ಲೇಖಕರು: ಹಕೀಮ್ ತೀರ್ಥಹಳ್ಳಿ.

ಕನ್ನಡ ಸಾಹಿತ್ಯ ಪರಂಪರೆಯನ್ನು ಗಮನಿಸಿದರೆ ವಚನ ಸಾಹಿತ್ಯದ ನಂತರ ಸಮಾಜಮುಖಿ ಸಾಹಿತ್ಯ ಮತ್ತೆ ಸೃಷ್ಟಿಯಾಗತೊಡಗಿದ್ದು ಹರಿದಾಸ ಪರಂಪರೆಯ ಮೂಲಕ. ಸಮಾಜದಲ್ಲಿದ್ದ ಅಂಕು-ಡೊಂಕುಗಳನ್ನು ತಿದ್ದಲು ವಚನಕಾರರು ೧೨ ನೇ ಶತಮಾನದಲ್ಲಿ‌ ಪ್ರಯತ್ನಿಸುತ್ತಾರೆ. ಇವರ ನಂತರ ೧೫, ೧೬ ನೇ ಶತಮಾನದಲ್ಲಿ ಬಂದ ದಾಸ ಸಾಹಿತ್ಯವೂ ಸಮಾಜದಲ್ಲಿನ ವೈರುಧ್ಯಗಳ ಬಗ್ಗೆ ಮತ್ತು ಜನರ ಜೀವನ ಮೌಲ್ಯಗಳ ಮೇಲೆ ಬೆಳಕು ಚೆಲ್ಲುತ್ತ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಲು‌ ಪ್ರಯತ್ನಿಸುತ್ತದೆ. ದಾಸ ಸಾಹಿತ್ಯದ ಪರಂಪರೆಯಲ್ಲಿ ನಾವು ಮುಖ್ಯವಾಗಿ ಪುರಂದದಾಸರು, ಕನಕದಾಸರು, ಕಬೀರ್ ದಾಸರು, ಸಂತ ತುಕಾರಾಂ ಅವರನ್ನು ಕಾಣಬಹುದು.

ತಮ್ಮ ಬದುಕಿನುದ್ದಕ್ಕೂ ಮಾನವೀಯ ಸಂದೇಶವನ್ನು ಸಾರಿದ ಕನಕದಾಸರ ಹುಟ್ಟೂರು ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮ. ಇವರು ಬೀರಪ್ಪ ಮತ್ತು ಬಚ್ಚಮ್ಮ ದಂಪತಿಯ ಮಗನಾಗಿ ಜನಿಸಿದರು. ಕನಕದಾಸರ ಮೊದಲ ಹೆಸರು ತಿಮ್ಮಪ್ಪ. ಬಾಲಕ ತಿಮ್ಮಪ್ಪ ಬಾಲ್ಯದಲ್ಲೇ ಅಕ್ಷರಾಭ್ಯಾಸ, ವ್ಯಾಕರಣಗಳ ಜೊತೆಗೆ ಕತ್ತಿವರಸೆ, ಕುದುರೆ ಸವಾರಿ ಕಲಿತು ಬಂಕಾಪುರ ಪ್ರಾಂತ್ಯಕ್ಕೆ ಡಣ್ಣಾಯಕನಾದನು. ವಿಜಯನಗರದ ಅರಸರ ಪರವಾಗಿ ಯುದ್ದವೊಂದರಲ್ಲಿ ಪಾಲ್ಗೊಂಡಿದ್ದಾಗ, ಮಾರಣಾಂತಿಕ ಹೊಡೆತ ಅನುಭವಿಸಿ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದರು. ತಂದೆ, ತಾಯಿ, ಬಂಧು, ಬಳಗ, ಅಪಾರ ಸೈನ್ಯ ಸಿರಿ ಸಂಪತ್ತು ಕಳೆದುಕೊಂಡು ಜರ್ಜರಿತವಾಗಿದ್ದ ಕನಕದಾಸರಿಗೆ ಅಶರೀರವಾಣಿಯೊಂದು ದಾಸನಾಗು ಎಂದು ಹೇಳಿದ ಹಾಗಾಯಿತು. ಈ ಘಟನೆಯಿಂದ ಪರಿವರ್ತನೆಗೊಂಡ ಕನಕದಾಸರು ಸಮಸ್ತ ರಾಜ್ಯವನ್ನೆಲ್ಲಾ ಬಿಟ್ಟು ಶ್ರೀಹರಿಯನ್ನೇ ಸ್ತುತಿಸುತ್ತಾ ತಂಬೂರಿ, ತಾಳವನ್ನು ಹಿಡಿದು ಕನಕದಾಸರಾದರು.

