ಲೇಖಕರು: ರಾಹಿದ್ ಸಾಸ್ಥಾನ್, ಉಡುಪಿ

ಶಿಕ್ಷಣವೆಂದರೆ ಕೇವಲ ಪುಸ್ತಕದ ಅಕ್ಷರಗಳನ್ನು ತಿಳಿದುಕೊಳ್ಳುವುದಲ್ಲ, ಅದು ಮನುಷ್ಯನ ಮನಸ್ಸನ್ನು ರೂಪಿಸುವ ಪ್ರಕ್ರಿಯೆ. ಈ ಪ್ರಕ್ರಿಯೆಯ ನಿಜವಾದ ಶಿಲ್ಪಿಗಳು ಶಿಕ್ಷಕರು. ಒಬ್ಬ ಶಿಕ್ಷಕ ವಿದ್ಯಾರ್ಥಿಯ ಜೀವನವನ್ನು ಬದಲಾಯಿಸಿದರೆ, ಅವನ ಮೂಲಕ ಒಂದು ಕುಟುಂಬ ಬದಲಾಗುತ್ತದೆ, ಒಂದು ಕುಟುಂಬ ಬದಲಾಗಿದರೆ ಸಮಾಜದ ಮೇಲೆ ಪರಿಣಾಮ ಬೀರುತ್ತದೆ, ಸಮಾಜ ಬದಲಾಗಿದರೆ ರಾಷ್ಟ್ರವೇ ಹೊಸ ದಿಕ್ಕಿಗೆ ಸಾಗುತ್ತದೆ.

ಆದ್ದರಿಂದಲೇ ಶಿಕ್ಷಕರನ್ನು “ರಾಷ್ಟ್ರದ ದೀಪಸ್ತಂಭರು” ಎಂದು ಕರೆಯಲಾಗುತ್ತದೆ. ಗುರುಗಳ ಮಹತ್ವವನ್ನು ನಮ್ಮ ಭಾರತೀಯ ಪರಂಪರೆಯಲ್ಲಿ ವಿಶೇಷವಾಗಿ ಒತ್ತಿ ಹೇಳಲಾಗಿದೆ. “ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರಃ” ಎಂಬ ಮಂತ್ರವು ಕೇವಲ ಧಾರ್ಮಿಕ ವಚನವಲ್ಲ, ಅದು ಶಿಕ್ಷಣದ ದರ್ಶನ. ಬ್ರಹ್ಮನು ಸೃಷ್ಟಿ ಮಾಡಿದಂತೆ ಗುರುವು ವಿದ್ಯಾರ್ಥಿಯ ಒಳಗಿನ ಪ್ರತಿಭೆಯನ್ನು ಹೊರತರುತ್ತಾನೆ. ವಿಷ್ಣುವಿನಂತೆ ಸಂರಕ್ಷಿಸಿ, ಶಿಸ್ತಿನಲ್ಲಿ ನಡೆಸುತ್ತಾನೆ. ಮಹೇಶ್ವರನಂತೆ ಅಜ್ಞಾನವನ್ನು ನಾಶಮಾಡುತ್ತಾನೆ. ಈ ತ್ರಿಮೂರ್ತಿಯ ಕಾರ್ಯವನ್ನು ಮಾಡುವುದೇ ಒಬ್ಬ ನಿಜವಾದ ಶಿಕ್ಷಕ.

ಇಂದಿನ ರಾಷ್ಟ್ರ ಜೀವನದಲ್ಲಿ ಶಿಕ್ಷಕರ ಪಾತ್ರ ಇನ್ನಷ್ಟು ಅಗತ್ಯವಾಗಿದೆ. ಇಂದಿನ ಪೀಳಿಗೆಯು ತಂತ್ರಜ್ಞಾನ, ಜಾಗತೀಕರಣ ಮತ್ತು ವೇಗದ ಜೀವನ ಶೈಲಿಯಲ್ಲಿ ಮುಳುಗಿದೆ. ಆದರೆ ಮೌಲ್ಯಾಧಾರಿತ ಜೀವನದ ಕೊರತೆ ತೀವ್ರವಾಗಿದೆ. ಶಿಕ್ಷಕರು ಕೇವಲ ಪಠ್ಯ ಪುಸ್ತಕದ ವಿಷಯವನ್ನೇ ಅಲ್ಲ, ಮೌಲ್ಯ, ಶಿಸ್ತು, ದೇಶಪ್ರೇಮ, ಸಹಬಾಳ್ವೆ, ಕರ್ತವ್ಯ ಭಾವನೆ ಇವುಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿದಾಗ ಮಾತ್ರ ನಿಜವಾದ ಶಿಕ್ಷಣ ಸಾಧ್ಯ. ಹೀಗಾಗಿ ಶಿಕ್ಷಕರು ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಿ ರಾಷ್ಟ್ರಕ್ಕೆ ಬಲ ಕೊಡುತ್ತಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೇಳಿದಂತೆ: “ಒಬ್ಬ ಉತ್ತಮ ಶಿಕ್ಷಕನು ಸಾವಿರಾರು ಆತ್ಮಗಳನ್ನು ಎಚ್ಚರಿಸುವ ಶಕ್ತಿ ಹೊಂದಿರುತ್ತಾನೆ.” ಇದೇ ಕಾರಣಕ್ಕೆ ಶಿಕ್ಷಕರು ತಮ್ಮ ನಡವಳಿಕೆಯಿಂದಲೇ ಪಾಠ ಹೇಳಬೇಕು. ಅವರು ಬೋಧಿಸುವ ಪ್ರತಿಯೊಂದು ಪದ ಕೇವಲ ವಿಷಯವಾಗಿರದೆ, ರಾಷ್ಟ್ರ ನಿರ್ಮಾಣದ ಬಿತ್ತನೆ ಆಗಬೇಕು. ಶಿಕ್ಷಕರ ಜೀವನವೇ ವಿದ್ಯಾರ್ಥಿಗಳಿಗೆ ಮಾದರಿಯಾದಾಗ, ಆ ಪೀಳಿಗೆ ದೇಶಕ್ಕಾಗಿ ಶ್ರಮಿಸಲು ಸಿದ್ದವಾಗುತ್ತದೆ.

