ಕಥೆ

ಹಂಝ ಮಲಾರ್

ಬದುಕಿಗೆ ಅರ್ಥವಿಲ್ಲ. ನಿನ್ನೆಗಿಂತ ಈವತ್ತು ಭಿನ್ನವಾಗಿಲ್ಲ. ನಾಳೆಯೂ ಆಗುವುದಿಲ್ಲ. ಆಸ್ತಿ, ಸಂಪಾದನೆ, ಹೆಸರು, ಕೀರ್ತಿ ಎಲ್ಲಾ ಕ್ಷಣಿಕ. ಪ್ರಾಣಪಕ್ಷಿ ಹಾರಿ ಹೋದ ನಂತರ ಒಂದೂ ಇಲ್ಲ… ಹೀಗೆ ತನ್‍ಸೀಫ್‍ಗೆ ತನ್ನ ಬದುಕು ಶೂನ್ಯ ಎಂಬಂತೆ ಭಾಸವಾಗುತ್ತಿದೆ.
ನಿನ್ನೆ ಮೊನ್ನೆ ನಕ್ಕು ನಲಿದಾಡುತ್ತಿದ್ದ ಆಪ್ತ ಮಿತ್ರರ ಪೈಕಿ ಅನೇಕ ತಮ್ಮ ಬದುಕಿಗೆ ಇತಿಶ್ರೀ ಹಾಡಿದ್ದಾರೆ. ಇಷ್ಟು ಬೇಗ ತಮ್ಮ ಸಾವು ಸಂಭವಿಸಲಿದೆ ಎಂದು ಅವರು ಅಂದುಕೊಂಡಿರಲಿಕ್ಕಿಲ್ಲ. ಒಂದು ವೇಳೆ ಇದ್ದಿದ್ದರೆ, ಅವರಿಗೆ ಜೀವನದ ಮೇಲೆ ಖಂಡಿತಾ ಜಿಗುಪ್ಸೆ ಉಂಟಾಗುತ್ತಿತ್ತು. ವೈರಾಗ್ಯ ಕಾಡುತ್ತಿತ್ತು. ಆದರೆ ಅವರ ಬದುಕಿನಲ್ಲಿ ಅದೆಷ್ಟು ಲವಲವಿಕೆ ಇತ್ತು. ರಜೆ ಸಿಕ್ಕಿದೊಡನೆ ಹೆಂಡತಿ ಮಕ್ಕಳ ಜತೆ ತಿರುಗಾಟ, ಶಾಪಿಂಗ್, ಮದುವೆ, ಸಭೆ-ಸಮಾರಂಭ ಎಂದೆಲ್ಲಾ ಕಾಲ ಕಳೆಯುತ್ತಿದ್ದರು. ಅಂಥ ಕುಟುಂಬದ ಪೈಕಿ ಒಬ್ಬ ಅನಿರೀಕ್ಷಿತವಾಗಿ ಇಹಲೋಕ ತ್ಯಜಿಸಿದಾಗ ಆಗುವ ತಳಮಳವನ್ನು ಊಹಿಸಲು ಸಾಧ್ಯವಿಲ್ಲ… ತನ್‍ಸೀಫ್‍ನ ಯೋಚನಾ ಲಹರಿ ಎತ್ತಲೋ ಸಾಗುತ್ತಿತ್ತು.
“ನಾನು ಖಂಡಿತಾ ಸೋಮವಾರ ನಿಮ್ಮನ್ನು ಭೇಟಿಯಾಗುತ್ತೇನೆ” ಎಂದು ಹೋದ ಅವಿನಾಶ್ ಮರಳಿ ಬರಲೇ ಇಲ್ಲ. ಆತ ಕಾಣದ ಊರಿಗೆ ಹೋದ. ಗೆಳೆಯನ ಬೈಕೇರಿ ಐದು ನಿಮಿಷವೂ ಆಗಿಲ್ಲ. ರಾತ್ರಿ ಬಿದ್ದ ಮಳೆಗೆ ಟಾರು ರಸ್ತೆ ನುಣ್ಣಗೆ ಜಾರುತ್ತಿತ್ತು. ಸವಾರ ರಿತೇಶ್‍ನ ನಿಯಂತ್ರಣ ತಪ್ಪಿದ ಬೈಕ್ ಉರುಳಿ ಬಿದ್ದ ಪರಿಣಾಮ ತಲೆಗೆ ಗಂಭೀರ ಏಟು ಬಿತ್ತು. ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಹಿಂಬದಿ ಕುಳಿತಿದ್ದ ಅವಿನಾಶ್ ರಸ್ತೆಯಲ್ಲೇ ಮೃತಪಟ್ಟಿದ್ದ. ಅಲ್ಲಿಗೆ ಅವನ ಕನಸು ನುಚ್ಚುನೂರಾಯಿತು. ಹೆಂಡತಿ ಮಕ್ಕಳ ಸ್ಥಿತಿ ಅತಂತ್ರವಾಯಿತು. ರಿತೇಶ್‍ಗೆ ಪ್ರಜ್ಞೆ ಬಂದಾಗ ಅವಿನಾಶ್‍ನ ಸಾವನ್ನು ಅರಗಿಸಿಕೊಳ್ಳಲು ಆತನಿಗೆ ಸಾಧ್ಯವಾದೀತೇ?”- ತನ್‍ಸೀಫ್ ತನ್ನಲ್ಲೇ ಪ್ರಶ್ನಿಸುತ್ತಿದ್ದ.
ವಾರದ ಹಿಂದೆ ತನ್ನ ಬಾಲ್ಯ ಸ್ನೇಹಿತ ಅಶ್ರಫ್ ಗಲ್ಫ್‍ನಿಂದ ಊರಿಗೆ ಬಂದವ ಪಣಂಬೂರು ಬೀಚ್‍ಗೆ ಹೋಗಿದ್ದ. ಅಲ್ಲಿ ಸುತ್ತಾಡುತ್ತಾ, ಈಜುತ್ತಾ ಮೋಜಿನಾಟದಲ್ಲಿ ತೊಡಗಿದ್ದ ಅಶ್ರಫ್‍ನನ್ನು ಕಡಲ ಸೆರೆ ಸುನಾಮಿಯಂತೆ ಬಂದು ಕೊಚ್ಚಿಕೊಂಡು ಹೋಯಿತು. ಒಂದಲ್ಲ… ಎರಡ್ಮೂರು ದಿನ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ಹಾಗಾಗಿ ಅಶ್ರಫ್ ಮೃತಪಟ್ಟಿದ್ದಾನೆ ಎಂದು ಎಲ್ಲರೂ ಭಾವಿಸಿದರು. ಆದರೆ ಆತನ ಮೃತದೇಹ ಸಿಗಲೇ ಇಲ್ಲ. ಎಲ್ಲಿ ಹೋದನೋ, ಏನಾದನೋ? ಒಂದು ವೇಳೆ ಕೊನೆಯುಸಿರೆಳೆದಿದ್ದರೆ, ಮೃತದೇಹ ಉತ್ತರಾಭಿಮುಖವಾಗಿ ಹರಿಯಿತೋ ಅಥವಾ ದಕ್ಷಿಣಾಭಿಮುಖವಾಗಿ ಹರಿಯಿತೋ… ಬಲ್ಲವರು ಯಾರು?. ಅಶ್ರಫ್ ಅವಿವಾಹಿತ. ಒಂದು ವೇಳೆ ಆತನಿಗೆ ಮದುವೆಯಾಗಿದ್ದರೆ, ಇದ್ದತ್‍ಗೆ ಕೂರಬೇಕೋ ಬೇಡವೋ ಎಂಬ ಗೊಂದಲ ಹೆಂಡತಿಗೆ ಉಂಟಾಗುತ್ತಿತ್ತಲ್ಲವೇ? ಅಂದು ಅಶ್ರಫ್ ತನ್ನನ್ನೂ ಕರೆದಿದ್ದ. ಯಾಕೋ, ಮೈಗೆ ಹುಷಾರಿಲ್ಲ ಎಂದು ಸುಳ್ಳು ಹೇಳಿ ಮನೆಯಲ್ಲೇ ಉಳಿದಿದ್ದೆ. ಒಂದು ವೇಳೆ ತಾನು ಕೂಡ ಪಣಂಬೂರು ಬೀಚ್‍ಗೆ ಹೋಗಿದ್ದರೆ, ಏನಾಗುತ್ತಿದ್ದೆ? ಅಶ್ರಫ್ ಜತೆ ತಾನೂ ಕೊನೆಯುಸಿರೆಳೆಯುತ್ತಿದ್ದೆನೇ?- ತನ್‍ಸೀಫ್‍ನ ಮೈ ನಡುಗುತ್ತಿತ್ತು.
