• ಹಕೀಮ್ ಅಜೊ ತೀರ್ಥಹಳ್ಳಿ

ನಾವು ನಿನ್ನೆಯನ್ನು ಸರಿಯಾಗಿ ತಿಳಿಯದೆ ವರ್ತಮಾನವನ್ನು ತಿಳಿಯಲಾಗುವುದಿಲ್ಲ. ವರ್ತಮಾನವನ್ನು ತಿಳಿಯದೆ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಸಾಧ್ಯವಿಲ್ಲ. ನಿನ್ನೆ, ಇಂದು, ನಾಳೆಗಳ ಸುಸಾಂಗತ್ಯದಲ್ಲಿ ಜೀವನ ಪಟವಿದೆ. ಇತಿಹಾಸದ ಪುಟಗಳ ಕಡೆಗಿ ಕಣ್ಣು ಹಾಯಿಸಿದಾಗ ಭಾರತವನ್ನು ಏಳುನೂರು ವರ್ಷಗಳ ಕಾಲ ಮುಸ್ಲಿಮರು ಆಳಿದ್ದರು ಎಂದು ತಿಳಿಯುತ್ತದೆ. ಮೊದಲ ಬಾರಿಗೆ ಬ್ರಿಟಿಷರ ವಿರುದ್ಧ ತಿರುಗಿ ಬಿದ್ದದ್ದು ಹೋರಾಟ ಮಾಡಲು ಅಣಿಯಾದದ್ದು ಮುಸ್ಲಿಮರು. ಅದು ಮುಸ್ಲಿಮರಿಗೆ ಅನಿವಾರ್ಯವು ಆಗಿತ್ತು. ಕಾರಣ ಏಳುನೂರು ವರ್ಷಗಳ ಮುಸ್ಲಿಂ ಆಳ್ವಿಕೆ ಕೊನೆಗೊಳ್ಳುವ ಹೊತ್ತಲ್ಲಿ ಬ್ರಿಟಿಷರ ಪ್ರವೇಶವಾಗುತ್ತದೆ. ಈ ಸಂದರ್ಭದಲ್ಲಿ ಮುಸ್ಲಿಮರಿಗೆ ತಮ್ಮ ಅಸ್ತಿತ್ವ ಉಳಿಸಿ ಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ ಮೊದಲಿಗೆ ಬಹುತೇಕ ಎಲ್ಲ ದೊಡ್ಡ ಹೋರಾಟಗಳು ಮುಸ್ಲಿಂ ದೊರೆಗಳ ವಿರುದ್ಧವೆ ನಡೆಯುತ್ತದೆ.
ನಮ್ಮ ಇತಿಹಾಸಕಾರರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರ ಹೆಸರುಗಳನ್ನು ಯುವ ಜನಾಂಗಕ್ಕೆ ತಲು ಪಿಸಿರುವುದು ಬೆರಳಣಿಕೆಯಷ್ಟು. ಆದರೆ ಲಕ್ಷಾಂತರ ಹೋರಾಟಗಾರರ ತ್ಯಾಗ, ಬಲಿದಾನಗಳು ಚರಿತ್ರೆಕಾರರ ಸಂಕುಚಿತ ಭಾವನೆಯಿಂದ ಕತ್ತಲೆಯಲ್ಲಿದೆ. ಮುಖ್ಯವಾಗಿ ಈ ದೇಶಕ್ಕಾಗಿ ನಿಸ್ವಾರ್ಥವಾಗಿ ಹೋರಾಡಿ ನೋವುಗಳನ್ನು ತಿಂದು ಅಸುನೀಗಿದ ಮುಸ್ಲಿಂ ಜನಾಂಗದ ಸ್ವಾತಂತ್ರ್ಯ ಪ್ರೇಮಿಗಳ ಹೋರಾಟದ ಇತಿಹಾಸವೂ ಇನ್ನೂ ನಿಗೂಢವಾಗಯೇ ಇದೆ. ಈ ನಿಗೂಢತೆಯ ಬಗ್ಗೆ ಅರಿಯಲು ಮುಂದಾಗುವ ಕೆಲವು ಘಟನೆಗಳು ನಮ್ಮ ಕಣ್ಣ ಮುಂದೆ ಬರುತ್ತದೆ. ಬ್ರಿಟಷರ ವಿರುದ್ಧದ ಹೋರಾಟದ ಆರಂಭಿಕ ಹಂತದಲ್ಲಿ ಮುಸ್ಲಿಮರೇ ಇದ್ದುದರಿಂದ ನಂತರದವರು ಅದನ್ನು ದಾಖಲಿಸುವ ಪ್ರಯತ್ನ ಮಾಡದಿರುವುದು. ಅದು ಕಳೆದ ಮೇಲೆ ಹಿಂದೂ ಮುಸ್ಲಿಮರು ಒಟ್ಟಾಗಿ ಹೋರಾಟ ಮಾಡಿದ್ದಾರೆ. ಇಲ್ಲಿ ಕೆಲವು ಕೆಚ್ಚದೆಯ ಹೋರಾಟಗಾರರ ಹೆಸರು ನಮೂದಾಗಿದ್ದರು ಅದು ಹೆಚ್ಚಿನವರಿಗೆ ತಲುಪಿಲ್ಲ. ನಂತರದ ಕಾಲದಲ್ಲಿ ಭಾರತದ ಮುಸ್ಲಿಮರನ್ನು ದೇಶ ವಿಭಜನೆಯ ಆಧಾರದ ಮೇಲಷ್ಟೆ ಗುರುತಸಲು ಹೊರಟಿದ್ದು. ಈ ಕಾರಣದಿಂದ ಮುಸ್ಲಿಂ ಹೋರಾಟಗಾರರ ನಿಜವಾದ ದೇಶಭಕ್ತಿ, ಅವರ ಕೆಚ್ಚೆದೆಯ ಹೋರಾಟ ಅರಿಯದೆ ಮರೆಯಾಯಿತು ಎಂದೆನಿಸುತ್ತದೆ.