ಇಸ್ಲಾಂ ಧರ್ಮದಲ್ಲಿ ಪ್ರವಾದಿ ಮುಹಮ್ಮದ್ (ಸ) ಅವರು “ವಿದ್ವಾಂಸರು ಪ್ರವಾದಿಗಳ ಉತ್ತರಾಧಿಕಾರಿಗಳು” ಎಂದು ಗುರುಗಳ ಸ್ಥಾನವನ್ನು ಎತ್ತಿ ಹಿಡಿದಿದ್ದಾರೆ. ಕ್ರೈಸ್ತ ಧರ್ಮದಲ್ಲಿ ಯೇಸು ಕ್ರಿಸ್ತನನ್ನು “ಮಹಾ ಗುರು” ಎಂದೇ ಕರೆಯಲಾಗಿದೆ. ಬೌದ್ಧ ಧರ್ಮದಲ್ಲಿ ಬುದ್ಧರನ್ನು “ಶ್ರೇಷ್ಠ ಗುರು” ಎಂದು ಗೌರವಿಸಿದ್ದಾರೆ. ವೇದಗಳಲ್ಲಿ ಗುರುವನ್ನು ಪರಮಸತ್ಯವೆಂದು ಗುರುತಿಸಿದ್ದಾರೆ. ಇವೆಲ್ಲವು ಶಿಕ್ಷಕರ ಸ್ಥಾನವು ಧರ್ಮಾತೀತ, ಕಾಲಾತೀತ ಮತ್ತು ಶಾಶ್ವತ ಎಂಬುದನ್ನು ಸಾರುತ್ತವೆ.

ಇಂದಿನ ಸಮಾಜದಲ್ಲಿ ಭ್ರಷ್ಟಾಚಾರ, ಅಸಮಾನತೆ, ಹಿಂಸೆ, ಅಸಹಿಷ್ಣುತೆ ಹೆಚ್ಚುತ್ತಿರುವುದು ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲೂ ಶಿಕ್ಷಕರು ಸತ್ಯ, ಧರ್ಮ, ನೀತಿ, ಸೌಹಾರ್ದತೆಗಳನ್ನು ವಿದ್ಯಾರ್ಥಿಗಳಲ್ಲಿ ನೆಡಿಸಿದರೆ, ಅವರು ಭವಿಷ್ಯದಲ್ಲಿ ನ್ಯಾಯಪ್ರಿಯ ನಾಯಕರು, ಸತ್ಯಸಂಧ ಆಡಳಿತಗಾರರು, ಸಮಾಜಸೇವಕರು ಆಗಿ ರಾಷ್ಟ್ರವನ್ನು ಶಕ್ತಿಶಾಲಿಯಾಗಿ ಕಟ್ಟುತ್ತಾರೆ. ಶಿಕ್ಷಕರು ತಮ್ಮ ಪಾತ್ರವನ್ನು ನಿಷ್ಠೆಯಿಂದ ನಿರ್ವಹಿಸಿದಾಗ, ಅವರು ಒಬ್ಬ ವಿದ್ಯಾರ್ಥಿಯನ್ನು ಬದಲಿಸುವುದಿಲ್ಲ, ಒಂದು ರಾಷ್ಟ್ರವನ್ನು ಬದಲಿಸುತ್ತಾರೆ. ಆದುದರಿಂದ, ಶಿಕ್ಷಕರನ್ನು ಗೌರವಿಸುವುದು ಕೇವಲ ವೈಯಕ್ತಿಕ ಕೃತಜ್ಞತೆ ಅಲ್ಲ, ಅದು ದೇಶ ನಿರ್ಮಾಣದ ಕರ್ತವ್ಯ. ನಮ್ಮ ಜೀವನದಲ್ಲಿ ಯಾವ ಮಟ್ಟಿಗೆ ಗುರುಗಳ ಸ್ಥಾನವನ್ನು ಗುರುತಿಸುತ್ತೇವೋ ಅಷ್ಟರ ಮಟ್ಟಿಗೆ ನಮ್ಮ ರಾಷ್ಟ್ರದ ಭವಿಷ್ಯ ಬೆಳಗುತ್ತದೆ. ಶಿಕ್ಷಕರ ತ್ಯಾಗ, ಪ್ರೇರಣೆ, ಮಾರ್ಗದರ್ಶನ – ಇವೆಲ್ಲವು ನಮ್ಮನ್ನು ನಿಜವಾದ ನಾಗರಿಕರೆಂದು ರೂಪಿಸುತ್ತವೆ. ರಾಷ್ಟ್ರವನ್ನು ಶ್ರೇಷ್ಠಗೊಳಿಸಲು ಶಿಕ್ಷಕರ ಸೇವೆ ಅತಿ ದೊಡ್ಡ ಕೊಡುಗೆ.

LEAVE A REPLY

Please enter your comment!
Please enter your name here