ಲೇಖಕರು:ಸಂಜಯ್ ಕೆ.ವಿ.ಎಸ್

ಸಮ್ಮಿಶ್ರ ಸರ್ಕಾರದ ವಿರುದ್ಧ ಮೊದಲ ಬೃಹತ್ ಪ್ರತಿಭಟನೆ ವಿದ್ಯಾರ್ಥಿಗಳಿಂದ ಎದುರಾಗಿದೆ. ವಾಸ್ತವದಲ್ಲಿ ಸಮ್ಮಿಶ್ರ ಸರ್ಕಾರದ ಎರಡೂ ಸಹಭಾಗಿ ಪಕ್ಷಗಳ ಈಗಿನ ವಿರೋಧಿಯಾದ ಬಿಜೆಪಿ ಸರ್ಕಾರವು ಜಾರಿಗೆ ತಂದಿದ್ದ ನೀತಿಯೊಂದು ಈ ಪ್ರತಿಭಟನೆಗೆ ಕಾರಣವಾಗಿದೆ. ಆದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಈ ವಿಚಾರದಲ್ಲಿ ತಾವು ಬಿಜೆಪಿಗಿಂತ ಭಿನ್ನ ಎಂದು ಸಾಬೀತು ಮಾಡುವರೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ. ಈ ದೇಶದ ಕೃಷಿಗೆ ಪೂರಕವಾದ ಹಲವು ವಿಭಾಗಗಳು ಖಾಸಗಿಯವರ ತೆಕ್ಕೆಗೆ ಹೋಗಿ ಬಹಳ ಕಾಲವಾಗಿದೆ. ಕೃಷಿ ಶಿಕ್ಷಣ ಹಾಗೂ ಸಂಶೋಧನೆಯ ಹಲವು ವಿಭಾಗಗಳೂ ಪರೋಕ್ಷವಾಗಿ ಖಾಸಗಿಯವರ ನಿಯಂತ್ರಣದಲ್ಲಿದೆ. ಕೃಷಿ ಶಿಕ್ಷಣವನ್ನು ನೀಡುವ ಸಂಸ್ಥೆಗಳನ್ನೂ ಖಾಸಗಿಯವರ ಲಾಭಕೋರತನದ ತೆಕ್ಕೆಗೆ ನೀಡುವ ಪ್ರಯತ್ನಗಳೂ ಆರಂಭವಾಗಿದೆ. ಕರ್ನಾಟಕದಲ್ಲಿ 2009ರಲ್ಲಿ ಬಿಜೆಪಿ ಸರ್ಕಾರವು ತಂದ ತಿದ್ದುಪಡಿಯು ಅದನ್ನು ಕಾನೂನುಬದ್ಧಗೊಳಿಸಿತು. ಅದರ ಪರಿಣಾಮಗಳು ಈಗ ಎದ್ದು ಕಾಣಲಾರಂಭಿಸಿರುವುದರಿಂದ, ಇದರ ವಿರುದ್ಧ ರಾಜ್ಯದ ಎಲ್ಲಾ ಕೃಷಿ ವಿದ್ಯಾರ್ಥಿಗಳು ಕಳೆದ ಹತ್ತು ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ.
ರಾಜ್ಯದಲ್ಲಿ 1963ರ ಕೃಷಿ ವಿಶ್ವವಿದ್ಯಾಲಯಗಳ ಕಾಯ್ದೆಯ ಮೂಲಕ ಅಸ್ತಿತ್ವಕ್ಕೆ ಬಂದ ಬೆಂಗಳೂರು, ಧಾರವಾಡ, ರಾಯಚೂರು, ಶಿವಮೊಗ್ಗ, ಬಾಗಲಕೋಟೆ, ಬೀದರ್ ಕೃಷಿ ಮತ್ತು ಪಶುಸಂಗೋಪನೆಯ ವಿಶ್ವವಿದ್ಯಾಲಯಗಳು ಹಾಗೂ ವಿವಿಧ ಜಿಲ್ಲೆಗಳಲ್ಲಿರುವ ಅವುಗಳ ವಿಸ್ತರಣಾ ಕೇಂದ್ರಗಳು ರಾಜ್ಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿವೆ. ಲಕ್ಷಾಂತರ ರೈತರ, ಬಡವರ ಮಕ್ಕಳು ಇದರ ಉಪಯೋಗವನ್ನು ಪಡೆದಿದ್ದಾರೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ (ಐ.ಸಿ.ಎ.ಆರ್.) ಅಡಿಯಲ್ಲಿ ಕಾರ್ಯ ನಿರ್ವಹಿಸುವ ಇಂತಹ ಎಲ್ಲಾ ಸಂಸ್ಥೆಗಳು/ವಿಶ್ವವಿದ್ಯಾಲಯಗಳಲ್ಲಿಯೆ ಕರ್ನಾಟಕದ ಕೃಷಿ ವಿಶ್ವವಿದ್ಯಾಲಯಗಳು ಶಿಕ್ಷಣ ಮತ್ತು ಸಂಶೋಧನೆಗೆ ಹೆಸರುವಾಸಿಯಾಗಿವೆ.
