ಭಾಗ -೨

ನಿರಂಜನಾರಾಧ್ಯ ವಿ ಪಿ
(ಸರ್ಕಾರಿ ಶಾಲೆಗಳ ಸಬಲೀಕರಣದ ಹರಿಕಾರ
ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ)

ಪೂರ್ವ-ಪ್ರಾಥಮಿಕದಿಂದ (ಅಂಗನವಾಡಿ) 9ನೇ ತರಗತಿಯವರೆಗಿನ ಮಕ್ಕಳು ಮೇ 31ರವರೆಗೆ ಮನೆಯಲ್ಲಿಯೇ ಇರುತ್ತಾರೆ. ಶಾಲೆಯಲ್ಲಿದ್ದಾಗ ಈ ಎಲ್ಲಾ ಮಕ್ಕಳಿಗೆ ಒಂದು ಹೊತ್ತಿನ ಮಧ್ಯಾಹ್ನದ ಊಟ ಶಾಲೆಯಲ್ಲಿ ದೊರಕುತಿತ್ತು . ಈಗ ಅದೇ ಮಕ್ಕಳಿಗೆ ಮೂರು ಹೊತ್ತಿನ ಊಟದ ವ್ಯವಸ್ಥೆಯಾಗಬೇಕಿದೆ. ಅಂಗನವಾಡಿ ಕೇಂದ್ರ ಮತ್ತು ಸರ್ಕಾರಿ ಶಾಲೆಗಳಿಗೆ ಹಾಜರಾಗುವ ಹೆಚ್ಚಿನ ಮಕ್ಕಳು ಅನಾನುಕೂಲ ಹಾಗು ಅವಕಾಶ ವಂಚಿತ ಸಮುದಾಯಗಳಿಂದ ಬಂದವರಾಗಿರುವುದರಿಂದ, ಈ ಅಭೂತಪೂರ್ವ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಪ್ರಾಥಮಿಕ ಜವಾಬ್ದಾರಿಯೆಂದರೆ ಸಾಂಕ್ರಾಮಿಕ ರೋಗದಿಂದ ರಕ್ಷಿಸಿಕೊಳ್ಳಲು ಅಗತ್ಯ ನೀರು, ಆಹಾರ, ಪೋಷಣೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸಬೇಕಿದೆ . ವಿಶೇಷವಾಗಿ ಬಡ ಕುಟುಂಬದ ಯಾವುದೇ ಮಗು ಸಾಕಷ್ಟು ಪೋಷಣೆ ಮತ್ತು ಆಹಾರವಿಲ್ಲದೆ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಬೇಕು .

ಆದ್ದರಿಂದ, ಏಪ್ರಿಲ್ 11 ,2020 ರ ಮೇ 31 ರವರೆಗೆ ( ವಿಸ್ತರಣೆಯಾದರೆ ಜೂನ್ 30 ರವರೆಗೆ) ಮಧ್ಯ್ನಾದ ಬಿಸಿಯೂಟದ ಕಾರ್ಯಕ್ರಮದ ಭಾಗವಾಗಿ ಎಲ್ಲಾ ಮಕ್ಕಳಿಗೆ ಪಡಿತರ ವಿತರಿಸಬೇಕು. ಮಕ್ಕಳು ಈಗ ಮೂರು ಹೊತ್ತು ಊಟ ಮನೆಯಲ್ಲಿಯೇ ಊಟ ಮಾಡುವುದರಿಂದ ಬಿಸಿಯೂಟದ ಕಾರ್ಯಕ್ರಮದ ಅಡಿಯಲ್ಲಿ ಪ್ರತೀ ಮಗುವಿಗೆ ಒದಗಿಸುತ್ತಿದ್ದ ಮೂರು ಪಟ್ಟು ದಿನಸಿಯನ್ನು ಮಕ್ಕಳಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕಿದೆ. ಮಕ್ಕಳ ಆಹಾರ , ಸುರಕ್ಷತೆ ಆಶ್ರಯ ಮತ್ತು ರಕ್ಷಣೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಈ ಮಕ್ಕಳ ತಂದೆ –ತಾಯಂದಿರು ಈಗ ಕೆಲಸಗಳನ್ನು /ಬೆಳೆದ ಬೆಳೆಯನ್ನು ಕಳೆದುಕೊಂಡು ಪರಿತಪಿಸುತ್ತಿರುವುದರಿಂದ ಈ ಕೆಲಸ ಆದ್ಯತೆಯ ಮೇಲೆ ನಡೆಯಬೇಕು .

