ಲೇಖಕರು: ಅಬೂ ಮಾಹೀ ಮುತ್ತಕೀ, ಪಕ್ಕಲಡ್ಕ

ಎಲ್ಲದಕ್ಕೂ ಒಂದು ಮಾನದಂಡವಿದೆ. ಇಲ್ಲಿ ನಿಗ್ರಹದ ಮಾನದಂಡವೇನೆಂಬ ಜಿಜ್ಞಾಸೆಗೆ ಓರೆ ಹಚ್ಚು ಪ್ರಯತ್ನ ಮುಂದುವರೆಸಿದ್ದೇವೆ.ದೇಹ, ಆತ್ಮ, ಮನಸ್ಸು ಬೇರೆ ಬೇರೆಯೆಂದವರೂ ಇಲ್ಲಿ ಅವೆಲ್ಲಾ ಒಂದು ಎಂದವರೂ ದೇಹದಿಂದ ಆತ್ಮ ವಿಭಜನೆಯ ವಾಸ್ತವಿಕತೆಯನ್ನು ಈವರೆಗೂ ನಿರಾಕರಿಸಲಿಲ್ಲ.ಸಾಲ ಮಾಡಿಯಾದರೂ ತುಪ್ಪ ತಿನ್ನುವ ಚಾವಾರಿಕರು ಇತ್ತೀಚಿನ ದಿನಗಳಲ್ಲಿ ವಿವಿಧ ಮುಖಗಳೊಂದಿಗೆ ರಂಗ ಪ್ರವೇಶಿಸಿಯಾಗಿದೆ. ಭಕ್ತಿಗಳೂ, ಜಪ ತಪಗಳೂ, ಆರಾಧನಾ ಕೇಂದ್ರಗಳ ಸುತ್ತಲೂ ಮಾರುಕಟ್ಟೆಯ ಸ್ವರೂಪ ಪಡೆದಿದೆ.

ಸಂಪ್ರದಾಯವಾದಿಗಳು (Rituals) ಧಾರ್ಮಿಕರು (Rerigious) ಅನುಭೂತಿಯ ವೇಷಧಾರಿಗಳಾಗಿದ್ದಾರೆ. ನಿಜವಾಗಿ ಅನುಭೂತಿಯೂ (Spiritual) ಮಧುರ ಭಕ್ತಿಯ ದೂರ್ತರೂಪ.
ಸಾಂಸ್ಕೃತಿಕ ದೇವರುಗಳಿಂದ ಎಂದೂ ಸಮಾಜಕ್ಕೆ ಅನಾಹುತವಾಗಿಲ್ಲ. ದೇವರನ್ನು ತನ್ನ ಸ್ವೇಚ್ಛೆಗೆ ಅನುಗುಣವಾಗಿ ಪರಿವರ್ತಿಸುವಾಗ ಸಮಾಜದಲ್ಲಿ ಗೊಂದಲವಾಗಿರುತ್ತದೆ. ವ್ಯವಹಾರಿಕ ಜಗತ್ತಿಗೆ ದೇವರು, ಆರಾಧನಾ ಕರ್ಮಗಳ ಬಳಕೆಯು ಒಬ್ಬರನ್ನೊಬ್ಬರು ಧ್ವೇಷಿಸುವ ಭೌಗೋಳಿಕ ಗಡಿ ನಿರ್ಮಾಣಕ್ಕೆ ಕಾರಣವಾಗಿ ಬಿಟ್ಟಿದೆ.

