(ಒಂದು ಸಂಕ್ಷೀಪ್ತ ಓದು)

  • ಶಿಕ್ರಾನ್ ಶರ್ಫುದ್ದೀನ್ ಎಂ.
    +91 8197789965
    ಪಾಂಡೇಶ್ವರ, ಮಂಗಳೂರು

“ಈ ದೇಶದ ಯೋಗಕ್ಷೇಮ, ಈ ದೇಶದ ಮರ್ಯಾದೆಯಲ್ಲಿ ಅಭಿಮಾನ ಬದ್ಧನಾದ ಯಾವನೊಬ್ಬನೂ ಫ್ರೆಂಚ್ ಸರಕಾರ, ಗತಿಸಿದ ಟೀಪು ಸುಲ್ತಾನ, ಇಬ್ಬರೂ ಕಲೆತು ಕೈಕೊಂಡ ಸಾಹಸಪೂರಿತವೂ, ಪ್ರಚಂಡವೂ ಆದ ದಂಡಯಾತ್ರೆಯ ಯೋಜನೆಯನ್ನು, ಉದಾಸೀನ ಭಾವದಿಂದ ವಿಚಾರ ಮಾಡಲಾಗುವುದು. ಭಾರತದಲ್ಲಿ ಬ್ರಿಟಿಷರ ಹೆಸರನ್ನು ಬೇರುಸಹಿತ ಕಿತ್ತು ಹಾಕುವುದೇ ಆ ಭಯಂಕರ ಯೋಜನೆಯ ಉದ್ದೇಶವಾಗಿತ್ತಲ್ಲದೆ ಮತ್ತೇನಲ್ಲ.

ನಮ್ಮ ಅದೃಷ್ಟ; ಅವರ ಯೋಜನೆಗಳೆಲ್ಲ ನಮಗೆ ಗೊತ್ತಾದುವು; ಅವು ಫಲಿಸುವುದಕ್ಕೆ ಮೊದಲೇ ಅವುಗಳನ್ನೆಲ್ಲ ಎದುರಿಸಿ, ನಿವಾರಿಸಿದ್ದಾಯಿತು. ಇಲ್ಲವಾಗಿದ್ದರೆ ಭಾರತದಲ್ಲಿ ಈ ಕ್ಷಣ ಭದ್ರತೆ, ಸುಖ, ಶಾಂತಿಯ ಚಿತ್ರವಿರುತ್ತಿರಲಿಲ್ಲ; ಪ್ರಾಣ ಭಯ, ಸರ್ವನಾಶ, ಪ್ರಳಯ ಚಿತ್ರ ಕಾಣ ಬರುತ್ತಿತ್ತು. ನೆಪೋಲಿಯನ್ ಬೊನಾಪಾರ್ಟಿ ಕೈರೋ ನಗರ ಮುಟ್ಟುವುದಕ್ಕೆ ಮುನ್ನ, ಸೂಯೆಜ್ ಬಳಿ ಅವರಿಗೆ ಸಾಕಷ್ಟು ಸೌಕರ್ಯ ದೊರೆತಿದ್ದರೆ, ತನ್ನ ಸೈನ್ಯದ, ಆರಿಸಿದ ಹತ್ತು ಸಾವಿರ ಯೋಧರನ್ನು ಮಲಬಾರ ಕರಾವಳಿಗೆ ಕಳುಹಿಸುತ್ತಿದ್ದ; ಅವರೆಲ್ಲ ಟೀಪು ಸುಲ್ತಾನನ ಕೈಗೆ ಸಿಗುತ್ತಿದ್ದರು. ಅಲೆಗ್ಜಾಮ್ಡ್ರಿಯದಲ್ಲಿ ಫ್ರೆಂಚರ ಸೈನ್ಯ ಬಂದಿಳಿಯಿತೆಂಬ ಸುದ್ದಿ ನಮಗೆ ಬಂದ ಕೂಡಲೇ ಈ ಕೆಲಸವಾಗಿ ಹೋಗುತಿತ್ತು”
(War In Mysore. P : 1800)
ಈ ರೀತಿಯಾಗಿ ಕರ್ನಲ್ ಎಂ. ವುಡ್ ತಾನು ೧೮೦೦ರಲ್ಲಿ ಬರೆದ “ಮೈಸೂರಿನಲ್ಲಿ ಸಂಗ್ರಾಮ” ಎಂಬ
ಪುಸ್ತಕದಲ್ಲಿ ಹೇಳಿದ್ದರು.

ಭಾರತ ಮಾತೆ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಟಿಪ್ಪು ಸುಲ್ತಾನ್ ರ ಹೆಸರು ಅಮರವಾಗಿದೆ. ಟಿಪ್ಪು ಅವರು ಬ್ರಿಟಿಷರ ವಿರುದ್ಧ ಯಾವುದೇ ರೀತಿಯ ರಾಜಿಯಿಲ್ಲದೆ ಯುದ್ಧಕ್ಕೆ ನಾಂದಿ ಹಾಡಿ, ಹೋರಾಡುತ್ತ ರಣರಂಗದಲ್ಲೇ ಕೊನೆಯುಸಿರೆಳೆದು ಹುತಾತ್ಮರಾದರು. ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ‘ಮೈಸೂರು ಹುಲಿ’ ಖ್ಯಾತಿಯ ಸುಲ್ತಾನರ ಪ್ರಾರ್ಥಿವ ಶರೀರವನ್ನು ಕಂಡು ಬ್ರಿಟಿಷ್ ಅಧಿಕಾರಿಯೊಬ್ಬರು “ಇಂದು ಈ ದೇಶ ನಮ್ಮದಾಯಿತು” ಎಂದು ಉದ್ಗಾರವೆತ್ತಿರುವುದು, ಸುಲ್ತಾನರ ಕೆಚ್ಛೆದೆಯ ಹೋರಾಟಕ್ಕೆ ಸಾಕ್ಷಿಯಾಗಿದೆ.

ಆಂಗ್ಲ ಇತಿಹಾಸಕಾರರು ಟಿಪ್ಪುವಿನ ಪ್ರತಿರೋಧಕ್ಕೆ ಹೆದರಿ ನೈಜತೆ-ವಾಸ್ತವಿಕತೆಯನ್ನು ಮರೆಮಾಚಲು ವಿಫಲ ಯತ್ನ ಪಟ್ಟರು. ಕಾರಣ, ಅವರೇ ಹೇಳುವಂತೆ ಟಿಪ್ಪುವಿನ ಚರಿತ್ರೆಯನ್ನು ಇದ್ದ ಹಾಗೆ ಪ್ರಸ್ತುತ ಪಡಿಸಿದರೆ ಭಾರತದಲ್ಲಿ ಹುಟ್ಟುವ ಮಕ್ಕಳು ಟಿಪ್ಪುವಿನಿಂದ ಪ್ರಭಾವಿತರಾಗಿ ಭವಿಷ್ಯದಲ್ಲಿ ಟಿಪ್ಪುವಿನಂತಹ ಧೀರ ಹೋರಾಟಗಾರರಾಗಬಹುದೆಂದು! ಇದಕ್ಕೆ ತದ್ವಿರುದ್ಧವಾಗಿ ಸುಲ್ತಾನರ ಅಮರ ವೀರಗಾಥೆಯನ್ನು ಆಧರಿಸಿ ವಿವಿಧ ರೀತಿಯ ಸಾಹಿತ್ಯವನ್ನು ನಮ್ಮಲ್ಲಿ ರಚಿಸಲಾಯಿತು; ದೂರದರ್ಶನ ಧಾರಾವಾಹಿಯೊಂದನ್ನೂ ನಿರ್ಮಿಸಲಾಯಿತು. ಅಲ್ಲದೆ, ಇಂದು ನಮ್ಮಲ್ಲಿ ಟಿಪ್ಪುವಿನ ಜೀವನ ಚರಿತ್ರೆಯನ್ನು ಆಧರಿಸಿ ಹಲವಾರು ರಂಗ ನಾಟಕಗಳು ರಚಿತಗೊಂಡಿವೆ! ಅವುಗಳಲ್ಲಿ ದಿವಂಗತ ಗಿರೀಶ್ ಕಾರ್ನಾಡರ ‘ಟಿಪ್ಪು ಸುಲ್ತಾನ್ ಕಂಡ ಕನಸುಗಳು’ ಜಗದ್ಪ್ರಸಿದ್ಧಿಯನ್ನು ಪಡೆಯಿತು. ಕಾರ್ನಾಡರ ಈ ಮೇರುಕೃತಿಯ ಪ್ರತಿಯೊಂದು ಸಂವಾದವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಟಿಪ್ಪುರವರ ಆಡಳಿತ ಸುಧಾರಣೆ, ಪರಧರ್ಮ ಗೌರವ-ಸಹಿಷ್ಣುತೆ, ದೇಶಾಭಿಮಾನ ಇತ್ಯಾದಿ ಕಣ್ಣು ಕಟ್ಟುವಂತೆ ಕಟ್ಟಲಾಗಿದೆ ಎನ್ನಬಹುದು.