ಶೈಕ್ಷಣಿಕ ಕ್ಯಾಲೆಂಡರ್‌ನ ಪ್ರಕಾರ ಸಾಮಾನ್ಯವಾಗಿ ಶಾಲೆಗಳು ಮೇ ಅಂತ್ಯ ಅಥವಾ ಜೂನ್ ಮೊದಲ ರದವರೆಗೆ ಮುಚ್ಚಲ್ಪಟ್ಟಿರುವುದರಿಂದ ಆನ್‌ಲೈನ್ ತರಗತಿಗಳ, ಕಲಿಕೆ ಮತ್ತು ಕಲಿಯುವುದರ ಬಗ್ಗೆ ಚಿಂತಿಸುವುದನ್ನು ಕಡಿಮೆ ಮಾಡಿ, ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು . ಈ ಅಭೂತಪೂರ್ವ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಪ್ರಾಥಮಿಕ ಜವಾಬ್ದಾರಿಯೆಂದರೆ ಸಾಂಕ್ರಾಮಿಕ ರೋಗದಿಂದ ರಕ್ಷಿಸಿಕೊಳ್ಳಲು ಅಗತ್ಯವಾದ ನೀರು, ಆಹಾರ, ಪೋಷಣೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವುದು.ವಿಶೇಷವಾಗಿ ಬಡ ಕುಟುಂಬದಲ್ಲಿ ಯಾವುದೇ ಮಗು ಸಾಕಷ್ಟು ಪೋಷಣೆ ಮತ್ತು ಆಹಾರವಿಲ್ಲದೆ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಬೇಕು .

10ನೇತರಗತಿ ಪರೀಕ್ಷೆ ಹಾಗು ಪಿಯುಸಿಯಲ್ಲಿ ಬಾಕಿ ಇರುವ ಒಂದು ವಿಷಯಕ್ಕೆ ಶಾಲಾ/ಕಾಲೇಜು ಹಂತದಲ್ಲಿ ಪರೀಕ್ಷೆ ನಡೆಸುವುದು ಸೂಕ್ತ
ನಮ್ಮ ಮುಂದೆ ಇರುವ ಅತ್ಯಂತ ಸವಾಲಿನ ಮತ್ತು ನಿರ್ಣಾಯಕ ವಿಷಯವೆಂದರೆ 10ನೇತರಗತಿ (ಎಸ್ಎಸ್ಎಲ್ ಸಿ) ಹಾಗು ದ್ವಿತೀಯ ಪಿಯುಸಿ (ಒಂದು ವಿಷಯ) ಮಕ್ಕಳ ಪಬ್ಲಿಕ್ ಪರೀಕ್ಷೆಗಳು. ಈಗಾಗಲೇ ತಿಳಿಸಿದಂತೆ, ಮಾರ್ಚ್-ಏಪ್ರಿಲ್-ಮೇ ತಿಂಗಳು ಶೈಕ್ಷಣಿಕ ವರ್ಷದ ಸಿದ್ಧತಾ ಸಮಯ.ಮಕ್ಕಳ ಮುಂದಿನ ವಿದ್ಯಾಭ್ಯಾಸ , ಸೇರಬೇಕಾದ ವಿದ್ಯಾಸಂಸ್ಥೆಗಳ ಬಗ್ಗೆ ಮಕ್ಕಳಿಗೆ ಪಾಲಕರಿಗೆ ಆತಂಕ ಸಹಜ. ಕೊರೋನಾದ ರಕ್ಷಣೆ ಮತ್ತು ಸುರಕ್ಷತೆಯನ್ನು ಆಧರಿಸಿ ಸರ್ಕಾರವು ಲಾಕ್ ಡೌನ್ ಜಾರಿಯಾದಾಗಿನಿಂದ ಪರೀಕ್ಷೆಗೆ ಸಂಬಂಧಿಸಿದಂತೆ ಮಕ್ಕಳಲ್ಲಿ ಆತ೦ಕ ಮನೆಮಾಡಿದೆ ಎಂಬುದು ಸತ್ಯಸಂಗತಿ.ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಆಲೋಚನೆ ಮತ್ತು ಅಭಿಪ್ರಾಯಗಳನ್ನು ಆ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ತಜ್ಞರು ,ಇಲಾಖೆಯ ಅಧಿಕಾರಿಗಳು ಹಾಗು ಪಾಲಕರು ಆಗಿಂದ್ದಾಗ್ಗೆ ತಮ್ಮ ಅಭಿಪ್ರಾಯ ವ್ಯಕ್ತ ವ್ಯಕ್ತಪಡಿಸುತ್ತಾ ಬಂದಿದ್ದಾರೆ.

