ಇಸ್ಮತ್ ಪಜೀರ್

ಮುಸ್ಲಿಮರ ಐಕಾನ್ ಟಿಪ್ಪುವೆನ್ನುವುದು ಮತ್ತು ಹಿಂದೂಗಳ ಐಕಾನ್ ಶಿವಾಜಿಯೆನ್ನುವುದು. ಇವೆರಡೂ ಬ್ಲಂಡರ್..
ಶಿವಾಜಿಗೆ ಯಾವತ್ತೂ ಹಿಂದೂ ರಿಪಬ್ಲಿಕ್‌ನ ಯೋಚನೆಯೂ ಇರಲಿಲ್ಲ. ಟಿಪ್ಪುವಿಗೆ ಇಸ್ಲಾಮಿಕ್‌ ರಿಪಬ್ಲಿಕ್‌ನ ಯೋಚನೆಯೂ ಇರಲಿಲ್ಲ. ಇವರೀರ್ವರೂ ಉಪಖಂಡದ ಇತಿಹಾಸದಲ್ಲಿ ಆಗಿ ಹೋದ ರಾಜರುಗಳಲ್ಲಿ ಅತ್ಯಂತ ಜನಪರರಾಗಿದ್ದರು. ಶಿವಾಜಿಯ ತಾತ ಆ ಕಾಲದ ಪ್ರಸಿದ್ಧ ಮುಸ್ಲಿಂ ಸಂತ ಶಾಹು ಷರಫುದ್ದೀನ್‌ರ ಅನುಯಾಯಿಯಾಗಿದ್ದ. ಅವರ ಮೇಲಿನ ಗೌರವದ ಕಾರಣಕ್ಕೆ ತನ್ನ ಗಂಡು ಮಕ್ಕಳಿಗೆ ಶಾಹಜಿ ಮತ್ತು ಷರಫಜಿ ಎಂಬ ಹೆಸರಿಟ್ಟ. (ಷರಫಜಿ ಶಿವಾಜಿಯ ಚಿಕ್ಕಪ್ಪ).

ಹೈದರಲಿ ಟಿಪ್ಪು ಮಸ್ತಾನ್ ಔಲಿಯಾರ ಅನುಯಾಯಿಯಾಗಿದ್ದ. ಅವರ ಮೇಲಿನ ಗೌರವದ ಕಾರಣಕ್ಕೆ ತನ್ನ ಮಗನಿಗೆ ಟಿಪ್ಪು ಎಂದು ಹೆಸರಿಟ್ಟ. ಶಿವಾಜಿಯ ಅಪ್ಪ ಶಾಹಜಿ ಬಿಜಾಪುರ ಆದಿಲ್‌ಶಾಹಿ ಸುಲ್ತಾನರ ಸೇನೆಯಲ್ಲಿ ದಳಪತಿಯಾಗಿದ್ದ. ಟಿಪ್ಪುವಿನ ತಂದೆ ಹೈದರ್ ಅಲಿ ಮೈಸೂರು ಒಡೆಯರ ಸೇನೆಯ ದಳಪತಿಯಾಗಿದ್ದ..

ಶಿವಾಜಿಯ ಸಾಮ್ರಾಜ್ಯ ಆತನಿಗೆ ತನ್ನ ಹಿರಿಯರಿಂದ ಅನುವಂಶಿಕವಾಗಿ ಬಂದದ್ದಲ್ಲ. ಟಿಪ್ಪುವಿನ ತಂದೆ ಹೈದರ್ ಅಲಿ ಮೈಸೂರು ಒಡೆಯರ್ ದುರ್ಬಲರಾದಾಗ ಅಧಿಕಾರವನ್ನು ಕೈಗೆತ್ತಿಕೊಂಡನೇ ಹೊರತು ಮೈಸೂರು ಒಡೆಯರನ್ನು ಪದಚ್ಯುತಗೊಳಿಸಲಿಲ್ಲ. ಅವರು ಹೈದರಲಿಯ ಕಾಲದಲ್ಲಿ ನಾಮಕಾವಸ್ಥೆ ರಾಜರಾಗಿದ್ದರು. ಟಿಪ್ಪು ಕೂಡಾ ಒಡೆಯರನ್ನು ಅವರ ಪಾಡಿಗೆ ಬಿಟ್ಟು ಸಾಮ್ರಾಜ್ಯ ವಿಸ್ತರಿಸುತ್ತಾ ಹೋದದ್ದು ಇತಿಹಾಸ..

