ಪುಸ್ತಕ ವಿಮರ್ಶೆ: ರವಿ ನವಲಹಳ್ಳಿ ರಾಯಚೂರು. (ಯುವ ಸಾಹಿತಿ ಕಲಾವಿದ)

ಮೂಲ:- ಲಕ್ಷಣ ಗಾಯಕವಾಡ
ಕನ್ನಡಕ್ಕೆ:- ಚಂದ್ರಕಾಂತ ಪೋಕಳೆ.

“ಪರಿವರ್ತನೆಯ ಹೋರಾಟದಲ್ಲಿ ದುಡಿಯುವ ನನ್ನ ಎಲ್ಲ ಗರಳೆಯರಿಗೆ” ಅಂತ ಈ ಕೃತಿಯನ್ನು ಅರ್ಪಿಸಿರುವ ಗಾಯಕವಾಡರು ತಮ್ಮ ಜೀವನದುದ್ದಕ್ಕೂ ಹಸಿವಿನಿಂದ ಅನ್ನಕ್ಕಾಗಿ ಹಪಹಪಿಸುತ್ತಾರೆ, ಅನ್ನಕ್ಕಾಗಿ ಕಳ್ಳತನ ಮಾಡುತ್ತಾರೆ. ಎಲ್ಲ ಮಾಡುವುದು ಗೇಣು ಹೊಟ್ಟೆಗಾದರೂ ಸಹ ಆ ಹೊಟ್ಟೆ ತುಂಬಿಸಲು ಉಚಲ್ಯಾದಂತಹ ‘ಕ್ರಿಮಿನಲ್ ಟ್ರೈಬ್’ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಂತಹ ಈ ಉಚಲ್ಯಾದಂತಹ ಹಲವಾರು ಜನಾಂಗಗಳ ಹಸಿವಿನ ಹೊಟ್ಟೆಯ ತಲ್ಲಣಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ ಲಕ್ಷ್ಮಣ ಗಾಯಕವಾಡರು.

ಇಡೀ ಕೃತಿಯಲ್ಲಿ ಲೇಖಕರಿಗೆ ಹಸಿವು, ಬಡತನ, ತಮ್ಮ ಸಮುದಾಯಕ್ಕೆ ಅಂಟಿಕೊಂಡಿರುವ ಹಣೆಪಟ್ಟಿ ಮತ್ತು ತಮ್ಮ ಮೇಲಾಗುವ ಉಳ್ಳವರ ಶೋಷಣೆಯನ್ನು ಕೃತಿಯುದ್ದಕ್ಕೂ ಪ್ರಶ್ನಿಸುತ್ತಾ ಹೋಗುತ್ತಾರೆ. ನಾವು ಬಡವರಾಗಿರುವುದಕ್ಕೆ ಕಾರಣವೇನು? ನಮ್ಮ ಮೇಲಿನ ಶೋಷಣೆಗೆ ಕಾರಣವೇನು? ನಮಗೇಕೆ ಎಲ್ಲರಂತೆ ಬದುಕಲು ಬಿಡುವುದಿಲ್ಲ? ನಾವೇಕೆ ಕೀಳು ಜನಾಂಗದವರಾದೆವು? ಎನ್ನುವಂತ ಹಲವಾರು ಪ್ರಶ್ನೆಗಳು ಲೇಖಕರಿಗೆ ಕಾಡುತ್ತಿರುತ್ತವೆ. ಇದಕ್ಕೆಲ್ಲ ಕೊನೆ ಹೋರಾಟದಿಂದಲೇ ಸಾಧ್ಯವೆನ್ನುವ ಮಾತನ್ನು ತಮ್ಮ ಜೀವನದುದ್ದಕ್ಕೂ ನಿರೂಪಿಸುತ್ತ ಲೇಖಕರು ಬರುತ್ತಾರೆ. ತಮ್ಮ ಜೀವನದಲ್ಲಿ ಲೇಖಕರು ಬಹಳ ನೋವುಂಡವರು, ಅನ್ಯಾಯಕ್ಕೊಳಗಾದವರು, ಶೋಷಣೆಗೊಳಗಾದವರು, ತಳ್ಳಲ್ಪಟ್ಟವರು. ಆದರೆ ಇದೆಲ್ಲದರ ವಿರುಧ್ಧದ ಧ್ವನಿ ಹೋರಾಟದ್ದಾಗಿರುತ್ತದೆ.

ಈ ಉಚಲ್ಯಾ ಜನಾಂಗದ ಮುಖ್ಯ ಕಸುಬು ಕಳ್ಳತನವಾಗಿರುತ್ತದೆ. ಪಟ್ಟಣದಲ್ಲಿ, ಊರಿನ ಜಾತ್ರೆಗಳಲ್ಲಿ, ಒಟ್ಟಾರೆಯಾಗಿ ಎಲ್ಲಿ ಕಳ್ಳತನ ಮಾಡಲು ಅವಕಾಶವಿರುತ್ತದೆಯೋ ಅಂತಹ ಕಡೆಗಳಲ್ಲೆಲ್ಲ ಕಳ್ಳತನ ಮಾಡುತ್ತಾ ಇರುತ್ತಾರೆ. ಕಳ್ಳತನ ಮಾಡಿದ ಮಾಲನ್ನು ಊರಿನ ಗೌಡನಿಗೆ ಮಾರುವುದು, ಅದರಿಂದ ಬಂದ ಹಣದಿಂದ ಹೊಟ್ಟೆ ತುಂಬಿಸಿಕೊಳ್ಳುವುದು. ಆದರೆ ಕಳ್ಳರಂತ ಗೊತ್ತಾದಾಗ ಪೋಲೀಸರು ಸುಮ್ಮನಿರುವರೇ? ಎಲ್ಲಿಯೇ ಕಳ್ಳತನವಾದರೂ ನೇರ‌ ಮನೆಗೆ ನುಗ್ಗಿ ಎಲ್ಲರನ್ನು ಹಿಂಸಿಸುವುದು, ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಮಾಡುವುದು ಮತ್ತೆ ಹಣಕೊಡುವಂತೆ ಪೀಡಿಸುವುದು ಇದು ಪೋಲೀಸರು ಮಾಡುವ ದೌರ್ಜನ್ಯ ಒಂದೆಡೆಯಾದರೆ, ನಾವು ದುಡಿದು ತಿನ್ನುತ್ತೇವೆ ಎಂದು ಕೆಲಸ ಅರಸಿ ಹೋದರೆ ಕಳ್ಳರೆಂದು ಕೆಲಸ ಕೊಡುವುದಿಲ್ಲ. ಇದು ಹಲವಾರು ಉಚಲ್ಯಾಗಳ ಸ್ಥಿತಿಯಾಗಿತ್ತು.

