ಭಾಗ-೧

ಯೋಗೇಶ್ ಮಾಸ್ಟರ್, ಬೆಂಗಳೂರು
ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ


ಕೇರಳಾದ ಪಾಲಕ್ಕಾಡ್ ನಲ್ಲಿ ಆನ್ ಲೈನ್ ಕ್ಲಾಸ್ ಮಿಸ್ ಮಾಡಿಕೊಂಡದ್ದಕ್ಕೆ ಮನನೊಂದ 9ನೇ ತರಗತಿ ವಿದ್ಯಾರ್ಥಿನಿ ದೇವಿಕಾ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇವಳ ಸಾವಿಗೆ ಸಂತಾಪಗಳು ಮತ್ತು ಅವಳ ಮನೆಯವರಿಗೆ ಅನುತಾಪಗಳು. ಆದರೆ ಸಂದಿಗ್ಧ ಪರಿಸ್ಥಿತಿಗಳಿಂದಾಗಿ ಆತ್ಮಹತ್ಯೆಗಳಂತಹ ಪ್ರಕರಣಗಳಾಗುತ್ತವೆ ಎನ್ನುವುದಕ್ಕೆ ಮುಂಚೆ ನಾವು ಆತ್ಮಹತ್ಯೆಯ ಪ್ರಚೋದನೆ ನಿಜವಾಗಿ ಪರಿಸ್ಥಿತಿಗಳಿಂದ ಆಗುತ್ತವೆಯೋ ಅಥವಾ ಮನಸ್ಥಿತಿಗಳಿಂದ ಆಗುತ್ತವೆಯೋ ಎಂಬುದರ ಬಗ್ಗೆ ಗಂಭೀರವಾದ ಗಮನವನ್ನು ಹರಿಸಬೇಕಿದೆ. ಏಕೆಂದರೆ, ಜೀವನ ಎಂದರೇನು? ತಮ್ಮೊಡನೆ ಇರುವವರ ಸಂಬಂಧದ ಬೆಲೆಯೇನು? ಕಷ್ಟ, ನಷ್ಟ, ಸಾವು, ನೋವುಗಳೆಂದರೇನು? ಹಕ್ಕು ಮತ್ತು ಕರ್ತವ್ಯಗಳೆಂದರೇನು?- ಇವೆಲ್ಲಾ ಏನೇನೂ ತಿಳಿಯದ ಶಾಲೆಗೆ ಹೋಗುವ ಮಕ್ಕಳು, ಹದಿಹರೆಯದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದೂ ಬೈಕ್ ಕೊಡಿಸಿಲ್ಲ ಎಂದು, ತಾಯಿ ಬೈದಳೆಂದು, ತಂದೆ ಹಣ ಕೊಡಲಿಲ್ಲ ಎಂದು, ಪ್ರೇಮಿಯೊಡನೆ ಮದುವೆಯಾಗಲು ಮನೆಯವರು ಒಪ್ಪಲಿಲ್ಲ ಎಂದು; ಇವೆ ಅವರಿಗೆ ಹತ್ತಾರು ಕಾರಣಗಳು.

ಕೆಲವು ವೃದ್ಧರು ತಮ್ಮ ದೇಹದಲ್ಲಿ ಹತ್ತಾರು ಕಾಯಿಲೆಗಳನ್ನು ಇಟ್ಟುಕೊಂಡು, ನಿತ್ಯ ಔಷಧಿ ಸೇವನೆ ಮಾಡಿಕೊಂಡು, ಜೊತೆಯಲ್ಲಿ ನೋಡಿಕೊಳ್ಳುವವರು ಸರಿಯಾಗಿ ಇಲ್ಲದೇ, ಆಪ್ತರು ಮತ್ತು ಕುಟುಂಬದವರು ತಮ್ಮೊಡನೆ ಇರದೇ, ಮನಸ್ಸು ಪದೇ ಪದೇ ಕುಗ್ಗುತ್ತಿದ್ದರೂ, ಹೃದಯ ಬಾರಿ ಬಾರಿ ಹಿಂಡುತ್ತಿದ್ದರೂ, ಆರ್ಥಿಕ ಸಮಸ್ಯೆಗಳಿದ್ದರೂ, ಸಾಲಗಳೇ ಮೊದಲಾದ ನಿರ್ವಹಿಸಲಾಗದ ತೊಡಕುಗಳಿದ್ದರೂ ಆತ್ಮಹತ್ಯೆಗೆ ಶರಣಾಗುವುದಿಲ್ಲ. ಸಮಾಜದಲ್ಲಿ ಎಷ್ಟೆಷ್ಟೋ ಅಪಮಾನಗಳಿಗೆ, ಆರ್ಥಿಕ ಸಂಕಷ್ಟಗಳಿಗೆ, ತಮ್ಮ ಮನೆಯ ಮೂಲಭೂತ ಸೌಕರ್ಯಗಳಿಗೇ ಸಮಸ್ಯೆ ಇದ್ದರೂ ಸಮಾಜದ ಇತರರ ಸಮಸ್ಯೆಗಳಿಗೆ ಸಹಾನುಭೂತಿ ತೋರಿಸುತ್ತಾ ವಯಸ್ಸಾದ ಎಷ್ಟೋ ಲೇಖಕರಿದ್ದಾರೆ, ಸಾಮಾಜಿಕ ಕಾರ್ಯಕರ್ತರಿದ್ದಾರೆ. ಅವರನ್ನು ನೋಡಿದರೆ ಅವರಿಗೆ ಸಮಸ್ಯೆ ಇದೆ ಎಂದು ಕೂಡಾ ತಿಳಿಯದು.