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಗಮನಿಸುವಾಗ ಸಿಪಾಯಿ ದಂಗೆಯಲ್ಲಿ ಇಪ್ಪತ್ತೇಳು ಸಾವಿರ ಮುಸ್ಲಿಮರು ಪ್ರಾಣ ತ್ಯಾಗ ಮಾಡಿದ್ದು ತಿಳಿಯುತ್ತದೆ. ಸುಭಾಷ್ ಚಂದ್ರ ಬೋಸರ ಇಂಡಿಯನ್ ಆರ್ಮಿಯಲ್ಲಿದ್ದ ಸೇನಾಧಿಕಾರಿಗಳ ಪಟ್ಟಿಯನ್ನು ಗಮನಿಸಿದರೆ ಅದರಲ್ಲೂ ಬಹುಸಂಖ್ಯಾತರಾಗಿ ಮುಸ್ಲಿಮರು ಕಂಡು ಬರುತ್ತಾರೆ. ಭಾರತಕ್ಕೆ ಸ್ವಾತಂತ್ರ್ಯ ಬರುವ ಸಂಧರ್ಭದಲ್ಲಿ ಭಾರತೀಯ ಸೇನೆಯಲ್ಲಿ ಮುಸ್ಲಿಮರ ಪ್ರಮಾಣ ಶೇಕಡ ಇಪ್ಪತ್ತೇಳರಷ್ಟಿತ್ತು. ಇದೆಲ್ಲವನ್ನೂ ಇಂದು ಉದ್ದೇಶ ಪೂರ್ವಕವಾಗಿಯೇ ನಮ್ಮಿಂದ ಮರೆಮಾಚಲಾಗುತ್ತಿದೆಯೇ ಎಂದು ಅನಿಸದೆ ಇರಲಾರದು.
ಪ್ರಸ್ತುತ ಕಾಲಘಟ್ಟವನ್ನು ಗಮನಿಸಿದರೆ ಯಾರು ರಾಜಕೀಯವಾಗಿ, ಪ್ರಭಲವಾಗಿ ಸಮಾಜದಲ್ಲಿ ಹತೋಟಿಯನ್ನು ಸಾಧಿಸುತ್ತಾರೋ ಅವರು ಹಿಂದಿನ ದಿನಗಳಲ್ಲೂ ಪ್ರಾಬಲ್ಯ ಸ್ಥಾಪಿಸಲು ಶಕ್ತರಾಗುತ್ತಾರೆ. ಇತಿಹಾಸದ ಪುಟಗಳಲ್ಲಿ ಯಾರಿರಬೇಕು, ಯಾರಿರಬಾರದು ಎಂಬ ನಿರ್ಧಾರವನ್ನು ತೆಗೆದು ಕೊಳ್ಳುತ್ತಾರೆ. ಉದಾಹರಣೆಯಾಗಿ ಶಾಲಾ ಪಠ್ಯಗಳಿಂದ ಟಿಪ್ಪು ಸುಲ್ತಾನ್ ಕುರಿತ ಇತಿಹಾಸದ ಅಧ್ಯಾಯವನ್ನು ತೆಗೆದು ಹಾಕಲು ಮುಂದಾಗುವುದನ್ನು ಗಮನಿಸ ಬಹುದು. ಕೆಲವು ಘಟನೆಗಳು ಸ್ವಾತಂತ್ರ್ಯ ಭಾರತದಲ್ಲಿ ಘಟಿಸುವಾಗ ಇಲ್ಲಿ ಇತಿಹಾಸಕಾರರಿಗೂ ಮುಕ್ತವಾದ ಆವಕಾಶವಿಲ್ಲ ಎಂದೆನಿಸುತ್ತದೆ.
ಇನ್ನು ದಿನಬೆಳಗಾದರೆ ಮುಸ್ಲಿಮರು ತಮ್ಮ ದೇಶಪ್ರೇಮವನ್ನು ಸಾಬೀತು ಪಡಿಸಿ ಕೊಳ್ಳಬೇಕಾದ ಸಂದಿಗ್ಧ ಸ್ಥಿತಿಯಲ್ಲಿರುವಾಗ, ಇನ್ನೋಂದು ರೀತಿಯಲ್ಲಿ ಅನುಮಾನಿತವಾಗಿ ದಿನ ಕಳೆಯುತ್ತಿರುವಾಗ, ಮತ್ತೊಂದು ಕಡೆ ಕೆಲ ಮಾಧ್ಯಮಗಳು ಮತ್ತು ದೇಶ ಭಕ್ತಿಯ ಮುಖವಾಡ ಧರಿಸಿ ಜನರೆಡೆ ಗುರುತಿಸಿ ಕೊಳ್ಳುವ ರಾಜಕಾರಣಿಗಳು, ಕೆಲ ನಾಯಕರುಗಳು ಕಪೋಲ ಕಲ್ಪಿತ ಮಾತುಗಳನ್ನು ತಮ್ಮ ಸಂಕುಚಿತ ದೃಷ್ಟಿಯಲ್ಲಿ ಹರಿಬಿಡುತ್ತಿರುವಾಗ ಮತ್ತೆ ಮತ್ತೆ ಇಲ್ಲಿನ ಮುಸ್ಲಿಮರಿಗೆ ತಮ್ಮ ದೇಶ ಪ್ರೇಮ ಎಂತದ್ದು ಎಂಬುದನ್ನು ತೋರಿಸಿ ಕೊಡುವುದು ಅನಿವಾರ್ಯ ವಾಗುತ್ತಿದೆ. ಪ್ರವಾದಿ ಮುಹಮ್ಮದ್ (ಸ.ಅ)ರು, ದೇಶ ಪ್ರೇಮ ದೇಶದ ರಕ್ಷಣೆ ಇಸ್ಲಾಮಿನ ಭಾಗವಾಗಿದೆ ಎಂಬುದನ್ನು ಕಲಿಸಿದ್ದಾರೆ. ಅದೇ ಹಾದಿಯಲ್ಲಿ ನಡೆಯುತ್ತಿರುವ ಭಾರತದ ಮುಸ್ಲಿಮರು, ಯಾರೋ ಒಬ್ಬ ದಾವೂದ್ ಇಬ್ರಾಹಿಂನಿಂದ ಬೇರೆ ದೇಶದ ಅಜ್ಮಲ್ ಕಸಬ್ ನಿಂದ ಆಥವಾ ಎಲ್ಲೋ ಅಡಗಿ ಕುಳುತು ಭಯ ಹುಟ್ಟಿಸುವ ಕೆಲವು ಭಯೋತ್ಪಾದಕರಿಂದ ಈಡೀ ಮುಸ್ಲಿಂ ಸಮುದಾಯವನ್ನು ಅವಮಾನದ, ಅನುಮಾನದ ದೃಷ್ಟಿಕೋನದಿಂದ ನೋಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ನಾವು ಮನಗಾಣ ಬೇಕಿದೆ.
ಈ ನಿಟ್ಟಿನಲ್ಲಿ ಭಾರತ ದೇಶದ ಸ್ವಾತಂತ್ರ್ಯಕ್ಕೆ ಬೇಕಾಗಿ ಹೋರಾಟ ನಡೆಸಿದ ಮುಸ್ಲಿಮರ ಪಾತ್ರವನ್ನು ಮತ್ತೆ ಮತ್ತೆ ತಿಳಿದುಕೊಳ್ಳುವ ಅದನ್ನು ಒಬ್ಬರಿಂದ ಮತ್ತೊಬ್ಬರಿಗೆ ತಿಳಿಸುವ ಅವಶ್ಯಕತೆ ನಮ್ಮ ಮುಂದಿದೆ. ನಮಗೆಲ್ಲರಿಗೂ ತಿಳಿದಿರುವಂತೆ ಟಿಪ್ಪು ಸುಲ್ತಾನರ ಆಳ್ವಿಕೆಯು ಬ್ರಿಟಿಷರ ವಿರುದ್ಧದ ಯುದ್ಧದ ಮೂಲಕವೆ ಆರಂಭಗೊಂಡು ಮತ್ತು ಅವರ ವಿರುದ್ಧದ ಯುದ್ಧದ ಮೂಲಕವೆ ಕೊನೆಗೊಳ್ಳುತ್ತದೆ. ಎಂದಿಗೂ ಟಿಪ್ಪುಸುಲ್ತಾನರಿಗೆ ಬ್ರಿಟಿಷ್ ಸೇನೆಯ ಪ್ರಾಬಲ್ಯ ಭಯವನ್ನು ಉಂಡುಮಾಡಿಲ್ಲ. ಸ್ವಾಭಿಮಾನದಿಂದ ಹೋರಾಟ ಮಾಡಿದರು. ಅಷ್ಟು ಮಾತ್ರವಲ್ಲದೆ ತಮ್ಮ ಆಳ್ವಿಕೆಯ ಕಾಲದಲ್ಲಿ ರೇಷ್ಮೆ ಕೃಷಿಗೆ, ತಂತ್ರಜ್ಞಾನಕ್ಕೆ ತನ್ನ ಕಾಲದಲ್ಲೇ ಹೆಸರು ವಾಸಿಯಾಗಿದ್ದರು. ಸಕ್ಕರೆ. ಗ್ಲಾಸ್, ಕಾಗದ, ವಾಚ್ ಇತ್ಯಾದಿ ಉತ್ಪಾಧನೆಯ ಕಡೆಗೆ ವಿಶೇಷ ಗಮನ ಹರಿಸಿದ್ದರು. ದೂರದ ಫ್ರಾನ್ಸ್, ಚೀನಾಗಳಿಂದ ತಂತ್ರಜ್ಞಾನವನ್ನು ಕರೆಯಿಸಿಕೊಂಡು, ತನ್ನ ರಾಜ್ಯದಲ್ಲಿ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಕ್ರಮಗಳನ್ನು ಕೈಗೊಂಡಿದ್ದರು. ನಾಲ್ಕನೆಯ ಮೈಸೂರು ಯುದ್ಧದಲ್ಲಿ ಹೋರಾಡುತ್ತಲೆ ಟಿಪ್ಪು ಸುಲ್ತಾನ್ ಹುತಾತ್ಮರಾಗುತ್ತಾರೆ. ಅವರ ಮರಣದ ನಂತರ ಬ್ರಿಟಿಷರು ‘ಭಾರತ ಈಗ ನಮ್ಮದು’ ಎಂದು ಹೆಮ್ಮೆ ಪಡುತ್ತಾರೆ. ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಟಿಪ್ಪುಸುಲ್ತಾನರ ಸಾಧನೆಯನ್ನು ತಿಳಿಸಲು ಚರಿತ್ರೆ ಏಕೆ ವಂಚಿಸಿದೆ ಎಂದು ಅರ್ಥವಾಗುವುದಿಲ್ಲ. ಒಂದೆಂತು ಸತ್ಯ, ಟಿಪ್ಪುಸುಲ್ತಾನ್ ಮುಸ್ಲಿಂ ಧರ್ಮೀಯ ಎಂದೇ ಅವರ ಸಾಧನೆಯನ್ನು ಮುಚ್ಚಿಟ್ಟು ಅನ್ಯಾಯ ಮಾಡಲಾಗುತ್ತಿದೆ ಎಂದೆನಿಸುತ್ತದೆ.