ಟಿಪ್ಪುವಿಗೆ ಹಿಂದೂ ದ್ವೇಷವೂ ಇರಲಿಲ್ಲ..
ಶಿವಾಜಿಗೆ ಮುಸ್ಲಿಂ ದ್ವೇಷವೂ ಇರಲಿಲ್ಲ..
ಇವರೀರ್ವರು ತಮಗೆ ದ್ರೋಹ ಬಗೆದವರನ್ನು ಜಾತಿ-ಧರ್ಮದ ನೋಡದೇ ಶಿಕ್ಷಿಸಿದ್ದರು. ಶಿವಾಜಿಯ ಸೇನೆಯಲ್ಲಿ ಉನ್ನತ ಹುದ್ದೆಗಳಲ್ಲಿ ಧಾರಾಳವಾಗಿ ಮುಸ್ಲಿಮರಿದ್ದರು. ಟಿಪ್ಪುವಿನ ಸೈನ್ಯದಲ್ಲಿ ಉನ್ನತ ಹುದ್ದೆಗಳಲ್ಲಿ ಧಾರಾಳವಾಗಿ ಹಿಂದೂಗಳೂ ಇದ್ದರು. ಟಿಪ್ಪುವಿನ ಆಡಳಿತದ ವಿವಿಧ ಉನ್ನತ ಹುದ್ದೆಗಳಲ್ಲಿ ಧಾರಾಳವಾಗಿ ಹಿಂದೂಗಳಿದ್ದರು.. ಮತ್ತು ಶಿವಾಜಿಯ ಆಡಳಿತದ ಹಲವು ಉನ್ನತ ಹುದ್ದೆಗಳಲ್ಲಿ ಮುಸ್ಲಿಮರಿದ್ದರು.

ಹೀಗೆ ಇತಿಹಾಸದ ಪುಟಗಳನ್ನು ತೆರೆಯುತ್ತಾ ಹೋದಂತೆ ಇವರೀರ್ವರಲ್ಲಿ ಹಲವು ಸಾಮ್ಯತೆಗಳು ಕಾಣಸಿಗುತ್ತವೆ. ಇವರೀರ್ವರೂ ವೈಯಕ್ತಿಕವಾಗಿ ಬಹಳ ಶಕ್ತಿಶಾಲಿಗಳೂ, ಬುದ್ಧಿವಂತರೂ ಆಗಿದ್ದರು. ಇಬ್ಬರಿಗೂ ಅವರವರ ಧರ್ಮದ ಮೇಲೆ ಅಚಲ ವಿಶ್ವಾಸವಿತ್ತೇ ಹೊರತು ಇನ್ನೊಂದು ಧರ್ಮದ ಬಗ್ಗೆ ಯಾವುದೇ ವಿರೋಧವಿರಲಿಲ್ಲ. ಆದರೆ, ಅವರಲ್ಲಿರದಿದ್ದ ಮತಾಂಧ ಗುಣಗಳನ್ನು ಅವರಿಗೆ ಆರೋಪಿಸಿ ಇಂದಿನ ದುಷ್ಟ ರಾಜಕಾರಣಿಗಳು ರಾಜಕೀಯ ಮಾಡುತ್ತಿದ್ದಾರೆ. ಜನಸಾಮಾನ್ಯ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳೆರಡೂ ಈ ಐತಿಹಾಸಿಕ ಸತ್ಯವನ್ನು ಎಲ್ಲಿಯವರೆಗೆ ಅರ್ಥೈಸುವುದಿಲ್ಲವೋ ಅಲ್ಲಿಯವರೆಗೆ ಕ್ಷುದ್ರ, ಮತಾಂಧ ಶಕ್ತಿಗಳು ಇವರಿಬ್ಬರನ್ನು ಮುಂದಿಟ್ಟು ನಮ್ಮನ್ನು ಕಚ್ಚಾಡಿಸುತ್ತಿರುತ್ತಾರೆ. ಶಿವಾಜಿಯ ಕುರಿತ ಇಂತಹ ಐತಿಹಾಸಿಕ ಸತ್ಯಗಳನ್ನು ಬಿಚ್ಚಿಟ್ಟದ್ದು ಕಾಮ್ರೇಡ್ ಗೋವಿಂದ ಪಾನಸರೆಯವರ ಕೊಲೆಗೆ ಕಾರಣವಾಯಿತು ಎಂಬ ಸತ್ಯವನ್ನು ನಾವೆಲ್ಲಾ ಅರ್ಥೈಸಬೇಕು..

LEAVE A REPLY

Please enter your comment!
Please enter your name here