ಕನಕದಾಸರು ತಮ್ಮ ಕೀರ್ತನೆಗಳ ಮುಖಾಂತರ ಜಾತಿವಾದವನ್ನು, ವರ್ಣಭೇದವನ್ನು, ಮೂಢನಂಬಿಕೆಯನ್ನು ಕಟುವಾಗಿ ಖಂಡಿಸಿದರು. ನಳಚರಿತ್ರೆ, ಹರಿಭಕ್ತಿಸಾರ, ನರಸಿಂಹಸ್ತವ, ರಾಮಧಾನ್ಯ ಚರಿತೆ, ಮೋಹನ ತರಂಗಿಣಿ ಇವು ಕನಕದಾಸರ ಕೃತಿಗಳು. ಇವರ ರಾಮಧಾನ್ಯ ಚರಿತೆ ಕೃತಿಯಲ್ಲಿ ಭತ್ತ (ಅಕ್ಕಿ) ಮತ್ತು ರಾಗಿಯ ನಡುವಿನ ಸಂಘರ್ಷದ ಕತೆ ಇರುವುದನ್ನು ಗಮನಿಸಬಹುದು. ಭತ್ತವು ಮೇಲ್ವರ್ಗಕ್ಕೆ ಸೇರಿದ್ದು ರಾಗಿಯು ಕೆಳವರ್ಗಕ್ಕೆ ಸೇರಿದ್ದು ಎಂದು ಮೂದಲಿಸಿ ಸಂಘರ್ಷಕ್ಕೆ ಒಳಪಟ್ಟಾಗ ರಾಮನ ಮುಂದಾಳತ್ವದಲ್ಲಿ ರಾಗಿಗೆ ಜಯ ದೊರೆಯುತ್ತದೆ. ಅಂದರೆ ಯಾರನ್ನೆ ಆಗಲಿ ಅವರ ಗುಣ, ನಡತೆ, ಜ್ಞಾನದಿಂದ ಅವರ ಪ್ರತಿಭೆಯನ್ನು ಅಳೆಯಬೇಕೆ ಹೊರತು ಆತನ ಜಾತಿ ಮುಖ್ಯವಾಗಬಾರದು ಎನ್ನುವುದು ಈ ಸಂಘರ್ಷದ ತಿರುಳು.

ಸಮಾಜದಲ್ಲಿನ ತಾರತಮ್ಯಗಳನ್ನು ತಿದ್ದಲು ಪ್ರಯತ್ನಿಸಿದ ಕನಕ ದಾಸರು ‘ಕುಲ ಕುಲ ಕುಲವೆನ್ನುತಿಹರು
ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ
ಕೆಸರೊಳು ತಾವರೆ ಪುಟ್ಟಲು ಅದ ತಂದು
ಬಿಸಜನಾಭನಿಗರ್ಪಿಸಲಿಲ್ಲವೆ
ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವ
ವಸುಧೆಯೊಳಗೆ ಭೂಸುರರುಣಲಿಲ್ಲವೆ’
ಎಂದು ಹಾಲು ಮತ್ತು ತಾವರೆಗಳಂತೆ ಮನುಷ್ಯನಲ್ಲಿರುವ  ಗುಣಮೌಲ್ಯಗಳೆ ಮುಖ್ಯ ಹೊರತು ಆತನು  ಹುಟ್ಟಿದ  ಜಾತಿ ಮತ ಕುಲಗಳು ಮುಖ್ಯವಲ್ಲ ಎಂದು ಸಾರುತ್ತಾರೆ. ಕನಕದಾಸರ ಇನ್ನೊಂದು ಕೀರ್ತನೆಯಲ್ಲಿ
‘ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯನೇನಾದರೂ  ಬಲ್ಲಿರಾ’ ಎಂದು ಪ್ರಶ್ನಿಸುತ್ತಾರೆ. ನಮ್ನನ್ನಾಳುವ ವರ್ಗಕ್ಕೆ ಎಚ್ಚರಿಸುವ ರೀತಿಯಲ್ಲಿ ‘ಡೊಂಕು ಬಾಲದ ನಾಯಕರೇ  ನೀವೇನೂಟವ ಮಾಡಿದಿರಿ?’ ಎಂದು ನೈತಿಕತೆ ಇಲ್ಲದ ನಾಯಕರನ್ನು ತರಾಟೆಗೆ ತೆಗೆದು ಕೊಳ್ಳುತ್ತಲೆ, ‘ಇವರು ಧರ್ಮಕ್ಕೂ, ಮಾನವೀಯತೆಗೂ ದೂರ ನಿಲ್ಲವವರು. ಯಾವುದಕ್ಕೂ ಹೇಸದ, ಒಳಿತನ್ನು ಮಾಡದ ಇವರು ಸಮಾಜಕ್ಕೆ ಕಂಟಕರು’ ಎಂದೂ ಕರೆಯುತ್ತಾರೆ.

‘ಈ ಲೋಕದಲ್ಲಿ ದುರ್ಜನರ ಸಂಗ ಬೇಡ. ನೈತಿಕ ನಡವಳಿಯೇ ಬದುಕಿನ ಜೀವಾಳ. ಆದ್ದರಿಂದ ಸದಾ ಸಜ್ಜನರ ಸಂಗದಲ್ಲಿಯೇ ಬಾಳಬೇಕು’ ಎಂಬ ಆಶಯವನ್ನೂ ವ್ಯಕ್ತಪಡಿಸಿದ ಕನಕದಾಸರು ನಮ್ಮಲ್ಲಿರುವ ಅಹಂಕಾರ, ಡಾಂಭಿಕತೆಯನ್ನು ಬಿಟ್ಟು ಎಲ್ಲರೊಂದಿಗೆ ಕೂಡಿ ಬಾಳಬೇಕು ಎನ್ನುವ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಇಂತಹ ಸಾಮಾಜಿಕ ಚಿಂತನೆಯ ಸಂದೇಶವನ್ನು ಸಾರಿದ ಕನಕದಾಸರ ಕೀರ್ತನೆಗಳ ಮುಖಾಂತರ ನಾವು ಕಲಿಯಬೇಕಾದ ಪಾಠ ಬಹಳಷ್ಟಿದೆ‌. ಕನಕದಾಸರ ಜನ್ಮದಿನದ ನೆಪದಲ್ಲಿ ಅವರು ಜಗತ್ತಿಗೆ ಸಾರಿದ ಸಂದೇಶಗಳನ್ನು ತಿಳಿಯೋಣ. ಅದರ ಜೊತೆಯಲ್ಲಿ ಇತರರಿಗೂ ಮುಟ್ಟಿಸೋಣ.

LEAVE A REPLY

Please enter your comment!
Please enter your name here