ಪಾವೂರು ಗ್ರಾಮದ ಅರಸ್ತಾನದ ತನ್‍ಸೀಫ್ ಸಣ್ಣದಿರುವಾಗ ತುಂಟ ಪ್ರಶ್ನೆಯಿಂದ ಎಲ್ಲರ ಗಮನ ಸೆಳೆದಿದ್ದ. ಆಕಾಶ ಹೇಗೆ ನಿಂತಿದೆ? ಅದಕ್ಕೆ ಊರುಗೋಲು ಯಾವುದು? ಸಿಯಾಳದೊಳಗೆ ಹೇಗೆ ನೀರು ಹೋಗುತ್ತದೆ? ಮೀನು ನೆಲದಲ್ಲಿ ಯಾಕೆ ಚಲಿಸುವುದಿಲ್ಲ?. ನಾಯಿಯ ಬಾಲ ಯಾಕೆ ಡೊಂಕು? ಹೀಗೆ ತರಲೆ ಪ್ರಶ್ನೆ ಕೇಳಿ, ಕೆಲವರಿಂದ ಬೈಗುಳ ತಿನ್ನುತ್ತಿದ್ದ.
ತನ್‍ಸೀಫ್‍ನ ಮನೆಯಲ್ಲಿ ಬಡತನವಿರಲಿಲ್ಲ. ಅಲ್ಲದೆ ಶಿಕ್ಷಣಕ್ಕೂ ಒಳ್ಳೆಯ ಪ್ರೋತ್ಸಾಹ ಸಿಕ್ಕಿತ್ತು. ಆದರೂ ಕೆಲವೊಮ್ಮೆ ಆತ ಶಿಕ್ಷಣದ ಬಗ್ಗೆಯೂ ಜಿಗುಪ್ಸೆಗೊಂಡಿದ್ದ. ಈ ಪುಸ್ತಕದ ಬದನೆ ಕಾಯಿಯಿಂದ ಏನಾಗಲಿಕ್ಕಿದೆ ಎಂದು ಹಲುಬುತ್ತಿದ್ದ. ಬ್ಯಾಂಕ್‍ನಲ್ಲಿ ಕ್ಲರ್ಕ್ ಹುದ್ದೆ ಸಿಕ್ಕಿದರೂ ಹೊಂದಾಣಿಕೆ ಮಾಡಲು ಪರಿತಪಿಸುತ್ತಿದ್ದ. ಈ ಹುದ್ದೆ, ಈ ಗ್ರಾಹಕರು, ಹಣ ವಿನಿಮಯ ಇದೆಲ್ಲಾ ಅವನಿಗೆ ವಾಕರಿಕೆ ಬರಲು ಶುರುಮಾಡಿತು.
ಕೆಲವೊಮ್ಮೆ ಅಕ್ಕಪಕ್ಕದ ಮನೆಮಂದಿಯ ಬಡತನ ಕಂಡು ಅವನ ಮನಸ್ಸು ವ್ಯಾಕುಲಗೊಂಡಿತ್ತು. ಅಷ್ಟೇ ಅಲ್ಲ, ಒಂದಿಬ್ಬರು ಅಂಗವಿಕಲ ಮಕ್ಕಳನ್ನು ಕಂಡ ಮೇಲಂತೂ ತನಗೆ ಮದುವೆ-ಮಕ್ಕಳು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದ. ಮಗನ ಈ ವಿಚಿತ್ರ ವರ್ತನೆಯನ್ನು ಕಂಡು ಹೈದರ್ ಹಾಜಿಯವರು ಮಂಗಳೂರಿನ ಪ್ರಸಿದ್ಧ ಮಾನಸಿಕ ತಜ್ಞರ ಬಳಿ ತಪಾಸಣೆಗೊಳಪಡಿಸಿದ್ದರು. ಮೂರ್ನಾಲ್ಕು ತಿಂಗಳು ವೈದ್ಯರಿಗೆ ಹಣ ಸುರಿಯಲಾಯಿತೇ ವಿನ: ತನ್‍ಸೀಫ್‍ನ ಮಾತು, ಚಿಂತನೆಯಲ್ಲಿ ಒಂದಿಷ್ಟೂ ಬದಲಾವಣೆ ಆಗಲಿಲ್ಲ. ಹಾಗಾಗಿ ಮನೆಮಂದಿಯೂ ಅವನಷ್ಟಕ್ಕೆ ಬಿಟ್ಟು ಬಿಟ್ಟರು.
ವಯಸ್ಸು ತುಂಬುತ್ತಿದ್ದಂತೆಯೇ ಮದುವೆಯ ಬಗ್ಗೆ ಮನೆಯಲ್ಲಿ ಮಾತುಕತೆ ನಡೆಸತೊಡಗಿದರು. ಮೊದಲೇ ಹೆಂಡತಿ-ಮಕ್ಕಳ ಬಗ್ಗೆ ಜಿಗುಪ್ಸೆ ಹೊಂದಿದ್ದ ತನ್‍ಸೀಫ್ ಯಾರ ಒತ್ತಡಕ್ಕೂ ಮಣಿಯಲಿಲ್ಲ. ಮದುವೆಯಾಗುವುದಿಲ್ಲ ಎಂದು ಹಠವಿಡಿದ. ನನಗೆ ಮದುವೆ ಇಷ್ಟವಿಲ್ಲ. ಯಾವಳೋ ಒಬ್ಬಳನ್ನು ಕಟ್ಟಿಕೊಳ್ಳುವುದು… ನನ್ನ ಜತೆ ಬಾಳಲು ಅವಳು ಹೆಣಗಾಡುವುದು… ಇದೆಲ್ಲಾ ಯಾಕೆ? ಅವಳು ಅವಳಷ್ಟಕ್ಕಿರಲಿ ಅಥವಾ ಬೇರೆ ಹುಡುಗನನ್ನು ಮದುವೆಯಾಗಲಿ ಎಂದೆಲ್ಲಾ ಹೇಳುತ್ತಿದ್ದ.
ಗಂಡು ಮತ್ತು ಹೆಣ್ಣಿನ ಮಧ್ಯೆ “ಮದುವೆ” ಎಂಬ ಸಂಬಂದ ಏರ್ಪಟ್ಟರೆ ಅದು ಪುಣ್ಯದಾಯಕ. ಗಂಡಾಗಲಿ, ಹೆಣ್ಣಾಗಲಿ ದಾರಿ ತಪ್ಪುವುದನ್ನು ಅದು ತಪ್ಪಿಸುತ್ತದೆ. ಇಲ್ಲದಿದ್ದರೆ ಅನೈತಿಕ ಸಂಬಂಧಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದೆಲ್ಲಾ ಹಿರಿಯರು, ಆಪ್ತರು ಹೇಳಿಕೊಂಡರೂ ತನ್‍ಸೀಫ್ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಕೆಲಸದ ಬಗ್ಗೆ ತನಗಿರುವ ಪ್ರೀತಿ-ಏಕಾಗ್ರತೆಗೆ ತೊಂದರೆಯಾಗಲಿದೆ ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಇಷ್ಟು ವಯಸ್ಸಾದರೂ ಇನ್ನೂ ಮದುವೆಯಾಗಿಲ್ಲ ಯಾಕೆ? ಅಂತ ಯಾರಾದರು ಕೇಳಿದರೆ ಮದುವೆ ಆಗಲೇ ಬೇಕು ಎಂಬ ನಿಯಮವಿದೆಯಾ? ಎಂದು ಒಗಟಾಗಿ ಪ್ರಶ್ನಿಸುತ್ತಿದ್ದ. ಬಹುಷ: ಹುಡುಗಿಯರ ಬಗ್ಗೆ ಆತನಿಗೆ ವ್ಯಾಮೋಹ ಇಲ್ಲವೇನೋ ಎಂದು ಅವನನ್ನು ಬಲ್ಲವರು ಭಾವಿಸಿದ್ದರು. ಕೆಲವರು ತರಲೆ ಪ್ರಶ್ನೆ ಕೇಳಿ ಆತನನ್ನು ಕೆಣಕುತ್ತಿದ್ದರು. ಆದರೆ, ತಾನು ಇತರರಿಗೆ ವಸ್ತುವಾಗುತ್ತಿದ್ದೇನೆ ಎಂಬ ಅರಿವು ಇದ್ದರೂ ಆ ಬಗ್ಗೆ ಕೀಳರಿಮೆ ಇರಲಿಲ್ಲ.
“ಮೋನೇ… ನಮ್ಮ ಏಕೈಕ ಮಗ ನೀನು. ನಿನ್ನ ಮದುವೆ-ಮೊಮ್ಮಗುವನ್ನು ನೋಡುವ ಆಸೆ ನನಗೆ” ಎಂದು ಉಮ್ಮಾತುಮ್ಮ ಹೇಳಿದರೂ ತನ್‍ಸೀಫ್‍ನ ಮನಸ್ಸು ಕರಗಲಿಲ್ಲ. “ಉಮ್ಮ. ನನಗೆ ಮದುವೆ ಇಷ್ಟವಿಲ್ಲ” ಎಂದು ತನ್‍ಸೀಫ್ ನೇರವಾಗಿ ಹೇಳಿದ್ದ. ಆದರೆ, ಅದು ಕೃತಕ ಅಲ್ಲ.