ಭಾರತದಲ್ಲಿ ಬ್ರಿಟಿಷರ ಯೋಜನೆಗಳನ್ನು ಗುರುತಿಸಿದವರಲ್ಲಿ ಮೌಲಾನಾ ಶಾಹ್ ವಲಿಯುಲ್ಲಾಹ್ ಮುಹದ್ದಿಸ್ ದೆಹ್ಲವಿ ಮೊಟ್ಟ ಮೊದಲಿಗರಾಗಿದ್ದರು. ಬ್ರಿಟಿಷರನ್ನು ನಿಯಂತ್ರಿಸುದಕ್ಕಾಗಿ ಕಾರ್ಯತಂತ್ರವನ್ನು ರೂಪಿಸಿ ಬೃಹತ್ ಆಂದೋಲನಕ್ಕೆ ಭದ್ರ ಬುನಾದಿಯನ್ನು ಹಾಕಿದರು. ಮದ್ರಾಸಗಳನ್ನು ರಾಷ್ಟ್ರೀಯ ಆಂದೋಲನದ ಕೇಂದ್ರಗಳನ್ನಾಗಿ ಪರಿವರ್ತಿಸಿದರು. ಉತ್ತಮ ವಿದ್ವಾಂಸರಾಗಿದ್ದ ಶಾಹ್ ವಲಿಯುಲ್ಲಾರವರು ಅನೇಕ ಕೃತಿಗಳನ್ನು ರಚಿಸಿ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದರು.
ಭಾರತದ ಹಿಂದೂ ಮುಸ್ಲಿಮರು 1857 ರ ಕ್ರಾಂತಿಯಲ್ಲಿ ಬಹುದ್ದುರ್ ಶಾಹ್ ಝಫರನನ್ನು ಭಾರತದ ದೊರೆಯೆಂದು ಘೋಷಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಲು ಮುಂದಾಗುತ್ತಾರೆ. ಭಾರತದ ಹಿಂದೂ ಮುಸ್ಲಿಮರ ಐಕ್ಯತೆ ಈ ಹೋರಾಟದ ಮೂಲಕ ವ್ಯಕ್ತವಾಗುತ್ತದೆ. ಸುಮಾರು ತೊಂಭತ್ತು ಸಾವಿರ ಸೈನಿಕರು ಹೋರಾಟಕ್ಕೆ ಸಜ್ಜಾಗುತ್ತಾರೆ. ಈ ಹೋರಾಟದ ಮುಂಚೂಣಿಯಲ್ಲಿ ಅನೇಕ ಮುಸ್ಲಿಂ ನಾಯಕರಿದ್ದರು. ವಲಿದಾದ್ ಖಾನ್, ಅಫಸರ್ ಯಾರ್ ಖಾನ್, ಸುಫದರ್ ಯಾರ್ ಖಾನ್, ಮಿರ್ಝಾ ಮಹರುಕ್ ಬೇಗ್, ಅಖ್ತರ್ ಖಾನ್, ಶೇಖ್ ಗುಲಾಮ್ ಯಹ್ಯಾ, ತುರಾಬ್ ಅಲಿ ಖಾನ್, ಅಝೀಮುಲ್ಲಾ, ಮೌಲಾನ ಲಿಯಾಕತ್ ಅಲಿ, ಫಿರೋಝ್ ಶಾಹ್, ಪೀರ್ ಅಲಿ, ಸರ್ ಸಯ್ಯದ್ ಅಹ್ಮದ್ ಖಾನ್ ಇನ್ನೂ ಮುಂತಾದವರು 1857 ರ ದಂಗೆಯ ಮುಂದಾಳತ್ವವನ್ನು ವಹಿಸಿ ಬ್ರಿಟಿಷರ ಕೋಪಕ್ಕೆ ತುತ್ತಾಗಿ ಚಿತ್ರಹಿಂಸೆ ಅನುಭವಿಸಿ ಹುತಾತ್ಮರಾಗಿದ್ದಾರೆ.