ಶಿಕ್ಷಣ ಶಾಸ್ತ್ರದ ಅನ್ವಯ ಮಕ್ಕಳು ಎಷ್ಟು ಬೇಗ ಕಲಿಯುತ್ತಾರೆಯೋ ,ಅಷ್ಟೇ ಬೇಗ ಮರೆಯುವ ಸ್ವಭಾವವನ್ನೂ ಹೊಂದಿರುತ್ತಾರೆ. ಇದು ನಮ್ಮ ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ರೂಢಿಗತವಾಗಿದೆ. ಕಾರಣ ನಾವು ಅನ್ವಯಕ್ಕಿಂತ ಕಂಟಪಾಠ ಹಾಗು ಸ್ಮರಣೆಗೆ ಹೆಚ್ಚು ಒತ್ತು ನೀಡುತ್ತೇವೆ. ಇದು ಶಿಕ್ಷಣ ವ್ಯವಸ್ಥೆಯಲ್ಲಿನ ದೌರ್ಬಲ್ಯ. ಮಕ್ಕಳ ಕಲಿಕಾವಾತಾವರಣ ಬಹು ಆಯಾಮದಲ್ಲಿ ನಡೆಯುವ ಸಹಜ ಕ್ರಿಯೆ. ಹೀಗಿರುವಾಗ ಸಹಪಾಠಿಗಳಿಲ್ಲದೆ, ಶಿಕ್ಷಕರ ಮಾರ್ಗದರ್ಶನವಿಲ್ಲದೆ, ಆರೋಗ್ಯಕರ ಚರ್ಚೆ-ಬಾಹ್ಯ ಪ್ರೇರಣೆ ಇಲ್ಲದೆ ಕಲಿಕೆಗೆ ತೊಡಗುವುದು ಮಗುವಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಕಲಿತ ಮಗು ಪರೀಕ್ಷೆಯನ್ನು ಒಂದು ಸವಾಲಾಗಿ ಸ್ವೀಕರಿಸಿ ಬರೆಯಲು ಮಾನಸಿಕವಾಗಿ ಸಿದ್ಧವಿದ್ದಾಗ ಅದನ್ನು ಮತ್ತೆ ಮತ್ತೆ ಮುಂದೂಡಿದರೆ ಆಗುವ ನಿರಾಸೆ ಮತ್ತು ಆತಂಕದ ಜೊತೆಗೆ ತಾನು ಕಲಿತಿರುವುದನ್ನು ಕಾಯ್ದುಕೊಳ್ಳಲು ಪಡುವ ಆತಂಕ ಸದಾ ಇದ್ದೇ ಇರುತ್ತದೆ. ಈ ಹಿಂದೆ ಹಲವು ಸಂದರ್ಭಗಳಲ್ಲಿ ಪರೀಕ್ಷೆ ಮುಂದೂಡಿದಾಗ ಮಕ್ಕಳಿ ಖಿನ್ನತೆ ಹಾಗು ಆತಂಕಕ್ಕೆ ಒಳಗಾಗಿದ್ದನ್ನು ನಾವು ನೋಡಿದ್ದೇವೆ. ವಿಶೇಷವಾಗಿ, ಮಾರಕ ಕೊರೋನಾದಂತ ಸಂದರ್ಭದಲ್ಲಿ ಈ ಬಗೆಯ ಆತಂಕ ಎರಡು ಬಗೆಯದು; ಒಂದು, ಕೊರೋನಾದಿಂದ ತನ್ನನ್ನು ತಾನು ರಕ್ಷಿಸಿ ಕೊಳ್ಳುವುದು ಮತ್ತು ಎರಡನೆಯದು, ಬರೆಯಬೇಕಾದ ಪರೀಕ್ಷೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದು. ಈ ಆತಂಕಕಾರಿ ಮನೋಸ್ಥಿತಿ ಮಗುವನ್ನು ದುರ್ಬಲಗೊಳಿಸುತ್ತದೆ.

