(ಕಥೆ)

  • ಹೇಮಾ ಮನೋಹರ್ ರಾವ್ ತೀರ್ಥಹಳ್ಳಿ

ಸರಳಾ ಊಟಕ್ಕೆಬ್ಬಿಸಿದಾಗಲೇ ನಿದ್ದೆಯಿಂದೆಚ್ಚರವಾಗಿದ್ದು… ಆಕೆ ಕರೆದರೂ ತಟಕ್ಕನೇ ಏಳಲಾರದ ಆಲಸ್ಯ, ಆಯಾಸ… ಬೆಳಗಿನ `ನಾಷ್ಟಾ’ಕ್ಕೆ ತಿಂದ ಚಪಾತಿ ಕರಗಿ ಹೊಟ್ಟೆ ಅದಾಗಲೇ ಚುರುಗುಟ್ಟುತ್ತಿತ್ತು. ಹಿಂದಿನ ದಿನ ರಾತ್ರಿ ನೋಡಿದ ಯಕ್ಷಗಾನ ಇನ್ನೂ ಕಣ್ಣ ಮುಂದೆ ಕುಣಿಯುವಂತಾದರೂ ಅದನ್ನು ನೋಡಿದ್ದಕ್ಕಿಂತಲೂ ಅದಕ್ಕಾಗಿ ಓಡಾಡಿದ ಸುತ್ತೇ ಅಧಿಕವಾಗಿತ್ತು. ಊರಿನ ಪ್ರತಿಷ್ಠಿತ ಮನೆತನದ ಜಮೀನುದಾರ ಅನ್ನುವುದಕ್ಕಿಂತಲೂ ಊರಿನ ನಾಲ್ಕು ಜನರೊಡನೆ ಬೆರೆತು ಅವರ ಕಷ್ಟ-ಸುಖಕ್ಕೆ ಸ್ಪಂದಿಸುತ್ತಿದ್ದುದರಿಂದ ಎಲ್ಲಿ ಏನು ನಡೆದರೂ ನಾನದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾದುದು ಅನಿವಾರ್ಯವಾಗಿತ್ತು. ಅದೂ ಅಲ್ಲದೆ ಗ್ರಾಮ ಪಂಚಾಯತ್ ಸದಸ್ಯ ಬೇರೆ ಆಗಿದ್ದೆನಲ್ಲಾ…

ನಮ್ಮೂರ ದೇವಸ್ಥಾನದ ಅಂಗಣದಲ್ಲೇ ಪ್ರಸಿದ್ಧ ಮೇಳಗಳ ಜನಪ್ರಿಯ ಕಲಾವಿದರ ಕೂಡುವಿಕೆಯಲ್ಲಿ `ವೀರ ಸಮರ ಸೇನ’ ಯಕ್ಷಗಾನ ಬಯಲಾಟ ಇಟ್ಟುಕೊಂಡಿದ್ದೆವು. ಆಧುನಿಕತೆಯ ಪ್ರತೀಕವೆನಿಸಿದ ಕೇಬಲ್ ಟಿ.ವಿ. ಡಿಟಿಎಚ್ ಆಂಟಿನಾದ ಮೂಲಕ ಮನೆ ಮನೆಗೆ ಕೊಂಡಿ ಹಾಕಿಸಿಕೊಂಡು ವರ್ಷಗಟ್ಟಲೆ ಹರಿದು ಬರುವ ಕನ್ನಡ-ಹಿಂದಿ ಧಾರಾವಾಹಿಗಳನ್ನೂ, ಸ್ಟಾರ್ ಟಿವಿ, ಝೀ ಟಿವಿ, ಕಲರ್ಸ್ ಮುಂತಾದ ಚಾನೆಲ್‍ಗಳಲ್ಲಿ ಪ್ರಕಟವಾಗುವ ಕಾರ್ಯಕ್ರಮಗಳನ್ನು ಕಣ್ಣು ಕೀಸದೆ ಮಂತ್ರ ಮುಗ್ಧರಾಗಿ ನೋಡುತ್ತಾ ಕೂರುವ ಇಂದಿನ ದಿನಗಳಲ್ಲೂ ನಮ್ಮ ಮಲೆನಾಡಿನ ಹಳ್ಳಿಗಳಲ್ಲಿ ಯಕ್ಷಗಾನ, ನಾಟಕ, ವಾರ್ಷಿಕೋತ್ಸವ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಅರ್ಥ ಕಳೆದುಕೊಳ್ಳದೆ ಜನಾಕರ್ಷಣೆಯ ಕೇಂದ್ರ ಬಿಂದುವಾಗಿರೋದು ಸಮಾಧಾನಕರ ಅಂಶ. ಆದರೆ ಯಕ್ಷಗಾನದ ಪ್ರಮುಖ ಹಿಮ್ಮೇಳಧಾರಿ ಮದ್ದಲೆಗಾರ ಬರ ಬೇಕಾಗಿದ್ದವ ಕಾರಣಾಂತರದಿಂದ ಗೈರು ಹಾಜರಾಗಿದ್ದ. ಜಮಾಯಿಸುತ್ತಿದ್ದ ಜನ ಸಮೂಹಕ್ಕೆ ನಿರಾಸೆಯಾಗಬಾರದೆಂಬ ಉದ್ದೇಶದಿಂದ ಸರಿರಾತ್ರಿ ಬೈಕಿನಲ್ಲಿ ಶೃಂಗೇರಿಗೆ ಹೋಗಿದ್ದು… ಬದಲೀ ಮದ್ದಲೆಗಾರನೊಬ್ಬನನ್ನು `ತಲಾಶ್’ ಮಾಡಿ ಆತನಿಗೆ ಆಕರ್ಷಕ ಮೊತ್ತದ ಸಂಭಾವನೆ ನೀಡುವ ಆಸೆ ತೋರಿಸಿ ಕರೆತಂದು ಯಕ್ಷಗಾನ ಶುರುಮಾಡಬೇಕಿದ್ದರೆ ನನ್ನ ಜೇಬು-ಮೈ ಎರಡೂ ಹುಡಿ ಹುಡಿಯಾಗಿತ್ತು. ಏನ್ಮಾಡೋದು… ಎಷ್ಟಾದರೂ ನಮ್ಮೂರಿನ ವಿಚಾರ… ನಾಲ್ಕು ಜನರ ನಡುವೆ ಅವಹೇಳನಕ್ಕೆ ಗುರಿಯಾಗಬಾರದಲ್ಲಾ… ಮರ್ಯಾದಿ ಪ್ರಶ್ನೆಯಾದ್ದರಿಂದ ಇದೆಲ್ಲಾ ನನ್ನ ಪಾಲಿಗೆ ಮಾಮೂಲಿ.

