ಚರಣ್ ಐವರ್ನಾಡು

ಸಾವಿರಾರು ಮಂದಿ ಯುವಕರಿಗೆ ಉದ್ಯೋಗ ನೀಡಿದಾತನ ಆತ್ಮಹತ್ಯೆಯೊಂದು ತೀವ್ರವಾಗಿ ಕಾಡುತ್ತಿರುವಾಗ ಈ ನನ್ನ ಫೇಸ್ಬುಕ್ ಇನ್‍ಬಾಕ್ಸಿಗೆ ಬಂದ ಒಂದು ಮೆಸೆಜ್ ಕರುಳನ್ನು ಕಿವುಚಿತು. “ನಾನು ಸಾಯಬೇಕು….ಈ ತಿಂಗಳೇ ಕೊನೆ! ಕೈಯಲ್ಲಿ ಇಷ್ಟು ಓದಿ ಕೆಲಸ ಇಲ್ಲ!”

ಕೆಲವು ತಿಂಗಳ ಹಿಂದೆ “MSW ಮಾಡಿದ್ದೇನೆ. ಜಾಬ್ ಇದ್ರೆ ಹೇಳಿ…ಪ್ಲೀಸ್!” ಎಂದು ಮಾತು ಆರಂಭಿಸಿದ ಈ ಮಿತ್ರನನ್ನು ಸಮಧಾನ ಪಡಿಸಲು ಸಾಕಾಗಿ ಹೋಯಿತು. ಇವತ್ತು ಬೆಳಗ್ಗೆ ಯಾವುದೋ ಇಂಟವ್ರ್ಯೂ ಇದೆ ಅಂತ ಮೆಸೆಜ್ ಮಾಡಿದ್ದ, ನಾನು ಹಾರೈಸಿದ್ದೆ. ಕುತೂಹಲದಿಂದ ಮೆಸೆಜ್ ಹಾಕಿ ಏನಾಯಿತು ಎಂದು ಕೇಳಿದಾಗ ಈ ರೀತಿ ಎಲ್ಲವನ್ನೂ ಕಳಕೊಳಡವನಂತೆ ಮಸೆಜ್ ಮಾಡಿದ್ದಾನೆ!

ಭಾರತದಲ್ಲಿ ನಿರುದ್ಯೋಗದ ಸಮಸ್ಯೆಯಿಂದ ಆತ್ಮಹತ್ಯೆಗಳೂ ಏರಿಕೆಯಾಗುತ್ತಿವೆ. ಯುವಕರು ಖಿನ್ನತೆಗೆ ಒಳಗಾಗುತ್ತಿದ್ದಾರೆ. 2014ರಲ್ಲಿ ನಿರುದ್ಯೋಗದ ಕಾರಣದಿಂದ 2,207 ಆತ್ಯಹತ್ಯೆಗಳಾಗಿವೆ. ನಾಚಿಕೇಡಿನ ಸಂಗತಿಯೆಂದರೆ ಡಿಜಿಟಲ್ ಇಂಡಿಯಾದ ಬಗ್ಗೆ ಮಾತನಾಡುವ ಕೇಂದ್ರ ಸರಕಾರ ತನ್ನ ಎರಡನೇ ಸರಕಾರ ಬಂದರೂ 2014 ನಂತರ ಈ ಮಾಹಿತಿಯನ್ನು Data.gov in (Open Government Data – OGD platform India ನಲ್ಲಿ ನೀಡಿಯೇ ಇಲ್ಲ! ಇದು ಉದ್ದೇಶಪೂರ್ವಕ ಮಂಗಗೊಳಿಸುವ ತಂತ್ರವೇ! https://data.gov.in/catalog/stateut-wise-distribution-suicides-causes?filters%5Bfield_catalog_reference%5D=91648&format=json&offset=0&limit=6&sort%5Bcreated%5D=desc

