– ಚರಣ್ ಐವರ್ನಾಡು

2018, IBC-24 ಸುದ್ದಿ ಚಾನೆಲ್ ನ ನಿರೂಪಕಿ ಸುಪ್ರೀತ್ ಕೌರ್ ನ್ಯೂಸ್ ಬುಲೆಟಿನ್ ಓದುತ್ತಿರುವಾಗ ಆಗಷ್ಟೆ ಬಂದ ಒಂದು ರಸ್ತೆ ಅಪಘಾತದ ಸುದ್ದಿ ಬರುತ್ತದೆ. ಲೈವ್ ಕಾರ್ಯಕ್ರಮದಲ್ಲಿ ವರದಿಗಾರನಿಂದ ಅಪಘಾತದ ಮಾಹಿತಿ ಪಡೆಯುತ್ತಾರೆ. ತಾನು ಓದುತ್ತಿರುವುದು ತನ್ನ ಗಂಡನ ಸಾವಿನ ಸುದ್ದಿ ಎಂದು ಅರಿವಾಗುತ್ತಿದ್ದಂತೆ ಯಾವುದೇ ಅಳುಕು, ಸಂಕಟ ತೋರದೆ ನಿರಾಳವಾಗಿ ಸುದ್ದಿ ಓದಿ ಮುಗಿಸುತ್ತಾರೆ! ಈ ಮೂಲಕ ಓರ್ವ ಪ್ರೊಫೆಷನಲ್ ಪತ್ರಕರ್ತೆಯ ಪ್ರಬುದ್ಧತೆಯನ್ನು ತೋರಿಸುತ್ತಾರೆ.

ಸಾಮಾಜಿಕವಾಗಿ ಹೆಸರು ಮಾಡಿದ ವ್ಯಕ್ತಿ ಸಾವನ್ನಪ್ಪಿದರೆ ಅವರ ಜೀವನದ ಬಗ್ಗೆ , ಸಾಧನೆಗಳ ಬಗ್ಗೆ ಬರೆಯುತ್ತಾರೆ, ಓದುತ್ತಾರೆ. ಅವರ ಕೊಡುಗೆಗಳನ್ನು ನೆನಪಿಸಿಕೊಳ್ಳುತ್ತಾರೆ. ಇದು ಕೇವಲ ಚಿತ್ರ ರಂಗಕ್ಕೆ ಮಾತ್ರ ಸೀಮಿತವಲ್ಲ.

ಮೊನ್ನೆ ಇರ್ಫಾನ್ ಖಾನ್ ತೀರಿಕೊಂಡಾಗ ಅವರ ಸಿನಿಮಾಗಳ ಬಗ್ಗೆ ಚರ್ಚೆ ಮಾಡಿದೆವು. ಸಿನೆಮಾಗಳನ್ನು ನೋಡಿದೆವು. ಓರ್ವ ಸಾಹಿತಿ, ಲೇಖಕ ಸಾವನ್ನಪ್ಪಿದರೆ ಅವರ ಬರಹಗಳ, ಬದುಕಿನ ಬಗ್ಗೆ ಮಾತಾಡುತ್ತೇವೆ. ಇದು ಅವರಿಗೆ ನಾವು ಸಲ್ಲಿಸುವ ಗೌರವ.

ಸಾವನ್ನಪ್ಪಿದ ವ್ಯಕ್ತಿಯನ್ನು ನಾವು ಸಾವಿನ ನಂತರ ನೋಡುವ ಬಗೆ ಬದಲಾಗಿದೆ. ಸಾಮಾಜಿಕ ಮಾಧ್ಯಮಗಳು ನಮ್ಮ ಪ್ರತಿಕ್ರಿಯೆಯ ಸ್ವರೂಪವನ್ನು ಬದಲಾಯಿಸಿವೆ.

