ಭಾಗ – ೪

ನಿರಂಜನಾರಾಧ್ಯ ವಿ ಪಿ
(ಸರ್ಕಾರಿ ಶಾಲೆಗಳ ಸಬಲೀಕರಣದ ಹರಿಕಾರ
ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ)

ಪಠ್ಯವಸ್ತು,ಕಲಿಕಾ ದಿನಗಳು ಮತ್ತು ಕಲಿಕಾ ಸಮಯ ಇವುಗಳನ್ನು ತೀರ್ಮಾನಿಸುವಾಗ ಶಿಕ್ಷಣ ಹಕ್ಕು ಕಾಯಿದೆ ಮತ್ತು ನಿಯಮಗಳ ಮಾನದಂಡ ಹಾಗು ಚೌಕಟ್ಟನ್ನು ಬಳಸಬೇಕು.

ಮೇ 31ರವರೆಗೆ ಶಾಲೆಗಳು ರಜೆಯಲ್ಲಿವೆ. ಶಾಲೆಗಳನ್ನು ಜೂನ್ ನಲ್ಲಿ ಪ್ರಾರಂಭಿಸಿದ್ದರೂ ಕನಿಷ್ಠ ಜೂನ್ ಅಂತ್ಯದವರೆಗೆ  ನಾವೂ ದಾಖಲಾತಿ, ಪ್ರಭಾತ್ ಪೇರಿ, ಸೇತುಬಂಧ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಆದ್ದರಿಂದ ಕೋವಿಡ್-19 ಪ್ಯಾಂಡೆಮಿಕ್ ಬಂದು ಎಲ್ಲವೂ ಕಳೆದು ಹೋಗಿದೆ ಎಂಬ ಆತಂಕ ಅವಸರ ಬೇಡ . ಎಲ್ಲಾ ವಿಷಯದಲ್ಲಿ ನಾವು ನಮ್ಮನ್ನು ಖಾಸಗಿ ಶಾಲೆಗಳ ಜೊತೆ ಹೋಲಿಸಿಕೊಂಡು ಸ್ಪರ್ಧೆಗೆ ಇಳಿಯುವ ಅವಶ್ಯಕತೆ ಇಲ್ಲ .ಶಾಲೆ ಯಾವಾಗ ಪ್ರಾರಂಭವಾಗಬೇಕು, ಸಿದ್ಧತೆ ಏನಿರಬೇಕು, ಹೇಗೆ ನಡೆಯಬೇಕು ,ಬದಲಾದ ನನ್ನಿವೇಶದಲ್ಲಿ ಕಲಿಕೆ ಹೇಗಿರಬೇಕು, ಪಠ್ಯವಸ್ತು ಹೇಗಿರಬೇಕು , ಕಲಿಕಾ ದಿನಗಳೆಷ್ಟು, ಕಲಿಕಾ ಅವಧಿ ಎಷ್ಟು ಇತ್ಯಾದಿಗಳನ್ನು ನಾವು ಶಿಕ್ಷಣ ಹಕ್ಕು ಕಾಯಿದೆ ಮತ್ತು ನಿಯಮಗಳ ಚೌಕಟ್ಟಿನಲ್ಲಿ ನೋಡಬೇಕು.ಅದರಲ್ಲಿ ಕೆಲವು ಮೂಲಭೂತವಾದ ಅಂಶಗಳು ಈ ಕೆಳಗಿನಂತಿವೆ.