ಈ ಸಂದರ್ಭದಲ್ಲಿ ಸೋಂಕಿತರು, ಭಾದಿತರು, ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದವರು ಹಾಗು ಕ್ವಾರಂಟೈನ್ನಲ್ಲಿರುವವರು, ಮುನ್ನೆಚ್ಚರಿಕೆಯಿಂದ ವೈದ್ಯಕೀಯ ಕಾರಣಕ್ಕಾಗಿ ದೈಹಿಕ ಅಂತರ ಕಾಯ್ದುಕೊಂಡವರು ಹೀಗೆ ಎಲ್ಲರೂ ಆತಂಕದಲ್ಲಿದ್ದಾರೆ. ಜೊತೆಗೆ, ಲಾಕ್ ಡೌನ್ ನನ್ನು ಮೇ 17 ರವರೆಗೆ ವಿಸ್ತರಿಸಲಾಗಿದೆ. ಮೇ 17 ರ ನಂತರ ಏನು ಎಂಬುದು ಇನ್ನೂ ಅನಿಶ್ಚಿತವಾಗಿದೆ. ಹೀಗಿರುವಾಗ, ಎಸ್ ಎಸ್ ಎಲ್ ಸಿ ಮಕ್ಕಳಿಗೆ, ಪಬ್ಲಿಕ್ ಪರೀಕ್ಷೆ ನಡೆಸುವುದು ನಾವಾಗಿ ನಾವೇ ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಂಡಂತಾಗುತ್ತದೆ. ಮನುಷ್ಯನ ಜೀವಕ್ಕಿಂತ ಅಮೂಲ್ಯವಾದದ್ದು ಬೇರೊಂದಿಲ್ಲ. ಆದ್ದರಿಂದ ಪರ್ಯಾಯ ವ್ಯವಸ್ಥೆಯನ್ನು ಯೋಚಿಸಬೇಕಿದೆ . ಇಲ್ಲಿ ಎರಡು ಆಯ್ಕೆಗಳಿವೆ:

ಒಂದು, 10ನೇತರಗತಿ ಪರೀಕ್ಷೆ ಹಾಗು ಪಿಯುಸಿಯಲ್ಲಿ ಬಾಕಿ ಇರುವ ಒಂದು ವಿಷಯಕ್ಕೆ ಈ ಬಾರಿ ಪರೀಕ್ಷೆಯಿಂದ ಮಕ್ಕಳಿಗೆ ವಿನಾಯಿತಿ ನೀಡಿ ಆಂತರಿಕ ಅಂಕಗಳ ಆಧಾರದ ಮೇಲೆ ಎಲ್ಲಾ ಮಕ್ಕಳನ್ನು ತೇರ್ಗಡೆಗೊಳಿಸಲು ಕ್ರಮ ಕೈಗೊಳ್ಳುವುದು. ಇದು ಸಾಧ್ಯವಾಗದಿದ್ದಲ್ಲಿ ಪರೀಕ್ಷೆ ನಡೆಸಲು ಪರ್ಯಾಯ ಮಾರ್ಗವನ್ನು ಯೋಚಿಸುವುದು ಮುಖ್ಯವಾಗುತ್ತದೆ.ಈಗಾಗಲೇ ಹೆಚ್ಚುತ್ತಿರುವ ಕೋರೋನ ಭೀತಿಯ ಹಿನ್ನೆಲೆಯಲ್ಲಿ ೨೦೧೯-೨೦ರ ಶೈಕ್ಷಣಿಕ ಸಾಲಿನ 10 ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಲು ಪಂಜಾಬ್ ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ ಸಕಾಲಿಕ ತೀರ್ಮಾನವಾಗಿದೆ. ಈ ನಿರ್ಧಾರವನ್ನು ಅಲ್ಲಿನ ಮುಖ್ಯಮಂತ್ರಿಯವರು ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ನಮ್ಮ ರಾಜ್ಯದಲ್ಲಿಯೂ ಮಕ್ಕಳ ಸುರಕ್ಷತೆ ಹಿತದೃಷ್ಟಿ ಹಾಗು ಮಕ್ಕಳನ್ನು ಮಾನಸಿಕ ಒತ್ತಡದಿಂದ ಬಿಡುಗಡೆ ಮಾಡಲು, ಈ ಹಿಂದೆ ಒತ್ತಾಯಿಸಿದ್ದಂತೆ ಶಾಲಾ ಹಂತದಲ್ಲಿ ನಡೆದಿರುವ ಸಿದ್ಧತಾ ಪರೀಕ್ಷೆ (Preparatory exam) ಹಾಗು ಆಂತರಿಕ ಪರೀಕ್ಷೆಗಳಲ್ಲಿ ಮಕ್ಕಳ ಸಾಧನೆಯನ್ನು ಆಧರಿಸಿ ಮಕ್ಕಳನ್ನು ತೇರ್ಗಡೆ ಮಾಡುವ ಮೂಲಕ ೧೦ ನೇ ತರಗತಿಯ ಪಬ್ಲಿಕ್
ಪರೀಕ್ಷೆಗಳನ್ನು ರದ್ದುಗೊಳಿಸುವುದು ಸೂಕ್ತ.