ಗಾಂಧೀಜಿಯವರು ಅಸಹಕಾರ ಚಳುವಳಿಗೆ ಕರೆಕೊಟ್ಟಾಗ ಮುಸ್ಲಿಮರು ಸಕಾರಾತ್ಮಕವಾಗಿ ಪ್ರತಿಕ್ರಯಿಸಿದರು. ಅನೇಕರು ತಮ್ಮ ಸರ್ಕಾರಿ ಹುದ್ದೆಯನ್ನು ತ್ಯಜಿಸಿದರು. ನಿಸಾರ್ ಅಹ್ಮದ್ ಖಾನ್ ಎನ್ನುವವರು ಸರ್ಕಾರಿ ಹುದ್ದೆಯನ್ನು ತ್ಯಜಿಸಿದ ಪ್ರಥಮ ಸಿವಿಲ್ ಸರ್ವಿಸ್ ಅಧಿಕಾರಿಯಾಗಿದ್ದರು. ಇವರ ಜೊತೆಗೆ ಮಝ್ಹರುಲ್ ಹಕ್, ಡಾ. ಗುಲಾಮ್ ಇಮಾಮ್, ಶಾಹ್ ಗಫೂರ್, ಮೌಲಾನ ಅಬ್ದುಲ್ ಬಾರಿ, ರಹೀಮ್ ಬಕ್ಷ್, ಮೌಲನ ಶಾಹ್ ಮುಹಮ್ಮದ್ ಝುಬ್ಯೆರ್, ಹಸೇನ್ ಅಲಿ, ತಸದ್ದೂಕ್ ಅಹ್ದದ್ ಖಾನ್ ಶೇರ್ವಾನಿ ಮೊದಲಾನ ಅನೇಕರು ಇದೇ ದಾರಿಯನ್ನು ಅನುಸರಿಸಿ ಗಾಂಧೀಜಿಯವರು ಕರೆಕೊಟ್ಟ ಅಸಹಕಾರ ಚಳುವಳಿಯ ಬೆನ್ನೆಲುಬಾಗಿ ನಿಂತರು.
ಮೌಲಾನ ಮಹಮ್ಮದ್ ಅಲಿ ಮತ್ತು ಶೌಕತ್ ಅಲಿಯವರು ಈ ದೇಶದ ಸ್ವಾತಂತ್ರ್ಯದ ಕನಸು ಕಂಡಿದ್ದ ಅಪ್ರತಿಮ ಹೋರಾಟಗಾರರು. ಹಿಂದೂ ಮುಸ್ಲಿಂ ಐಕ್ಯತೆಯ ಪ್ರತಿಪಾದಕರಾಗಿದ್ದ ಅಲಿ ಸಹೋದರರು, ಗಾಂಧೀಜಿಯವರ ಅಹಿಂಸೆ, ಅಸಹಕಾರ ಚಳುವಳಿಯ ಸಮರ್ಥ ಪ್ರತಿಪಾದಕರಾಗಿದ್ದರು. ತಮ್ಮ ಆವೇಶ ಭರಿತವಾದ ಮಾತುಗಳ ಮೂಲಕ ಸಭಿಕರಲ್ಲಿ ವಿದ್ಯುತ್ ಪ್ರವಹಿಸುವಂತೆ ಮಾಡುತ್ತಿದ್ದರು. ದುಂಡುಮೇಜಿನ ಮಾತುಕತೆಯ ಸಂಧರ್ಭದಲ್ಲಿ ಬ್ರಿಟಿಷ್ ಪ್ರಧಾನಿ ಇರ್‍ವಿನ್‍ರ ಆಮಂತ್ರಣದ ಮೇರೆಗೆ ಲಂಡನ್‍ಗೆ ತೆರಳಿದ್ದ ಮಹಮ್ಮದಲಿ ಅಲ್ಲಿನ ಸಭೆಯಲ್ಲಿ ಗುಡುಗಿದರು. ಸ್ವತಂತ್ರವಾಗಿರುವ ವಿದೇಶದಲ್ಲಿ ನಾನು ಸಾಯಲು ಆದ್ಯತೆ ನೀಡುತ್ತೇನೆ. ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಡಿ, ಇಲ್ಲದಿದ್ದರೆ ನನ್ನ ದಫನಕ್ಕೆ ಇಲ್ಲಿ ಜಾಗ ಕೊಡಿ ಎಂದಿದ್ದರು.