ಮೊದಲನೆಯದಾಗಿ, ಪ್ರಥಮ ಅಂಕದಲ್ಲೇ ಕಾಲಿಸ್ ಮೆಕೆಂಝಿ, ಭಾರತೀಯ ಇತಿಹಾಸಕಾರ ಹುಸೈನ್ ಅಲಿ
ಕಿರಿಮಾನಿಯ ಮನೆಗೆ ಭೇಟಿ ನೀಡಿ ಟಿಪ್ಪು ಕುರಿತು ಚರ್ಚಿಸುವುದುಂಟು. ಇದರಲ್ಲಿ ಆಂಗ್ಲರ ಮತ್ತು ಭಾರತೀಯರ ದೃಷ್ಟಿಕೋನದಲ್ಲಿ ಟಿಪ್ಪುವಿನ ಚಿತ್ರಣವನ್ನು ಎತ್ತಿ ತೋರಿಸುತ್ತಿದೆ.

ಮೆಕೆಂಝಿ : (ಪ್ರತಿವಾದಿಯಂತೆ) ನಿಮ್ಮ ಸುಲ್ತಾನರ ತಿಳಿಗೇಡಿತನವೂ ಕಡಿಮೆಯಿದ್ದಿದ್ದಿಲ್ಲ. ಅವರ ಪಾಡಿಗೆ
ಅವರಿದ್ದಿದ್ದರೆ ನಾವು ಯಾಕೆ ಅವರ ಗೊಡವೆಗೆ ಹೋಗುತ್ತಿದ್ದೆವು?
ಕಿರಿಮಾನಿ : ಇದೇ! ಇದೇ! ನಿಮ್ಮ ಇತಿಹಾಸ ಸಿದ್ಧವಾಗಿ ಬಿಟ್ಟಿದೆ. ಈಗ ನನ್ನ ರಗಳೆ ಕೇಳಿ ನಿಮಗೇನು
ಪ್ರಯೋಜನ? 1799 ರಲ್ಲೇ ಹಲವಾರು ಬ್ರಿಟಿಷ್ ಇತಿಹಾಸಕಾರರು ಉದ್ದುದ್ದ ಪುಸ್ತಕ (ತಪ್ಪು
ಮಾಹಿತಿಯಿದ್ದ)ಗಳನ್ನು ಪ್ರಕಟಿಸಿದರು. ಇನ್ನೂ ಅದನ್ನು ಯಾರಿಂದಲೂ ಸರಿಪಡಿಸಲು ಸಾಧ್ಯವಾಗಲಿಲ್ಲ.

ಮುಂದೆ ಅದೇ ನಾಟಕದಲ್ಲಿ…

ಕಿರಿಮಾನಿ : ನನ್ನ ಸಂಸ್ಕೃತಿಯ ಪರವಾಗಿ ಮಾತಾಡೋ ಹಕ್ಕು ನನಗೆಲ್ಲಿದೆ? ಅದನ್ನು ಎಂದೋ
ಕಳೆದುಕೊಂಡು ಬಿಟ್ಟಿದ್ದೇನೆ.

ನಿಜವಾಗಿ, ಇಂದು ನಮ್ಮ ಕಲೆ-ಸಂಸ್ಕೃತಿಯ ಪರವಾಗಿ ಮಾತನಾಡುವ ಹಕ್ಕು ನಮಗೆಲ್ಲಿದೆ?
ಕನ್ನಡ ಪಂಡೀತ ಆಚಾರ್ಯ ಕವಿತಾಕೃಷ್ಣಾರವರ ನಾಟಕ “ಕನ್ನಡ ಹುಲಿ ಟಿಪ್ಪು ಸುಲ್ತಾನ್”ದ ದೃಶ್ಯ
ಎರಡರಲ್ಲಿ ದೀವಾನ್ ಪೂರ್ಣಯ್ಯ ಮತ್ತು ಸುಲ್ತಾನರ ಸಂಭಾಷಣೆಯನ್ನು ವಿಮರ್ಶಿಸಿದರೆ ಟಿಪ್ಪುವಿಗೆ
ಅಧಿಕಾರದ ಮೋಹವಿರಲಿಲ್ಲವೆಂದು ಒಡೆದೆದ್ದು ಕಾಣ ಸಿಗುತ್ತದೆ.

ಪೂರ್ಣಯ್ಯ : ಶಕ್ತಿ ಇರುವ ತನಕ ಬದುಕಿನಲ್ಲಿ ಹೋರಾಟ ಮಾಡಬೇಕಾದುದು ಅನಿವಾರ್ಯ. ನೀವು
ಪಟ್ಟವೇರಿ, ಬ್ರಿಟಿಷರನ್ನು ಬಗ್ಗು ಬದಿಯ ಬೇಕೆಂಬುವುದೇ ನಿಮ್ಮ ತಂದೆಯವರ ಹೆಬ್ಬಯಕೆ. ಅವರ
ಮಹದಂಬಲ ಈಡೇರಿಸಲು ಈ ಸಿಂಹಾಸನವನ್ನು ನೀವು ಏರಲೇಬೇಕು.
ಟಿಪ್ಪು : ದಿವಾನರೇ…
ಪೂರ್ಣಯ್ಯ : ಹೆಚ್ಚು ಮಾತು ಬೇಕಿಲ್ಲ. ನೀವು ಮೈಸೂರು ಹುಲಿ, ಪುರುಷ ಸಿಂಹ. ಕೆಚ್ಚಿನಿಂದ
ಮೆರೆದಾಡಬೇಕು. ಬ್ರಿಟಿಷರನ್ನು ಮಹಿಷಮಂಡಲದಿಂದ ಮಾತೃವಲ್ಲ, ಇಡೀ ಭಾರತದಿಂದಲೇ ಓಡಿಸಬೇಕು.
ಧರ್ಮ ಸಾಮ್ರಾಜ್ಯ ಸ್ಥಾಪಿಸಬೇಕು. ವೇದೋಪನಿಷತ್, ಕುರಾನ್ ಗಳನ್ನು ಅಧ್ಯಯನ ಮಾಡಿರುವ ತಮಗೆ
ಹೆಚ್ಚಾಗಿ ಹೇಳಬೇಕಾದುದೇನೂ ಇಲ್ಲ.
ಟಿಪ್ಪು : ಬೇಡ ಪೂರ್ಣಯ್ಯರವರೆ, ಧರ್ಮಸೂತ್ರಗಳನ್ನು ಹೇಳಿ, ನನ್ನನ್ನು ಈ ಸಿಂಹಾಸನಕ್ಕೆ ಬಂಧಿಸಬೇಡಿ.
ನನಗೆ ದೇಶ ಬೇಡ, ಕೋಶ ಬೇಡ, ಪದವಿ ಬೇಡ, ಪಟ್ಟ ಬೇಡ. ನನಗೆ ಅಲ್ಲಾಹನ ಸ್ಮರಣೆಯೊಂದೇ ಸಾಕು.

ಹಾಗೆಯೇ, ನೈಜ ಇತಿಹಾಸ ಪುಟಗಳಲ್ಲಿ ಕಣ್ಣು ತೆರೆದು ಇಣುಕಿದರೆ ಟಿಪ್ಪು ಸಾರಿದ ಯುದ್ಧಗಳು
DEFENCE ಗಾಗಿತ್ತು; ವಿನಃ OFFENCE ಗಾಗಿ ಅಲ್ಲ ಎಂದು ಇತಿಹಾಸವೇ ಸಾಕ್ಷಿವಹಿಸುತ್ತದೆ.

ಸುಲ್ತಾನರನ್ನು ಹತ್ಯೆಗೈದ ರಾತ್ರಿಡೀ ‘ಖುದಾದಾದ್’ ಸಾಮ್ರಾಜ್ಯದಲ್ಲಿ ಭಯಂಕರ ಲೂಟಿ, ಅತ್ಯಾಚಾರ,
ದೌರ್ಜನ್ಯ ನಡೆದಿತ್ತು. ಈ ಭಯಂಕರ ದುರ್ಘಟನೆ ಕಾರ್ನಾಡರ ನಾಟಕದಲ್ಲಿ ಕರಾಳವಾಗಿ ಚಿತ್ರಿಸಲಾಗಿದೆ.

