ಲೇಖಕರು : ಉಮ್ಮು ಯೂನುಸ್ ಉಡುಪಿ.

ಜನನ ಮರಣದ ನಡುವಿನ “ಆಯ್ಕೆ” !!??

ಒಂದು ಉತ್ತಮ ಹಾಗೂ ಸಕಾರಾತ್ಮಕ ಚಿಂತನೆಯೊಂದು ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ನೀವೂ ಕಂಡಿರಬಹುದು. ಬದುಕು ಎಂಬುವುದು B ಮತ್ತು D ಯ ನಡುವೆ ಬರುವ C ಯಲ್ಲಿ ನಮ್ಮ ಬದುಕು ನಿಂತಿದೆ ಎಂದು ವಿವರಿಸುವ ವೀಡಿಯೋ. ಇದರಲ್ಲಿ ಒಂದು ಒಳ್ಳೆಯ ಸಂದೇಶವಿದೆ. ಏನೆಂದರೆ, Birth ಮತ್ತು Death ಗಳ ನಡುವೆ C ಬರುತ್ತದೆ. C ಎಂದರೆ Choice.. ಅಂದರೆ ಆಯ್ಕೆ… ಆಯ್ಕೆ ಎಂದರೆ ಏನು, ಯಾವುದರ ಆಯ್ಕೆ? ಬನ್ನಿ ನೋಡೋಣ…

ಹೌದು ಹುಟ್ಟು ಮತ್ತು ಮೃತ್ಯು ಇವೆರಡೂ ನಮ್ಮ ಕೈಯಲ್ಲಿಲ್ಲ. ಅವೆರಡರ ಹಿಡಿತ (ಕಂಟ್ರೋಲ್) ಮೇಲಿನವ ಅವನ ಕೈಯಲ್ಲಿಟ್ಟುಕೊಂಡಿದ್ದಾನೆ. ಆದರೆ, ಈ ನಡುವಿನ C ಯನ್ನು ನಮ್ಮ ಕೈಯಲ್ಲಿ ಕೊಟ್ಟಿದ್ದಾನೆ. ಆ C ಯು ಚಾಯ್ಸ್ ಆಗಿದೆ. ಬದುಕುವ ಹಾದಿಯನ್ನು ಆರಿಸುವ ಅವಕಾಶ, ಇಂತಹಾ ವಿಷಯವನ್ನು, ಆರಿಸಲೋ ಬೇಡವೋ, ಇಂತಹಾ ಕೆಲಸವನ್ನು ಆರಿಸಲೋ ಬೇಡವೋ, ಇಂತಹಾ ಸರಕಾರ, ಇಂತಹಾ, ಸಂಗಾತಿ, ಇಂತಹಾ ಗೆಳೆತನ, ಇಂತಹಾ ಮನೆ, ಇಂತಹಾ ನೆಂಟಸ್ತಿಕೆ, ಇತ್ತೀಚೆಗಂತೂ ಇಂತಹಾ ಆಯ್ಕೆಯ ಪಟ್ಟಿಯಲ್ಲಿ ಆಸ್ಪತ್ರೆಗಳನ್ನೂ ಸೇರಿಸುವಂತಹಾ ಪರಿಸ್ಥಿತಿ ಉದ್ಭವವಾಗಿದೆ.

