ಲೇಖಕರು: ಇಸ್ಮತ್ ಪಜೀರ್

ಟಿಪ್ಪು ಓರ್ವ ಅತ್ಯಂತ ಸಮರ್ಥ ರಾಜ, ಉಪಖಂಡದ ಇತಿಹಾಸ ಕಂಡ ಅತ್ಯಂತ ಜನಪರ ರಾಜ, ಟಿಪ್ಪು ಶೂರ, ವೀರನೆನ್ನುವುದನ್ನು ಟಿಪ್ಪು ವಿರೋಧಿಗಳು ಮತ್ಸರದಿಂದ, ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಒಪ್ಪಿಕೊಳ್ಳುತ್ತಾರಾದರೂ, ಟಿಪ್ಪುವನ್ನು ಅತ್ಯಂತ ಜನಪರ ರಾಜ ಎಂದು ಟಿಪ್ಪು ವಿರೋಧಿಗಳು ತಿಳಿದೂ ತಿಳಿದೂ ಅಲ್ಲಗೆಳೆಯುತ್ತಾರೆ.
ಬ್ರಿಟಿಷರು ಭಾರತದಲ್ಲಿ ತಮ್ಮ ಆಡಳಿತವನ್ನು ವಿಸ್ತರಿಸಲು ಟಿಪ್ಪು ಸುಲ್ತಾನ್ ಒಬ್ಬರೇ ಬಲವಾದ ತಡೆಯಾಗಿದ್ದರು. ಟಿಪ್ಪುವಿನಂತಹ ಸಮರ್ಥ ರಾಜನನ್ನು ಕೊಲ್ಲುವುದು ಅಥವಾ ಸೋಲಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದುದರಿಂದಲೇ ಟಿಪ್ಪು ಜೀವಂತವಿರುವಾಗಲೇ ಟಿಪ್ಪುವಿನ ಬಗ್ಗೆ ಜನರಲ್ಲಿ ಕೆಟ್ಟ ಭಾವನೆಗಳುಂಟಾಗುವಂತಹ ಎಲ್ಲಾ ವಿಧದ ಅಪಪ್ರಚಾರಗಳನ್ನು ಬ್ರಿಟಿಷರು ವ್ಯವಸ್ಥಿತವಾಗಿ ನಡೆಸಿದ್ದರು. ಟಿಪ್ಪುವಿನ ಕಾಲಾನಂತರವೂ ಅವರು ಟಿಪ್ಪುವನ್ನು ಕೆಟ್ಟದಾಗಿ ಚಿತ್ರಿಸುತ್ತಲೇ ಇದ್ದರು. ಮುಖ್ಯವಾಗಿ ಅವರು ಟಿಪ್ಪುವನ್ನು ಮತಾಂಧನೆಂದೂ, ಹಿಂದೂ ವಿರೋಧಿಯೆಂದೂ, ಹಿಂದೂಗಳನ್ನು ಬಲತ್ಕಾರವಾಗಿ ಇಸ್ಲಾಂಗೆ ಮತಾಂತರಿಸಿದರೆಂದೂ, ಒಟ್ಟಾರೆಯಾಗಿ ಟಿಪ್ಪು ಪರಧರ್ಮದ ಬಗ್ಗೆ ಅಸಹಿಷ್ಣುವಾಗಿದ್ದರೆಂದೂ ದಾಖಲಿಸಿದರು.
ಭಾರತದ ಸ್ವಾತಂತ್ರ್ಯ ಹೋರಾಟವು ದಿನೇದಿನೇ ಬಲಿಷ್ಠಗೊಳ್ಳುವುದನ್ನು ಕಂಡು ಕಂಗಾಲಾಗಿದ್ದ ಬ್ರಿಟಿಷರು ಇಲ್ಲಿ ಬಹಳ ಅನ್ಯೋನ್ಯವಾಗಿದ್ದ ಹಿಂದೂ ಮುಸ್ಲಿಮರ ಮಧ್ಯೆ ಕಂದಕವನ್ನು ನಿರ್ಮಿಸಿ ಅವರನ್ನು ಮತೀಯ ಆಧಾರದ ಮೇಲೆ ಒಡೆಯಲು ಬೇಕಾಗಿ ಆಗಿ ಹೋದ ಮುಸ್ಲಿಂ ರಾಜರುಗಳ ಬಗ್ಗೆ ಅತೀ ಕೆಟ್ಟದಾಗಿ ಚಿತ್ರಿಸುತ್ತಾ ಹೋದರು. ಅವರು ಅದನ್ನು ಇತಿಹಾಸ ಎಂದೇ ದಾಖಲಿಸಿದರು. ಅವರ ಬಳಿಕದ ದೇಶೀಯ ಇತಿಹಾಸಕಾರರಲ್ಲಿ ಅನೇಕರು ಸತ್ಯಾಸತ್ಯತೆಯನ್ನು ಪರಾಮರ್ಶೆಗೊಳಪಡಿಸದೆ ಅವರು ಬರೆದ ಸುಳ್ಳಿನ ಕಂತೆಗಳನ್ನೇ ಇತಿಹಾಸವೆಂದು ಮರು ದಾಖಲಿಸಿದರು. ಈ ದೇಶದ ಸ್ವಾತಂತ್ರ್ಯದ ವೀರ ಕಥಾನಕವನ್ನು ಅರಿತಿರುವ ಪ್ರತಿಯೋರ್ವನಿಗೆ ಬ್ರಿಟಿಷರ ಒಡೆದು ಆಳುವ ನೀತಿಯ ಬಗ್ಗೆ ಗೊತ್ತಿರದೇ ಇರಲಾರದು.
ಬ್ರಿಟಿಷರ ಸ್ವಂತದ ಇತಿಹಾಸಕಾರ ಜಾನ್ ವಿಲಿಯಂ ಕೇ ದಾಖಲಿಸಿದಂತೆ
“ಒಬ್ಬ ದೇಶೀಯ ಅರಸನನ್ನು ಮೊದಲು ಪದಚ್ಯುತಗೊಳಿಸುವುದು, ಆ ನಂತರ ಅವನನ್ನು ಹೀನಮಾನವಾಗಿ ದೂಷಿಸುತ್ತಾ ಹೋಗುವುದು, ಇದು ನಮ್ಮ ಪದ್ಧತಿಯಾಗಿದೆ.”
(ಜಾನ್ ವಿಲಿಯಂ ಕೇ: ಹಿಸ್ಟರಿ ಆಫ್ ದಿ ಸಿಪಾಯಿ ವಾರ್ ಇನ್ ಇಂಡಿಯಾ ಸಂ:3, ಪುಟ: 361-362)