ಮೆಕೆಂಝಿ : ಆ ರಾತ್ರಿ ನಮ್ಮ ಇಂಗ್ಲಿಷ್ ಸೈನಿಕರಿಗೇನಾಯ್ತೋ ಏನೋ. ಯುದ್ಧ ಗೆದ್ದ ಬಳಿಕ ಊರನ್ನು
ಲೂಟಿ ಮಾಡೋದು ಸರ್ವೇ ಸಾಮಾನ್ಯ. ಆದರೆ ಅಂಥಾ ಅನಾಚಾರ, ದೌರ್ಜನ್ಯ.

ಕಿರಮಾನಿ : ಅಂಗ್ರೇಜ್ ಸೈನಿಕರು ಮನೆ ಮನೆ ಹೊಕ್ಕರು, ಸುಳಿದರು, ಹೆಂಗಸರು ತೊಟ್ಟ ಆಭರಣವನ್ನು
ಬಿಡಲಿಲ್ಲ. ಕೊಲೆ, ಲೂಟಿ, ಬಲಾತ್ಕಾರ- ಸೈತಾನನ ಸಾಮ್ರಾಜ್ಯ!

ಟಿಪ್ಪುವಿನ ಹೆಸರು ಕೇಳಿದರೆ ಇಡೀ ಲೀಡನ್ ಬೀದಿ ನಡುಗುತ್ತಿತ್ತು. (ಲೀಡನ್ ಬೀದಿ: ಲಂಡನ್ ನಗರದಲ್ಲಿನ
ಅಂದಿನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಕೇಂದ್ರಸ್ಥಾನ) ಟಿಪ್ಪು ಬ್ರಿಟಿಷ್ ವಿರುದ್ಧ ಹೋರಾಡಿದ್ದು
ಒಂದೆರೆಡು ಕಾಳಗವಲ್ಲ; ಬರೋಬ್ಬರಿ ನಾಲ್ಕು ಭಯಂಕರ ಯುದ್ಧಗಳು! ಟಿಪ್ಪು ಬ್ರಿಟಿಷರನ್ನು
ಭಾರತದಿಂದ ಓಡಿಸಲು ಹೊರಡಲಿಲ್ಲ. ಬದಲಿಗೆ ಅವರು ಇಲ್ಲಿ ತಳವೂರಲು ಯತ್ನಿಸುತ್ತಿದ್ದ
ಸಂದರ್ಭದಲ್ಲಿ ಅವರಿಗೆ ಟಿಪ್ಪು ಪ್ರಬು ಪ್ರತಿರೋಧ ಒಡ್ಡಿದ್ದರು. ಬಹುಶಃ ಅವರು ಪಂಜಾಬಿನ ರಣಜಿತ್
ಸಿಂಗ್ ಮತ್ತು ಹೈದರಾಬಾದಿನ ನಿಝಮಿನ ಹಾಗೆ ಬ್ರಿಟಿಷ್ ಸಹಾಯಕ ಸೈನ್ಯ ಪದ್ಧತಿ ಒಪ್ಪಿಕೊಂಡು
ಅವರಿಗೆ ಅಡಿಯಾಳಾಗಿ 50 ವರುಷಗಳೇನು 100 ವರುಷ ಆಯಾಗಿ ಬದುಕಬಹುದಿತ್ತು. ಟಿಪ್ಪು ಸುಲ್ತಾನರ
ಈ ಸ್ವಭಾವವನ್ನು ಕವಿ ‘ಅಕ್ತರ್ ಶೆರಾನಿ’ ಬರೆಯುತ್ತಾರೆ:

“ಇಷ್ಕ್ ಓ ಆಜಾದಿ ಬಹಾರ್ ಎ ಝೆಸ್ಥ್ ಕಾ ಸಾಮಾನ್ ಹೈ
ಇಷ್ಕ್ ಮೇರಿ ಜಾನ್, ಆಜಾದಿ ಮೇರಾ ಈಮಾನ್ ಹೈ
ಇಷ್ಕ್ ಪರ್ ಕರ್ ದೂನ್ ಫಿದಾ ಅಪನೀ ಸಾರಿ ಜಿಂದಗಿ
ಲೇಕಿನ್ ಆಜಾದಿ ಪೆ ಮೇರಾ ಇಷ್ಕ್ ಭೀ ಕುರ್ಬಾನ್ ಹೈ”

ರಣರಂಗದಲ್ಲಿ ಕೊನೆಯುಸಿರೆಳೆಯುವಾಗಲೂ ಟಿಪ್ಪು ಹೇಳಿದ್ದು,

“ಗೀದಡ್ ಕಿ ಸದ್ ಸಾಲ ಜಿಂದಗಿ ಸೆ ಶೇರ್ ಕಿ ಏಕ್ ದೀನ್ ಕಿ ಜಿಂದಗಿ ಬೆಹ್ತರ್ ಹೈ”

ಟಿಪ್ಪು ಓರ್ವ ಕೆಚ್ಛೆದೆಯ ಯುದ್ಧಪ್ರೇಮಿಯಾಗಿರಲಿಲ್ಲ. ಬದಲಿಗೆ ದೇವಭಕ್ತಿ ಟಿಪ್ಪುವಿನ ನರನರಗಳಲ್ಲಿ
ರಕ್ತದೊಂದಿಗೆ ಪರಿಚಲಿಸುತ್ತಿತ್ತು. Unique trust held for God; The Real Master! ಸುಲ್ತಾನರು
ಮೈಸೂರನ್ನು ಕೇಂದ್ರೀಕರಿಸಿ ಸದಾಡಳಿತ ನಡೆಸುತ್ತಿದ್ದರು. ಕಟ್ಟಾ ಮುಸ್ಲಿಂ ದೇವಭಕ್ತರಾದ ಟಿಪ್ಪು,
ಎಂದೂ “ಖುದಾದಾದ್” ಸಾಮ್ರಾಜ್ಯವನ್ನು “ಇಸ್ಲಾಮಿಕ್ ಸ್ಟೇಟ್”ಯನ್ನಾಗಿ ಪರಿವರ್ತಿಸಲು
ಇಷ್ಟಪಡಲಿಲ್ಲ. ಯುದ್ಧಗಳಲ್ಲಿ ದೇವಾಲಯಗಳು, ಇಗರ್ಚಿಗಳು ಹಾನಿಗೊಂಡಾಗ ಅದರ
ಪುನರಭಿವೃದ್ಧಿಗಾಗಿ, ತನ್ನ ಖಜಾನೆಯಿಂದ ಧನ ಸಹಾಯ ಮಾಡಿ ಸಹಕರಿಸುತ್ತಿದ್ದರು. ಉದಾ:

  • ಮರಾಠರು ಕೆಡಹಿದ್ದ ಶ್ರೀರಂಗ ದೇವಾಲಯದ ಗೋಡೆಗಳನ್ನು ಟಿಪ್ಪು ಜೀರ್ಣೋದ್ಧಾರ ಮಾಡಿದರು.
  • ಮರಾಠರು ಶೃಂಗೇರಿಯ ಶಾರದಾ ಮಠವನ್ನು ಧ್ವಂಸಗೈದರೋ ಅಂತಃ ಮಠವನ್ನು ಮತ್ತೆ ಕಟ್ಟಿಸಿ
    ಕೊಟ್ಟಿದ್ದರು
  • ಟಿಪ್ಪುವಿನ ಅರಮನೆಯ ಕೆಲವೇ ಮೀಟರುಗಳ ದೂರದಲ್ಲಿ ಶ್ರೀರಂಗಸ್ವಾಮಿಯ ದೇವಾಲಯ ಈಗಲೂ
    ಮಿನುಗುತ್ತಿದೆ!
  • ಟಿಪ್ಪುವಿನ ಅರಮನೆಯ ಜನಾನಾ ಪಕ್ಕದಲ್ಲೇ ಗಂಗಾಧರೇಶ್ವರನ ಗುಡಿ ವಿಜೃಂಭಿಸುತ್ತಿದೆ!
  • ಶೃಂಗೇರಿಯ ಮಠವನ್ನು ಲೂಟಿ ಮಾಡಿ, ಸ್ವಾಮೀಜಿಗಳನ್ನು ಓಡಿಸಿದಾಗಿ ಟಿಪ್ಪು ಮಠವನ್ನು ಉದ್ಧಾರ
    ಮಾಡಿದರು ಮತ್ತು ಸ್ವಾಮೀಜಿಗಳನ್ನು ಗೌರವಿಸಿ, ಕಾಪಾಡಿದರು!

