• ಮುಷ್ತಾಕ್ ಹೆನ್ನಾಬೈಲ್

“ಬ್ರಾಹ್ಮಣ್ಯ” ಎನ್ನುವ ಪದವು ಶ್ರೇಷ್ಠತೆಯ ವ್ಯಸನ ಎಂಬುದಕ್ಕೆ ಪರ್ಯಾಯವಾಗಿ ಬಳಸಲ್ಪಟ್ಟು ರಾದ್ಧಾಂತವಾಗಿದೆ..ಸಾಮಾಜಿಕ ಜಾಲತಾಣದ ಬಳಕೆ ವ್ಯಾಪಕವಾದ ಮೇಲೆ, ವಿಚಾರಗಳ ಮೇಲಿನ ವಾದ- ವಿವಾದಗಳ ರಭಸವು ಹಿಂದೆಂದಿಗಿಂತಲೂ ಈಗ ಹೆಚ್ಚಾಗಿ, ತುಸು ಹೆಚ್ಚೇ ವಿಕೃತ ರೂಪವನ್ನು ಪಡೆದಿದೆ. ಅದರ ಜೊತೆಗೇ, ಇತಿಹಾಸದ ಬಹಳಷ್ಟು ಹುಳುಕು-ಭ್ರಮೆಗಳ ಪರಿಚಯವೂ ಆಗುತ್ತಿದೆ. ಬಿಳಿಯರು ಮತ್ತು ಕರಿಯರು ಎನ್ನುವುದು ಮನುಷ್ಯ ಕಲ್ಪನೆಗೆ ನಿಲುಕುವ ಭೂಮಿಯ ಮೇಲಿನ ಆದಿ ಮಾನವ ಶೋಷಣೆಯ ವರ್ಗೀಕರಣ. ಈ ಅನಾಗರಿಕ ವರ್ಗೀಕರಣವು ಜಗತ್ತಿನಾದ್ಯಂತ ಬೇರೆ ಬೇರೆ ರೂಪದಲ್ಲಿ ಪಸರಿಸಲ್ಪಟ್ಟು, ಶತಶತಮಾನಗಳ ಶೋಷಣೆ, ದಾರುಣತೆ, ದುಷ್ಟತನಗಳಿಗೆ ಕಾರಣವಾಯಿತು. ಜಗತ್ತಿನ ಕಾಲಘಟ್ಟದ ಬಹುತೇಕ ಕಾಲವು ಈ ಮೇಲು-ಕೀಳಿನ ಕೆಟ್ಟ ಆಟದಲ್ಲಿಯೇ ಸವೆದುಹೋದದ್ದು ಸ್ಪಟಿಕಷ್ಟು ಸ್ಪಷ್ಟ ಸತ್ಯ. ಜಗತ್ತಿನ ಪ್ರತಿಯೊಂದು ದೇಶ- ಧರ್ಮವು ಈ ತಾರತಮ್ಯವನ್ನು ಕಂಡಿದೆ. ತೀರ ಇತ್ತೀಚೆಗೆ ಜಗತ್ತಿನ ದೊಡ್ಡಣ್ಣ ಅಮೇರಿಕಾದಲ್ಲಿ ಕರಿಯನೊಬ್ಬನನ್ನು ಅಲ್ಲಿನ ಬಿಳಿಯ ಪೋಲಿಸ್ ಅಧಿಕಾರಿ ಅಮಾನುಷವಾಗಿ ಕೊಂದ ಕಾರಣಕ್ಕೆ, ಕರಿಯ- ಬಿಳಿಯ ಸಂಘರ್ಷ ತಾರಕಕ್ಕೇರಿ ಬಲಪಂಥೀಯ ವಿಚಾರಧಾರೆ ಹೊಂದಿದ್ದ ನಿಕಟಪೂರ್ವ ಅಮೇರಿಕಾ ಅಧ್ಯಕ್ಷ ಟ್ರಂಪ್ ಮನೆಸೇರುವಂತಾಯಿತು. ಭಾರತದಲ್ಲಿ ಬ್ರಾಹ್ಮಣ-ಶೂದ್ರ ಮೇಲು ಕೀಳಿನ ತಾರತಮ್ಯಕ್ಕೆ ಒಂದು ದೊಡ್ಡ ಇತಿಹಾಸವೇ ಇದೆ. ಶತಶತಮಾನಗಳ ಕಾಲ ಈ ನೆಲದ ಶೂದ್ರರು ಶೋಷಿತರಾಗಿ ಮುಖ್ಯವಾಹಿನಿಯಿಂದ ಹೊರತಾಗಿ ಬದುಕಿದರು. ದೇಶಾದ್ಯಂತ ಶೋಷಣೆಯ ವಿರುದ್ಧ ಮಹಾದೊಡ್ಡ ಸಂಘರ್ಷಗಳು ಸದಾಕಾಲವೂ ನಡೆದವು. ಮೇಲು- ಕೀಳಿನ ಅಮಾನುಷ ಮಾನವ ವರ್ಗೀಕರಣದಿಂದಾಗಿ ಜೈನ- ಬೌದ್ಧ ಧರ್ಮಗಳು ಈ ನೆಲದಲ್ಲಿ ಜನ್ಮತಾಳಿದವು. ಕ್ರೈಸ್ತ ಮತ್ತು ಇಸ್ಲಾಮ್ ಧರ್ಮದ ಆಗಮನವೂ ಆಯಿತು. ಸ್ಥಳೀಯವಾಗಿ ಬಸವಣ್ಣ, ಕನಕದಾಸ, ನಾರಾಯಣ ಗುರುಗಳಂತಹ ಮಹಾನ್ ಸಮಾಜ ಸುಧಾರಕರು, ದಾರ್ಶನಿಕರು ತಮ್ಮ ಬದುಕನ್ನು ಸವೆಸಿ, ಈ ಸಾಮಾಜಿಕ ತಾರತಮ್ಯಗಳ ವಿರುದ್ಧ ಯಾವುದೇ ಸಮುದಾಯವನ್ನು ಹೊಣೆಗಾರರನ್ನಾಗಿಸದೆ ಮತ್ತು ಆರೋಪ ಪ್ರತ್ಯಾರೋಪಗಳನ್ನು ಮಾಡದೆ ಅಹರ್ನಿಶಿ ಹೋರಾಡಿದರು. ರಾಷ್ಟ್ರಕವಿ ಕುವೆಂಪುರವರ ವಿಶ್ವಮಾನವತೆಯ ಪ್ರಖರ ಸಂದೇಶ ಶೋಷಿತ ವರ್ಗದ ಪಾಲಿನ ಪ್ರಬಲ ಧ್ವನಿಯಾಯಿತು. ಬ್ರಾಹ್ಮಣ- ಶೂದ್ರ ಮೇಲು ಕೀಳಿನ ತಾರತಮ್ಯದ ವಿರುದ್ಧದ ಹೋರಾಟದ ಗಮನಾರ್ಹ ಅಂಶವೆಂದರೆ, ಸ್ವತಃ ಬಹಳಷ್ಟು ಬ್ರಾಹ್ಮಣರು ಮತ್ತು