಾರದಿದ್ದಾಗ ಇಲ್ಲಿಗೆ ಬರಲು ನಿರ್ಧರಿಸಿದೆ. ಆದರೆ, ಸಾಧ್ಯವಾಗಲಿಲ್ಲ. ಈಗ ದೆಹಲಿಯ ಸಂಬಂಧವನ್ನು ಸಂಪೂರ್ಣ ಕಡಿದು ಊರಿಗೆ ಬಂದಿರುವೆ. ಇನ್ನೆಷ್ಟು ದಿನ ನಾನು ಜೀವಿಸುತ್ತೇನೋ ಗೊತ್ತಿಲ್ಲ. ನಿನಗೆ ಇಷ್ಟವಿದೆಯೆಂದಾದರೆ, ನಾನು ಬಾಲ್ಯ ಜೀವನ ಕಳೆದ ಈ ಮನೆಯಲ್ಲಿ ಅದರಲ್ಲೂ ಅಪ್ಪನ ಜತೆ ಮಲಗಿದ ಈ “ಮೇಲ್ತನೆ”ಯನ್ನು ನಾನು ಬಳಸುವೆ. ಸಾಧ್ಯವಾದರೆ ಮೂರು ಹೊತ್ತು ಊಟ ಹಾಕು. ಕಷ್ಟವಾಗುವುದಾದರೆ ನಾನೇ ಎಲ್ಲಾದರೊಂದು ಬಾಡಿಗೆ ಕೋಣೆ ಹಿಡಿಯುವೆ”-ಎಂದು ನಾನು ಹೇಳುತ್ತಿದ್ದಾಗ, “ಇಲ್ಲ ಕಾಕ… ಹಾಗೆಲ್ಲ ಹೇಳಬೇಡಿ. ನಮಗೆ ನೀವು ಭಾರವಾಗಲಾರಿರಿ. ಒಂದು ಕಟ್ಟು ಬೀಡಿ ಜಾಸ್ತಿ ಕಟ್ಟಿಯಾದರೂ ನಾನು ನಿಮಗೆ ಅನ್ನ ಹಾಕುವೆ” ಎಂದು ಪಾತುಮ್ಮ ಹೇಳಿದಳು.
“ನನಗೆ ಅನ್ನ ಹಾಕಲು ನೀನು ಒಂದು ಕಟ್ಟು ಹೆಚ್ಚು ಬೀಡಿ ಸುರುಟಬೇಕಾಗಿಲ್ಲ. ನನಗೆ ಹಣದ ಸಮಸ್ಯೆಯೇ ಇಲ್ಲ. ತಿಂಗಳಿಗೆ ನಾನೇ ಇಂತಿಷ್ಟು ಅಂತ ಹಣ ಕೊಡುತ್ತೇನೆ. ಈ ದೇಹ ಗಟ್ಟಿ ಮುಟ್ಟು ಇರುವವರೆಗೂ ನಾನು ಈ ನೆಲದ ನೆನಪನ್ನು ಮತ್ತೆ ಮತ್ತೆ ಕೆದಕುತ್ತಾ ಇರುತ್ತೇನೆ. ಸಣ್ಣವನಿದ್ದಾಗ ಓಡಾಡಿದ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡುವೆ. ಮರ ಹತ್ತಲಾಗದಿದ್ದರೂ ಅದರ ಬಳಿ ಸುಳಿದಾಡುವೆ”-ನಾನು ಆತ್ಮವಿಶ್ವಾಸ ಹೆಚ್ಚಿಸಿಕೊಂಡೆ.
“ಅಜ್ಜ. ಕಳೆದೊಂದು ವರ್ಷದಿಂದ ಅಬ್ಬ ಅಷ್ಟೇನೂ ಹುಷಾರಿಲ್ಲ. ಒಂಥರಾ ವರ್ತಿಸುತ್ತಾರೆ. ಯಾರಲ್ಲೂ ಸರಿಯಾಗಿ ಮಾತನಾಡುತ್ತಿಲ್ಲ. ಸುಮ್ಮನೆ ಕುಳಿತುಕೊಂಡು ಏನನ್ನೋ ಯೋಚಿಸುತ್ತಾರೆ. ತೀರಾ ಮಂಕಾಗಿದ್ದನ್ನು ಕಂಡು ವೈದ್ಯರ ಬಳಿ ಕರೆದುಕೊಂಡು ಹೋಗಿಯಾಯಿತು. ತಪಾಸಣೆ ಮಾಡಿಸಿ ಔಷಧಿ ಸೇವಿಸಿದರೂ ಪ್ರಯೋಜನವಾಗಲಿಲ್ಲ. ಹಾಗಾಗಿ ಅವರ ಈ ವರ್ತನೆ ನಿಮಗೆ ತಪ್ಪಾಗಿ ಕಂಡಿದೆ” ಎಂದು ಹೈದರ್ ಹೇಳಿದ.
“ನನ್ನ ಪುಳ್ಳಿಯ ಮಾತನ್ನು ನಾನು ನಂಬದಿರುವುದುಂಟೇ? ಮೊದಲೇ ಈ ಬಗ್ಗೆ ಸಣ್ಣ ಸುಳಿವು ಕೊಟ್ಟಿದ್ದರೆ ನಾನು ಇಷ್ಟೆಲ್ಲ ಕೊರೆಯುತ್ತಿದ್ದೆನೇ?” ಎಂದಾಗ, “ಆ ಸಂಗತಿ ಮೊದಲೇ ಹೇಳಿದ್ದರೆ, ನಮಗೆ ಇಷ್ಟೆಲ್ಲ ವಿಷಯ ಗೊತ್ತಾಗುತ್ತಿರಲಿಲ್ಲ. ಮನುಷ್ಯ ಸಿಟ್ಟಿನ ಭರದಲ್ಲಿ ಏನೆಲ್ಲ ಕೊರೆಯುತ್ತಿದ್ದಾನೆ ಎಂದು ಶಾಲೆಯಲ್ಲಿ ನಮ್ಮ ಮೇಷ್ಟ್ರು ಹೇಳುತ್ತಿದ್ದರು. ಅದಕ್ಕೀಗ ನೀವು ಸಾಕ್ಷಿ”ಎಂದು ಹೇಳಿ ಹೈದರ್ ನಕ್ಕ.
