ಮಂಗಳೂರು ಪ್ರೆಸ್ ಕ್ಲಬ್‍ನ 2019ನೇ ವರ್ಷದ ಪ್ರಶಸ್ತಿ ಪುರಸ್ಕೃತೆ

  • ಮುಹಮ್ಮದ್ ಆರಿಫ್ ಪಡುಬಿದ್ರಿ

ಎಚ್‍ಐವಿ/ ಏಡ್ಸ್ ಎಂಬುದು ಜಗತ್ತನ್ನು ತಲ್ಲಣಗೊಳಿಸಿರುವ ಮಹಾಮಾರಿಯಾಗಿ ಪರಿಣಮಿಸಿದೆ. ಈ ಸೋಂಕಿಗೆ ಎಷ್ಟೋ ಮಂದಿ ಬಲಿಯಾಗಿದ್ದರೆ, ಇನ್ನೇಷ್ಟೋ ಮಂದಿ ಜೀವನ್ಮರಣ ಹೋರಾಟದಲ್ಲೂ ಇದ್ದಾರೆ. ಅದರಲ್ಲೂ ಯಾವುದೇ ತಪ್ಪು ಮಾಡದ ಅಮಾಯಕ ಮಕ್ಕಳು ಕೂಡಾ ಎಚ್‍ಐವಿ/ ಏಡ್ಸ್‍ಗೆ ಬಲಿಯಾಗಿದ್ದನ್ನು ನಾವು ಕಂಡಿದ್ದೇವೆ. ಎಚ್‍ಐವಿ ಸೋಂಕಿತ ಮಕ್ಕಳನ್ನು ಅಸ್ಪ್ರಶ್ಯರಂತೆ ಕಾಣುವ, ಆಸ್ಪತ್ರೆಗಳಲ್ಲಿ ಬಿಟ್ಟು ಹೋಗುವ ಅಮಾನವೀಯ ಪರಿಸ್ಥಿತಿಯ ಮಧ್ಯೆ, ಸರಕಾರೇತರ ಸ್ವಯಂಸೇವಾ ಸಂಸ್ಥೆಗಳು ಮತ್ತು ಮಾಧ್ಯಮಗಳ ನಿರಂತರ ಜನಜಾಗೃತಿಯಿಂದ ಎಚ್‍ಐವಿ/ ಏಡ್ಸ್ ಸೋಂಕು ಬಾತ ಮಕ್ಕಳನ್ನು ಸಾಕಿ ಸಲಹುವ ಕೆಲಸ ಅಲ್ಲಲ್ಲಿ ನಡೆಯುತ್ತಿದೆ. ಬಹುತೇಕ ತಂದೆ ತಾಯಿಯನ್ನು ಕಳೆದುಕೊಂಡಿರುವ ಅಂತಹ ಅನಾಥ ಮಕ್ಕಳಿಗೆ ತಾಯಿಯಯಂತೆ ಸಲಹುವ ಮಾನವೀಯ ಕೆಲಸ ಮಾಡುತ್ತಿರುವವರು ತಬಸ್ಸುಮ್. ಕೊಣಾಜೆ ಸಮೀಪದ ಆರ್ಥಿಕವಾಗಿ ಹಿಂದುಳಿದ ತುಂಬು ಸದಸ್ಯರ ಕುಟುಂಬದ ಅಬ್ದುಲ್ ಸಮದ್ ಮತ್ತು ಖೈರುನ್ನಿಸಾ ದಂಪತಿಯ ಪುತ್ರಿಯೇ ತಬಸ್ಸುಮ್. ಶಾಲೆ ಕಾಲೇಜಿನ ಓದಿನಲ್ಲಿ ಮುಂಚೂಣಿಯಲ್ಲಿ ಮಾತ್ರವಲ್ಲ, ಎಲ್ಲ ಪರೀಕ್ಷೆಗಳಲ್ಲೂ ಪ್ರಥಮ ಸ್ಥಾನವನ್ನೇ ತಬಸ್ಸುಂ ಪಡೆಯುತ್ತಿದ್ದರು. ಜೀವನದಲ್ಲಿ ದೊಡ್ಡ ಸಾಧನೆಗಳನ್ನು ಮಾಡಬೇಕು ಎಂಬ ಕನಸುಗಳಿದ್ದರೂ, ಮನೆಯಿಂದ ಪೂರಕ ಸಹಕಾರ ಸಿಗುತ್ತಿರಲಿಲ್ಲ. ಪದವಿ ತರಗತಿ ಆರಂಭಿಸುವಾಗಲೇ ಮದುವೆ ಮಾಡಿಕೊಡಲಾಗಿತ್ತು. ಕೌಟುಂಬಿಕ ಜೀವನದ ನಡುವೆ, ಸಮಾಜಕ್ಕೆ ಏನಾದರೊಂದು ಮಾಡಬೇಕು ಎಂಬ ಅವರ ಹಠ ಸಾಧನೆಯಿಂದಲೇ ಇವತ್ತು ಎಚ್‍ಐವಿ/ ಏಡ್ಸ್ ಬಾತ ಹೆಣ್ಮಕ್ಕಳನ್ನು ಸಾಕಿ ಸಲಹುವ ಸ್ನೇಹದೀಪ್ ಸಂಸ್ಥೆ ಕಾರ್ಯಾಚರಿಸುವಂತಾಗಿದೆ.