ಯಾರನ್ನೋ ಮೆಚ್ಚಿಸಲು ಹೋಗಿ ಬಳಿಕ ಅದು ಆರಾಧನಾ ರೂಪವಾಗಿ ಕಡ್ಡಾಯವಾಗಿ ಪರಿವರ್ತಿತವಾದ ಹಲವು ಆಚಾರಗಳು ಒಂದು ವಿಚಾರದ ಬಾಗಿಲನ್ನು ಬಡಿದೆಬ್ಬಿಸಿದೆ. ವಿಕಾರಗಳು ನಿಗ್ರಹವಿಲ್ಲದೆ ಯಾವ ಕಾರಣಕ್ಕೂ ಆತ ಚಿಂತನೆ ಅಸಾಧ್ಯ. ನಿಗ್ರಹಕ್ಕೆ ಹಲವು ಮಾನದಂಡಗಳಿವೆ. ಮೂಲ ಉದ್ದೇಶವನ್ನು ಮರೆಮಾಚಿದ ಕೇವಲ ಅಲಂಕಾರಿಕವಾದ ಹಲವು ರೀತಿಯ ದೇಹದಂಡನೆಗಳು ಮಾನಸಿಕ ವಿಕಾರಗಳ ಮೇಲೆ ಹಿಡಿತವಿಲ್ಲದೆ ಕಾಲಗರ್ಭದಲ್ಲಿ ಹುದುಗಿ ಹೋಗಿದೆ.

6ನೇ ಶತಮಾನದಲ್ಲಿ ಹುಟ್ಟಿಕೊಂಡ ಆದಿ ಚಿಂತನೆಯ ಮರು ಸಮರ್ಪಣೆಯ ಒಂದು ಸಾಮಾಜಿಕ ಕ್ರಾಂತಿ ಇಂದಿಗೂ ಪ್ರಸಕ್ತ ಸಮಾಜದಲ್ಲಿ ಕೈಗನ್ನಡಿಯಾಗಿದೆ. ಅಭ್ಯಾಸಗಳೆಲ್ಲಾ ಆರಾಧನೆಗಳಾದ ವಾತಾವರಣದಲ್ಲಿ ಭಕ್ತಿ ಫಂಡ್ ತಲೆಯೆತ್ತಿದೆ. ಗುರುವನ್ನವಲಂಭಿಸದೇ ಮೋಕ್ಷ ಸಾಧ್ಯವಿಲ್ಲವೆಂಬ ಅಭ್ಯಾಸಗಳು ವ್ಯಾಪಕ ಪ್ರಚಾರದಲ್ಲಿ ಮೂಲ ಚಿಂತನೆಗಳು ಬಡವಾಗಿರುತ್ತದೆ.
ವ್ಯಕ್ತಿ, ಕುಟುಂಬ, ಸಮುದಾಯ, ಸಮಾಜದ ಸಂಸ್ಕರಣೆಗೆ ಹಲವು ಮಾನದಂಡಗಳಿವೆ. ಆತ್ಮ ಸಂಸ್ಕರಣೆಯಾಗದವರಿಂದ ಸಾಮಾಜಿಕ ಕ್ರಾಂತಿಯ ಭ್ರಾಂತಿಯು ವಿವಿಧ ದೇವ ಮಾನವರ ಹುಟ್ಟಿಗೆ ಕಾರಣವಾಗಿದೆ.
ತಾನೋರ್ವ ಕೇವಲ ಮನುಷ್ಯ ನನ್ನ ಪ್ರಭುವಿನ ಅನುಗ್ರಹವಿಲ್ಲದಿದ್ದಲ್ಲಿ ತಾನು ದಾರಿಗೆಡುತ್ತಿದ್ದೆ ಎಂಬ ಪ್ರವಾದಿಗಳ ನಿಷ್ಕಳಂಕ ಸಮರ್ಪಣೆಯ ಮಾತುಗಳು ದೇವ ಮಾನವರ ಅಹಂಕಾರಕ್ಕೆ ಮೂಲಯೇಟು ಕೊಟ್ಟದ್ದು ಮಾತ್ರವಲ್ಲ. ವಿವೇಕಹೀನರೆಂದು ಗುರುತಿಸಲು ಸಹಕಾರಿಯಾಗಿರುತ್ತದೆ.

