ಭಾಗ -೧

  • ನಿರಂಜನಾರಾಧ್ಯ ವಿ ಪಿ
    ( ಸರ್ಕಾರಿ ಶಾಲೆಗಳ ಸಬಲೀಕರಣದ ಹರಿಕಾರ
    ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ)

ರಾಜ್ಯ ,ರಾಷ್ಟ್ರ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿಪ್ಪತ್ತು ಹಾಗು ಸವಾಲಾಗಿ ಪರಿಣಮಿಸಿರುವ ಕೋವಿಡ್ ೧೯; ಕೊರೋನ ವೈರಸ್ ನ ಪರಿಣಾಮ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ದೊಡ್ಡ ಪ್ರಮಾಣದ ಪರಿಣಾಮ ಬೀರಿದೆ. ಇದನ್ನು ಪರಿಣಾಮಕಾರಿಯಾಗಿ ಎದುರಿಸಲು ಮತ್ತು ಸಮುದಾಯದ ಮಟ್ಟದಲ್ಲಿ ಈ ವೈರಸ್ ಹರಡದಂತೆ ತಡೆಯಲು ಕೇಂದ್ರ ಹಾಗು ರಾಜ್ಯ ಸರ್ಕಾರ ಎಲ್ಲವನ್ನು ಲಾಕ್ ಡೌನ್ (ಬಂಧ್) ಮಾಡುವ ಮೂಲಕ ಶಾಲಾ -ಕಾಲೇಜುಗಳಿಗೆ ಶಿಕ್ಷಕರಿಗೆ ರಜೆ ನೀಡಿದೆ. ಎಚ್ಚರಿಕೆಯಿಂದ ವೈದ್ಯಕೀಯ ಕಾರಣಗಳಿಗಾಗಿ ದೈಹಿಕ ಅಂತರ ಕಾಯ್ದುಕೊಳ್ಳುವ ಮೂಲಕ ವೈರಸ್ ಸೋಂಕು ಮಕ್ಕಳಿಗೆ,ಕುಟುಂಬಕ್ಕೆ ಶಿಕ್ಷಕರಿಗೆ ಹಾಗು ಸಮುದಾಯಕ್ಕೆ ಹರಡದಂತೆ ಮುನ್ನೆಚ್ಚರಿಕೆ ವಹಿಸಿದ್ದು ಸ್ವಾಗತಾರ್ಹ. ಇದು ಅಂತರಾಷ್ಟ್ರೀಯ ಹಾಗು ರಾಷ್ಟ್ರೀಯ ಅನಿವಾರ್ಯತೆ ಕೂಡ ಆಗಿತ್ತೆಂಬುದು ವಾಸ್ತವದ ಸಂಗತಿ.

ಕೋವಿಡ್-19 ಜಗತ್ತಿನ ಶೈಕ್ಷಣಿಕ ವ್ಯವಸ್ಥೆಯ ಸುಮಾರು 1.57 (1,575,270,054) ಬಿಲಿಯನ್ ವಿದ್ಯಾರ್ಥಿಗಳ ಅಂದರೆ ಸರಿಸುಮಾರು157 ಕೋಟಿ ದಾಖಲಾಗಿರುವ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮವನ್ನುಂಟುಮಾಡಿದೆ. ಜಗತ್ತಿನಾದ್ಯಂತ ಕೋವಿಡ್-19 ರ ಪರಿಣಾಮಕ್ಕೆ ಒಳಗಾದ ಶೇಕಡಾವಾರು ವಿದ್ಯಾರ್ಥಿಗಳ ಸಂಖ್ಯೆ 91.3.ಇದರ ಪರಿಣಾಮ 191 ದೇಶಗಳಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚಿವೆ.

ನಮ್ಮ ರಾಜ್ಯದಲ್ಲಿ ಸರಿಸುಮಾರು 77,000 ಶಾಲೆಗಳು, 1.03 ಕೋಟಿ ಮಕ್ಕಳು (ಪೂರ್ವ ಪ್ರಾಥಮಿಕದಲ್ಲಿ 5,97,346,ಪ್ರಾಥಮಿಕದಲ್ಲಿ 55,03,960,ಹಿರಿಯ ಪ್ರಾಥಮಿಕದಲ್ಲಿ 30,72,836 ಮತ್ತು ಪ್ರೌಢ ಶಾಲೆಯಲ್ಲಿ 18,00,674) ಮತ್ತು ಸುಮಾರು 3 ಲಕ್ಷ ಶಿಕ್ಷಕರು ಇದರ ಪರಿಣಾಮಕ್ಕೆ ಒಳಗಾಗಿದ್ದಾರೆ . ಇದರ ಪರಿಣಾಮ ಮಕ್ಕಳ ಮೇಲೆ ಹೆಚ್ಚು ಕಾರಣ ಅವರ ಸಂಖ್ಯೆ ಹೆಚ್ಚು. ಇಂಥಹ ಸವಾಲಿನ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಅದರಲ್ಲೂ ವಿಶೇಷವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಕೈಗೊಳ್ಳಬಹುದಾದ ತೀರ್ಮಾನಗಳ ಬಗ್ಗೆ ಬೆಳಕು ಚೆಲ್ಲುವ ಆಶಯದಿಂದ ಈ ಟಿಪ್ಪಣಿ ಬರೆಯುತ್ತಿದ್ದೇನೆ.