ವಿಲ್ಕ್ಸ್ ಎಂಬ ವಸಾಹತುಕಾಲದ ಬ್ರಿಟಿಷ್ ಇತಿಹಾಸಕಾರ ಸುಳ್ಳು ಸುಳ್ಳೇ ಅಸಹಿಷ್ಣು ಮತ ಭ್ರಾಂತ ಹಾಗೂ ಉಗ್ರ ಮತಾಂಧ ಎಂದು ಟಿಪ್ಪುವನ್ನು ದಾಖಲಿಸಿಬಿಟ್ಟನು. ಆತನ ನಂತರದ ಇತಿಹಾಸಕಾರರೂ ಆತ ದಾಖಲಿಸಿದ ಸುಳ್ಳಿನ ಕಂತೆಗಳನ್ನೇ ಮರು ದಾಖಲಿಸಿದರು. ಬ್ರಿಟಿಷರಿಗೆ ಭಾರತದಲ್ಲಿ ತಮ್ಮ ವಸಾಹತನ್ನು ಮುಂದುವರಿಸಲು, ತಮ್ಮ ಆಳ್ವಿಕೆಯನ್ನು ಸಮರ್ಥಿಸಲು ಟಿಪ್ಪುವಿನಂತಹ ಜನಪರ ಅರಸನನ್ನು ಹೀಯಾಳಿಸುವುದು ಅನಿವಾರ್ಯವಾಗಿತ್ತು. ವಿಲ್ಕ್ಸ್‌ನಂತೆಯೇ ಬೀಟ್ಸನ್, ಬೌರಿಂಗ್, ಕಿರ್ಕ್ ಪ್ಯಾಟ್ರಿಕ್ ಮುಂತಾದ ಬ್ರಿಟಿಷ್ ಇತಿಹಾಸಕಾರರು ಅವರ ಆಡಳಿತದ ರಕ್ಷಣೆಗಾಗಿ ಇದನ್ನೆಲ್ಲಾ ಮಾಡಿರುವುದರಲ್ಲಿ ವಿಶೇಷವೇನಿಲ್ಲ, ಆಶ್ಚರ್ಯವೂ ಇಲ್ಲ. ಬೇಸರದ ಸಂಗತಿಯೇನೆಂದರೆ ಯಾರದೇ ಪ್ರಲೋಭನೆಗೆ ಒಳಗಾಗದೆ ಇತಿಹಾಸಕ್ಕೆ ಮಾತ್ರ ನಿಷ್ಠರಾಗಿರುವ ಇತಿಹಾಸಕಾರರು ದಾಖಲಿಸಿದ್ದ ಐತಿಹಾಸಿಕ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳದೇ ಕೇವಲ ಟಿಪ್ಪುವಿನ ಕಡುವೈರಿಗಳಾದ ಬ್ರಿಟಿಷರು ದಾಖಲಿಸಿದ ಸುಳ್ಳು ಇತಿಹಾಸವನ್ನೇ ಆಧರಿಸಿ ಬಲಪಂಥೀಯರು/ಬಲಪಂಥೀಯ ಲೇಖಕರು ಮತ್ತು ಕೆಲವು ಪೀತ ಇತಿಹಾಸಕಾರರು ಮರು ದಾಖಲಿಸಿದ್ದಾರೆ.