“ಅವನಿಗೆ ಬೇಡ ಅಂತಾದರೆ ನಾವು ಯಾಕೆ ತಲೆಕೆಡಿಸಿಕೊಳ್ಳುವುದು. ಇನ್ನು ಅವನೇ ನನಗೆ ಮದುವೆ ಮಾಡಿಕೊಡಿ ಎನ್ನಬೇಕು. ಅಷ್ಟರವರೆಗೆ ನಾವು ಅದರ ಬಗ್ಗೆ ಮಾತನಾಡುವುದು ಬೇಡ” ಎಂದು ಹೈದರ್ ಹಾಜಿ ಕೋಪದಿಂದ ಹೇಳಿದ್ದರೂ, ಒಳಮನಸ್ಸು ಮದುವೆಯ ಬಗ್ಗೆ ಮಗ ಆದಷ್ಟು ಬೇಗ ನಿರ್ಧಾರ ತಾಳಲಿ ಎಂದು ಹೇಳುತ್ತಿತ್ತು.
ವರ್ಷಗಳು ಉರುಳಿತು. ಏಕೈಕ ಮಗನ ವಿಚಿತ್ರ ಸ್ವಭಾವದಿಂದ ಬೇಸತ್ತ ಉಮ್ಮಾತುಮ್ಮ ಹಾಸಿಗೆ ಹಿಡಿದರಲ್ಲದೆ, ಕೆಲವು ತಿಂಗಳ ನಂತರ ಕೊನೆಯುಸಿರೆಳೆದರು. ಈ ಆಸ್ತಿ-ಪಾಸ್ತಿ ಇದ್ದೇನು ಪ್ರಯೋಜನ? ಮಗನ ಇಂಥ ಸ್ಥಿತಿಯಿಂದ ಮನಸ್ಸಿಗೆ ಹೇಗೆ ನೆಮ್ಮದಿ ಉಂಟಾದೀತು? ಎಂದೆಲ್ಲಾ ಪ್ರಶ್ನಿಸುತ್ತಿದ್ದ ಹೈದರ್ ಹಾಜಿ ಕೂಡ ಇಹಲೋಕ ತ್ಯಜಿಸಿದರು. ಮಗನನ್ನು ನೆನೆದೇ ಅವರಿಬ್ಬರು ಮರಳಿ ಬಾರದ ಲೋಕಕ್ಕೆ ಹೋದರು ಎಂದೆಲ್ಲಾ ಕುಟುಂಬದ ಇತರ ಸದಸ್ಯರು, ಅಕ್ಕಪಕ್ಕದ ಮನೆಯವರು ಹೇಳಿ ಬೇಸರಿಸಿಕೊಂಡರು. ಇವ ಬ್ಯಾಂಕ್‍ನಲ್ಲಿ ಹೇಗೆ ಇರುತ್ತಾನೆ? ಅಲ್ಲೂ ಗ್ರಾಹಕರ ಜತೆ ಮುನಿಸಿಕೊಂಡಿರುತ್ತಾನಾ? ಎಂದು ಕೆಲವರಿಗೆ ಅನಿಸಿದ್ದು ಸುಳ್ಳಲ್ಲ. ಯಾರು ಏನೇ ಹೇಳಿದರೂ ತನ್‍ಸೀಫ್ ತಲೆಕೆಡಿಸಿಕೊಳ್ಳಲಿಲ್ಲ.
ಇದ್ದಕ್ಕಿದ್ದ ಹಾಗೆ, ತನ್‍ಸೀಫ್ ಧರ್ಮ ಪ್ರಚಾರಕ್ಕಿಳಿದ. ಉದ್ದದ ಗಡ್ಡ ಬಿಟ್ಟ. ವೇಷಭೂಷಣದಲ್ಲೂ ಬದಲಾವಣೆ ಮಾಡಿಕೊಂಡ. ಮಾತು ಮಾತಿಗೂ ಧರ್ಮ… ಧರ್ಮ… ಎನ್ನುತ್ತಾ, ಧರ್ಮಕ್ಕೆ ಹೊಡೆತ ಬೀಳುತ್ತಿದೆ ಎನ್ನತೊಡಗಿದ. ತನ್‍ಸೀಫ್‍ನ ಈ ಅನಿರೀಕ್ಷಿತ ವರ್ತನೆ ಯಾರಿಗೂ ಆಶ್ಚರ್ಯವನ್ನುಂಟು ಮಾಡಲಿಲ್ಲ. ಆದರೆ, ಬಂಗಾರದಂತಹ ಬ್ಯಾಂಕ್ ಉದ್ಯೋಗಕ್ಕೆ ಕುತ್ತುಂಟಾದೀತೋ ಎಂದು ಕೆಲವರು ಆತಂಕಗೊಂಡರು. ಬ್ಯಾಂಕ್‍ನಿಂದ ಮೇಲಿಂದ ಮೇಲೆ ನೆನಪಿನೋಲೆ ಬರುವುದೂ, ತನ್‍ಸೀಫ್‍ನ ವೇಷಭೂಷಣದಲ್ಲಿ ಮತ್ತೆ ಬದಲಾವಣೆಗೊಳ್ಳುವುದೂ ಸರಿಸಮವಾಗಿತ್ತು.
ಎಂದಿನಂತೆ ಮತ್ತೆ ಕೆಲಸಕ್ಕೆ ಹಾಜರಾದ. ಸಹೋದ್ಯೋಗಿಗಳ ಪ್ರಶ್ನೆಗೆ ಮೊದಲು ಉತ್ತರಿಸಲೇ ಇಲ್ಲ. ಕೊನೆಗೆ, ಬದುಕಿನಲ್ಲೊಂದು ಬದಲಾವಣೆ ಬೇಕು. ಅದಕ್ಕಾಗಿ ಅತ್ತ ಹೆಜ್ಜೆ ಹಾಕಿದೆ ಎಂದ. ಹಾಗಿದ್ದರೆ, ನಿನ್ನ ಧರ್ಮ ಪ್ರಚಾರ ಕಪಟವೋ ಎಂಬ ಪ್ರಶ್ನೆಗೆ ಅಸಮರ್ಪಕ ಉತ್ತರ ನೀಡತೊಡಗಿದ.
ತನ್‍ಸೀಫ್‍ಗೆ 35 ವರ್ಷ ಪ್ರಾಯ ದಾಟಿತ್ತು. ಅವನ ಬಾಲ್ಯ ಸ್ನೇಹಿತರು ಆಗಲೇ ಮೂರ್ನಾಲ್ಕು ಮಕ್ಕಳ ತಂದೆಯಾಗಿದ್ದರು. ಅದನ್ನೆಲ್ಲಾ ಕಂಡು ತನ್‍ಸೀಫ್‍ನ ಮನಸ್ಸು ಯಾಕೋ ಅರಳತೊಡಗಿತು. ಹಾಗೇ ಚೆಂದದ ಹುಡುಗಿಯರನ್ನು ವ್ಯಾಮೋಹಿಸತೊಡಗಿದ. ಮದುವೆಯ ಬಗ್ಗೆ ಕನಸು ಕಾಣತೊಡಗಿದ. ಆದರೆ, ಅದರ ಬಗ್ಗೆ ಯಾರಲ್ಲಿ ಹೇಳುವುದು? ತಂದೆ-ತಾಯಿ ಕಾಲವಾದ ಮೇಲೆ ಆ ಮನೆಗೆ ಯಾರೂ ಸುಳಿಯುತ್ತಿರಲಿಲ್ಲ. ಮೊದಮೊದಲು ಬದ್ರುದ್ದೀನ್ ತನ್ನ ಅಣ್ಣನ ಮನೆ ಎಂದು ಭಾವಿಸಿ ಅಲ್ಲಿಗೆ ಹೋದಾಗ, ತನ್‍ಸೀಫ್ ಮುಖ ಸಿಂಡರಿಸತೊಡಗಿದ್ದ. ಅದನ್ನು ಅರ್ಥ ಮಾಡಿಕೊಂಡ ಅವರು ಮತ್ತೆ ಅತ್ತ ಕಾಲಿಡಲಿಲ್ಲ. ಈಗ ತನ್ನ ಅಭಿಲಾಶೆಯನ್ನು ನಾನು ಯಾರಲ್ಲಿ ಹೇಳಲಿ? ನೇರವಾಗಿ ನನಗಿಷ್ಟವಾದ ಹುಡುಗಿಯ ಮನೆ ಕಂಡು ಹಿಡಿದು ಅವರ ಹೆತ್ತವರ ಜತೆ ಮಾತನಾಡಲೇ? ಅಥವಾ ಗೆಳೆಯರ ಸಹಾಯ ಪಡೆಯಲೇ?-ತನ್‍ಸೀಫ್ ಗೊಂದಲಕ್ಕೀಡಾದ. ಕೊನೆಗೆ ಚಿಕ್ಕಪ್ಪ ಬದ್ರುದ್ದೀನ್‍ರ ಮನೆಗೆ ಹೋದ. ಅಣ್ಣನ ವಿಚಿತ್ರ ಸ್ವಭಾವದ ಮಗ ಅನಿರೀಕ್ಷಿತವಾಗಿ ತನ್ನ ಮನೆಗೆ ಬಂದುದನ್ನು ಕಂಡು ಬದ್ರುದ್ದೀನ್ ಆಶ್ವರ್ಯಚಕಿತರಾದರು. “ಏನು ಬಂದೆ?” ಎಂದು ನೇರವಾಗಿ ಕೇಳಲು ಅವರಿಗೆ ಮುಜುಗರ. ಅಲ್ಲದೆ, ಕುಟುಂಬಸ್ಥನೇ ಆದದ್ದರಿಂದ ಹಾಗೆಲ್ಲ ಕೇಳುವುದು ಸೌಜನ್ಯವಲ್ಲ ಎಂದು ಭಾವಿಸಿದ ಅವರು, ಬಂದ ಉದ್ದೇಶವನ್ನು ಆತನೇ ತಿಳಿಸಲಿ ಎಂದು ಕಾದು ಕುಳಿತರು. ಚಿಕ್ಕಮ್ಮ ಮತ್ತು ಮಕ್ಕಳ ಜತೆಯೂ ಮಾತುಕತೆ ನಡೆಸಿದ. ತನ್‍ಸೀಫ್‍ನ ಬದಲಾವಣೆಯನ್ನು ಕಂಡು ಅವರು ಕೂಡ ಕುಶಿಕೊಂಡರು.