ಇಲ್ಲಿ Choice ಅಂದ್ರೆ, ನಾವು ಆರಿಸಿಕೊಳ್ಳುವ ವಸ್ತು ಅಥವಾ ವಿಷಯಗಳು ನಮ್ಮ ಬದುಕು ಸಾಗುವ ಹಾದಿಯನ್ನು ನಿಗದಿಸುತ್ತದೆ. ಅಂದರೆ, ನಮ್ಮ ಆಯ್ಕೆ, ನಮ್ಮ ಬದುಕ ಹಾದಿಯನ್ನು ಒಂದೋ ಸುಗಮವಾಗಿಸುತ್ತದೆ, ಇಲ್ಲವೇ ಬದುಕ ಹಾದಿಯನ್ನೇ ಬುಡಮೇಲಾಗಿಸುತ್ತದೆ. ಹಾಗೇ ನಮಗೆ ಆಯ್ಕೆ ಮಾಡುವ ಅವಕಾಶ ಯಾವಾಗ ನೀಡಲಾಗುತ್ತದೆ ಅಂದರೆ, ಸರಿಸುಮಾರು ಹೈಸ್ಕೂಲ್ ಸೇರುವಾಗ, ಅಂದರೆ, ವಿಷಯಗಳನ್ನು ಆರಿಸುವ ಪ್ರಬುದ್ಧತೆ ಹೈಸ್ಕೂಲ್ ನಲ್ಲಿ ಭಾಷೆಗಳನ್ನು ಆರಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಪ್ರಥಮ ಭಾಷೆ ಯಾವುದು ದ್ವಿತೀಯ ಮತ್ತು ತೃತೀಯ ಹೀಗೆ ಇಲ್ಲಿ ವಿದ್ಯಾರ್ಥಿ ಮತ್ತು ಪೋಷಕರ ನಡುವೆ ತಕರಾರು ಶುರು, ತಾಯಿ ಕನ್ನಡಕ್ಕೆ ಒಲವು ನೀಡಿದರೆ ತಂದೆ ಸಂಸ್ಕೃತ ಕ್ಕೆ ಮತ್ತು ಮಗು ಹಿಂದಿಗೆ.. ಮತ್ತೊಂದಿಷ್ಟು ದಿನ ಚರ್ಚೆ ಆಗಿ, ಆಗಿ ಕೊನೆಗೆ ಮಗು ಮನೆಯಲ್ಲಿ ಯಾರ ಮಾತು ನಡೆಯುತ್ತದೋ, ಅದನ್ನು ಸೆಲೆಕ್ಟ್ ಮಾಡಿಕೊಳ್ಳುತ್ತದೆ. ಆ ವಿಷಯವೇ ಆ ಮಗುವಿನದ್ದೂ ಆಯ್ಕೆಯಾದರೆ ಪುಣ್ಯ. ಅದಲ್ಲದಿದ್ದರೆ ಆಮೇಲೆ ವರ್ಷವಿಡೀ ಆ ಸಬ್ಜೆಕ್ಟ್ ನಲ್ಲಿ ಟಾಪ್ ಮಾಡಲು ಮಗು ಹೆಣಗಾಡುತ್ತದೆ. ಹೆಣಗಾಡಲೇಬೇಕು. ಇನ್ನು ಸ್ವಲ್ಪ ಮುಂದಕ್ಕೆ ಹೋದಾಗ, ಅಂದರೆ ಹತ್ತರ ಹೊಸ್ತಿಲು ದಾಟಿದಾಗ ಮತ್ತೆ ವಿಷಯವನ್ನಾರಿಸಬೇಕು.. ಸಾಯನ್ಸ್, ಕಾಮರ್ಸ್, ಆರ್ಟ್ಸ್, ಇವುಗಳಲ್ಲಿ ಯಾವುದನ್ನು ಆರಿಸಬೇಕು ಎಂಬ ಗೊಂದಲ. ಅದರಲ್ಲೂ ಈ ಮೊದಲು ಈ ಕ್ಲಾಸ್ ಪಾಸಾದವರಿದ್ದರೆ, ಅವರದ್ದೇ ದಬ್ಬಾಳಿಕೆ, ಏನೆಂದರೆ, ಡಾಕ್ಟರ್, ಇಂಜಿನಿಯರ್ ಓದಿದವರಾದವರು (ಅಣ್ಣನೋ ಅಕ್ಕನೋ ಅಮ್ಮ, ಚಿಕ್ಕಮ್ಮ, ಚಿಕ್ಕಪ್ಪ, ಮಾವಂದಿರು, ಯಾರೇ ಆದರೂ) pcmb, pcmc, pcms, ತೆಗೆದುಕೊಳ್ಳೆಂದು ತಲೆಯೊಳಗೆ “ಕೀ….” ಅಂತ ಕೀಂಗುಡುವುದು ಶುರುವಾಗುತ್ತದೆ. ಇನ್ನು ಟೀಚರ್ ಆಗಿರುವ ದೂರದ ಅಂಕಲೋ,ಆಂಟಿಯೋ ಕರೆಮಾಡಿ, ಯಾವ ರಗಳೆನೂ ಬೇಡ ನೀನು ಆರ್ಟ್ಸ್ ತಗೋ ಅಂದರೆ, ಅಕೌಂಟೆಂಟ್ ಒಬ್ಬರು, ಕಾಮರ್ಸ್ ತೆಗೋ ಎಂದು ಇನ್ನೊಬ್ಬರು ಬೆನ್ನು ಹಿಡಿಯುತ್ತಾರೆ. ಇಷ್ಟು ಮಾತ್ರವಲ್ಲ, ಇತ್ತೀಚೆಗಂತೂ ವಿವಿಧ ಕಾಲೇಜುಗಳೂ ಕೂಡ, “ನಿಮ್ಮ ಮಗ/ಳಿಗೆ ನಮ್ಮಲ್ಲಿ ಎಡ್ಮಿಷನ್ ಮಾಡಬಹುದಲ್ವಾ..” ಎಂದು ಬೆಂಬೀಳುವ ಸಂದರ್ಭವೂ ಶುರುವಿಟ್ಟುಕೊಂಡಿದೆ. ಇಷ್ಟೆಲ್ಲಾ ಅಭಿಪ್ರಾಯಗಳು, ಸಲಹೆಗಳು ವಿದ್ಯಾರ್ಥಿಯ ತಲೆಯಲ್ಲಿ ಕಲಬೆರಕೆಯಾಗುತ್ತಿರುವಾಗಲೇ, ಕರಿಯರ್ ಗೈಡೆನ್ಸ್ ಎಂಬ ಮತ್ತೊಂದು ದ್ವಾರ ತೆರೆದುಕೊಳ್ಳುತ್ತದೆ….. ನಮ್ಮ ಬಾಲ್ಯದಲ್ಲಿ ಕರಿಯರ್ ಗೈಡೆನ್ಸ್ ಕೊಡುತ್ತಿದ್ದುದು, ಅಪ್ಪ, ಚಿಕ್ಕಪ್ಪಂದಿರು ಅಥವಾ ಮಾವಂದಿರು,”…ಅವ ರೆಡಿಮೇಡ್ ಬಟ್ಟೆ ಮಾರಲಿ, ಇವ, ಕಿರಾಣಿಯಂಗಡಿಲಿ ಪೊಟ್ಟಣಕಟ್ಟಲಿ, ಚಿಕ್ಕವ ಅಪ್ಪನ ಜೊತೆ ಇರಲಿ, ಮತ್ತೆ ಅವಳು ಅಮ್ಮನ ಜೊತೆ ಅಡಿಗೆ ಕಲಿಯಲಿ, ಗಂಡನ ಮನೆಗೆ ಅದೇ ತಾನೇ ಬೇಕಾಗಿರುವುದು…” ಇಲ್ಲಿಗೆ ಕರಿಯರ್ ಗೈಡೆನ್ಸ್ ಕ್ಲಾಸ್ ಮುಗಿಯುತ್ತಿತ್ತು. ಈಗಿನ ಕರಿಯರ್ ಗೈಡೆನ್ಸ್ ಗಳು ಆಧುನಿಕ ಶಿಕ್ಷಣ ವ್ಯವಸ್ಥೆ ಮತ್ತು ಭವಿಷ್ಯದ ಆರ್ಥಿಕ ಸ್ಥಿರತೆ ಗಾಗಿ ವಿದ್ಯಾರ್ಥಿಗೆ ಉತ್ತಮ ಸಲಹೆಯನ್ನೂ ಕೊಡುತ್ತದೆ. ಆದರೆ ಇಲ್ಲೂ ಸಮರ್ಪಕತೆ ದೊರಕಬಹುದು ಎಂಬ ಖಾತರಿಯೇನೂ ಇಲ್ಲ. ಅಥವಾ ಮತ್ತೊಂದಿಷ್ಟು ಕನ್ಫ್ಯೂಷನ್ ಗಳು ಉಂಟಾಗಬಹುದು.. ಏನೇ ಆಗಲಿ, ಯಾರೇ ಏನೇ ಸಲಹೆ ಕೊಟ್ಟರೂ ಆ ಹಾದಿಯಲ್ಲಿನ ಏಳು ಬೀಳುಗಳನ್ನು ಎದುರಿಸಿ ನಡೆಯಬೇಕಾಗಿರುವುದು ಆ ವಿದ್ಯಾರ್ಥಿಯೇ; ಮತ್ತು ಅವನಿ/ಳಿ ಗೆ ಆಸರೆಯಾಗಿ ನಿಲ್ಲುವ ಅವರ ಪೋಷಕರು. ಹೀಗಿರುವಾಗ ಸಲಹೆ ಕೊಡುವವರು ಆದಷ್ಟು ಆ Choice ಅನ್ನು ಆಯಾ ಪೋಷಕರು ಮತ್ತು ವಿದ್ಯಾರ್ಥಿಗೇ ಬಿಡುವುದು ಉತ್ತಮ.

ಇನ್ನೊಂದಿಷ್ಟು ಮುಂದಕ್ಕೆ ಹೋದಾಗ ಅಂದರೆ, ವಿಜ್ಞಾನದ ವಿದ್ಯಾರ್ಥಿಗಳಿಗೆ ಮತ್ತೆ CET NEET ಗೊಂದಲ. ಆ ಬಳಿಕ ವೈದ್ಯವೃತ್ತಿಯಲ್ಲಿ ಮತ್ತೆ ಆಯ್ಕೆ, ಪೀಡಿಯಾಟ್ರಿಕ್, ಗೈನೆಕಾಲಜಿ, ನ್ಯೂರಾಲಜಿ, ನೆಫ್ರಾಲಜಿ, ಅದೂ ಇದೂ… ಇಂಜಿನಿರಿಂಗ್ ನಲ್ಲಿ ಸಿವಿಲ್, ಅರ್ಕಿಟೆಕ್ಟು, ಆಯಿಲ್, ಮಣ್ಣು ಮಸಣ. ಕಾಮರ್ಸ್ ನವರು, ಬಿಕಾಂ, ಬಿಸಿಎ, ಸಿಎ, ಆರ್ಟ್ಸ್ ನಲ್ಲಿ ಬಿ.ಎ ಬಿಎಡ್, ಎಲ್.ಎಲ್.ಬಿ.. ಐ. ಎ.ಎಸ್, ಐ.ಪಿ.ಎಸ್. ಇನ್ನು ಡಿಪ್ಲೋಮಾ ಕ್ಷೇತ್ರದ್ದು ಬೇರೆಯೇ ತಗಳೆ… ಹೀಗೇ ಇನ್ನೂ ಏನೇನೋ.. ಲೆಕ್ಕವಿಲ್ಲದ ವಿಷಯಗಳು, ಮತ್ತು ಕಲಿಕೆ. (ಆದರೆ, ಅವಕಾಶ ದೊರಕುವುದು ನೋಟಿನ ಕಂತೆಯ ಮಾಲೀಕನಿಗೆ ಮಾತ್ರ…) ಇದೆಲ್ಲ ಆದ ಬಳಿಕ ವೃತ್ತಿ ಆಯ್ಕೆ ಯಾವ ಕಂಪನಿಗೆ ಇಂಟರ್ವ್ಯೂ ಕೊಡಲಿ, ಹೇಗೆ ಸಿ.ವಿ ತಯಾರಿಸಲಿ ಎಲ್ಲಿಗೆ ಅಪ್ಲೈ ಮಾಡಲಿ, ಎರಡು ಕಡೆಯಿಂದ ಆಫರ್ ಬಂದರೆ, ಯಾವುದನ್ನು ಆರಿಸಲಿ.. ಹೀಗೆ ಮತ್ತೆ ಗೊಂದಲ.