ಆದರೆ ರಾಜ್ಯ ಸರ್ಕಾರವು 2009ರಲ್ಲಿ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತಂದು ಮೊದಲ ಬಾರಿಗೆ ಖಾಸಗಿ ಕೃಷಿ ಕಾಲೇಜುಗಳನ್ನು ಸ್ಥಾಪಿಸಲು ಅನುಮತಿ ನೀಡಿತು. ಇದರ ಪರಿಣಾಮವಾಗಿ ಸದ್ಯ ರಾಜ್ಯದಲ್ಲಿ ಹತ್ತಕ್ಕೂ ಹೆಚ್ಚು ಖಾಸಗಿ ಕೃಷಿ ಕಾಲೇಜುಗಳು ತಲೆ ಎತ್ತಿ ನಿಂತಿವೆ. ಲಾಭವನ್ನೇ ಉದ್ದೇಶ ಮಾಡಿಕೊಂಡಿರುವ ಈ ಖಾಸಗಿ ಕೃಷಿ ಕಾಲೇಜುಗಳು ಐ.ಸಿ.ಎ.ಆರ್.ನ ನಿಯಮಗಳನ್ನು ಪಾಲಿಸುತ್ತಿಲ್ಲ. ಐ.ಸಿ.ಎ.ಆರ್. ನಿಯಮದ ಪ್ರಕಾರ ಕೃಷಿ ಕಾಲೇಜುಗಳನ್ನು ಪ್ರಾರಂಭಿಸಲು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಕನಿಷ್ಠ 75 ಎಕರೆ ಭೂಮಿ ಇರಬೇಕು. ಆದರೆ ಯಾವ ಖಾಸಗಿ ಕೃಷಿ ಕಾಲೇಜುಗಳು ಇಷ್ಟು ಭೂಮಿಯನ್ನು ಹೊಂದಿಲ್ಲ ಮತ್ತು ನುರಿತ ಶಿಕ್ಷಕರಿಲ್ಲ, ಸಮರ್ಪಕ ಪ್ರಯೋಗಾಲಯಗಳಿಲ್ಲ, ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಗೆ ಮಿತಿ ಇಲ್ಲ, ಐ.ಸಿ.ಎ.ಆರ್.ಇಂದ ಮಾನ್ಯತೆ ಹೊಂದಿಲ್ಲ, ಅನಿಯಮಿತ ಶುಲ್ಕಗಳು, ಗುಣಮಟ್ಟವನ್ನು ಕಾಯ್ದುಕೊಂಡಿಲ್ಲ, ಮೂಲಭೂತ ಸೌಕರ್ಯಗಳಿಲ್ಲ.ಸರ್ಕಾರಿ ಕೃಷಿ ವಿ.ವಿ.ಯ ವಿದ್ಯಾರ್ಥಿಗಳು ಸಿಇಟಿ ರ಼್ಯಾಂಕ್ ಆಧಾರದ ಮೇಲೆ ಪ್ರವೇಶವನ್ನು ಪಡೆದಿರುತ್ತಾರೆ. ಆದರೆ ಈ ಖಾಸಗಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಲು ಸಿಇಟಿಯ ಅಗತ್ಯ ಇಲ್ಲ. ಕೇವಲ ಅವರು ಕೇಳಿದಷ್ಟು ಡೊನೇಷನ್ ಕಟ್ಟಿದರೆ ಸಾಕು.

