ಆತ್ಮಹತ್ಯೆ – 04

ಯೋಗೇಶ್ ಮಾಸ್ಟರ್ (ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ)

ಒಂದು ವಿಷಯವನ್ನು ಗಂಭೀರವಾಗಿ ಗಮನವಿಟ್ಟುಕೊಳ್ಳಲೇ ಬೇಕಾದದ್ದು ಅಂದರೆ, ಆತ್ಮಹತ್ಯೆಯ ಆಲೋಚನೆಗಳು ಮತ್ತು ಆತ್ಮಹತ್ಯೆ ಮಾಡಿಕೊಳ್ಳಲು ಒಲವು ತೋರುವ ವರ್ತನೆಗಳು ಸಹಜ ಅಲ್ಲ. ಬದುಕಿನಲ್ಲಿ ಎದುರಿಸುವ ಗಂಭೀರವಾದ ಒತ್ತಡ ಮತ್ತು ತೊಂದರೆಗಳ ಪರಿಣಾಮ ಈ ಆತ್ಮಹತ್ಯೆ ಎಂದು ಜನ ಭಾವಿಸುವಂತೆ ಸೃಜನಶೀಲ ಬರಹಗಳು ಮತ್ತು ಸಿನಿಮಾಗಳೊಂದಷ್ಟು ಮಿಥ್ ಗಳನ್ನು ಕಟ್ಟಿಕೊಟ್ಟಿವೆ. ಆತ್ಮಹತ್ಯೆ, ಸೇಡು, ಪ್ರೀತಿ ಎಂಬುದರ ಅಂತಿಮ ಮದುವೆ; ಪ್ರೀತಿಸಿದವರು ಸಿಗದಿದ್ದರೆ ಕುಡಿಯಬೇಕು, ಸಾಯಬೇಕು, ಅತ್ಯಾಚಾರವಾದರೆ ಬಾವಿಗೋ ಕೆರೆಗೋ ಬಿದ್ದು ಸಾಯಬೇಕು, ಇತ್ಯಾದಿ ಅತಿರೇಕಗಳನ್ನು ವೈಭವೀಕರಿಸಿ ಮನುಷ್ಯರ ಮನೋರೋಗಗಳನ್ನು ಭಾವನಾತ್ಮಕವಾದ ಬದ್ಧತೆ ಎಂದು ಪ್ರಚಾರ ಮಾಡುವ ಮೂಲಕ ತಪ್ಪು ಮಾಡಿದ್ದಾರೆ.

ಅಧ್ಯಯನಗಳು ತಿಳಿಸುವಂತೆ ಆತ್ಮಹತ್ಯೆಯಿಂದ ಮರಣಿಸುವ ನೂರಕ್ಕೆ ತೊಂಬತ್ತು ಜನ ಆ ಹೊತ್ತಿನಲ್ಲಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಬಹಳ ಸಾಮಾನ್ಯವಾದ ಮಾನಸಿಕ ಸಮಸ್ಯೆ ಎಂದರೆ ಅದು ಖಿನ್ನತೆ. ಹಠಾತ್ ಪ್ರವೃತ್ತಿ (Impulsivity) ಮಾದಕ ವಸ್ತುಗಳ ಮತ್ತು ಮದ್ಯ ವ್ಯಸನಗಳಂತವು ಆತ್ಮಹತ್ಯೆಗೆ ಒಳಗಾಗುವ ಅಪಾಯವನ್ನು ಹೆಚ್ಚಿಸಲು ಸಹಕಾರಿಯಾಗಿರುವವು.

ಒತ್ತಡಭರಿತ ಜೀವನದ ಫಲವಾಗಿ ವ್ಯಕ್ತಿಯು ದುಃಖ, ಆತಂಕ, ಕೋಪ, ಹತಾಶೆ, ಇನ್ನೂ ಕೆಲವೊಮ್ಮೆ ಬದುಕಿರೋದಕ್ಕಿಂತ ಸಾಯೋದೇ ವಾಸಿ ಎನ್ನುವಷ್ಟರ ಮಟ್ಟಿಗೆ ಜಿಗುಪ್ಸೆ ಬರುವುದು ಸಹಜ. ಆದರೆ ಇಷ್ಟಕ್ಕೆ ಆತ್ಮಹತ್ಯೆಗೆ ಜಾರುವ ಮನೋರೋಗವಿದೆ ಎನ್ನಲಾಗದು. ನಿಮ್ಮ ಹತ್ತಿರ ಹೆಣಗೋದಕ್ಕಿಂತ ಸಾಯೋದು ವಾಸಿ ಎಂದು ಜಗಳವಾಡಿದಾಗ ಅದೆಷ್ಟು ಜನ ಹಾಗೆಂದರೂ ಸಾಯೋದಿಲ್ಲ. ಅವರು ಆತ್ಮಹತ್ಯೆ ಮಾಡಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡು, ಖಿನ್ನತೆಯಲ್ಲಿ ತಣ್ಣಗೆ ಜನರಿಂದ ದೂರಾಗುವುದಿಲ್ಲ. ಕೋಪದಲ್ಲಿ, ಒತ್ತಡದಲ್ಲಿ ಹಾಗೆಂದಿರುತ್ತಾರೆ ಅಷ್ಟೇ. ಆದರೆ ಆ ಸಮಯ ಸರಿದ ಮೇಲೆ ಅದರ ಯೋಚನೆಯೂ ಇರುವುದಿಲ್ಲ. ಇಂತವರು ತಮಗೆ ಈ ಮಾನಸಿಕ ಸಮಸ್ಯೆ ಇಲ್ಲ ಎಂದು ಧಾರಾಳವಾಗಿ ಸರ್ಟಿಫಿಕೇಟ್ ಕೊಟ್ಟುಕೊಳ್ಳಬಹುದು.
ಲಿಂಗಬೇಧವಿಲ್ಲದೇ ಮತ್ತು ವಯೋಮಿತಿ ಇಲ್ಲದೇ ಆತ್ಮಹತ್ಯೆಗೆ ಶರಣಾಗುವ ಮಾನಸಿಕ ಸಮಸ್ಯೆ ವಿಶ್ವಾದ್ಯಂತ ಇವೆ. ಯುವಕರಲ್ಲಿ ಸಂಭವಿಸುವ ಅಸ್ವಾಭಾವಿಕ ಸಾವುಗಳಲ್ಲಿ ಆತ್ಮಹತ್ಯೆಗೆ ಎರಡನೆಯ ಸ್ಥಾನವಿದೆಯಂತೆ. ಅಮೇರಿಕೆಯಂತಹ ದೇಶದಲ್ಲಿ ಪಿಸ್ತೂಲಿನಿಂದ ತಮ್ಮನ್ನು ಸುಟ್ಟುಕೊಂಡು ಸಾಯುವುದು ಹೆಚ್ಚಂತೆ. ಆದರೆ ನಮ್ಮ ದೇಶದಲ್ಲಿ ನೇಣು, ಎತ್ತರದ ಸ್ಥಳದಿಂದ ಬೀಳುವುದು, ವಿಷ ಸೇವನೆ ಅಥವಾ ಅತಿಯಾಗಿ ನಿದ್ರೆ ಗುಳಿಗೆಗಳನ್ನು ಸೇವಿಸುವ ವಿಧಾನಗಳು ಹೆಚ್ಚು. ನೀರಿಗೆ ಬೀಳುವುದು ಮತ್ತು ಬೆಂಕಿ ಹಚ್ಚಿಕೊಳ್ಳುವ ವಿಧಾನ ನಂತರದ ಸ್ಥಾನಗಳಲ್ಲಿವೆ.