ಯಕ್ಷಗಾನ ಪ್ರಸಂಗ ರಸವತ್ತಾಗಿ ನೋಡುಗರಿಗೆ ಇಷ್ಟವಾದಾಗ ಪಟ್ಟ ಶ್ರಮ ಸಾರ್ಥಕವೆನಿಸಿತು.”ರ್ರೀ… ಇನ್ನೂ ಎದ್ವಿಲ್ವಾ ಗಂಟೆ ಒಂದೂವರೆ. ಮಿಂದು ಉಣ್ಣೋದ್ಯಾವಾಗ?” ಸರಳಾ ಎರಡನೇ ಬಾರಿ ಕರೆದಾಗ ವಿಧಿಯಿಲ್ಲದೆ ಮಂಚ ಬಿಟ್ಟೆದ್ದೆ. ಹೆಗಲಿಗೆ ಬೈರಾಸ್ ಹಾಕಿ ಬಚ್ಚಲು ಮನೆಯತ್ತ ನಡೆದಾಗ ಪಡಸಾಲೆ ಮೂಲೆಯಲ್ಲಿ ಸರಳಾ ಮುದುರಿ ಕೂತಿದ್ದು ನೋಡಿದೆ… ಪಕ್ಕದಲ್ಲಿ ಚಾಪೆ, ಕಂಬಳಿ ನೀರಿನ ಚೆಂಬು… ಸರಿ ಇವಳು ತಿಂಗಳ `ರಜೆ’ ತೆಗೆದಾಯ್ತು…! ಇಂದಿನ ವಿಜ್ಞಾನ ಯುಗದಲ್ಲೂ ಈ ರೀತಿಯ ಮಡಿ ಮೈಲಿಗೆಯನ್ನು ವಿದ್ಯಾವಂತರಾದರೂ ಆಚರಿಸಿಕೊಂಡು ಬರೋದು ಅರ್ಥಹೀನ… ಹಾಸ್ಯಾಸ್ಪದವಲ್ಲವೆ…? ಹೇಳಿ ಕೇಳಿ ಹಳ್ಳೀ ಮನೆ. ಯಾವತ್ತೂ ಕೈ ತುಂಬಾ ಕೆಲಸ ಮನೆ ಸಂಸಾರವೆಂದು ದಿನವಿಡೀ ದುಡಿಯುವ ಜೀವಕ್ಕೆ ಹೀಗಾದರೂ ತುಸು ವಿಶ್ರಾಂತಿ ದೊರೆಕೋದು ಒಳ್ಳೆಯದು ಅಂದುಕೊಂಡೆ.” ಎದುರುಗಡೆ ಬಾಗ್ಲು ಹಾಗೇ ಬಿಟ್ಟರಿದ್ಯಾ… ನೀನೊಬ್ಬ…! ನಾನಿರೋದು ಒಳ್ಗೆ ಅಡ್ಗೆಮನೇಲಿ… ಯಾರಾದ್ರೂ ಸೀದಾ ಹೊಕ್ರೂ ಗೊತ್ತಾಗೊಲ್ಲ…!” ಅಮ್ಮ ಗೊಣಗಾಡೋದು ಕೇಳಿಸಿತು. ಜೊತೆಗೆ ಬಾಗಿಲು`ದಡ್’ ಅನಿಸಿದ ಸದ್ದು… ಮೊದಲೆಲ್ಲಾ ನಮ್ಮಂತಾ ಹಳ್ಳೀ ಮನೇಲಿ ಬೆಳಿಗ್ಗೆ ಮುಂಬಾಗಿಲು ತೆರೆದು ಸಾರಿಸಿ ರಂಗೋಲಿಯಿಕ್ಕಿ ಒಳಗೆ ಹೋದರೆ ಮುಗೀತು. ಆ ಬಾಗಿಲು ಮುಚ್ಚಿಕೊಳ್ಳುತ್ತಿದ್ದುದೇ ಮುಸ್ಸಂಜೆ ದೀಪ ಹಚ್ಚುವ ಹೊತ್ತಿಗೆ… ಒಕ್ಕಲುಗಳು, ಕೆಲಸದಾಳುಗಳು, ನೋಡೋಕೆ-ಮಾತಾಡ್ಸೋಕೆ ಕಷ್ಟ ಸುಖ ಹೇಳಿಕೊಳ್ಳುವುದಕ್ಕೆ ಬರುತ್ತಿದ್ದ ಊರ ಮಂದಿ. ಹೋಗೋ ಬರೋ ನೆಂಟರಿಷ್ಟರು. ಅಡಿಕೆ ಕ್ಯೊಲಿನ ಸಮಯದಲ್ಲಂತೂ ಬಿಡಿ… ತೀರ್ಥಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ಬಂದ ಬಯಲು ಸೀಮೆಯ ಜನ `ಸಂಭಾವನೆ’ಗೆ ಬರೋದು, ಅವರಿಗೆ ಹರಿವಾಣದಲ್ಲಿಷ್ಟು ಅಡಿಕೆಯಿಟ್ಟು ಕೊಡೋದು, ನಮ್ಮಜ್ಜಯ್ಯನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ. ಊಟದ ಹೊತ್ತಿಗೆ ಯಾರು ಬಂದರೂ ಹೊಟ್ಟೆಗೆ ಕೂಳು ಕಾಣಿಸಿಯೇ ಕಳಿಸಿಕೊಡುತ್ತಿದ್ದರು… ಮನೆ ತುಂಬಾ ಜನರಿದ್ದ ಅವಿಭಕ್ತ ಕುಟುಂಬ….ಧನಿ-ಒಕ್ಕಲುಗಳ ಸಂಬಂಧ ಆತ್ಮೀಯವಾಗಿಯೂ ಗೌರವಪೂರ್ಣ ವಾಗಿಯೂ ಇದ್ದ ಕಾಲ. `ಭೂ ಮಸೂದೆ’ ಯಿನ್ನೂ ಜ್ಯಾರಿಯಲ್ಲಿಲ್ಲದ ದಿನಗಳು… ಕಾಲಕಾಲಕ್ಕೆ ಮಳೆ ಬಂದಂತೆ ಒಕ್ಕಲು ಮಕ್ಕಳು ಬೆಳೆದ `ಗೇಣಿ’ ಭತ್ತ ಅಡಿಕೆಯೂ ಅಂಗಳಕ್ಕೆ ಬಂದು ಬೀಳುತ್ತಿತ್ತು. ಅಂದಿನ ದಿನಗಳನ್ನು ಇಂದಿಗೆ ಹೋಲಿಸುವುದೇ ವ್ಯರ್ಥ. ಈಗ ಹಳ್ಳಿಗಳಲ್ಲಿ ಮುಂಬಾಗಿಲು ತೆರೆದುಕೊಳ್ಳುವುದಿಲ್ಲ. ಕರೆಗಂಟೆಯೊತ್ತಿದರೆ ಕಿಟಕಿ ಸಂದೀಲಿ ಇಣಿಕಿ `ಯಾರು’ ಅಂತಾ ನೋಡಿಯೇ ಬಾಗಿಲು ತೆರೆಯೋ ಪರಿಸ್ಥಿತಿ. ದಿನ ಬೆಳಗಾದರೆ ಪೇಪರಲ್ಲಿ ಓದುವ, ದೂರದರ್ಶನದಲ್ಲಿ ವೀಕ್ಷಿಸುವ ಕೊಲೆ, ದರೋಡೆ, ಅತ್ಯಾಚಾರ… ದಿನ ವುರುಳಿದಂತೆ ನಾವು ವಿದ್ಯಾವಂತರಾಗು ತ್ತೇವೆ. ಸುಸಂಸ್ಕೃತ ನಾಗರೀಕರೆನಿಸಿಕೊಳ್ಳುತ್ತಿದ್ದೇವೆ. ಆಧುನಿಕ ಸವಲತ್ತುಗಳನ್ನು ಪಡೆಯುತ್ತಿದ್ದೇವೆಯೇನೋ ನಿಜ. ಆದರೆ ಹಿಂದಿನ ಹಿರಿಯರಲ್ಲಿನ ಅಮಾಯಕತೆ ಮುಗ್ಧ ಸ್ನೇಹ ಸಾತ್ವಿಕತೆಯೆಲ್ಲೋ ಮರೆಯಾಗಿ ಯಾಂತ್ರಿಕತೆಯತ್ತ ವಾಲಿ ಬದುಕಿನ ಸ್ವಾರಸ್ಯವನ್ನು ಕಳೆದುಕೊಳ್ಳುತ್ತಿದ್ದೇವೆ… ಮನುಜರಲ್ಲಿ ಮೃಗೀಯ ವರ್ತನೆ, ರಾಕ್ಷಸಿ ಪ್ರವೃತ್ತಿಯೇ ಅಧಿಕವಾಗುತ್ತಿರುವುದು ಎಂತಹಾ ವಿಪರ್ಯಾಸ…! “ಅದೆಂತಾ ಸ್ನಾನ ಮಾಡಾಟ ಮಾರಾಯ್ನೆ, ಬೇತಗ್ಬಾ ಬಾಳ್ಳೆ ಹಾಕಾಗಿದೆ… ನಿಂಗೆ ಬಡಿಸಿ ಇನ್ನು ಕೆಲ್ಸದವ್ರಿಗೆ ಬೇರೆ ಬಡಿಸ್ಬೇಕೊ…!” ಅಮ್ಮ ವಟಗುಟ್ಟಿದಾಗ ಯೋಚನೆಯ ಲಹರಿಗೆ ವಿರಾಮವಿತ್ತು. ಬೇಗ ಸ್ನಾನ ಮುಗಿಸಿ ಊಟಕ್ಕೆ ಕುಳಿತ. ಹುರುಳೀ ಕಟ್ಟಿನ ಸಾರಿನ ಬೆಳ್ಳುಳ್ಳಿ ಒಗ್ಗರಣೆಯ ಕಂಪು `ಘಂ’ ಅಂದಾಗ ಹಸಿವು ಇಮ್ಮಡಿಸಿತು. ಬಿಸಿ ಅನ್ನ, ಹುರುಳೀ ಸಾರು ಲಿಂಬೆಗಾತ್ರದ ಬೆಣ್ಣೆ, ಕೆನೆ ಮೊಸರು, ಅಪ್ಪೆಮಿಡಿ ಉಪ್ಪಿನಕಾಯಿ ಜೊತೆಗೆ ಸುಟ್ಟ ಹಲಸಿನ ಹಪ್ಪಳ. ಸುಗ್ರಾತ ಭೋಜನ. ಅಲ್ಲಾ ಕೆಲಸದವ್ರಿಗೆ ಅಮ್ಮ ಯಾಕೆ ಬಡಿಸ್ಬೇಕೊ…? ದಿನಾ ಮಾಡಿದ ಅಡುಗೆ ಹೊರಗಿಟ್ಟರೆ ಆಯ್ತು. ಮನೆ ಕೆಲಸದಾಕೆ ತುಳಸಿಯೇ ಎಲ್ಲರಿಗೂ ಊಟ ಇಕ್ಕು ತ್ತಿದ್ದಳು. ಇಂದವಳು ಬಂದಿಲ್ಲವೇ ಹಾಗಾದ್ರೆ? ಮನದಲ್ಲಂದುಕೊಳ್ಳುತ್ತಿದ್ದಂತೆ ಹೊರಗೆ ಕೆಲಸದಾಳು ಮಂಜ, ಗಾಡಿ ಹೊಡೆಯೋ ಸೀನ ಏರು ದನಿಯಲ್ಲಿ ಮಾತಾಡುವುದು ಕೇಳಿಸಿತು.”ಏನಾರ ಆಗ್ಲಿ ಇದೊಂದು ಬಗೆ ಹರಿಲೇಬೇಕು… ನಾ ಧರ್ಮಸ್ಥಳಕ್ಕೆ ಬರೋಕೂ ಸೈ… ನಿನ್ಹೆಂಡ್ತಿನೇ ಔಷ್ಧಿ ಹಾಕಿದ್ದು…!” ಮಂಜ ಹಾರಾಡುತ್ತಿದ್ದ. “ಅವ್ಳೇ ಹಾಂಗ್ಮಾಡಿದ್ದೂಂತ ಹ್ಯಾಂಗೇಳ್ತೀಯಾ…? ಹಾಗೇನಾರ ಅವ್ಳು ಮಾಡಿದ್ದು ಹೌದಾದ್ರೆ ಅವ್ಳನ್ನ ಕೊಚ್ಚಾಕ್ತೀನಿ…! ನ್ಯಾಯ ಅಂದ್ರೆ ಎಲ್ರೀಗೂ ಒಂದೇಯ… ಆದ್ರೆ ಹಿಂದೂ ಮುಂದು ತಿಳೀದೆ ಏನೇನಾರ ಹೇಳ್ಬೇಡಾ ನೀನೂ…! ” ಸೀನನ ಗಂಟಲೂ ಜೋರಾಯಿತು. ಹುರುಳೀ ಸಾರಲ್ಲಿ ಪಟ್ಟಾಗಿ ಅನ್ನ ಕಲಸಿಕೊಳ್ಳುತ್ತಿದ್ದ ಸರಳಳತ್ತ ತಿರುಗಿ `ಏನು’ ಎಂಬಂತೆ ಹುಬ್ಬು ಹಾರಿಸಿದೆ… `ಏನಿಲ್ಲ’ವೆನ್ನುವಂತೆ ತಲೆಯಾಡಿಸಿ ಸರಳ ಕಿಸಕ್ಕನೆ ನಕ್ಕಳು.”