ಆತ್ಮಹತ್ಯೆಯ ಬಗ್ಗೆ ವಿವರವಾಗಿ ತಿಳಿಯುವ ಮುನ್ನ ಸಧ್ಯಕ್ಕೆ ಇಷ್ಟು ತಿಳಿಯೋಣ. ಆತ್ಮಹತ್ಯೆಯ ಮೂಲ ಕಾರಣವು ಮನಸ್ಥಿತಿಯೇ ಹೊರತು ಪರಿಸ್ಥಿತಿಯಲ್ಲ. ಆದರೆ ಪರಿಸ್ಥಿತಿಯು ನೆಪವಾಗುತ್ತದೆ. ಇದನ್ನು ಮಕ್ಕಳಾಗಿದ್ದಾಗಲೇ ಗುರುತಿಸಬೇಕು ಮತ್ತು ಗಮನಿಸಬೇಕು. ಆಗ ಅವರನ್ನು ಅವರಿಗೆ ಬಾಧಿಸುತ್ತಿರುವ ಮಾನಸಿಕ ಸಮಸ್ಯೆಯಿಂದ ಹೊರಗೆ ತರಬಹುದು. ಇದನ್ನು ಬಾಲ್ಯದಲ್ಲಿಯೇ ಗುರುತಿಸುವುದು ಮತ್ತು ಹೊರಗೆ ತರುವ ಬಗೆಯನ್ನು ಕೊನೆಯಲ್ಲಿ ತಿಳಿಸುತ್ತೇನೆ. ಮೊದಲು ಆತ್ಮಹತ್ಯೆಗೆ ನೆಪಗಳೆನಿಸುವ ಹೊರಗಿನ ಪ್ರೇರಣೆ ಮತ್ತು ವ್ಯವಸ್ಥೆಗಳನ್ನೇ ಗಮನಿಸೋಣ.

ನನಗೆ ನಾನೇ ಸಾಕೆನಿಸಿದಾಗ

ಆಕೆ ಓರ್ವ ಸಾಹಿತಿಯ ಪತ್ನಿ. ಎರಡನೆಯ ಹೆಂಡತಿ ಎನ್ನಲು ಕೆಲವು ತಾಂತ್ರಿಕ ಕಾರಣಗಳ ತೊಡಕುಂಟಾಗುವುದರಿಂದ ಉಪಪತ್ನಿ ಎನ್ನಬಹುದು. ಆಕೆಯಿಂದ ನನಗೆ ಫೋನ್ ಬಂದಿತು. “ನಾನು ಸಾಯಲು ಕನ್ನಡ ಸಾಹಿತ್ಯ ಪರಿಷತ್ತಿನ ಭವನದ ಮೇಲಿನ ಕೊನೆಯ ಮಹಡಿಯ ಮೇಲೆ ನಿಂತಿದ್ದೇನೆ. ತುದಿಯಲ್ಲಿ ನಿಂತಿದ್ದೇನೆ. ನನಗೆ ಜೀವನ ಸಾಕಾಗಿದೆ. ನಾನು ಸಾಯುತ್ತೇನೆ” ಎಂದು ಅಳುತ್ತಿದ್ದಾರೆ. ನನಗೆ ಚೆನ್ನಾಗಿ ಗೊತ್ತು, ಇದು ಆತ್ಮಹತ್ಯೆ ಮಾಡಿಕೊಳ್ಳುವವರ ಲಕ್ಷಣಗಳಲ್ಲ ಎಂದು. ಆತ್ಮಹತ್ಯೆಯ ವಿಧಗಳನ್ನು ತಿಳಿದು ಕೊಂಡಿರುವವರಿಗೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವ ರೀತಿ ಅಥವಾ ಕ್ರಮಗಳನ್ನು ತಿಳಿದಿರುವವರಿಗೆ ಹುಸಿ ಆತ್ಮಹತ್ಯೆಯ ಬೆದರಿಕೆಗಳು ಬಹಳ ಸುಲಭವಾಗಿ ಅರ್ಥವಾಗಿಬಿಡುತ್ತವೆ.

ಆತ್ಮಹತ್ಯೆಯಲ್ಲಿ ಹಲವು ವಿಧಗಳಿವೆ.

  1. ಮಾರ್ಗಾಂತ್ಯ ಆತ್ಮಾಹತ್ಯೆ
  2. ನಿರಾಶಾ ಆತ್ಮಹತ್ಯೆ
  3. ಒಬ್ಬೊಂಟಿತನ ಎದುರಿಸಲಾಗದ ಆತ್ಮಹತ್ಯೆ
  4. ಸನ್ನಿ ಆತ್ಮಹತ್ಯೆ
  5. ಉನ್ಮಾದ ಆತ್ಮಹತ್ಯೆ
  6. ನಿರ್ಗುರಿ ಆತ್ಮಹತ್ಯೆ
  7. ಮದೋನ್ಮತ್ತ ಆತ್ಮಹತ್ಯೆ
  8. ಬೆದರಿಕೆಯ ಆತ್ಮಹತ್ಯೆ
  9. ಮನೋವ್ಯಾಧಿಯ ಕಾರಣ ಆತ್ಮಹತ್ಯೆ
  10. ಮುಖೇಡಿತನದ (ಭಯ) ಆತ್ಮಹತ್ಯೆ
  11. ಆತ್ಮರತ್ಯಾ ಅಥವಾ ವೈಭವ ಮೃತ್ಯು ಆತ್ಮಹತ್ಯೆ
  12. ನೋವಿನಿಂದ ಬಿಡುಗಡೆ ಬಯಸುವ ಆತ್ಮಹತ್ಯೆ
  13. ಕೇವಲ ಅಥವಾ ನಿಷ್ಕಾರಣ ಆತ್ಮಹತ್ಯೆ
  14. ಪರೋಕ್ಷ ಆತ್ಮಹತ್ಯೆ
  15. ವಿದಾಯ ಅಥವಾ ನಿವೃತ್ತ ಆತ್ಮಹತ್ಯೆ
  16. ಧಾರ್ಮಿಕ ಅಥವಾ ಆಧ್ಯಾತ್ಮಿಕ ಆತ್ಮಹತ್ಯೆ
  17. ಸಾಮಾಜಿಕ ಆತ್ಮಹತ್ಯೆ
  18. ಆತ್ಮಾಹುತಿ

ಇನ್ನು ಈ ಆತ್ಮಹತ್ಯೆಯ ವಿಧಗಳ ಸ್ಥೂಲ ಪರಿಚಯ ಮಾಡಿಕೊಳ್ಳೋಣ.