“ಒಂದು ಕೋಮಿನ ವಿರುದ್ಧ ಇನ್ನೊಂದು ಕೋಮನ್ನು ಎತ್ತಿ ಕಟ್ಟುವುದರ ಮೂಲಕ ನಾವು ಭಾರತದಲ್ಲಿ ನಮ್ಮ ಆಳ್ವಿಕೆಯನ್ನು ಬಲಪಡಿಸಿದ್ದು, ನಾವು ಇದೇ ರೀತಿ ಮುಂದುವರಿಯತಕ್ಕದ್ದು. ಭಾರತೀಯರು ತಾವೆಲ್ಲಾ ಒಂದೇ ಎಂಬ ಭಾವನೆ ಅವರಲ್ಲಿ ಮೂಡದಂತೆ ಮಾಡಲು ಸಾಧ್ಯವಾದ ಎಲ್ಲಾ ವಿಧದ ಪ್ರಯತ್ನಗಳನ್ನು ಮಾಡಬೇಕು.
(ಉಡ್ ಪೇಪರ್ಸ್ ಮಾರ್ಚ್ 3, 1892 ರಂದು ಎಲ್ಜಿನ್‍ನಿಗೆ ಬ್ರಿಟಿಷ್ ವಿದೇಶಾಂಗ ಸಚಿವ ಉಡ್ ಬರೆದ ಪತ್ರ)

“ಭಾರತದಲ್ಲಿ ನಮ್ಮ ಆಳ್ವಿಕೆಗೆ ಸದ್ಯಕ್ಕಂತೂ ಧಕ್ಕೆ ಬರಲಾರದು. ಅದಕ್ಕೆ ಧಕ್ಕೆಯೊದಗಿದರೆ 50 ವರ್ಷಗಳ ನಂತರವೇ ಒದಗೀತು. ಚಳುವಳಿ ಕುರಿತ ಪಾಶ್ಚಾತ್ಯ ವಿಚಾರಗಳನ್ನು ಕ್ರಮೇಣ ಅಂಗೀಕರಿಸಿ ಕಾರ್ಯರೂಪಕ್ಕೆ ತರುವುದರಿಂದ ನಮಗೆ ಧಕ್ಕೆಯೊದಗಬಹುದು. ನಾವು ಸುಶಿಕ್ಷಿತ ಭಾರತೀಯರನ್ನು ತದ್ವಿರುದ್ಧ ಅಭಿಪ್ರಾಯಗಳನ್ನು ಹೊಂದಿದ ಎರಡು ಸಮುದಾಯಗಳನ್ನಾಗಿ ಒಡೆದದ್ದೇ ಆದರೆ ನಮ್ಮ ಆಳ್ವಿಕೆ ಸುಭದ್ರವಾಗಬಲ್ಲದು. ಎರಡೂ ಕೋಮುಗಳ ನಡುವಣ ಕಂದರ ಇನ್ನೂ ಆಳವಾಗುವಂತೆ ನಾವು ಶೈಕ್ಷಣಿಕ ಪಠ್ಯ ಪುಸ್ತಕಗಳನ್ನು ರೂಪಿಸುವ ತಂತ್ರ ಬಳಸಬೇಕು. (ಸೆಪ್ಟೆಂಬರ್ 2, 1897 ರಂದು ಬ್ರಿಟಿಷ್ ಉನ್ನತಾಧಿಕಾರಿ ಕರ್ಝನ್‍ಗೆ ಇಂಗ್ಲೆಂಡ್‍ನ ಭಾರತದ ವ್ಯವಹಾರಗಳ ಸಚಿವ ಜಾರ್ಜ್ ಫ್ರಾನ್ಸಿನ ಹ್ಯಾಮಿಲ್ಟನ್ ಬರೆದ ಪತ್ರ)

ಈ ಧಾರ್ಮಿಕ ಒಗ್ಗಟ್ಟಿನಲ್ಲಿರುವ ಬಿರುಕು ನಮ್ಮ ಒಳಿತಿಗಾಗಿಯೇ ಇದೆ. ಭಾರತದಲ್ಲಿನ ಶಿಕ್ಷಣ ಹಾಗೂ ಭೋದನಾ ವಿಷಯದ ಕುರಿತು ನಿಮ್ಮ ತನಿಖಾ ಸಮಿತಿಯು ನೇಮಕಗೊಂಡಿದ್ದು ಒಳ್ಳೆಯ ಫಲಿತಾಂಶವನ್ನು ಎದುರು ನೋಡುತ್ತೇನೆ.”
(ಜನವರಿ 4, 1887 ರಂದು ಬ್ರಿಟಿಷ್ ಅಧಿಕಾರಿ ಕ್ರಾಸ್ ಗವರ್ನರ್ ಜನರಲ್ ಡಫರಿನ್‍ಗೆ ಬರೆದ ಪತ್ರ)

ಇವುಗಳು ಬ್ರಿಟಿಷರ ಕುತಂತ್ರದ ಸಿದ್ಧಾಂತ. ಈ ರೀತಿಯ ಕುತಂತ್ರದ ಸಿದ್ಧಾಂತದ ಮೇಲೆಯೇ ಅವರು ಸಾಮ್ರಾಜ್ಯ ಕಟ್ಟಿದ್ದರು.