ಆತ್ಮಹತ್ಯೆಯನ್ನು ತಡೆಯಲು ಸಾಧ್ಯವೇ?
ಈ ಮೊದಲು ಆತ್ಮಹತ್ಯೆಯ ಆಲೋಚನೆಗಳಿರುವ ವ್ಯಕ್ತಿಗಳ ಮಾತುಗಳ ಮತ್ತು ವರ್ತನೆಗಳ ಲಕ್ಷಣಗಳನ್ನು ತಿಳಿಸಿರುವಂತೆ ಅವರನ್ನು ಮೊದಲು ಗುರುತಿಸಬೇಕು. ಅಧ್ಯಯನಗಳು ತಿಳಿಸುವಂತೆ ಆತ್ಮಹತ್ಯೆಯ ಕುರಿತಾಗಿ ಮಾತಾಡಿಬಿಟ್ಟರೆ ಅದರಿಂದ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಯೋಚನೆಗಳು ಖಂಡಿತ ಬರುವುದಿಲ್ಲ. ಆದರೆ ಒಂದು ವೇಳೆ ನಿಮ್ಮ ಆಪ್ತರೋ, ಕುಟುಂಬದವರೋ ಅಥವಾ ಸ್ನೇಹಿತರೋ ಆಗಿದ್ದ ಪಕ್ಷದಲ್ಲಿ ಅವರೊಂದಿಗೆ ಏಕಾಂತದಲ್ಲಿ ಮತ್ತು ಆತ್ಮೀಯವಾಗಿ ಅವರಿಗೆ ಬಂದಿರುವ ಸಾಯುವ ಯೋಚನೆಯ ಕುರಿತು ಮಾತಾಡಿ. ನಾನು ನಿನಗೆ ಸಾವಿನಿಂದ ಜೀವನದ ಕಡೆ ತಿರುಗುವ ವಿಷಯದಲ್ಲಿ ಸಹಾಯ ಮಾಡುತ್ತೇನೆ ಎಂಬ ಧೈರ್ಯ ತುಂಬುವ ಮಾತುಗಳನ್ನು ಆಡಿ. ಎಷ್ಟೋ ಸಲ ಅಂತಹ ಸಾಂತ್ವಾನ ಮಾತುಗಳಿಂದ ಆ ಒಂದು ಗಳಿಗೆಯಲ್ಲಿ ಬಂದಂತಹ ಆತ್ಮಹತ್ಯೆಯ ಯೋಚನೆ ಹೊರಟುಹೋಗುತ್ತದೆ. ಆದರೆ ಅವರಾಗಿಯೇ ಅವರು ನಿಮ್ಮೊಡನೆ ನಾನು ಸಾಯುತ್ತೇನೆ ಎಂದು ನೇರವಾಗಿ ಹೇಳುವ ಸಾಧ್ಯತೆಗಳು ತೀರಾ ಕಡಿಮೆ. ಏಕೆಂದರೆ ಅವರಿಗೆ ನಿಮ್ಮ ಪ್ರತಿಕ್ರಿಯೆಯನ್ನು ಊಹಿಸಲು ಸಾಧ್ಯವಿರುತ್ತದೆ. ಅಥವಾ ಹೇಗೆ ತಿಳಿದುಕೊಳ್ಳುತ್ತೀರೋ ಎಂಬ ಆತಂಕ ಇರುತ್ತದೆ. ನಿಮ್ಮ ಪ್ರಶ್ನೆಗಳು ನೇರವಾಗಿ ಇರಲಿ. ಆದರೆ ಆರೋಪಿಸುವಂತೆ ಅಥವಾ ಆಪಾದಿಸುವಂತೆ ಇರಕೂಡದು. ಪ್ರಶ್ನೆಗಳು ತೀರ್ಮಾನ ತೆಗೆದುಕೊಳ್ಳುವಂತೆ ಇರಬಾರದು, ಅಂದರೆ non-judgmental questions ಆಗಿರಬೇಕು. ಅವರು ತಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು, ಆಲೋಚನೆಗಳನ್ನು ಮತ್ತು ಭಾವನೆಗಳನ್ನು ನಿಮ್ಮ ಬಳಿ ತೋಡಿಕೊಳ್ಳುವಷ್ಟು ನೀವು ಹಿತವಾಗಿ ಅವರಿಗೆ ತೋರಬೇಕು. ಕೆಲವೊಮ್ಮೆ ಅವರು ನಿಮ್ಮನ್ನು ಸ್ವೀಕರಿಸಲಾಗದಂತಹ ಮನಸ್ಥಿತಿಯಲ್ಲಿರಬಹುದು. ನಿಮ್ಮನ್ನು ಕಂಡರೆ ಅಸಡ್ಡೆ ಅಥವಾ ನಕಾರಾತ್ಮಕವಾದ ಭಾವನೆ ಇರಬಹುದು. ಅದರಿಂದ ಅವರು ನಿಮ್ಮ ಜೊತೆಗೆ ಸಭ್ಯವಾಗಿ ಅಥವಾ ಸೌಜನ್ಯವಾಗಿ ನಡೆದುಕೊಳ್ಳದೇ ಆಕ್ರಮಣಕಾರಿಯಾಗಿ ನಡೆದುಕೊಳ್ಳಬಹುದು. ಆದರೂ ಕೂಡಾ ನೀವು ಅವರನ್ನು ಅವರ ಪಾಡಿಗೆ ಬಿಟ್ಟು ಬಿಡದೇ ಕನಿಷ್ಟಪಕ್ಷ ಪ್ರಕರಣದೊಳಗೆ ಅವರು ಇಷ್ಟ ಪಡುವ ವ್ಯಕ್ತಿಯು ಪ್ರವೇಶವಾಗುವವರೆಗೂ ಹಿಡಿತದಲ್ಲಿ ಇಟ್ಟುಕೊಂಡಿರಬೇಕು. ಅವಕಾಶವಿದ್ದಲ್ಲಿ ವೃತ್ತಿಪರ ಮನೋವೈದ್ಯರ ಬಳಿಗೆ ಕರೆದೊಯ್ಯಬೇಕು.

ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಆತ್ಮಹತ್ಯೆಯ ಲಕ್ಷಣಗಳು ಕಂಡು ಬಂದಲ್ಲಿ ಅವರಿಗೆ ಸರಿಯಾದ ಸಮಾಲೋಚನೆ ಕೊಡಿಸಿ, ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗುವಂತೆ ಮತ್ತು ಪ್ರೊಡಕ್ಟಿವ್ ಆಲೋಚನೆಗಳನ್ನು ರೂಢಿ ಮಾಡಿಸಿದರೆ, ಸೃಜನಶೀಲ ತರಬೇತಿಗಳಲ್ಲಿ ಒಳಗೊಂಡರೆ ಅವರು ಈ ಆತ್ಮಹತ್ಯೆಯ ಆಲೋಚನೆಗಳಿಂದ ಮುಕ್ತರಾಗಿ ಉತ್ತಮ ಜೀವನವನ್ನು ನಡೆಸಬಹುದು.

ಭಾರತದಲ್ಲಿ ಆತ್ಮಹತ್ಯೆ
ಭಾರತ ಸರ್ಕಾರವು ಆತ್ಮಹತ್ಯೆಯನ್ನು ಮೂರು ವಿಭಾಗಗಳಲ್ಲಿ ಪರಿಗಣಿಸುತ್ತದೆ.
1.ಅಸ್ವಾಭಾವಿಕ ಮರಣ.
2.ತನ್ನನ್ನು ತಾನೇ ಕೊಂದುಕೊಳ್ಳುವ ಬಯಕೆ.
3.ತನ್ನನ್ನು ತಾನು ಕೊಂದುಕೊಳ್ಳಲು ನಿರ್ಧಿಷ್ಟ ಕಾರಣವಿರುತ್ತದೆ. ಅದು ವ್ಯಕ್ತಿಯ ಸಾವಿನ ನಂತರ ತಿಳಿಯಬಹುದು ಅಥವಾ ತಿಳಿಯದೇ ಇರಬಹುದು.

ಈ ಮಾನದಂಡದ ವ್ಯಾಪ್ತಿಗೆ ವ್ಯಕ್ತಿಯ ಸಾವು ಸಿಗದಿದ್ದ ಪಕ್ಷದಲ್ಲಿ ಅದು ಖಾಯಿಲೆಯಿಂದಲೋ, ಕೊಲೆಯೋ ಅಥವಾ ಇನ್ನಾವುದಾದರೂ ಬಗೆಯ ಸಾವಾಗಿರುತ್ತದೆ.

ನಮ್ಮ ದೇಶದಲ್ಲಿ ಆತ್ಮಹತ್ಯೆಯ ಕಾರಣಗಳ ಸಾಮಾನ್ಯ ಪಟ್ಟಿಯೊಂದನ್ನು ಮಾಡಿದರೆ, ವ್ಯಾಪಾರ, ವ್ಯವಹಾರದಲ್ಲಿ ನಷ್ಟ, ಆರ್ಥಿಕ ಮುಗ್ಗಟ್ಟು, ಸಾಲಬಾಧೆ, ವೈವಾಹಿಕ ಸಮಸ್ಯೆಗಳು, ವಿವಾಹಕ್ಕೆ ಸಂಬಂಧಿಸಿದ ಹಾಗೆ, ಆದರೆ ಮದುವೆಯ ನಂತರದ್ದಲ್ಲ ಮದುವೆಗೆ ಮುಂಚಿನ ವಿಷಯಗಳಿಗೆ ಸಂಬಂಧಿಸಿದಂತೆ ಸಂಭವಿಸುವ ಆತ್ಮಹತ್ಯೆಗಳು, ವರದಕ್ಷಿಣೆ ಕಿರುಕುಳ, ವಿವಾಹೇತರ ಸಂಬಂಧಗಳು, ವಿಚ್ಛೇದನವೂ ಸೇರಿದಂತೆ ದಾಂಪತ್ಯ ಜೀವನದಲ್ಲಿ ಕಿರುಕುಳಗಳು, ಪರೀಕ್ಷೆಯಲ್ಲಿ ಯಶಸ್ವಿಯಾಗದೇ ಇರುವುದು, ನಂಪುಕಸತ್ವ ಮತ್ತು ಬಂಜೆತನ, ಖಾಯಿಲೆಗಳು, ಮಾದಕ ವಸ್ತುಗಳ ವ್ಯಸನಗಳು, ಪ್ರೇಮ ಪ್ರಕರಣಗಳು, ಬಡತನ, ನಿರುದ್ಯೋಗ, ಸಾಮಾಜಿಕ ಅವಮಾನ, ಅಕ್ರಮವೆಂದು ದೂಷಿಸಲಾಗುವ ಲೈಂಗಿಕ ಸಂಬಂಧಗಳು, ವಿವಾಹ ಪೂರ್ವ ಗರ್ಭಧಾರಣೆ, ಮಾನಸಿಕ ಮತ್ತು ದೈಹಿಕ ಕಿರುಕುಳ, ಅತ್ಯಾಚಾರವೂ ಸೇರಿದಂತೆ ಇತರ ಬಗೆಯ ಲೈಂಗಿಕ ದೌರ್ಜನ್ಯ, ಹಠಾತ್ ಪ್ರವೃತ್ತಿ; ಹೀಗೆ ಹತ್ತು ಹಲವಾರು ಕಾರಣಗಳೊಂದಿಗೆ, ಕಾರಣವೇ ತಿಳಿಯಲಾಗದಂತಹ ಆತ್ಮಹತ್ಯೆ ಪ್ರಕರಣಗಳೂ ಇವೆ.

ಮಹಿಳೆಯರಿಗಿಂತ ಪುರುಷರು ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಅಧ್ಯಯನಗಳು ತಿಳಿಸಿದರೂ ಇದು ಆಗಾಗ್ಗೆ ತನ್ನ ಅನುಪಾತವನ್ನು ಬದಲಿಸುತ್ತಿರುತ್ತದೆ. ಹಾಗೆಯೇ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶದಲ್ಲಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಕಾಣಿಸಿಕೊಳ್ಳುತ್ತವೆಯಾದರೂ, ಪ್ರತೀ ವರ್ಷದ ವಾರ್ಷಿಕ ವರದಿಗಳು ಒಂದೇ ಬಗೆಯಾಗಿರುವುದಿಲ್ಲ.
ನಮ್ಮ ದೇಶದ ಶಾಸನದ ಪ್ರಕಾರ ಆತ್ಮಹತ್ಯೆಯ ಪ್ರಯತ್ನವು ಅಪರಾಧವಾಗಿದ್ದು, ಈ ಪ್ರಯತ್ನವು ಸಾಬೀತಾದರೆ ಅಪರಾಧಿಗೆ ಸೆಕ್ಷನ್ 309ರ ಪ್ರಕಾರ ಒಂದು ವರ್ಷದವರೆಗೂ ಜೈಲುವಾಸ ಅನುಭವಿಸಬೇಕಿದೆ. ಆದರೆ, 2017ರಲ್ಲಿ ಬಂದ ಮಾನಸಿಕ ಆರೋಗ್ಯ ರಕ್ಷಣೆಯ ಕಾಯಿದೆಯ ಅನುಗುಣವಾಗಿ ಭಾರತದ ಸಂಸತ್ತು 2018ರಲ್ಲಿ ಆತ್ಮಹತ್ಯೆಯನ್ನು ಅಪರಾಧದ ಕಳಂಕದಿಂದ ಮುಕ್ತವನ್ನಾಗಿಸಿತು. ಹೌದು, ಆತ್ಮಹತ್ಯೆಯ ಪ್ರಯತ್ನ ಮಾಡುವ ವ್ಯಕ್ತಿಗೆ ಸಮಾಲೋಚನೆ, ಸಾಂತ್ವಾನ ಮತ್ತು ಪರಿಹಾತ್ಮಕ ಸಮಾಧಾನದ ಅವಶ್ಯಕತೆ ಇರುವುದರಿಂದ ಆತ್ಮಹತ್ಯೆಯ ಪ್ರಯತ್ನವನ್ನು ಅಪರಾಧವೆಂದು ಪರಿಗಣಿಸಲಾಗದು. ಮೊದಲೇ ನೊಂದಿರುವವರಿಗೆ ಗಾಯದ ಮೇಲೆ ಉಪ್ಪು ಸವರಿದ ಹಾಗಾಗಬಾರದು.