ಆನ್ಲೈನ್ ಶಿಕ್ಷಣಕ್ಕೆ ಅನಗತ್ಯಒತ್ತು ಬೇಡ

ಮೇ 17 ಕ್ಕೆ ‘ಲಾಕ್‌ಡೌನ್’ನಿಂದ ಸ್ವಲ್ಪ ಮಟ್ಟಿನ ರಿಯಾತಿಗಳು ಸಿಗಬಹುದಾದ ಮುನ್ಸೂಚನೆ ಸಿಕ್ಕಿದೆ. ಲಾಕ್‌ಡೌನ್’ ಪರೋಕ್ಷವಾಗಿ ಮುಂದುವರಿಯಲಿದ್ದು ದೈಹಿಕ ಅಂತರವನ್ನು ಕಾಪಾಡಿಕೊಂಡೇ 2020-21 ನೇ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಬೇಕಿದೆ. ಈ  ಬಗ್ಗೆ ಚರ್ಚೆಗಳು ಪ್ರಾರಂಭವಾಗಿದ್ದು  ಚರ್ಚೆಯ  ಕೇಂದ್ರ ಬಿಂದು ‘ಆನ್ಲೈನ್’ ಶಿಕ್ಷಣ. ಬಹುತೇಕ ಈ ಚರ್ಚೆಗಳ ಮುಂಚೂಣಿಯಲ್ಲಿರುವವರು ಖಾಸಗೀ ಶಿಕ್ಷಣ ವಲಯದ ಅದರಲ್ಲೂ ಕಾರ್ಪೋರೇಟ್ ಶಿಕ್ಷಣ ಹಾಗು ಶಿಕ್ಷಣ-ತಂತ್ರಜ್ಞಾನದ ವ್ಯಾಪಾರಿಗಳು. ತಮ್ಮ ಶಿಕ್ಷಣ ವ್ಯಾಪಾರಕ್ಕೆ ಉಂಟಾಗಬಹುದಾದ ನಷ್ಟದ ಬಗ್ಗೆ ಗಾಬರಿಗೊಂಡಿರುವ ಖಾಸಗಿ ಶಿಕ್ಷಣ ವಲಯ ಮತ್ತು ಮೈತ್ರಿ ಸಂಸ್ಥೆಗಳು ಆನ್ಲೈನ್  ಶಿಕ್ಷಣ ಪ್ರಾರಂಭಿಸಲು ತುದಿಗಾಲಿನಲ್ಲಿ ನಿಂತಿವೆ. ಈ ಹೊಸ ಕಾರ್ಯ ತಂತ್ರದ ಮೂಲಕ ತಮ್ಮ ಸಂಸ್ಥೆಯ  ಮಕ್ಕಳು ಎಲ್ಲೂ ವಲಸೆ ಹೋಗದಂತೆ ಕಾಪಾಡಿಕೊಳ್ಳುವುದು ಅವರ ಮುಖ್ಯ ಉದ್ದೇಶ. ಇಂದಿಗೂ ಸೇವಾವಲಯವಾಗಿಯೇ ಉಳಿದಿರುವ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಈ ಬಗ್ಗೆ ಹೆಚ್ಚಿನ ಗೊಂದಲ ಅಥವಾ ಆತಂಕ ಇಲ್ಲವಾದರು ಮೇಲಿನ ಅಧಿಕಾರಿಗಳು ತಮ್ಮ  ಅಸ್ತಿತ್ವವನ್ನು ರುಜುವಾತುಗೊಳಿಸುವ ಸಲುವಾಗಿ  ತಮ್ಮಲ್ಲೂ   ಆನ್ಲೈನ್ ಶಿಕ್ಷಣ ಪ್ರಾರಂಭಿಸುವುದಾಗಿ ಬೊಬ್ಬೆ ಹಾಕುತ್ತಿರುವುದು  ವಿಶೇಷವಾಗಿ ಗಮನಿಸಬೇಕಾದ ಸಂಗತಿ.  