1.ಮಾರ್ಗಾಂತ್ಯ ಆತ್ಮಹತ್ಯೆ
ತಾವು ನಡೆದು ಬರುತ್ತಿರುವ ಬದುಕಿನ ಅತಿ ಮುಖ್ಯ ವ್ಯವಹಾರಗಳು ವಿಫಲವಾಗಿರುತ್ತವೆ. ತಮ್ಮನ್ನು ಆ ವ್ಯವಹಾರಗಳ ಜೊತೆ ಬೇರೆಯೇ ಇಲ್ಲವೇನೋ ಎಂದು ಗುರುತಿಸಿಕೊಂಡು ಬಿಟ್ಟಿರುತ್ತಾರೆ. ಆ ವ್ಯವಹಾರದ ಜೊತೆಗೆ ಇತರ ಗಂಭೀರ ಜವಾಬ್ದಾರಿಗಳೂ ಹೆಗಲೇರಿದ್ದೇ ಅಲ್ಲದೇ, ಯಾವುದರದ್ದೋ ಕೊರತೆಯಿಂದ ಆ ಜವಾಬ್ದಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವೇ ಇಲ್ಲ ಎಂಬಂತಹ ಘಟ್ಟಕ್ಕೆ ಬಂದು ಮುಟ್ಟಿರುತ್ತಾರೆ. ಉದಾಹರಣೆಗೆ ವ್ಯಾಪಾರ ವಹಿವಾಟಿನಲ್ಲಿ ವಿಪರೀತವಾಗಿ ಸಾಲಗಳು ಬೆಳೆದಿದ್ದು, ಅವನ್ನು ತೀರಿಸುವ ಎಲ್ಲಾ ಮಾರ್ಗಗಳೂ ಮುಚ್ಚಿಹೋಗಿವೆ ಎಂದು ತೋರುತ್ತದೆ. ಯಾವ ಬ್ಯಾಂಕೂ, ಯಾವ ಸನ್ಮಿತ್ರರೂ ಕೊಡಲಾರದಂತಹ ಸ್ಥಿತಿಗೆ ತಲುಪಿರುತ್ತಾರೆ. ಆದರೆ, ಈಗ ಪಡೆದಿರುವಂತಹ ಹಣವನ್ನು ಮರಳಿ ಕೊಡಲೇ ಬೇಕಾಗಿದ್ದು ಅದಕ್ಕೆ ದಾರಿಯೇ ಇಲ್ಲದಿರುವುದರಿಂದ ಇದನ್ನು ಮಾರ್ಗಾಂತ್ಯ ಎಂದು ಭಾವಿಸುವ ವ್ಯಕ್ತಿ ತಾನೊಬ್ಬನೇ ಸಾಯುವುದಲ್ಲದೇ ಇಡೀ ಕುಟುಂಬಕ್ಕೆ ವಿಷವುಣಿಸಿ, ತಾವೂ ಸಾಯುತ್ತಾರೆ. ಆದರೆ ಇದು ಮಾರ್ಗಾಂತ್ಯ ಎಂದು ಭಾವಿಸಿರುವಂತಹ ವ್ಯಕ್ತಿ ತಪ್ಪಾಗಿ ಭಾವಿಸಿರುತ್ತಾರೆ. ಅದರ ವಿಶ್ಲೇಷಣೆ ಈಗ ಬೇಡ.
ಅಡಾಲ್ಫ್ ಹಿಟ್ಲರ್‍ನದು ಮಾರ್ಗಾಂತ್ಯ ಆತ್ಮಹತ್ಯೆಗೆ ಸರಿಯಾದ ಉದಾಹರಣೆ. ಆತನಿಗೆ ತನ್ನ ಜೀವನದಲ್ಲಿ ತನ್ನ ಸಿದ್ಧಾಂತದ ಪ್ರತಿಪಾದನೆಗೆ, ತನ್ನ ನಾಯಕತ್ವವನ್ನು ಉಳಿಸಿಕೊಳ್ಳಲು ಅದೇನೇನು ಮಾಡಬಹುದೋ, ಅದೆಲ್ಲವನ್ನೂ ಮಾಡಿಬಿಟ್ಟಿದ್ದಾನೆ. ಇನ್ನು ದಾಳಿ ಮಾಡುತ್ತಾ ಬಂದ ಸೋವಿಯತ್ ಸೈನ್ಯಕ್ಕೆ ತಾನು ಸಿಕ್ಕಿ ಬೀಳದೇ ಬೇರೆ ದಾರಿಯೇ ಇಲ್ಲ. ಇನ್ನು ಅವರ ಕೈಗೆ ಸಿಕ್ಕಿ ಬಿದ್ದಿದ್ದರೆ ಅವನ ಕೊನೆ ಹೇಗಾಗುತ್ತಿತ್ತೆಂದು ಊಹಿಸಲಸಾಧ್ಯ. ಅಲ್ಲಿ ಹಿಟ್ಲರ್‍ನ ಮಾರ್ಗಾಂತ್ಯವಾಗಿತ್ತು. ಅವನ ಆತ್ಮರತಿಯ (ನಾರ್ಸಿಸಂ) ಉನ್ಮತ್ತತೆಯೂ ಕೂಡಾ ಅದಕ್ಕೆ ಕಾರಣ.
2.ನಿರಾಶಾ ಆತ್ಮಹತ್ಯೆ
ತಾವು ಅತಿಯಾಗಿ ಪ್ರೀತಿಸುವ (ವ್ಯಾಮೋಹ) ವಸ್ತು, ಅಧಿಕಾರ, ವ್ಯಕ್ತಿ ಎಟುಕದೇ ಹೋದಾಗ, ನಿರಾಶಾಭಾವದಲ್ಲಿ ಹತಾಶರಾಗಿ ಮಾಡಿಕೊಳ್ಳುವ ಆತ್ಮಹತ್ಯೆ.
3.ಒಬ್ಬೊಂಟಿತನವನ್ನು ಎದುರಿಸಲಾಗದ ಆತ್ಮಹತ್ಯೆ
ಯಾವುದೇ ಕಾರಣದಿಂದ ತಾವೊಬ್ಬಂಟಿ ಎಂದು ಅನಿಸತೊಡಗಿ ಹತಾಶೆಯಿಂದ ಜೀವನವನ್ನು ಕೊನೆಗೊಳಿಸಿಕೊಳ್ಳುವುದು.
4.ಸನ್ನಿ ಆತ್ಮಹತ್ಯೆ
ತನ್ನೊಡನೆ ಇರುವ ವ್ಯಕ್ತಿ ಅಥವಾ ಸಮೂಹದ ಪ್ರಭಾವಕ್ಕೆ ಒಳಗಾಗಿ, ಉನ್ಮತ್ತತೆಯಿಂದ ತಮಗೆ ನಿಜವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶ ಇರದಿದ್ದರೂ, ತತ್ಕಾಲಿಕ ಪ್ರಭಾವಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು.