ಕೊನೆಗೆ ತನ್‍ಸೀಫ್ ತನ್ನ ಮದುವೆಯ ಬಯಕೆಯನ್ನು ಮುಂದಿಟ್ಟ. ಬದ್ರುದ್ದೀನ್, ತನ್‍ಸೀಫ್‍ನನ್ನು ಅಡಿಯಿಂದ ಮುಡಿಯವರೆಗೆ ನೋಡಿದರು. ಹುಡುಗಿಯರಿಗೇನೂ ಬರವಿಲ್ಲ. ಆದರೆ, ಮದುವೆಯಾದ ಮೇಲೆ ಕೈ ಬಿಟ್ಟರೆ, ಈತನ ಸ್ವಭಾವ ಗೊತ್ತಿದ್ದೂ ತಾನು ಆ ಹುಡುಗಿಗೆ ವಂಚನೆ ಮಾಡಿದಂತಾಗುವುದಿಲ್ಲವೇ ಎಂಬ ಪ್ರಶ್ನೆ ಬದ್ರುದ್ದೀನ್‍ರ ತಲೆ ತಿನ್ನತೊಡಗಿತು.
ತನ್ನ ಹೆಂಡತಿಯ ಸಂಬಂಧಿಕರ ಪೈಕಿ ಅನೇಕ ಹುಡುಗಿಯರಿದ್ದಾರೆ. ಆ ಪೈಕಿ ಒಬ್ಬಳನ್ನು ಇವನಿಗೆ ಮಾತನಾಡಿದರೆ ಹೇಗೆ ಎಂದು ಬದ್ರುದ್ದೀನ್‍ರಿಗೆ ಅನಿಸಿದ್ದು ಸುಳ್ಳಲ್ಲ. ಅದನ್ನು ಅವರು ಹೆಂಡತಿಯಲ್ಲೂ ಉಸುರಿದರು. “ಯಾಕೆ ಅವನನ್ನು ನಮ್ಮ ಪೈಕಿಯ ಕುಟುಂಬಕ್ಕೆ ಗಂಟು ಹಾಕುವುದು? ನಿಮ್ಮ ಕೊನೆಯ ತಂಗಿಯ ಮೂರನೆಯ ಮಗಳೊಬ್ಬಳಿದ್ದಾಳಲ್ಲ… ಅವಳಿಗೆ ಮಾತನಾಡಿ ನೋಡಿ” ಎಂದರು. ಆದರೆ, ಹೆಂಡತಿಯ ಮಾತಿಗೆ ಬದ್ರುದ್ದೀನ್ ಅಷ್ಟು ಬೇಗ ಕರಗುವವರಲ್ಲ. “ನೋಡು… ನಾನು ಅವನಲ್ಲಿ ಈ ಹಿಂದೆಯೇ ಮದುವೆಯ ಪ್ರಸ್ತಾಪ ಎತ್ತಿ, ತಂಗಿಯ ಮಗಳನ್ನು ಮಾತನಾಡಿದ್ದೆ. ಅವ ಸಂಬಂಧಿಕರೊಳಗೆ ಮದುವೆ ಬೇಡ ಎಂದಿದ್ದ” ಎಂದು ಸುಳ್ಳು ಹೇಳಿದರು.
“ನಿನ್ನ ದೊಡ್ಡ ಅಣ್ಣನಿಗೆ ಹೆಣ್ಮಕ್ಕಳು ಜಾಸ್ತಿ ಅಲ್ವ? ಅವರೂ ಕಷ್ಟದಲ್ಲಿದ್ದಾರೆ. ಇವನಿಗೆ ಮಾತನಾಡಿ ನೋಡುವ. ವರದಕ್ಷಿಣೆ ಅಂತ ಕೊಡಬೇಕಾಗಿಲ್ಲ. ಮದುವೆಯ ಖರ್ಚನ್ನೂ ಇವನಿಂದಲೇ ಮಾಡಿಸೋಣ” ಎಂದೆಲ್ಲಾ ಸಾಗ ಹಾಕಿದ ಬದ್ರುದ್ದೀನ್, ಹೆಂಡತಿಯನ್ನು ಆಕೆಯ ಅಣ್ಣನ ಮನೆಗೆ ಕಳುಹಿಸಿಕೊಟ್ಟರು.
ಮೊದಲೇ ಸೋತು ಸುಣ್ಣವಾಗಿದ್ದ ರಹಿಮಾಕ, ವರದಕ್ಷಿಣೆ ಪಡೆಯದೆ ಮದುವೆ ಆಗುವುದಾದರೆ ಯಾಕೆ ಮಾಡಿಕೊಡಬಾರದು ಎಂದು ಯೋಚಿಸಿ “ಆಯ್ತು… ಅಲ್ಲಾಹನ ವಿಧಿಯಂತೆ ಆಗಲಿ” ಎನ್ನುತ್ತಾ ಕೊನೆಯ ಮಗಳು ಬಲ್ಕೀಸ್‍ಳನ್ನು ಮದುವೆ ಮಾಡಿಕೊಡಲು ನಿರ್ಧರಿಸಿದರು. ತನ್‍ಸೀಫ್‍ನ ಬಗ್ಗೆ ಒಂದಷ್ಟು ಕೇಳಿ ತಿಳಿದುಕೊಂಡಿದ್ದ ಬಲ್ಕೀಸ್‍ಗೆ ಈ ಮದುವೆ ಇಷ್ಟವಿರಲಿಲ್ಲ. ಆಸ್ತಿ-ಸಂಪತ್ತು ಎಷ್ಟೇ ಇದ್ದರೂ ಕೂಡ ವಿಚಿತ್ರ ಸ್ವಭಾವದ ವ್ಯಕ್ತಿಯ ಜತೆ ಹೆಣಗಾಡುವುದು ಹೇಗೆ ಎಂಬ ಪ್ರಶ್ನೆ ಆಕೆಯನ್ನು ಬಾಧಿಸಿತು. ಆದರೆ, ಅದ್ಯಾವುದನ್ನೂ ಹೆತ್ತವರಲ್ಲಿ ಹೇಳಿಕೊಳ್ಳಲಾಗದೆ ಆಕೆ ತೊಳಲಾಡಿದಳು. ಅತ್ತ ಮದುವೆಯ ಕುರಿತು ಮಾತುಕತೆ-ಸಿದ್ಧತೆ ನಡೆಯುತ್ತಲೇ ಇತ್ತು.