ಹಾಗೇ ನಾನು ಅಂಗಳವಿಳಿದು ಮನೆಯ ಸುತ್ತಲೂ ಸುಮ್ಮನೆ ತಿರುಗಾಡಿ ಬರುವಷ್ಟರಲ್ಲಿ “ಮೇಲ್ತನೆ”ಯ ಮೇಲೆ ಚಾಪೆ ಹಾಸಿ, ಹಾಸಿಗೆಯನ್ನು ಬಿಡಿಸಿ ಅದರ ಮೇಲೊಂದು ಬೆಡ್‍ಶೀಡ್ ಹೊದಿಸಿ ಎರಡು ತಲೆ ದಿಂಬು ಜೋಡಿಸಿದ್ದು ಕಂಡು ಬಂತು. ನನ್ನ ಸೂಟ್‍ಕೇಸ್ ಕೂಡ “ಮೇಲ್ತನೆ”ಯ ಮೇಲಿಡಲಾಗಿತ್ತು.
ಬಟ್ಟೆ ಬರೆ ಬದಲಾಯಿಸಿ, ಕೈಕಾಲು ತೊಳೆದು ಮತ್ತೆ ಮೇಲ್ತನೆಯ ಬಳಿ ಬಂದಾಗ ಚಾ,ತಿಂಡಿ ಕಾಣಿಸಿತು. ಕುಡಿಯಿರಿ ಎಂದು ಒತ್ತಾಯಿಸುವುದನ್ನು ಕಾಣದೆ ನಾನೇ ಅದನ್ನು ಕೈಗೆತ್ತಿಕೊಂಡೆ. ನನ್ನ ಲವಲವಿಕೆ ಹೈದರ್‍ನನ್ನು ನಾಚಿಸಿತ್ತು. ಅವನ ಎಳೆಯ ತಮ್ಮ ನನ್ನನ್ನು ಕದ್ದು ಮುಚ್ಚಿ ನೋಡುತ್ತಿದ್ದ. ಅವನನ್ನು ನಾಲ್ಕೈದು ಬಾರಿ ಕರೆದು ಹೆಸರೇನು ಎಂದು ಕೇಳಿದೆ. ಆತ ಒಂದೆರೆಡು ಬಾರಿ ಮುಗುಳ್ನಕ್ಕು, ಹತ್ತಿರ ಬಂದಂತೆ ನಟಿಸಿ ಕೊನೆಗೆ “ನನ್ನ ಹೆಸರು ನವಾಝ್” ಎನ್ನುತ್ತಾ ಒಳಗೆ ಓಡಿದ.
ನಾನು ಮೇಲ್ತನೆಯ ಮೇಲೆ ಕುಳಿತೆ. ಇಬ್ರಾಹಿಂ ಮತ್ತವನ ಹೆಂಡತಿ ಮಕ್ಕಳು ಕೂಡ ಮರದ ಕುರ್ಚಿ, ಕಿಟಕಿಯ ದಡೆಯಲ್ಲೆಲ್ಲಾ ಕುಳಿತರು.
ಮಾತು… ಮಾತು… ಮಾತು…. ರಾತ್ರಿ 12 ಗಂಟೆಯವರೆಗೂ ಮಾತುಕತೆ ಸಾಗಿತು. ಊರಿನ ಅನೇಕ ವಿಚಾರಗಳನ್ನು ಕೇಳಿ ತಿಳಿದುಕೊಂಡೆ. ನನ್ನ ಬತ್ತಳಿಕೆಯಲ್ಲಿದ್ದ ವಿಷಯವನ್ನೂ ಹಂಚಿಕೊಂಡೆ.
ರಾತ್ರಿ 1 ಗಂಟೆಗೆ ಹಾಸಿಗೆ ಮೇಲೆ ಮಲಗಿದ್ದು ಗೊತ್ತು. ಮತ್ತೆ ಮುಂಜಾನೆಯ ಬಾಂಗ್ ಮೊಳಗಿದಾಗ ನನಗೆ ಎಚ್ಚರವಾಗಿತ್ತು.
ನಿತ್ಯ ಕರ್ಮ ಮುಗಿಸಿ ಬರುವಾಗ ಸೊಸೆ ಬ್ರೆಡ್ ಮತ್ತು ಚಹ ತಂದಿಟ್ಟಳು. ನಾನು ಲೋಟ ಕೈಗೆತ್ತಿಕೊಳ್ಳುತ್ತಲೇ “ಗ್ಲಾಸ್ ಇಲ್ಲವಾ. ನನಗೆ ಅದರಲ್ಲಿ ಕುಡಿದು ಅಭ್ಯಾಸ” ಎಂದೆ. ಆಕೆ ಒಳಹೊಕ್ಕು ಅಗಲಬಾಯಿಯ ದೊಡ್ಡ ಗ್ಲಾಸ್ ತಂದು ಕೊಡುತ್ತಾ, “ಸಕ್ಕರೆ ಹಾಕಿದ್ದೇನೆ. ತೊಂದರೆ ಇಲ್ವಲ್ಲಾ?” ಎಂದು ಕೇಳಿದಳು.