5. ಉನ್ಮಾದ ಆತ್ಮಹತ್ಯೆ
ಇದೂ ಕೂಡ ಸನ್ನಿ ಆತ್ಮಹತ್ಯೆಗೆ ಸಮೀಪವಾದರೂ ಇಲ್ಲಿ ವ್ಯಕ್ತಿ ಅಥವಾ ಸಮೂಹಗಳು ಪಾತ್ರವಹಿಸುವುದಿಲ್ಲ. ತಾನೇ ನಿರ್ಮಿಸಿಕೊಂಡಿರುವಂತಹ ಸನ್ನಿವೇಶಗಳಿಗೆ ತಾನೇ ಉನ್ಮಾದದಿಂದ ಪ್ರತಿಕ್ರಿಯಿಸುವುದು. ನಾಯಕನೊಬ್ಬ ಸತ್ತಾಗ ಅತ್ಯುಗ್ರ ಅಭಿಮಾನಿಯು ಆತ್ಮಹತ್ಯೆಗೆ ಪ್ರಯತ್ನಿಸುವುದು, ಚಳವಳಿಗಳ ಸಮಯದಲ್ಲಿ ಭಾವತೀವ್ರತೆಯಿಂದ ದುರ್ಬಲ ಮನಸ್ಕರು ಆತ್ಮಹತ್ಯೆಗೆ ಮುಂದಾಗುವುದು ಇತ್ಯಾದಿಗಳು ಇದರಲ್ಲಿ ಸೇರುತ್ತದೆ. ಸಾಮಾಜಿಕ ಅಥವಾ ಸಾಮೂಹಿಕ ಸಮಸ್ಯೆಯ ಕುರಿತು ಚಳವಳಿ ಮಾಡುವಾಗ ಆತ್ಮಹತ್ಯೆ ಮಾಡಿಕೊಳ್ಳಬೇಕಾದಂತಹ ನಿಜವಾದ ಕಾರಣವೇನೂ ಇರುವುದಿಲ್ಲ. ಆದರೆ ಅವರು ತಮ್ಮ ವ್ಯಕ್ತಿಗತ ಮನೋದೌರ್ಬಲ್ಯಗಳಿಂದ ಮತ್ತು ಇತರೇ ವೈಯಕ್ತಿಕ ಕಾರಣಗಳಿಂದ ಮಾನಸಿಕವಾಗಿ ಜರ್ಜರಿತರಾಗಿದ್ದು, ಸಮೂಹದಲ್ಲಿ ಅದು ಉಲ್ಬಣವಾಗುತ್ತದೆ. ಆಗ ಅವರು ಆತ್ಮಹತ್ಯೆಗೆ ಮುಂದಾಗುತ್ತಾರೆ. ಆಗ ಘಟನೆ ಅಥವಾ ಚಳವಳಿ ತೀವ್ರ ಸ್ವರೂಪವನ್ನು ಪಡೆಯುತ್ತದೆ. ಸಾಮಾಜಿಕ ಮತ್ತು ಸಾಮೂಹಿಕ ಸಮಸ್ಯೆಯಾದಾಗ ವ್ಯಕ್ತಿಗತವಾಗಿ ಹಾಗೆ ಕುಸಿಯುವ ಅಗತ್ಯವಿರುವುದಿಲ್ಲ.