ಈ ಖಾಸಗಿ ಕೃಷಿ ಕಾಲೇಜುಗಳು ಯಾವ ಮಟ್ಟಕ್ಕೆ ಬೆಳೆದು ನಿಂತಿದೆ ಅಂದರೆ, ಸುಮಾರು ಐದು ಸರ್ಕಾರಿ ಕಾಲೇಜುಗಳಲ್ಲಿರುವಷ್ಟು ವಿದ್ಯಾರ್ಥಿಗಳನ್ನು ದೊಡ್ಡಬಳ್ಳಾಪುರದ ಬಳಿಯ ರೈಟೆಕ್ ಎಂಬ ಒಂದೇ ಒಂದು ಖಾಸಗಿ ಕಾಲೇಜು ಹೊಂದಿದೆ. ಐ.ಸಿ.ಎ.ಆರ್. ಮತ್ತು ಕೃಷಿ ವಿವಿಗಳ ಅಫಿಲಿಯೇಷನ್ ಪಡೆಯದೆ ನೀಡಲಾಗುತ್ತಿರುವ ಇವರ ಪದವಿಗಳನ್ನು ಕೃಷಿ ಇಲಾಖೆಯು ಯಾವ ಹುದ್ದೆಗಳಿಗೂ ಪರಿಗಣಿಸುವಂತಿಲ್ಲ. ಈ ರೀತಿ ಮಾನ್ಯತೆ ಹೊಂದಿರದ ಪದವಿ ಪತ್ರಗಳ ವಿರುದ್ಧ ಅಲ್ಲಿನ ವಿದ್ಯಾರ್ಥಿಗಳು ಮತ್ತು ಪೋಷಕರು ದೂರುಗಳನ್ನು ದಾಖಲಿಸಿದ್ದಾರೆ. ಇದು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಖಾಸಗಿಯವರು ನಡೆಸುತ್ತಿರುವ ಚೆಲ್ಲಾಟವಾಗಿದೆ.

ಈ ಎಲ್ಲ ಕಾರಣಗಳಿಂದಾಗಿ ಖಾಸಗಿ ಕೃಷಿ ಕಾಲೇಜುಗಳು ಬೆಂಗಳೂರು ಕೃಷಿ ವಿಶ್ವವಿದ್ಯಾಲಯಕ್ಕೆ ಅಫಿಲಿಯೇಷನ್ ನೀಡುವಂತೆ ಒತ್ತಡ ತರುತ್ತಿದ್ದಾರೆ. ಆದರೆ ಈ ಅನ್ಯಾಯದ ವಿರುದ್ಧ ವಿದ್ಯಾರ್ಥಿಗಳು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. 2016ರಲ್ಲಿ ಜಿಕೆವಿಕೆಯಲ್ಲಿ ನಡೆದ ಕೃಷಿ ವಿದ್ಯಾರ್ಥಿಗಳ ಹೋರಾಟದ ಸ್ಥಳಕ್ಕೆ ಬಂದ ಹೆಚ್.ಡಿ.ಕುಮಾರಸ್ವಾಮಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಖಾಸಗಿ ಕೃಷಿ ಕಾಲೇಜುಗಳನ್ನು ನಿಷೇಧಿಸುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತೇನೆ ಎಂದು ಹೇಳಿದ್ದರು. ಅಂದಿನ ಕೃಷಿ ಮಂತ್ರಿಗಳಾದ ಕೃಷ್ಣ ಭೈರೇಗೌಡರು ಸಹ ಖಾಸಗಿ ಕೃಷಿ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸಮಿತಿ ರಚಿಸಿದ್ದರು. ಆದರೆ ಆ ಸಮಿತಿ ಕಾರ್ಯನಿರ್ವಹಿಸಲೇ ಇಲ್ಲ. ಯಾವ ಕ್ರಮಗಳನ್ನೂ ಕೈಗೊಳ್ಳಲಿಲ್ಲ. ಹಾಗಾಗಿ ಜಾರಿಗೆ ತಂದಿದ್ದು ಬಿಜೆಪಿ ಸರ್ಕಾರವಾದರೂ, ಉಳಿದ ಪಕ್ಷಗಳ ನೀತಿಯೂ ಭಿನ್ನವಾಗಿಲ್ಲ ಎಂಬ ಸಂದೇಹ ಸಹಜವಾಗಿ ಬಂದಿದೆ.