ರಾಯ್ರಿಗೆ ಛಾನ್ಸಪ್ಪಾ… ಇನ್ನು ಮೂರ್ದಿನಾನೂ ಹುರುಳಿ ಸಾರೇ ಗತಿ…!” ಅಮ್ಮ ಅಡಿಗೆ ಮನೆಯಿಂದಾಚೆ ದಾಟಿದ ಕೂಡಲೇ ಸರಳ ಸಣ್ಣ ದನಿಯಲ್ಲಿ ನನ್ನನ್ನು ಚುಡಾಯಿಸಿದಳು. ಗಾಡಿಯೆತ್ತುಗಳಿಗಾಗಿ ದಿನಾ ಹುರುಳಿ ಬೇಯಿಸಿದರೆ ಬಸಿದ `ಕಟ್ಟು’ ಮನೆಯ ಉಪಯೋಗಕ್ಕಲ್ಲದೆ ಕೆಲಸದವರಿಗೆ ಅಕ್ಕಾ-ಪಕ್ಕದ ಮನೆಯವರಿಗೆ ಯಾರು ಕೇಳಿದರೂ ಕೊಡುತ್ತಿದ್ದೆವು. ತುಳಸಿಯೇ ಕೆಲಸದಾಳು ಗಳಗೆ ಸರದಿ ಪ್ರಕಾರ ದಿನಕ್ಕೊಬ್ಬರ ಮನೆಗೆ ಪ್ಲಾಸ್ಟಿಕ್ ಕ್ಯಾನ್‍ನಲ್ಲಿ ಬಗ್ಗಿಸಿ ಕೊಡುತ್ತಿದ್ದಳು. ಬಹುಶಃ ಇಂದು ಯಾರೂ ತೆಗೊಂಡು ಹೋಗಿಲ್ಲವೋ ಏನೋ… ದಿನಾ ಬೇಡಿಕೆ ಯಲ್ಲಿರೋ ವಸ್ತು ಈವತ್ಯಾಕೆ ಬೇಡ ಅಂತ ಸಹಜವಾಗಿಯೇ ಕುತೂಹಲವುಂಟಾಗಿ ಬೇಗ ಊಟ ಮುಗಿಸಿ ಹೊರಬಂದ. ಕೊಟ್ಟಿಗೆ ಮೂಲೆಯಲ್ಲಿ ಕುಳಿತ ತುಳಸಿ ಮುಸಿ ಮುಸಿ ಅಳುತ್ತಿದ್ದಳು.”ಇನ್ಮೆಲೇ ನಾ ಬಡ್ಸೂದಿಲ್ಲಾ ಅಮ್ಮಾವ್ರೆ… ಅವರ್ಯಾರೂ ನಾ ಬಡ್ಸಿದ್ದು ಉಣ್ಣಲ್ವಂತೆ…! ಒಟ್ನಲ್ಲಿ ಗಾಚಾರ… ನಾ ಏನ್ಮಾಡ್ದೇ ಇದ್ರೂ ನಂಗೆ ಅಲ್ದೇ ಹೋಗಿದ್ದ ಮಾತು. ಅಪ್ವಾದ…!” ಅಳುವಿನ ನಡುವೆ ತುಂಡು ತುಂಡಾಗಿ ತೇಲಿ ಬಂದ ಮಾತು.”ಹೂಂ ಮೂರು ಮೂರ್ದಿನಕ್ಕೂ ನಿಮ್ದೇನಾರೂ ಇದ್ದಿದೇಯಾ… ಮೊದ್ಲೇ ನಂಗೆ ಕೈಕಾಲು ಆಡೊಲ್ಲ… ಸಣ್ಣಮ್ಮಾವ್ರು ಬೇರೆ `ರಜಾ’… ಊಶ್… ನಂಕೈಲಾ ಗೊಲ್ಲಪ್ಪಾ… ಹೀಂಗಾರೆ ಮೂಲೇ ಮನೆ ಸುಗುಣಂಗಾರೂ ಬರೋಕೆ… ಹೇಳಿ ರಾಗ್ತಿತ್ತು…! ” ಅಮ್ಮ ತಲೆ ಚಚ್ಚಿಕೊಳ್ಳುತ್ತಾ ಒಳಗೆ ನಡೆದರು.”ಏನೇ ಸರೂ. ಗೌಜಿ ಗದ್ದಲ…?” ಊಟ ತೀರಿಸಿ ಎಲೆ ಅಡಿಕೆ ಮೆಲ್ಲುತ್ತಿದ್ದ ಸರಳಳನ್ನು ಪ್ರಶ್ನಿಸಿದೆ. “ಅಯ್ಯೋ… ಅದೇರಿ, ಆ ತುಳಿಸಿ ಮಂಜನಿಗೆ ನಿನ್ನೆ ಹುರುಳಿ ಕಟ್ಟಲ್ಲಿ `ಮದ್ದು’ ಹಾಕಿ ಕೊಟ್ಲಂತೆ… ಅದ್ಕೇ ಅವ್ಳು ಬಡಿಸಿದ್ದು ಯಾರೂ ಉಣ್ಣಲ್ವಂತೆ…! ” ಸರಳ ರಾಗವೆಳೆದಳು.ತುಳಸಿಯನ್ನು ಕರೆದು ವಿಚಾರಿಸಿದಾಗ ತಿಳಿದಿದ್ದು ಇಷ್ಟು, ನಿನ್ನೆ ಸಂಜೆ ಮಂಜ ಹುರುಳಿ ಕಟ್ಟು ತಗೊಂಡು ಹೋಗಿದ್ದ. ಪೇಟೆಗೆ ಹೋದವ ಸಮಾ ನಾಲ್ಕು `ಕೊಟ್ಟೆ’ ಏರ್ಸಿ ಮನೆ ಸೇರ ಬೇಕಿದ್ದರೆ ನಡು ರಾತ್ರಿಯಾಗಿತ್ತು. ಹೆಂಡತಿ ಶೇಷಿ ಕೆಳಗಿನ ಮನೆ ಪಾಪಣ್ಣಯ್ಯನ ಮನೆಗೆ ಅಡಿಕೆ ಸುಲಿತಕ್ಕೆ ಹೋದವಳಿನ್ನೂ ಬಂದಿರಲಿಲ್ಲ. ಆಲಸ್ಯದಿಂದಲೋ ಕುಡಿದ ಅಮಲಿಗೋ ಊಟ ಮಾಡದೆ ಹಾಗೇ ನೆಲದ ಮೇಲೆ ಬಿದ್ದುಕೊಂಡ ಮಂಜನಿಗೆ ಬೆಳಗಿನ ಜಾವ ಎಚ್ಚರವಾದಾಗ ಹಸಿವೆ ಯಿಂದ ಹೊಟ್ಟೆ `ಹಪ ಹಪ’ ಅನ್ನುತ್ತಿತ್ತು. ಎಷ್ಟು ಹೊತ್ತಿಗೋ ಬಂದು ಮಲಗಿದ್ದ ಶೇಷಿಯನ್ನು ಎಬ್ಬಿಸದೇ ತಾನೇ ಬಟ್ಟಲಿಗೆ ಗಂಜಿ ಉಪ್ಪು ಹಾಕಿಕೊಂಡು ಕುಡಿಯು ವುದಕ್ಕೆ ಹುರುಳಿ ಕಟ್ಟು ಬಗ್ಗಿಸಲು ಹೋದ. ಹಿಂದಿನ ದಿನ ಕುದಿಸದೇ ಇಟ್ಟ ಆದ್ರವ ಲೋಳೆ ಲೋಳೆಯಾಗಿ ಜೊತೆಗೆ ಹಸುರಾಗಿದ್ದ ವಸ್ತುವೊಂದನ್ನು ಕಂಡಿದ್ದೇ ತಡ. ಹುರುಳಿ ಕಟ್ಟು ಬಗ್ಗಿಸಿಕೊಟ್ಟು ತುಳಸಿ ತನಗೆ `ಕೈ ಮದ್ದು’ ಹಾಕಿದ್ದಾಳೆ ಅನ್ನೋ ಅಪನಂಬಿಕೆಯುಂಟಾಗಿಯೇ ಈ ಗಲಾಟೆ-ರಂಪಾಟ….!ಸರಿ… ಆಡುವವರ ಬಾಯಿಗೆ ಮೃಷ್ಟಾನ್ನ ದೊರೆತಂತಾಗಿ ನಿಜ ಸ್ಥಿತಿ ಏನೂಂತ ಯೋಚಿಸುವುದಕ್ಕಿಂತಲೂ ರಂಗುರಂಗಿನ ಗಾಳಿ ವದಂತಿಯದ್ವೇ ಮೇಲುಗೈಯಾಯ್ತು.