ಮೇಲ್ವರ್ಗದವರೂ ಇಂತಹ ಶೋಷಣೆಯ ವಿರುದ್ಧ ಹೋರಾಡಿದರು. ಶತಮಾನಗಳ ಕಾಲದ ಮೇಲು- ಕೀಳಿನ ತಾರತಮ್ಯ ಅದೆಷ್ಟೋ ಗತ ಪೀಳಿಗೆಗಳ ಬದುಕನ್ನೇ ದಾರುಣವಾಗಿಸಿತು ಮಾತ್ರವಲ್ಲ, ಕನಸುಗಳನ್ನು ಕಸಿದುಕೊಂಡಿತು. ಸ್ವಾತಂತ್ರ್ಯದ ಬಯಕೆಯಿಂದಾಗಿ ಕಾಲಕಾಲಗಳಲ್ಲಿ ಶೋಷಿತ ದಲಿತ-ಶೂದ್ರ ವರ್ಗ, ನಾಯಕತ್ವ ಮತ್ತು ಸಿದ್ಧಾಂತ ಆಧಾರಿತವಾಗಿ ಸಿಡಿದುಹೋಯಿತು. ಹಿಂದೂ ಧರ್ಮದ ಐಕ್ಯತೆಗೆ ಬಲವಾದ ಪೆಟ್ಟು ಕೊಟ್ಟಿದ್ದು ವರ್ಣಾಧಾರಿತ ತಾರತಮ್ಯ. ಹಾಗಂತ ಹೇಳಿಕೊಂಡು ಶೋಷಣೆ ಮಾಡಿದವರೆಲ್ಲರೂ ಬ್ರಾಹ್ಮಣರು ಮತ್ತು ಶೋಷಣೆಗೆ ಒಳಗಾದವರೆಲ್ಲರೂ ಶೂದ್ರರೆಂದೇನಲ್ಲ. ಕಾಲಕ್ರಮೇಣ ಶೂದ್ರರೊಳಗಿನ ವರ್ಗವು ಆಡಳಿತ, ಅಂತಸ್ತು, ಅವಕಾಶ ಪಡೆದ ಮೇಲೆ ತಮಗಿಂತ ಕೆಳಗಿನ ಜನಾಂಗಗಳನ್ನು ಪೂರ್ವದ ಅದೇ ಧಾಟಿಯ ತಾರತಮ್ಯದಿಂದ ನೋಡಿದವು. ಅಖಂಡ ಭಾರತದ ಅತಿದೊಡ್ಡ ಶೂದ್ರ ವರ್ಗ ಹತ್ತು ಹಲವು ಪಂಗಡಗಳಾಗಿ ಸಿಡಿದು ಹಲವಾರು ಜಾತಿ ಪಂಗಡಗಳಾಗಿ ಬದಲಾದವು. ಅವರಲ್ಲೇ ಮೇಲ್ವರ್ಗ ಕೆಳವರ್ಗ ಎಂದು ಸೃಷ್ಟಿಯಾಗಿ ಶ್ರೇಷ್ಠತೆಯ ಆಧಾರದ ಶ್ರೇಣೀಕೃತ ಜಾತಿ ವ್ಯವಸ್ಥೆಯಾಗಿ ಬದಲಾಯಿತು. ತದನಂತರದ ಕಾಲಘಟ್ಟದಲ್ಲಿ ಜಾತಿಯಾಗಿ ಬದಲಾದ ಈ ಮೇಲ್ವರ್ಗಗಳು, ಕೆಳವರ್ಗಗಳನ್ನು ಶೋಷಿಸಲಾರಂಭಿಸಿದವು. ಇದು ಶೂದ್ರರು ಅಥವ ಹಿಂದುಳಿದವರ ಒಳಗಿನ ಶೋಷಣೆ ಅಥವ ತಾರತಮ್ಯವೇ ಆದರೂ ಬೋರ್ಡ್ ಮಾತ್ರ ಬ್ರಾಹ್ಮಣ- ಶೂದ್ರವಾಗಿಯೇ ಉಳಿಯಿತು. ರಾಜಕೀಯ, ಸಾಮಾಜಿಕ ಅವಕಾಶಗಳನ್ನು ಪಡೆದ ಆಯ್ದ ಶೂದ್ರ ವರ್ಗ, ಅವಕಾಶ ವಂಚಿತ ಉಳಿದ ವರ್ಗಕ್ಕಿಂತ ಮೇಲ್ವರ್ಗವಾಯಿತು. ಶೂದ್ರರ ಇನ್ನೊಂದು ದೊಡ್ಡ ವರ್ಗ ಬೌದ್ಧ, ಕ್ರೈಸ್ತ, ಇಸ್ಲಾಮ್ ಮುಂತಾದ ಧರ್ಮಗಳಿಗೆ ಮತಾಂತರವಾಯಿತು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಭಾರತದ ಬಹುತೇಕ ಮುಸ್ಲಿಮರು ಗತಕಾಲದ ಭಾರತದ ಶೂದ್ರ-ದಲಿತರು ಎನ್ನುವ ಸತ್ಯ ಬಹಳಷ್ಟು ಜನರಿಗೆ ಇನ್ನೂ ಗೊತ್ತಿಲ್ಲ. ಹೀಗೆ, ಸೌಲಭ್ಯ ಪಡೆದು ಮೇಲ್ವರ್ಗವಾದ ಶೂದ್ರರು ಮತ್ತು ಮತ ಪರಿವರ್ತಿತರಾಗಿ ಧರ್ಮ ಮತ್ತು ದೇಶವಾದ ಶೂದ್ರರಿಂದಾಗಿ ಜಗತ್ತಿನ ಅತಿದೊಡ್ಡ ಶೂದ್ರ ವರ್ಗ ಅಲ್ಪಸಂಖ್ಯಾತವಾಗಿ ದಲಿತರೆಂದು ಗುರುತಿಸಿಕೊಂಡಿತು. ಅವಕಾಶ ವಂಚಿತರಾಗಿ ಕೇವಲ ಉಳಿದವರ ಅಡಿಯಾಳಾಗಿ ಬದುಕಬೇಕಾದ ಅವರ ಅನಿವಾರ್ಯ ಪರಿಸ್ಥಿತಿ ಮತ್ತು ಅವರ ಶತಮಾನಗಳ ಶೋಚನೀಯ ಬದುಕು ಮನುಕುಲ ಇತಿಹಾಸದ ದುರಂತ ಅಧ್ಯಾಯ. ಕಾಲಕಾಲದ ವಿಶೇಷ ವ್ಯಕ್ತಿತ್ವಗಳು ಈ ಸಾಮಾಜಿಕ ಅಂತರ ಮತ್ತು ಶೋಷಣೆಯನ್ನು ನಿವಾರಿಸಲು ಪ್ರಯತ್ನಿಸಿದರೂ, ಆಂಶಿಕವಾದ ಬದಲಾವಣೆಗಳಾದವೇ ಹೊರತು ವ್ಯಾಪಕವಾದ ಪರಿಣಾಮಗಳು ಬೀರಲಿಲ್ಲ. ಆದರೆ ಭಾರತದ ದಲಿತರ ಮೇಲಿನ ಮೇಲು- ಕೀಳಿನ ತಾರತಮ್ಯದ ಮೇಲೆ ಪ್ರಬಲ ಪ್ರಹಾರ ಮಾಡಿದ್ದು, ಸ್ವಾತಂತ್ರ್ಯ ಪೂರ್ವದ ಡಾ. ಬಿ. ಆರ್ ಅಂಬೇಡ್ಕರ್ ರವರ ಹೋರಾಟ ಮತ್ತು ಅವರ ಪ್ರಭಾವದಲ್ಲಿ ಅಸ್ತಿತ್ವಕ್ಕೆ ಬಂದ ಭಾರತೀಯ ಸಂವಿಧಾನ. ಭಾರತೀಯ ಸಂವಿಧಾನ ದಮನಿತ ವರ್ಗಕ್ಕೆ ನೀಡಿದ ಉದ್ಯೋಗ- ಅವಕಾಶಗಳ ಮೇಲಿನ ಮೀಸಲಾತಿಯು ಮತ್ತು ದಲಿತರ ಬದುಕಿಗೆ ಕೊಟ್ಟ ಆದ್ಯತೆಯು, ಭಾರತದ ಶೋಷಿತ ವರ್ಗದ ಬದುಕನ್ನು ಹಸನಾಗಿಸಿ, ಪರಿಣಾಮಕಾರಿಯಾದ ಸಾಮಾಜಿಕ ನ್ಯಾಯ ಸ್ಥಾಪಿತವಾಗಿಸಿದ್ದು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಮಹಾ ಸಾಧನೆ. ಸನಾತನ ಚತುರ್ವರ್ಣಗಳಲ್ಲಿ ಕಾಣುವ ಬ್ರಾಹ್ಮಣ- ಶೂದ್ರ ಎಂಬ ಜಗತ್ತಿನ ಅತೀ ಪುರಾತನ ವರ್ಣ ವರ್ಗೀಕರಣವು ತಾರತಮ್ಯಸೂಚಕ ಪದವಾಗಿ ಬಳಸಲ್ಪಟ್ಟಿತು..ಹಾಗಾಗಿಯೇ ಬ್ರಾಹ್ಮಣ್ಯವು ಶ್ರೇಷ್ಠತೆಯ ವ್ಯಸನದ ಪರ್ಯಾಯ ಪದವಾಗಿ ಸಮುದಾಯಕ್ಕೆ ಅಂಟಿಕೊಂಡು, ಬ್ರಾಹ್ಮಣ್ಯ ಮತ್ತು ಬ್ರಾಹ್ಮಣ ನಡುವಿನ ವ್ಯತ್ಯಾಸ ಗೊತ್ತಿಲ್ಲದೆ ಅನಗತ್ಯ ಗೊಂದಲ ಸೃಷ್ಟಿಯಾಗಿರುವುದು. ಸಮುದಾಯ ಸಂಘರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಭಾರತದಂತಹ ಸಮ್ಮಿಶ್ರ ಸಂಸ್ಕೃತಿಯ ದೇಶದಲ್ಲಿ ಅಪಾರ್ಥಗಳಿಗೆ ಮತ್ತು ಅವಾಂತರಗಳಿಗೆ ಕಾರಣವಾಗುವ ಪದಬಳಕೆಯು ಅವಶ್ಯವಿದೆಯೇ ಎಂಬ ಪ್ರೆಶ್ನೆಯೂ ಚರ್ಚೆಯಲ್ಲಿದೆ.

ತಾರತಮ್ಯವೆನ್ನುವುದು ಜಗತ್ತಿನ ಪ್ರತಿಯೊಂದು ದೇಶ- ಧರ್ಮಗಳಲ್ಲಿದೆ. ಆದರೆ ಸ್ವರೂಪ ಮಾತ್ರ ಬೇರೆ. ಮುಸ್ಲಿಮರಲ್ಲಿ ಶಿಯಾ- ಸುನ್ನಿ ಎಂಬ ಪ್ರಬಲ ಪರಸ್ಪರ ತದ್ವಿರುದ್ಧ ಸಿದ್ಧಾಂತಗಳಿವೆ. ಪ್ರವಾದಿ ಮೊಹಮ್ಮದರ ಕಾಲದ ನಂತರ ಉತ್ತರಾಧಿಕಾರತ್ವದ ವಿಚಾರವಾಗಿ ಮುಸ್ಲಿಮರು ಶಿಯಾ-ಸುನ್ನಿಗಳಾಗಿ ಬೇರ್ಪಟ್ಟರು. ಇಂದಿಗೂ ಇರಾನ್, ಶಿಯಾಗಳ ಜಾಗತಿಕ ಕೇಂದ್ರವಾದರೆ, ಸೌದಿ ಅರೇಬಿಯಾ ಸುನ್ನಿಗಳ ಕೇಂದ್ರ. ಜಗತ್ತಿನ ಬಹುತೇಕ ಮುಸ್ಲಿಮರು ಸುನ್ನಿ ಮುಸ್ಲಿಮರು. ಈ ಎರಡೂ ಪಂಗಡಗಳು ಶತಶತಮಾನಗಳಿಂದ ಹೊಡೆದಾಡಿಕೊಳ್ಳುತ್ತಿವೆ. ಬಹಳಷ್ಟು ರಕ್ತಪಾತ ಈಗಲೂ ನಡೆಯುತ್ತಿದೆ. ಶಿಯಾಗಳಲ್ಲಿ ಒಳಪಂಗಡಗಳು ಕಡಿಮೆ. ಆದರೆ ಸುನ್ನಿಗಳಲ್ಲಿ ಹಲವು ಪಂಗಡಗಳಿವೆ. ಸುನ್ನಿ, ಸಲಫಿ, ಸೂಫಿ, ತಬ್ಲೀಗಿ, ಅಹ್ಲೇ ಹದೀತ್, ವಹಾಬಿ, ಜಮಾತೇ ಇಸ್ಲಾಮಿ ಹೀಗೆ ಬಹಳಷ್ಟಿವೆ. ಶಿಯಾ- ಸುನ್ನಿ ವಾದವು ತೀವ್ರವಾದವಾದರೆ, ಸುನ್ನಿಗಳೊಳಗಿನ ಪಂಗಡವಾದವು ಸೌಮ್ಯವಾದ. ಒಂದೇ ಮನೆಯ ಸದಸ್ಯರಲ್ಲಿ ಸಲಫಿ, ಸುನ್ನಿ, ತಬ್ಲೀಗಿ, ಸೂಫಿ, ಅಹ್ಲೇ ಹದೀತ್, ವಹಾಬಿ ಸಿದ್ಧಾಂತದವರು ವ್ಯಾಪಕವಾಗಿ ಕಾಣಸಿಗುತ್ತಾರೆ. ಇದು ದೇವ ಆರಾಧನೆಯ ಕುರಿತಾದ ಮತಬೇಧ. ಸುನ್ನಿ ಪಂಗಡಗಳ ನಡುವೆ ವಿವಾಹ ಸಂಬಂಧವೂ ಸೇರಿದಂತೆ ಪ್ರತಿಯೊಂದು ಸಂಬಂಧವೂ ಸರಾಗವಾಗಿ ಇರುತ್ತದೆ. ಗಂಡ ಸುನ್ನಿಯಾದರೆ, ಹೆಂಡತಿ ಸಲಫಿಯಾಗಿರುತ್ತಾಳೆ. ಮಾವ ತಬ್ಲೀಗಿ ಆಗಿರುತ್ತಾನೆ. ತಮ್ಮ ಸೂಫಿಯಾದರೆ, ಅಣ್ಣ ವಹಾಬಿಯಾಗಿರುತ್ತಾನೆ. ಸುನ್ನಿಗಳೊಳಗಿನ ಪಂಗಡವಾದವು ಜಗತ್ತಿನಲ್ಲೇ ಅತೀ ವಿಲಕ್ಷಣ ಸ್ವರೂಪದ್ದು. ಜಗತ್ತಿನ ಇತರೆಲ್ಲ ಪಂಗಡವಾದಗಳಲ್ಲಿ ಸಾಂಸಾರಿಕ, ಸಾಂಬಂಧಿಕ ಸಾಮಾಜಿಕ, ಸಮೂಹ ಅಂತರಗಳಿದ್ದರೆ, ಸುನ್ನಿ ಮುಸ್ಲಿಮರ ಪಂಗಡವಾದದಲ್ಲಿರುವುದು ಆರಾಧನೆಯ ಕುರಿತಾದ ಮಾನಸಿಕ ಅಂತರ ಮಾತ್ರ. ಇದು ಆರಾಧನೆಯ ಕುರಿತಾದ ತೀಕ್ಷ್ಣವಾದವೇ ಆದರೂ, ಅದರಿಂದ ಹೊರತಾಗಿ ರಕ್ತಪಾತಗಳಿಗೆ ಮತ್ತು ಶೋಷಣೆಗಳಿಗೆ ಕಾರಣವಾಗುವ ತೀವ್ರವಾದವಿಲ್ಲ. ಮೇಲು- ಕೀಳಿನ ವಾದಗಳೂ ಇಲ್ಲ. ಆದರೆ ಜಗತ್ತಿನ ಪಂಗಡವಾದದಲ್ಲೇ ಅತಿಹೆಚ್ಚು ಬಾಲಿಶ ವಾದ ಮಾತ್ರ ಈ ಸುನ್ನಿ ಪಂಗಡವಾದವೇ. ಆದರೆ ಶಿಯಾ- ಸುನ್ನಿ ಜಗಳವು ಬಹಳ ಹಿಂಸಾತ್ಮಕ ಸ್ವರೂಪದ್ದು..ಆಧುನಿಕ ಜಗತ್ತಿನ ಧರ್ಮದೊಳಗಿನ ಯಾವ ಪಂಗಡವಾದವೂ ಶಿಯಾ- ಸುನ್ನಿಯಷ್ಟು ತೀವ್ರವಾಗಿಲ್ಲ. ಅಣ್ವಸ್ತ್ರಗಳೇ ಝಳಪಿಸಲ್ಪಡುವ ಕಟ್ಟರ್ ವಾದವಿದು. ಈ ಸಂಘರ್ಷ ತಾರಕಕ್ಕೇರುವಲ್ಲಿ ಮುಸ್ಲಿಮ್ ಜಗತ್ತನ್ನು ಒಡೆಯುವ ಅಮೇರಿಕಾ ನೇತೃತ್ವದ ಶಕ್ತಿಗಳ ಪ್ರಧಾನ ಪಾತ್ರವಿದೆ. ಹಾಗಾಗಿ ಈ ರಾಜಕೀಯ ಸ್ವರೂಪದ ಸಂಘರ್ಷ ಶಮನಗೊಳ್ಳದೆ ಶತಮಾನಗಳಿಂದ ಸಮಸ್ಯೆಯಾಗಿಯೇ ಉಳಿದಿದೆ. ಮೊದಲು ಶಿಯಾ ಸುನ್ನಿ ಧಾರ್ಮಿಕ ಸಂಘರ್ಷವಾಗಿತ್ತು. ನಂತರದ ದಿನಗಳಲ್ಲಿ ಧರ್ಮದೊಂದಿಗೆ ರಾಜಕೀಯ ಸಂಘರ್ಷವಾಗಿಯೂ ಬದಲಾಯಿತು. ಈ ರಾಜಕೀಯ ಸಂಘರ್ಷದ ಸಂಚಾಲಕತ್ವವನ್ನು ಶಿಯಾ ಆಡಳಿತದ ಪ್ರಬಲ ರಾಷ್ಟ್ರಗಳಾದ ಇರಾನ್ ಮತ್ತು ಸಿರಿಯಾವನ್ನು ಬೆಂಬಲಿಸುವ ಮೂಲಕ ರಷ್ಯಾ, ಸುನ್ನಿ ಪ್ರಾಬಲ್ಯದ ಪಾಕಿಸ್ತಾನ ಮತ್ತು ಸೌದಿಯನ್ನು ಬೆಂಬಲಿಸುವ ಮೂಲಕ ಅಮೇರಿಕಾ ನಿಭಾಯಿಸುತ್ತಿದೆ. ಇಸ್ಲಾಮಿನ ಸಿದ್ಧಾಂತಗಳಲ್ಲಿ ಜಗತ್ತಿನ ಮಾನವ ವರ್ಗೀಕರಣಕ್ಕೆ ಯಾವ ಆಯ್ಕೆ ಅವಕಾಶಗಳಿಲ್ಲದಿದ್ದರೂ ಮತ್ತು ಅದಕ್ಕೆ ಕಠಿಣ ನಿರ್ಬಂಧಗಳಿದ್ದರೂ ಕೂಡ, ಅದನ್ನೆಲ್ಲ ಮೀರಿ ಪಂಗಡವಾದ ಬೆಳೆದಿದೆ. ಇದು ಪ್ರವಾದಿ ನಂತರ ಕಾಲದ ಇಸ್ಲಾಮಿನ ಪಂಗಡವಾದದ ವಿಚಾರವಾದರೆ, ಪ್ರವಾದಿ ಮೊಹಮ್ಮದರ ಹುಟ್ಟಿನ ಮುಂಚಿನ ಕಾಲದ ಅರೇಬಿಯಾದ ಸಾಮಾಜಿಕ ಸ್ಥಿತಿ ಈ ವಿಚಾರದಲ್ಲಿ ಅತೀ ಶೋಚನೀಯವಾಗಿತ್ತು.