ಖಾಸಗಿ ಕಾಲೇಜುಗಳು ಕೃಷಿ ವಿಶ್ವವಿದ್ಯಾಲಯದ ಅಫಿಲಿಯೇಷನ್ ಕೇಳುತ್ತಿರುವುದರಿಂದ ಈಗ ಮತ್ತೆ ಕಳೆದ ಹತ್ತು ದಿನಗಳಿಂದ ಕೃಷಿ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ರಾಜ್ಯದಲ್ಲಿ ಹೋರಾಟ ಶುರು ಮಾಡಿದ್ದಾರೆ. ಜೂನ್ 19ರಂದು ಸಾವಿರಾರು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದರು. ಹೋರಾಟದ ಸ್ಥಳಕ್ಕೆ ಬಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಮಸ್ಯೆಯನ್ನು ಬಗೆಹರಿಸುವ ಮಾತನಾಡಿ, ವಿದ್ಯಾರ್ಥಿಗಳ ಸಭೆಯನ್ನು ಕರೆದರು. ಮುಖ್ಯಮಂತ್ರಿಗಳು, ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿದ್ಯಾರ್ಥಿ ಮುಖಂಡರ ಜೊತೆ ಸಭೆಯು ನಡೆಯಿತು. ಸಭೆಯಲ್ಲಿ ವಿದ್ಯಾರ್ಥಿಗಳು ಮುಖ್ಯವಾಗಿ 2009ರ ಕೃಷಿ ಕಾಲೇಜು ಕಾಯ್ದೆ ತಿದ್ದುಪಡಿಯನ್ನು ರದ್ದು ಮಾಡಬೇಕು, ಖಾಸಗಿ ಕಾಲೇಜುಗಳಿಗೆ ಕೃಷಿ ವಿಶ್ವವಿದ್ಯಾಲಯದ ಅಪಿಲಿಯೇಷನ್ ನೀಡಬಾರದು, ರೈಟೆಕ್ ಖಾಸಗಿ ಕಾಲೇಜನ್ನು ಮುಚ್ಚಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಸರ್ಕಾರವು ಇದನ್ನೆಲ್ಲಾ ಮಾಡಲು ಅಧಿವೇಶನ ನಡೆಯುವವರೆಗೂ ಸಮಯ ಬೇಕು ಎಂದು ಹೇಳಿದ್ದಾರೆ. ಇದು ಸರ್ಕಾರದ ಕಣ್ಣೊರೆಸುವ ತಂತ್ರ ಎಂದು ಅರಿತ ವಿದ್ಯಾರ್ಥಿಗಳು ಹೋರಾಟವನ್ನು ನಿಲ್ಲಿಸದೆ ಮುಂದುವರೆಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಶಿಕ್ಷಣದ ಖಾಸಗಿಕರಣದ ವಿರುದ್ಧ ಕೃಷಿ ವಿದ್ಯಾರ್ಥಿಗಳು ದಿಟ್ಟ ಹೋರಾಟ ಮಾಡುತ್ತಿರುವುದು ರಾಜ್ಯಕ್ಕೆ ಮಾದರಿ ಆಗಿದೆ. ಈಗಿನ ವಿದ್ಯಾರ್ಥಿಗಳಿಗೆ ಸಾಮಾಜಿಕ ಕಾಳಜಿ ಇಲ್ಲ ಎಂಬ ತಿಳುವಳಿಕೆಯನ್ನು ಪ್ರಶ್ನಿಸುವಂತೆ ಮಾಡುತ್ತಿದೆ. ನಾಡಿನ ರೈತ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಕರ ಸಂಘಟನೆಗಳು ಈ ಹೋರಾಟವನ್ನು ಬೆಂಬಲಿಸಿ ನಿಂತಿದ್ದಾರೆ. ಹೊಸ ಸರ್ಕಾರವು ಕೂಡ ಶಿಕ್ಷಣದ ಖಾಸಗಿಕರಣದ ವಿರುದ್ಧ, ಖಾಸಗಿ ಅವರ ಲಾಬಿಗೆ ಮಣಿಯದೆ ತನ್ನ ದಿಟ್ಟತೆಯನ್ನು ತೋರಬೇಕಿದೆ.