ತಡೆಯುವುದು ಹೇಗೆ?

ಆತ್ಮಹತ್ಯೆಯನ್ನು ತಡೆಗಟ್ಟಲು ನಾವು ಮಾಡಬಹುದಾದ ವ್ಯವಸ್ಥೆಯ ಜೊತೆಗೂಡಿ ಆಗಬೇಕಾದ ಕೆಲಸಗಳೆಂದರೆ, ಸಮಾಜಕ್ಕೆ ವಿಮುಖವಾಗಿರುವಂತಹ ವ್ಯಕ್ತಿಗಳನ್ನು ಸಮೂಹದೊಳಗೆ ಬೆರೆಯುವ ಯೋಜನೆಗಳನ್ನು ರೂಪಿಸುವುದು. ಮಾನಸಿಕ ಸಮಸ್ಯೆಗಳನ್ನು ಗುರುತಿಸಿ ಅವರಿಗೆ ಬೇಕಾದ ಸಮಾಲೋಚನೆ ಮತ್ತು ಚಿಕಿತ್ಸೆಗಳನ್ನು ನೀಡುವುದು. ನಿದ್ರೆಗುಳಿಗೆಗಳು ಮತ್ತು ಕೀಟನಾಶಕಗಳೇ ಮೊದಲಾದ ಸಾವಿಗೆ ಕಾರಣವಾಗಬಹುದಾದಂತಹ ರಸಾಯನಿಕ ವಸ್ತುಗಳ ಮೇಲೆ ಮತ್ತು ಔಷಧಿಗಳ ಮಾರಾಟದಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರುವುದು. ಮುಕ್ತ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗದಿರುವಂತೆ ನೋಡಿಕೊಳ್ಳುವುದು. ಎಲ್ಲದಕ್ಕಿಂತ ಮುಖ್ಯವಾಗಿ ಬದುಕಿನ ಬಗ್ಗೆ ಭರವಸೆ ಮತ್ತು ಉತ್ಸಾಹಗಳನ್ನು ಪಡೆಯಲು ಸಾಧ್ಯವಾಗುವಂತಹ ಕಾರ್ಯಕ್ರಮಗಳಲ್ಲಿ ವ್ಯಕ್ತಿಗಳು ಭಾಗವಹಿಸುವಂತೆ ಪ್ರೊತ್ಸಾಹಿಸುವುದು. ಕ್ರಿಯಾತ್ಮಕ, ಸೃಜನಶೀಲ ಕಾರ್ಯಕ್ರಮಗಳಲ್ಲಿ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮತ್ತು ಧ್ಯಾನ ಹಾಗೂ ಪ್ರಾರ್ಥನೆಯಂತಹ ಶಿಬಿರಗಳಲ್ಲಿ ವ್ಯಕ್ತಿಗಳು ಭಾಗವಹಿಸುವಂತೆ ಮಾಡುವುದಲ್ಲದೇ ಅವರು ಜೀವನ್ಮುಖಿಯಾಗಿ ತಮ್ಮ ಆನಂದವನ್ನು ತಾವು ಕಂಡುಕೊಳ್ಳಲು ಶಕ್ತರಾಗುವಂತೆ ಸಕಾರಾತ್ಮಕ ಶಿಬಿರಗಳನ್ನು, ಕಾರ್ಯಾಗಾರಗಳನ್ನು ಮತ್ತು ಸಂವಾದಗಳನ್ನು ಏರ್ಪಡಿಸುವುದು.