ಅದೊಂದು ದಿನ ತನ್‍ಸೀಫ್-ಬಲ್ಕೀಸ್ ಒಂದಾದರು. ತನ್‍ಸೀಫ್‍ನ ವೇಷಭೂಷಣದಲ್ಲೂ ಮತ್ತೆ ಬದಲಾವಣೆಯಾಗಿತ್ತು. ಬಿಳಿಕಾಲರ್ ಎದ್ದು ಕಾಣುತ್ತಿತ್ತು. ನೋಡಲು ತುಂಬಾ ಚೆಂದ ಕಾಣುತ್ತಿದ್ದ. ಯಾವುದಕ್ಕೂ ಹುಡುಗಿ ಅದೃಷ್ಟ ಮಾಡಿರಬೇಕು ಎಂದು ಕೆಲವರು ಹೇಳಿಕೊಂಡರು. ತನ್‍ಸೀಫ್ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿರುವುದು ಬದ್ರುದ್ದೀನ್‍ರಿಗೂ ನೆಮ್ಮದಿಯನ್ನುಂಟು ಮಾಡಿತ್ತು.
ಅವರು ನವದಂಪತಿಯನ್ನು ಹರಸಿದರು. ಮನೆಯಲ್ಲೊಂದು ಪುಟ್ಟ ಔತಣಕೂಟ ಏರ್ಪಡಿಸಿ ಸಂತಸ ವ್ಯಕ್ತಪಡಿಸಿದರು.
ದೊಡ್ಡದಾದ ಬಂಗಲೆಯಲ್ಲಿ ಕಾಲಕಳೆಯಲು ಬಲ್ಕೀಸ್‍ಗೆ ಮೊದಲು ಬೇಸರವಾದರೂ ಕೂಡ ನಂತರ ಹೊಂದಾಣಿಕೆ ಮಾಡಿಕೊಂಡಳು. ಎಲ್ಲಕ್ಕಿಂತ ಮುಂಚೆ ಗಂಡನ ಸ್ವಭಾವವನ್ನು ಅರಿತುಕೊಂಡು ಸ್ಪಂದಿಸತೊಡಗಿದಳು. ಆತ ತಪ್ಪಿದಾಗ ಆತನಿಗೆ ಅರಿವಿಲ್ಲದಂತೆ ಸರಿಪಡಿಸತೊಡಗಿದಳು. ಹೆಂಡತಿಯ ಪ್ರೀತಿದಾಯಕ ಮಾತು, ನಡೆಯಿಂದ ತನ್‍ಸೀಫ್ ಪುಳಕಗೊಂಡ. ದಾಂಪತ್ಯ ಬದುಕಿನ ಸುಖದ ಕ್ಷಣಗಳನ್ನು ಸವಿಯತೊಡಗಿದ.
ಅತ್ತೆ-ಮಾವ, ಚಿಕ್ಕಪ್ಪ-ಚಿಕ್ಕಮ್ಮ ಮತ್ತಿತರರು ಆಗಾಗ ಆ ಮನೆಗೆ ಹೋಗಿ ಬರತೊಡಗಿದರು. ಇತ್ತ ತನ್‍ಸೀಫ್ ಕೂಡ ಹೆಂಡತಿಯ ಜತೆಗೂಡಿ ಕುಟುಂಬಸ್ಥರ ಮನೆಗೆ ಹೋಗುತ್ತಿದ್ದ. ಈ ಹಿಂದೆ ತಾನು ತನ್ನ ಬದುಕನ್ನು ವೃಥಾ ವ್ಯಯಿಸಿ ಕಾಲಹರಣ ಮಾಡಿದೆ ಎಂದು ತನ್‍ಸೀಫ್‍ಗೆ ಅನಿಸತೊಡಗಿತ್ತು.
ವರ್ಷ ಕಳೆಯುವುದರೊಳಗೆ ತನ್‍ಸೀಫ್ “ತಂದೆ”ಯಾಗಿದ್ದ. ಅಂದರೆ, ಬಲ್ಕೀಸ್ “ಗಂಡು” ಮಗುವಿಗೆ ಜನ್ಮ ನೀಡಿದ್ದಳು. ಮಗುವಿನ ಲಾಲನೆ-ಪಾಲನೆಯಲ್ಲಿ ಬಲ್ಕೀಸ್‍ಗೆ ತನ್‍ಸೀಫ್ ಕೂಡ ಸಹಾಯ ಮಾಡತೊಡಗಿದ. ತಾನು ಮದುವೆಯೇ ಬೇಡ ಅಂತ ನಿರ್ಧರಿಸಿ ಸುಮ್ಮನಿದ್ದು ಬಿಟ್ಟಿದ್ದರೆ, ಬದುಕು ಮತ್ತಷ್ಟು ಕಳಾಹೀನಗೊಳ್ಳುತ್ತಿತ್ತು ಎಂದು ತನ್‍ಸೀಫ್‍ಗೆ ಆಗಾಗ ಅನಿಸತೊಡಗಿತು. ಅದ್ಸರಿ, ತಾನ್ಯಾಕೆ ಒಮ್ಮೊಮ್ಮೆ “ನಾನು” ಆಗಿರುವುದಿಲ್ಲ ಎಂಬ ಪ್ರಶ್ನೆಯೂ ಅವನಿಗೆ ಕಾಡುತ್ತಿತ್ತು.
***
ಕಾಲಚಕ್ರ ತಿರುಗುತ್ತಿತ್ತು.
ಪ್ರಕೃತಿ ತನ್ನದೇ ದಾರಿಯಲ್ಲಿ ನಡೆಯುತ್ತಿತ್ತು.
ತನ್‍ಸೀಫ್ ಎಲ್ಲರ ಜತೆಯೂ ಬೆರೆಯುತ್ತಿದ್ದ. ಕುಶಾಲು, ಹರಟೆ, ಹುಸಿಮುನಿಸು, ಗಂಭೀರ ಮಾತು… ಹೀಗೆ ಸಂದರ್ಭಕ್ಕೆ ತಕ್ಕಂತೆ ವರ್ತಿಸುತ್ತಿದ್ದ. ಮದುವೆ, ಮುಂಜಿ, ಸಭೆ ಸಮಾರಂಭಗಳಿಗೆ ಹೆಂಡತಿ-ಮಗನನ್ನು ಕರೆದುಕೊಂಡು ಹೋಗುತ್ತಿದ್ದ. ತಿಂಗಳಿಗೊಮ್ಮೆ ಸುತ್ತಾಟ, ಆರು ತಿಂಗಳಿಗೊಮ್ಮೆ ಶಾಪಿಂಗ್… ಹೀಗೆ ಎಲ್ಲವೂ ಕರಾರುವಕ್ಕಾಗಿ ನಡೆಯುತ್ತಿತ್ತು. ಒಟ್ಟಿನಲ್ಲಿ ತನ್‍ಸೀಫ್-ಬಲ್ಕೀಸ್ ದಾಂಪತ್ಯ ಸಂತೃಪ್ತಿಯಿಂದ ಕೂಡಿತ್ತು.
ಅದೊಂದು ರಾತ್ರಿ…
ತನ್‍ಸೀಫ್ ಸವಿನಿದ್ದೆಯಲ್ಲಿದ್ದ. ಅಷ್ಟರಲ್ಲಿ ಒಂದಿಬ್ಬರು ಭಿಕ್ಷುಕರು `ಅಮ್ಮಾ… ಭಿಕ್ಷೆ’ ಎನ್ನುತ್ತಾ ಮನೆಯ ಗೇಟು ದಾಟಿ ಒಳಬಂದರು. ಈ ರಾತ್ರಿ ಯಾಕಪ್ಪಾ ಇವರು ತೊಂದರೆ ಕೊಡುತ್ತಾರೆ? ಎಂದು ಮನಸ್ಸು ಪ್ರಶ್ನಿಸಿದರೂ ಕೂಡ, ಬರಿಗೈಯಲ್ಲಿ ಕಳುಹಿಸಿಕೊಡಲು ಮನಸ್ಸಾಗಲಿಲ್ಲ. ಹಾಗೇ ಮಗ ಹಬೀಬ್‍ನನ್ನು ಕರೆದು “ನೋಡು… ಭಿಕ್ಷುಕರು ಬಂದಿದ್ದಾರೆ. ಆ ಮೇಜಿನ ಮೇಲೆ ಹಣವಿದೆ. ಅದರಿಂದ ಐದು ರೂಪಾಯಿ ಕೊಡು” ಎಂದು ತನ್‍ಸೀಫ್ ಹೇಳಿ ಮುಗಿಸಿರಲಿಲ್ಲ. “ಅಬ್ಬಾ… ಅಬ್ಬಾ… ನನ್ನನ್ನು ಇವರು ಎಳೆದುಕೊಂಡು ಹೋಗುತ್ತಿದ್ದಾರೆ” ಎಂದು ಮಗ ಹಬೀಬ್ ಕೂಗುತ್ತಿದ್ದ.