ಕೃಷಿ ವಿದ್ಯಾರ್ಥಿಗಳ ಹೋರಾಟವು ಈ ಸಂದರ್ಭದ ಅತೀ ಮಹತ್ವದ ಬೆಳವಣಿಗೆ
ಕೃಷಿ ವಿಶ್ವವಿದ್ಯಾಲಯದೊಳಗೆ ಈಗಾಗಲೇ ಖಾಸಗಿಯವರ ಪ್ರವೇಶ ಸಾಕಷ್ಟು ಆಗಿದೆ. ಅಲ್ಲಿನ ಸಂಶೋಧನೆಗಳು ಈ ನಾಡಿಗೆ ಏನು ಬೇಕು ಎನ್ನುವುದಕ್ಕಿಂತ ಬಹುರಾಷ್ಟ್ರೀಯ ಕಂಪನಿಗಳಿಗೆ ಏನು ಬೇಕು ಎಂಬುದು ಆಗಿದೆ. ದೇಹ ಮಾತ್ರ ಸರ್ಕಾರದ್ದು, ಒಳಗಿನ ಎಲ್ಲಾ ಅಂಗಗಳು ಕಾರ್ಪೋರೇಟ್‍ಗಳದ್ದು ಎಂಬಂತಾಗಿದೆ ಇಂದಿನ ಸ್ಥಿತಿ. ಆದರೂ, ಈ ವಿದ್ಯಾರ್ಥಿ ಆಂದೋಲನಕ್ಕೆ ಒಂದು ಮಹತ್ವವಿದೆ.
ಟೌನ್‍ಹಾಲ್‍ನಿಂದ ಫ್ರೀಡಂ ಪಾರ್ಕ್‍ಗೆ ಈ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದ ಅದೇ ದಿನ, ದಿನಪತ್ರಿಕೆಗಳಲ್ಲಿ ಒಂದು ಸುದ್ದಿಯಿತ್ತು. ಖಾಸಗಿ ವೈದ್ಯಕೀಯ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಎಂ.ಆರ್.ಜಯರಾಂ ಅವರು ಇನ್ನು ಮುಂದೆ ಸರ್ಕಾರವು ಮೆಡಿಕಲ್ ಕಾಲೇಜುಗಳನ್ನು ತೆಗೆಯಬಾರದೆಂದು ಒತ್ತಾಯಿಸಿದ ಸುದ್ದಿ ಅದು. ಇನ್ನೂ ಹೆಚ್ಚು ವೈದ್ಯಕೀಯ ಪದವೀಧರರಾದರೆ ಕಷ್ಟ ಎಂಬ ಅವರ ಅನಿಸಿಕೆಗೆ ಅರ್ಥವೇ ಇಲ್ಲ; ಏಕೆಂದರೆ, ಈಗಲೂ ನಮ್ಮ ದೇಶಕ್ಕೆ ಅಗತ್ಯವಿರುವಷ್ಟು ಸಂಖ್ಯೆಯ ವೈದ್ಯಕೀಯ ಪದವೀಧರರು ತಯಾರಾಗಿಲ್ಲ. ಆದರೆ, ಹೆಚ್ಚು ಸರ್ಕಾರೀ ಕಾಲೇಜುಗಳು ಶುರುವಾದರೆ, ಖಾಸಗಿ ಲಾಬಿಗೆ ತೊಂದರೆಯಾಗುತ್ತದೆ. ಇದನ್ನು ಅರ್ಥ ಮಾಡಿಕೊಂಡು ದಶಕಗಳ ಹಿಂದೆಯೇ ವಿದ್ಯಾರ್ಥಿಗಳು ಭಾರೀ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಸಿದ್ದರೆ, ಈ ಪರಿಸ್ಥಿತಿ ಏರ್ಪಡುತ್ತಿರಲಿಲ್ಲ.