ಟಿಪ್ಪು ಸುಲ್ತಾನರ ಕುರಿತಂತೆ ಗಾಂಧೀಜಿಯವರು 1945ರಲ್ಲಿ ಟಿಪ್ಪು ಸುಲ್ತಾನ್ ಸ್ಮಾರಕೋತ್ಸವ ಸಂದರ್ಭದಲ್ಲಿ ಎ.ಜೆ. ಖಲೀಲರಿಗೆ ಬರೆದ ಪತ್ರದಲ್ಲಿ ಟಿಪ್ಪುವಿನ ಕುರಿತು ಹೀಗೆ ಬರೆದಿದ್ದರು. “ಪಾಶ್ಚಾತ್ಯ ಇತಿಹಾಸಕಾರರ ಅಭಿಪ್ರಾಯದಲ್ಲಿ ಮೈಸೂರಿನ ಬಾದಾಶಹಾ ಫತೇ ಆಲಿ ಟಿಪ್ಪು ಓರ್ವ ಮೂಢ, ಮೂರ್ಖ ಮುಸ್ಲಿಂ. ಅವನು ತನ್ನ ಪ್ರಜೆಗಳಾದ ಹಿಂದೂಗಳನ್ನು ಹಿಡಿದು ಬಲವಂತವಾಗಿ ಇಸ್ಲಾಂ ಮತಕ್ಕೆ ಮತಾಂತರಿಸಿದ. ಆದರೆ ಇದೊಂದು ದೊಡ್ಡ ಸುಳ್ಳಿನ ಕಂತೆ. ಆಗ ಹಿಂದೂ ಮುಸ್ಲಿಮರ ಬಾಂಧವ್ಯ ಸ್ನೇಹಮಯವಾಗಿತ್ತು. ಇದು ಸತ್ಯಾಂಶ. ಟಿಪ್ಪುವಿನ ಜೀವನ ಕಾಲದಲ್ಲಿ ಅವನು ಸಾಧಿಸಿದ ಕೆಲಸವೇ ಸಾಕು ಅದೊಂದು ಆನಂದ ಮೂಲ, ಸ್ಫೂರ್ತಿ ಮೂಲ. ಆ ಕಾಲದಲ್ಲಿ ಹಿಂದೂಗಳೂ, ಮುಸ್ಲಿಮರೂ ಇಬ್ಬರೂ ತಮ್ಮ ಬಾಗಿಲ ಬಳಿಯ ಪರದೇಶಿ ಶತ್ರುವನ್ನು ನೋಡದೆ ಉದಾಸೀನ ಮಾಡಿದರು. ತಮ್ಮೊಳಗೆ ತಾವೇ ಹೊಡೆದಾಡಲಾರಂಭಿಸಿದರು. ಮಹಾಪ್ರಭು ಟಿಪ್ಪುವಿನ ಮಹಾಮಂತ್ರಿಯಾದರೂ ಯಾರು? ಅವನೊಬ್ಬ ಹಿಂದೂ. ಸ್ವಾಂತತ್ರ್ಯವಾದಿ ಈ ಟಿಪ್ಪುವನ್ನು ಶತ್ರುಗಳಿಗೆ ಹಿಡಿದೊಪ್ಪಿಸಿದ ಸ್ವಾಮಿದ್ರೋಹಿ ಇವನೇ ಎಂಬುವುದನ್ನು ನಾವು ನಾಚಿಕೆಯಿಂದ ಒಪ್ಪಿಕೊಳ್ಳಬೇಕು”.
ನಮ್ಮೊಳಗಿನ ದೇಶೀಯ ಇತಿಹಾಸಕಾರರು, ಲೇಖಕರು ಮತ್ತಿತರ ಸಾರ್ವಜನಿಕ ವ್ಯಕ್ತಿಗಳಿಗೆ ಈ ದೇಶದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅಭಿಪ್ರಾಯಕ್ಕಿಂತ ವಸಾಹತುಶಾಹಿ ಇತಿಹಾಸಕಾರರ ಸುಳ್ಳು ದಾಖಲೆಗಳೇ ಹೆಚ್ಚಿನ ತೂಕವುಳ್ಳದ್ದಾಗಿರುವುದು ಈ ನಾಡಿನ ದುರಂತ.