6.ನಿರ್ಗುರಿ ಆತ್ಮಹತ್ಯೆ
ಸಣ್ಣ ಪುಟ್ಟ ಹತಾಶೆ ಮತ್ತು ನಿರಾಶೆಗಳನ್ನು ಕಾರಣವಾಗಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇವರ ತಮ್ಮನ್ನು ಕೊಂದುಕೊಳ್ಳುವಿಕೆಯ ಮುಖ್ಯ ಕಾರಣವೆಂದರೆ, ಅವರಿಗೆ ಏನೂ ಮಹತ್ತರವಾದ ಗುರಿ ಅಥವಾ ಜವಾಬ್ದಾರಿ ಇಲ್ಲದಿರುವುದು. ಯಾವುದಾದರೂ ವ್ಯಕ್ತಿಗತವಾಗಿ ಸಾಧಿಸಲೇ ಬೇಕಾದ ಅಥವಾ ಜವಾಬ್ದಾರಿಯನ್ನು ಪೂರೈಸುವ ಅಗತ್ಯವಿದ್ದಂತಹ ಪಕ್ಷದಲ್ಲಿ ಆತ್ಮಹತ್ಯೆಯ ಆಲೋಚನೆ ಬಂದರೂ ಎಂದಿಗೂ ಮಾಡಿಕೊಳ್ಳುವುದಿಲ್ಲ. ಏಕೆಂದರೆ ಅವರಿಗೆ ಎದುರಾಗಿರುವ ನಿರಾಶೆ, ಹತಾಶೆ ಮತ್ತು ಸಂಕಟಗಳು ತಮ್ಮ ಕಣ್ಣೆದುರಿನ ಸಾಧನೆ ಮತ್ತು ಜವಾಬ್ದಾರಿಯ ಮುಂದೆ ಕಡಿಮೆಯದಾಗಿ ತೋರಿ ಅಂತಹ ಪ್ರಯತ್ನವನ್ನು ಮಾಡುವುದಿಲ್ಲ.

7.ಮದೋನ್ಮತ್ತ ಆತ್ಮಹತ್ಯೆ
ಸಾಮಾನ್ಯವಾಗಿ ದುರ್ಬಲ ಮನಸ್ಕರೂ, ಆತ್ಮಕೇಂದ್ರಿತ ಅಥವಾ ಅಹಂಕಾರಿ ವ್ಯಕ್ತಿಗಳೇ ಆತ್ಮಹತ್ಯೆಗೆ ಮುಂದಾಗುವುದು. ಎಲ್ಲವೂ ತಾನೇ ಮಾಡಬೇಕು, ತನ್ನ ಆಲೋಚನೆ, ತನ್ನ ಆಯೋಜನೆ, ತನ್ನ ದೃಷ್ಟಿ; ಇವುಗಳಿಗೆ ಮಿಗಿಲಾಗಿ ಯಾವುದೂ ಇಲ್ಲ ಎಂದು ಭಾವಿಸುವಂತಹ ಸಂಕುಚಿತ ಆತ್ಮಕೇಂದ್ರಿತ ವ್ಯಕ್ತಿಗಳು, ತಮ್ಮ ಪ್ರಯತ್ನ ವಿಫಲವಾದಾಗ ಆತ್ಮಹತ್ಯೆಗೆ ಮೊರೆಹೋಗುತ್ತಾರೆ.
ಇನ್ನೂ ಕೆಲವು ಬಗೆಯ ಅಹಂಕಾರಿಗಳು ತಾವು ಸತ್ತು ಬುದ್ಧಿ ಕಲಿಸಬೇಕೆಂಬ ಧೋರಣೆಯಲ್ಲಿ, ತಾನು ಇಲ್ಲದೇ ಇದ್ದರೆ ತಮ್ಮ ಮನಸ್ಸಿಗೆ ನೋವು ಕೊಟ್ಟವರಿಗೆ ಎಂತಹ ತೊಂದರೆ, ನೋವು ಉಂಟಾಗುವುದೆಂಬ ಅರಿವು ಉಂಟುಮಾಡುವಂತಹ ಧೋರಣೆಯೂ ಇರುತ್ತದೆ. ಇಂತಹ ಅಹಂಕಾರದ ಅಮಲು ತಲೆಗೇರಿದ್ದವರಿಗೆ ತಮ್ಮ ದೃಷ್ಟಿಯ ಹೊರತಾಗಿ ಏನೂ ಕಾಣದು. ಆ ಬಗೆಯ ಮನಸ್ಥಿತಿಯವರದ್ದು ಮದೋನ್ಮತ್ತ ಆತ್ಮಹತ್ಯೆ. ಇಂತಹ ಆತ್ಮಹತ್ಯೆಗೆ ಮುಖ್ಯ ಕಾರಣ ಹಟಮಾರಿತನ.

8.ಬೆದರಿಕೆಯ ಆತ್ಮಹತ್ಯೆ
ಕೆಲವು ವ್ಯಕ್ತಿಗಳು ಎಮೋಷನಲ್ ಬ್ಲ್ಯಾಕ್‍ಮೇಲ್ ಮಾಡಲು, ತಾವು ಸತ್ತು ಹೋಗುತ್ತೇವೆ ಎಂದು ಹೆದರಿಸಲು ಅಥವಾ ನಾನು ಹೇಳಿದ ಮಾತು ನೀನು ಕೇಳದೇ ಹೋದರೆ ಸತ್ತು ಹೋಗುತ್ತೇನೆ, ಆ ಸಾವಿಗೆ ನೀನೇ ಕಾರಣನಾಗುತ್ತೀಯ ಎಂದು ಬೆದರಿಸಲು ಹೋಗಿ ಸತ್ತು ಹೋಗಿ ನಿಜವಾಗಿ ಸತ್ತುಬಿಡುತ್ತಾರೆ. ಅವರ ನಿಜವಾದ ಉದ್ದೇಶ ಬೆದರಿಸುವುದೇ ಆಗಿದ್ದು, ತಾವು ಆತ್ಮಹತ್ಯೆಗೆ ತೊಡಗುವಾಗ, ತಾವು ಯಾರನ್ನು ಗುರಿಯನ್ನಾಗಿರಿಸಿಕೊಂಡಿರುತ್ತಾರೋ ಅವರು ಬಂದು ಬಿಡಿಸಬೇಕು, ಕ್ಷಮಾಪಣೆ ಕೇಳಬೇಕು, ತಾವು ಹೇಳಿದಂತೆ ಕೇಳಬೇಕು ಎಂದೆಲ್ಲಾ ಬಯಸಿ ಆತ್ಮಹತ್ಯೆಯ ಪ್ರಯತ್ನ ಮಾಡುತ್ತಾರೆ. ಆದರೆ, ಇದು ನಿಜವಾದ ಪ್ರಯತ್ನವಾಗಿರುವುದಿಲ್ಲ. ಆದರೆ ಕೆಲವೊಮ್ಮೆ ಅದು ಆಕಸ್ಮಿಕವಾಗಿ ನಿಜವಾಗಿ ಬಿಡುತ್ತದೆ. ತಾವು ಯಾರೊಂದಿಗೆ ಜಗಳವಾಡಿರುತ್ತಾರೋ ಅವರು ತಮ್ಮನ್ನು ಉಳಿಸಲಿ, ತಮಗೆ ಸೋಲಲಿ ಎಂದು ಬಹು ಮುಖ್ಯವಾದ ಉದ್ದೇಶವನ್ನು ಹೊಂದಿರುವಾಗ, ಅದಾಗದೇ, ಆಕಸ್ಮಿಕವಾಗಿ ಆತ್ಮಹತ್ಯೆಯಲ್ಲಿ ಯಶಸ್ವಿ ಹೊಂದಿಬಿಡುತ್ತಾರೆ.