“ಅಲ್ಲಾಹನ ದಯೆಯಿಂದ ನನಗೆ ಈವರೆಗೆ ಯಾವುದೇ ಸೀಕ್ ಸಂಕಟ ಆಗಿಲ್ಲ. ಮಿತ ಆಹಾರ, ವ್ಯಾಯಾಮ, ಮಾನಸಿಕ ಒತ್ತಡದಿಂದ ದೂರವಿರುವುದೇ ನನ್ನ ಆರೋಗ್ಯದ ಗುಟ್ಟು” ಎಂದೆ.
ಸ್ವಲ್ಪ ಹೊತ್ತಿನಲ್ಲೇ ಇಬ್ರಾಹಿಂ, ಹೈದರ್ ಎದ್ದು ಪ್ರಾತ: ವಿಧಿ ಮುಗಿಸಿ ನನ್ನ ಬಳಿ ಬಂದರು. ಸೂರ್ಯನ ಕಿರಣ ಮೈಮೇಲೆ ಬೀಳುವವರೆಗೆ ನಿದ್ದೆಗೆ ಜಾರುವುದು ಸರಿಯಲ್ಲ. ಆ ಅಭ್ಯಾಸ ನಮ್ಮ ಕುಟುಂಬದ ಯಾರಿಗೂ ಇರಲಿಲ್ಲ. ನಮ್ಮ ತಂದೆ, ಅಜ್ಜ, ಅವರ ತಂದೆ ಹೀಗೆ ಹಿರಿಯರೆಲ್ಲಾ ಮುಂಜಾನೆ ಎದ್ದು ನಮಾಝ್ ಮಾಡಿ ತಮ್ಮ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರಂತೆ. ಅದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೂ ಹೌದು. ಅದನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿ. ಇಬ್ರಾಹಿಂ ನೀನು ಅದಕ್ಕೆ ಕಡಿವಾಣ ಹಾಕಿದಂತಿದೆ. ಅದನ್ನು ನಿನ್ನ ಮಕ್ಕಳು ಮುಂದುವರಿಸುತ್ತಾರೆ. ಇನ್ಮೇಲೆ ಹಾಗಾಗಬಾರದು. ಎಲ್ಲರೂ ಮುಂಜಾನೆ ಎದ್ದು ನಿತ್ಯ ಕರ್ಮ ಮುಗಿಸಿ ನಮಾಜ್ ಮಾಡಿ ಕನಿಷ್ಠ ಒಂದೆರೆಡು ಪುಟವಾದರೂ ಖುರ್‍ಆನ್ ಪಠಿಸಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಮುಸ್ಸಂಜೆ ಹೊತ್ತು ಎಲ್ಲರೂ ಮನೆಯಲ್ಲಿರಬೇಕು. ರಾತ್ರಿ ಬೇಗ ಊಟ ಮುಗಿಸಿ ಮಲಗಬೇಕು. ಇದನ್ನೆಲ್ಲಾ ದಿನಚರಿಯಂತೆ ರೂಢಿಸಿಕೊಳ್ಳಬೇಕು. ಅದು ಬಿಟ್ಟು ಬೆಳಗ್ಗೆ 10-11 ಗಂಟೆಯವರೆಗೂ ನಿದ್ದೆ ಮಾಡಿ, ಸೂರ್ಯ ನಡುನೆತ್ತಿಗೆ ಬರುವಾಗ ಮುಖ ತೊಳೆಯುವುದು ಒಳ್ಳೆಯ ಲಕ್ಷಣವಲ್ಲ” ಎಂದೆ. ನನ್ನ ಈ ಪಾಠ ಮನೆಯ ಎಲ್ಲರಿಗೂ ಹಿಡಿಸಿದಂತಿದೆ. ಹಾಗಾಗಿ ಯಾರೂ ಅದನ್ನು ವಿರೋಧಿಸಿ ಮಾತನಾಡಲಿಲ್ಲ.
“ಹೈದರ್ ಏನು ಓದ್ತಾ ಇದ್ದೀಯಾ?”
“ಎಸ್‍ಎಸ್‍ಎಲ್‍ಸಿ ಪಾಸ್ ಆಗಿ ಒಂದು ವರ್ಷವಾಯಿತು. ಈಗ ಟೈಲರಿಂಗ್ ತರಬೇತಿ ಪಡೆಯುತ್ತಿದ್ದೇನೆ”
“ಹೈದರ್‍ಗೆ ಮತ್ತಷ್ಟು ಕಲಿಯಬೇಕು ಎಂದು ಅನಿಸುವುದಿಲ್ಲವಾ?”
“ಇದೆ… ಆದರೆ?”
“ಅಂತಹ ಸಮಸ್ಯೆ ಏನಾದರು ಇದೆಯಾ?”
“ಹಣದ ತೊಂದರೆ”
ಆ ಮಾತನ್ನು ಕೇಳಿಸಿಕೊಂಡ ಇಬ್ರಾಹಿಂ ಮತ್ತು ಪಾತುಮ್ಮ ಮೌನವಾದರು.