ಚಿರಂಜೀವಿ ಸರ್ಜಾ ಸಾವನ್ನಪ್ಪಿ ನಿಮಿಷಗಳು ಕಳೆಯುವ ಮೊದಲು “ಬಿಟ್ಟೋಗಬೇಡ….ನನ್ನಾ….!” ಅಂತ ಒಂದು ಹಾಡು ಹಾಕಿ ನಾವು ಅತ್ತಿದ್ದೇ ಅತ್ತಿದ್ದು. ಅವರ ಮಡದಿ, ಮನೆಯವರು ದುಃಖಿಸುವ ವಿಡಿಯೋಗಳನ್ನು ಬೇರೆ ಬೇರೆ ಪದ್ಯಗಳು, music ಗಳನ್ನ ಹಾಕಿ ಫೇಸ್ಬುಕ್, tiktok, WhatsApp status ಗಳಲ್ಲಿ ಹಂಚಿದ್ದೇ ಹಂಚಿದ್ದು!

ಕನ್ನಡದ ಟಿವಿ ಚಾನೆಲ್ ಗಳ “ಆಂಗರ್” ಗಳು ಬಹಳ ಶೋಕದಿಂದ ಮೇಲು ದನಿಯಲ್ಲಿ ಮೆಲ್ಲಗೆ ಸಾವಿನ ಸುದ್ದಿ ಓದಿದರು. ಅದಕ್ಕೆ “ಮರಳಿ ಬಾರದೂರಿಗೆ ನಿನ್ನ ಪಯಣ…!” ಅಂತ ಒಂದು ಹಿನ್ನಲೆ ಹಾಡು ಕೊಟ್ಟು, ಎಫೆಕ್ಟ್ ಸೌಂಡ್ಸ್ ಎಲ್ಲಾ ಹಾಕಿ ಸಾವಿನ ಸುದ್ದಿಯನ್ನು ಬಿತ್ತರಿಸಿದ್ರು. ನಟನ ಮಡದಿಯ ಬಗ್ಗೆ ಲೊಚ ಗುಟ್ಟಿದರು! ಸಂವೇದನೆ ಇಲ್ಲದ ನಾಚಿಕೆ ಬಿಟ್ಟ ಮಾಧ್ಯಮಗಳು ಅಳುತ್ತಿರುವ ನಟನ ಪತ್ನಿ, ತಮ್ಮ ಮತ್ತು ಮನೆಯವರನ್ನು ಜೂಮ್ ಮಾಡಿ ತೋರಿಸಿದವು. ಆದರೆ ಸಾವಿನ ಸುದ್ದಿಯನ್ನು ಪ್ರಕಟಿಸುವಲ್ಲಿ ಮುದ್ರಣ ಮಾಧ್ಯಮಗಳು ಗಂಭೀರತೆಯನ್ನು ಕಾಯ್ದುಕೊಂಡು ಬಂದಿವೆ.

ಮಾಧ್ಯಮಗಳ ಅಭಿವ್ಯಕ್ತಿಯ ಸ್ವರೂಪದಲ್ಲಿ ಮಾನಸಿಕ ಸ್ಥಿಮಿತತೆ ಇಲ್ಲದ ಕಾರಣದಿಂದ ಜನರನ್ನು ಹುಚ್ಚೆಬ್ಬಿಸಿ ಟಿವಿ ಮುಂದೆ ಕೂರಿಸಿ TRP ಹೆಚ್ಚಿಸುವ ಇವುಗಳಿಗೆ ಸಾವಿನ ಮನೆ, ಹುಟ್ಟಿದ ಮನೆ ಎಂಬುದೇ ಇಲ್ಲ. ಎಲ್ಲೆಲ್ಲೂ ಬ್ಯುಸಿನೆಸ್!

ಓರ್ವ ಪ್ರಸಿದ್ದ ವ್ಯಕ್ತಿ ಆಸ್ಪತ್ರೆ ಅನಾರೋಗ್ಯದಿಂದ ಸೇರಿದ ಸುದ್ದಿ ಬಂದ ತಕ್ಷಣ ಟಿವಿ ಚಾನೆಲ್ ಗಳು ಅವರ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಲು ಶುರು ಮಾಡುತ್ತವೆ. ಕೆಲವು ವಿಡಿಯೋಗಳು ಸಿದ್ಧವಾಗಿರುತ್ತವೆ. ವ್ಯಕ್ತಿ ಬದುಕಿ ಬಂದರೆ ಏನಿಲ್ಲ! ಅವರು ಉಸಿರು ನಿಲ್ಲಿಸಿದ್ದೆ ತಡ ತಾವು ತಯಾರು ಮಾಡಿದ ಮಾಡಿದ ಎಲ್ಲಾ ಸಿದ್ದ ಸುದ್ದಿಗಳನ್ನು ಪ್ರಸಾರ ಮಾಡುತ್ತವೆ! ಇವರು ಮನುಷ್ಯ ಸಾಯುವುದನ್ನು ಕಾಯುತ್ತಾ ಕುಳಿತಿರುವವರು !