9.ಮನೋವ್ಯಾಧಿಯ ಆತ್ಮಹತ್ಯೆ
ಕೆಲವು ಬಗೆಯ ಮನೋವ್ಯಾಧಿಗೆ ಒಳಗಾಗಿ ಅವರಿಗೆ ಸಕಾರಾತ್ಮಕವಾದ ಪರಿಸರ ಒದಗದೇ, ಸರಿಯಾದ ಸಮಾಲೋಚನೆಗಳು ಸಿಗದೇ, ಸಕಾಲದಲ್ಲಿ ದೊರಕಬೇಕಾದ ಸಲಹೆಗಳೋ ಅಥವಾ ಚಿಕಿತ್ಸೆಗಳೋ ಸಿಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

10.ಮುಖೇಡಿತನದ (ಭಯ) ಆತ್ಮಹತ್ಯೆ
ಮುಖೇಡಿಗಳು, ಸಮಸ್ಯೆಯನ್ನು ಎದುರಿಸಲಾರದವರು ಈ ಬಗೆಯ ಆತ್ಮಹತ್ಯೆಯನ್ನು ಮಾರ್ಗಾಂತ್ಯದ ಆತ್ಮಹತ್ಯೆಗೆ ಹೋಲಿಸಿಕೊಂಡುಬಿಡುತ್ತಾರೆ. ಆದರೆ ಅದು ಹಾಗೇನಿಲ್ಲ. ಇವರಿಗೆ ದಾರಿಯೇನೂ ಮುಚ್ಚಿ ಹೋಗಿರುವುದಿಲ್ಲ. ತಮ್ಮ ವೈಫಲ್ಯ ಅಥವಾ ನಕಾರಾತ್ಮಕ ಸ್ಥಿತಿಗೆ ಬರಬಹುದಾದ ನಕಾರಾತ್ಮಕವಾದ ಪ್ರತಿಕ್ರಿಯೆಗಳನ್ನು ತಾವೇ ಊಹಿಸಿಕೊಂಡು ಅಥವಾ ಅಂದಾಜಿಸಿಕೊಂಡು ತಮ್ಮ ಜೀವನವನ್ನು ಕೊನೆಗಾಣಿಸಿಕೊಳ್ಳುತ್ತಾರೆ. ಪರೀಕ್ಷೆಯ ಫಲಿತಾಂಶ ಬರುವ ಮೊದಲೇ ತಾನು ಫೇಲಾಗುತ್ತೇನೆಂದು ಹೆದರಿ, ಅದಕ್ಕೆ ತಮ್ಮ ಮನೆಯವರು, ಶಿಕ್ಷಕರು ಮತ್ತು ಸುತ್ತಮುತ್ತಲಿನವರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ಊಹಿಸಿ ಆತ್ಮಹತ್ಯೆ ಮಾಡಿಕೊಳ್ಳುವುದು ಈ ವರ್ಗಕ್ಕೆ ಸೇರುತ್ತದೆ.

11.ಆತ್ಮರತ್ಯಾ ಅಥವಾ ವೈಭವ ಮೃತ್ಯು ಆತ್ಮಹತ್ಯೆ
ತಮ್ಮನ್ನು ತಾವು ಅತಿಯಾಗಿ ಪ್ರೀತಿಸಿಕೊಳ್ಳುವವರ ಆತ್ಮಹತ್ಯೆ ಇದು. ಇವರಿಗೆ ಯಾವುದೇ ಅಂತಹ ದೊಡ್ಡ ಸಮಸ್ಯೆ ಏನೂ ಇಲ್ಲದಿದ್ದರೂ, ಅವರನ್ನು ಪ್ರೀತಿಸುವ ಜನರು ಇದ್ದರೂ, ತಾನು ತನಗೆ ಎಂಬಂತಹ ಮನೋಭಾವವಿರುವವರು. ಯಾವುದೋ ಒಂದು ಘಟ್ಟದಲ್ಲಿ ತಮ್ಮನ್ನು ಕೊನೆಗಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ತನ್ನ ಬದುಕು, ತನ್ನ ಇಷ್ಟ ಎಂಬಂತೆ ಅತ್ಯಂತ ರತ್ಯೋನ್ಮತ್ತರಾಗಿ ಕೊನೆಗೊಳಿಸಿಕೊಳ್ಳುತ್ತಾರೆ. ಇದಕ್ಕೆ ಸಾಹಿತ್ಯ, ಸಿನಿಮಾಗಳಲ್ಲಿನ ನಾಯಕ ಅಥವಾ ನಾಯಕಿಯರ ಉತ್ಪ್ರೇಕ್ಷಿತ ಆತ್ಮಹತ್ಯಾ ವೈಭವೀಕರಣವೂ ಕಾರಣವೆನ್ನಬಹುದು. ಇಂತಹ ಆತ್ಮಹತ್ಯೆಯನ್ನು ಕೂಡ ಒಂಟಿಯಾಗಿ ಜೀವನ ನಡೆಸುವ ಕಲಾವಿದರಲ್ಲಿ, ಸಾಹಿತಿಗಳಲ್ಲಿ ಕಾಣಬಹುದು.