ಹಬ್ಬಗಳು, ವೃತಗಳು, ಶಿಷ್ಟಾಚಾರಗಳು, ಕಟ್ಟುಪಾಡುಗಳು, ಬಂಧನವೆಂದವರು. ಇಂದು ಅದನ್ನೆಲ್ಲಾ ಬದುಕಿನ ಭಾಗವಾಗಿಸಿ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ.

ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಪಸ್ರ್ವಗಳ ನಿಯಂತ್ರಣವಿಲ್ಲದೆ ಸ್ವಸ್ಥ ಸಮಾಜದ ಹುಟ್ಟು ಸಾಧ್ಯವಿಲ್ಲವೆಂಬ ವಾಸ್ತವ ಜಗತ್ತಿಗೆ ಇಂದು ಮನವರಿಕೆಯಾಗಿದೆ.

ದೇಹ ದಂಡಿಸುವುದರಿಂದ ಭಗವಂತನನ್ನು ಒಲಿಸಬಹುದೆಂಬ ಭ್ರಾಂತಿಗೆ ವೃತದ ಆದೇಶವು ಕೊಳ್ಳಿಯಿಟ್ಟಿದೆ. ಯಾರು ಸುಳ್ಳು ಹೇಳುತ್ತಾನೋ ಆತನ ವೃತಾಚಾರಣೆಯು ನಿಷ್ಪ್ರಯೋಜಕವೆಂಬ ಪ್ರವಾದಿ ವಚನ ಸುಳ್ಳಿನಿಂದ ವೃತ ಭಂಗವಾಗುತ್ತದೆಯೆಂಬ ಸಂದೇಶವಿದೆ.
ನಿಷ್ಟನಾಗಬೇಕೆಂಬ ಶರತ್ತು ವೃತಕ್ಕಿದೆ. ಯಾರಿಗೆ ನಿಷ್ಟನಾಗಬೇಕೆಂದು ವೃತವೇ ತಿಳಿಸಿದೆ. ತನ್ನನ್ನು ನಿಗ್ರಹಿಸಬೇಕು, ಯಾವುದರಿಂದ ಎಂದು ವೃತವೇ ತಿಳಿಸಿದೆ. ಧರ್ಮನಿಷ್ಠನಾಗಬೇಕು, ಧರ್ಮವೆಂದರೆ ದೇವರು, ದೇವರೇ ಧರ್ಮ, ದೇವರಿಗೆ ನಿಷ್ಠನಾಗಬೇಕಾದಲ್ಲಿ ದೇವನೆಂದೂ ಕೆಡುಕನ್ನು ಇಷ್ಟಪಡಲಾರ, ಒಳಿತಿನ ದಾಸನಾದವನೂ ಮಾತ್ರ ದೇವದಾಸನಾಗಬಲ್ಲ.
ಅಧ್ಯಾತ್ಮಿಕ ಪ್ರಪಂಚವೆನ್ನಲಾಗುತ್ತದೆ. ಯಾರೂ ಅಧ್ಯಾತ್ಮಿಕ ದೇಶವೆಂದದಿಲ್ಲ. ಯಾಕೆಂದರೆ ಅಧ್ಯಾತ್ಮಿಕ ಪ್ರಪಂಚದಲ್ಲಿ ಎಲ್ಲರೂ ಒಳಿತನ್ನು ಇಷ್ಟಪಡುತ್ತಾರೆ. ಅಧ್ಯಾತ್ಮಿಕ ಪ್ರಪಂಚದ ವೃತಗಳು ಜಪ ತಪಗಳೂ ಸಾಮೂಹಿಕ ಅನುಷ್ಠಾನಕ್ಕೆ ಅರ್ಹವಾಗಿರುತ್ತದೆ.