ಆದರೆ ಕೃಷಿ ವಿದ್ಯಾರ್ಥಿಗಳು ಅಂತಹ ದೊಡ್ಡ ಪ್ರತಿಭಟನೆ ನಡೆಸಲು ಶುರು ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳ ಈ ಪ್ರತಿಭಟನೆಗೆ ಪರೋಕ್ಷವಾಗಿ ಕೃಷಿ ಅಧ್ಯಾಪಕರು ಮತ್ತು ಇತರ ಸಿಬ್ಬಂದಿ ಸಹಾ ಕೈ ಜೋಡಿಸಿದ್ದಾರೆ. ಇಂತಹ ಐಕ್ಯತೆ ಇತ್ತೀಚಿನ ದಿನಗಳಲ್ಲಿ ಕಂಡುಬಂದಿರಲಿಲ್ಲ. ಈ ಹೋರಾಟವು ಕಾನೂನು ತಿದ್ದುಪಡಿಯ ತನಕ ಮಾತ್ರ ನಡೆಯದೇ, ಕೃಷಿ ಕ್ಷೇತ್ರದ ಮೇಲಿನ ಖಾಸಗಿಯವರ ಹಿಡಿತವನ್ನು ತಪ್ಪಿಸುವತನಕ ಮುಂದುವರೆದರೆ ಅದೊಂದು ಐತಿಹಾಸಿಕ ನಡೆಯಾಗಿರುತ್ತದೆ.
ಕೃಷಿ ಶಿಕ್ಷಣದ ಬಗ್ಗೆಯೇ ಹೇಳುವುದಾದರೆ- ರಾಜ್ಯದಲ್ಲಿ ಸದ್ಯ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಕೃಷಿ ವಿವಿಗಳ ಅಡಿಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಅಥವಾ ಸಂಶೋಧನಾ ಕೇಂದ್ರಗಳಿದ್ದು ಅಲ್ಲಿ ನೂರಾರು ಎಕರೆಯಷ್ಟು ಭೂಮಿಯಿದ್ದು, ಮೂಲಭೂತ ಸೌಕರ್ಯಗಳು ಮತ್ತು ವಿಜ್ಞಾನಿಗಳು, ಪ್ರಾಧ್ಯಾಪಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರವು ಇದರ ಸದುಪಯೋಗಪಡಿಸಿಕೊಂಡು ಜಿಲ್ಲೆಗೊಂದು ಹೊಸ ಕೃಷಿ ಕಾಲೇಜುಗಳನ್ನು ಸ್ಥಾಪಿಸಿ ಹೆಚ್ಚಿನ ಬಡ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಿ. ಶಿಕ್ಷಣದ ಗುಣಮಟ್ಟವನ್ನು ಕಾಪಾಡುವುದಲ್ಲದೆ ಸಾರ್ವತ್ರಿಕ ಶಿಕ್ಷಣವನ್ನು ಎತ್ತಿ ಹಿಡಿಯಲಿ.

ಕಾಂಗ್ರೆಸ್ – ಜೆಡಿಎಸ್‍ಗಳು ಬಿಜೆಪಿಗಿಂತ ಭಿನ್ನವೇ?