12.ನೋವಿನಿಂದ ಬಿಡುಗಡೆ ಬಯಸುವ ಆತ್ಮಹತ್ಯೆ
ಕೆಲವರು ಕೆಲವು ರೋಗಗಳಿಂದ, ತೀವ್ರತರವಾದಂತಹ ಹೊಟ್ಟೆ ನೋವು, ತಲೆನೋವು ಇತ್ಯಾದಿಗಳಿಂದ ಬಳಲುತ್ತಿದ್ದು, ಅದರಿಂದ ಬಿಡುಗಡೆ ಬಯಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದರಲ್ಲಿಯೇ ಮಾನಸಿಕ ನೋವಿನಿಂದ ಬಳಲುವವರನ್ನೂ ಸೇರಿಸಬಹುದು. ತಮ್ಮ ಆಪ್ತರ ಅಗಲಿಕೆಯಿಂದ ಉಂಟಾಗುವ ಮನೋವೇದನೆಯಿಂದ ಬಿಡುಗಡೆ ಪಡೆಯಲೂ ಆತ್ಮಹತ್ಯೆಗೆ ಮೊರೆಹೋಗುವರು.

13.ಕೇವಲ ಅಥವಾ ನಿಷ್ಕಾರಣ ಆತ್ಮಹತ್ಯೆ
ನಾನು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಮರಣ ಶಾಸನ ಬರೆದು ಸಾಯುವ ಆತ್ಮಹತ್ಯೆ ಇದು. ಕೆಲವೊಮ್ಮೆ ಯಾರಿಗೂ ತೊಂದರೆ ಕೊಡಲು ಇಚ್ಛಿಸದ ಕಾರಣ ಹೀಗೆ ಬರೆಯುತ್ತಾರಾದರೂ, ಕೆಲವರಿಗೆ ಜೀವನ ನಿಜಕ್ಕೂ ಬೋರ್ ಹೊಡೆಯುತ್ತಿರುತ್ತದೆ. ಅವರಿಗೆ ಎಲ್ಲದರಲ್ಲೂ ಆಸಕ್ತಿ ಕಳೆದುಹೋಗಿರುತ್ತದೆ. ಯಾವುದರಲ್ಲೂ ಬಣ್ಣಗಳನ್ನಾಗಲಿ, ಉತ್ಸಾಹವನ್ನಾಗಲಿ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಇದ್ದು ಏನು ಮಾಡುವುದು ಎಂಬಂತಹ ಧೋರಣೆ ಪ್ರಾರಂಭವಾಗಿರುತ್ತದೆ. ಯಾವುದೇ ಘನವಾದ ಕಾರಣವಿಲ್ಲದೇ ಕೇವಲ ಜಿಗುಪ್ಸೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ವರ್ಗವಿದು.

14.ಪರೋಕ್ಷ ಆತ್ಮಹತ್ಯೆ
ತಾವು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಬಯಸಿರದಿದ್ದರೂ ತತ್ಕಾಲಿಕ ಅಥವಾ ಜೀವನದ ಮಾರ್ಗದಲ್ಲಿಯೇ ಅಂತಹ ಸನ್ನಿವೇಶವನ್ನು ಸೃಷ್ಟಿಸಿಕೊಂಡು ತಾವೇ ಹೆಣೆದ ಬಲೆಗೆ ತಾವೇ ಬಲಿಯಾಗುವಂತಹ ಆತ್ಮಹತ್ಯೆ ಇದು. 15.ವಿದಾಯ ಅಥವಾ ನಿವೃತ್ತ ಆತ್ಮಹತ್ಯೆ
ತಾವು ಮಾಡಬೇಕಾದ ಕೆಲಸವನ್ನೆಲ್ಲಾ ಮಾಡಿದ್ದು, ತಲುಪಬೇಕಾದ ಹಂತವನ್ನು ತಲುಪಿದ್ದು, ಇನ್ನು ಯಾವುದೇ ಜವಾಬ್ದಾರಿ ಇಲ್ಲ ಎಂದು ಅನ್ನಿಸಿದಾಗ, ತನ್ನ ಮೇಲೆ ಇತರರು ಯಾರೂ ಅವಲಂಬಿತರಾಗಿಲ್ಲ ಎನಿಸಿದಾಗ, ಎಂತೂ ಎಂದಾದರೂ ಸಾಯಲೇ ಬೇಕು, ಇಂದೇ ಗೌರವ ಪೂರ್ಣವಾಗಿ, ಸ್ವ ಇಚ್ಛೆಯಿಂದ ಕೊನೆಯಾಗುವ ಎಂದು ಯಾವುದಾದರೊಂದು ವಿಧಾನದಲ್ಲಿ ಪ್ರಶಾಂತವಾಗಿ ಸಾವಿಗೆ ಮುಖಾಮುಖಿಯಾಗುವುದು.