ಕರಿಯ ಜನಾಂಗದವರು ಅರಬ್ಬಿಗಳ ಗುಲಾಮರಾಗಿ ದುಡಿಯಬೇಕಾಗಿತ್ತು. ಆ ಕಾಲದ ಅನಾಗರಿಕ ಅರಬ್ಬರು ಮತ್ತು ಯಹೂದಿಗಳು ವ್ಯಾಪಕವಾಗಿ ಬಡಪಾಯಿ ಕರಿಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು. ಅಸಹ್ಯಕರವಾದ ಶ್ರೇಷ್ಠತೆಯ ವ್ಯಸನವಿತ್ತು. ಅರೇಬಿಯಾ ತುಂಬೆಲ್ಲ ಅರಬ್ಬಿಗಳು ಮತ್ತು ಯಹೂದಿಯರದ್ದೇ ಪಾರಮ್ಯವಿದ್ದಿತ್ತು. ಅರಬ್ಬಿಗಳು ಮತ್ತು ಯಹೂದಿಯರ ನಡುವೆ ಸದಾ ಸಂಘರ್ಷವಿದ್ದರೂ, ಕರಿಯರ ಮೇಲಿನ ದಬ್ಬಾಳಿಕೆಯ ವಿಚಾರದಲ್ಲಿ ಒಬ್ಬರಿಗಿಂತ ಒಬ್ಬರು ಮೇಲಾಗಿದ್ದರು. ಪ್ರವಾದಿ ಮೊಹಮ್ಮದರ ದಮನಕ್ಕೆ ಆರಂಭದಲ್ಲಿ ಅರಬ್ಬಿಗಳು ಪೂರ್ಣಪ್ರಮಾಣದ ಬಲಪ್ರಯೋಗ ಮಾಡಿದ್ದು, ಏಕದೇವ ಆರಾಧನೆಯ ಪ್ರತಿಪಾದನೆ ಮತ್ತು ಕರಿಯರಿಗೂ ಅರಬ್ಬಿಗಳ ಸಮಾನ ಸ್ಥಾನಮಾನ ನೀಡಲು ಪ್ರವಾದಿ ಆಗ್ರಹಿಸಿದ್ದೇ ಆಗಿತ್ತು. ಕರಿಯ ಗುಲಾಮರಾಗಿದ್ದ ಬಿಲಾಲ್ ಹಬ್ಶಿ ಪ್ರವಾದಿ ಮೊಹಮ್ಮದರ ಆದಿ ಮತ್ತು ಅತೀ ಪ್ರೀಯ ಅನುಯಾಯಿಗಳಲ್ಲಿ ಒಬ್ಬರಾಗಿದ್ದರು. ಕರಿಯರ ಮೇಲಿನ ಅನುಕಂಪ ಮತ್ತು ಸುಗಮ ಸಾಂಗತ್ಯಕ್ಕೊಸ್ಕರ ಪ್ರವಾದಿ ಮೊಹಮ್ಮದರನ್ನು ಅರಬ್ಬಿಗಳು ವಿಪರೀತ ಪೀಡಿಸಿದರು. ಪೀಡನೆ ತಾಳಲಾರದೆ ಪ್ರವಾದಿ ಮತ್ತು ಸಂಗಡಿಗರು ಮಕ್ಕಾ ತೊರೆದು ಮದೀನಾ ಸೇರಿದರು. ಅಲ್ಲಿಗೂ ಬಂದ ಮಕ್ಕಾದ ಅರಬ್ಬಿಗಳು ಸತತ ಮೂರು ಬಾರಿ, ಬದ್ರ್, ಊಹುದ್ ಮತ್ತು ಖಂದಕ್ ನಲ್ಲಿ ಯಹೂದಿಗಳೊಂದಿಗೆ ಸೇರಿ ದೊಡ್ಡ ಪ್ರಮಾಣದಲ್ಲಿ ದಾಳಿ ಮಾಡುತ್ತಾರೆ. ಆದರೆ ಈ ಆಕ್ರಮಣಗಳಲ್ಲಿ ವಿಶಾಲ ಅರಬ್ ಸೇನೆಗೆ ಸೋಲಾಗಿ, ಪ್ರವಾದಿಯ ಬೆರಳೆಣಿಕೆಯ ಜನರಿದ್ದ ಸೈನ್ಯ ಜಯ ಸಾಧಿಸುತ್ತದೆ. ಈ ಮೂರು ಆಕ್ರಮಣಗಳ ಸಂದರ್ಭದಲ್ಲಿ ಮತ್ತು ಆ ಹೊತ್ತಿಗೆ ಮದೀನಾದಲ್ಲಿ ಸತತವಾಗಿ ನಡೆಯುತ್ತಿದ್ದ ವಿಸ್ಮಯಕಾರಿ ವಿಶೇಷ ವಿದ್ಯಮಾನಗಳನ್ನು ಕಂಡ ಮದೀನಾದ ಹೆಚ್ಚುಕಡಿಮೆ ಎಲ್ಲ ಪಂಗಡಗಳು, ದೈವೀಕ ಸಂಪರ್ಕದ ಇರುವಿಕೆಯ ಪ್ರಬಲ ಕುರುಹುಗಳನ್ನು ಪ್ರವಾದಿಯವರಲ್ಲಿ ಗುರುತಿಸಿ ಅವರ ಅನುಯಾಯಿಗಳಾದರು. ಅರೇಬಿಯಾದ ಜನರು ತಂಡೋಪತಂಡವಾಗಿ ಬಂದು ಪ್ರವಾದಿಯ ಮೇಲೆ ವಿಶ್ವಾಸ ವ್ಯಕ್ತಪಡಿಸಿದರು. ಅವರನ್ನು ಆರಂಭದಲ್ಲಿ ಅತಿಯಾಗಿ ವಿರೋಧಿಸುತ್ತಿದ್ದವರೂ ಬಂದು ಜೊತೆಯಾದರು. ಊಹುದ್ ನ ಎರಡನೇ ಆಕ್ರಮಣದಲ್ಲಿ ಪ್ರವಾದಿಯವರ ಸಂಗಡಿಗರ ಮೇಲೆ ಪ್ರಚಂಡ ಪ್ರಹಾರ ಮಾಡಿದ್ದ, ವಿಶಾಲ ಪರ್ಶಿಯನ್ ಮತ್ತು ರೋಮನ್ ಸಾಮ್ರಾಜ್ಯ ಪತನಗೈದ, ಸಾರ್ವಕಾಲಿಕವಾದ ಜಾಗತಿಕ ಇತಿಹಾಸ ಕಂಡ ಮಹಾ ಯುದ್ಧ ಕಮಾಂಡರ್ ಖಾಲಿದ್ ಬಿನ್ ವಲೀದ್ ಕೂಡ ಮಕ್ಕಾದಿಂದ ಓಡಿಬಂದು, ತಪ್ಪಾಯಿತು ಕ್ಷಮಿಸಿ ಪ್ರವಾದಿಯವರೆ ಎಂದು ಮದೀನಾ ಮಸೀದಿಯ ದ್ವಾರದಲ್ಲಿ ಬಂದು ನಿಂತು ಗಳಗಳನೆ ಅಳತೊಡಗಿದ. ಹೀಗೆ ಮಕ್ಕಾದಿಂದ ಪ್ರವಾದಿಯ ಒಂದು ಕಾಲದ ಪರಮ ವೈರಿಗಳು ಒಬ್ಬೊಬ್ಬರಾಗಿ ಬಂದು ಪ್ರವಾದಿಯ ಮುಂದೆ ನಿಂತು ಅರಿಯದೇ ಮಾಡಿದ ತಪ್ಪನ್ನು ಮನ್ನಿಸಿರಿ ಎಂದು ಭಿನ್ನವಿಸುತ್ತಾ ಅವರ ಜೊತೆಯಾದರು.