ಟಿಪ್ಪು ಸುಲ್ತಾನರಿಗೆ ಸಂಬಂಧಿಸಿದಂತೆ ಕೆಲವು ಭಾರತೀಯ ಫ್ಯಾಸಿಸ್ಟ್ ಲೇಖಕರು, ಇತಿಹಾಸಕಾರರು ಬರೆದಂತಹ ಕಪೋಲ ಕಲ್ಪಿತ ಸುಳ್ಳುಗಳು ಬಹಳಷ್ಟಿವೆ. ಖ್ಯಾತ ಇತಿಹಾಸ ತಜ್ಞ ಬಿಶ್ವಂಬರ್‍ನಾಥ್ ಪಾಂಡೆಯವರು ಅಂತಹ ಹತ್ತು ಹಲವು ಸುಳ್ಳಿನ ಕಂತೆಗಳನ್ನು ಬಿಚ್ಚಿ ಸತ್ಯವನ್ನು ಸಾಕ್ಷಿ ಸಮೇತ ಅನಾವರಣಗೊಳಿಸಿದ್ದಾರೆ. ಹೀಗೆ ಪಾಂಡೆಯವರು ಅನಾವರಣಗೊಳಿಸಿದ ಸುಳ್ಳಿನ ಕಂತೆಗಳಲ್ಲಿ ಒಂದನ್ನು ಮೌಲಾನಾ ಅಬ್ದುಲ್ ಕಲಾಂ ಆಝಾದ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿಗಳಾದ ಅತಾವುರ್ರಹ್‍ಮಾನ್ ಖಾಸ್ಮಿಯವರು ತಮ್ಮ ಲೇಖನವೊಂದರಲ್ಲಿ ಬಿ.ಎನ್.ಪಾಂಡೆಯವರ ಮಾತುಗಳಲ್ಲೇ ಉಲ್ಲೇಖಿಸಿದ ಭಾಗವೊಂದು ಇಂತಿದೆ.
“ಟಿಪ್ಪು ಸುಲ್ತಾನ್‍ರಿಗೆ ಸಂಬಂಧಿಸಿದಂತೆ ಹೊಸ ನೋಟವೊಂದು 1928ರಲ್ಲಿ ಸಿಕ್ಕಿತ್ತು. ಟಿಪ್ಪುವಿಗೆ ಸಂಬಂಧಿಸಿದಂತೆ ನಾನು ಅಲಹಾಬಾದ್‍ನಲ್ಲಿ ಒಂದಷ್ಟು ಸಂಶೋಧನೆಗೆ ತೊಡಗಿದ್ದೆ. ಒಂದು ದಿನ ಮಧ್ಯಾಹ್ನ ಆಂಗ್ಲೋ ಬಂಗಾಳಿ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಬಂದರು. ನಾನು ತಮ್ಮ ಅಸೋಸಿಯೇಶನ್ ಆಫ್ ಹಿಸ್ಟರಿಯ ಉದ್ಘಾಟನೆ ಮಾಡಬೇಕೆಂದು ಕೇಳಿಕೊಂಡರು. ಅವರು ಕಾಲೇಜಿನಿಂದ ನೇರವಾಗಿ ಬಂದಿದ್ದರಿಂದ ಅವರ ಕೈಯಲ್ಲಿ ಪುಸ್ತಕಗಳಿದ್ದವು. ಅವರ ಪುಸ್ತಕಗಳಲ್ಲಿದ್ದ ಭಾರತದ ಇತಿಹಾಸದ ಒಂದು ಪುಸ್ತಕದ ಪುಟಗಳನ್ನು ತಿರುವಲಾರಂಭಿಸಿದೆ. ಟಿಪ್ಪು ಸುಲ್ತಾನ್ ಕುರಿತು ಪಾಠಕ್ಕೆ ಬಂದಾಗ ಟಿಪ್ಪು ಸುಲ್ತಾನ್ ತಮ್ಮನ್ನು ಬಲವಂತವಾಗಿ ಮುಸಲ್ಮಾನರನ್ನಾಗಿ ಪರಿವರ್ತಿಸಬಯಸಿದ್ದರಿಂದ ಮೂರು ಸಾವಿರ ಬ್ರಾಹ್ಮಣರು ಆತ್ಮಹತ್ಯೆ ಮಾಡಿಕೊಂಡರು ಎಂದು ಅದರಲ್ಲಿ ನಮೂದಾಗಿದ್ದನ್ನು ಗಮನಿಸಿದೆ. ಇತಿಹಾಸಕಾರನ ಹೆಸರೇನೆಂದು ನೋಡಿದಾಗ ಮಹಾಮಹೋಪಾಧ್ಯಾಯ ಡಾ. ಹರಪ್ರಸಾದ್ ಶಾಸ್ತ್ರಿ, ಮುಖ್ಯಸ್ಥರು, ಸಂಸ್ಕೃತ ವಿಭಾಗ, ಕಲ್ಕತ್ತಾ ವಿಶ್ವವಿದ್ಯಾನಿಲಯ ಎಂದಿತ್ತು.
ಮರುದಿನವೇ ನಾನು ಅವರಿಗೆ ಪತ್ರ ಬರೆದು, ನೀವು ಯಾವ ಮೂಲದಿಂದ ಈ ಘಟನೆಯನ್ನು ಉಲ್ಲೇಖಿಸಿದ್ದೀರಿ ಎಂಬುದನ್ನು ದಯವಿಟ್ಟು ನನಗೆ ತಿಳಿಸಬೇಕೆಂದು ನಾನು ಅವರನ್ನು ಕೇಳಿಕೊಂಡೆ. ನಾನು ಅವರಿಗೆ ನಾಲ್ಕು ಬಾರಿ ನೆನಪಿಸಿದ ನಂತರ ಅವರು ಈ ಘಟನೆಯನ್ನು ಮೈಸೂರು ಗೆಜೆಟಿಯರ್‍ನಿಂದ ಉಲ್ಲೇಖಿಸಿರುವುದಾಗಿ ತಿಳಿಸಿದರು.
ಮೈಸೂರು ಗೆಜೆಟಿಯರ್‍ನ ಆ ಸಂಪುಟ ನನಗೆ ಅಲಹಾಬಾದ್‍ನಲ್ಲೂ ಸಿಗಲಿಲ್ಲ, ಕಲ್ಕತ್ತಾದಲ್ಲೂ ಸಿಗಲಿಲ್ಲ. ನಾನು ಡಾ|| ತೇಜ ಬಹದೂರ್ ಸಪ್ರುರವರ ಸಲಹೆ ಮೇರೆಗೆ ಮೈಸೂರಿನ ದಿವಾನ್ ಮಿರ್ಜಾ ಇಸ್ಮಾಯಿಲ್‍ರವರಿಗೆ ಪತ್ರ ಬರೆದೆ. ಸರ್ ಮಿರ್ಜಾ ಇಸ್ಮಾಯಿಲ್ ಅವರು ನನ್ನ ಪತ್ರವನ್ನು ವಿಶ್ವವಿದ್ಯಾನಿಲಯದ ಕುಲಪತಿ ಸರ್ ಬೃಜೇಂದ್ರನಾಥ ಸೀಲ್ ಅವರಿಗೆ ರವಾನಿಸಿದರು. ಸೀಲ್ ಸಾಹೇಬರು ಆಗ ಮೈಸೂರು ಗೆಜೆಟಿಯರನ್ನು ಸಂಪಾದಿಸುತ್ತಿದ್ದ ಪ್ರೊ. ಶ್ರೀಕಂಠಯ್ಯ ಅವರಿಗೆ ನನ್ನ ಪತ್ರವನ್ನು ತಲುಪಿಸಿರುವುದಾಗಿ ತಿಳಿಸಿದರು. ಮೈಸೂರು ಗೆಜೆಟಿಯರ್‍ನಲ್ಲಿ ಇಂತಹ ವಿಷಯ ಇಲ್ಲವೇ ಇಲ್ಲವೆಂದು ಅವರು ನನಗೆ ತಿಳಿಸಿದರು. ಇತಿಹಾಸದ ಆ ಪುಸ್ತಕವು ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ, ಬಂಗಾಲ ಹಾಗೂ ಅಸ್ಸಾಂನ ಪ್ರೌಢಶಾಲೆಗಳಿಗೆ ಪಠ್ಯವಾಗಿತ್ತು. ಲಕ್ಷಾಂತರ ಮುಗ್ಧ ವಿದ್ಯಾರ್ಥಿಗಳು ಪ್ರತಿವರ್ಷ ಈ ಪಠ್ಯವನ್ನು ಓದುತ್ತಿದ್ದರು. ಈ ಘಟನೆಯ ಪರಿಣಾಮ ಅವರ ಮನಸ್ಸಿನ ಮೇಲೆ ಎಂತಹ ಪ್ರಭಾವ ಬೀರಬಲ್ಲುದು?
ನಾನು ಈ ಪತ್ರ ವ್ಯವಹಾರದ ಎಲ್ಲಾ ದಾಖಲೆಗಳನ್ನು ಕಲ್ಕತ್ತಾ ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ರವಾನಿಸಿದೆ. ಈ ಪತ್ರ ವ್ಯವಹಾರದ ದಾಖಲೆಗಳಿಂದ ಶಾಸ್ತ್ರಿ ಅವರ ಪುಸ್ತಕದಲ್ಲಿ ಉಲ್ಲೇಖಿಸಲಾದ ಘಟನೆ ಸುಳ್ಳೆಂದು ತಮಗೆ ಖಚಿತವಾದರೆ ಆ ಕುರಿತು ಕ್ರಮ ಜರಗಿಸಬೇಕೆಂದೂ ಇಲ್ಲದಿದ್ದರೆ ನನ್ನ ಪತ್ರ ವ್ಯವಹಾರದ ದಾಖಲೆಗಳನ್ನು ವಾಪಾಸು ಕೊಡಬೇಕೆಂದೂ ನಾನು ಅವರಿಗೆ ವಿನಂತಿಸಿಕೊಂಡೆ. ಅವರಿಂದ ನನಗೆ ಶೀಘ್ರವೇ ಉತ್ತರ ಬಂತು. ಅಷ್ಟೇ ಅಲ್ಲ ಅದರ ಜೊತೆಗೆ ಶಾಸ್ತ್ರಿ ಅವರ ಇತಿಹಾಸದ ಪುಸ್ತಕವನ್ನು ಪ್ರೌಢಶಾಲೆಗಳಿಂದ ಹಿಂತೆಗೆದುಕೊಳ್ಳಲಾಗಿದೆ ಎಂಬ ಅವರ ಆದೇಶದ ಪ್ರತಿಯೂ ಬಂತು.
ಬಿ.ಎನ್.ಪಾಂಡೆಯವರು ಹರಪ್ರಸಾದ್ ಶಾಸ್ತ್ರಿಯ ವಿಕೃತ ಮನಸ್ಸಿನ ಕರಾಳ ಮುಖವನ್ನು ಅನಾವರಣಗೊಳಿಸಿದ ಬಳಿಕ ಶಾಸ್ತ್ರಿಯವರಲ್ಲಿ ಆ ಬಗ್ಗೆ ವಿಚಾರಿಸಿದಾಗ ಶಾಸ್ತ್ರಿ ನೀಡಿದ ಉತ್ತರವೇನಿತ್ತು ಗೊತ್ತೆ? ಮೈಸೂರು ಗೆಜೆಟಿಯರ್‍ನಲ್ಲಿ ಇತ್ತೆಂದು ನನಗೆ ಅನಿಸಿತ್ತು. ಅದು ಮೈಸೂರು ಗೆಜೆಟಿಯರ್‍ನಲ್ಲಿ ಇಲ್ಲದಿದ್ದರೆ ಅದೆಲ್ಲಿಂದ ಈ ಘಟನೆಯನ್ನು ಉಲ್ಲೇಖಿಸಿದೆನೋ ನನಗೆ ತಿಳಿಯದು. (ಬಿ.ಎನ್. ಪಾಂಡೆ: ಭಾರತದಲ್ಲಿ ಕೋಮು ಸೌಹಾರ್ದದ ಪರಂಪರೆ: ಪುಟ: 11-12)