ಉಚಲ್ಯಾ ಜನಾಂಗದ ಆಹಾರ ಪದ್ಧತಿ ಅವರ ಆಚರಣೆಗಳು ತುಂಬಾನೆ ಹೊಸದಾಗಿ ಕಾಣುತ್ತವೆ.
ಮಾಂಸಹಾರವನ್ನು ಮತ್ತು ಬೇಟೆಯನ್ನು ಲೇಖಕರು ತುಂಬಾನೇ ಇಷ್ಟಪಡುತ್ತಿರುತ್ತಾರೆ. ಒಂದುಕಡೆ ಲೇಖಕರೇ ಹೇಳುತ್ತಾರೆ “ನಾವು ತಿನ್ನುವ ಹಂದಿ ಮಾಂಸ ನೋಡಿ ಸಂಡಾಸಿಗೆ ಕುಳಿತ ಹೆಂಗಸರು ಮೂಗು ಮುಚ್ಚಿಕೊಳ್ಳುತ್ತಿದ್ದರು. ನನಗೆ ಮಾತ್ರ ಇನ್ನೂ ಬೇಕೆನಿಸುತ್ತಿತ್ತು. ಯಾಕೆಂದರೆ ಹಂದಿ ಮಾಂಸ ಕೊಬ್ಬರಿಯ ಹಾಗಿತ್ತು. ಹಾಗೆ ನೋಡಿದರೆ ಊರ ಹೆಂಗಸರು ಅಲ್ಲಿ ಸಂಡಾಸ ಮಾಡುವುದರಿಂದ ನಮಗೆ ಲಾಭವೇ ಇತ್ತು. ಯಾಕೆಂದರೆ ನಮ್ಮ ಹಂದಿಗಳು ಅವರ ಮಲ ತಿಂದು ಕೊಬ್ಬುತ್ತಿದ್ದವು. ಹೀಗಾಗಿ ಅವರೆಲ್ಲ ನಮ್ಮ ಮನೆಯ ಎದುರು ಕೂತೇ ಸಂಡಾಸ ಮಾಡಲೆಂದು ಹಾರೈಸುತ್ತಿದ್ದೆವು”.(ಪು.ಸಂಖ್ಯೆ ೧೮) ಇಷ್ಟರ ಮಟ್ಟಿಗೆ ಹಸಿವು ಲೇಖಕರಿಗೆ ಕಾಡುತ್ತಿತ್ತು. ಅವರು ಹಸಿವನ್ನು ನೀಗಿಸಲು ಹಲವಾರು ಕೆಲಸಗಳನ್ನು ಮಾಡುವರು.

೧೯೮೮ರಲ್ಲಿ ಕೇಂದ್ರ ಸಾಹಿತ್ಯ ಪ್ರಶಸ್ತಿಯನ್ನು ಪಡೆದ ಈ ಕೃತಿಯು ಪ್ರಶಸ್ತಿಗೆ ಅರ್ಹವಾದ ಮಹತ್ತರವಾದ ಕೃತಿಯಾಗಿದೆ. ಕೊನೆಯಲ್ಲಿ ಲೇಖಕರು ಹೋರಾಟದತ್ತ ಮುಖಮಾಡುತ್ತಾರೆ. ನಮ್ಮ ಬದಲಾವಣೆ ಹೋರಾಟದಿಂದಲೇ ಸಾಧ್ಯವೆಂಬುದನ್ನು ತುಂಬಾನೇ ಒತ್ತಿಹೇಳುತ್ತಾರೆ. ಸರಾಗವಾಗಿ ಓದಿಸಿಕೊಂಡು ಹೋಗುವ ಕೃತಿ ಕೊನೆಯಲ್ಲಿ ಸ್ವಲ್ಪ ಬೇಸರ ಮೂಡಿಸಿದರೂ ಸಹ, ಎಲ್ಲೋ ಕಳ್ಳತನ ಮಾಡಿ ಬದುಕುವ ಸಮುದಾಯದಲ್ಲಿ ಹುಟ್ಟಿದ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಶಿಕ್ಷಣದ ಮೂಲಕ ಆದ ಬಹುದೊಡ್ಡ ಬದಲಾವಣೆಯನ್ನು ಲೇಖಕರು ಸುಂದರವಾಗಿ ಚಿತ್ರಿಸಿದ್ದಾರೆ. ಇನ್ನು ಕೃತಿಯ ಅನುವಾದವೂ ಸಹ ಚೆನ್ನಾಗಿದೆ. ನನ್ನ ಮಟ್ಟಿಗೆ ಓದಲೇ ಬೇಕಾದ ಕೃತಿಗಳಲ್ಲಿ ಇದೂ ಒಂದು.

LEAVE A REPLY

Please enter your comment!
Please enter your name here