ಇತ್ಯಾದಿ ಇತ್ಯಾದಿ ಉದಾಹರಣೆಗಳು ಈ ಎರಡು ನಾಟಕಗಳಲ್ಲಿ ತೋರಿಸಿ ಟಿಪ್ಪುವಿನ ಪರಧರ್ಮ
ಸಹಿಷ್ಣುತೆ-ಗೌರವವನ್ನು ಪ್ರಶಂಶಿಸಲಾಗಿದೆ. ಬ್ರಿಟಿಷ್ ಅಧಿಕಾರಿ ಮ್ಯಾಥ್ಯೂಸ್ ಹೇಳಿದಂತೆ ಟಿಪ್ಪು ನಿಜಕ್ಕೂ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ಬ್ರಿಟಿಷ್
ಈಸ್ಟ್ ಇಂಡಿಯಾ ಕಂಪೆನಿಗೆ ಟಿಪ್ಪು ಒಬ್ಬರೇ ತಲೆನೋವಾಗಿ ಕಾಡಿದ್ದರು. ಕವಿತಾರವರ ನಾಟಕ ದೃಶ್ಯ
07ರಲ್ಲಿ,

ಕೊರ್ನವಾಲಿಸ್ : ಬಟ್, ನಮ್ ಕಂಪೆನಿ ತುಂಬಾ ದೊಡ್ಡದು ಇದ್ದಾನೆ. ಟಿಪ್ಪು ಅಂತಹ ವೀರನನ್ನು ನಾವು
ಸೋಲಿಸಬಾರದು.
ಮ್ಯಾಥ್ಯೂಸ್ : ಮತ್ತೆ…
ಕೊರ್ನವಾಲಿಸ್ : ಮತ್ತೆ… ಇಂಡಿಯಾದ ಜನರಿಂದಲೇ ಅವನನ್ನು ಸೋಲಿಸಬೇಕು.
ಮ್ಯಾಥ್ಯೂಸ್ : ಅದು ಹೇಗೆ ಆಗುತ್ತಾನೆ?
ಕೊರ್ನವಾಲಿಸ್ : ಹಿಯರ್, ಹಿಯರ್… ನಾವು ಟಿಪ್ಪುವಿನ ಮೇಲೆ ಯುದ್ಧ ಸಾರೋಣ. ಹೈದರಾಬಾದಿನ
ಕಿಂಗ್ ನಿಜಾಮ್ ಆಂಡ್ ಮರಾಠ ಕಿಂಗ್ ಹರಿಪಂಥ್ ಇವರು ನಮಗೆ ಹೆಲ್ಪ್ ಮಾಡುವಂತೆ ಮಾಡೋಣ.
ಮ್ಯಾಥ್ಯೂಸ್ : ಭಾರತೀಯರು ತಮ್ಮವನೇ ಆದ ಟಿಪ್ಪುವಿನ ಮೇಲೆ ವಾರ್ ಮಾಡಲು ಒಪ್ಪುವುದು
ಇಂಪಾಸಿಬಲ್.
ಕೊರ್ನವಾಲಿಸ್ : ಪಾಸಿಬಲ್, ಮ್ಯಾಥ್ಯೂಸ್. ಟಿಪ್ಪು ಮುಹಮದಾನ್ ಇದಾನೆ. ಉಳಿದವರು ಹಿಂದು
ಇದ್ದಾರೆ. ಈ ಕಾಸ್ಟ್ ಭೇದ ಮಾಡೋಣ.

ಅಂದು ಬ್ರಿಟಿಷರು ಕೋಮು ಸೌಹಾರ್ದತೆಯ ನಮ್ಮ ಈ ಸ್ವರ್ಗದಲ್ಲಿ ಸ್ಫೋಟಿಸಿದ ಈ ‘ಕಾಸ್ಟ್
ಭೇದ’ವೆಂಬ ವಿಷಕಾರಿ ಬಾಂಬಿನ ಪ್ರಭಾವ, ಇಂದೂ ಸಹ ನಮ್ಮ ನೆಲದಲ್ಲಿ ಜಾತಿಪರ ಘರ್ಷಣೆಗೆ ಅವಕಾಶ
ಕೊಡುತ್ತಲೇ ಇದೇ. ಅಂದರೆ, ನಮ್ಮ ಶತ್ರು ಬ್ರಿಟಿಷರು ಭಾರತದಿಂದ ತೊಲಗಿದರೂ ನಾವು ಅವರ
ಗುಲಾಮರಾಗಿಯೇ ಉಳಿದಿದ್ದೇವೆ.

ಭಾರತದ ಚರಿತ್ರೆಯಲ್ಲಿ ಮಹಾನ್ ದೇಶಭಕ್ತ ಮತ್ತು ಅಭಿವೃದ್ಧಿ ಹರಿಕಾರನಾಗಿ ಟಿಪ್ಪು ಸುಲ್ತಾನ್ ವಿಶೇಷ
ಮಹತ್ವ ಹೊಂದಿದ್ದಾರೆ. ಇಂದಿನ ಕೆ.ಆರ್.ಎಸ್ ಗೆ 1794 ರಲ್ಲೇ ಯೋಜನೆ ರೂಪಿಸಿ ಶಂಕು ಸ್ಥಾಪನೆ
ನೆರವೇರಿಸಿದ್ದು ಟಿಪ್ಪು ಸುಲ್ತಾನ್. ಆ ಕುರಿತು ಶಾಸನ ಈಗಲೂ ಕೆ.ಆರ್.ಎಸ್ ನ ಮುಖ್ಯ ದ್ವಾರದಲ್ಲಿರುವ
ಗಾಜಿನ ಫಲಕದಲ್ಲಿ ಭದ್ರವಾಗಿದೆ. ಸಂತಸದ ವಿಚಾರವೆಂದರೆ ನೂರು ವರ್ಷಗಳ ನಂತರ ಅಂದರೆ 1902
ರಲ್ಲಿ ಮಹಾರಾಜಾ ನಾಲ್ವಡಿ ಕೃಷ್ಣರಾಜ ಒಡೆಯರ್ ವರು ಅಣೆಕಟ್ಟಿ ಕಟ್ಟಲು ಪ್ರಾರಂಭಿಸಿದ ನಂತರ,
ಎಲ್ಲಿ ಟಿಪ್ಪು ಶಂಕುಸ್ಥಾಪನೆ ನೆರವೇರಿಸಿದ್ದರೋ ಅದೇ ಸ್ಥಳದಲ್ಲಿ ಮಹಾರಾಜಾ ಕೃಷ್ಣರಾಜ ಒಡೆಯರ್
ರವರು ಕೆ.ಆರ್.ಎಸ್ ಕಟ್ಟಿಸಿದರು.

ಪ್ರಪಂಚದಲ್ಲಿ ಮೊತ್ತ ಮೊದಲು ಕ್ಷಿಪಣಿಯನ್ನು ಸಂಶೋಧಿಸಿದ್ದು ‘ಕ್ಷಿಪಣಿ ಪಿತಾಮಹ’ ಖ್ಯಾತಿಯ ಟಿಪ್ಪು
ಸುಲ್ತಾನ್. 1960s ರಲ್ಲಿ ನಾಸಾಗೆ ಭೇಟಿ ನೀಡಿದ ಅಬ್ದುಲ್ ಕಲಾಂ, ಅಲ್ಲಿರುವ ಟಿಪ್ಪುವಿನ ಚಿತ್ರವನ್ನು
ಕಂಡು ತಮ್ಮ ಆತ್ಮಕಥನ “ಅಗ್ನಿಯ ರೆಕ್ಕೆಗಳು”ದಲ್ಲಿ ಬರೆಯುತ್ತಾರೆ…

“… the painting caught my eye because the soldiers on the side launching the
rockets were not white but were dark skinned, with racial features found in South
Asia. It turned out to be Tipu Sultan’s army fighting the British. The painting
depicted a fact forgotten in Tipu’s own country but commemorated here on the
other side of the planet”

