• ವಿಲ್ಸನ್ ಕಟೀಲ್

ಸಂಬಂಧಗಳನ್ನು ಜೋಡಿಸುವ ಸಣ್ಣ ವೈರಸ್ ಕಥೆಗಳು

-1-
ಚರ್ಮದ ಮೇಲೆ ಕುಳಿತುಕೊಂಡ ವೈರಸ್ ಹೇಳಿತು-
“ನಮ್ಮ ಹಾವಳಿಯಿಂದಾಗಿ ಈ ಮನುಷ್ಯ ಬಡವನನ್ನು ಮುಟ್ಟುತ್ತಿಲ್ಲ..
ನನಗೆ ಯಾಕೋ ಸಂಕಟವಾಗುತ್ತಿದೆ”
ಇನ್ನೊಂದು ವೈರಸ್ ಸಮಾಧಾನ ಮಾಡಿತು –
“ಚಿಂತೆ ಮಾಡಬೇಡ, ಅಸ್ಪ್ರಶ್ಯತೆಯನ್ನು ಪಾಲಿಸುವ ಈತ
ನಾವಿಲ್ಲದಿದ್ದರೂ ಬಡವನನ್ನು ಮುಟ್ಟಿತ್ತಿರಲಿಲ್ಲ..
ಜಾತಿಯ ಕಾರಣಕ್ಕಾಗಿ ಮುಟ್ಟದೇ ಇರುವುದಕ್ಕಿಂತ
ರೋಗದ ಕಾರಣಕ್ಕಾಗಿ ಮುಟ್ಟದೆ ಇರುವುದು ಮೇಲಲ್ಲವೇ?”


-2-

ಒಂದು ವೈರಸ್ ನೊಂದುಕೊಳ್ಳುತ್ತಾ ಹೀಗಂದಿತು –
“ನಮ್ಮಿಂದಾಗಿ ದೇವಳಗಳಲ್ಲಿ ಪ್ರಾರ್ಥನೆಗಳು ಕೇಳುತ್ತಿಲ್ಲ
ಭಜನೆಗಳು, ಮಂತ್ರಗಳು, ಸ್ತುತಿಗೀತೆಗಳು ಏನೂ ಕೇಳುತ್ತಿಲ್ಲ.
ಈ ಜನ್ಮವೇ ಶಾಪಗ್ರಸ್ತವಾಗಿದೆ!”
ಇನ್ನೊಂದು ಸಮಾಧಾನ ಹೇಳಿತು-
“ಅಷ್ಟು ವ್ಯಥೆಪಡುವ ಅಗತ್ಯವಿಲ್ಲ…ಅಲ್ಲಿ ನೋಡು
ತಾಯಿ ಆಸ್ಪತ್ರೆ ಸೇರಿದಾಗಲೂ ಊರಿಗೆ ಬರದ IT ಉದ್ಯೋಗಿಯೊಬ್ಬ
ನಮ್ಮಿಂದಾಗಿ ವರುಷಗಳ ನಂತರ ಮನೆಗೆ ಬಂದು
ತಾಯಿಯ ಯೋಗಕ್ಷೇಮ ವಿಚಾರಿಸುತ್ತಿದ್ದಾನೆ…
ಇದನ್ನೆಲ್ಲಾ ನೋಡಿದರೆ ನಮ್ಮ ಜನ್ಮ ಸಾರ್ಥಕ ಅನಿಸಲ್ವಾ?”


-3-

ಯಾರೋ ಉಗುಳಿದಾಗ ಬಸ್ಟೇಂಡಿನಲ್ಲಿ ಬಿದ್ದ ವೈರಸ್ ಹೇಳಿತು –
“ಬೇಗಾ ಬಾ, ಬದುಕಿ ಉಳಿಯಲು ಕೆಲವೇ ಗಂಟೆಗಳೊಳಗೆ
ಮನುಷ್ಯನ ದೇಹ ಹುಡುಕಬೇಕು…”
ಹುಲ್ಲೆಸಳಿನ ಮೇಲೆ ಕುಳಿತ ವೈರಸ್ ಹೇಳಿತು –
“ನೋಡು.. ಮನುಷ್ಯನಿಲ್ಲದ ನಗರ ಎಷ್ಟೊಂದು ಸುಂದರವಾಗಿದೆ…
ಪಾರ್ಕಿನಲ್ಲಿ ಹಕ್ಕಿಗಳು ಗುಂಪುಗೂಡಿದರೂ ಕಸವಿಲ್ಲ
ಟೌನ್ ಹಾಲಿನ ಕಂಪೌಂಡಿನಲ್ಲಿ ಕಾಗೆ ಕೂಗಿದರೂ ಶಬ್ದಮಾಲಿನ್ಯವಿಲ್ಲ
ಕೋಳಿಯೊಂದು ಮರಿಗಳೊಂದಿಗೆ ನಿಶ್ಚಿಂತೆಯಿಂದ ರಸ್ತೆ ದಾಟುತ್ತಿದೆ…
ಈ ಮಾನವನ ಸಹವಾಸವೇ ಬೇಡ
ಇದನ್ನೆಲ್ಲಾ ನೋಡುತ್ತಾ ಇಲ್ಲೇ ಹಾಯಾಗಿ ಸತ್ತು ಹೋಗೋಣ!”