“ಸರಿ, ನಾನಿರುವವರೆಗೆ ಹಣಕಾಸಿನ ತೊಂದರೆ ಆಗದು. ಈ ಇಳಿವಯಸ್ಸಿನಲ್ಲಿ ನಾನು ಕುಟುಂಬದ ಜತೆ ಸೇರುವಂತಾದದ್ದೆ ದೊಡ್ಡದು. ಅದಕ್ಕಾಗಿ ನಾನು ಅಲ್ಲಾಹನಿಗೆ ಎಷ್ಟು ಕೃತಜ್ಞನಾದರೂ ಸಾಕಾಗದು. ನೀನು ಟೈಲರಿಂಗ್ ತರಬೇತಿ ಪಡೆಯುತ್ತಲೇ ರಾತ್ರಿ ಕಾಲೇಜಿಗೆ ಹೋಗು. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ನಾನು ಮಾಡ್ತೇನೆ. ನಮ್ಮ ಮಕ್ಕಳು ಕಲಿಯಬೇಕು. ಶಿಕ್ಷಣದಲ್ಲಿ ಮತ್ತಷ್ಟು ಮುಂದೆ ಬರಬೇಕು. ನಮ್ಮ ಸಮುದಾಯ ಹಿಂದುಳಿಯಲು ಶಿಕ್ಷಣದ ಬಗ್ಗೆ ಇರುವ ಅಸಡ್ಡೆಯೇ ಕಾರಣ. ಶಿಕ್ಷಣ ಕೇವಲ ಉದ್ಯೋಗದ ಉದ್ದೇಶವಾಗಬಾರದು. ಅದು ಜ್ಞಾನಾರ್ಜನೆಗೆ ಮುಖ್ಯ ಗುರಿಯಾಗಿರಬೇಕು. ಉದ್ಯೋಗ ಯಾವುದಾದರೂ ಪರವಾಗಿಲ್ಲ. ಆದರೆ ಪ್ರಪಂಚದ ಜ್ಞಾನ ಬೇಕು. ಪಾತುಮ್ಮ, ನೀನು ಅಷ್ಟೆ… ಮನೆಕೆಲಸದ ಜತೆಗೆ ಮಕ್ಕಳ ಶಿಕ್ಷಣದ ಬಗ್ಗೆಯೂ ಹೆಚ್ಚು ಉತ್ಸಾಹ ತೋರಬೇಕು” ಎಂದಾಗ ಆಕೆ ತಣ್ಣಗೆ ನಡುಗಿದಳು.
“ಅರಸ್ತಾನ” ಎಂಬ ನನ್ನೂರಿನ ಮಣ್ಣಿನ ವಾಸನೆ ಆಘ್ರಾಣಿಸಬೇಕು, ಈ ನೆಲದ ನೆನಪುಗಳನ್ನು ಮತ್ತೆ ಕೆದಕಬೇಕು, ಓಡಾಡಿದ ಜಾಗವನ್ನೆಲ್ಲಾ ಮತ್ತೆ ಮತ್ತೆ ನೋಡಬೇಕು, ಊರಲ್ಲಾದ ಬದಲಾವಣೆಯನ್ನು ಕಣ್ಣಾರೆ ಕಾಣಬೇಕು. ಪ್ರತೀ ಮನೆಗೂ ಹೋಗಬೇಕು. ಅಲ್ಲಿ ಕಣ್ಮರೆಯಾದ, ಜನ್ಮ ತಾಳಿದವರ ಬಗ್ಗೆ ಕೇಳಿ ತಿಳಿದುಕೊಳ್ಳಬೇಕು…”-ನಾನು ನನ್ನಲ್ಲೇ ಲೆಕ್ಕಾಚಾರ ಹಾಕತೊಡಗಿದೆ.
ಅಷ್ಟರಲ್ಲಿ ಅಸ್ಸಲಾಂ ಅಲೈಕುಂ ಎನ್ನುತ್ತಾ ರಿಕ್ಷಾ ಚಾಲಕ ನಿಯಾಝ್ ಒಳಹೊಕ್ಕ. ನನ್ನನ್ನೇ ಪಿಳಿಪಿಳಿ ಕಣ್ಣುಬಿಟ್ಟು ನೋಡಿದ. ಅವನಲ್ಲಿ ಮಾತುಗಳು ಹೊರಡಲಿಲ್ಲ.
“ನಿಯಾಝ್… ನನಗೆ ಈ ಊರನ್ನು ಸಂಪೂರ್ಣ ಸುತ್ತಾಡುವ ಆಸೆ. ಅದಕ್ಕಾಗಿ ನೀನು ಸಹಕರಿಸಬೇಕು”
“ಅದಕ್ಕೇನಂತೆ… ನಿಮ್ಮ ಜತೆ ನಾನಿದ್ದೇನೆ”
ಅವನ ಉತ್ಸಾಹವನ್ನು ಕಂಡು ಸುಮ್ಮನಿರಲಾಗಲಿಲ್ಲ. ಲಗುಬಗನೆ ಬಟ್ಟೆ ಬದಲಾಯಿಸಿ ಹೊರಟು ನಿಂತೆ. ನಾನೂ ಬರುವೆ ಎನ್ನುತ್ತಾ ಹೈದರ್ ಕೂಡ ಸಿದ್ಧನಾದ. ಅಂತೂ ಕ್ಷಣಾರ್ಧದಲ್ಲೇ ನಾವು ಮೂವರು ಅಂಗಳವಿಳಿದೆವು.