ಗಡಿನಾಡ ಗಾಂಧಿಯೆಂದು ಹೆಸರಾಗಿದ್ದ ಖಾನ್ ಅಬ್ದುಲ್ ಗಫ್ಫಾರ್ ಖಾನ್ ಪಠಾಣ ಜನಾಂಗದ ಅಜ್ಞಾನ, ಹಿಂದುಳಿಯುವಿಕೆಯನ್ನು ದೂರಮಾಡಲು ಮತ್ತು ಸಮಾಜ ಸೇವೆಗೆ ಜೀವನವನ್ನು ಮುಡುಪಾಗಿಸಿದವರು. ಇವರು ಖಿಲಾಫತ್ ಚಳುವಳಿ ಮತ್ತು ಅಸಹಕಾರ ಚಳುವಳಿಯ ಮುಂಚೂಣಿಯಲ್ಲಿದ್ದರು. ಇವರು ಬ್ರಿಟಿಷರ ವಿರುದ್ಧ ಒಂದು ಲಕ್ಷಕ್ಕೂ ಹೆಚ್ಚು ‘ಖುದಾಯಿ ಕಿದ್ಮತ್ಗಾರ್’ (ದೇವರ ಸೇನೆ) ಯನ್ನು ಸಂಘಟಿಸಿದ್ದರು. ದೇಶ ವಿಭಜನೆಯನ್ನು ಬಲವಾಗಿ ಖಂಡಿಸಿದ್ದರು. ಇವರ ನಿಧನದ ನಂತರ ಭಾರತ ಸರ್ಕಾರ ಮರಣೋತ್ತರ ‘ಭಾರತ್ನ ರತ್ನ’ ಪ್ರಶಸ್ತಿ ನಿಡಿ ಗೌರವಿಸಿದೆ.

ಮೌಲಾನ ಅಬುಲ್ ಕಲಮ್ ಅಝಾದ್ ರವರು ತಮ್ಮ ಲೇಖನ ಮತ್ತು ಭಾಷಣದಲ್ಲಿ ಜನರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವಂತೆ ಪ್ರೇರಿಪಿಸುತ್ತಿದ್ದರು. ಬಿಹಾರದ ಜಯಪ್ರಕಾಶ್ ನಾರಾಯಣ್ ಸಹ ಅಝಾದರಿಂದ ಪ್ರೇರಿತರಾಗಿದ್ದರು. ಅಝಾದರು ದೇಶ ವಿಭಜನೆಯನ್ನು ಕಟು ಶಬ್ದಗಳಲ್ಲಿ ವಿರೋಧಿಸಿದ್ದರು. ಅಂತಿಮ ಕ್ಷಣದ ವರೆಗೆ ದೇಶ ವಿಭಜನೆಯ ಯೋಜನೆಯನ್ನು ಪ್ರತಿರೋಧಿಸಿದರು.
ಅಶ್ಫಾಖ್ ಉಲ್ಲಾಖಾನ್‍ನಂತ ದೇಶಪ್ರೇಮಿಯ ಬಗ್ಗೆ ಕೆಲವು ವಿಚಾರಗಳನ್ನು ಬರೆಯಲು ಹೆಮ್ಮೆ ಎನಿಸುತ್ತದೆ. ಅಶ್ಫಾಖ್ ತಮ್ಮ ದೇಶ ಮತ್ತು ದೇಶವಾಸಿಗಳನ್ನು ಅಗಾಧವಾಗಿ ಪ್ರೀತಿಸುತ್ತಿದ್ದರು. ಹಿಂದೂ ಮುಸ್ಲಿಮರು ಯಾವಾಗಲೂ ಈ ದೇಶದಲ್ಲಿ ಐಕ್ಯತೆ, ಏಕತೆಯಿಂದ ಜೀವಿಸಬೇಕೆಂದು ಅವರ ಅಭಿಲಾಷೆಯಾಗಿತ್ತು. ಅವರು ಅದೇ ಪ್ರಯತ್ನದಲ್ಲಿ ಮುಂದುವರೆದವರು. ಲಕ್ನೋದ ಸೆಷನ್ ನ್ಯಾಯಾಲಯದಲ್ಲಿ ಅಶ್ಫಾಖ್ ಮೊಕದ್ದಮೆಯ ತೀರ್ಪಿನ ಆ ದಿನದಂದು ತ್ಯಾಗ, ಬಲಿದಾನದ ಕೇಸರಿ ಬಣ್ಣದ ವಸ್ತ್ರ ತೊಟ್ಟು ಬಹಳ ಹರ್ಷ ಉಲ್ಲಾಸದಿಂದ ನ್ಯಾಯಾಲಯವನ್ನು ಪ್ರವೇಶಿಸಿದ್ದರು. ಆದರೆ ಅಂದು ನ್ಯಾಯಾಲಯದಲ್ಲಿ ಅಶ್ಫಾಖ್ ಉಲ್ಲಾಖಾನ್ ಅವರಿಗೆ ಗಲ್ಲಿಗೇರಿಸುವ ಶಿಕ್ಷೆ ನೀಡಲಾಯಿತು. ಇದರಿಂದ ಧೃತಿಗೆಡದ ಅಶ್ಫಾಖ್ ತನ್ನ ತಾಯಿಗೆ ಬರೆಯುವ ಪತ್ರದಲ್ಲಿ, ತಮ್ಮ ಮಗ ವೀರ ಮರಣ ಹೊಂದುತ್ತಾನೆಂದು ತಾವು ಹೆಮ್ಮೆ ಪಡಬೇಕು. ಅಕಸ್ಮಾತ್ ತಮಗೆ ಸಾವನ್ನು ಎದುರಿಸುವ ಸಮಯ ಬಂದರೆ ತಾವು ಸಹ ಓರ್ವ ವೀರ ಮಾತೆ ಎಂದು ಸಾಬೀತು ಪಡಿಸ ಬೇಕಾಗುತ್ತದೆ. ತಾವು ತನ್ನ ಬಲಿದಾನದಿಂದ ಬೇಸರಿಸುವ ಅಗತ್ಯವಿಲ್ಲ. ಏಕೆಂದರೆ ಇದು ನಮ್ಮ ದೇಶಕ್ಕಾಗಿ ನಾವು ಮಾಡಿದ ಕರ್ತವ್ಯವಾಗಿದೆ ಎಂದು ಉಲ್ಲೇಖಿಸುತ್ತಾರೆ. ಭಾರತೀಯ ಸಹೋದರರಿಗೆ ಕರೆ ಕೊಡುತ್ತಾ, ತಾವು ಯಾರೇ ಇರಲಿ, ಯಾವುದೆ ಧರ್ಮ, ಸಂಪ್ರದಾಯದ ಅನುಯಾಯಿಗಳಾಗಿರಲಿ, ಅದರೆ ನೀವೆಲ್ಲರೂ ದೇಶದ ಹಿತಕ್ಕಾಗಿ ಒಂದಾಗಿ ನಿಮ್ಮದೇ ಆದ ಕೊಡುಗೆ ನೀಡಿರಿ ಎನ್ನುತ್ತಾರೆ. ಕವಿಯಾಗಿದ್ದ ಅಶ್ಫಾಖ್ ಬರೆದ ಒಂದು ಕವನವನ್ನು ಗಮನಿಸಬಹುದು.