2011ರಲ್ಲಿ ಅವರು ಸ್ನೇಹ ದೀಪ್ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ತನ್ನ ಗೆಳತಿಯೊಬ್ಬಳು ಏಡ್ಸ್‌ಗೆ  ತುತ್ತಾಗಿ ಸಾವನ್ನಪ್ಪಿ, ಅವರ ಮಕ್ಕಳು ಅನಾಥರಾಗಿದ್ದನ್ನು ಕಂಡು ಬಹಳ ಬೇಸರಗೊಂಡಿದ್ದ ಅವರು, ಅಂದೇ ಎಚ್‍ಐವಿ/ ಏಡ್ಸ್ ಪೀಡಿತ ಹೆಣ್ಣು ಮಕ್ಕಳ ಸಂಸ್ಥೆ ಸ್ಥಾಪಿಸುವ ಯೋಜನೆ ಹಾಕಿಕೊಂಡಿದ್ದರು. ಆರಂಭದಲ್ಲಿ ಎಚ್‍ಐವಿ/ ಏಡ್ಸ್ ಬಾತ ಮಕ್ಕಳ ಸೇವೆ ಮಾಡುವ ಸಂಸ್ಥೆಯನ್ನು ಸೇರಿದ್ದ ಅವರು, ಮುಂದೆ ತನ್ನಲ್ಲಿದ್ದ ದುಡ್ಡಿನಿಂದ ಸ್ನೇಹದೀಪ್ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಮಂಗಳೂರಿನ ಬಿಜೈ ಬಳಿ ಕಾರ್ಯಾಚರಿಸುತ್ತಿರುವ ಸ್ನೇಹದೀಪ್‍ನಲ್ಲಿ ಎಚ್‍ಐವಿ/ ಏಡ್ಸ್‍ನಿಂದ ತಂದೆ- ತಾಯಿಗಳನ್ನು ಕಳೆದುಕೊಂಡಿರುವ ಒಂದು ವರ್ಷದಿಂದ 10-15 ವರ್ಷದ ಮಕ್ಕಳಿದ್ದಾರೆ. ಬೀದಿ ಪಾಲಾಗಲಿದ್ದ ಎಷ್ಟೋ ಮಕ್ಕಳಿಗೆ ಮಾತೃವಾತ್ಸಲ್ಯ ನೀಡಿ ಹೊಸ ಬದುಕು ಕಟ್ಟುವ ಕೆಲಸವನ್ನು ತಬಸ್ಸುಮ್ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕೆಲವು ಮಕ್ಕಳ ಜೀವನದ ಅಂತಿಮ ಕ್ಷಣದಲ್ಲಿ ಹತ್ತಿರವಿದ್ದುಕೊಂಡು ತನ್ನ ಸೇವೆ ಮಾಡುತ್ತಿದ್ದಾರೆ. ಒಂದೊಂದು ಮಗುವಿನ ಹಿಂದೆಯೂ ಕಣ್ಣೀರ ಕಥೆಗಳಿವೆ. 19 ಮಕ್ಕಳು ಅವರ ಕೈಯಲ್ಲೇ ಪ್ರಾಣ ಬಿಟ್ಟಿದ್ದು, ಅದನ್ನು ನೆನಪಿಸುವಾಗ ತಬಸ್ಸುಮ್ ದುಃಖ ತಡೆದುಕೊಳ್ಳದೇ ಕಣ್ಣೀರು ಸುರಿಸುತ್ತಾರೆ. ಕನಿಷ್ಠ ಪಕ್ಷ ಆ ಮಕ್ಕಳಿಗೆ ಪ್ರೀತಿ ವಾತ್ಸಲ್ಯದಿಂದ ಜೀವ ಬಿಡುವ ವ್ಯವಸ್ಥೆ ಮಾಡಿದ ತೃಪ್ತಿ ತಬಸ್ಸುಮ್ ಅವರದ್ದು. ಅಲ್ಲದೆ, ಆಯಾ ಮಕ್ಕಳಿಗೆ ಅವರವರ ಧರ್ಮಕ್ಕನುಗುಣವಾಗಿ ಗೌರವಯುತ ಅಂತಿಮ ಸಂಸ್ಕಾರ ಮಾಡಿಸುವ ಜವಾಬ್ದಾರಿ ನಿರ್ವಹಿಸಿ ಕೃತಜ್ಞರಾಗುತ್ತಿದ್ದಾರೆ. ಎಲ್ಲ ಧರ್ಮದ ಮಕ್ಕಳನ್ನೂ ಜಾತಿ, ಧರ್ಮದ ಭೇದವಿಲ್ಲದೆ, ಪ್ರೀತಿ, ಆದರದಿಂದ ಸಲಹುತ್ತಿದ್ದಾರೆ.