16.ಧಾರ್ಮಿಕ ಅಥವಾ ಆಧ್ಯಾತ್ಮಿಕ ಆತ್ಮಹತ್ಯೆ
ಸಂತರು, ಆಧ್ಯಾತ್ಮಿಕ ಸಾಧಕರು, ಧಾರ್ಮಿಕ ಮುಂದಾಳುಗಳು ಜೀವಂತವಾಗಿ ಸಮಾಧಿಯಾಗುವುದು ಈ ವರ್ಗಕ್ಕೆ ಸೇರುತ್ತದೆ. ಆಧ್ಯಾತ್ಮಿಕವಾಗಿ ಇದಕ್ಕೆ ಏನೂ ಮಹತ್ವವಿಲ್ಲ. ಯಾವ ಆಧ್ಯಾತ್ಮಿಕ ಸಾಧನೆಯಲ್ಲೂ ಇದಕ್ಕೆ ಬೆಂಬಲವಿಲ್ಲ. ಆದರೆ ಧಾರ್ಮಿಕತೆಯ ಸಂಕುಚಿತವಾದಿಗಳಿಂದ ಬಹುತರವಾಗಿ ಅದಕ್ಕೆ ಧಾರ್ಮಿಕ ಮಾನ್ಯತೆ ನೀಡುತ್ತಾರೆ. ಧಾರ್ಮಿಕ ಉನ್ಮತ್ತತೆಯಲ್ಲಿರುವ ಮಂದಿ ಇಂತಹ ಸಾವನ್ನು ವೈಭವೀಕರಿಸುತ್ತಾರೆ. ಇದೂ ಕೂಡ ಒಂದು ಅವಿವೇಕದ ಅಥವಾ ದುರ್ಬಲ ಮನಸ್ಥಿತಿಯ ಆತ್ಮಹತ್ಯೆಯೇ. ಧಾರ್ಮಿಕತೆಯ ಸಿದ್ಧಾಂತಗಳನ್ನು ಸಂಕುಚಿತ ಮತ್ತು ವಿಕ್ಷಿಪ್ತ ರೀತಿಯಲ್ಲಿ ವಿಶ್ಲೇಷಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವವರು ಕೂಡಾ ಇದರಲ್ಲಿ ಸೇರುತ್ತಾರೆ.

17.ಸಾಮಾಜಿಕ ಆತ್ಮಹತ್ಯೆ
ಸಮಾಜದ ವ್ಯವಸ್ಥೆಗೆ ಅಥವಾ ಕಟ್ಟುಪಾಡುಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡ ವ್ಯಕ್ತಿಯು, ತನ್ನ ನೆರೆಹೊರೆಯ ಮತ್ತು ಕುಟುಂಬದವರ ಅವಹೇಳನಕ್ಕೆ, ಕಿರುಕುಳಕ್ಕೆ ಒಳಗಾಗುತ್ತಾನೆ. ಹೋರಾಡು ಅಥವಾ ಓಡಿಹೋಗು ಎಂಬ ಸೂತ್ರವನ್ನು ಅನುಸರಿಸದ ಮಂದಿ ಇಂತಹ ಸಾಮಾಜಿಕ ಕಿರುಕುಳದಿಂದ ನೋವಿಗೂ, ಖಿನ್ನತೆಗೂ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

18.ಆತ್ಮಾಹುತಿ
ಧಾರ್ಮಿಕ, ರಾಷ್ಟ್ರೀಯ ಕಾರಣಗಳನ್ನು ಇಟ್ಟುಕೊಂಡು, ಸಿದ್ಧಾಂತಗಳ ಪ್ರತಿಪಾದನೆಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವುದು. ಇವರನ್ನು ಹುತಾತ್ಮರೆಂದು ಕರೆಯುವುದಾದರೂ ಇದು ಆತ್ಮಹತ್ಯೆಯೇ ಆಗಿರುತ್ತದೆ. ತಮ್ಮ ಒಡೆಯನಿಗಾಗಿ ಹೋರಾಡಿ ನೇರವಾಗಿ ಸಾವಿಗೆ ಎದೆಗೊಟ್ಟು ನಂತರ ವೀರಗಲ್ಲಿನ ಸ್ಮಾರಕದಲ್ಲಿ ಪೂಜನೀಯರಾಗುವ ವೀರರೂ, ಗಂಡನ ಅಗಲಿಕೆಯ ನಂತರ ಚಿತೆಗೆ ಬಿದ್ದು ಪ್ರಾಣಬಿಟ್ಟು ಮಹಾಸತಿಯಾಗುವರು, ರಜಪೂತರಲ್ಲಿ (ದಾಳಿಕೋರರಿಗೆ ಸೆರೆಯಾಗದಂತೆ) ಸಾಮೂಹಿಕವಾಗಿ ಸತಿ ಹೋಗಿರುವ ಉದಾಹರಣೆಗಳು, ಧಾರ್ಮಿಕ ಉಗ್ರರ ಆತ್ಮಹತ್ಯಾ ಪಡೆಗಳು, ರಾಷ್ಟ್ರೀಯ ಭಕ್ತಿಯನ್ನು, ದೇಶಪ್ರೇಮವನ್ನು ಅಭಿವ್ಯಕ್ತಿಸುವ ಸಂದರ್ಭಗಳಲ್ಲಿ ಆದಂತಹ ಎಲ್ಲಾ ಆತ್ಮಹತ್ಯೆಗಳು ಆತ್ಮಾಹುತಿಯ ವರ್ಗಕ್ಕೆ ಸೇರುತ್ತವೆ. ಇದರಲ್ಲಿ ಶ್ರೇಷ್ಟ ಕನಿಷ್ಟತೆಗಳಿಲ್ಲ. ಅವರವರ ಸಿದ್ಧಾಂತಕ್ಕೆ ಬಲಿದಾನವಾಗುವ ವ್ಯಕ್ತಿಗಳು ಆತ್ಮಾಹುತಿ ಮಾಡಿಕೊಂಡು ಅವರಲ್ಲಿ ಅವರು ಹುತಾತ್ಮರಾಗಿ ವಿಜೃಂಭಿಸುತ್ತಾರೆ.
ಆತ್ಮಹತ್ಯೆ ಮಾಡಿಕೊಂಡು ಲೋಕಕ್ಕೆ ವಿದಾಯ ಹೇಳಲು ವಿಧಿವಿಧಾನಗಳಿವೆ. ಅವೇನೆಂದು ಮುಂದೆ ನೋಡೋಣ.

(ಮುಂದುವರಿಯುವುದು)

LEAVE A REPLY

Please enter your comment!
Please enter your name here