ಏಳಿ ಎದ್ದೇಳಿ ಮಲಗುವಿರಾ
ನಿದ್ರೆಯಲಿ
ಕೇಳಿ ಬೆಳಗಿನ ಮಸೀದಿಯ ಬಾಂಗ್‍ನ ಕರೆ
ಶಂಖ, ಘಂಟೆಗಳ ನಾದ ನಿನಾದ
ಮುನ್ನುಗ್ಗಿ ಯಾರೋ ಕರೆಯುತಿಹರಲ್ಲಿ
ನಿಮ್ಮ ಗುರಿಯ ಗುರುತು ತೋರಿ ತೋರಿ.

ಇಷ್ಟು ಮಾತ್ರವಲ್ಲದೆ ಭಾರತದ ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ಮುಸ್ಲಿಂ ಮಹಿಳೆಯರು ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದಾರೆ. ಬಹಳಷ್ಟು ತ್ಯಾಗ ಬಲಿದಾನದ ಪ್ರತೀಕರಾಗಿದ್ದಾರೆ. ಬೇಗಂ ಹಝ್ರತ್ ಮಹಲ್‍ರ ಸ್ವಾಭಿಮಾನ, ತ್ಯಾಗ, ದೇಶಪ್ರೇಮವನ್ನು ಮರೆಯಲು ಸಾಧ್ಯವಿಲ್ಲ. ದೇಶದ ಬಗ್ಗೆ ಅವರಿಗಿದ್ದ ಉತ್ಕಟ ಪ್ರೇಮ, ಬ್ರಿಟಿಷರ ವಿರುದ್ಧ ಹೋರಾಡುವ ಅಚಲ ನಿರ್ಧಾರದಿಂದಾಗಿ ಅವಧ್‍ನ ಪ್ರಜೆಗಳು ಅವರನ್ನು ಪ್ರೀತಿಸುತ್ತಿದ್ದರು. ನೂರೈವತ್ತು ಲಕ್ಷ ಸೈನಿಕರು ಬ್ರಿಟಿಷರ ವಿರುದ್ಧ ಒಂದಾಗಿದ್ದರು.

ಮೌಲಾನಾ ಮಹಮ್ಮದ್ ಅಲಿ ಮತ್ತು ಶೌಕತ್ ಅಲಿ ಅವರ ತಾಯಿ ಬೀ ಅಮ್ಮ ಆಬದಿ ಬೇಗಮ್ ಅವರು ಉತ್ಕಟವಾದ ದೇಶಪ್ರೇಮವನ್ನು ಹೊಂದಿದ್ದರು. ಅವರು ತಮ್ಮ ಎರಡು ಮಕ್ಕಳನ್ನು ದೇಶ ಸೇವೆಗೆ ಧುಮುಕಲು ಪ್ರೇರೆಪಿಸಿದ್ದರು. ಆ ತಾಯಿ ತನ್ನೆರೆಡು ಗಂಡು ಮಕ್ಕಳನ್ನು ಉದ್ದೇಶಿಸಿ “ನನ್ನ ಮಕ್ಕಳು ಇಸ್ಲಾಮಿನ ಮತ್ತು ದೇಶದ ಗೌರವಕ್ಕೆ ಧಕ್ಕೆ ತರುವ ಯಾವುದೇ ಕೆಲಸ ಮಡಲು ಮುಂದಾದರೆ ಅವರ ಕತ್ತು ಹಿಸಿಕು ಕೊಲ್ಲುವಷ್ಟು ಈ ರಟ್ಟೆಗೆ ಶಕ್ತಿಯಿದೆ” ಎನ್ನುತ್ತಿದ್ದರು.