ಸುಮಾರು ದಿನಗಳಿಂದ “ಎಲ್ಲಾದರೂ ಒಂದು ಜಾಬ್ ಇದ್ರೆ ನಿಮ್ಮ ಪರಿಚಯದವರಲ್ಲಿ ಹೇಳಿ ಕೊಡಿಸಿ,,,” ಅಂತ ಇನ್‍ಬಾಕ್ಸಿಗೆ ನನ್ನದೇ ಪ್ರಾಯದವರು ಮೆಸೆಜ್ ಮಾಡುತ್ತಾರೆ. ಅದ್ಯಾವ ಕಾರಣದಿಂದ ನನ್ನನ್ನು ಕೇಳುತ್ತಾರೆ ಎಂಬುದು ಗೊತ್ತಿಲ್ಲ! ನಿನ್ನೆಯೊಂದೇ ದಿನ ನನ್ನನ್ನು ನಾಲ್ಕು ಮಂದಿ ಉದ್ಯೋಗಕ್ಕಾಗಿ ಕೇಳಿದ್ದಾರೆ. ನನ್ನ ಮಿತ್ರ ವಲಯದ ಕೆಲವರನ್ನು ಅವರ ಮಾಹಿತಿ ನೀಡಿ ಕೇಳಿಕೊಂಡಿದ್ದೇನೆ.
ಇರುವ ಫ್ರೀಲ್ಯಾನ್ಸ್ ಆಗಿ ಉದ್ಯೋಗ ಮಾಡುತ್ತಾ ಸದ್ಯ ಕಿಸೆಯ ಭಯ ಇಲ್ಲದ ನಂಗೆ ಮುಂದೆ ಶೈಕ್ಷಣಿಕವಾಗಿ ಮುಂದುವರಿಯುವ ಕನಸು ಇದ್ದೇ ಇದೆ. ಅದಕ್ಕೆ ನನ್ನ ಗಂಟು ಗಟ್ಟಿಯಾಗಲೇ ಬೇಕು. ಆದರೆ ಮಾಧ್ಯಮಗಳಲ್ಲಿ ನಮ್ಮ ಬದುಕು ಹೇಗೆ ಎಂಬ ಪ್ರಶ್ನೆ ಎದುರಾದಾಗ ಭಯವಾಗುತ್ತದೆ. ನಾನು ಸದ್ಯ ನಿರುದ್ಯೋಗಿಯೇ!

ಇನ್ನೊಬ್ಬ ಮಿತ್ರ ಇಂಡಿಗೋ ಏರ್‍ಲೈನ್ಸ್ ಎಂಬ ಸಂಸ್ಥೆಗೆ ಉದ್ಯೋಗಕ್ಕೆ ನೂರು ಕನಸುಗಳಿಂದ ಬೇಕಾದ ದಾಖಲೆಗಳನ್ನು ಕಳುಹಿಸಿದ್ದ. ಅವರ ಲ್ಷಾಂತರ ಸಂಬಳದ ಮಾತುಗಳಿಗೆ ಮರುಳಾಗಲೇ ಬೇಕಾಯಿತು! ದಿನ ಕಳೆದಂತೆ ಅವರು ಅಷ್ಟು ಸಾವಿರ ಕಟ್ಟಿ, ಇಷ್ಟು ಕಟ್ಟಿ ಎಂದು ಫೋನ್ ಮಾಡಿ ಗದರಿಸಲಾರಂಭಿಸಿದರು. ಕೊನೆಗೆ ಮಣ್ಣು ಹಾಕಲಿ ಎಂದು ಅದರ ಕಡೆ ಅವನು ತಲೆಯೇ ಹಾಕಲಿಲ್ಲ. ಉದ್ಯೋಗಕ್ಕಾಗಿ ಪರದಾಡುವವರನ್ನೇ ಬಂಡವಾಳವಾಗಿ ಇಟ್ಟುಕೊಂಡು ಹಣ ಮಾಡುವ ದಂಧೆಗಳು ಶುರುವಾಗಿವೆ. ಅನಧಿಕೃತ ವೆಬ್‍ಸೈಟ್‍ಗಳು ಹುಟ್ಟಿಕೊಂಡಿವೆ. ಅವುಗಳು ದುಡ್ಡು ಕಸಿದುಕೊಂಡು ಪಂಗನಾಮ ಹಾಕುತ್ತವೆ!