ಲಾಕ್ ಡೌನ್ ಸಂದರ್ಭ /ಲಾಕ್ ಡೌನ್ ಸಡಲಿಕೆಯ ನಂತರದ ತಕ್ಷಣದ ಕ್ರಮಗಳು ಮುಂಜಾಗ್ರತೆ ದೃಷ್ಟಿಯಿಂದ ಮಕ್ಕಳ ಸುರಕ್ಷತೆಗಾಗಿ ಮಕ್ಕಳ ದೃಷ್ಟಿಕೋನ ಮತ್ತು ಅವರಿಗೆ ಅರ್ಥವಾಗುವ ಪರಿಭಾಷೆಯಲ್ಲಿ ಸಾಮೂಹಿಕ ಜಾಗೃತಿ
ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆ ಹಾಗು ಮುಂದಿನ ವಿದ್ಯಾಭ್ಯಾಸದ ಪೂರ್ವ ಸಿದ್ಧತೆಗೆ ನಿರ್ಣಾಯಕ ಸಮಯವೆಂದೇ ಭಾವಿಸಿರುವ ಮಾರ್ಚ್-ಏಪ್ರಿಲ್-ಮೇ ತಿಂಗಳಿನಲ್ಲಿ ಈ ಪರಿಸ್ಥಿತಿ ಎದುರಾಗಿದ್ದು ಸ್ವಾಭಾವಿಕವಾಗಿ ಇಡೀ ಶೈಕ್ಷಣಿಕ ಸಮುದಾಯವನ್ನು ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಪಾಲಕರಲ್ಲಿ ಹಲವು ಬಗೆಯ ಆತಂಕ ಮತ್ತು ಅನಿಶ್ಚತೆಯನ್ನು ಉಂಟು ಮಾಡಿತು ಎಂಬುದು ಕಟು ಸತ್ಯ ಹಾಗು ನಿರ್ವಿವಾದ ಸಂಗತಿ. ಇದು ಪಾಲಕರಲ್ಲಿ ಮತ್ತು ಮಕ್ಕಳಲ್ಲಿ ಹಲವು ಬಗೆಯ ಆತಂಕ, ಭಯ ಹಾಗು ಕೌತುಕವನ್ನು ಹುಟ್ಟು ಹಾಕಿದೆ/ಹಾಕುತ್ತಿದೆ. ಇದು ಕೆಲವಾರು ತಿಂಗಳು ಹೀಗೆಯೇ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವಾಸ್ತವ ಅಂಶಗಳನ್ನು ಪಾಲಕರಿಗೆ-ಮಕ್ಕಳಿಗೆ ತಿಳಿಸುವ ಮೂಲಕ, ಈ ಸಮಸ್ಯೆ ನಮ್ಮ ರಾಜ್ಯ-ದೇಶಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಎದುರಾಗಿರುವ ಅತಿ ದೊಡ್ಡ ಶೈಕ್ಷಣಿಕ ಬಿಕ್ಕಟ್ಟು ಎಂಬುದನ್ನು ಬಿಡಿಸಿ ಹೇಳುವ ಪ್ರಯತ್ನ ಮಾಡಬೇಕಿದೆ. ಇಲ್ಲಿಯವರೆಗೆ ನಾವು ವಯಸ್ಕರನ್ನು ಆಧಾರವಾಗಿಟ್ಟುಕೊಂಡು ಜಾಗೃತಿ ಮೂಡಿಸಿದ್ದೇವೆ. ಮಕ್ಕಳ ಆರೋಗ್ಯದ ಜೊತೆಗೆ ಅವರ ಮಾನಸಿಕ ಆತಂಕ, ಭಯ ಇತ್ಯಾದಿಗಳನ್ನು ಗಮನದಲ್ಲಿರಿಸಕೊಂಡು ಜಾಗೃತಿ ಮೂಡಿಸಬೇಕಾದ ಕೆಲಸ ಇನ್ನು ಪ್ರಾರಂಭವಾಗಬೇಕಿದೆ. ಲಾಕ್ ಡೌನ್ ಸಡಿಲಿಕೆಯ ನಂತರ ಮಕ್ಕಳು ಓಡಾಡಲು ಕೆಲಸ ಇನ್ನು ಪ್ರಾರಂಭವಾಗಬೇಕಿದೆ. ಲಾಕ್ ಡೌನ್ ಸಡಿಲಿಕೆಯ ನಂತರ ಮಕ್ಕಳು ಓಡಾಡಲು ಪ್ರಾರಂಭಿಸಿದಾಗ ಈ ಜಾಗೃತಿ ಬಹಳ ಮುಖ್ಯವಾಗುತ್ತದೆಯಲ್ಲದೆ ವೈರಾಣು ಹರಡದಂತೆ ತಡೆಯಲು ನಿರ್ಣಾಯಕವಾಗುತ್ತದೆ.