ಆನ್ಲೈನ್ ಸೇವೆಗಳು ಮತ್ತು ಸಂಪನ್ಮೂಲಗಳು ಖಂಡಿತವಾಗಿಯೂ ಕಲಿಯಬೇಕಾದ ವಿಷಯ ಮತ್ತು ಕಲಿಕಾ ಪ್ರಕ್ರಿಯೆಗೆ ಪೂರಕವಾಗಿ ಸಹಾಯವಾಗಬಹುದು ಮತ್ತು ವಿದ್ಯಾರ್ಥಿಗಳ ಕಲಿಕೆಗೆ ಪೂರಕ ಅನುಭವವನ್ನು  ಕಟ್ಟಿಕೊಡುವ ಮೂಲಕ ಕಲಿಕೆಯನ್ನು ಮತ್ತಷ್ಟು ಸುಧಾರಿಸಲು ಸಹಾಯವಾಗಬಹುದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಆದರೆ, ಇದು ಎಂದಿಗೂ ತರಗತಿ ಕೋಣೆಯ ಜೀವಂತ ಕಲಿಕಾ  ಪ್ರಕ್ರಿಯೆಗೆ ಪರ್ಯಾಯವಾಗಲು ಸಾಧ್ಯವಿಲ್ಲ.ಪ್ರಜಾಸತ್ತೆಯನ್ನು ಗಟ್ಟಿಗೊಳಿಸುವ ದೃಷ್ಟಿಯಿಂದ ಅದು ಆಗಲೂಬಾರದು.  ಮಕ್ಕಳು-ವಿದ್ಯಾರ್ಥಿಗಳು ಒಟ್ಟಿಗೆ ಬಂದು , ಬೆರೆತು,ಸಂಭಾಷಿಸಿ, ಚರ್ಚಿಸಿ, ಪರಸ್ಪರ ಅನುಭವ- ಒಳವುಗಳನ್ನು ಹಂಚಿಕೊಂಡು ಕಲಿತಾಗ ಮಾತ್ರ ಸಾಮಾಜೀಕರಣ ಸಾಧ್ಯ. ಅಂಥಹ ಕಲಿಕಾ ಪ್ರಕ್ರಿಯೆ ಮಾತ್ರ ಮಾನವೀಯ ಸಂಬಂಧಗಳನ್ನು ಬೆಸೆದು ಮಾನವೀಯತೆ ಕಟ್ಟಿಕೊಡಲಬಲ್ಲದು. ಶ್ರೇಷ್ಠ ತತ್ವಜ್ಞಾನಿ ನೋಮ್ ಚೋಮ್ಸ್ಕಿಯ ಪ್ರಕಾರ ಅಧಿಕಾರವನ್ನು ಪ್ರಶ್ನಿಸುವ,  ವಿಮರ್ಶಾತ್ಮಕವಾಗಿ ಯೋಚಿಸುವ  ಮತ್ತು ಸವಕಲಾಗಿ  ಗತಿಸಿರುವ ಮಾದರಿಗಳಿಗೆ ಹೊಸ ಪರ್ಯಾಯಗಳನ್ನು ರಚಿಸಲು ಪ್ರಚೋದನೆಯನ್ನು ಹುಟ್ಟುಹಾಕುವುದೇ  ಸರಿಯಾದ ಶಿಕ್ಷಣಶಾಸ್ತ್ರ. ಶ್ರೇಷ್ಟ ಚಿಂತಕ ಪಾಲೋ ಫ್ರೈರೆಯವರ ಪ್ರಕಾರ , ಶಿಕ್ಷಣಶಾಸ್ತ್ರವು ಕಲಿಯುವವರ ಮನಸ್ಸನ್ನು ಸ್ವತಂತ್ರಗೊಳಿಸಬೇಕು ಮತ್ತು ವಿಮರ್ಶಾತ್ಮಕವಾಗಿ ಯೋಚಿಸಲು ಅನುವು ಮಾಡಿಕೊಡುವ ಮೂಲಕ  ಸ್ವಂತಿಕೆಯ ಒಳನೋಟಗಳನ್ನು ಪ್ರತಿಬಿಂಬಿಸಬೇಕು.

ಎಲ್ಲಕ್ಕಿಂತ ಮಿಗಿಲಾಗಿ, ಬಡತನ, ಅಸಮಾನತೆ,ತಾರತಮ್ಯ ಶ್ರೇಣೀಕೃತ ಸಾಮಾಜಿಕ-ಶಿಕ್ಷಣ ವ್ಯವಸ್ಥೆ  ಹಾಗು ಉಳ್ಳವರು –ಉಳ್ಳದಿರುವವರು ಎಂಬ ಎರಡು ಸಮಾನಾಂತರ ವರ್ಗಗಳಿರುವ ಭಾರತದಲ್ಲಿ  ಆನ್ ಲೈನ್ ಶಿಕ್ಷಣ ಈ ಕಂದರವನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆಯೇ ಹೊರತು ತೊಡೆದು ಹಾಕಲಾರದು. ಕೋವಿಡ್ ಸಂದರ್ಭದಲ್ಲಿ ಈ ಕಂದರ ಮತ್ತಷ್ಟು ಕಣ್ಣಿಗೆ ರಾಚುವಂತೆ ತೆರೆದುಕೊಂಡಿದ್ದು ಹಿಂದಿನ ಅನೇಕ ಸಾಮಾಜಿಕ-ಆರ್ಥಿಕ ಸಂಶೋಧನೆಗಳನ್ನು ಸಾಕ್ಷೀಕರಿಸಿದೆ.

ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಶೇಕಡ 16 ರಷ್ಟು ಕುಟುಂಬಗಳು 1-8 ಗಂಟೆ,ಶೇಕಡ 33 ರಷ್ಟು ಕುಟುಂಬಗಳು 9-12 ಗಂಟೆ ಮತ್ತು ಶೇಕಡ 47 ರಷ್ಟು ಕುಟುಂಬಗಳು 12 ಕ್ಕಿಂತ ಹೆಚ್ಚು ಗಂಟೆಗಳ ವಿದ್ಯುಚ್ಛಕ್ತಿ ಸರಬರಾಜನ್ನು ಹೊಂದಿವೆ. ಶೇಕಡ 11 ರಷ್ಟು ಕುಟುಂಬಗಳು ಕಂಪ್ಯೂಟರ್ ಸೌಲಭ್ಯ  ಶೇಕಡ 24 ರಷ್ಟು ಕುಟುಂಬಗಳು ಸ್ಮಾರ್ಟ್ ಪೋನ್ ಹಾಗು ಶೇಕಡ 24 ರಷ್ಟು ಕುಟುಂಬಗಳು ಇಂಟರ್ನೆಟ್ ಸಂಪರ್ಕ ಹೊಂದಿವೆ. ಗ್ರಾಮೀಣ ಪ್ರದೇಶದಲ್ಲಿ ಈ ಪ್ರಮಾಣ ಕೇವಲ ಶೇಕಡಾ 15. ಇನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಲಿಂಗ ತಾರತಮ್ಯ ನೋಡುವುದಾದರೆ , ಶೇಕಡ 8 ರಷ್ಟು ಕುಟುಂಬಗಳಲ್ಲಿ 5-14 ವರ್ಷದ ಮಕ್ಕಳಿಗೆ ಕಂಪ್ಯೂಟರ್ ಹಾಗು ಇಂಟರ್ನೆಟ್ ಸೇವೆಯ ಸೌಲಭ್ಯವಿದೆ. ಮತ್ತೊಂದು ವಿಶೇಷ ಸಂಗತಿಯೆಂದರೆ , 2019ರ ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ​​ಆಫ್ ಇಂಡಿಯಾ ವರದಿಯ ಪ್ರಕಾರ ಭಾರತದಲ್ಲಿ , ಶೇಕಡ 67 ಪುರುಷರು ಇಂಟರ್ನೆಟ್ ಸೌಲಭ್ಯ ಹೊಂದಿದ್ದರೆ  ಕೇವಲ ಶೇಕಡ  33 ರಷ್ಡು ಮಹಿಳೆಯರು ಮಾತ್ರ ಈ ಸೌಲಭ್ಯ ಹೊಂದಿದ್ದಾರೆ.