ಪಾಪ… ತುಳಸಿ ದೈಹಿಕವಾಗಿಯೂ ಮಾನಸಿಕವಾಗಿಯೂ ಸೂಕ್ಷ್ಮ ಸ್ವಭಾವದವಳು. ಕಡಿಯೋದು ಕೊಚ್ಚೋದು ಹೊರೆ ಹೊರೋದಂತೂ ಅವಳಿಂದ ಆಗುವುದಿಲ್ಲವೆಂದು ಕಸಮುಸುರೆ ಬಟ್ಟೆ ಒಗೆಯೋದು, ಕೊಟ್ಟಿಗೆ ಕೆಲಸವನ್ನಷ್ಟೇ ಮಾಡುತ್ತಿದ್ದಳು. ತುಸು ನಿಧಾನಸ್ಥೆಯಾದರೂ ಕೆಲಸ ಕಾರ್ಯದಲ್ಲಿ ನಯ ನಾಜೂಕು ಇತ್ತು. ಮಿತ ಭಾಷಿಯಾದ ತುಳಸಿಗೆ ಹಾಳು ಹರಟೆ ಹೊಡೆಯೋದು, ಇನ್ನೊಬ್ಬರ ಬಗ್ಗೆ ಆಡಿಕೊಂಡು ನಗೋದು, ಚಾಡಿ ಹೇಳೋದು ಇತ್ಯಾದಿ ಕೆಟ್ಟ ಚಾಳಿಯಿರದಿದ್ದುದರಿಂದ ಅಮ್ಮ ಸರಳ ಇಬ್ಬರಿಗೂ ಆಕೆ ಅಚ್ಚು ಮೆಚ್ಚು. ಮನೆಯಲ್ಲಿ ಏನೇ ವಿಶೇಷ ಅಡುಗೆ ತಿಂಡಿ ಮಾಡಿದರೂ ತುಳಸಿ ಲೆಕ್ಕಕ್ಕೊಂದು ಪಾಲು ಮೀಸಲಾಗಿರುತ್ತಿತ್ತು. ಸರಳಾ ಅವಕಾಶ ಸಿಕ್ಕಾಗಲೆಲ್ಲಾ ತನ್ನ ಹಳೇ ಸೀರೆ, ಲಂಗ ರವಿಕೆ ಮುಂತಾದವುಗಳನ್ನು ಕೊಡುತ್ತಿರುವುದು ಉಳಿದ ಹೆಣ್ಣಾಳುಗಳಿಗೂ ಗೊತ್ತಿತ್ತು. ದುಡಿಯುವ ಮನೆಯಲ್ಲಿ ತಮ್ಮಿಂದ ಹೆಚ್ಚಿನ ಸಹಾಯ ಪಡೆಯುವ ತುಳಸಿಯ ಬಗ್ಗೆ ಸಹಜವಾಗಿ ಅವರಿಗೆಲ್ಲಾ ಹೊಟ್ಟೆ ಕಿಚ್ಚು, ಮತ್ಸರವೂ ಇತ್ತು. ಹುರುಳೀ ಕಟ್ಟಿನ ಪ್ರಕರಣ ಇವೆಲ್ಲಕ್ಕೂ ಕುಮ್ಮಕ್ಕು ನೀಡಿ ಬೆಂಕಿಮೇಲೆ ತುಪ್ಪ ಸುರಿದ ಪರಿಸ್ಥಿತಿಯನ್ನು ತಂದೊಡ್ಡಿ ಅನಾವಶ್ಯಕ ಆಪಾದನೆ ಹೊತ್ತು ತಪ್ಪಿತಸ್ಥಳ ಸ್ಥಾನದಲ್ಲಿ ತುಳಸಿ ನಿಲ್ಲುವಂತಾಯ್ತು.`ಕೈ ಮದ್ದು’ ಹಾಕೋದು ಅನ್ನೋದು ನಾನು ಚಿಕ್ಕಂದಿನಿಂದಲೇ ಮಲೆನಾಡಿಗರ ಬಾಯಲ್ಲಿ ಹೇಳಿಕೇಳಿ ಜನಜನಿತವಾದ ವಿಚಾರವಾದರೂ ವಿದ್ಯಾವಂತನಾದ ನನಗದರಲ್ಲಿ ಎಳ್ಳಷ್ಟೂ ನಂಬಿಕೆಯಿರಲಿಲ್ಲ. ಒಬ್ಬರಿಗೊಬ್ಬರು ಆಗದಿದ್ದಾಗ ಪರಸ್ಪರ ವೈಷಮ್ಯದ ದೆಸೆಯಿಂದ ದೈವ-ದೇವರಿಗೆ `ಹುಯ್ಲು’ ಕೊಡೋದು, ದೇವರ ಹೆಸರಲ್ಲಿ ಆಣೆ-ಬಾಷೆ ಮಾಡಿ ಆಚೀಚೆ ಸಂಪರ್ಕ ಸಂಬಂಧ ಕಡಿದುಕೊಳ್ಳುವುದು, ಮಂತ್ರ ವಾದಿಗಳಿಗೆ ದುಡ್ಡು ತೆತ್ತು ಮಾಟ ಮಂತ್ರ ಮಾಡಿಸೋದು. ಹೀಗೆ ಹಟ, ಛಲ, ದ್ವೇಷ ತೀರಿಸಿಕೊಳ್ಳುವುದಕ್ಕೆ ಜನ ಕಂಡುಕೊಂಡ ಹಲವು ವಾಮ ಮಾರ್ಗ ಗಳಲ್ಲಿ ಇದೂ ಒಂದಾಗಿರಬಹುದೆಂದು ತಿಳಿದು ಆಲಕ್ಷ್ಯ ತಾಳಿದ್ದೆ.ತುಳಸಿಯ ಪ್ರಕರಣದಲ್ಲೂ ಇದಕ್ಕಿಂತ ಮಿಗಿಲಾದ್ದೇನೂ ಇರಲಾರದು ಅನ್ನುವುದು ನನಗೆ ಚೆನ್ನಾಗಿ ಗೊತ್ತು…! `ಔಷಧಿ ಹಾಕ್ಕೋದು’ ಅನ್ನೋ ಕ್ರಿಯೆ ಸುಳ್ಳು, ಮೂಢನಂಬಿಕೆಯೆಂದು ತೋರಿಸಿಕೊಡು ವುದಕ್ಕೆ ನನಗೂ ಸರಿಯಾದ ವೇದಿಕೆ, ಅವಕಾಶ ಬೇಕಾಗಿತ್ತು. ಈ ಸದವಕಾಶವನ್ನು ಬಳಸಿಕೊಂಡು ನಾಲ್ಕು ಜನರ ಸಮ್ಮುಖ ದಲ್ಲಿ ಈ ವಿಚಾರವನ್ನು ಬಹಿರಂಗ ಗೊಳಿಸಿದರೆ ಹ್ಯಾಗೆ ಅನ್ನೋ ಯೋಚನೆ ತಲೆಗೆ ಬಂದಿದ್ದೇ ತಡ… ಗುಡ್ಡದಷ್ಟು ಇದ್ದ ಭಾರ ಹತ್ತಿಯಂತೆ ಹಗುರವಾಗಿ ಮನಸ್ಸಿಗೆ ಹಾಯೆನಿಸಿತು.”