ಕಿಟಕಿಯ ಮೂಲಕವೇ ಮಗನನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯ ತನ್‍ಸೀಫ್‍ಗೆ ಕಣ್ಣಿಗೆ ಕಟ್ಟಿದಂತೆ ಕಾಣುತ್ತಿತ್ತು. ತಕ್ಷಣ ತನ್‍ಸೀಫ್ “ಮೋನೇ… ಮೋನೇ…” ಎಂದು ಚೀರಿ ಎದ್ದು ಮಗನತ್ತ ಹೋದರು. ನಾಲ್ಕರ ಹರೆಯದ ಆತ ಗಾಢ ನಿದ್ದೆಯಲ್ಲಿದ್ದ. ಅಮ್ಮನ ತೋಳಿನಲ್ಲಿ ಬಂಧಿಯಾಗಿದ್ದ.
ಹಾಗಿದ್ದರೆ, ತನಗೆ ಬಿದ್ದುದು ಕನಸು. ಈ ಅಪರಾತ್ರಿ ನನಗೆ ಇಂಥ ಕನಸು ಯಾಕೆ ಬಿತ್ತು? ಇದ್ಯಾವ ಆಪತ್ತಿನ ಸೂಚನೆ?. ಭಿಕ್ಷುಕರ ವೇಷದಲ್ಲಿ ಬಂದು ಮಗನನ್ನು ಕಿಟಕಿಯಿಂದಲೇ ಬಂದು ಎಳೆದು ಒಯ್ಯುವುದೆಂದರೆ ಏನರ್ಥ?… ತನ್‍ಸೀಫ್ ಗೊಂದಲದ ಗೂಡಾದ. ಮೊದಲೇ ವಿಚಿತ್ರ ಸ್ವಭಾವದ ತನ್‍ಸೀಫ್‍ಗೆ ಆ ಕನಸು ನೂರಾರು ಅನರ್ಥಗಳನ್ನು ಹುಟ್ಟುಹಾಕತೊಡಗಿತು. ಬಳಿಕ ಅವನಿಗೆ ನಿದ್ದೆ ಹತ್ತಲಿಲ್ಲ. ಎಂದಿನಂತೆ ಹೆಂಡತಿ ಮತ್ತು ಮಗ ಹಬೀಬ್ ಎದ್ದಾಗಲೂ ಅವರ ಮುಖ ನೋಡಲು ತನ್‍ಸೀಫ್‍ನಿಗೆ ಆಗಲಿಲ್ಲ. ರಾತ್ರಿ ಕಂಡ ಕನಸನ್ನೂ ಹೇಳಲಾಗದೆ ತೊಳಲಾಡಿದ. ಮಗನಿಗೆ ಅಪ್ಪನ ವಿಚಿತ್ರ ಸ್ವಭಾವದ ಪರಿಚಯ ಇನ್ನೂ ಆಗಿಲ್ಲ. ಗಂಡನ ಮುಖ ಕಳಾಹೀನಗೊಂಡದ್ದನ್ನು ಅರ್ಥ ಮಾಡಿಕೊಂಡ ಹೆಂಡತಿ,”ಯಾಕೆ ಒಂಥರಾ ಇದ್ದೀರಿ?” ಎಂದು ಕೇಳಿ, “ಇವರು ಮೊದಲಿನಂತೆ ವರ್ತಿಸಲು ಶುರು ಮಾಡಿದರಾ?” ಅಂತ ಶಂಕಿಸಿದಳು.
ಎರಡು ವರ್ಷದ ಹಿಂದೆ ಅದ್ಯಾವುದೋ ಪುಸ್ತಕದ ಅಂಗಡಿಯಲ್ಲಿ ಕನಸಿಗೆ ಸಂಬಂಧಿಸಿದ ಪುಸ್ತಕವನ್ನು ತನ್‍ಸೀಫ್‍ಗೆ ನೋಡಿದ ನೆನಪು. ಅದರಂತೆ ಪುಸ್ತಕದ ಅಂಗಡಿಗೆ ಹೋಗಿ ಆ ಪುಸ್ತಕ ಖರೀದಿಸಿದ. ಬ್ಯಾಂಕ್‍ನಲ್ಲಿ ಕೆಲಸದ ಮೇಲೆ ಶ್ರಧ್ಧೆ ಇಲ್ಲ. ಗ್ರಾಹಕರ ಮತ್ತು ಸಹೋದ್ಯೋಗಿಗಳ ಜತೆಯೂ ಸರಿಯಾಗಿ ಮಾತನಾಡಲಿಲ್ಲ. ತುಂಬಾ ಖಿನ್ನನಾಗಿದ್ದ. ಬಿಡುವಿದ್ದಾಗಲೆಲ್ಲಾ ಪುಸ್ತಕದ ಪುಟಗಳನ್ನು ತಿರುವು ಹಾಕಿದ. ಕೆಲವು ಭಯಾನಕ ಕನಸು ಮತ್ತು ತದನಂತರದ ಆಪತ್ತಿನ ಘmನೆಗಳನ್ನೆಲ್ಲಾ ಓದುತ್ತಲೇ ಥರಥರ ನಡುಗತೊಡಗಿದ. ತನ್‍ಸೀಫ್ ಮತ್ತೆ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಕಂಡು ಸಹೋದ್ಯೋಗಿಗಳು ಅವನಿಗೆ ಅರಿವಿಲ್ಲದಂತೆ ಕೌನ್ಸಿಲಿಂಗ್ ನಡೆಸಲು ಮುಂದಾದರು. ಆದರೆ, ತನ್‍ಸೀಫ್ ಯಾವುದಕ್ಕೂ ಸ್ಪಂದಿಸಲಿಲ್ಲ. ಮನೆಗೆ ಹೋದರೂ ಕೂಡ ವಿಚಿತ್ರವಾಗಿದ್ದ. ಮಗನ ಅಕ್ಕರೆಯ ಮಾತಿಗೂ ಧ್ವನಿಗೂಡಿಸಲಿಲ್ಲ. ಗಂಡ ಮೊದಲಿನಂತೆ ವರ್ತಿಸುತ್ತಿರುವುದು ಬಲ್ಕೀಸ್‍ಗೆ ಖಚಿತವಾಗಿತ್ತು. ಹೆತ್ತವರ ಬಳಿ ವಿಷಯ ತಿಳಿಸಲಾ? ಎಂದು ಮನಸ್ಸು ಕೇಳಿದರೂ, ಒಂದೆರೆಡು ದಿನ ಕಾದು ನೋಡೋಣ ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡಳು.
ತನ್‍ಸೀಫ್ ರೂಮಿನೊಳಗೆ ಬಾಗಿಲು ಹಾಕಿ ಪುಸ್ತಕವನ್ನು ಓದುತ್ತಲೇ ಇದ್ದ. ಆದರೆ, ಅದರಲ್ಲಿ ತನಗೆ ಬಿದ್ದ ಕನಸಿಗೆ ಸಂಬಂಧಿಸಿದಂತೆ ಯಾವುದೇ ಉಲ್ಲೇಖವೂ ಇರಲಿಲ್ಲ. ಬಲ್ಕೀಸ್‍ಗೆ ಗಂಡ ಒಳಗೆ ಏನು ಮಾಡುತ್ತಿದ್ದಾರೆ ಎಂಬ ಶಂಕೆ. ನಿದ್ದೆ ಮಾಡುತ್ತಿದ್ದಾರೋ ಅಥವಾ ಏನೋ ಆಲೋಚನೆಯಲ್ಲಿ ಮುಳುಗಿರುತ್ತಾರೋ ಎಂಬ ಪ್ರಶ್ನೆ. ಆದರೆ, ಆಕೆಗೆ ಉತ್ತರ ಸಿಗಲೇ ಇಲ್ಲ. ತನ್‍ಸೀಫ್ ತನ್ನಲ್ಲಿದ್ದ ಪುಸ್ತಕವನ್ನು ಹೆಂಡತಿಯ ಕೈಗೆ ಸಿಗದಂತೆ ಜಾಗೃತೆ ವಹಿಸಿದ್ದ.
ಇದ್ದಕ್ಕಿದ್ದಂತೆ ಕ್ಷುಲ್ಲಕ ಕಾರಣಕ್ಕೆ ಪಕ್ಕದ ಊರಲ್ಲಿ ಕೋಮುಗಲಭೆ ನಡೆಯಿತು. ನಿನ್ನೆ ಮೊನ್ನೆ ಅಣ್ಣ ತಮ್ಮಂದಿರಂತೆ ಇದ್ದವರು ಪರಸ್ಪರ ಹೊಡೆದಾಡುವುದು, ಆಸ್ತಿಪಾಸ್ತಿಗೆ ಹಾನಿ ಮಾಡಿದ ಸುದ್ದಿ ತಿಳಿದ ತನ್‍ಸೀಫ್ ಎರಡು ವಾರದ ಹಿಂದೆ ತನಗೆ ಬಿದ್ದಿರುವ ಕನಸನ್ನು ನೆನದು ಭಯಪಟ್ಟ.