ಸರಿ ಈ ಎಲ್ಲಾ ಸ್ತರಗಳಿಂದ ಜಯಿಸಿ ಬಂದಾಗ ದಾಂಪತ್ಯದ ಹೊಸ್ತಿಲು ಬರುತ್ತದೆ. ಇಲ್ಲಿನ ಆಯ್ಕೆ ಬಹುಮುಖ್ಯ, ಏಕೆಂದರೆ, ಇದು ಒಮ್ಮೆ ಆರಿಸಿದ ನಂತರ ಮುಗಿಯುತು, ಮತ್ತೆ ಬದಲಿಸಲೂ ಆಗದು, ಇನ್ನೊಂದಕ್ಕೆ ಟ್ರೈ ಮಾಡಲೂ ಆಗದು. ಹಾಗಾಗಿ ಈ ಆಯ್ಕೆಯಲ್ಲಿ ಅತಿಯಾದ ಕಾಳಜಿ ಅತ್ಯಗತ್ಯ. ಹಿಂದೆಲ್ಲಾ ಏನಿರುತ್ತಿತ್ತೆಂದರೆ, ಅಪ್ಪ, ಮಾವ, ಭಾವ ಅಥವಾ ಇನ್ಯಾರಾದರೂ ಹಿರಿಯರು “../ಇಕ ಇದು ಇಂತಹವರ ಮಗ/ಳು ನಿನಗೆ ನಾವೆಲ್ಲರೂ ಸೇರಿ ಆರಿಸಿದ್ದೇವೆ. ನೀನು ಇಂತಿಂತಹಾ ಸುಸಂದರ್ಭದಲ್ಲಿ ದಾಂಪತ್ಯಕ್ಕೆ ಕಾಲಿಡಬೇಕು ಎಂದು ನಾವು ನಿಶ್ಚಯಿಸಿದ್ದೇವೆ” ಎಂದು ಫರಮಾನು ಹೊರಡಿಸುತ್ತಿದ್ದರು ಅಷ್ಟೇ ಮಿಕ್ಕಿದ್ದೆಲ್ಲಾ ತನ್ನಷ್ಟಕ್ಕೇ ಆಗಿಹೋಗುತ್ತಿದ್ದವು. ಇಲ್ಲಿ “ಆಯ್ಕೆ” ಎಂಬುವುದು ವರ/ಧು ಗಳಿಗೆ ಸುತಾರಾಮ್ ಇರುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ. ಬ್ರೋಕರ್ ಗಳು ಒಂದು ಕಡೆಯಿಂದ ಫೋಟೋಗಳ ರಾಶಿ ತಂದರೆ, ನೆಂಟರಿಷ್ಟರು ನಮ್ಮ ಮೈದುನನ ನಾದಿನಿಯ ಮಾವನ ಮಗ/ಳು ಎಂದು ಕೆಲವು ಫೋಟೋಗಳು ಬಂದಿರುತ್ತವೆ. ಯಾವುದನ್ನೂ ನೀನೇ ಆರಿಸು ಎಂಬ ಸದವಕಾಶ. ಅದರೊಂದಿಗೆ ಹುಡುಗರು ತಮ್ಮ ಮೆಚ್ಚಿಗೆಯ ಹುಡುಗ/ಗಿ ಯನ್ನು ಮನೆಯವರಿಗೆ ಪರಿಚಯಿಸುವ ಪ್ರಕ್ರಿಯೆಯೂ ಆರಂಭವಾಗುತ್ತದೆ. ಹಾಗೇ ಮಕ್ಕಳ ಸಂತೋಷವೇ ನಮ್ಮದೂ ಸಂತೋಷ ಎಂದು ಭಾವಿಸುವ ಪೋಷಕರು ಇವೆಲ್ಲದ್ದಕ್ಕೋ OK ಎಂದು ಹಸಿರು ನಿಶಾನೆ ಕೊಟ್ಟರೆ ಮತ್ತೆ ಬಂದುಕು ಬೃಂದಾವನ ಖಂಡಿತಾ. ಆದರೆ ಇವೆಲ್ಲಾ ನಮ್ಮ ಸಂಪ್ರದಾಯಕ್ಕೆ ವಿರೋಧ, ಅಂತಹ ನಿರ್ಲಜ್ಜತೆಗೆ ನಮ್ಮಲ್ಲಿ ಅವಕಾಶವಿಲ್ಲವೆಂದು ಪೊಷಕರು ಎಲ್ಲಾದರೂ ಪಟ್ಟು ಹಿಡಿವವರಾದರೆ, ಮತ್ತೆ ಮಕ್ಕಳಿಗೆ ಬ್ರೋಕರಣ್ಣ ತಂದ ಫೋಟೋ ಗಳಲ್ಲಿ ಒಂದನ್ನು (ಪೋಷಕರ ಆಸೆಯಂತೆ) ಆರಿಸಿ, ಹೊಂದಾಣಿಕೆಯೊಂದಿಗೆ ಬದುಕು ದೂಡುವ ಪ್ರಸಂಗವೂ ಬಂದೊದಗುತ್ತದೆ. ಎಲ್ಲಾ ಸ್ಥಿತಿಯಲ್ಲೂ ಹೀಗಾಗಬೇಕೆಂದಿಲ್ಲ. ಏಕೆಂದರೆ, ಬಹಳಷ್ಟು ಪರಿಸ್ಥಿತಿಯಲ್ಲಿ ಮಕ್ಕಳಿಗೆ ಯಾವುದು ಸರಿ ಎಂದು ಪೋಷಕರು ಚೆನ್ನಾಗಿ ಅರಿತಿರುತ್ತಾರೆ ಎಂಬುವುದನ್ನು ಮಕ್ಕಳು ಚೆನ್ನಾಗಿ ಅರಿತುಕೊಳ್ಳಬೇಕು.

ಇಷ್ಟೆಲ್ಲಾ ಆಗುವಾಗ ಬದುಕಿನ ಒಂದು ಘಟ್ಟ ಕಳೆದಿರುತ್ತದೆ. ಈ ನಡುವೆ ಬಹಳಷ್ಟು C ಗಳು ನಮ್ಮ ಬದುಕಲ್ಲಿ ಹಾದುಹೋಗಿರುತ್ತದೆ. Complications, criticism, Crisis, Cheat, Changes, Compromise, confusion, confirm, ಹೀಗೇ ಇತ್ಯಾದಿ, ಇತ್ಯಾದಿ, ಇತ್ಯಾದಿ…..