ಒಟ್ಟಾರೆ ಪ್ರಕೃತಿಯಲ್ಲಿ ಸಹಜ ಆನಂದದಲ್ಲಿ ಇರುವಂತಹ ಯಾವ ಪ್ರಾಣಿ ಮತ್ತು ಪಕ್ಷಿಗಳೂ ಮಾಡಿಕೊಳ್ಳದ ಮನುಷ್ಯನು ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಕಾರಣವೆಂದರೆ ತನ್ನ ಆನಂದವನ್ನು ಸಹಜವಾಗಿ ತನ್ನಲ್ಲಿ ಕಂಡುಕೊಳ್ಳಲು ವಿಫಲವಾಗುವನು ಮತ್ತು ಭರವಸೆಯಿಲ್ಲದ ಮನಸ್ಥಿತಿಯಲ್ಲಿ ಇರುವುದು. ಅಂತವರೊಂದಿಗೆ ಆನಂದ ಮತ್ತು ಭರವಸೆಯನ್ನು ನೀಡುವಂತಹ ಮಾತುಗಳನ್ನು ಆಡೋಣ, ನಮ್ಮ ಸಂವಹನದಲ್ಲಿ ಅವುಗಳನ್ನು ಪ್ರತಿಫಲಿಸೋಣ. ಅಂತಹ ಚಟುವಟಿಕೆಗಳನ್ನು ಮಾಡೋಣ. ಮುಖ್ಯವಾಗಿ ನಾವು ಅವನ್ನು ಹೊಂದೋಣ.

ಮನಸ್ಥಿತಿ ಬದಲಾಗಲಿ
ಆತ್ಮಹತ್ಯೆಯ ಮುಖ್ಯವಾದ ಕಾರಣ ಮನಸ್ಥಿತಿಯೇ ಆಗಿರುವುದರಿಂದ ವ್ಯಕ್ತಿಯ ಮನಸ್ಥಿತಿಯನ್ನು ರಚನಾತ್ಮಕವಾಗಿ ರೂಪಾಂತರಿಸುವ ಯಾವುದೇ ಪ್ರಯೋಗಗಳು ಇದಕ್ಕೆ ಚಿಕಿತ್ಸಕವಾಗಿ ಕೆಲಸ ಮಾಡುತ್ತವೆ. ವ್ಯಕ್ತಿ ತನಗೆ ತಾನು ಭಾರವಾಗದಿರಲು ಅಗತ್ಯವಿರುವುದೇನೆಂದರೆ ಸ್ವಪ್ರೇಮ. ತನ್ನನ್ನು ತಾನು ಪ್ರೀತಿಸಿಕೊಳ್ಳಲು ಸಾಮರ್ಥ್ಯವನ್ನು ಹೊಂದಿರಬೇಕು. ಹಾಗೆಯೇ ತನ್ನ ವ್ಯಕ್ತಿತ್ವದ ಉತ್ತಮಿಕೆಯನ್ನು ಇತರರ ಪುರಸ್ಕಾರ ಮತ್ತು ತಿರಸ್ಕಾರಗಳ ಮಾನದಂಡದ ಆಧಾರದ ಮೇಲೆ ಅಳೆದುಕೊಳ್ಳದಿರುವಂತಿರಬೇಕು. ಅಂದರೆ ಪರಾವಲಂಬಿಯಾಗಿರಬಾರದು. ತಮ್ಮನ್ನು ಇತರರ ದೃಷ್ಟಿಯಲ್ಲಿ ನೋಡಿಕೊಳ್ಳಲು ಸದಾ ಪ್ರಯತ್ನಿಸುವುದು ಒಂದು ದೊಡ್ಡ ಮಾನಸಿಕ ರೋಗ. ತನ್ನನ್ನು ತಾನು ನೋಡಿಕೊಳ್ಳುವ ಪ್ರವೃತ್ತಿ ಬಹಳ ಒಳ್ಳೆಯದು. ಉತ್ತಮವಾದ ಗುರಿ ಮತ್ತು ಹೊಣೆಗಾರಿಕೆಗಳು ಆತ್ಮಹತ್ಯೆಯ ಯೋಚನೆಗಳನ್ನು ಕೊಲ್ಲುತ್ತವೆ.