A.P.J Abdul Kalam, The Wings of Fire
ಟಿಪ್ಪು ವಿಶೇಷವಾಗಿ ಜ್ಞಾನದಾಹಿಯಾಗಿದ್ದರು. ಇತರ ಅರಸರ ಅರಮನೆಗಳಲ್ಲಿ ಸುಖಭೋಗ ಸಾಧನಗಳು
ದೊರೆತರೆ, ಟಿಪ್ಪುವಿನ ಅರಮನೆಯಲ್ಲಿ ದೊರೆತದ್ದು ಪುಸ್ತಕಗಳು, ಪ್ರಯೋಗ ಸಾಧನಗಳು, ವಿಜ್ಞಾನ-
ತಂತ್ರಜ್ಞಾನದ ಮತ್ತು ಧರ್ಮ-ಸೂಫಿ ಸಾಹಿತ್ಯಗಳು. ಒಂದು ವಿಶೇಷ ಸಂದರ್ಭದಲ್ಲಿ ತಂದೆ ಹೈದರ್ ಅಲಿ,
‘ನಿನಗೊಂದು ಅಮೂಲ್ಯ ಉಡುಗೊರೆ ಕೊಡಬೇಕೆಂದಿದ್ದೆ. ಏನನ್ನು ಕೊಡಲಿ?’ ಎಂದು ಟಿಪ್ಪುವಿನಲ್ಲಿ
ಕೇಳಿಕೊಂಡಾಗ, ಟಿಪ್ಪು, ‘ನನಗೊಂದು ಸುವ್ಯವಸ್ಥಿತ ಗ್ರಂಥಾಲಯ ಬೇಕು’ ಎಂದು ಕೇಳಿ, ತಮ್ಮಲ್ಲಿರುವ
ಜ್ಞಾನದಾಹವನ್ನು-ವೈಜ್ಞಾನಿಕ ಮನೋಭಾವವನ್ನು ವ್ಯಕ್ತಪಡಿಸಿದರು. ಟಿಪ್ಪುವಿನಲ್ಲಿದ್ದ ವೈಜ್ಞಾನಿಕ
ಮನೋಭಾವವನ್ನು ಮತ್ತು ಅವರು ಕಡೆಗಣಿಸಿದ ಅಂಧಶೃದ್ಧೆಯನ್ನು ಎರಡೂ ನಾಟಕಗಳಲ್ಲಿ ಬಹಳ
ಸೊಗಸಾಗಿ ಚಿತ್ರಿಸಿ, ಟಿಪ್ಪುವಿನ ನೈಜಾಂಶವನ್ನು ಎತ್ತಿ ಹಿಡಿದಿದ್ದಾರೆ.

ಟಿಪ್ಪು ಓರ್ವರು ಸದ್ಗುಣ ಮನುಷ್ಯರಾಗಿದ್ದರು! ಪರಸ್ತ್ರೀ ಗೌರವ ಅವರಲ್ಲಿತ್ತು. ಕಾರ್ನಾಡರ ನಾಟಕದ
ಮೊದಲ ಅಂಕದಲ್ಲಿ ಕೆಲವು ಹಿಂದು ಹೆಂಗಸರು ಒಂದು ಹಾಳು ಗುಡಿಯಲ್ಲಿ ತಮ್ಮ ಧ್ಯಾನದಲ್ಲಿ
ಮಗ್ನರಾಗಿದ್ದಾಗ, ಗುಡಿಯೊಳಗೆ ಟಿಪ್ಪು ಮತ್ತು ಪೂರ್ಣಯ್ಯರವರ ಪ್ರವೇಶದಿಂದ, ಅವರ ಧ್ಯಾನಕ್ಕೆ ಭಂಗ
ಬಾಧೆಯುಂಟಾಗುತ್ತದೆ.

ಟಿಪ್ಪು : …ನಮ್ಮಿಂದ ನಿಮ್ಮ ಏಕಾಗ್ರತೆಗೆ ಭಂಗವಾಯಿತು. ಕ್ಷಮಿಸಿ, ನಿಮಗೇನಾದರೂ ಬೇಕೇನು?
ಹೆಂಗಸು : ನಮ್ಮ ಏಕಾಂತಕ್ಕೆ ಭಂಗ ಬರದಂತೆ ನೋಡಿಕೊಂಡರೆ ಸಾಕು.

ಟಿಪ್ಪು : ಖಂಡೀತವಾಗಿ. ನಿಮ್ಮ ಧ್ಯಾನ ಮುಂದುವರಿಯಲಿ. ನಾವು ಬರುತ್ತೇವೆ (ಹೊರಗೆ ಬಂದು)
ಟಿಪ್ಪು : ಪೂರ್ಣಯ್ಯ, ಕೂಡಲೇ ಈ ಕಟ್ಟಡವನ್ನು ದುರಸ್ತು ಮಾಡಿಸಿ, ಗೋಡೆಗಳನ್ನು ಇನ್ನಷ್ಟು
ಭದ್ರಗೊಳಿಸಿರಿ. ಇವರ ಧ್ಯಾನಕ್ಕೆ ಮತ್ತೆ ಭಂಗ ಬಾಧೆಯುಂಟಾಗದಿರೋ ಹಾಗೆ ನೋಡಿಕೊಳ್ಳಬೇಕು.
ಪೂರ್ಣಯ್ಯ : ಅಪ್ಪಣೆ, ಹುಜೂರ್!

ಟಿಪ್ಪುರವರ ದೇವಭಯ ಅವರ ನಿತ್ಯ ನಡವಳಿಕೆಯಲ್ಲಿತ್ತು. ಪರಸ್ತ್ರೀಯರನ್ನು ಸಹೋದರಿಯಂತೆ
ಕಾಣುವುದು ಟಿಪ್ಪುವಿನ ಹುಟ್ಟು ಗುಣವಾಗಿತ್ತು. ಕವಿತಾಕೃಷ್ಣರವರ ನಾಟಕದ ದೃಶ್ಯ 5 ರಲ್ಲಿ:

ಹೆಣ್ಣು : ಅಣ್ಣಾ… (ದುಃಖಿಸುವಳು)
ಟಿಪ್ಪು : ಗಾಬರಿಯಾಗಬೇಡ ತಂಗಿ. ಮಕಬೂಲ್, ಮೊದಲು ಆ ಸಹೋದರಿಯ ಕೈ ಬಿಡು. ಆಕೆ ತುಂಬಾ
ಕಳವಳಗೊಂಡಿದ್ದಾಳೆ.
ಮಕಬೂಲ್ : ಕಳವಳ ಎಲ್ಲಿ ಬಂತು ಖಾವಂದ್. ಹೆಂಗಸರೆಲ್ಲ ಪ್ರಾರಂಭದಲ್ಲಿ ಹಾಗೆಯೇ, ಅವರು
ಗುಪ್ತಗಾಮಿಗಳು.
ಟಿಪ್ಪು : ಬೇಡ. ಪರಸ್ತ್ರೀಯರನ್ನು ಬಯಸುವುದು ಧರ್ಮಬಾಹಿರ. ಬಿಡು ಆಕೆಯ ತಂಟೆಯೇ ಬೇಡ.
ಅಬಲೆಯರನ್ನು ಅವಮಾನಿಸಬಾರದು. ಆಕೆ ನನ್ನ ತಂಗಿ.
ಹೆಣ್ಣು : ಅಣ್ಣಾ…sss

ಮುಂದುವರಿಸಿ,
ಟಿಪ್ಪು ತುಪಾಕಿಯಿಂದ ಗುಂಡು ಹಾರಿಸುವನು. ಮಕಬೂಲ್ ಉರುಳಿ ಬೀಳುವನು.

ಮಕಬೂಲ್ : ಏನು ಮಾಡಿದಿರಿ ಖಾವಂದ್?

ಟಿಪ್ಪು : ತಕ್ಕುದ್ದನ್ನೇ ಮಾಡಿದ್ದೇನೆ. ಪರಸ್ತ್ರೀಯವರನ್ನು ಪೀಡಿಸುವವರಿಗೆ ಟಿಪ್ಪು ರಾಜ್ಯದಲ್ಲಿ ಇದೇ ಶಿಕ್ಷೆ.
ತಂಗಿ, ಗಾಬರಿಯಾಗಬೇಡ ನಿನ್ನ ರಕ್ಷಣ ಭಾರ ಈ ನಿನ್ನ ಅಣ್ಣ ಟಿಪ್ಪುವಿಗೆ ಸೇರಿದ್ದು. ಈಗ ಆದ ಅಪಚಾರಕ್ಕೆ
ಕ್ಷಮೆಯಾಚಿಸುತ್ತೇನೆ. ತಂಗಿ ಕ್ಷಮಿಸಿದ್ದೇನೆಂದು ಹೇಳು.
ಹೆಣ್ಣು : ಅಣ್ಣಾ, ನಿನ್ನ ಹಿರಿತನಕ್ಕೆ ಶರಣಾಗಿದ್ದೇನೆ.
ಟಿಪ್ಪು : …ತಂಗಿ ನಡೆ. ಇಂದೇ ನಿನ್ನ ಪತಿಯೆಡೆಗೆ ಕಳುಹಿಸುವ ವ್ಯವಸ್ಥೆ ಮಾಡುವೆ.
ಹೆಣ್ಣು : ಅಣ್ಣ, ನಿನ್ನ ಆ ಆದರ್ಶ ಗುಣ ಅನ್ಯರಾಜರಿಗೆ ಮೇಲ್ಪಂಕ್ತಿಯಾಗಲಿ. ಕೈ ಸೆರೆ ಸಿಕ್ಕಿದ ಹೆಣ್ಣು
ಮಕ್ಕಳನ್ನು ತಂಗಿಯೆಂದು ಭಾವಿಸುವ ನಿನ್ನ ಬದುಕು ಬಂಗಾರವಾಗಲಿ.