ಬಿ.ಎನ್. ಪಾಂಡೆಯಂತಹ ಸಜ್ಜನ ಇತಿಹಾಸ ತಜ್ಞರ ಗಮನಕ್ಕೆ ಈ ಘಟನೆ ಬಾರದಿದ್ದರೆ ಇಂದಿಗೂ ಅದು ಪ್ರೌಢಶಾಲೆಗಳ ಇತಿಹಾಸದಲ್ಲಿ ಪಠ್ಯವಾಗಿರುತ್ತಿತ್ತೋ ಏನೋ? ಇಂತಹ ಅದೆಷ್ಟು ಸುಳ್ಳುಗಳು ನಮ್ಮ ಶಾಲೆ, ಕಾಲೇಜುಗಳ ಇತಿಹಾಸ ಪಠ್ಯದಲ್ಲಿದೆಯೋ ಏನೋ? ಇತಿಹಾಸದ ಹೆಸರಲ್ಲಿ ಸುಳ್ಳಿನ ಕಂತೆಗಳು ದಾಖಲಾಗಿದ್ದು ಗಮನಕ್ಕೆ ಬಂದರೆ ಅದರ ವಿರುದ್ಧ ಧ್ವನಿಯೆತ್ತಬೇಕಾದುದು ಈ ನಾಡಿನ ಕೋಮು ಸಾಮರಸ್ಯ, ಸಹಬಾಳ್ವೆಯ ದೃಷ್ಟಿಯಿಂದ ಪ್ರತಿಯೊಬ್ಬ ಪ್ರಜ್ಞಾವಂತನ ಕರ್ತವ್ಯವೂ ಆಗಿದೆ.