“ಇಲ್ಲೂ ಕೋಮುಗಲಭೆ ಆದೀತು. ತನ್ನ ಮಗನಿಗೆ ಏನಾದರು ಆಪತ್ತು ಬಂದೀತು. ನನ್ನನ್ನು ಕೊಂದಾರು. ಹೆಂಡತಿಯನ್ನು ಕೆಡಿಸಿಯಾರು…”- ತನ್‍ಸೀಫ್ ಆತಂಕಿತನಾದ. ಬಳಿಕ ಆತನಿಗೆ ಬದುಕು ಬೇಡ ಎಂದಾಯಿತು. ಮಗನಿಗೆ ಆಪತ್ತು ಸಂಭವಿಸಿದರೆ ತನ್ನಿಂದ ಸಹಿಸಲು ಸಾಧ್ಯವಿಲ್ಲ. ನನ್ನ ಕಣ್ಮುಂದೆಯೇ ಹೆಂಡತಿಯನ್ನು ಗಲಭೆಕೋರರು ಕೆಡಿಸಿದರೆ ನಾನು ಗಂಡಸಾಗಿ ಜೀವಿಸಿ ಫಲವಿಲ್ಲ. ಈ ಸಾಂಸಾರಿಕ ಬದುಕು ಇಂಥ ಜಂಜಾಟದಿಂದ ಕೂಡಿರುತ್ತದೆ ಎಂದು ಗೊತ್ತಿದ್ದರೆ ನಾನು ಇವೆಲ್ಲದರಿಂದ ದೂರ ಉಳಿಯುತ್ತಿದ್ದೆ. ಎಲ್ಲೋ ಏಕಾಂಗಿಯಾಗಿದ್ದು ಇದ್ದಷ್ಟು ದಿನ ಕಾಲ ಕಳೆಯುತ್ತಿದ್ದೆ. ನಾನು ಈ ಭೂಮಿಗೆ ಭಾರವಾಗಿದ್ದೇನೆ ಎಂದು ಅನಿಸಿದೊಡನೆ ಮತ್ತೆ ಮರಳಿ ಬಾರದ ಲೋಕಕ್ಕೆ ಹೆಜ್ಜೆಹಾಕುತ್ತಿದ್ದೆ ಎಂದು ತನ್‍ಸೀಫ್ ತನ್ನಲ್ಲೇ ಹೇಳುತ್ತಿದ್ದ.
ಹೌದು… ಈ ಬದುಕು ನಶ್ವರ. ಇದು ಶಾಶ್ವತವಲ್ಲ. ಇಲ್ಲಿ ನಾವು ಮಾಡಿಟ್ಟ-ಕೂಡಿಟ್ಟ ಆಸ್ತಿಪಾಸ್ತಿಯನ್ನು ಕೊಂಡೊಯ್ಯಲು ಸಾಧ್ಯವಿಲ್ಲ. ಇಲ್ಲಿ ಎಲ್ಲರೂ ಅವರವರ ದಾರಿ ಕಂಡು ಹಿಡಿದು ಒಂದಿಲ್ಲೊಂದು ದಿನ ಎದ್ದು ಹೋಗಲೇಬೇಕು. ನಾವು ನೀಡುವ ರಕ್ಷಣೆಗಳೆಲ್ಲವೂ ಕ್ಷಣಿಕ. ಶಾಶ್ವತ ರಕ್ಷಣೆ ನಮ್ಮಿಂದ ಸಾಧ್ಯವಿಲ್ಲ ಎಂದು ತನ್‍ಸೀಫ್ ಯೋಚಿಸುತ್ತಾ, ಹೆಂಡತಿ ಮತ್ತು ಮಗನನ್ನು ಅತ್ತೆ-ಮಾವನ ಜವಾಬ್ದಾರಿಗೆ ವಹಿಸಿಕೊಡುವುದು, ತಾನು ಸ್ವಯಂ ನಿವೃತ್ತಿ ಪಡೆದು ಬಂದ ಹಣದಿಂದ ದಿನದ ಖರ್ಚಿಗೆ ವ್ಯಯಿಸಲು ಹೇಳುವುದು, ಅದು ಮುಗಿದರೆ ಅಪ್ಪ ಮಾಡಿಟ್ಟು ಹೋದ ಆಸ್ತಿಪಾಸ್ತಿಯನ್ನು ಮಾರಿ ದಿನಕಳೆಯಿರಿ ಎಂದು ಸೂಚಿಸಬೇಕು. ನಾನು ಅಜ್ಮೀರ್‍ಗೋ, ಪೊನ್ನಾಣಿಗೋ ಹೋಗುವುದು. ಅಲ್ಲಿ ಶಾಂತಿ ಅರಸುವುದು. ನೆಮ್ಮದಿ ಸಿಕ್ಕರೆ ಇದ್ದಷ್ಟು ದಿನ ಕಾಲ ಕಳೆಯುವುದು. ಇಲ್ಲದಿದ್ದರೆ, ಹಸಿವಿನಿಂದಲಾದರೂ ಸರಿ ಪ್ರಾಣ ತ್ಯಾಗ ಮಾಡುವುದು… ಹೀಗೆ ತನ್‍ಸೀಫ್ ಯೋಚಿಸುತ್ತಿದ್ದ. ಅಷ್ಟೇ ಅಲ್ಲ, ಆ ರಾತ್ರಿ ಹೆಂಡತಿ ಮತ್ತು ಮಗನನ್ನು ಒಮ್ಮೆ ಕಣ್ಣಾರೆ ನೋಡತೊಡಗಿದ. ತನ್ನನ್ನು ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುವ ಹೆಂಡತಿ, ನಕ್ಕು ನಲಿದಾಡುತ್ತಾ ಮನಸ್ಸಿಗೆ ಮುದ ನೀಡುವ ಮಗ… ಇವರನ್ನು ಬಿಟ್ಟು ನಾನು ದೂರದ ಊರಲ್ಲಿ ಕಾಲ ಕಳೆಯಲು ಸಾಧ್ಯವೇ? ಎಲ್ಲಾ ಬಿಟ್ಟು ಹೋದ ಮೇಲೆ ನೆನಪು ತಡೆಯಲಾಗದೆ ಮರಳಿ ಬರುವುದು ನ್ಯಾಯೋಚಿತವೇ?… ತನ್‍ಸೀಫ್ ಗೊಂದಲಕ್ಕೀಡಾದ.
“ರ್ರೀ… ನೀವು ಮೊನ್ನೆಯಿಂದ ತುಂಬಾ ಖಿನ್ನರಾಗಿದ್ದೀರಿ? ಏನಾಯಿತು? ನನ್ನಿಂದ ಏನಾದರು ತೊಂದರೆ ಆಯಿತಾ?” ಎಂದು ಮೌನ ಮುರಿದು ಬಲ್ಕೀಸ್ ಪ್ರಶ್ನಿಸಿದಳಲ್ಲದೆ ನೋವು-ದು:ಖ ತಾಳಲಾರದೆ ಗಳಗಳನೆ ಅಳತೊಡಗಿದಳು. “ಏನಾಗಿಲ್ಲ” ಎನ್ನುತ್ತಾ ತನ್‍ಸೀಫ್ ಅವಳನ್ನು ಸಮಾಧಾನಪಡಿಸಲು ಮುಂದಾದ. “ಬಿದ್ದ ಕನಸು, ನಾನು ತೆಗೆದುಕೊಂಡ ತೀರ್ಮಾನ ಹೇಳಲೇ? ಹಾಗೇ ಹೇಳಿದ ನಂತರ ನನ್ನನ್ನು ಇವಳು ಊರು ಬಿಟ್ಟು ಹೋಗಲು ಬಿಡುವಳೇ?”- ತನ್‍ಸೀಫ್ ಮತ್ತೆ ಗೊಂದಲಕ್ಕೆ ಬಿದ್ದ.
ಪತ್ರಿಕೆ-ಟಿವಿ ಚಾನೆಲ್‍ಗಳಿಗೆ ಕಣ್ಣಾಡಿಸಿದಾಗ ಕೋಮುಜ್ವಾಲೆಯ ಸುದ್ದಿ. ಒಂದೊಂದು ಸುದ್ದಿ, ಚಿತ್ರವೂ ಭಯಾನಕ. ತನ್‍ಸೀಫ್‍ನ ಮನಸ್ಸು ಚಿಟ್ಟುಹಿಡಿದಂತಾಯಿತು.