ಈ ಪ್ರಕ್ರಿಯೆ ವ್ಯಾಪಕವಾಗತೊಡಗಿದ ನಂತರ ಪ್ರವಾದಿ ಮೊಹಮ್ಮದರ ಸಾವಿರಾರು ಸಂಗಡಿಗರು ಪ್ರವಾದಿ ನೇತೃತ್ವದಲ್ಲಿ ಅದೊಂದು ದಿನ ಮಕ್ಕಾ ಪ್ರವೇಶ ಮಾಡುತ್ತಾರೆ. ಇದನ್ನು ಐತಿಹಾಸಿಕ “ಫತ್ಹಾ ಏ ಮಕ್ಕಾ”(ಮಕ್ಕಾ ವಿಜಯ) ಎನ್ನುತ್ತಾರೆ. ಇದು ಇಸ್ಲಾಮೀ ಇತಿಹಾಸದ ಮಹಾದಿನ. ಸಾಗರೋಪಾದಿಯಲ್ಲಿ ಮದೀನಾದಿಂದ ಪ್ರವಾದಿಯ ಹಿಂದೆ ಬಂದ ಹಿಂದೆಂದೂ ಕಾಣದ ಜನಸಾಗರ ಕಂಡು ಮಕ್ಕಾದವರು ಆಶ್ಚರ್ಯಚಕಿತರಾಗುತ್ತಾರೆ. ಬಂದ ಬೃಹತ್ ಜನಸಮೂಹ ಕಂಡು ಬೆದರಿದ ಮಕ್ಕಾದ ಬಹುತೇಕ ಜನರು ನಗರ ತೊರೆದು ಓಡಲಾರಂಭಿಸುತ್ತಾರೆ. ಮದೀನಾದ ಮೇಲೆ ಹಿಂದಿನ ಆಕ್ರಮಣಗಳಿಗೆ ಪ್ರತಿಯಾಗಿ ಖಂಡಿತ ಈ ಬಾರಿ ಪ್ರವಾದಿಯವರ ಭಾರೀ ಸಂಖ್ಯೆಯ ಹಿಂಬಾಲಕರು ಪ್ರತೀಕಾರ ತೀರಿಸುತ್ತಾರೆ ಎಂಬುದು ಅವರುಗಳ ಆತಂಕಕ್ಕೆ ಕಾರಣವಾಗಿತ್ತು. ಭಯಭೀತರಾಗಿದ್ದ ಮಕ್ಕಾವಾಸಿಗಳನ್ನು ಕಂಡು ಪ್ರವಾದಿಯವರ ನಿರ್ದೇಶನದಂತೆ ಬಿಲಾಲ್ ಹಬ್ಶಿ ತಮ್ಮ ತಾರಕ ಸ್ವರದಲ್ಲಿ ಮಕ್ಕಾವಾಸಿಗಳ ಮೇಲೆ ಯಾವುದೇ ಪ್ರತೀಕಾರ ತೆಗೆದುಕೊಳ್ಳಲಾಗುವುದಿಲ್ಲ ಎಂದು ಕೂಗಿ ಕೂಗಿ ಹೇಳುತ್ತಾರೆ. ಬಿಲಾಲ್ ಹಬ್ಶಿಯವರು ಹಾಗೆ ಕೂಗಿದ್ದು ಕ್ಷಣಕಾಲದಲ್ಲಿಯೇ ಸಮಸ್ತ ನಗರಕ್ಕೆ ಪಸರಿಸಿದ ನಂತರ ಮಕ್ಕಾ ನಗರ ಶಾಂತವಾಗುತ್ತದೆ. ಮದೀನಾದಿಂದ ಬಂದವರು ಮಾತ್ರವಲ್ಲ ಮಕ್ಕಾದ ನಾಗರಿಕರು ಎಲ್ಲರೂ ಬಂದು ಧಾರ್ಮಿಕ ಕೇಂದ್ರ ಕಾಬಾ ಭವನದಲ್ಲಿ ಸೇರುತ್ತಾರೆ. ಅಲ್ಲೊಂದು ವಿಶಾಲ ಜನಸಾಗರವೇ ಸೃಷ್ಟಿಯಾಗುತ್ತದೆ. ಮಕ್ಕಾದ ಕಾಬಾ ಪ್ರಾರ್ಥನಾಲಯದ ಪ್ರಾಂಗಣದಲ್ಲಿ ಸೇರಿದ ಈ ಸಾಗರಸದೃಶ ಜನಸಮೂಹವನ್ನು ಉದ್ದೇಶಿಸಿ ಪ್ರವಾದಿ ಮೊಹಮ್ಮದರು ಐತಿಹಾಸಿಕವಾದ ಪ್ರವಚನ ನೀಡುತ್ತಾರೆ. ಕರಿಯ ಗುಲಾಮರಾದ ಬಿಲಾಲ್ ಹಬ್ಶಿಯವರ ಮೇಲೆ ಮಕ್ಕಾದ ಅರಬ್ಬರಿಗಾಗಲಿ ಅಥವ ಕಾಬಾ ಆರಾಧನಾಲಯದಲ್ಲಿ ಅನುಗಾಲದ ಪೌರೋಹಿತ್ಯ- ಪಾರುಪತ್ಯ ನಿಭಾಯಿಸುತ್ತಿದ್ದ ಖುರೈಷಿ ಪಂಗಡಕ್ಕಾಗಲಿ ಯಾವುದೇ ಮೇಲ್ಮೈಗಳಿಲ್ಲ. ಜಗತ್ತಿನ ಯಾವುದೇ ಕರಿಯನ ಮೇಲೆ ಬಿಳಿಯನ ಪಾರಮ್ಯವು ಧರ್ಮನಿಷಿದ್ಧ. ಪೌರೋಹಿತ್ಯವು ಸೇರಿದಂತೆ ಪ್ರತಿಯೊಂದರ ಮೇಲಿನ ಹಕ್ಕು ಅರಿವಿನ ಆಧಾರದ ಮೇಲೆಯೇ ಹೊರತು, ವರ್ಣಗಳ ಆಧಾರದ ಮೇಲೆ ಸಾಧಿಸುವುದು ಹೇಯ ಮತ್ತು ಅಮಾನುಷ. ದೇವ ನಿಷ್ಠೆಯಲ್ಲಿ ಅಚಲರಾಗಿರುವ ಬಿಲಾಲ್ ಹಬ್ಶಿರವರ ಶ್ರೇಷ್ಠತೆಯನ್ನು ಮೀರಬೇಕಾದರೆ ಅವರಿಗಿಂತಲೂ ಮಿಗಿಲಾದ ದೇವಸಾಮಿಪ್ಯ ಕರ್ಮದಿಂದ ಸಾಧಿಸಬೇಕು. ಹುಟ್ಟಿನ ಆಧಾರದ ಶ್ರೇಷ್ಠತೆಯ ಪ್ರತಿಪಾದನೆಯು ಇನ್ನು ಮುಂದೆ ಅರೇಬಿಯಾ ನೆಲದಲ್ಲಿ ಮಾತ್ರವಲ್ಲ, ಜಗತ್ತಿನ ಮೂಲೆಮೂಲೆಯಲ್ಲೂ ನಿಲ್ಲಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಪ್ರವಚನ ಮುಗಿಸಿದ ಪ್ರವಾದಿಯವರು ಮಕ್ಕಾದ ಕಾಬಾ ಭವನದ ಮೇಲ್ಚಾವಣಿಯ ಮೇಲೆ ಬಿಲಾಲ್ ಹಬ್ಶಿಯವರನ್ನು ಹತ್ತಿಸಿ ಪ್ರಾರ್ಥನಾ ಕರೆಯನ್ನು ಕೊಡಿಸಿದರು. ಅರೇಬಿಯಾದ ಕರಿಯ ಗುಲಾಮನೊಬ್ಬ ಅಲ್ಲಿಯವರೆಗೆ ಕರಿಯರಿಗೆ ಪ್ರವೇಶ ನಿಷೇಧವಿದ್ದ ಜಗತ್ತಿನ ಅತೀ ಪುರಾತನ ಪ್ರಾರ್ಥನಾಗೃಹದ ಮೇಲೇರಿ ಪ್ರಾರ್ಥನಾ ಪ್ರಕ್ರಿಯೆಯ ಭಾಗವಾದ ಅಭೂತಪೂರ್ವ ಘಟನೆ ಕಂಡು ಕೇಳಿ ಸಮಸ್ತ ಅರೇಬಿಯಾ ರೋಮಾಂಚನಕ್ಕೊಳಗಾಯಿತು. ದೂರದಿಂದಲೇ ಮಕ್ಕಾ ನಗರದ ಮೇಲ್ವಿಚಾರಕ ಮತ್ತು ಸರದಾರ ಅಬೂ ಸೂಫಿಯಾನ್ ತನ್ನ ಒಂದು ಕಾಲದ ಗುಲಾಮ ಬಿಲಾಲ್ ಹಬ್ಶಿ ಪವಿತ್ರ ಕಾಬಾ ಭವನವೇರಿದ್ದು ನೋಡಿ ದಂಗಾಗಿಹೋದ. ಶತಶತಮಾನಗಳ ವರ್ಣಭೇದ ವ್ಯವಸ್ಥೆಯನ್ನು ಕಂಡಿದ್ದ ಕಡುಕರ್ಮಠ ಅರೇಬಿಯಾದಲ್ಲಿ ನಡೆದ ಈ ವಿಸ್ಮಯಕಾರಿ ಮಹಾ ಮನ್ವಂತರದಿಂದಾಗಿ ಗುಲಾಮಗಿರಿ ಮತ್ತು ವರ್ಣಬೇಧ ನೀತಿ ಶಾಶ್ವತವಾಗಿ 1450 ವರ್ಷಗಳ ಹಿಂದೆಯೇ ಅರೇಬಿಯಾದ ಮಣ್ಣಿನಿಂದ ಮರೆಯಾಯಿತು. ಬಿಲಾಲ್ ಹಬ್ಶಿಯವರು ಅರೇಬಿಯಾ, ಪರ್ಶಿಯನ್, ರೋಮನ್ ಮತ್ತು ಇರಾನಿ ಸಾಮ್ರಾಜ್ಯಗಳ ಪಾಲಿನ ಗುಲಾಮಗಿರಿ ಮತ್ತು ವರ್ಣಬೇಧ ನೀತಿಯ ವಿಮೋಚನೆಯ ಸಂಕೇತವಾದರು. ಇಸ್ಲಾಮೀ ಇತಿಹಾಸದ ಅತೀ ಗೌರವಾರ್ಹ ವ್ಯಕ್ತಿಯಾದರು. ಮಾತ್ರವಲ್ಲ ಮಕ್ಕಾದ ಕಾಬಾ ಪ್ರಾಂಗಣದಲ್ಲಿ ನಡೆದ ಜಾಗತಿಕ ಇತಿಹಾಸದ ಈ ಮಹಾ ವಿದ್ಯಮಾನ ತದನಂತರದ ಜಗತ್ತಿನ ಮೂಲೆಮೂಲೆಯಲ್ಲಿನ ಸಾವಿರಾರು ವಿಮೋಚನಾ ಹೋರಾಟಗಳಿಗೆ ಮತ್ತು ಹೋರಾಟಗಾರರ ಹುಟ್ಟಿಗೆ ಪ್ರೇರಣೆ ಮತ್ತು ಸ್ಪೂರ್ತಿಯಾಯಿತು.ಪ್ರವಾದಿ ಕಾಲದ ನಂತರ ಖಲೀಫಾ ಉಮರ್ ಕಾಲದಲ್ಲಿ ಇಸ್ಲಾಮೀ ಆಡಳಿತ ಕ್ಷಿಪ್ರವಾಗಿ ಅರ್ಧ ಜಗತ್ತಿಗೆ ವಿಸ್ತರಿಸಿಕೊಂಡಿತು. ಜಗತ್ತಿನ ಮೇಲು ಕೀಳು ಸಂಘರ್ಷದ ವಿಮೋಚನೆಯ ಮಹಾ ಸಂಕೇತವಾದ ಬಿಲಾಲ್ ಹಬ್ಶಿ ಪ್ರಕರಣದ ಪ್ರೇರಣೆಯು ಕೇವಲ ಕೆಲವೇ ವರ್ಷಗಳಲ್ಲಿ ಅರ್ಧ ಜಗತ್ತನ್ನು ವರ್ಣಬೇಧದಿಂದ ಶಾಶ್ವತವಾಗಿ ಮುಕ್ತಿಗೊಳಿಸಿತು.