ಬ್ರಿಟಿಷರು ಯಾರಿಗೂ ಅಜೇಯರು ಎಂಬ ಕಲ್ಪನೆಯನ್ನು ಟಿಪ್ಪು ಮತ್ತು ಹೈದರ್ ಧ್ವಂಸಗೊಳಿಸಿದಾಗ ಇಂಗ್ಲೀಷರ ಪಾಳಯದಲ್ಲಿ ಅಲ್ಲೋಲ ಕಲ್ಲೋಲವೇ ಆಗಿ ಹೋಯಿತು. ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನದಲ್ಲಿ ತುಂಬಾ ಸೂಕ್ಷ್ಮವಾದ ವಿಷಯ ಧರ್ಮ. ಬ್ರಿಟಿಷರು ಅದನ್ನು ತಮ್ಮ ಆಕ್ರಮಣ, ದುಸ್ಸಾಹಸಗಳ ಸಮರ್ಥನೆಗೂ, ಜನರ ಮನಸ್ಸಿನಿಂದ ಟಿಪ್ಪುವಿನ ಅತ್ಯುನ್ನತ ವ್ಯಕ್ತಿತ್ವದ ಚಿತ್ರಣವನ್ನು ಅಳಿಸಿಬಿಡುವ ಸಲುವಾಗಿಯೂ ಉಪಯೋಗಿಸಿಕೊಂಡರು. ಅದರಿಂದಾಗಿ ಜನರು ಹಳೆಯ ಒಡೆಯರ ರಾಜವಂಶಕ್ಕೆ ನಿಷ್ಠರಾಗಿ ಉಳಿಯಲು ಸಾಧ್ಯವಾಗುತ್ತದೆ. ಅವರಾದರೋ, ಬ್ರಿಟಿಷರ ಬೆಂಬಲದಿಂದ ಮತ್ತೆ ಅಧಿಕಾರಕ್ಕೆ ಬಂದವರಾದ್ದರಿಂದ ಎಂದೆಂದಿಗೂ ಬ್ರಿಟಿಷರ ಅತ್ಯಂತ ವಿಧೇಯ ಅವಲಂಬಿಗಳಾಗೇ ಇರುತ್ತಾರೆ ಎಂಬ ಸತ್ಯ ಬ್ರಿಟಿಷರಿಗೆ ಮನದಟ್ಟಾಗಿತ್ತು. ಅಲ್ಲದೇ‌ ಟಿಪ್ಪುವಿನ ಉಗ್ರ ಧಾರ್ಮಿಕ ನೀತಿಯ ಪರವಾಗಿ ಉದ್ಧರಿಸಿರುವ ಅನೇಕ ಮೂಲಗಳು ಟಿಪ್ಪು ಯುದ್ಧ ಖೈದಿಗಳಾಗಿ ಸೆರೆಮನೆಯಲ್ಲಿ ಬಂಧಿಸಿಟ್ಟವರು ಕೊಟ್ಟ ಹೇಳಿಕೆಗಳು. ಟಿಪ್ಪುವಿನ ಧಾರ್ಮಿಕ ನೀತಿಯನ್ನು ಕೇವಲ ಮಲಬಾರಿನ ನಾಯರರು, ಕೊಡಗಿನ ತುಂಡರಸರು ಮತ್ತು ಮಂಗಳೂರಿನ ಕ್ರೈಸ್ತರು ಇವರ ಬಗೆಗೆ ಟಿಪ್ಪು ತಳೆದಿದ್ದ ಧೋರಣೆಯಿಂದ ಮಾತ್ರವೇ ಟೀಕಿಸಲಾಗುತ್ತದೆ. ರಾಷ್ಟ್ರದ ಶತ್ರುಗಳೊಂದಿಗೆ ಕೈ ಜೋಡಿಸಿ ತನ್ನನ್ನು ಪದಚ್ಯುತಗೊಳಿಸಲು ಮಸಲತ್ತು ಮಾಡಿದ ರಾಜದ್ರೋಹದ ಅಪರಾಧ ಅವರ ಮೇಲಿದ್ದರಿಂದ ಅವರ ಬಗೆಗೆ ಟಿಪ್ಪು ಕಠೋರವಾಗಿ ನಡೆದುಕೊಂಡರು ಎಂಬುದನ್ನು ಕೆಲವು ಇತಿಹಾಸಕಾರರು ಬೇಕೆಂತಲೇ ಮರೆತುಬಿಟ್ಟಿದ್ದಾರೆ. ಬ್ರಿಟಿಷ್, ಫ್ರೆಂಚ್, ನಿಜಾಮ, ಮರಾಠರು ಈ ಯಾರೊಂದಿಗೇ ಆಗಲಿ ಟಿಪ್ಪುವಿನ ಧೋರಣೆಯು ಆ ಕಾಲದ ತುರ್ತು ಅಗತ್ಯಕ್ಕೆ ತಕ್ಕಂತೆ ಇತ್ತೇ ಹೊರತು ಪ್ರಜೆಗಳ ಬಗ್ಗೆ ಧಾರ್ಮಿಕ ನೆಲೆಯ ತಾರತಮ್ಯ ನೀತಿ ಟಿಪ್ಪುವಿನಲ್ಲಿರಲಿಲ್ಲ.