ಜಕ್ರಿಯಾಕರ ತೋಟ, ಇದ್ದಿನಾಕರ ಗದ್ದೆ, ಬಾವಾಕರ 30 ಅಡಿ ಆಳದ ಬಾವಿ, ಇಸ್ಮಾಲಿಯಾಕರ ಸುಣ್ಣ ಬೇಯಿಸುವ ಗೂಡು, ಸುಲೈಮಾಕರ ಮಾಡು, ಗೋಡೆ ಮುರಿದು ಬಿದ್ದ ಹಳೆಯ ಮನೆ, ಹಳೆಯ ಪ್ರೈಮರಿ ಶಾಲೆ, ಮದ್ರಸ, ರಿಫಾಈ ರಾತೀಬು ಕೊಟ್ಟಿಗೆ, ಸೈಯ್ಯದ್ ಗೈಬುಲ್ಲಾ ಎಂಬ ಹೆಸರಿನಲ್ಲಿ ಗುರುತಿಸಲ್ಪಟ್ಟಿದ್ದ ಜಾರ, ರಝಾಕಾಕರ ದೊಡ್ಡ ಮಾವಿನ ಮರ, ಸಿಯಾಲಿಯಾಕರ ಮನೆ ಸಮೀಪದ ಸರಕಾರಿ ಬಾವಿ, ಹಸಕುಂಞÁಕರ ಮನೆ ಸಮೀಪದ ಕೊಳ, ಹಲಸಿನ ಹಣ್ಣಿನ ಮರ, ಪುತ್ಮೋನಾಕರ ಕೈಪಂಪ್ ಸೆಟ್… ಹೀಗೆ ಹತ್ತಾರು ಕಡೆ ಅಲೆದಾಡಿದೆ. ದಾರಿಹೋಕರು ಮಾತ್ರವಲ್ಲ ಮನೆಯೊಳಗಿದ್ದವರನ್ನೆಲ್ಲಾ ಸ್ವತ: ನಾನೇ ಕರೆದು ಪರಿಚಯ ಮಾಡಿಸಿಕೊಂಡು ಮಾತನಾಡಿದೆ. ಹೆಚ್ಚಿನವರಿಗೆ ನನ್ನ ಪರಿಚಯವಿರಲಿಲ್ಲ. ಊರಿನ ಒಬ್ಬ ಮಿಲಿಟ್ರಿಯಲ್ಲಿದ್ದಾನೆ ಎಂಬ ಸಂಗತಿ ಮಾತ್ರ ಅವರಿಗೆ ಗೊತ್ತಿತ್ತು. ಆದರೆ, ಅದು ತಾನು ಎಂದು ಇದೀಗ ಹಲವರಿಗೆ ಮನದಟ್ಟಾಯಿತು. ನನ್ನ ನಡಿಗೆ, ತೊಡಿಗೆ, ನೀಳಕಾಯದ ದೇಹ ಅವರ ಗಮನ ಸೆಳೆದಂತಿತ್ತು. ಎಲ್ಲರೂ ಪ್ರೀತಿಯಿಂದ ಕಂಡರು. ಚಾ, ತಿಂಡಿ, ಊಟ ಕೊಟ್ಟು ಸತ್ಕರಿಸಿದರು. ಸಣ್ಣಪುಟ್ಟ ಮಕ್ಕಳ ಕಣ್ಣುಗಳು ನನ್ನನ್ನು ಗಾಬರಿಯಿಂದ ಎವೆಯಿಕ್ಕುತ್ತಿತ್ತು. ಕೆಲವರ ಸ್ಥಿತಿಗತಿ ಕಂಡು ನಾನು ಧನಸಹಾಯ ಮಾಡಿದೆ. ಈ ಅನಿರೀಕ್ಷಿತ ನೆರವು ಅವರನ್ನು ಆಶ್ಚರ್ಯಚಕಿತಗೊಳಿಸಿತ್ತು. ನೂರಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಅನೇಕ ಯುವತಿಯರು ವಿಧವೆಯಾಗಿದ್ದರು. ಕೆಲವರಿಗೆ ಕೈತುಂಬ ಮಕ್ಕಳಿವೆ. ಅದರ ಅಪ್ಪ ಎಂಬ ಪ್ರಾಣಿ ಕೈಕೊಟ್ಟು ಹೋದ ದಿನದಿಂದ ವಿಚ್ಛೇಧಿತೆಯರು ಕೊರಗುತ್ತಿದ್ದರು. ಹೆಂಗಸರು ಬೀಡಿಯ ಮೊರೆ ಹೊಕ್ಕರೆ, ಗಂಡಸರು ಇಟ್ಟಿಗೆ, ಕೂಲಿ, ಮೀನು ಮಾರಾಟದಲ್ಲಿ ತೊಡಗಿಸಿಕೊಂಡಿದ್ದರು.