(ಕನ್ನಡ ಹುಲಿ ಟಿಪ್ಪು ಸುಲ್ತಾನ್. ದೃಶ್ಯ: 05)

ಟಿಪ್ಪು ಸುಲ್ತಾನ ತಮ್ಮ ಅರಮನೆಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದರು. ವಾಸಿಸಲು ಒಂದನ್ನು
ಮೀಸಲಿಟ್ಟು; ಶ್ರೀಗಂಧ, ಕಾಳು ಮೆಣಸು, ಸಾಂಬಾರ್ ಪದಾರ್ಥ ಮುಂತಾದವುಗಳ ರಫ್ತಿಗಾಗಿ ಗೋದಾಮನ್ನಾಗಿ ಉಪಯೋಗಿಸುತ್ತಿದ್ದರು. ರೇಷ್ಮೆ ಹುಳಗಳ ಪ್ರಯೋಗಶಾಲೆ ಮತ್ತು ಯುದ್ಧ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಅರಮನೆಯಲ್ಲೇ ಮಾಡುತ್ತಿದ್ದರು. ಬಹುಶಃ ಸಾಮ್ರಾಜ್ಯದ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಅರಮನೆಗಳನ್ನು ಬಳಸುತ್ತಿದ್ದ ಅರಸರು ಭಾರತದ ಇತಿಹಾಸದಲ್ಲಿ ಮತ್ತೊಬ್ಬರು ಸಿಗಲಿಕ್ಕಿಲ್ಲ. ಟಿಪ್ಪುವಿಗೆ ದುಡಿಯುವ ವರ್ಗದ ಮೇಲೆ, ಅವರ ಹಕ್ಕುಗಳ ರಕ್ಷಣೆ ಇತ್ಯಾದಿಗಳ ಕುರಿತಂತೆ ಸ್ಪಷ್ಟವಾದಂತಹ ಒಂದು ಪರಿಕಲ್ಪನೆಯಿತ್ತು. ಆ ನಿಟ್ಟಿನಲ್ಲಿ 1789ರಲ್ಲಿ ಟಿಪ್ಪು ತನ್ನ ಮಂತ್ರಿಮಂಡಲವನ್ನು ಉದ್ದೇಶಿಸಿ ಮಾಡಿದ ಭಾಷಣ ಟಿಪ್ಪುವಿಗೆ ಶ್ರಮಜೀವಿಗಳ ಮೇಲಿರುವ ಕಾಳಜಿ- ಅನುರಾಗ ಎತ್ತಿ ತೋರಿಸುತ್ತದೆ. ಟಿಪ್ಪು ಓರ್ವ ರೈತ-ಕಾರ್ಮಿಕರ ಬಂಧುವಾಗಿದ್ದರುವೆಂದೂ ಕಾರ್ನಾಡರು ಮತ್ತು ಕವಿತಾಕೃಷ್ಣರು ತಮ್ಮ ತಮ್ಮ ಮೇರುಕೃತಿಗಳಲ್ಲಿ ಉಲ್ಲೇಖಿಸಿದರು.

ಟಿಪ್ಪುವಿನ ಗಾಂಭೀರ್ಯತೆಗೆ, ಔದಾರ್ಯತೆಗೆ ಸದ್ಗುಣಕ್ಕೆ ನಿಸರ್ಗವೂ ತಲೆ ತಗ್ಗಿತು. ಅವರ ಹತ್ಯೆಯಾಗುತ್ತಲೇ ಎಂದೂ ನಡೆಯದ ಭೀಕರ ಸುಂಟರಗಾಳಿ ಮತ್ತು ಇತರ ನೈಸರ್ಗಿಕ ದುರಂತಗಳಿಂದ ಶ್ರೀರಂಗಪಟ್ಟಣ ತತ್ತರಿಸಿತು. ಕಾರ್ನಾಡರ ನಾಟಕದಲ್ಲಿ ಈ ಸಂಗತಿ ಪ್ರಸ್ತಾಪವಾಗಿದೆ.

ಕಿರಿಮಾನಿ : ನಿಮಗೆ ನೆನಪಿರಬೇಕು- ಸುಲ್ತಾನರ ಶವವನ್ನು ದಫನ ಮಾಡಿ ಐದು ನಿಮಿಷ ಕೂಡ ಆಗಿರಲಿಲ್ಲ.
ಶ್ರೀರಂಗಪಟ್ಟಣದಲ್ಲಿ ಭಯಂಕರ ತೂಫಾನು ಬೀಸಲಿಕ್ಕೆ ಶುರುವಾಯ್ತು.

ಮೆಕೆಂಝಿ : ಹೌದು. ನಮ್ಮಿಬ್ಬರು ಸೈನಿಕರು ಸಿಡಿಲು ಬಡಿದು ಸತ್ತರು ಒಬ್ಬ ನೀರಿನಲ್ಲಿ ಕೊಚ್ಚಿ ಹೋದ.

ಶ್ರೀರಂಗಪಟ್ಟಣದ ಹಿರಿಯರು ಅಂದು ಇತಿಹಾಸಗಾರರಿಗೆ ಹೇಳಿದಂತೆ “ನಮ್ಮ ಇಡೀ ಬದುಕಿನಲ್ಲಿ ನದಿ ಕಾವೇರಿ ಈ ರೀತಿಯಲ್ಲಿ ಉಗ್ರವಾಗಲಿಲ್ಲ. ಅಲ್ಲದೇ, ನಮ್ಮ ಹಿರಿಯರು ಸಹ ನಮಗೆ ಕಾವೇರಿ ನದಿ ಎಂದೊಮ್ಮೆ ಉಗ್ರವಾಗಿತ್ತು ಎಂದೂ ಹೇಳಲಿಲ್ಲ. ಆದರೆ, ಕಾವೇರಿಗೆ ಇಂದೇನಾಯ್ತು” ಎಂದು ತಿಳಿಯುವುದಿಲ್ಲ.

ಟಿಪ್ಪು ಸುಲ್ತಾನರಿಗೆ ಅಂದು ನಿಜಾಮರು, ಮರಾಠರು ಮತ್ತು ದೇಶದ್ರೋಹಿ ಮೀರ್ ಸಾದಿಕ್, ಪೂರ್ಣಯ್ಯರಂಥವರು ವಂಚಿಸದಿದ್ದರೆ ನಮಗೆ 1800 ರಲ್ಲೇ ಸ್ವಾತಂತ್ರ್ಯ ದೊರೆಯುತಿತ್ತು ಮತ್ತು ನಮ್ಮ
ದೇಶದಲ್ಲಿ ಗಲಭೆಗಳನ್ನು ಸೃಷ್ಟಿಸಲು ಜಗತ್ತಿನ ಯಾವುದೇ ಶಕ್ತಿಗೆ ಸಾಧ್ಯವಾಗುತ್ತಿರಲಿಲ್ಲ; ಕಾರಣ, ವಿವಿಧತೆಯಲ್ಲಿ ಏಕತೆಗೆ ನಮ್ಮ ಮಣ್ಣು ಅತ್ಯುತ್ತಮ ಉದಾಹರಣೆಯಾಗಿದೆ. ಈ ಸ್ವರ್ಗೀಯ ದೇಶದಲ್ಲಿ ದೇವದೂತರಂತಹ ಅರಸ ಟಿಪ್ಪುವಿನ ಆಳ್ವಿಕೆ ಸಾಮರಸ್ಯದಿಂದ ಕೂಡಿತ್ತು.ಕವಿತಾಕೃಷ್ಣರ ನಾಟಕದ ಕೊನೆಯಲ್ಲಿ ಟಿಪ್ಪುವಿನ ನಿಧನದ ನಂತರ ವೆಲ್ಲೆಸ್ಲಿ ಹೇಳುತ್ತಾನೆ,