ಸ್ನೇಹದೀಪ್‍ನಲ್ಲಿ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳ 26 ಮಕ್ಕಳು ಇದ್ದಾರೆ. ಅವರಿಗೆ ಶಿಕ್ಷಣ, ಊಟ, ವಸತಿ, ಆರೋಗ್ಯದ ಸೇವೆಯನ್ನು ತನ್ನ ಮೂವರು ಸಿಬ್ಬಂದಿಗಳ ಜತೆ ತಬಸ್ಸುಮ್ ಮಾಡಿಸುತ್ತಿದ್ದಾರೆ. ಎಲ್ಲ ಮಕ್ಕಳು ಕೂಡಾ ತಬಸ್ಸುಮ್ ಅವರನ್ನು ತಾಯಿಯಂತೆ, ಸ್ನೇಹದೀಪ್ ಸಂಸ್ಥೆಯನ್ನು ಸ್ವಂತ ಮನೆಯಂತೆ ಕಾಣುತ್ತಿದ್ದಾರೆ. ತಬಸ್ಸುಮ್ ಅವರು ಅಂಗಡಿಯೊಂದನ್ನು ನಡೆಸುತ್ತಿದ್ದು, ಅದರಿಂದ ಬಂದ ಆದಾಯವನ್ನು ಸ್ನೇಹದೀಪ ಸಂಸ್ಥೆಗೆ ಖರ್ಚು ಮಾಡುತ್ತಿದ್ದಾರೆ. ಜತೆಗೆ ಸ್ಥಳೀಯ ಸಹೃದಯಿ ದಾನಿಗಳಿಂದ ಸಹಾಯ ಪಡೆದು ಸಂಸ್ಥೆ ನಡೆಸುತ್ತಿದ್ದಾರೆ.ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಸಂಸ್ಥೆಗೆ ದಾನಿಗಳಿಂದ ನೆರವು ಪಡೆಯುತ್ತಿದ್ದಾರೆ. ಅನೇಕ ಕಷ್ಟದ ಸಂದರ್ಭಗಳು ಬಂದರೂ, ಅದನ್ನು ಎದೆಗುಂದದೆ ನಿಭಾಯಿಸಿಕೊಂಡು ಸ್ನೇಹ ದೀಪ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ

ಪ್ರಕಟಣೆ : ಉರ್ವ ರಾಧಾಕೃಷ್ಣ ಮಂದಿರದ ಸಭಾಂಗಣದಲ್ಲಿ 2020ರ ಫೆಬ್ರವರಿ 29ರಂದು ನಡೆಯಲಿರುವ ಪ್ರೆಸ್ ಕ್ಲಬ್ ದಿನಾಚರಣೆಯಂದು ತಬಸ್ಸುಮ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಂಗಳೂರು ಪ್ರೆಸ್ ಕ್ಲಬ್‍ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here