ನನ್ನ ಆತ್ಮೀಯ ಗೆಳೆಯ ಇಂಜಿನೀಯರಿಂಗ್ ಮುಗಿಸಿ ಕೆಲ ತಿಂಗಳು ಮನೆಲಿದ್ದು ಮೈಸೂರಿನಲ್ಲಿ ಇದ್ದ ಯಾವುದೋ ಕಂಪನಿಗೆ ಕೆಲಸಕ್ಕೆ ಸೇರಿದ. ಕೆಲಸವೋ ಅವನ ಓದಿಗೆ ಸಂಬಂಧಿಸಿದ್ದಲ್ಲವೇ ಅಲ್ಲ. ಐಟಿಐ, ಡಿಪ್ಲೋಮಾ ಮಾಡಿದವರೊಂದಿಗೆ ಇವನು ಕೆಲಸ ಮಾಡಬೇಕಿತ್ತು. ಕೆಲಸಗಾರರನ್ನು ಮೂರು ವರ್ಷಗಳಿಗೆ ಬಾಂಡ್ ಬರೆಸಿ ಕತ್ತೆಗಳಂತೆ ದುಡಿಸಿಕೊಳ್ಳುತ್ತಾರೆ. ಬೆಳಗ್ಗೆ ಒಂಬತ್ತರಿಂದ ರಾತ್ರಿ ಹತ್ತೋ ಹನ್ನೊಂದೋ ಆಗುತ್ತಿತ್ತು. ಸಾಕ್ಷಾತ್ ಜೀತದಾಳಿನಂತೆ ದುಡಿಮೆ! ಹೊರಗೆ ಬರುವ ಹಾಗಿಲ್ಲ, ಕೆಲಸಗಾರರ ಎಲ್ಲಾ ದಾಖಲೆಗಳು ಕಂಪನಿಯ ಕೈಯಲ್ಲೇ ಇವೆ. ಮೂರು ವರ್ಷಗಳ ವರೆಗೆ ಅಗ್ರಿಮೆಂಟ್. ಕೊನೆಗೆ ಯಾವುದೋ ಗಲಾಟೆಯಲ್ಲಿ ಆ ಕಂಪನಿಯಿಂದ ಹೊರಬಂದು ಕೊಂಚ ನೆಮ್ಮದಿಯಾಗಿದ್ದಾನೆ!

ಕತೆ ಹೇಳಿ ಸುಖವಿಲ್ಲ…..! ನಮ್ಮ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ತಾರಕಕ್ಕೆ ಏರಿದೆ. National Sample Survey Office (NSSO) 2017-18ರ ವರದಿಯನ್ನು ಕಂಡಾಗ ಭಯವಾಗುತ್ತದೆ. ಭಾರತದಲ್ಲಿ ನಿರುದ್ಯೋಗ 6% ಏರಿಕೆಯಾಗಿದೆ. ಆದರೆ ಈ ವರದಿಯನ್ನು ಕೇಂದ್ರ ಸರಕಾರ ಹೊರಹಾಕದೆ ಕಣ್ಣು ಮುಚ್ಚಿ ಹಾಲು ಕುಡಿಯುತ್ತಿದೆ!

State of Indian’s Environment (SoIE) 2019ರ ವರದಿ ಎರಡು ವರ್ಷಗಳಲ್ಲಿ ನಿರುದ್ಯೋಗ ಎರಡು ಪಟ್ಟು ಏರಿಕೆಯಾಗಿದೆ. ಮೇ 2017 ರಿಂದ ಎಪ್ರಿಲ್ 2019 ನಡುವೆ ನಿರುದ್ಯೋಗದ ಮಟ್ಟ 4% ರಿಂದ 7.6%ಗೆ ಹೆಚ್ಚಿದೆ. ಭಾರತದ ಗ್ರಾಮೀಣ ಭಾಗದಲ್ಲಿ ಎಪ್ರಿಲ್ 2019ರಲ್ಲಿ 7.61% ನಿರುದ್ಯೋಗವಿತ್ತು.