ಇದರ ಬಳಿಕ ಇನ್ನು ಮುಂದಕ್ಕೆ ಬರುವುದೇ ಪ್ರಬುದ್ಧತೆಯ ಕಾಲ… ಮದುವೆ ಎಲ್ಲಿ, ಹೇಗಾಗಬೇಕು, ಮನೆ ಎಲ್ಲಿ ಮಾಡಬೇಕು, ಮನೆಯ ಬಣ್ಣ ಯಾವುದಿರಬೇಕು. ಮಗು ಯಾವ ಸಮಯದಲ್ಲಿ ಆಗಬೇಕು, ಯಾವ ಆಸ್ಪತ್ರೆಯಲ್ಲಿ ಜನಿಸಬೇಕು, ಮಗುವಿಗೆ ಯಾವ ಪಾಲಿಸಿ ಮಾಡಿಸಬೇಕು, ಅದರ ಬಳಿಕ ಮಗು ಯಾವ ಶಾಲೆಗೆ ಹೋಗಬೇಕು. ಇಲ್ಲಿ ಆಯ್ಕೆಯ ತಕರಾರಿಗೆ ನಮ್ಮೊಂದಿಗೆ ಮತ್ತೊಂದು ಜೀವ ಬೆರೆತುಕೊಳ್ಳುತ್ತದೆ. ಬದುಕಿಡೀ ಅದೇ ಆಯ್ಕೆಯ ಪರಿಪಾಠ ಪುನರಾವರ್ತಿಸುತ್ತದೆ ಅಷ್ಟೇ. ಇಷ್ಟೆಲ್ಲಾ ಆದಾಗ ತಲೆಯಲ್ಲಿ ಬಿಳಿಕೂದಲು ಇಣುಕತೊಡಗುತ್ತದೆ. ಆಗ ಕೆಲವರು ಅಚಾನಕ್ಕಾಗಿ ಜ್ಞಾನೋದಯವಾದಂತೆ, “ಅಯ್ಯೋ… ನಾನು ನನಗಾಗಿ ಬದುಕಲೇ ಇಲ್ವಲ್ಲ…” ಎಂದು ಅಲವತ್ತುಕೊಳ್ಳುವುದಿದೆ. ಆದರೆ, ಪ್ರಶ್ನೆಯೆಂದರೆ, ನಮ್ಮ ಬದುಕು ಸುಂದರವಾಗಿರಲೆಂದೇ ಮಾಡಿದ ತ್ಯಾಗ ಸಮರ್ಪಣೆಗಳಿಗಾಗಿ ವ್ಯಥಿಸುವುದು ತರವೇ? ಏಕೆಂದರೆ, ಬದುಕು ಎಂದರೆ ನಾವೊಬ್ಬರೇ ಅಲ್ಲಾ ತಾನೇ? ನಮ್ಮ ಬದುಕಲ್ಲಿ ಪಾತ್ರಧಾರಿಗಳಾಗಿ ಬಂದಿರುವ ತಮ್ಮವರ ಬದುಕು ಹಸನಾಗಿಸುವಾಗ ಒಂದಿಷ್ಟು ತ್ಯಾಗ, ಸಹನೆ ಅತೀ ಅಗತ್ಯವಾಗಿದೆ. ಆ ತ್ಯಾಗವನ್ನು ಸುಸಂತೋಷವಾಗಿ ಮಾಡಿದರೆ ನೆಮ್ಮದಿಯೂ, ಅರೆಮನದಿಂದ ಮಾಡಿದರೆ ಸಂಕಟವೂ ಉಂಟಾಗುವುದು ಖಂಡಿತ ಅಲ್ಲವೇ?

ಹೀಗೇ B ಯಿಂದ ಶುರುವಿಟ್ಟುಕೊಳ್ಳುವ ಬದುಕು D ಯಲ್ಲಿ ಮುಕ್ತಾಯವಾಗುತ್ತದೆ. ಈ ನಡುವೆ ಬರುವ C ಯ ಕೈಯಲ್ಲಿಯೇ ಎಲ್ಲಾ ಇದೆ.

ಅಂದಹಾಗೇ ನಿಮ್ಮ ಬದುಕಿನ ಅತೀ ಉತ್ತಮವಾದ C ಯಾವುದು ಎಂದು ಯೋಚಿಸಿದ್ದೀರಾ?

LEAVE A REPLY

Please enter your comment!
Please enter your name here