ಹೌದು, ಬಿಜೆಪಿ ಪಕ್ಷವು ಖಾಸಗೀಕರಣದ ಪರ. ಹೆಚ್ಚೆಚ್ಚು ಕಾರ್ಪೋರೇಟ್ ಸಂಸ್ಥೆಗಳ ಕೈಗೆ ದೇಶವನ್ನೊಪ್ಪಿಸುವುದು ಪ್ರಧಾನಿ ಮೋದಿಯವರ ಸಿದ್ಧಾಂತದ ಭಾಗವೇ ಆಗಿದೆ. ಮೋದಿಯವರು ದೇಶಪ್ರೇಮದ ಮಾತಾಡುತ್ತಲೇ ಇಡೀ ದೇಶವನ್ನು ಕಾರ್ಪೋರೇಟ್ ಸಂಸ್ಥೆಗಳ ಪಾಲು ಮಾಡುತ್ತಿರುವುದನ್ನು ಉಳಿದ ಪಕ್ಷಗಳು ವಿರೋಧಿಸುವ ಮಾತನಾಡುತ್ತಿವೆ. ಆದರೆ, ಅದನ್ನು ಸಾಬೀತು ಪಡಿಸಲು ಇದೊಂದು ಅವಕಾಶ. ಆ ಮೂಲಕ ತಮ್ಮದೇ ಹಿಂದಿನ ತಪ್ಪುಗಳನ್ನು ತಿದ್ದಿಕೊಳ್ಳಲೂ ಆಗುತ್ತದೆ. ಏಕೆಂದರೆ, ಖಾಸಗಿ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡುವ ಕಾನೂನು ತಿದ್ದುಪಡಿಯ ಪ್ರಸ್ತಾಪ ಮೊದಲು ಹೊರಟಿದ್ದೇ ಕುಮಾರಸ್ವಾಮಿಯವರು ಮೊದಲ ಸಾರಿ ಮುಖ್ಯಮಂತ್ರಿಯಾಗಿದ್ದಾಗ. 2007ರಲ್ಲಿ ಅವರ ಕ್ಯಾಬಿನೆಟ್ಟೇ ಇದನ್ನು ಆರಂಭಿಸಿದ್ದು. ಜಾರಿ ಮಾಡಿದವರು ಬಿಜೆಪಿಯವರು, ಮುಂದುವರೆಸಿಕೊಂಡು ಹೋದವರು ಕಾಂಗ್ರೆಸ್ಸಿನವರು.
ಈಗ ಸಮ್ಮಿಶ್ರ ಸರ್ಕಾರವು ವಿದ್ಯಾರ್ಥಿಗಳ ಹೋರಾಟದ ಪರ ನಿಂತರೆ ಮಾತ್ರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೋದಿಯವರ ಮೋಸದ ನೀತಿಯ ವಿರುದ್ಧ ನಿಜವಾಗಲೂ ಇದ್ದಾರೆ ಎಂದು ನಂಬಬಹುದು.

ಮಂಡ್ಯದಲ್ಲಿ ಸಂಘಟನೆಗಳ ಬೆಂಬಲ
ಬೆಂಗಳೂರಿನ ಜಿಕೆವಿಕೆ ಕ್ಯಾಂಪಸ್ಸಿನಲ್ಲಿ ನಡೆಯುತ್ತಿರುವ ಮಹತ್ವದ ಹೋರಾಟವು ರಾಜ್ಯದೆಲ್ಲೆಡೆ ನಡೆಯುತ್ತಿರುವ ಕೃಷಿ ವಿದ್ಯಾರ್ಥಿಗಳ ಆಂದೋಲನದ ಭಾಗವಾಗಿದೆ. ಇದೇ ವಿ.ವಿ.ಯ ವಿಸ್ತರಣಾ ಕೇಂದ್ರವಾಗಿರುವ ಮಂಡ್ಯದ ವಿ.ಸಿ.ಫಾರಂನ ವಿದ್ಯಾರ್ಥಿಗಳ ಮನವಿಗೆ ಮಂಡ್ಯ ಜಿಲ್ಲೆಯ ವಿವಿಧ ಸಂಘಟನೆಗಳು ಈಗಾಗಲೇ ಸ್ಪಂದಿಸಿ, ಒಂದು ಸುತ್ತಿನ ಸಭೆಯನ್ನೂ ನಡೆಸಿವೆ. ಸದ್ಯದಲ್ಲೇ ಅಲ್ಲಿ ರೈತಸಂಘ, ಜನಶಕ್ತಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಸೇರಿದಂತೆ ಹಲವರು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತು ಕಾರ್ಯಕ್ರಮ ರೂಪಿಸುವ ಕುರಿತು ಚರ್ಚೆ ನಡೆಸಿದ್ದಾರೆ. ಖಾಸಗೀಕರಣದ ವಿರುದ್ಧದ ಹೋರಾಟ ಈ ರೀತಿಯ ತಿರುವು ಪಡೆದುಕೊಳ್ಳುತ್ತಿರುವುದು ವಿಶೇಷ.

LEAVE A REPLY

Please enter your comment!
Please enter your name here