ಊಟ ಮಾಡಿ ಎಲ್ರೂ ಅವರವರ ಕೆಲ್ಸಕ್ಕೆ ನಡೀರಿ. ಸುಂಸುಮ್ನೇ ಯಾವ ತೀರ್ಮಾನಕ್ಕೂ ಬರೋಕಾಗೊಲ್ಲ… ತುಳಸಿ ನೀ ಮಂಜನಿಗೆ ಯಾವ ಪಾತ್ರೇಲಿ ಹುರುಳಿ ಕಟ್ಟುಕೊಟ್ಟಿದ್ದೂ…? ಅವಾಂ ಹಾಗೇ ವಾಪಸ್ ತಂದ್ಕೊಂಟ್ನಲ್ಲಾ… ಅದ್ನ ಚೆಲ್ಬೇಡಾ… ಹಾಂಗೇ ಇಟ್ಟಿರು… ನಾಳೆ ಶುಕ್ರವಾರ ಊರ ದೇವಸ್ಥಾನದ ಅಂಗಣ ದಲ್ಲಿಯೇ ಸಂಜೆ ಪಂಚಾಯ್ತಿಕೆ ಇಡಿಸ್ತೀನಿ… ಯಾರ್ದು ತಪ್ಪು-ಸರಿ ಅಂತಾ ನಾಲ್ಕು ಜನರ ಮುಂದೆಯೇ ಇತ್ಯರ್ಥ ಆಗ್ಹೋಗ್ಲಿ!” ನಾನು ಗಂಭೀರವಾಗಿ ನುಡಿದು ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಿದೆ.ಎಂದಿನಂತೆ ಮಧ್ಯಾಹ್ನ ಪಟ್ಟಾಗಿ ನಿದ್ದೆ ಮಾಡದೆ ಆಚೀಚೆ ಓಡಾಡುತ್ತಲೇ ಇದ್ದುದರಿಂದ ಅಡಿಕೆ ತುಲಿತ ಭರದಿಂದ ಸಾಗುತ್ತಿತ್ತು. ಬರೇ ಲೊಟ್ಟೆ ಪಟ್ಟಾಂಗ… ಪಟಾಪಟಿ ಕಡಿಮೆ ಮಾಡಿ… ಎರಡು ಹಂಡೆ ಅಡಿಕೆ ಭರ್ತಿಯಾಗಲೇ ಬೇಕೆಂದು ಸುಳಿತದಾಳುಗಳಿಗೆ ಖಡಾಖಡಿಯಾಗಿ ತಾಕೀತು ಮಾಡಿದ್ದೆ. ಹಾಗಿದ್ದರೂ ನಡು ನಡುವೆ ಗುಸುಗುಸು ಮಾತು ನಡೆದೇ ಇತ್ತು. ಮಾತಿಗೆ `ವಸ್ತು’ ಮದ್ದು ಹಾಕುವ ವಿಚಾರವೇ ಔಷ್ಧಿ ಹಾಕೋರ್ದೇ ಒಂದು ಮನೆತನ ಇರೋ ಬಗ್ಗೆ, ಉಗುರಿನ ಸಂಧಿಯಲ್ಲಿಟ್ಟುಕೊಂಡು ಊಟ, ತಿಂಡಿ, ಪಾನೀಯದ ಜೊತೆ ಹಾಕುವ ರೀತಿ, ಮದ್ದು ಹಾಕದಿದ್ದರೆ ಆಗೋ ತೊಂದರೆ-ಹಾಕಿದರೆ ಆಗುವ ಅನಾರೋಗ್ಯ ತಾಪ ತ್ರಯವೇನು ಅಂತ ಬಗೆಬಗೆಯ ವರ್ಣನೆ.ಸರಳ ತಾನೂ ಅಡಿಕೆ ಸುಲಿಯೋ ಕತ್ತಿಯ ಮುಂದೆ ಕುಳಿತು ಅಡಿಕೆ ಸುಲಿಯೋ ನೆಪದಲ್ಲಿ ಎಲ್ಲವನ್ನೂ ಆಲೈಸುತ್ತಾ ನಡು ನಡುವೆ ಏನಾದರೂ ಕೇಳುತ್ತಾ `ಹೌದಾ’ ಎಂದು ಮುಗ್ಧಳಂತೆ ಕತ್ತುಕೊಂಕಿಸುವುದು ನೋಡಿ ನಗುವುದಕ್ಕೆ ಬಂತು. ಮಹಾಘಾಟಿ ಇವಳು, ಇವರ ಮಾತಲ್ಲೇನೂ ಸತ್ಯವಿಲ್ಲ, ಹುರುಳಿಲ್ಲವೆಂದು ಗೊತ್ತಿದ್ದರೂ ಅಮಾಯಕ ಳಂತೆ ತಲೆದೂಗಿ ಆಮೇಲೆ ಮಕ್ಕಳಂತೆ ಚಾಚೂತಪ್ಪದೆ ನನ್ನಲ್ಲಿ ಗಿಣಿಪಾಠವೊಪ್ಪಿಸುತ್ತಾಳೆ…! ಆ ಬಟ್ಟಲು ಕಂಗಳನ್ನು ಅರಳಿಸುವ ರೀತಿಯೋ, ತುಟಿಯೋರೆ ಮಾಡಿ ನಗೋ ವೈಖರಿಯೋ… ಈ ಮೋಡಿಯಲ್ಲವೆ ನನ್ನನ್ನು ಮರಳು ಮಾಡುವುದು…!? ಔಷಧಿ ಹೊಟ್ಟೆಗೆ ಹೋದ್ರೆ ಅದ್ರಲ್ಲಿ ಕೂದ್ಲು ಬೆಳ್ಯುತ್ತೆ, ಆ ಮೇಲೆ ಗಡ್ಡೆಯಾಗುತ್ತೆ. ದಿನಾ ಊಟ ಸೇರ್ದೆ, ನಿತ್ರಾಣ ಆಗಿ ಔಷಧಿ ತೆಗೆಸ್ದೇ ಇದ್ರೆ ಸತ್ತೇ ಹೋತಾರೆ ಸಣ್ಣಮ್ಮಾವ್ರೆ… ಫಣಿ ಹೆಗ್ಗಡಿತಿ ಸವಿವರವಾಗಿ ಹೇಳುತ್ತಿದ್ದಂತೆ ಸರಳಾ ನನ್ನತ್ತ ನೋಡಿ ಕಣ್ಣು ಮಿಟುಕಿಸಿದಳು.ನಾನಿಲ್ಲೇ ಇದ್ರೆ ಇವಳಿಗೆ ಸುದ್ಧಿ ಸಂಗ್ರಹಿಸುವುದಕ್ಕೆ ಅಡ್ಡಿಯಾಗಬಹುದೆಂದು ಸಿಗರೇಟು ಹಚ್ಚಿಕೊಂಡು ಗದ್ದೆಯ ಕಡೆ ಹೊರಟೆ.

ದಾರಿಯಲ್ಲಿ ಸಿಕ್ಕ ಮಿತ್ರ ಶೇಷಾದ್ರಿಯೂ ನನ್ನ ಪಂಚಾಯ್ತೀಕೆ ಇಡಿಸೋ ತೀರ್ಮಾನಕ್ಕೆ ಹುರುಪಿನಿಂದ ಉತ್ತೇಜನ ನೀಡಿದಾಗ ಯೋಜನೆಯೊಂದಕ್ಕೆ ರೆಕ್ಕೆ ಪುಕ್ಕ ತಗುಲಿ ಇನ್ನೂ ಬಲವಾಯ್ತು.ಅಡಿಕೆ ಅಳೆಯೋದು, ಹಂಡೆಗೆ ತುಂಬಿಸೋದು ಚೊಗರು ತೋಡೋದು, ಸುಲಿತ ದಾಳುಗಳ ಮಜೂರಿ ಲೆಕ್ಕಾಚಾರ, ಬಟವಾಡೆ… ಕ್ಯೂ ನಿಂತ ಕೆಲಸ ಗಳನ್ನೊಂದೊಂದನ್ನೇ ಪೂರೈಸುವಷ್ಟರಲ್ಲಿ ದಿನ ಸವೆದಾಗಿತ್ತು.