ಅಂದು ರಾತ್ರಿ ಇಶಾ ನಮಾಜಿನ ನಂತರ ತನ್‍ಸೀಫ್ ಹೆಂಡತಿ-ಮಗನಿಗಾಗಿ ಪ್ರಾರ್ಥಿಸಿದ. ನಾಳೆ ಮಧ್ಯರಾತ್ರಿ ಊರು ಬಿಟ್ಟು ಹೋಗಲು ನಿರ್ಧರಿಸಿದ. ಹಾಗೇ ತನ್ನ ನಿರ್ಧಾರವನ್ನೆಲ್ಲಾ ಒಂದು ಕಾಗದದಲ್ಲಿ ಬರೆದಿಡಲು ಬಯಸಿದ. ನಾನು ಹೋದ ನಂತರ ಅದು ಅವಳ ಕೈಗೆ ಸಿಗಬೇಕು, ಅದಕ್ಕಿಂತ ಮುಂಚೆ ಸಿಗಲೇಬಾರದು ಎಂದು ಭಾವಿಸಿದ. ಹಾಗೇ ಅದವಳ ಕೈಗೆ ಸಿಕ್ಕನಂತರ ಅವಳು ಏನು ಮಾಡಿಯಾಳು? ಅವಳ ಮನಸ್ಥಿತಿ ಹೇಗೆ ಇದ್ದೀತು? ಎಂದು ತನ್‍ಸೀಫ್ ಯೋಚಿಸುತ್ತಿದ್ದ.
ಎಂದಿನಂತೆ ಮರುದಿನ ಮುಂಜಾನೆ ಎದ್ದು ಪಕ್ಕದ ಡೈರಿಯಿಂದ ಹಾಲು ತರಲು ಹೋದ ತನ್‍ಸೀಫ್ ನಿಗದಿತ ಸಮಯಕ್ಕೆ ಮನೆ ತಲುಪಲಿಲ್ಲ. ಬಲ್ಕೀಸ್ ಆಶ್ಚರ್ಯಚಕಿತಳಾದಳು. ಏನಾಯಿತು ಇವರಿಗೆ? ಇಷ್ಟು ಹೊತ್ತಾದರೂ ಯಾಕೆ ಬರಲಿಲ್ಲ? ಎಂದು ಪ್ರಶ್ನಿಸಿ ಆತಂಕಗೊಂಡಳು.
“ನಿಮ್ಮ ಗಂಡನಿಗೆ ಅಪಘಾತ ಆಗಿದೆಯಂತೆ. ರಸ್ತೆ ದಾಟುವಾಗ ಯಾವನೋ ಬೈಕ್ ಸವಾರ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಕಾಲು ತುಂಡಾಗಿದೆ. ಸೀರಿಯಸ್ ಅಂತೆ. ಆಸ್ಪತ್ರೆಯಲ್ಲಿದ್ದಾರಂತೆ” ಎಂಬ ಸುದ್ದಿ ಪಕ್ಕದ ಮನೆಯ ಹುಡುಗ ಬಂದು ಹೇಳಿದಾಗ, ಬಲ್ಕೀಸ್ ಉಟ್ಟ ಬಟ್ಟೆಯಲ್ಲೇ ಮಗನನ್ನು ಜತೆಗೂಡಿಸಿಕೊಂಡು ಆಸ್ಪತ್ರೆಯತ್ತ ಓಡಿ ಹೋದಳು.
ಆಸ್ಪತ್ರೆಯ “ಐಸಿಯು” ವಿಭಾಗದಲ್ಲಿ ಗಂಡ ಚಿಂತಾಜನಕ ಸ್ಥಿತಿಯಲ್ಲಿ ಮಲಗಿದ್ದ. ವೈದ್ಯರು ಬಲ್ಕೀಸ್‍ಳನ್ನು ಸಮಾಧಾನಪಡಿಸಿ, ಮನೆಯ ಇತರರ ಬಗ್ಗೆ ಮಾಹಿತಿ ಪಡೆದು ಫೋನ್ ಮೂಲಕ ವಿಷಯ ತಿಳಿಸಿದರು. ಹಾಗೇ  ಬಲ್ಕೀಸ್‍ಳ ತಂದೆ-ತಾಯಿ, ಅಕ್ಕಂದಿರು, ಅಣ್ಣಂದಿರೆಲ್ಲಾ ಧಾವಿಸಿ ಬಂದರು. ಎಲ್ಲರ ಕಣ್ಣಲ್ಲೂ ಕಣ್ಣೀರು!.
ಅಂತೂ ತನ್‍ಸೀಫ್‍ಗೆ ಪ್ರಜ್ಞೆ ಬಂತು. ವೈದ್ಯರ ಚಿಕಿತ್ಸೆಗೆ ಸ್ಪಂದಿಸತೊಡಗಿದ. ಹೆಂಡತಿ-ಮಗನ ಮುಖ ಕಂಡು ನಕ್ಕ. ತನ್ನ ಕಾಲು ತುಂಡಾದುದನ್ನು ಅರಿತು ಮರುಗಿದ. ಅವನ ಕುಟುಂಬಸ್ಥರೆಲ್ಲಾ ಸಮಾಧಾನಪಡಿಸತೊಡಗಿದರು. ಅಲ್ಲಾಹು ದೊಡ್ಡವ… ಪ್ರಾಣ ಉಳಿಸಿದನಲ್ಲ, ಅಷ್ಟು ಸಾಕು ಎಂದರು. ವಿಷಯ ತಿಳಿದ ಬ್ಯಾಂಕ್ ಸಹೋದ್ಯೋಗಿಗಳು, ಅಧಿಕಾರಿಗಳು ಆಗಮಿಸಿ ಸಾಂತ್ವಾನ ಹೇಳಿದರು.
ಸತತ 1 ತಿಂಗಳು ತನ್‍ಸೀಫ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದ. ನಂತರ ಮನೆಯಲ್ಲಿ ವಿಶ್ರಾಂತಿ ಪಡೆಯತೊಡಗಿದ. ಕಾಲು ಕಳೆದುಕೊಂಡು ಅತ್ತಿತ್ತ ನಡೆಯಲು ಸಾಧ್ಯವಾಗದ ಕಾರಣ ಬ್ಯಾಂಕಿನಿಂದ ವಿಆರ್‍ಎಸ್ ಪಡೆಯುವುದು ಅನಿವಾರ್ಯವಾಗಿತ್ತು. ಹಾಗೇ ಸ್ವಯಂ ನಿವೃತ್ತಿ ಪಡೆದ. ಪ್ರತಿಯೊಂದಕ್ಕೂ ಹೆಂಡತಿಯ ನೆರವು ಕೇಳಿ ಪಡೆಯತೊಡಗಿದ. ಅಪ್ಪನಿಗಾದ ಸ್ಥಿತಿಯನ್ನು ಚೂರುಪಾರು ಅರ್ಥ ಮಾಡಿಕೊಂಡ ಹಬೀಬ್ “ಪಿಳಿಪಿಳಿ” ಕಣ್ಬಿಟ್ಟು ನೋಡತೊಡಗಿದ.
ಬಲ್ಕೀಸ್ ನೋವನ್ನೆಲ್ಲಾ ಮನಸ್ಸಿನೊಳಗೆ ಅದುಮಿಟ್ಟು ಗಂಡನನ್ನು ಆರೈಕೆ ಮಾಡತೊಡಗಿದಳು. ಒಂದು ಕಾಲು ಇಲ್ಲದಿದ್ದರೇನಂತೆ. ನಾನಿಲ್ಲವೇ? ಎಂದು ಕೇಳಿ ಸಂತೈಸತೊಡಗಿದಳು. ನನ್ನನ್ನೇ ಸರ್ವಸ್ವ ಎಂದು ನಂಬಿ ನನಗಾಗಿ ಎಲ್ಲಾ ನೋವನ್ನು ನುಂಗಿ ತ್ಯಾಗಮಯಿ ಬದುಕನ್ನು ಸವೆಸುವ ಹೆಂಡತಿಯನ್ನು ಅರ್ಥ ಮಾಡಿಕೊಳ್ಳಲಾಗದ ನಾನು ಎಂಥ ಪಾಪಿ? ಈ ಸ್ಥಿತಿ ಇವಳಿಗಾಗಿದ್ದರೆ ನಾನು ಏನು ಮಾಡುತ್ತಿದ್ದೆ? ಇಂಥ ಹೆಂಡತಿ ಮತ್ತು ಮಗನನ್ನು ಬಿಟ್ಟು ತೀರ್ಥಯಾತ್ರೆ ಹೋಗಲು ನಿರ್ಧರಿಸಿದ ನಾನು ಎಂಥ ಹೇಡಿ?-ತನ್‍ಸೀಫ್ ಮರುಗುತ್ತಿದ್ದ. ಇತ್ತ ಬಲ್ಕೀಸ್, “ತನ್ನ ಗಂಡನಿಗೆ ಅಪಘಾತವೇ ಆಗಿಲ್ಲ” ಎಂಬಂತೆ, ಬದುಕನ್ನು ಉಲ್ಲಾಸದಿಂದ ಕಳೆಯಲು ಚೇಷ್ಠೆಯಾಡತೊಡಗಿದಳು.

LEAVE A REPLY

Please enter your comment!
Please enter your name here