ಅರ್ಥಪೂರ್ಣ ವೃತದಿಂದ ಕೇವಲ ವ್ಯಕ್ತಿಯ ವ್ಯಕ್ತಿತ್ವ ವಿಕಸನ ಮಾತ್ರವಲ್ಲ, ಸಾಮಾಜಿಕ ಸುಭಿಕ್ಷೆಯೂ ಅಡಗಿರುತ್ತದೆ. ಅಭ್ಯಾಸದ ವೃತದಿಂದ ತಾತ್ಕಾಲಿಕವಾದ ತಡೆಗೋಡೆಯಂತೆ, ಮಳೆಗಾಲಕ್ಕೆ ಹುಟ್ಟಿಕೊಂಡ ತರೆಗಿಡಗಳಂತೆ ಬಿಸಿಲ ಧರೆಗೆ ಸುಟ್ಟು ಹೋಗುತ್ತದೆ. ಫಲಪ್ರದವಾಗಬೇಕಾದಲ್ಲಿ ವೃತವನ್ನು NLP (Neoro Lingonstic Programe) ತರಹ ಅಳವಡಿಸಬೇಕು Personality Devolopment (ವ್ಯಕ್ತಿತ್ವ ವಿಕಸನ)ಕ್ಕೆ ಮೂಲ ಮಂತ್ರವೆಂಬ ರೀತಿಯಲ್ಲಿ ಆಚರಿಸಬೇಕು.

ವೃತಾಚಾರಣೆಗಳ ಆಚರಣೆಯು ಮನೋರಂಜನಾ ಮಟ್ಟಕ್ಕೆ ಬೆಳೆದು ಬಿಟ್ಟಿದೆ. ವೃತಗಳು ಆತ್ಮ ಸಂಸ್ಕರಣಾ ಉಪಾಧಿಯಾಗಬೇಕು. ಆತ ಸಂಸ್ಕರಣೆಯಲ್ಲಿ ತುಡಿತವಿರುತ್ತದೆ. ಮನೋರಂಜನೆಯಲ್ಲಿ ಭ್ರಮ ನಿರಸನವಾಗುವ ಸಾಧ್ಯತೆ ಹೆಚ್ಚಿದೆ.
ನೆಮ್ಮದಿಯ ಮೂಲವಾಗಿ ವೃತವನ್ನು ಆಚರಿಸಬೇಕು. ಅದರಿಂದ ಸುಖ ಶಾಂತಿಯ ಬೇಡಿಕೆಯು ತೀವ್ರವಾದಲ್ಲಿ ನೀರಿಕ್ಷೆಯು ಇನ್ನಷ್ಟು ನಿರಸನಕ್ಕೆ ಕಾರಣವಾಗುತ್ತದೆ. ಈ ಲೋಕ ನಶ್ವರತೆಯ ಸತ್ಯವು ಸುಖಲೋಲುಪತೆಯಿಂದ ದೂರ ಸರಿಸುವಂತಾಗದಿದ್ದಲ್ಲಿ ವೃತದ ಆತ್ಮಕ್ಕೆ ವೇದನೆಯಾಗುತ್ತದೆ. ವೃತವು ಸಮುದಾಯ ಬದ್ಧತೆಯಿಂದ ಮಾತ್ರ ಕೂಡಿದ್ದಲ್ಲ. ಅದರಲ್ಲಿ ಸಾಮಾಜಿಕ ಬದ್ಧತೆಯೂ ಇದೆ.
ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬ ಉಣ್ಣುವವನು ವಿಶ್ವಾಸಿಯಲ್ಲ ಎಂಬ ಪ್ರವಾದಿ ವಚನವು ವಿಶ್ವಾಸಿಯು ಹಸಿವಿನ ಅರಿವಿನ ಸ್ಪರ್ಶಿಸಬೇಕೆಂಬ ಸಂದೇಶ ನೀಡುತ್ತದೆ.
ವೃತಗಳು, ಆರಾಧನೆ, ಅಭ್ಯಾಸವಲ್ಲ, ಅಭ್ಯಾಸಗಳು, ಹವ್ಯಾಸದತ್ತ ಮುಖ ಮಾಡಿದರೆ, ಆರಾಧನೆಗಳು ಸೃಷ್ಟಿಕರ್ತನನ್ನು ಒಲಿಸುವ ಅಧ್ಯಾತ್ಮಿಕ ಅನುಭವದ ಅನುಭೂತಿಯೆಡೆಗೆ ಒಯ್ಯುತ್ತದೆ. ಸೃಷ್ಟಿಕರ್ತನನ್ನು ಒಲಿಸಬೇಕೆಂಬ ಇಚ್ಛೆಯಿರುವ ಜಗದೊಡೆಯನ ವಿಶ್ವಾಸಿಯು ಸಂಕುಚಿತವಲ್ಲದ ವಿಶಾಲತೆಯನ್ನು ಅಳವಡಿಸಬೇಕು.