***

“ನಮ್ಮನೆ ವಿಚಾರ ಪಂಚಾಯಿತಿ ಕಟ್ಟೇವರ್ಗೂ ಬರ್ಬೇಕೇನಾ…? ಎಷ್ಟಾದರೂ ನಮ್ಮ ಆಳು ಮಕ್ಕಳು… ಊರಿಡೀ ಗುಲ್ಲಾಗೋದು ಬ್ಯಾಡಾ… ಇಲ್ಲೇ ನಮ್ಮನೆಯಂಗಳದಲ್ಲೇ ತೀರ್ಮಾನಕ್ಕೆ ಬರ್ಬಾರ್ದಾ…? ಮೂರನೇ ವ್ಯಕ್ತಿಗಳ್ಯಾಕೆ ಸುಮ್ನೇ…!?” ಅಮ್ಮ ಆಕ್ಷೇಪವೆತ್ತಿದಾಗ ಒಂದು ಕ್ಷಣ ಅಮ್ಮನ ಮಾತು ನಿಜ ವೆನಿಸಿದರೂ ಊರಲ್ಲೇನು ತರಲೆ ತಗಾದೆಯೆದ್ದರೂ ನನಗೆ `ಪಂಚಾಯ್ತಿಕೆ’ ಕರೆ ಬರುತ್ತಿತ್ತು. ನಾಲ್ಕು ಜನರ ನಡುವೆ ನಾನು ನೀಡಿದ ತೀರ್ಮಾನಕ್ಕೆ ಸಮಾಜದಲ್ಲಿ ಗೌರವ ಮನ್ನಣೆಯೂ ಸಿಗುತ್ತಿತ್ತು. ಊರ ಜನರ ಹುಳಿರಗಳೆಯನ್ನೆಲ್ಲಾ ಒಂದು ಹಂತಕ್ಕೆ ನಿಲ್ಲಿಸಿ ತೀರ್ಪು ಹೇಳುವಾತ ತನ್ನ ಮನೆ ವಿಚಾರವನ್ನು ಗುಪ್ತವಾಗಿ ಒಳಗೊಳಗೇ ಯಾರಿಗೂ ತಿಳಿಯದಂತೆ ಮುಚ್ಚಿ ಹಾಕುವುದು ನಮ್ಮೂರಿನ ಕೆಲವು `ಹಿತಾಸಕ್ತ’ರಿಗಾದರೂ ಕೊಂಕಾಗಿ ಕಂಡೇ ಕಾಣಬಹುದು. ಅದೆಲ್ಲಕ್ಕಿಂತಲೂ ಹೆಚ್ಚಾಗಿ ಮೂಢನಂಬಿಕೆ, ವ್ಯರ್ಥಾರೋಪ, ಅಂಧಾನುಕರಣೆಯಿಂದುಂಟಾದ ಪ್ರಕರಣವೊಂದನ್ನು ಬಯಲಿಗೆಳೆದು ನಿಜ ವೇನೆಂಬುದರತ್ತ `ಕ್ಷ ಕಿರಣ’ ಬೀರುವ ಹೊಣೆಗಾರಿಕೆ ಹೊತ್ತುದರಿಂದ ನನ್ನ ನಿಲುವೇ ನನಗೆ ಸೂಕ್ತವೆನಿಸಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಪ್ಪಯ್ಯ, ಊರಿನ ಗಣ್ಯ ವ್ಯಕ್ತಿಗಳಾದ ನಾರಾಯಣಾಚಾರ್, ವರದಪ್ಪ, ಜವರಣ್ಣ, ಸಿದ್ದೇಗೌಡರನ್ನು ಸಂಜೆ ದೇವಸ್ಥಾನಕ್ಕೆ ಆಹ್ವಾನಿಸಿದೆ. ಚಳಿಗಾಳಿ ಬೀಸುತ್ತಿದ್ದುದರಿಂದ ಬೆಚ್ಚಗಿನ ಉಣ್ಣೆಯ ಶಾಲು ಹೊಡೆದು ನಾನೂ ಕ್ಷಪ್ತ ಸಮಯಕ್ಕೆ ದೇವಸ್ಥಾನಕ್ಕೆ ಹೋದೆ. ಶುಕ್ರವಾರವಾದ್ದರಿಂದ ದೇವಸ್ಥಾನದಲ್ಲಿ ಸಾಕಷ್ಟು ಭಕ್ತ ಬಾಂಧವರು ಸೇರಿದ್ದರು. ವಿಶೇಷ ಆಮಂತ್ರಿತರು ಬರುತ್ತಿದ್ದಂತೆ ಗಂಟೆ ಎಂಟಾಯ್ತು. ತುಳಸಿ ತನ್ನ ಎರಡೂ ಸಣ್ಣ ಮಕ್ಕಳನ್ನು ಬಗಲಿಗವುಚಿ ಕೊಂಡು ತಣ್ಣಗೆ ಕೊರೆಯುವ ಕುಳಿರ್ಗಾಳಿಗೋ ಮನದ ಕಳವಳಕ್ಕೋ ನಡುಗುತ್ತಾ ನಿಂತಿದ್ದು. ಮಂಜನೂ ದೇವಸ್ಥಾನದ ಕಂಬ ಕ್ಕೊರಗಿ ನಿಂತಿದ್ದ. ಪದೇ ಪದೇ ಬಲಗೈ ರಟ್ಟೆಯನ್ನು ಬಿಡಿಸಿ ಮಡಿಸಿ ಮಾಡುತ್ತಿದ್ದ. ತೋಳಿಗೆ ಕಪ್ಪುದಾರದಲ್ಲಿ ತಾಯಿತವೋ ಬೇರೋ ಕಟ್ಟಿಕೊಂಡಂತೆ ಕಾಣಿಸಿತು. ಬಹುಶಃ ಮಂಜ ವೆಂಕಟರಮಣ ಜೋಯ್ಸರ ಹತ್ರ ಹೋಗಿದ್ದರಿಂದಲೇ ಹಗಲು ತೋಟದ ಕೆಲಸಕ್ಕೂ ಬಂದಿರ ಲಿಲ್ಲ…! ಕೈಗೆ ಕಟ್ಟಿದ ಬೇರಿನಿಂದ `ಮದ್ದು’ ವಾಂತಿಯಾಗಿ ಹೋಗೂದು `ತಾಯತ’ ಕಟ್ಟಿದರೆ ಯಾವುದೇ ಕಷ್ಟ ಸಂಕಟ ಬಾರದೆ ಇರೋದು… ಇದೆಲ್ಲಾ ಎಷ್ಟರ ಮಟ್ಟಿಗೆ ನಿಜವೋ…? ಒಟ್ಟಿನಲ್ಲಿ `ಕೈಮದ್ದು’ ತೆಗೆಯೋದರಲ್ಲಿ ನಿಸ್ಸೀಮರೆಂದು ವೆಂಕಟರಮಣ ಜೋಯ್ಸರು ಆಸು ಪಾಸಲೆಲ್ಲಾ ಹೆಸರುವಾಸಿಯಾಗಿ ಈ ಮೂಲಕ ಜೀವನೋಪಾಯಕ್ಕೆ ಒಂದಿಷ್ಟು ಕಮಾಯಿಸುತ್ತಿದ್ದರೆನ್ನುವುದಂತೂ ಖಾತ್ರಿ…!ವಾಡಿಕೆಯಂತೆ ಪಂಚಾಯ್ತಿಕೆ ಶುರು ವಾಯ್ತು. ದೇವರ ಮುಂದೆ ಅಡ್ಡ ಬಿದ್ದು ಬಂದಿದ್ದ ಗೌರವಾನ್ವಿತರಿಗೆ ನಮಿಸಿ ಮಂಜಸೀನ ನಡೆದ ವಿಚಾರದ ಕುರಿತು ಸಾಕಷ್ಟು ಮಾತಾಡಿದರು. ಉಭಯರ ವಾದ-ವಿವಾದ ಒಂದು ಹಂತಕ್ಕೆ ಬರುತ್ತಿ ದಂತೆ ನಾನು ಮಂಜನನ್ನು ಕರೆದು,”ನೀ ಹುರುಳಿ ಕಟ್ಟ ತೆಗೊಂಡು ಹೋಗಿದ್ದ ಪಾತ್ರೆ ಇಲ್ಲಿ ತಾ…” ಅಂದೆ. ಆತ ತೆಗೊಂಡು ಬಂದ. ಅದನ್ನು ಅಲ್ಲೇ ಇದ್ದ ಬೇರೆ ಡಬರಿಗೆ ಸುರಿಯುವುದಕ್ಕೆ ಹೇಳಿದೆ. ಆತ ನನ್ನ ಮಾತನ್ನು ಪರಿಪಾಲಿಸಿದ ಪಾತ್ರೆಯ ಬುಡದಲ್ಲೇನೋ ಹಸಿರು ಹಸಿರಾದ ವಸ್ತು ನೋಡಿ ಕುತೂಹಲದಿಂದ ಕೈಗೆ ಸಿಕ್ಕ ಕೋಲಿನಿಂದ ಕೆದಕಿದೆ.ಪಾತ್ರೆಯಲ್ಲಿದ್ದ ಎಲ್ಲರ ಆತಂಕದ, ಹಲವು ಮಾತುಗಳಿಗೆ ಬಣ್ಣದ ಕತೆ ಹುಟ್ಟುವುದಕ್ಕೆ ಕಾರಣವಾದ ವಸ್ತುವನ್ನು ಕೋಲಿನಿಂದ ಹಿಡಿದೆತ್ತಿ ನೋಡಿದೆ.ವಸ್ತು ಬೇರೇನೂ ಆಗಿರದೆ ಬರೇ `ಗುಳ್ಳೆಪೀಪಿ’ (ಬೆಲೂನ್)ವೊಂದರ ತುಂಡೆಂದು ತಿಳಿದಾಕ್ಷಣ ಸೇರಿದ ಜನಸ್ತೋಮ `ಘೊಳ್’ ಅಂತಾ ನಕ್ಕರು. ಮಂಜನ ಮೋರೆ ನಿಸ್ತೇಜವಾಯ್ತು. ನಡೆದ ಸಂಗತಿಯೇನೆಂಬುದರ ಸ್ಪಷ್ಟ ಚಿತ್ರಣ ನನ್ನ ಮನದಲ್ಲಿ ಮೂಡಿತು.