ಕಲೆ, ಸಾಹಿತ್ಯ, ಸೃಜನಶೀಲತೆ, ಕ್ರಿಯಾಶೀಲತೆ, ಜನರಲ್ಲಿ ಬೆರೆಯುವುದು, ಕಮ್ಯೂನಿಟಿ ಕೆಲಸಗಳು, ಸಮುದಾಯದ ಹೊಣೆಗಾರಿಕೆಗಳು ಅವರಿಗೆ ಕೊಡುವುದಲ್ಲದೇ, ಇತರರಲ್ಲಿ ಪ್ರೇರಣೆ, ಉತ್ಸಾಹ ತುಂಬುವಂತಹ ಕೆಲಸಗಳನ್ನು ನೀಡುವುದೂ ಕೂಡಾ ಪರಿಣಾಮಕಾರಿಯಾಗಿರುತ್ತದೆ.
ಕೆಲವರು ಆತ್ಮಹತ್ಯೆಯನ್ನು ಮಾಡಿಕೊಳ್ಳದಿದ್ದರೂ ಆ ಆಲೋಚನೆ ಅವರಲ್ಲಿ ಸತತವಾಗಿ ಇರುವುದರಿಂದ ಅವರು ತಮ್ಮ ಕೆಲಸಗಳಲ್ಲಿ ಸರಿಯಾದ ಶ್ರದ್ಧೆಯನ್ನು ಮತ್ತು ಪ್ರಗತಿಯನ್ನು ತೋರುವುದಿಲ್ಲ. ಖಿನ್ನ ಮನಸ್ಕರಾಗಿ ಸಮೂಹಗಳಲ್ಲಿ ಭಿನ್ನರಾಗಿ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ಅವರ ಆಲೋಚನೆಗಳಲ್ಲಿ ಪ್ರಬುದ್ಧತೆ ಮತ್ತು ಕೆಲಸಗಳಲ್ಲಿ ವೃತ್ತಿಯಲ್ಲಿ ಇರಬೇಕಾದ ಪಕ್ವತೆ ಕಾಣುವುದಿಲ್ಲ. ಇವರಿಗೂ ಕೂಡಾ ಸಮಾಲೋಚನೆ ಮತ್ತು ಚಿಕಿತ್ಸೆಯ ಅಗತ್ಯವಿದೆ.
ನಾನು ಕಂಡಂತೆ ಗಂಭೀರವಾಗಿ ತೆಗೆದುಕೊಳ್ಳದ ಹಲವಾರು ಪ್ರಕರಣಗಳಲ್ಲಿ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಆದರೆ, ಹಲವು ಬಗೆಯ ಸಾಂತ್ವಾನ ನೀಡುವಂತಹ ಹಾಡುಗಳು, ಕತೆಗಳು ಮತ್ತು ಚಲನಚಿತ್ರಗಳು ಆತ್ಮಹತ್ಯೆಯ ಆಲೋಚನೆಯನ್ನು ನಿವಾರಿಸಿಕೊಳ್ಳಲು ನೆರವಾಗಿವೆ.
ಒಟ್ಟಾರೆ ಜೀವಪರವಾದ ಧೋರಣೆ, ಸಮಾಜಮುಖಿ ಚಿಂತನೆ, ಸೃಜನಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆಗಳು, ನಿರಾವಲಂಬತನ, ಬಹಳ ಮುಖ್ಯವಾಗಿ ಆಪ್ತತೆ ಮತ್ತು ಪ್ರೀತಿ ಇದ್ದಲ್ಲಿ ಆತ್ಮಹತ್ಯೆಯಂತ ಸ್ವಯಂಘಾತಕ ಮನಸ್ಥಿತಿಯಿಂದ ಬಿಡುಗಡೆ ಪಡೆಯಬಹುದು ಮತ್ತು ಇತರರಿಗೂ ನೆರವಾಗಬಹುದು.

ಮುಗಿಯಿತು

LEAVE A REPLY

Please enter your comment!
Please enter your name here