“ಮನುಷ್ಯ ಮನುಷ್ಯರ ನಡುವೆ ಬೇಧ ಕಲ್ಪಿಸಿ, ಪಕ್ಷಪಾತ ಮಾಡಿ ಭಗವಂತನ ಅಸಮಾಧಾನವನ್ನು ಕಟ್ಟಿಕೊಳ್ಳಕೂಡದು ಎಂದು ಟಿಪ್ಪು ಆಲೋಚಿಸುತ್ತಿದ್ದರು. ಆದ್ದರಿಂದ ತನ್ನ ಪ್ರಜೆಗಳ ಬಗ್ಗೆ, ವ್ಯವಹರಿಸುವಾಗ ಟಿಪ್ಪುವಿಗೆ ಪ್ರತ್ಯೇಕವಾದ ಒಂದು ಧಾರ್ಮಿಕ ನೀತಿಯಾಗಲಿ, ತತ್ವವಾಗಲಿ, ಮಾನದಂಡವಾಗಲಿ ಇರಲಿಲ್ಲ. ಅವರೆಲ್ಲರೂ ತನ್ನ ಪ್ರಜೆಗಳು. ಹಿಂದೂಗಳಾಗಿರಲಿ, ಮುಸ್ಲಿಮರಾಗಿರಲಿ, ಕ್ರೈಸ್ತರಾಗಿರಲಿ ಅವರ ಭಾವನೆಗಳನ್ನು ತಾನು ಗೌರವಿಸಬೇಕು. ಅವರ ಹಿತಗಳನ್ನು ಕಾಪಾಡಬೇಕು ಎಂದು ಚಿಂತನೆಯಾಗಿತ್ತು ಅವರದ್ದು. ವಾಸ್ತವವಾಗಿ ಟಿಪ್ಪು ಎಲ್ಲರ ಬಗೆಗೆ ಉದಾರಿಯಾಗಿದ್ದರು.” (ಪ್ರೊ.ಬಿ.ಶೇಖ್ ಆಲಿ, ಕರ್ನಾಟಕ ಚರಿತ್ರೆ ಸಂ-5, ಪುಟ-502)

ಒಟ್ಟಿನಲ್ಲಿ ಅಂದು ಟಿಪ್ಪುವನ್ನು ಇತಿಹಾಸದ ಹೆಸರಲ್ಲಿ ಬ್ರಿಟಿಷರು ಮತ್ತೆ ಮತ್ತೆ ಕೊಂದರು… ಟಿಪ್ಪು ಹುತಾತ್ಮನಾಗಿಯೂ ಅವರ ಅತ್ಯಂತ ಜನಪರ ಆಡಳಿತಕ್ಕಾಗಿ, ಅವರ ಜಾತ್ಯಾತೀತ ನಿಲುವಿಗಾಗಿ ಮತ್ತು ಬ್ರಿಟಿಷ್ ಪ್ರಭುಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಕ್ಕಾಗಿ ಜನಮಾನಸದಲ್ಲಿ ಜೀವಂತವಿರುವುದನ್ನು ಸಹಿಸದ ಫ್ಯಾಸಿಸ್ಟರು ಮತ್ತೆ ಮತ್ತೆ ಕೊಲ್ಲುತ್ತಿದ್ದಾರೆ… ಅವರಿಗೇನು ಗೊತ್ತು…. ಹುತಾತ್ಮರು ಮರಣಿಸಿಯೂ ಬದುಕುತ್ತಾರೆಂಬ ಸತ್ಯ.

ದಿಟದಲ್ಲಿ ಹುತಾತ್ಮರಿಗೆ ಸಾವೇ ಇಲ್ಲ ಎಂಬುವುದು ಸತ್ಯ.

LEAVE A REPLY

Please enter your comment!
Please enter your name here