-4-
“ನಾವು ತಪ್ಪು ಮಾಡ್ತಿದ್ದೀವಿ,
ಈ ಸಾವು ನೋವು ನನ್ನಿಂದ ನೋಡಲಾಗದು
ನಾನು ಆತ್ಮಹತ್ಯೆ ಮಾಡಿಕೊಳ್ಳುವೆ” ಕತ್ತಲ ಕೂಪದೊಳಗಿನ ವೈರಸ್ ಹೇಳಿತು.
ಇನ್ನೊಂದು ಬೆಳಕು ಚೆಲ್ಲಿತು –
“ವೈದ್ಯರು ನಮ್ಮನ್ನು ನಾಶ ಪಡಿಸುವವರೆಗೆ ಬದುಕಿರೋಣ..
ನಾವೀಗ ಆತ್ಮಹತ್ಯೆ ಮಾಡಿಕೊಂಡರೆ, ಯಾವನಾದರೂ ಡೋಂಗಿ ಮನುಷ್ಯ
ತನ್ನ ಪವಾಡದಿಂದ ನಾವು ಸತ್ತೆವು ಎನ್ನಬಹುದು..
ಆತ್ಮಹತ್ಯೆ ಮಾಡಿ ಮೂಢ ನಂಬಿಕೆಗಳಿಗೆ ಕಾರಣರಾಗುವುದಕ್ಕಿಂತ
ವೈದ್ಯರಿಂದ ಕೊಲೆಯಾಗಿ ವಿಜ್ನಾನವನ್ನು ಗೆಲ್ಲಿಸೋಣ!
ಸಾವಿನಲ್ಲೂ ಸಾರ್ಥಕತೆ ಮೆರೆಯೋಣ!


-5-
ಮೂಗಿನ ಮೇಲೆ ಕುಂತ ಎರಡು ವೈರಸ್ ಗಳ ಸಂಭಾಷಣೆ:
“ನಾವೀಗ ಪ್ರವೇಶಿಸುವ ದೇಹ ಯಾರದು ಗೊತ್ತೇ?”
“ಇಲ್ಲ”
“ಇವರು ಖ್ಯಾತ ಸಾಹಿತಿಗಳು.
ಆದರೆ ಕಣ್ಣಮುಂದೆ ಹತ್ಯೆಗಳಾದಾಗ ಒಂದೂ ಮಾತೆತ್ತಿಲ್ಲ
ಅನ್ಯಾಯದ ವಿರುದ್ಧ ಒಂದು ಅಕ್ಶರವನ್ನೂ ಬರೆದಿಲ್ಲ”
“ಓಹ್ ಹೌದಾ” ಎನ್ನುತ್ತಾ ಇನ್ನೊಂದು ವೈರಸ್
ಮೂಗಿನ ಹೊಳ್ಳೆಗಳ ಹತ್ತಿರ ಬಂದು
ಈತ ನಿಜವಾಗಿ ಬದುಕ್ಕಿದ್ದಾನಾ ಎಂದು ಉಸಿರನ್ನು ಪರೀಕ್ಷಿಸಿತು..


-6-
“ನೀನು ಬರೀ ಸ್ಪರ್ಷದಿಂದ ಕ್ಯಾನ್ಸರನ್ನು ಗುಣಪಡಿಸುತ್ತಿದ್ದೆಯಂತೆ,
ಹೊಟ್ಟೆಯೊಳಗಿನ ಗೆಡ್ಡೆಗಳನ್ನು ನಾಶ ಪಡಿಸುತ್ತಿದ್ದೆಯಂತೆ..
ಈಗೇಕೆ ಆಸ್ಪತ್ರೆಗೆ ಬಂದಿರುವೆ?”
ಪವಾಡ ಪುರುಷನ ಕೈಮೇಲೆ ಕುಂತ ವೈರಸ್
ಆತನನ್ನು ಕೇಳಲು ಹೊರಟಾಗ, ಇನ್ನೊಂದು ತಡೆಯಿತು-
“ಸುಮ್ನಿರು, ಆತ ಮಾತಾಡಲು ಶುರುವಿಟ್ಟರೆ
ಆತನ ರೋಗ ನಮಗೆ ತಗುಲಬಹುದು”!


-7-
ಆಸ್ಪತ್ರೆ ಸೇರಿದ ಒಂದು ವೈರಸ್ ಇನ್ನೊಂದಕ್ಕೆ ಹೇಳಿತು –
“ಅಯ್ಯಯ್ಯೋ!! ಇಲ್ಲಿ ಅತ್ಯಾಧುನಿಕ ವಾರ್ಡ್ ಗಳಿವೆ,
ಹಗಲು ರಾತ್ರಿಯೆನ್ನದೆ ಶುಶ್ರೂಷೆ ಮಾಡುವ ಡಾಕ್ಟರು ನರ್ಸ್ ಗಳಿದ್ದಾರೆ
ಅತ್ಯುತ್ತಮ ವೈದ್ಯಕೀಯ ಉಪಕರಣಗಳಿವೆ,
ಬಾ ನಾವೆಲ್ಲಾದರೂ ದೂರ ಹಾರಿ ಹೋಗೋಣ.
ಗುಂಪು ಕಟ್ಟಿ, ಚಪ್ಪಾಳೆ ತಟ್ಟಿ, ಸಂಗೀತದ ಮೂಲಕ
ನಮಗೂ ಸ್ವಾಗತ ಕೋರುವ ಊರು ಎಲ್ಲಾದರೂ ಇರಬಹುದು…”
ಇನ್ನೊಂದು ವೈರಸ್ ಉತ್ತರಿಸಿತು-
“ನೀನು ಬೇಕಾದರೆ ಹೋಗು, ನಾನು ಬರಲ್ಲ
ಮೂರ್ಖರ ಊರಲ್ಲಿ ಬದುಕುಳಿಯುವುದಕ್ಕಿಂತ
ಬುದ್ಧಿವಂತರ ಊರಲ್ಲಿ ಸಾಯುವುದೇ ಮೇಲು”!


LEAVE A REPLY

Please enter your comment!
Please enter your name here