ಶಾಲೆ, ಮದ್ರಸ, ಜಾರಕ್ಕೂ ಹೋದೆ. ಪ್ರತೀ ಪರೀಕ್ಷೆ ಸಮಯ ಜಾರದ ದಬ್ಬಿಗೆ ಕಾಣಿಕೆ ಹಾಕಿದ್ದು ನೆನಪಾಯಿತು. ಊರಿನ ಬಹುತೇಕ ಗುಡ್ಡೆ ಹತ್ತಿಳಿದೆ. ಗದ್ದೆ ಸುತ್ತು ಬಳಸಿದೆ. ಸಂಕ, ಪಾಲ, ಹಳ್ಳ ದಾಟಿದೆ. ಅಂತೂ ಸಂಜೆಯಾಗುವಾಗ ನನಗೆ ತಟ್ಟನೆ ಆ ಕಾಡು ನೆನಪಾಯಿತು. “ನೋಡು… ಓ ಅಲ್ಲೊಂದು ಕಾಡು ಇತ್ತು. ಅದರಲ್ಲಿ ಹುಲಿ, ಸಿಂಹ, ಆನೆಯ ಹಾವಳಿ ಇತ್ತು. ಆ ಕಾಡಿನ ಮಧ್ಯೆ ಒಂದು ಮನೆಯೂ ಇತ್ತು. ಅದರ ಯಜಮಾನ ಮೊೈದಿನಾಕ ಅಂತ. ಅವರು ಮೂಲತ: ಬೆಳ್ಮದವರು. ಈ ಊರಿನ ಅಳಿಯ. ಅಂದರೆ, ನಮ್ಮೂರಿನ ಯುವತಿಯನ್ನು ಮದುವೆಯಾಗಿ ಇಲ್ಲೇ ಬದುಕು ಸವೆಸಿದವರು. ಕಾಡಿನಲ್ಲಿದ್ದ ಕಾರಣಕ್ಕಾಗಿ ಅವರಿಗೆ ಲೈಸನ್ಸ್ ಹೊಂದಿದ ಪಿಸ್ತೂಲ್ ಇತ್ತು. ಆ ಕಾಲಕ್ಕೆ ದೊಡ್ಡ ಶ್ರೀಮಂತ. ಈ ಅರಸ್ತಾನದ ಕಾಲುಭಾಗ ಅವರ ವಶದಲ್ಲಿತ್ತು. ಮಹಾ ತಮಾಶೆಗಾರ. ಕುಶಾಲಿಗಾದರೂ ಸರಿ, ಮಾತಿನಲ್ಲಿ ಹೆಚ್ಚು ಕಮ್ಮಿಯಾದರೆ ಪಿಸ್ತೂಲು ತೋರಿಸುತ್ತಿದ್ದರು. ಮದುವೆಯ ದಿನ ಅವರು ಕುದುರೆಗಾಡಿಯಲ್ಲಿ ಮದುಮಗನಾಗಿ ಬಂದಿದ್ದರಂತೆ. ಆ ಕಾಲದಲ್ಲಿ ಕುದುರೆಗಾಡಿಯಲ್ಲಿ ಬರುವುದು ಸಣ್ಣ ವಿಷಯವಲ್ಲ. ಇಳಿವಯಸ್ಸಿನಲ್ಲಿ ಅವರು ಊರುಗೋಲು ಹಿಡಿದು ನಡೆಯುವುದನ್ನು ನೋಡುವುದೇ ಒಂದು ಮಜ. ನಾವು ಆ ಕಾಡಿಗೆ ಹೊಕ್ಕು ಆ ಮನೆಯನ್ನೊಮ್ಮೆ ನೋಡಿ ಬರೋಣವಾ?” ಎಂದು ಕೇಳಿದೆ.
“ಆ ಮನೆ ಗೊತ್ತು. ಆದರೆ, ಅದೀಗ ಪಾಳು ಬಿದ್ದಿದೆ. ಮಕ್ಕಳು ಬೇರೆ ಮನೆ ಮಾಡಿಕೊಂಡಿದ್ದಾರೆ”-ನಿಯಾಝ್‍ನ ಈ ಮಾತು ಕೇಳಿ ನನ್ನ ಉತ್ಸಾಹ ಕುಗ್ಗಿತ್ತು.
“ಮೂರು ತಿಂಗಳ ಹಿಂದೆ ಈ ಊರಿಗೆ ನಿಮ್ಮ ಹಾಗೆ ಒಬ್ಬರು ಬಂದಿದ್ದರು. ಅವರು ಕೂಡ ಸಣ್ಣ ಪ್ರಾಯದಲ್ಲೇ ಊರು ಬಿಟ್ಟು ಹೋಗಿದ್ದರಂತೆ. ಇದೀಗ ಇಲ್ಲೇ ಮಗಳ ಮನೆಯಲ್ಲಿ ನೆಲೆಸಿದ್ದಾರೆ” ಎಂದು ನಿಯಾಝ್ ಹೇಳಿದಾಗ ಕುಗ್ಗಿದ ಉತ್ಸಾಹದ ಮಧ್ಯೆಯೂ ಕುತೂಹಲ ಉಂಟಾಯಿತು.
“ಅದ್ಯಾರು?” ನಾನು ಕೇಳಿದೆ.
“ಹಾಮದಾಕ ಅಂತ. ಹೆಚ್ಚಿನವರು ಅವರನ್ನು ಬೋಟು ಹಾಮದಾಕ”ಎನ್ನುತ್ತಿದ್ದರು.
“ಒ…ಹೋ… ಗೊತ್ತಾಯಿತು. ಎಲ್ಲಿ ಅವ?”
“ಈಗ ಮಗಳ ಮನೆಯಲ್ಲಿದ್ದಾರೆ”
“ನಡಿ ಹೋಗೋಣ”
“ನಾಳೆ ಹೋದರೆ ಆಗದಾ? ಕತ್ತಲಾಗುತ್ತಾ ಬಂತಲ್ವಾ?”
“ಬೇಡ… ಬೇಡ. ಈಗ ಹೋಗೋಣ”
ಹತ್ತು ನಿಮಿಷದ ಕಾಲುದಾರಿಯ ಬಳಿಕ ಆ ಮನೆಯ ಅಂಗಳ ತಲುಪಿದೆ. ನಿಯಾಝ್ ಮನೆಯೊಳ ಹೊಕ್ಕ. ನಾನು ಅನುಮತಿಗೂ ಕಾಯದೆ ಆ ಮನೆಯೊಳ ಹೊಕ್ಕೆ. ಹಾಮದಾಕ “ಮೇಲ್ತನೆ”ಯಲ್ಲಿ ಮಲಗಿದ್ದ.
“ಗುರುತು ಸಿಕ್ಕಿತಾ?” ನಾನು ಕೇಳಿದೆ.
ಹಾಮದಾಕನಿಗೆ ಗುರುತು ಸಿಕ್ಕಿದಂತಿಲ್ಲ.