ಆನ್ ಲೈನ್ ಶಿಕ್ಷಣದ ಬಗ್ಗೆ ಸಾಕಷ್ಟು ಸದ್ದು ಮಾತನಾಡುತ್ತಿರುವ ಕೇಂದ್ರ ಸರ್ಕಾರವು ತನ್ನ 2020-21ರ  ಆಯವ್ಯಯದಲ್ಲಿ ಮಾನವ ಅಭಿವೃದ್ಧಿ ಸಂಪನ್ಮೂಲ ಮಂತ್ರಾಲಯದ ಮೂಲಕ ಡಿಜಿಟಲ್ ಕಲಿಕೆಗೆ ಮೀಸಲಿರಿಸಿದ ಹಣ 604 ಕೋಟಿಯಿಂದ 469 ಕೋಟಿಗೆ ಇಳಿದಿದೆ. ಅಂದರೆ ಹಿಂದಿನ ಆಯವ್ಯಕ್ಕಿಂತ  ಶೇಕಡ 29 ರಷ್ಟು ಕಡಿಮೆಯಾಗಿದೆ.ನಮ್ಮ ರಾಜ್ಯದಲ್ಲಿ ಸುಮಾರು  2,37,893 ಕೋಟಿ ಗಾತ್ರದ ಆಯಾವ್ಯದಲ್ಲಿ ಶಿಕ್ಷಣದ ತಂತ್ರಜ್ಞಾನ ಅಭಿವೃದ್ಧಿಗೆ ಮೀಸಲಿಟ್ಟಿದ್ದು 7 ಕೋಟಿ; ತಂತ್ರಜ್ಞಾನದ ನೆರೆವಿನಿಂದ ರಾಜ್ಯದ ವಿಶ್ವವಿದ್ಯಾಲಯಗಳನ್ನು ಸಮರ್ಥ ನಿರ್ವಹಣೆಗೆ ಅಣಿಗೊಳಿಸಲು ಒಂದು ಕೋಟಿ; ಇಂಟರಾಕ್ಟೀವ್ ಆನ್ಲೈನ್ ಕೋರ್ಸ್ ಪ್ರಾರಂಭ ಹಾಗು ಗುಣಾತ್ಮಕ ಇ-ಕಂಟೆಂಟ್ ಅಭಿವೃದ್ಧಿಗೆ ಒಂದು ಕೋಟಿ ಮತ್ತು  ತಾಂತ್ರಿಕ ಶಿಕ್ಷಣ ಇಲಾಖೆಯಡಿ ಜಿಯೋಸ್ಪೇಶಿಯಲ್ ತಂತ್ರಜ್ಞಾನ ಸ್ಥಾಪನೆಗೆ ಐದು ಕೋಟಿ .ಇದನ್ನು ಬಳಸಿ ಯಾವ ಬಗೆಯ ಆನ್ಲೈನ್ ಶಿಕ್ಷಣ ನೀಡುತ್ತಾರೆಂಬುದನ್ನು ಆನ್ಲೈನ್ ಶಿಕ್ಷಣದ ಬಗ್ಗೆ ದೊಡ್ಡ ಗುಲ್ಲನ್ನೇ ಹಬ್ಬಿಸುತ್ತಿರುವ ಕಾರ್ಪೋರೇಟ್ ಸಂಸ್ಥೆಗಳು ಮತ್ತು ಸರ್ಕಾರಗಳು ಯೋಚಿಸಬೇಕು.