ವೆಲ್ಲೆಸ್ಲಿ : ಟಿಪ್ಪು ನಿಜಕ್ಕೂ ಗ್ರೇಟ್ ಕಿಂಗ್ ಇದ್ದಾನೆ. ನಂ ಕಂಪೆನಿ ಸರ್ಕಾರದೊಂದಿಗೆ ಏಕಾಂಗಿಯಾಗಿ ವಾರ್
ಮಾಡಿದ್ದಾನೆ. ಕ್ಯಾಪ್ಟನ್, ಟಿಪ್ಪು ದೇಶಪ್ರೇಮ ತುಂಬಾ ದೊಡ್ಡದು ಇದ್ದಾನೆ. ಇವನ ಶವವನ್ನು ಮಿಲಿಟರಿ
ಗೌರವರೊಂದಿಗೆ ಮಣ್ಣು ಮಾಡಿರಿ. ಹೈದರ್ ಸಮಾಧಿ ಪಕ್ಕದಲ್ಲೇ ಮಲಗಿಸಿ. ವೀರ ಟಿಪ್ಪುವಿಗೆ ನಮ್ಮ
ಈಸ್ಟ್ ಇಂಡಿಯಾ ಕಂಪೆನಿ ಪರವಾಗಿ ಶೃದ್ಧಾಂಜಲಿ ಅರ್ಪಿಸುತ್ತೇನೆ.
ಹಿನ್ನಲೆ ಹಾಡು…
ಮಹಿಪೂರ ಹುಲಿ ಟಿಪ್ಪು ಘುಡುಘಡಿಸಿದ
ಶ್ರೀರಂಗನ ನೆಲದ ಚಿರನಿದ್ರೆ ಮಾಡಿದ |
|

ತಮ್ಮ ಅಮೂಲ್ಯ ನುಡಿಯಲ್ಲಿ ನಾಟಕಕಾರ ಕವಿತಾಕೃಷ್ಣರು,
“ಟಿಪ್ಪು ಬಗ್ಗೆ ಈ ವರೆಗೂ ಸಂದಿಗ್ದ ವಿಚಾರಗಳು ಪ್ರಚಲಿತದಲ್ಲಿವೆ. ಆತ ನಿಷ್ಕರುಣಿ, ಕ್ರೂರಿ, ಹಿಂದು
ವಿರೋಧಿ ಎಂದವರೂ ಉಂಟು. ಟಿಪ್ಪು ಓರ್ವ ಮಹಾವೀರ. 18ನೇಯ ಶತಮಾನದಲ್ಲಿ ಆಂಗ್ಲರ ವಿರುದ್ಧ

ಸಮರ ಸಾರಿ ಕಲಿತನದಿಂದ ಮೆರೆದ ವೀರ. ಭಾರತೀಯ ಆಳರಸರು ಈತನ ವಹಿಸಿದ್ದರೆ ಇನ್ನೂರು ವರ್ಷಗಳ ಹಿಂದೆಯೇ ಭಾರತಕ್ಕೆ ಸ್ವಾತಂತ್ರ್ಯ ಲಭಿಸುತ್ತಿತ್ತು. ಅದಕ್ಕೆ, ಬದಲಾಗಿ ಪರಂಗಿಯವರ ಪಕ್ಷ ವಹಿಸಿ, ಟಿಪ್ಪು ವಿನಾಶಕ್ಕೆ ಎನ್ನುವ ಬದಲಾಗಿ ದೇಶದ ಸ್ವಾತಂತ್ರ್ಯ ವಿನಾಶಕ್ಕೆ ಕಾರಣರಾದರು. ಟಿಪ್ಪುವಿನ ನಿಜವನ್ನಿಲ್ಲಿ ಚಿತ್ರಿಸಲು ಯತ್ನಿಸಿದ್ದೇನೆ” ಎಂದು ಹೇಳುತ್ತಾರೆ.

ಟಿಪ್ಪುವಿನ ಮೃತ್ಯುವಾದರೂ, ಅವನ ಧೀರ ಸೈನಿಕರು ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ಇದ್ದರು. ದ್ರೋಹಿ ಮೀರ್ ಸಾದಿಕ್, ಪೂರ್ಣಯ್ಯ ಇತ್ಯಾದಿಗಳು ಟಿಪ್ಪುವಿನ ಸಾವಿನ ಸುದ್ದಿ ಕೇಳಿ ತಂಪು ಪಾನೀಯ ಕುಡಿದರು. ಕಾರ್ನಾಡರ ನಾಟಕದಲ್ಲಿ ಕಿರಮಾನಿ ಈ ದ್ರೋಹಿಗಳ ದ್ರೋಹವನ್ನು ಎತ್ತಿ ಮೆಕೆಂಝಿಗೆ ಹೇಳುವ ಸಂದರ್ಭವುಂಟು.

ಟಿಪ್ಪುವಿನ ಹೋರಾಟ, ತ್ಯಾಗ ಇಂದು ಕೇವಲ ಇತಿಹಾಸ ಪುಟಗಳಲ್ಲಿ ಸೆರೆಯಾಗಿದೆ. ಆ ಪುಟಗಳನ್ನು ತೆರೆದು ಓದುವಷ್ಟು ತಾಳ್ಮೆ, ಪುರುಸೊತ್ತು ನಮ್ಮಲ್ಲಿ ಇಲ್ಲ. ನಿಜಕ್ಕೂ ಕಾರ್ನಾಡರ ನಾಟಕದ ಕೊನೆಯ ನುಡಿ ಮುತ್ತುವಿನಷ್ಟು ಅಮೂಲ್ಯವಾಗಿದೆ.

ಕಿರಮಾನಿ : ಟಿಪ್ಪು ಸುಲ್ತಾನನ ಮಕ್ಕಳನ್ನು ಶ್ರೀರಂಗಪಟ್ಟಣದಿಂದ ಹೊರಗಟ್ಟಿ ರಾಜಧಾನಿಯಾದ
ಕಲ್ಕತ್ತೆಯಲ್ಲಿ ನಜರ ಕೈದಿಯಲ್ಲಿ ಇಡಲಾಯಿತು. ಇಪ್ಪತ್ತು ವರ್ಷಗಳೊಳಗೆ ಇಂಗ್ರಜರು ಮರಾಠ
ಸಾಮ್ರಾಜ್ಯವನ್ನೇ ಕಬಳಿಸಿ ಬಿಟ್ಟರು. ಕೊನೆಗೂ ನನಸಾದದ್ದು ಟಿಪ್ಪು ಸುಲ್ತಾನನ ಭವಿಷ್ಯವಾಣಿಯೇ
ಹೊರತು ಅವನ ಕನಸಲ್ಲ.
(ತಡೆದು)
1947ರಲ್ಲಿ ಈ ನಾಡು ಸ್ವತಂತ್ರವಾದಾಗ, ಭಾರತದ ಹೊಸ ಸರಕಾರ ಬ್ರಿಟಿಷರೆದುರಿಗೆ ಜೊಲ್ಲು ಸುರಿಸಿದ
ರಾಜರು-ಮಹರಾಜರುಗಳಿಗೆಲ್ಲ ಕೋಟ್ಯಾವಧಿ ರೂಪಾಯಿಗಳ ಪಿಂಚಣಿ-ಪ್ರಿವಿ ಪರ್ಸ್ ಕೊಟ್ಟು
ಘೋಷಿಸುವ ಹೊಣೆ ಹೊತ್ತುಕೊಂಡಿತು. ಟಿಪ್ಪು ಸುಲ್ತಾನ್ ವಂಶಜರಿಗೆ ಮಾತ್ರ ಕಲ್ಕತ್ತೆಯ ಕೊಳಚೆ
ಪಟ್ಟಿಯಲ್ಲಿ ಕೊಳೆಬಾಳು ತಪ್ಪಲಿಲ್ಲ.