ಮಕ್ಕಳಿಗೆ ಪೌಷ್ಟಿಕ ಆಹಾರ,ಆರೋಗ್ಯ ಮತ್ತು ಸುರಕ್ಷತೆ ಮೊದಲ ಆದ್ಯತೆ ಕೋವಿಡ್-19ರ ನಂತರ, ಕೇಂದ್ರೀಯ ವಿದ್ಯಾಲಯಗಳ ಸಂಘಟನೆಯು ತನ್ನ ಎಲ್ಲಾ ಕೇಂದ್ರೀಯ ಶಾಲೆಗಳಲ್ಲಿ 1 ರಿಂದ 8 ನೇತರಗತಿಯ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವಂತೆ ಸೂಚಿಸಿ ಎಲ್ಲ ರಾಜ್ಯಗಳಿಗೆ ಪತ್ರ ಬರೆಯಿತು. ನಂತರ , ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ , ತಮಿಳುನಾಡು ಮುಂತಾದ ರಾಜ್ಯಗಳು 1 ರಿಂದ 8/9 ನೇತರಗತಿಯ ಎಲ್ಲಾ ಮಕ್ಕಳನ್ನು ಯಾವುದೇ ಪರೀಕ್ಷೆಯಿಲ್ಲದೆ ಮುಂದಿನ ತರಗತಿಗಳಿಗೆ ತೇರ್ಗಡೆಗೊಳಿಸುವ ಆದೇಶಗಳನ್ನು ಹೊರಡಿಸಿದವು. ಅದರಲ್ಲೂ ವಿಶೇಷವಾಗಿ ಗುಜರಾತ್ ಸರ್ಕಾರವು 1ರಿಂದ 9ನೇ ತರಗತಿ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ತೇರ್ಗಡೆ ಮಾಡಲು ನಿರ್ಧರಿಸಿತು. ಈ ಎಲ್ಲಾ ಅಂಶಗಳನ್ನು ಆಧರಿಸಿ ಎಸ್ ಡಿ ಸಿ ಏಮ್ ಸಮನ್ವಯ ವೇದಿಕೆ ಹಾಗು ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ ಸರ್ಕಾರದ ಮೇಲೆ ಒತ್ತಡ ಹಾಕಿತು . ಇದೆಲ್ಲದರ ಪರಿಣಾಮ , ಶಿಕ್ಷಣ ಇಲಾಖೆ 6,7,8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡುವ ನಿರ್ಧಾರ ಪ್ರಕಟಿಸಿದೆ. ಇದು ಸ್ವಾಗತಾರ್ಹ.

ಪೂರ್ವ-ಪ್ರಾಥಮಿಕದಿಂದ (ಅಂಗನವಾಡಿ) 9ನೇ ತರಗತಿಯವರೆಗಿನ ಮಕ್ಕಳು ಮೇ 31ರವರೆಗೆ ಮನೆಯಲ್ಲಿಯೇ ಇರುತ್ತಾರೆ. ಶಾಲೆಯಲ್ಲಿದ್ದಾಗ ಈ ಎಲ್ಲಾ ಮಕ್ಕಳಿಗೆ ಒಂದು ಹೊತ್ತಿನ ಮಧ್ಯಾಹ್ನದ ಊಟ ಶಾಲೆಯಲ್ಲಿ ದೊರಕುತಿತ್ತು . ಈಗ ಅದೇ ಮಕ್ಕಳಿಗೆ ಮೂರು ಹೊತ್ತಿನ ಊಟದ ವ್ಯವಸ್ಥೆಯಾಗಬೇಕಿದೆ. ಅಂಗನವಾಡಿ ಕೇಂದ್ರ ಮತ್ತು ಸರ್ಕಾರಿ ಶಾಲೆಗಳಿಗೆ ಹಾಜರಾಗುವ ಹೆಚ್ಚಿನ ಮಕ್ಕಳು ಅನಾನುಕೂಲ ಹಾಗು ಅವಕಾಶ ವಂಚಿತ ಸಮುದಾಯಗಳಿಂದ ಬಂದವರಾಗಿರುವುದರಿಂದ, ಈ ಅಭೂತಪೂರ್ವ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಪ್ರಾಥಮಿಕ ಜವಾಬ್ದಾರಿಯೆಂದರೆ ಸಾಂಕ್ರಾಮಿಕ ರೋಗದಿಂದ ರಕ್ಷಿಸಿಕೊಳ್ಳಲು ಅಗತ್ಯ ನೀರು, ಆಹಾರ, ಪೋಷಣೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸಬೇಕಿದೆ . ವಿಶೇಷವಾಗಿ ಬಡ ಕುಟುಂಬದ ಯಾವುದೇ ಮಗು ಸಾಕಷ್ಟು ಪೋಷಣೆ ಮತ್ತು ಆಹಾರವಿಲ್ಲದೆ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಬೇಕು .

ಆದ್ದರಿಂದ, ಏಪ್ರಿಲ್ 11 ,2020 ರ ಮೇ 31 ರವರೆಗೆ ( ವಿಸ್ತರಣೆಯಾದರೆ ಜೂನ್ 30 ರವರೆಗೆ) ಮಧ್ಯ್ನಾದ ಬಿಸಿಯೂಟದ ಕಾರ್ಯಕ್ರಮದ ಭಾಗವಾಗಿ ಎಲ್ಲಾ ಮಕ್ಕಳಿಗೆ ಪಡಿತರ ವಿತರಿಸಬೇಕು. ಮಕ್ಕಳು ಈಗ ಮೂರು ಹೊತ್ತು ಊಟ ಮನೆಯಲ್ಲಿಯೇ ಊಟ ಮಾಡುವುದರಿಂದ ಬಿಸಿಯೂಟದ ಕಾರ್ಯಕ್ರಮದ ಅಡಿಯಲ್ಲಿ ಪ್ರತೀ ಮಗುವಿಗೆ ಒದಗಿಸುತ್ತಿದ್ದ ಮೂರು ಪಟ್ಟು ದಿನಸಿಯನ್ನು ಮಕ್ಕಳಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕಿದೆ. ಮಕ್ಕಳ ಆಹಾರ , ಸುರಕ್ಷತೆ ಆಶ್ರಯ ಮತ್ತು ರಕ್ಷಣೆ ಬಗ್ಗೆ ಹೆಚ್ಚು ಗಮನ ಹರಿಸಬೇಕು .ಈ ಮಕ್ಕಳ ತಂದೆ –ತಾಯಂದಿರು ಈಗ ಕೆಲಸಗಳನ್ನು /ಬೆಳೆದ ಬೆಳೆಯನ್ನು ಕಳೆದುಕೊಂಡು ಪರಿತಪಿಸುತ್ತಿರುವುದರಿಂದ ಈ ಕೆಲಸ ಆದ್ಯತೆಯ ಮೇಲೆ ನಡೆಯಬೇಕು .

ಶೈಕ್ಷಣಿಕ ಕ್ಯಾಲೆಂಡರ್‌ನ ಪ್ರಕಾರ ಸಾಮಾನ್ಯವಾಗಿ ಶಾಲೆಗಳು ಮೇ ಅಂತ್ಯ ಅಥವಾ ಜೂನ್ ಮೊದಲ ರದವರೆಗೆ ಮುಚ್ಚಲ್ಪಟ್ಟಿರುವುದರಿಂದ ಆನ್‌ಲೈನ್ ತರಗತಿಗಳ, ಕಲಿಕೆ ಮತ್ತು ಕಲಿಯುವುದರ ಬಗ್ಗೆ ಚಿಂತಿಸುವುದನ್ನು ಕಡಿಮೆ ಮಾಡಿ, ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು . ಈ ಅಭೂತಪೂರ್ವ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಪ್ರಾಥಮಿಕ ಜವಾಬ್ದಾರಿಯೆಂದರೆ ಸಾಂಕ್ರಾಮಿಕ ರೋಗದಿಂದ ರಕ್ಷಿಸಿಕೊಳ್ಳಲು ಅಗತ್ಯವಾದ ನೀರು, ಆಹಾರ, ಪೋಷಣೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವುದು.ವಿಶೇಷವಾಗಿ ಬಡ ಕುಟುಂಬದಲ್ಲಿ ಯಾವುದೇ ಮಗು ಸಾಕಷ್ಟು ಪೋಷಣೆ ಮತ್ತು ಆಹಾರವಿಲ್ಲದೆ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಬೇಕು .

ಮುಂದುವರಿಯುವುದು..

LEAVE A REPLY

Please enter your comment!
Please enter your name here