ಜಗತ್ತಿನಾದ್ಯಂತ ವರ್ಣಬೇಧ ಮತ್ತು ಮೇಲು ಕೀಳಿನ ಶೋಷಣೆಗೆ ಪ್ರಬಲ ಪ್ರತಿರೋಧಗಳು ಬಂದರೂ ಇಂದಿಗೂ ಅದು ಜಗತ್ತಿನಲ್ಲಿ ಜೀವಂತವಿದೆ. ಕ್ರೈಸ್ತ ಸಮುದಾಯದಲ್ಲೂ ಕೂಡ ರೋಮನ್ ಕ್ಯಾಥೋಲಿಕ್ ಮತ್ತು ಪ್ರೋಟೆಸ್ಟೆಂಟ್ ರೆಂಬ ಪಂಗಡವಾದವಿದೆ. ವರ್ಣಬೇಧವು ಮುಂದುವರಿಂದ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇಂದಿಗೂ ಜೀವಂತವಿದೆ. ಬೌದ್ಧರಲ್ಲಿ ಹೀನಾಯಾನ-ಮಹಾಯಾನಗಳಂತಹ ಪಂಗಡಗಳಿವೆ. ಜೈನರಲ್ಲಿ ದಿಗಂಬರ ಮತ್ತು ಶ್ವೇತಾಂಬರದಂತಹ ವರ್ಗಗಳಿವೆ. ಪ್ರಪಂಚದ ಪ್ರತಿಯೊಂದು ವ್ಯವಸ್ಥೆಗಳಲ್ಲಿ ಪಂಗಡವಾದವಿದೆ. ಬ್ರಾಹ್ಮಣ- ಶೂದ್ರ, ಬಿಳಿಯ- ಕರಿಯ ಮೇಲು ಕೀಳಿನ ತಾರತಮ್ಯವಾದರೆ, ಶಿಯಾ- ಸುನ್ನಿ, ಕ್ಯಾಥೋಲಿಕ್ ಪ್ರೋಟೆಸ್ಟೆಂಟ್ ತಾವೇ ಸರಿ ಎಂಬ ಮೊಂಡುವಾದಗಳಿಂದ ಕೂಡಿ ತಾರತಮ್ಯ ಸೃಷ್ಟಿಸುವಂತಹದ್ದು. ತಾರತಮ್ಯ ಯಾವ ರೂಪದಲ್ಲಿದ್ದರೂ ಅದು ಸುಡುವುದು ಸಮಾಜವನ್ನೇ. ಯಾವುದೇ ಸಮುದಾಯ ಪೂರ್ಣಪ್ರಮಾಣದಲ್ಲಿ ಈ ತಾರತಮ್ಯದಲ್ಲಿ ಭಾಗಿಯಾಗುವುದಿಲ್ಲ. ಅಪರಾಧಗಳನ್ನು ಸಮುದಾಯಗಳಿಗೆ ಅಂಟಿಸುವ ವಿಕೃತ ರಾಜಕೀಯ ಚಾಳಿಯಿಂದಾಗಿ ಜಗತ್ತೇ ಇಂದು ಪ್ರಕ್ಷುಬ್ಧವಾಗಿದೆ. ತಾರತಮ್ಯವು ಒಂದು ರೀತಿಯ ವಂಚನೆಯಾಗಿದೆ. ಎಲ್ಲಿಯವರೆಗೆ ವಂಚಿಸಲ್ಪಡುವವರು ಇರುತ್ತಾರೋ ಅಲ್ಲಿಯವರೆಗೆ ವಂಚಕರು ಇರುತ್ತಾರೆ ಎಂಬುದು ಸತ್ಯದ ಮಾತು. ಕೆಲವೊಮ್ಮೆ ಶೋಷಣೆಗೆ ಒಳಗಾಗುವವರೇ ತಮ್ಮ ಶೋಷಣೆಗೆ ತಾವೇ ಕಾರಣರಾಗಿರುತ್ತಾರೆ. ಪ್ರಬುದ್ಧ ಸಾಮಾಜಿಕ ರಾಜಕೀಯ ಭೂಮಿಕೆಗಳನ್ನು ಕಾಲಕಾಲಕ್ಕೆ ಸಂಘಟಿತರಾಗಿ ನಿಭಾಯಿಸದಿದ್ದಾಗ ವ್ಯವಸ್ಥೆ ಪಕ್ಷಾಪಾತಿ ಧೋರಣೆ ತಾಳಲು ಮತ್ತು ಏಕಪಕ್ಷೀಯವಾಗಲು ಕಾರಣವಾಗುತ್ತದೆ. ಆಗ ರಾಜಕೀಯ, ಧಾರ್ಮಿಕ, ಮತೀಯ, ಸಾಮಾಜಿಕ ಸಮುದಾಯಗಳ ಶಕ್ತಿವಂತರು ಅಮಾಯಕರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಾರೆ. ಪ್ರತಿಯೊಂದರಲ್ಲೂ ವೈಚಾರಿಕತೆ ಮತ್ತು ಚಿಂತನಾಶೀಲತೆಯನ್ನು ಉನ್ನತೀಕರಿಸಿಕೊಂಡರೆ ಶೋಷಣೆಗಳಿಂದ ಮುಕ್ತವಾಗಿ ಸಮಾನತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಇತಿಹಾಸದ ಅಪಸವ್ಯಗಳನ್ನು ಕನವರಿಸುತ್ತಾ ಗತ ಇತಿಹಾಸದ ಆಧಾರದ ಮೇಲೆ ವರ್ತಮಾನದ ಸಮುದಾಯಗಳ ಮೇಲೆ ಗೂಬೆ ಕೂರಿಸುವುದು ಸರಿಯಾದ ಕ್ರಮವಲ್ಲ. ಹಿಂದೆ ನೋಡಿದ್ದು ಸಾಕು, ಇನ್ನು ಮುಂದೆ ನೋಡುವ. ಸಂಘಟಿತರಾಗಿ ಸಾಮಾಜಿಕ ನ್ಯಾಯ ಪ್ರತಿಷ್ಠಾಪಿಸಲು ಪ್ರಯತ್ನಿಸುವ. ಬ್ರಾಹ್ಮಣ್ಯದ ಕಾರಣಕ್ಕೆ ಬ್ರಾಹ್ಮಣರನ್ನು, ಭಯೋತ್ಪಾದನೆಯ ಹೆಸರು ಹೇಳಿ ಮುಸ್ಲಿಮರನ್ನು, ಮೀಸಲಾತಿಯ ಕಾರಣಕ್ಕೆ ದಲಿತ- ಹಿಂದುಳಿದ ವರ್ಗದವರನ್ನು ಕಾಡುವುದನ್ನು ನಿಲ್ಲಿಸಿದರೆ ನಾವೆಷ್ಟೋ ಮುಂದುವರಿಯುತ್ತೇವೆ. ಅಪರಾಧ ಮಾಡಿದವರಿಗೆ ಶಿಕ್ಷೆಯಾಗಲಿ. ಅದರೆ ಅಪರಾಧದ ಹೆಸರಿನಲ್ಲಿ ಸಮುದಾಯ ಶೋಷಣೆಯಾದರೆ ಅದು ಹೇಯ. ಇದು ಸಾಮಾನ್ಯ ಜ್ಞಾನ. ಪರಿವರ್ತನೆಯ ಒಂದು ಪ್ರಯತ್ನ ನಾವೇಕೆ ಮಾಡಬಾರದು? ಹಾಗೆ ಮಾಡಿದರೆ ನಮ್ಮದು ಸಾರ್ಥಕ ಪೀಳಿಗೆಯಾದೀತು. ಸಮುದಾಯ ದ್ವೇಷದಿಂದ ರಾಜಕೀಯ ಶಕ್ತಿಗಳು ಗೆಲ್ಲುತ್ತವೆ ಆದರೆ ದೇಶ ಸೋಲುತ್ತದೆ ಎಂಬುದು ಇತಿಹಾಸದ ಪುಟಗಳನ್ನು ತಿರುವಿದಾಗ ಕಾಣಬಹುದು.

“ವಾರದ ವಿಚಾರ” ಮಾಲಿಕೆ 97

LEAVE A REPLY

Please enter your comment!
Please enter your name here