“ಮಿಲಿಟ್ರಿ ಶರ್ಫುದ್ದೀನ್” ನಾನು ನನ್ನ ಪರಿಚಯ ಮಾಡುತ್ತಿದ್ದಂತೆಯೇ, “ಯಾ ಅಲ್ಲಾಹ್… ನೀನು ಈಗ… ಇಲ್ಲಿ” ಎಂದು ಹಾಮದಾಕ ಆಶ್ಚರ್ಯ ವ್ಯಕ್ತಪಡಿಸಿದ.
ನನಗರಿವಿಲ್ಲದಂತೆ ನಾವಿಬ್ಬರು ಪರಸ್ಪರ ಆಲಿಂಗಿಸಿಕೊಂಡೆವು. ಹಾಗೇ ಅಲ್ಲೇ ಇದ್ದ ಹಳೆಯ ಮರದ ಕುರ್ಚಿಯಲ್ಲಿ ಕುಳಿತುಕೊಂಡು ಮಾತಿಗಿಳಿದೆವು. ಹಾಮದಾಕನ ಆರೋಗ್ಯ ಹದಗೆಟ್ಟಿತ್ತು. ಹಾಗಾಗಿ ಹೆಚ್ಚು ನಡೆಯಲಿಕ್ಕೆ ಆಗುತ್ತಿರಲಿಲ್ಲ ಎಂದು ಆತನ ಮಾತಿನಿಂದ ಅರಿತುಕೊಂಡೆ.
ನನ್ನ ಹಾಗೆ ಹಾಮದಾಕ ಕೂಡ ಸಣ್ಣ ಪ್ರಾಯದಲ್ಲೇ ಊರು ಬಿಟ್ಟಿದ್ದ. ಅಂದರೆ, ಮದುವೆಯಾಗಿ ಹೆಂಡತಿಯ ಊರಲ್ಲೇ ನೆಲೆಸಿದ. ಆತ ಅಪರೂಪಕ್ಕೊಮ್ಮೆ ಊರಿಗೆ ಬರುತ್ತಿದ್ದರೂ ನನಗೆ ಮಾತ್ರ ಮುಖಾಮುಖಿಯಾಗುವ ಅವಕಾಶ ಸಿಕ್ಕಿರಲಿಲ್ಲ.
“ಏನು, ನಿನ್ನ ಕಥೆ… ಇಷ್ಟರವರೆಗೆ ಎಲ್ಲಿದ್ದೀ? ಯಾವಾಗ ಊರಿಗೆ ಬಂದದ್ದು?”-ಹಾಮದಾಕ ಪ್ರಶ್ನಿಸಿದ.
ನಾನು ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ವಿವರಿಸಿ, ನಿನ್ನೆ ಸಂಜೆಯಷ್ಟೇ ಊರಿಗೆ ಬಂದೆ ಎಂದು ನಿಟ್ಟುಸಿರು ಬಿಟ್ಟೆ. ಸುದೀರ್ಘ ಮಾತುಕತೆಯ ಮಧ್ಯೆ ಎರಡು ಬಾರಿ ಚಹಾ, ಲಘು ತಿಂಡಿಯ ಉಪಚಾರವೂ ನಡೆಯಿತು. ನಿಯಾಝ್ ಮತ್ತು ಹೈದರ್ ಮನೆಯ ಒಳಗೂ ಹೊರಗೂ ಹೋಗಿ ಬರುತ್ತಿದ್ದರು.
“ಈ ನೆಲದ ನೆನಪು ಇದೆಯಲ್ಲ. ಅದನ್ನು ವಿವರಿಸಿ ಹೇಳಲಾಗದು. ಕಳೆದೊಂದು ತಿಂಗಳಿನಿಂದ ನನಗೆ ನನ್ನೂರಿನ ನೆನಪು ಬಲವಾಗಿ ಕಾಡುತ್ತಿತ್ತು. ನಿತ್ಯ ಬೀಡಿ ಸೇದುವವ ಬೀಡಿ ಸೇದುವುದನ್ನು ಬಿಟ್ಟಾಗ ಹುಚ್ಚನಂತೆ ವರ್ತಿಸುತ್ತಾನಲ್ಲ… ಹಾಗಾಗಿತ್ತು ನನ್ನ ಪರಿಸ್ಥಿತಿ. ಊಟ, ತಿಂಡಿ, ನಿದ್ದೆಯಲ್ಲೂ ನನಗೆ ಊರು, ಊರಿನ ಜನರ ನೆನಪಾಗುತ್ತಿತ್ತು. ಅದನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದಾದಾಗ ಉಪಾಯವಿಲ್ಲದೆ ಈ ಕಡೆ ಬರಲು ಮನಸ್ಸು ಮಾಡಿದೆ. ಇನ್ನು ಇಲ್ಲೇ ಕೊನೆಯುಸಿರೆಳೆದು, ಇಲ್ಲೇ ಮಣ್ಣಾಗುವ ದೃಢ ನಿರ್ಧಾರದಿಂದ ಇತ್ತ ಬಂದೆ”