ಆನ್ಲೈನ್ ಶಿಕ್ಷಣದ ಸಾಧಕ –ಬಾಧಕಗಳ ಬಗ್ಗೆ ಚರ್ಚಿಸುವ ಮುನ್ನ ಶಿಕ್ಷಣ ಪ್ರಕ್ರಿಯೆ ಸ್ವರೂಪ ಮತ್ತು ಉದ್ದೇಶದ ಬಗ್ಗೆ ಗಮನ ಹರಿಸೋಣ. ಶಿಕ್ಷಣ –ಶಿಕ್ಷಣ ವ್ಯವಸ್ಥೆಯೆಂದರೆ ಪೂರ್ವನಿರ್ಧಾರಿತ ಪಠ್ಯವಸ್ತುವಿನ ಮೂಲಕ ಮಾಹಿತಿಯನ್ನು ರವಾನಿಸುವ ಯಾಂತ್ರಿಕ ಪ್ರಕ್ರಿಯೆ ಮಾತ್ರವಲ್ಲ . ಮನುಷ್ಯ ಒಂದು ಸಾಮಾಜಿಕ ಪ್ರಾಣಿಯಾಗಿದ್ದು ಶಿಕ್ಷಣ ಅವಳ/ಅವನ  ಸಾಮಾಜಿಕ ಚಲನ-ವಲನ ಹಾಗು ಸಮಾಜದಲ್ಲಿನ ಎಲ್ಲ ವರ್ಗದ ಜನರ ಸಾಮಾಜಿಕ ಒಳಿತಿಗಾಗಿ  ಸಾಮಾಜೀಕರಣಗೊಳಿಸುವ ಒಂದು ಸಾಧನ. ಜಾತಿ,ಧರ್ಮ,ಲಿಂಗ,ಬಣ್ಣ,ಸಾಮಾಜಿಕ-ಆರ್ಥಿಕ ಸ್ಥಾನಮಾನ ಇತ್ಯಾದಿಗಳ ಆಚೆಗೆ ನಿಂತು ಸಮಾನತೆ , ಸಾಮಾಜಿಕ ನ್ಯಾಯ ಮತ್ತು ಭಾತೃತ್ವದ ಮೂಲಕ ಮಾನವೀಯತೆ ನೆಲೆಯಲ್ಲಿ  ಹೊಸ ಸಮಾಜವನ್ನು ಕಟ್ಟಿಕೊಳ್ಳಲು ಎಲ್ಲರನ್ನು ಅಣಿಗೊಳಿಸುವುದು ಶಿಕ್ಷಣದ ಮೂಲ ಉದ್ದೇಶ. ಈ ಕಾರಣಕ್ಕಾಗಿಯೇ ಜಾಗತಿಕ ಮಟ್ಟದಲ್ಲಿ ಯುನೆಸ್ಕೊ ಒಳಗೊಂಡಂತೆ ಶಿಕ್ಷಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಹಲವು ಸಂಸ್ಥೆಗಳು ಶಿಕ್ಷಣವನ್ನು ಒಂದು ಸಾಮಾಜಿಕ ಒಳಿತು ಮತ್ತು ಸಾಮಾಜಿಕ ಪರಿವರ್ತನೆಯ ಬಹುದೊಡ್ಡ ಸಾಧನವನ್ನಾಗಿ ಪರಿಗಣಿಸಿವೆ.

ಆನ್ಲೈನ್ ಕಲಿಕೆ ಮೇಲೆ ಚರ್ಚಿಸಿದ ಶಿಕ್ಷಣಶಾಸ್ತ್ರವನ್ನು ಅನ್ವಯಿಸುವ ಯಾವ ಮೌಲ್ಯಗಳನ್ನು ಒಳಮಾಡಿಕೊಳ್ಳುವುದಿಲ್ಲ.ಆನ್ ಲೈನ್ ಶಿಕ್ಷಣದ ಬಗ್ಗೆ ಸಾಕಷ್ಟು ಶಬ್ದ ಮಾಡುತ್ತಿರುವ ನವ –ಉದಾರವಾದಿ ಖಾಸಗಿ ಸಂಸ್ಥೆಗಳ ಆಲೋಚನೆಗಳು ಮಾರುಕಟ್ಟೆ-ಚಾಲಿತ ಮೌಲ್ಯಗಳಾದ ‘ಸಮಯವು ಹಣ’, ‘ಹಣಕ್ಕೆ ಮೌಲ್ಯ’, ‘ಸಂಸ್ಥೆಗೆ ವೆಚ್ಚ’, ‘ಸ್ಮಾರ್ಟ್ ಸೇವೆಗಳು’ ಇತ್ಯಾದಿಗಳ  ಮೂಲಕ ಎಲ್ಲವನ್ನೂ ನೋಡುತ್ತದೆ. ‘ಸಮಯವೇ ಹಣ’ ಆಗಿರುವುದರಿಂದ, ಇಂಥಹ ಕಠಿಣ ಸಾಂಕ್ರಾಮಿಕ ಅವಧಿಯಲ್ಲಿಯೂ ಸಹ ಶೈಕ್ಷಣಿಕ ವರ್ಷವನ್ನು ಎರಡು ತಿಂಗಳು ವಿಸ್ತರಿಸಲಾಗುವುದಿಲ್ಲ  ಕಾರಣ ಸಮಯವನ್ನು ಹಾಳು ಮಾಡುವ ಮೂಲಕ ಹಣ/ಲಾಭವನ್ನು ಕಳೆದುಕೊಂಡರೆ ಸಂಸ್ಥೆಗಾಗುವ ‘ವೆಚ್ಚ’ ಯಾರು ಭರಿಸುತ್ತಾರೆ ಎಂಬುದು ಜೀವಗಳಿಗಿಂತ ದೊಡ್ಡ ವಿಷಯವಾಗುತ್ತದೆ.