ಎರಡು, ಶಾಲಾ ಹಂತದಲ್ಲಿ ಪರೀಕ್ಷೆ ನಡೆಸಿ ಮುಗಿಸುವುದು. ಈ  ಬಾರಿ  ಸುಮಾರು  ಎಂಟು  ಲಕ್ಷ  ಮಕ್ಕಳು  ಪರೀಕ್ಷೆ  ಬರೆಯಲ್ಲಿದ್ದಾರೆ.  ಒಂದೊಂದು ಪರೀಕ್ಷಾ ಕೇಂದ್ರದಲ್ಲಿ 250-300  ಮಕ್ಕಳು ಎಂದರೂ,  ಅವರನ್ನು ಬಿಡಲು ಬರುವ ಅಷ್ಟೇ ಸಂಖ್ಯೆಯ ಪೋಷಕರು, 25-30 ಸಿಬ್ಬಂದಿ ಸುಲಭವಾಗಿ ಒಂದು ಕೇಂದ್ರದಲ್ಲಿ  ಸೇರುತ್ತಾರೆ. ಇಷ್ಟು ದೊಡ್ಡ  ಸಂಖ್ಯೆ ಬಹಳ ಸುಲಭವಾಗಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಕರ್ನಾಟಕದ ಎಲ್ಲಡೆ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳು ಪರೀಕ್ಷೆ ಬರೆಯುವುದಾದರೆ, ಇದು ಎಂಥಹ ಆತಂಕವನ್ನು  ಸೃಷ್ಟಿಸಬಲ್ಲದು ಎಂಬುದನ್ನು ಸುಲಭವಾಗಿ ಊಹಿಸಬಹುದು. ಇಷ್ಟೆಲ್ಲ ಮುಂಜಾಗರೂಕತೆ ಇದ್ದರೂ ನಾವು  ಪ್ರತೀ ವಿದ್ಯಾರ್ಥಿಯನ್ನು ಪರೀಕ್ಷೆಗೆ ಒಳಪಡಿಸದ ಕಾರಣ ಸೋಂಕು ತಗುಲಿದರೂ ಅದನ್ನು ಪತ್ತೆ  ಹಚ್ಚುವುದು  ಕಷ್ಟಸಾಧ್ಯವಿದ್ದು ಸೋಂಕು ಕಣ್ಣಿಗೆ ಕಾಣದ ರೀತಿಯಲ್ಲಿ ಹರಡುವ ಸಂಭವನೀಯತೆ ಹೆಚ್ಚಿರುತ್ತದೆ. ಇದು ಅತ್ಯಂತ ಅಪಾಯಕಾರಿ. ಪರೀಕ್ಷಾ ನಂತರದಲ್ಲಿ ಮೌಲ್ಯ ಮಾಪನ ಕೇಂದ್ರಕ್ಕೆ ಉತ್ತರ ಪತ್ರಿಕೆಯ ಸಾಗಾಟ ನಂತರ ಮೌಲ್ಯ ಮಾಪನಕೇಂದ್ರದಲ್ಲಿ ಸುಮಾರು 400 ರಿಂದ 500 ಶಿಕ್ಷಕರು ಗುಂಪು ಸೇರಿದಾಗ ಶಿಕ್ಷಕರ ಸುರಕ್ಷತೆ ಮತ್ತು  ಮುಂಜಾಗ್ರತೆಯ ಕ್ರಮಗಳು ನಿಜಕ್ಕೂ ದೊಡ್ಡ  ಸವಾಲಾಗಿ  ಪರಿಣಮಿಸುತ್ತದೆ. ಇದಕ್ಕೆ ಬದಲಾಗಿ,  ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ಈಗಾಗಲೇ ಸಿದ್ದವಾಗಿರುವ  ಪ್ರಶ್ನೆಪತ್ರಿಕೆಗಳನ್ನು ಬಳಸಿ ಆಯಾ  ಶಾಲಾ ಮಟ್ಟದಲ್ಲಿಯೇ ನಡೆಸಲು ತೀರ್ಮಾನಿಸುವುದು ಸಾಂದರ್ಭಿಕ ಮತ್ತು ಸಕಾಲಿಕ ತೀರ್ಮಾನವಾಗುತ್ತದೆ. ಪರೀಕ್ಷೆ ನಂತರ ಆಯಾ ವಿಷಯದ ಶಿಕ್ಷಕರು ತಮ್ಮ ತಮ್ಮ ಶಾಲೆಯಲ್ಲಿ ಮೌಲ್ಯ ಮಾಪನ ಮಾಡಿ ಅಂಕಗಳನ್ನು  ಮಂಡಳಿಗೆ ಕಳಿಸುವುದು ಅತ್ಯಂತ ಪ್ರಾಯೋಗಿಕ ಮತ್ತು ಮುಂಜಾಗರೂಕತೆಯ ತೀರ್ಮಾನವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಮಕ್ಕಳ-ಶಿಕ್ಷಕರ  ಜೀವಗಳನ್ನು ರಕ್ಷಿಸುವ ಕಾಪಾಡುವ ದೃಷ್ಟಿಯಿಂದ ಪರೀಕ್ಷೆಗಳನ್ನು  ಶಾಲಾ ಹಂತದಲ್ಲಿ ನಡೆಸುವುದುಸೂಕ್ತ ಎಂಬ ಕೂಗು ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ, ಎಲ್ಲಾ ರೀತಿಯಿಂದ ಈ ಪರೀಕ್ಷೆಗಳನ್ನು ಶಾಲಾ ಹಂತದಲ್ಲಿ ಆಯೋಜಿಸಿ ಮಕ್ಕಳ ಮತ್ತು ಪಾಲಕ ಪೋಷಕರ ಆತಂಕ ಮತ್ತು ಭಯವನ್ನು ಹೋಗಲಾಡಿಸುವುದು ಅತ್ಯಂತ ಮಹತ್ವದ ವಿಷಯವಾಗಿದೆ .

ಮುಂದುವರಿಯುವುದು …

LEAVE A REPLY

Please enter your comment!
Please enter your name here