ಹೋದವಾರ ಎಳ್ಳಮವಾಸ್ಯೆ ಜಾತ್ರೆಗೆ ನಾನೂ ಸರಳ ನಮ್ಮ ಮಕ್ಕಳೊಂದಿಗೆ ತೀರ್ಥಹಳ್ಳಿಗೆ ಹೋಗಿದ್ದೆವು. ಜಾತ್ರೆಯಲ್ಲಿ ಬೆಂಡು, ಬತ್ತಾಸು, ಪೀಪಿ, ಗಾಡಿ ಗುಳ್ಳೆ ಪೀಪಿಯೆಂದು ನನ್ನ ಮಕ್ಕಳು ಸಲ್ಲಿಸಿದ ಬೇಡಿಕೆಯೆಲ್ಲವನ್ನೂ ಪೂರೈಸಿದ್ದೆ. ಜಾತ್ರೆಯ ಸಂತೆಯ ನಡುವೆ ಮಂಜನ ಹೆಂಡತಿ ಶೇಷಿ ಮತ್ತು ಮಗ ಕಾಣ ಸಿಕ್ಕಾಗ ಮಂಜನ ಮಗನಿಗೂ `ಗುಳ್ಳೇಪೀಪಿ’ ತಿಂಡಿ ಕೊಡಿಸಿದ್ದೆ. ಮೂರ್ನಾಕು ದಿನಗಳ ಹಿಂದೆ ಗದ್ದೆಗೆ ಹೋಗಿದ್ದಾಗ ಗುಳ್ಳೇಪೀಪಿ ಒಡೆದು ಹೋಯ್ತೆಂದು ತನ್ನ ಮಗ ಅತ್ತು ಕರೆದು ರಂಪಾಟಗೈದುದನ್ನು ಶೇಷಿಯೇ ನನಗೆ ಹೇಳಿದ್ದಳು. ಬಾಯ್ದೆರೆದೇ ಇಟ್ಟಿದ್ದ ಹುರುಳೀ ಕಟ್ಟಿನ ಪಾತ್ರೆಗೆ ಆಕಸ್ಮಾತ್ ಈ ಬೆಲೂನ್ ಚೂರು ಬಿದ್ದಿರಬೇಕು…!”ಅಲ್ಲಾ… ಅನ್ಯಾಯವಾಗಿ ಏನೇನೋ ಕಥೆ ಕಟ್ಟಿ ಹೋರಾಡ್ತಿರಲ್ಲೋ…! ಶುದ್ಧ ಅಮಾಯಕರು…!” ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಪ್ಪಯ್ಯ ಮನಸಾರೆ ನಕ್ಕರು.”ಹಗಲು ಮೈಮುರಿದು ದುಡೀತಾನೆ, ಸಂಜೆ ಸಮಾ `ಕೊಟ್ಟೆ’ ಏರಿಸ್ತಾನೆ… ನಿಶ್ಶಕ್ತಿ ಹಸಿವೆಯಿಲ್ಲದಿರೋದೆಲ್ಲಾ ಅನಾ ರೋಗ್ಯದ ಲಕ್ಷಣ…!” ನಾರಾಯಣಾಚಾರ್ ತೀರ್ಪಿತ್ತರು.”ಒಂದ್ಸಲ ಆಸ್ಪತ್ರೆಗ್ಹೋಗಿ ಡಾಕ್ಟ್ರಹತ್ರ ತೋರ್ಸಿ ಔಷ್ಧಿ ತಾರೋ ಮಂಜ… ಆ ಮೇಲೆ ಸರೀ ಹೋಗ್ತೀಯಾ…!” ಸಿದ್ಧೇ ಗೌಡರು ಹೇಳಿದಾಗ ಉಳಿದವರಿಗೂ ಅದು ನಿಜವೆನಿಸಿತು.”ತಪ್ಪಾಯ್ತು ಧಣೀ ಅಡ್ಡಬಿದ್ದೆ… ತುಳಸಕ್ಕ ಪಾಪೆದ್ದೀರು ಅನ್ಯಾಯವಾಗಿ ಅವ್ರ ಮೇಲೆ ಅಪ್ವಾದ ಹೊರಿಸ್ದೆ. ದೇವ್ರಿಗೆ ತಪ್ಪು ಕಾಣ್ಕೆಕಟ್ತೀನಿ. ಬಡವನ ತಪ್ಪು ಹೊಟ್ಟೆಗಾಕ್ಕೊಳ್ಳಿ ಒಡ್ಯಾ…!” ನೀರಾಡುವ ಕಂಗಳಿಂದ ತಗ್ಗಿದ ದನಿಯಲ್ಲಿ ನಡುಗುತ್ತಾ ಭಾರೀ ವಿನೀತನಾಗಿ ಬೇಡಿದ.ಅನಾವಶ್ಯಕ ಬಂದೊದಗಿದ ವಿಪ ತ್ತೊಂದರಿಂದ ಪಾರಾದ ನೆಮ್ಮದಿಯಿಂದ ತುಳಸಿ ದೀರ್ಘವಾಗಿ ಉಸಿರೆಳೆದಳು.”ಕ್ಷಮಿಸಬೇಕಾದ್ದು ನಾನಲ್ಲ ಮಂಜಾ… ಮನಸ್ಸಿಗೆ ನೋವಾಗಿರೋದು ತುಳಸಿಗೆ. ಅವಳ ಹತ್ರ ತಪ್ಪು ಒಪ್ಪ್ಗೆ ಸಾಕು…! ಎಲ್ರೂ ಮೊದಲಿನಂತೆ ಇದ್ರಾಯಿತಲ್ಲಾ… ಇನ್ನೇನು…!?” ನಾನು ಹಾರ್ಧಿಕವಾಗೇ ಹೇಳಿ ಮೇಲೆದ್ದು ಮನೆಯತ್ತ ಹೊರಟೆ. ಥಂಡಿಗಾಳಿ ಬೀಸುತ್ತಿದ್ದರು ಹೊರಗಿದ್ದ ಹಾಲು ಬೆಳದಿಂಗಳ ಬೆಳಕು ಹಿತವಾಗಿತ್ತು. ಅದಕ್ಕಿಂತಲೂ ಅನ್ಯಾಯವಾಗಿ ಮೂಢ ನಂಬಿಕೆಗೆ ವೈಷಮ್ಯದೆದುರಿಗೆ ಬಲಿಯಾಗ ಲಿದ್ದ ಕುಟುಂಬಗಳನ್ನು ಪಾರು ಮಾಡಿದೆ ನೆಂಬ ತೃಪ್ತಿ, ಸಂತಸದಿಂದ ಮನ ಗರಿತೆರೆದ ಹಕ್ಕಿಯಾಗಿತ್ತು. 

LEAVE A REPLY

Please enter your comment!
Please enter your name here