ಚೋಮ್ಸ್ಕಿಯ ಪ್ರಕಾರ ವರ್ಚುವಲ್ ತಂತ್ರಜ್ಞಾನವು ಯಾವಾಗಲೂ ತಟಸ್ಥವಾಗಿರುತ್ತದೆ. ಅದು ಹಾನಿಕಾರಕವಾಗಬಹುದು  ಅಥವಾ ಉಪಯುಕ್ತವಾಗಬಹುದು. ಆದರೆ ಅದರ ಯಶಸ್ಸು ಅದನ್ನು ಬಳಸುವ ಚೌಕಟ್ಟು ಹಾಗು ಬಳಸುವವರನ್ನು ಅವಲಂಬಿಸಿರುತ್ತದೆ.  ಈ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು, ಹಲವಾರು ಆನ್‌ಲೈನ್ ಸೇವಾ ಮಾರಾಟಗಾರರು ತಮ್ಮ ಉತ್ಪನ್ನಗಳನ್ನು / ಸೇವೆಗಳೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಮಾರುಕಟ್ಟೆಯನ್ನು  ಪ್ರಾರಂಭಿಸಲು ಕಾಯುತ್ತಿದ್ದಾರೆ. ಭಾರತವು    2005 ರಲ್ಲಿಯೇ  ಡಬ್ಲ್ಯುಟಿಒ-ಗ್ಯಾಟ್ಸ್‌ನ ಒಪ್ಪಂದದ ಭಾಗವಾಗಿ ಉನ್ನತ ಶಿಕ್ಷಣವನ್ನು ಮುಕ್ತ ಮಾರುಕಟ್ಟೆಗೆ ತೆರೆದಿಡುವುದು ಆ ಒಪ್ಪಂದದ ಬದ್ಧತೆಗಳಲ್ಲಿ  ಒಂದಾಗಿದೆ. ಡಬ್ಲ್ಯುಟಿಒ-ಗ್ಯಾಟ್ಸ್‌ನ ಒಪ್ಪಂದದ ಒಂದು ಅತ್ಯಂಯ ಪ್ರಮುಖ ಅಂಶವೆಂದರೆ ಶಿಕ್ಷಣದ ವ್ಯಾಪಾರವನ್ನು ಜಗತ್ತಿನಾದ್ಯಂತ ಆನ್ಲೈನ್‌ ವ್ಯವಸ್ಥೆ ಮೂಲಕ ಮುಕ್ತ ಮಾರುಕಟ್ಟೆಗೆ ತೆರೆದಿಡುವುದು. ಡಬ್ಲ್ಯುಟಿಒ-ಗ್ಯಾಟ್ಸ್ ಒಪ್ಪಂದ  ಶಿಕ್ಷಣವನ್ನು ಈಗಾಗಲೇ ಸೇವೆಯ ಬದಲಾಗಿ ವ್ಯಾಪಾರದ ಅಡಿಯಲ್ಲಿ ಒಂದು ಸರಕನ್ನಾಗಿ ಮಾರ್ಪಡಿಸಿರುವುದರಿಂದ,  ಈ ಒಪ್ಪಂದ ಜಾರಿಯಾದ ಬಳಿಕ ಶಿಕ್ಷಣ ಒಂದು ಜಾಗತಿಕ ವ್ಯಾಪಾರವಾಗುತ್ತದೆ.