15 ರಿಂದ 24 ವರ್ಷ ವಯಸ್ಸಿನವರು ದೇಶದ ಒಟ್ಟು ಜನಸಂಖ್ಯೆಯ 5ರಷ್ಟಿದ್ದಾರೆ. ದೇಶದ ಕಾರ್ಮಿಕ ಶಕ್ತಿಯ 40% ಇವರೇ ತುಂಬಿದ್ದಾರೆ. ಇವರಲ್ಲಿ 32% ನಿರುದ್ಯೋಗವಿದೆ!

ಇನ್ನು ಪದವಿ ಮತ್ತು ಅದಕ್ಕೂ ಹೆಚ್ಚಿಗೆ ಓದಿದವರ ಕತೆ ಹೇಳಿ ಪ್ರಯೋಜನವಿಲ್ಲ. ಕನಿಷ್ಟ ಡಿಗ್ರಿ ಮಾಡಿದವರ ಸಮೂಹದಲ್ಲಿ ಇದ್ದ 10.39% (ಮೇ-ಎಪ್ರಿಲ್ 2017) ನಿರುದ್ಯೋಗದ ಮಟ್ಟ ಸೆಪ್ಟೆಂಬರ್-ಡಿಸೆಂಬರ್ 2018ಕ್ಕೆ 13.17% ಏರಿಕೆಯಾಗಿದೆ!

ನಾವು ಕೌಶಲ್ಯದ ಕೊರತೆಯನ್ನು ಎದುರಿಸುತ್ತಿದ್ದೇವೆ. ಭಾರತ ಸರಕಾರದ ಕೌಶಲ್ಯಾಭಿವೃದ್ಧಿ ಸಚಿವಾಲಯ ಹೇಳಿದಂತೆ ಭಾರತದಲ್ಲಿರುವ ಒಟ್ಟು ವರ್ಕ್‍ಫೋರ್ಸಿನ 4,69% ಮಾತ್ರ ಕೌಶಲ್ಯಪೂರ್ಣರಾಗಿದ್ದಾರೆ. ಯಾವುದೇ ಕೌಶಲ್ಯವಿಲ್ಲದಿದ್ದರೆ ನಮ್ಮ ಕೌಶಲ್ಯದ ಬದಲಾಗಿ ದೇಹದಲ್ಲಿರುವ ಶಕ್ತಿಯನ್ನು ಹಿಂಡಿ ತೆಗೆಯುತ್ತಾರೆ. (ಇತರ ದೇಶಗಳಲ್ಲಿ ಕೌಶಲ್ಯದ ಮಟ್ಟ ಹೀಗಿದೆ:- ಅಮೆರಿಕಾ-52%, ಯುಕೆ-68%, ಜರ್ಮನಿ-75%, ಜಪಾನ್-88%, ದಕ್ಷಿಣ ಕೊರಿಯಾ-96%)