ವೃತಾಚರಣೆಯ ಪ್ರಾರ್ಥನೆಯಲ್ಲಿ ಒಂದಾದ “ಓ ಪ್ರಭುವೇ ನೀನು ಕರುಣಾಳು, ನೀನು ನನ್ನ ಮೇಲೆ ಕರುಣೆ ತೋರು” ಎನ್ನುವ ವಿಶ್ವಾಸಿ ಇತರರಿಗೆ ಕರುಣೆ ತೋರಲು ತಯಾರಾಗಬೇಕು. ಅದಕ್ಕಿಂತ ಮಿಗಿಲಾಗಿ ನಶ್ವರೆಯು ವಾಸ್ತವಿಕತೆಯು ವೃತದ ಮೂಲಕ ಅರಿವಾಗಬೇಕು.
ಆತ್ಮ ಚಿಂತನೆಯಿಲ್ಲದ ವೃತಗಳು ಬರೀ ಸೋಗಲಾಡಿತನವಾದೀತೇ ವಿನಹ ದೇವನನ್ನುಳಿಸಲು ಸಾಧ್ಯವಾಗಲಾರದು. ದೇವನನ್ನು ಕಾಣಬೇಕು. ಆತ ನನ್ನಿಂದ ಸಂತುಷ್ಟನಾಗಬೇಕು. ಈ ಪ್ರಪಂಚದಿಂದ ಅಗಳಿದ ಬಳಿಕ ಈ ಭೂಮಿಯಲ್ಲಿ ನನ್ನ ಅಸ್ತಿತ್ವದ ಒಳಿತನ ಕುರುಹುಗಳಳಿಯಬೇಕಾದಲ್ಲಿ ವೃತವಾಚರಿಸಬೇಕು. ಆ ವೃತದಲ್ಲಿ ಸತ್ಯ, ನ್ಯಾಯ, ಪ್ರಾಮಾಣಿಕತೆ, ದಾನ, ಕ್ಷಮೆ ಎಲ್ಲವೂ ಮೂರ್ತ ರೂಪದಲ್ಲಿರಬೇಕು.

ವಿಕಾರಗಳು ನಿಯಂತ್ರಿಸಲಾಗದ ವಿವೇಕವನ್ನು ಅರಿಷಡರ್ಗಕ್ಕೆ ಅಡವಿಟ್ಟ ವೃತದಿಂದ ಸ್ವಂತಕ್ಕಾಗಲೀ, ಸಮುದಾಯಕ್ಕಾಗಲೀ, ಸಮಾಜಕ್ಕಾಗಲೀ ಪ್ರಯೋಜನ ಶೂನ್ಯ.

ಕುರಾನ್ ಹೇಳುತ್ತದೆ:
” ವಿಶ್ವಾಸಿಗಳೇ, ನೀವು ಧರ್ಮನಿಷ್ಠರಾಗಬೇಕೆಂದು, ನಿಮಗಿಂತ ಹಿಂದಿನವರಿಗೆ ಕಡ್ಡಾಯಗೊಳಿಸಿದಂತೆ ನಿಮಗೂ ಉಪವಾಸಗಳನ್ನು ಕಡ್ಡಾಯಗೊಳಿಸಲಾಗಿದೆ”.(ಅಲ್ ಬಕರ)

LEAVE A REPLY

Please enter your comment!
Please enter your name here