ಕನ್ನಡ ನಾಟಕ ಸಾಹಿತ್ಯ ನಿಧಿಗೆ ಗಿರೀಶ್ ಕಾರ್ನಾಡರು ನೀಡಿದ ಕೊಡುಗೆ ಅಪಾರ. “When we love, we
always strive to become better than we are” – Paulo Coelho, The Alchemist.
ಕಾರ್ನಾಡರು ತಮ್ಮ ನಾಟಕಗಳನ್ನು ರಚಿಸುವಾಗ ಅದನ್ನು ಸವಾಲಾಗಿ ಸ್ವೀಕರಿಸಿ ಒಲವಿನಿಂದ

ರಚಿಸುತ್ತಿದ್ದರು. “ನನಗನಿಸುವ ಪ್ರಕಾರ ಕಾರ್ನಾಡ್ ‘ನುಡಿ’ ಹಿಡಿಯುವ ಬದಲು ನಾಟಕದ ‘ನಾಡಿ’
ಹಿಡಿದಿದ್ದಾರೆ. ನಾಡಿ ಹಿಡಿಯುವುದೇ ನಾಟಕಕಾರನ ಕೆಲಸ. ಅದನ್ನು ಸಾಧಿಸಿದರೆ ನುಡಿ ತಾನಾಗಿ
ಒಡಮೂಡುತ್ತದೆ” ಎಂದು ಕಾರ್ನಾಡರ ನಾಟಕ ಜಾಣ್ಮೆಯನ್ನು ಮೆಚ್ಚುತ್ತ ಬಿ.ವಿ.ಕಾರಂತರು
ಅಭಿಪ್ರಾಯಪಟ್ಟಿದ್ದರು. ಇಪ್ಪತ್ತನೇ ಶತಮಾನದಲ್ಲಿ ಭಾರತೀಯ ರಂಗಭೂಮಿಯಲ್ಲಿ ಸಮಗ್ರ
ಬದಲಾವಣೆಯ ರೂವಾರಿಯಾದ ಕಾರ್ನಾಡರು, ಐರೋಪ್ಯ-ಗ್ರೀಕ್ ದೇಶಗಳ ರಂಗತಂತ್ರಗಳನ್ನು ತಮ್ಮ
ನಾಟಕಗಳಲ್ಲಿ ಉಪಯೋಗಿಸಿ, ಭಾರತೀಯ ರಂಗ ರಸಿಕರನ್ನು ಚಕಿತಗೊಳಿಸಿದರು.

ಈ ಇಬ್ಬರು ನಾಟಕಕಾರರು ತಮಗೆ ದೊರೆತ ಸದವಕಾಶವನ್ನು ಉಪಯೋಗಿಸಿ, ಸತ್ಯವನ್ನು ಎತ್ತಿ ಹಿಡಿದು-
ಟಿಪ್ಪುವಿನ ನೈಜತೆಯನ್ನು ಪುಟಗಳಲ್ಲಿ ಹಾಗು ರಂಗಮಂಚದ ಮೇಲೆ ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಿರೀಶ್ ಕಾರ್ನಾಡರು ಮೂಲತಃ ಇತಿಹಾಸ ವಿದ್ಯಾರ್ಥಿಗಳು. ಇವರು ಇತಿಹಾಸದ ಅಂಶಗಳನ್ನು ಪಲಕು
ಪಲಕಾಗಿ ಒಂದರ ಮಗ್ಗುಲಲ್ಲಿ ಇನ್ನೊಂದನ್ನಿಟ್ಟು ನೋಡುವ ರೀತಿಯಿಂದಾಗಿಯೇ ಕಾರ್ನಾಡರ “ಟಿಪೂ
ಸುಲ್ತಾನ್ ಕಂಡ ಕನಸು” ಎಂಬ ನಾಟಕ ಉದ್ಭವವಾಗಿದೆ.

ಮಹಾಪುರುಷರನ್ನು, ವಿದ್ವಾಂಸರನ್ನು ಧರ್ಮ, ಜಾತಿ, ಕುಲ, ಭಾಷೆ ಮೊದಲಾದ ಕಾರಣಗಳಿಗಾಗಿ ಪ್ರೀತಿಸುವುದು ಅಥವಾ ದ್ವೇಷಿಸುವುದು ತರವಲ್ಲ; ಬದಲಾಗಿ, ಅವರನ್ನು ಸ್ಮರಿಸುವುದು ಮತ್ತು ಅನುಸರಿಸುವುದು ನಮ್ಮೆಲ್ಲರ ಒಳಿತಿಗಾಗಿ ಪೂರಕವಾಗಿದೆ. ಎಲ್ಲರಿಗೂ ಹಿಡಿತಬೇಕೆಂದು ಬರೆಯಬೇಕೆಂದು ಕಡ್ಡಾಯವಿಲ್ಲ. ಯಾವ ಕೃತಿಯಲ್ಲೇ ಆದರೂ ಸತ್ಯವನ್ನು ಜನ ಸಾಮಾನ್ಯರ ಮುಂದಿಡುವುದು ಸಾಹಿತಿಗಳ-ಬುದ್ಧಿಜೀವಿಗಳ ಜವಾಬ್ದಾರಿಯಾಗಿದೆ. ಕವಿತಾಕೃಷ್ಣ ಮತ್ತು ಗಿರೀಶ್ ಕಾರ್ನಾಡ್ ನಿಜವಾಗಿಯೂ ಅದಕ್ಕೆ ಬದ್ಧತೆ ತೋರಿಸಿದ್ದಾರೆ. ಅಲ್ಲದೇ, ಪೂರ್ವಗ್ರಹ ಪೀಡಿತರಿಗೆ ತಮ್ಮ ನಾಟಕದಲ್ಲೇ ಜರೆದು, ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಾರ್ನಾಡರು ತಮ್ಮ ನಾಟಕಕ್ಕಾಗಿ ಹದಿನೈದು ಆಧಾರ ಗ್ರಂಥಗಳ ನೆರವು ಪಡೆದರು. ಕಾರ್ನಾಡರ ನಾಟಕದಲ್ಲಿ ಇತಿಹಾಸಗಾರ ದಿಗ್ಗಿಜರ ಚರ್ಚೆಗಳ ನಡುವೆ ಹಿಮ್ಮಿಂಚಿನಿಂದ ವರ್ತಮಾನ ಮತ್ತು ಭೂತಗಳು ಒಂದರೊಳಗೊಂದು ಬೆಸೆದುಕೊಂಡಂತೆ ನಾಟಕವೂ ಮೂರ್ತರೂಪವನ್ನು ತಾಳಿದೆ. ಆದುದರಿಂದಲೇ, ಕವಿತಾಕೃಷ್ಣರ ನಾಟಕಕ್ಕಿಂತ ಕಾರ್ನಾಡರ ನಾಟಕವು ನನಗೆ ಅಚ್ಚುಮೆಚ್ಚು. ಹಲವು ಕಾರಣಗಳಿಂದಲೇ ಕಾರ್ನಾಡರ “ಟಿಪೂ ಸುಲ್ತಾನ ಕಂಡ ಕನಸು” ಓದಲೇ- ನೋಡಲೇಬೇಕಾದ ನಾಟಕವಾಗಿ ಮೂಡಿಬಂದಿದೆ!!


ಗ್ರಂಥಋಣ:

  1. ಕಾರ್ನಾಡ್, ಗಿರೀಶ್. ಟಿಪೂ ಸುಲ್ತಾನ್ ಕಂಡ ಕನಸು.
    ಧಾರವಾಡ: ಮನೋಹರ ಗ್ರಂಥ ಮಾಲಾ, 2012.
  2. ಆಚಾರ್ಯ, ಕವಿತಾಕೃಷ್ಣ. ಕನ್ನಡ ಹುಲಿ ಟಿಪ್ಪು ಸುಲ್ತಾನ್.
    ಮೈಸೂರು: ತನು ಮನು ಪ್ರಕಾಶನ, 2010.
  3. ಕೋ. ಚೆನ್ನಬಸಪ್ಪ. ಹಿಂದು ಧರ್ಮ ರಕ್ಷಕ ಟೀಪೂ ಸುಲ್ತಾನ್.
    ಬೆಂಗಳೂರು: ನವಕರ್ನಾಟಕ ಪ್ರಕಾಶನ, 2016.
  4. ಹುಸೈನ್, ಮೊಹಮ್ಮದ್ ಸಗೀರ್. ಟೀಪು ಸುಲ್ತಾನ್: ಎ ಲೈಫ್ ಹಿಸ್ಟರಿ.
    ನವ ದೆಹಲಿ: Institute of Objective Studies, 2019.
  5. ನದ್ವಿ, ಮೊಹಮ್ಮದ್ ಇಲ್ಯಾಸ್. ಸೀರತ್-ಎ-ಸುಲ್ತಾನ್ ಟೀಪು ಶಹೀದ್.
    ಲಖನೌ: ಮಜಲೀಸ್ ತಹಕೀಕಾತ್-ವ-ನಶ್ರಿಯಾತ್-ಎ-ಇಸ್ಲಾಮ್ ನದ್ವಾ. 1996.
  6. ಮೂಡುಸಗ್ರಿ, ಹಯವದನ ಉಪಾಧ್ಯಾಯ್. ಸೌಹಾರ್ದ ಸಂಕಲನ. ಉಡುಪಿ: ಸೌಹಾರ್ದ ಪ್ರಕಾಶನ,
    2016.

LEAVE A REPLY

Please enter your comment!
Please enter your name here