ಹೊಸಬರಲ್ಲಿ ಮಾತು ಆರಂಭಿಸುವಾಗ ನಾನು ಸಾಮಾನ್ಯವಾಗಿ ಅವರ ಆಸಕ್ತಿಯ ಕ್ಷೇತ್ರಗಳು, ಹವ್ಯಾಸಗಳು ಮತ್ತು ಶೈಕ್ಷಣಿಕ ಹಿನ್ನಲೆಗಳನ್ನು ಕೇಳುತ್ತೇನೆ, ಹಾಗಾಗಿ ನನ್ನ ಪ್ರಾಯದ ಅತ್ಯಂತ ವಿಚಾರಶೀಲರಾದ ಗೆಳೆಯರು ತುಂಬಾ ಮಂದಿ ಇದ್ದಾರೆ. ಸಾಮಾನ್ಯವಾಗಿ ಹವ್ಯಾಸಗಳು ಏನೆಂದು ಕೇಳಿದರೆ: ಟಿಕ್ ಟಾಕ್ ಮಾಡೋದು-ನೋಡೋದು, ಟಿವಿ ನೋಡೋದು…ಮತ್ತೆ ಪೇಪರ್ ಓದೋದಂತೆ! ನಾವು ನಮ್ಮ ಕೌಶಲ್ಯವನ್ನು ಬಂಡವಾಳವಾಗಿ ಮಾಡಿಕೊಂಡು ಅದನ್ನು ಬೆಳೆಸುವುದನ್ನು ಮರೆತೇ ಬೆಟ್ಟಿದ್ದೇವೆ. Artificial Intelligence ಎಲ್ಲಾ ಕ್ಷೇತ್ರಗಳನ್ನೂ ಆವರಿಸುವ ಸಂದರ್ಭದಲ್ಲಿ ನಮ್ಮ ಕೌಶಲ್ಯವನ್ನು ಹರಿತಗೊಳಿಸುವಲ್ಲಿ ನಾವು ಸೋಲುತ್ತಿದ್ದೇವೆ.
(ಆ ಕಾರಣದಿಂದ ಅರೆ ಬೆಂದ ಮೇಷ್ಟ್ರುಗಳು ಶಾಲೆ-ಯುನಿವರ್ಸಿಟಿಗಳ ಒಳಗೆ ಬರುವುದು. ಸುಟ್ಟು ತಿನ್ನಲೂ ಸಬ್ಜೆಕ್ಟ್ ಗೊತ್ತಿಲ್ಲ! ಕಮಲಾದೇವಿ ಚಟ್ಟೋಪಾದ್ಯಾಯ ಯಾರು ಅಂತ ಗೊತ್ತಿಲ್ಲದ ಪಿಎಚ್‍ಡಿ ವಿದ್ಯಾರ್ಥಿಗೆ ನಿಸ್ಸಹಾಯಕತೆಯಿಂದ ಮೌಲ್ಯಮಾಪನಕ್ಕೆ ಬಂದ ಪ್ರೊಫೆಸರ್ ಪಿಎಚ್‍ಡಿ ನೀಡಬೇಕಾಗಿ ಬಂದದ್ದನ್ನು ನನ್ನ ಕಣ್ಣುಗಳಲ್ಲೇ ನೋಡಿ ಪುನೀತನಾಗಿದ್ದೇನೆ. ಮುಂದೆ ಇವರೆಲ್ಲಾ ಪಾಠ ಮಾಡುತ್ತಾರೆ…)

ಈ ದೇಶ ಉದ್ಯೋಗ ಬೇಕೆಂದು ಕೇಳಬೇಕೆಂಬ ಜಾಗೃತಿಯಲ್ಲೇ ಇಲ್ಲ. ಕೋಮುವಾದ, ಹೊಲಸು ರಾಜಕೀಯದ ಗಾಂಜಾದ ದಮ್ಮು ಹತ್ತಿಸಿಕೊಂಡು ಉನ್ಮಾದದಲ್ಲಿರಬೇಕಾದರೆ ಉದ್ಯೋಗ ಯಾರಿಗೆ ಬೇಕು? ಗುಂಪು ಗುಂಪಾಗಿ ಹೊಡೆದು ಸಾಯಿಸಲು, ಫೇಸ್ಬುಕ್ ವಾಟ್ಸಾಪ್‍ಗಲ್ಲಿ ಭಿನ್ನ ವಿಚಾರದವರನ್ನು ಹೊಲಸು ಹೊಲಸಾಗಿ ಬೈಯಲು, ಜೈ ಶ್ರೀರಾಮ್ ಹೇಳೆಂದು ಒತ್ತಾಯಿಸಿ ಹೊಡೆದಾಡಲು, ರಾಜಕೀಯ ಪಕ್ಷಗಳ ಸಭೆಗಳಲ್ಲಿ ಜೈಕಾರ ಹಾಕಲು ಕೆಲಸವಿರುವಾಗ ಉದ್ಯೋಗ ಕೇಳುವವರು ಯಾರು? ಈ ದೇಶದಲ್ಲಿ ಶಿಶುವಿನ ಮೇಲೆ ಅತ್ಯಾಚಾರವಾಗುತ್ತದೆ, ಪಶುವಿನ ಮೇಲೆ ಅತ್ಯಾಚಾರವಾಗುತ್ತದೆ! ದೇವರನ್ನು ನಂಬುವ ಜಾಗಗಳಲ್ಲಿ ಅತ್ಯಾಚಾರ ಮಾಡುತ್ತಾರೆ! ಅತ್ಯಾಚಾರ ಮಾಡಿ ಇಡೀ ಕುಟುಂಬವನ್ನೇ ಸಂಚು ರೂಪಿಸಿ ಕೊಂದರೂ ಕೇಳುವುದಿಲ್ಲ!