“ನಾನು ಅಷ್ಟೆ… ಶರ್ಫುದ್ದೀನ್… ಐದಾರು ತಿಂಗಳಿನಿಂದ ಈ ಊರಿನ ನೆನಪು ಬಲವಾಗಿ ಕಾಡತೊಡಗಿತು. ಒಮ್ಮೆ ಹೋಗಿ ಬರೋಣ ಅಂತ ಮನಸ್ಸು ಹೇಳತೊಡಗಿತು. ಹಾಗೇ ಬಂದವನಿಗೆ ಮರಳಿ ಹೋಗಲು ಮನಸ್ಸಿಲ್ಲ. ನಾನು ಊರು ಬಿಟ್ಟು ಹೋದ ಮೂರು ವರ್ಷದ ನಂತರ ನನ್ನ ಮದುವೆಯಾಯಿತು. ಅಲ್ಲಿ ನನಗೆ ಯಾವ ಕೆಲಸವೂ ಇರಲಿಲ್ಲ. ವರ್ಷಗಳು ಉರುಳುತ್ತಲೇ ನನಗೆ ಇಬ್ಬರು ಮಕ್ಕಳಾದವು. ಇನ್ನು ದುಡಿಯದಿರುವುದು ಸರಿಯಲ್ಲ ಅಂತ ಅನಿಸಿತು. ಹಾಗೇ ಹೆಂಡತಿಯ ಚಿನ್ನಾಭರಣ ಅಡವಿಟ್ಟು ಅಡ್ಡೂರು ಎಂಬ ಊರಿನಲ್ಲಿ ಇಟ್ಟಿಗೆ ವ್ಯಾಪಾರಕ್ಕಿಳಿದೆ. ಕೈಯಲ್ಲಿ ಕಾಸು ಕೂಡಿತು. ಅಲ್ಲೇ ನೆಲೆ ನಿಲ್ಲಲು ಬಯಸಿದೆ. ಮುಂದೆ ಅದೇ ನನ್ನೂರು ಆಯಿತು. ನನ್ನ ಮಾತಿಗೊಂದು ಬೆಲೆ ಸಿಕ್ಕಿತು. ಮಸೀದಿಯ ಅಧ್ಯಕ್ಷ ಸ್ಥಾನ ಕೊಟ್ಟರು. ಸತತ 35 ವರ್ಷ ಒಂದೇ ಮಸೀದಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದೆ. ಮಕ್ಕಳು ನನ್ನ ವ್ಯವಹಾರ ಮುಂದುವರಿಸಿದರು. ಮೊಮ್ಮಕ್ಕಳೂ ಆದರು. ಒಬ್ಬ ಹೆಣ್ಮಗಳನ್ನು ತವರೂರಿನ ನೆನಪಿಗಿರಲಿ ಅಂತ ಇಲ್ಲಿಗೆ ಮದುವೆ ಮಾಡಿಕೊಟ್ಟಿದ್ದೆ. ಪ್ರಾಯ ಮೀರುತ್ತಲೇ ಊರು ನೆನಪಾಗಿ ಇದೀಗ ಮಗಳ ಮನೆಯಲ್ಲಿ ಕಾಲ ಕಳೆಯುತ್ತಿದ್ದೇನೆ” ಎಂದು ನಕ್ಕ. ಹುಳತಿಂದ ಕರ್ರಗಿನ ಅಳಿದುಳಿದ ಹಲ್ಲು ಎದ್ದು ಕಾಣುತ್ತಿತ್ತು.
“ಕೈ ತೊಳೆಯಿರಿ” ಎಂಬ ಶಬ್ದ ಕೇಳಿ ಬಂದ ಕಡೆ ತಿರುಗಿದೆ.
“ಇವ ನನ್ನ ಅಳಿಯ. ಇದೇ ಊರಿನವ. ನನ್ನ ಮಗಳನ್ನು ಈ ಊರಿಗೆ ಮದುವೆ ಮಾಡಿಕೊಟ್ಟ ಕಾರಣ ಈ ಇಳಿವಯಸ್ಸಿನಲ್ಲಿ ನನಗೆ ಅನುಕೂಲವಾಯಿತು” ಎಂದು ಹಾಮದಾಕ ಹೇಳಿದ.
“ನಾನು ಆಗ ಬಂದಿದ್ದೆ. ನಿಮ್ಮ ಮಾತಿಗೆ ತೊಂದರೆ ಕೊಡುವುದು ಬೇಡಾಂತ ಭಾವಿಸಿ ಒಳಗಿದ್ದೆ” ಎನ್ನುತ್ತಾ ಆತ ನಕ್ಕ.
ಹಾಗೇ ಊಟ ಮುಗಿಸಿ ಅಂಗಳ ಇಳಿಯುವಾಗ “ಇಬ್ರಾಹಿಂ” ಎದುರು ನಿಂತಿದ್ದ.
“ನಿಮ್ಮನ್ನು ಕಾಣದಾದಾಗ ಹೆಂಡತಿ ಚಡಪಡಿಸತೊಡಗಿದಳು. ಹಾಗಾಗಿ ನಾನು ಅಂಗಳವಿಳಿದೆ. ವಿಚಾರಿಸಿದಾಗ ನೀವು ಇಲ್ಲಿರುವ ಸಂಗತಿ ತಿಳಿಯಿತು” ಎಂದ.
“ಹೈದರ್, ನಿಯಾಝ್ ಇರುವಾಗ ನಿಮಗೆಂತ ಹೆದರಿಕೆ” ಎನ್ನುತ್ತಾ ನಾನು ನಕ್ಕು ಹೆಜ್ಜೆ ಹಾಕತೊಡಗಿದೆ. ಸಾಧ್ಯವಾದರೆ, ಮನೆಗೆ ಬರಲು ಮರೆಯಬೇಡ ಎಂದೆ. ಅದು ಹಾಮದಾಕನಿಗೆ ಕೇಳಿಸಿತೋ, ಇಲ್ಲವೋ… ನಂಗೆ ಗೊತ್ತಾಗಲಿಲ್ಲ.
***

LEAVE A REPLY

Please enter your comment!
Please enter your name here