ಇದಾವುದರ ಪೂರ್ಣ ಅರಿವು ಮತ್ತು ಪರಿಣಾಮವನ್ನು ಮನಗಾಣದ  ನೀತಿ ನಿರೂಪಕರು,ಅಕ್ಯಾಡೆಮಿಸಿಯನ್ಸ್  ಹಾಗು ಸಂಪ್ರದಾಯವಾದಿ  ಶಿಕ್ಷಣ ತಜ್ಞರು ಆನ್ಲೈನ್ ಕಲಿಕೆಗೆ ಸಂಭ್ರಮಿಸಿದ್ದಾರೆ. ಕೆಲವರಂತು ಸ್ಪರ್ಧೆಗೆ ಬಿದ್ದು ತಮ್ಮ ಕ್ಯಾಂಪಸ್‌ಗಳಲ್ಲಿ ಆನ್ಲೈನ್ ಕಲಿಕಾ ಸೇವೆಗಳನ್ನು ಪರಿಣಾಮಕಾರಿಯಾಗಿ  ಬಳಸಿದ್ದಕ್ಕಾಗಿ ತುಂಬಾ ರೋಮಾಂಚನಗೊಂಡು ಪುಳಕಿತರಾಗಿದ್ದಾರೆ. ಇಂಥಹ ಕೇಳರಿಯದ ಬಿಕ್ಕಟ್ಟಿನ ಸಂದರ್ಭದಲ್ಲು  ಕಲಿಕೆಯನ್ನು ಮುಂದುವರಿಸುವ ಮೂಲಕ ತಮ್ಮ ಸಂಸ್ಥೆಗಳಲ್ಲಿ ಯಾವುದೇ ತೊಂದರೆಯಿಲ್ಲದೆ ಕಲಿಕೆ ನಿರಂತರವಾಗಿ ಸಾಗಿರುವ ಬಗ್ಗೆ ಯಶೋಗಾಥೆಗಳನ್ನು ಹಂಚಿಕೊಂಡು ಬಿರುದು ಸನ್ಮಾನಗಳಿಗಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ.  ಈ ಎಲ್ಲಾ ವಿಷಯಗಳ ಬಗ್ಗೆ ವ್ಯಾಪಕವಾಗಿ ಚರ್ಚಿಸಬೇಕಿದೆ. ಕೋಣ ಕರು ಹಾಕಿದೆ ಎಂದರೆ ಕೊಟ್ಟಿಗೆಗೆ ಕಟ್ಟಿ ಎಂಬ ಮನಸ್ಥಿತಿ ಹೊಂದಿರುವ ನಾವು ಈ ಸಂಕಷ್ಟದ ಸಂದರ್ಭದಲ್ಲಿ ವಾಸ್ತವಿಕ ನೆಲೆಗಟ್ಟಿನಲ್ಲಿ ಚರ್ಚಿಸಬೇಕೆ ಹೊರತು ಜನರನ್ನು ದಿಕ್ಕು ತಪ್ಪಿಸುವ ಕೆಲಸಕ್ಕೆ ವಿರಾಮ ಹೇಳಬೇಕು . ಒಟ್ಟಾರೆ, ಇಡೀ ದೇಶ-ರಾಜ್ಯವೇ  ಕರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಬಂಧಾಗಿರುವ ಇಂಥಹ ಸಂದರ್ಭದಲ್ಲಿ ಇಂಥಹ ಕೆಲವು ರಚನಾತ್ಮಕ ಕೆಲಸಗಳು ಮನೆಯಲ್ಲಿದ್ದುಕೊಂಡೇ ನೆಮ್ಮದಿಯಿಂದ ಆತಂಕವಿಲ್ಲದೆ ಶೈಕ್ಷಣಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುತ್ತದೆ.  ಎಲ್ಲಕ್ಕಿಂತ ಮಿಗಿಲಾಗಿ, ಇಂದಿನ ಕಠಿಣ ಸಂದಿಗ್ಧ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಮತ್ತು ಅವರ ಪಾಲಕರಿಗೆ ಮನೋಸ್ಥೈರ್ಯ ಮತ್ತು ಆತ್ಮ ವಿಶ್ವಾಸ ಹೆಚ್ಚಿಸುವ  ಕೆಲಸಕ್ಕೆ ಈ ರೀತಿಯ ಸಣ್ಣ ಸಣ್ಣ ಉಪಕ್ರಮಗಳು ದೊಡ್ಡರೀತಿಯಲ್ಲಿ ನೆರವಾಗುತ್ತವೆ .

ಮುಗಿಯಿತು

LEAVE A REPLY

Please enter your comment!
Please enter your name here