ಈ ದೇಶದಲ್ಲಿ ಗೋವು. ಮಸೀದಿ, ಮಂದಿರ, ಮಾಂಸ, ದೇವರು, ದಿಂಡಿರು ಎಲ್ಲಾ ಚರ್ಚೆಯ ವಿಷಯಗಳು! ಉದ್ಯೋಗ, ಬಡತನ, ಕೃಷಿ ಸಮಸ್ಯೆಗಳು ಚರ್ಚೆಯೇ ಆಗುವುದಿಲ್ಲ. ಲಕ್ಷಾಂತರ ರೈತರು ಪಾದಯಾತ್ರೆ ಮಾಡಿ ಅವರಿಗಾಗಿ ಮೂರು ದಿನಗಳ ಪ್ರತ್ಯೇಕ ಸಂಸದೀಯ ಅಧಿವೇಶನ ನಡೆಸುವಂತೆ ಕೇಳಿಕೊಂಡರೂ ದೇಶ ನಾಯಕರಿಗೆ ಪುರುಸೋತ್ತಿಲ್ಲ! ಯಾವುದೋ ವಿದೇಶಿ ಚಾನೆಲ್‍ಗೆ ಮಾಡೆಲಿಂಗ್ ಮಾಡುವುದಕ್ಕೆ. ಫೋಟೋಶೂಟ್‍ಗೆ ಸಮಯವಿದೆ! ನಮ್ಮ ಮುಖ್ಯಮಂತ್ರಿ, ಶಾಸಕರು ಹೊಲಸು ತಿನ್ನುವ ಕೆಲಸ ಮಾಡುವುದನ್ನೇ ರಾಜಕಾರಣ ಎಂದು ಭಾವಿಸುವಾಗ ಅದನ್ನು ಒಕ್ಕೊರಳಿನಿಂದ ಪ್ರತಿಭಟಿಸದ ನಾವು ಉದ್ಯೋಗದಂತ ಚಿಲ್ಲರೆಗಾಗಿ ಕೇಳುತ್ತೇವೋ? ನಮಗೆ ನೂರು ಮಂದಿಗೆ “ಜೈ ಹನುಮ” ಎಂದು ವಾಟ್ಸಾಪ್ ಮೆಸೆಜ್ ಕಳುಹಿಸಿ ಪುಣ್ಯ ಸಂಪಾದನೆ ಮಾಡಲೇ ಸಮಯವಿಲ್ಲದಿದ್ದಾಗ!

ಹೇ ರಾಮಾ…….. ಶೈಕ್ಷಣಿಕವಾಗಿ ದೇಶ ಕುಸಿಯುತ್ತಿದ್ದರೂ ಕೇಳುವುದು ದೇಶದ್ರೋಹವಾಗುತ್ತದೆ. ತಾವು ಕಲಿಯುವ ಯುನಿವರ್ಸಿಟಿಯ ಕತೆ ಏನು? ಯುಜಿಸಿಯ ಕತೆ ಏನು? ಇದ್ಯಾವುದೂ ಗೊತ್ತಿಲ್ಲದೆ ಪುಸ್ತಕದ ಬದನೆಕಾಯಿಗಳಿಗೆ ಉದ್ಯೋಗ ಕೇಳುವ ಪ್ರಜ್ಞೆ ಎಲ್ಲಿರುತ್ತದೆ? ಉದ್ಯೋಗ ಯಾವಾಗ ನಮ್ಮ ಮೂಲಭೂತ ಹಕ್ಕು ಆಗುವುದು?

LEAVE A REPLY

Please enter your comment!
Please enter your name here