ಭಾರತದ ರಾಷ್ಟ್ರಿಯ ಧ್ವಜವನ್ನು ವಿನ್ಯಾಸಗೊಳಿಸಿದವರು ಸುರಯ್ಯ ತಾಯಬ್ಜಿ ಎನ್ನುವುದನ್ನು ಮರೆಯಲು ಸಾಧ್ಯವಿಲ್ಲ. ಆದರೆ ಇಂದು ಅದು ಯಾರ ಸ್ಮೃತಿ ಪಟಲದಲ್ಲೂ ಉಳಿದಿಲ್ಲ. ಧ್ವಜಕ್ಕೆ ಕೇಸರಿ, ಬಿಳಿ, ಹಸಿರು ಬಣ್ಣವನ್ನು ವಿನ್ಯಾಸಗೊಳಿಸಿದ ಸುರಯ್ಯ ಇದು ನಮ್ಮ ದೇಶ ಪ್ರೇಮದ ಸಂಕೇತ ಎಂದು ಹೇಳಿದ್ದರು.

ಇವರಲ್ಲದೆ ನಿಶಾತುನ್ನಿಸಾ ಬೇಗಂ, ಅಮ್ಜದಿ ಬೇಗಂ, ಹಬೀಬಾ ರಹೀಮಿ, ಅಸ್ಫರಿ ಬೇಗಂ, ಪಂಜಾಬಿನ ಸಲಾಂಬೀಬಿ, ಕರ್ನಾಟಕದ ಹಾವೇರಿ ಜಿಲ್ಲೆಯ ಸಕೀನಾಬಿ ಲಾಡಸಾಬ ಸೂರಣಗಿ ಮತ್ತು ಪೀರ್ ಮಾ ಕಾಲೇ ಸಾಹೇಬ ನದಾಫ ಇನ್ನೂ ಅನೇಕ ಮಹಿಳೆಯರು ಬ್ರಿಟಿಷ್ ಸೈನ್ಯಕ್ಕೆ ಎದುರಾಗಿ ನಿಂತು ಹೋರಾಡಿದ್ದಾರೆ. ತ್ಯಾಗ ಬಲಿದಾನವನ್ನು ನಿಡಿದ್ದಾರೆ.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಇನ್ನೂ ಅನೇಕ ಮುಸ್ಲಿಮರು ಕೆಚ್ಚೆದೆಯ ಹೋರಾಟವನ್ನು ಮಾಡಿದ್ದಾರೆ. ಆದರೆ ಒಂದೆರೆಡು ಹೆಸರುಗಳು ನಮ್ಮ ಮುಂದಿದೆ ಬಿಟ್ಟರೆ ಉಳಿದವರ ಸಾಧನೆಯನ್ನು ಅರಿತು ಕೊಳ್ಳುವಲ್ಲಿ ನಾವು ವಿಪಲರಾಗುತ್ತಿದ್ದೇವೆ. ಆದರೆ ಆ ಧೀರರ ಹೆಸರುಗಳನ್ನು ಇತಿಹಾಸದಿಂದ ಕೆದಕಿ ಜನರ ಮುಂದಿಡುವ ಅವಶ್ಯಕತೆ ಇದೆ. ಪ್ರಸ್ತುತ ಕಾಲಘಟ್ಟದಲ್ಲಿ ಧರ್ಮದ ಕಾರಣಕ್ಕೆ ದೇಶಭಕ್ತಿಯನ್ನು ತೋರ್ಪಡಿಸಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿರುವಾಗ, ಒಂದು ಧರ್ಮದವರು ದೇಶ ಭಕ್ತರು, ಇನ್ನೊಂದು ಧರ್ಮದವರು ದೇಶ ಭಕ್ತರಲ್ಲ ಎಂಬ ವಿಭಜನೆಯು ವಿಜ್ರಂಭಿಸಿ ಗುಮಾನಿ ಕಣ್ಣುಗಳಿಂದ ನೋಡುವಾಗ, ಈ ರೀತಿಯ ಅಸಹನೆ, ಅನುಮಾನಗಳನ್ನು ಬಿಟ್ಟು ದೇಶದ ನಿಜವಾದ ಇತಿಹಾಸವನ್ನು ಓದುವ, ತಿಳಿದುಕೊಳ್ಳುವ, ಇತರರಿಗೆ ತಿಳಿಸುವ ಅತ್ಯಂತ ತುರ್ತಾದ ಅವಶ್ಯಕತೆ ಇದೆ ಎಂದೆನಿಸುತ್ತದೆ.
ಪರಾಮರ್ಶನ ಗ್ರಂಥಗಳು

  1. ಆಸಿಫ್ ಅಲಿ ಇಂಜಿನಿಯರ್, ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಮುಸ್ಲಿಮರು, ಶಾಂತಿ ಪ್ರಕಾಶನ, ಮಂಗಳೂರು.
  2. ಕಲೀಂ ಬಾಷ ಜೆ. (ಅನು), ಭಾರತದ ಸ್ವಾತಂತ್ರ್ಯ ಹುತಾತ್ಮ ಕವಿ ಅಶ್ಫಾಖ್ ಉಲ್ಲಾಖಾನ್, ನವಕರ್ನಾಟಕ ಪ್ರಕಾಶನ, ಬೆಂಗಳೂರು.
  3. ಮುನೀರ್ ಕಾಟಿಪಳ್ಳ. ಚೇತನಾ ತೀರ್ಥಹಳ್ಳಿ (ಸಂ), ಭಾರತದ ಮುಸ್ಲಿಮರು ಬೆಳಕು ಬೀರುವ ಭಾಷಣಗಳು, ಕ್ರಿಯಾ ಪ್ರಕಾಶನ, ಬೆಂಗಳೂರು.

LEAVE A REPLY

Please enter your comment!
Please enter your name here