ಸಾವಿನ ಜೊತೆಗೆ ಒಂದು ಸೂತಕ ಇದೆ, ನಮ್ಮನ್ನು ಮೌನಕ್ಕೆ ಜಾರಿಸುತ್ತದೆ. ಸತ್ತವನು ಬಿಟ್ಟು ಹೋದ ಜಾಗವನ್ನು ನಾವು ನೆನೆಯುತ್ತೇವೆ. ಸಾವಿನ ಮನೆ ಮಾತಿಲ್ಲದೇ ಮೌನಕ್ಕೆ ಹೋಗುತ್ತದೆ. ಇದು ವ್ಯಕ್ತಿಯ ಮರಣಕ್ಕೆ ಒಂದು ಗಂಭೀರತೆ ಮತ್ತು ಗೌರವವನ್ನು ತರುತ್ತದೆ. ಹಿಂದೆ ರಾಷ್ಟ್ರದ ನಾಯಕರು ಸತ್ತಾಗ ಆಕಾಶವಾಣಿ ಸಿತಾರ್, ವೀಣೆ ಮೊದಲಾದವುಗಳ ಸಂಗೀತವನ್ನು ಪ್ರಸಾರ ಮಾಡಿ ಗೌರವ ನೀಡುತ್ತಿತ್ತು. ಆಗ ದೇಶದಾದ್ಯಂತ ವ್ಯಕ್ತಿಯ ಸಾವಿನ ಬಗೆಗೆ ಗೌರವದ ಭಾವ ಸೃಷ್ಟಿಯಾಗುತ್ತಿತ್ತು.

ಈಗ ಹಾಗಿಲ್ಲ, ನಾವು ಈ ಬದಲಾವಣೆಗಳ ಕಾಲದಲ್ಲಿ ಬದುಕಿದವರು. ಈಗ ಸತ್ತರೆ ಅವನ ವಿಡಿಯೋ ಫೋಟೋ ಹಾಕಿ tiktok ಮಾಡುತ್ತೇವೆ. ಇದರ ಹಿಂದೆ ಬೇಜಾರು ಇಲ್ಲ, ಮಣ್ಣು ಮಸಿ ಎಂಥದ್ದು ಇಲ್ಲ. ಅದೊಂದು ಸಮೂಹ ಸನ್ನಿ, ಒಂದು ರೋಗ

ಚಿರಂಜೀವಿ ಸರ್ಜಾ ಅವರ ಎರಡು ಸಿನೆಮಾ ನೋಡಿದ್ದೇನೆ. ಹಿಡಿಸಲಿಲ್ಲ ಎಂಬುದು ವೈಯಕ್ತಿಕ ಅಭಿಪ್ರಾಯ. ಆದರೆ ಅವರ ಸಾವಿಗೆ ಒಂದು ಗೌರವವಿದೆ. ಮಾಧ್ಯಮಗಳು, ನಾವು ಅವರ ಸಿನಿಮಾಗಳ ಬಗ್ಗೆ ಮಾತಾಡಬೇಕು. ಅದಕ್ಕೆ ಬದಲಾಗಿ ಅತ್ಯಂತ ವೈಯಕ್ತಿಕವಾದ ಅವರ ಮನೆಯವರ ಬದುಕನ್ನು ನಮ್ಮ ಅಗ್ಗದ ಪ್ರಚಾರಕ್ಕೆ ಬಳಸಿಕೊಳ್ಳುತ್ತಿವೆ.

ಇಲ್ಲಿ, ಅಂಗಡಿಯಲ್ಲಿ ಹೀಗೆ ಮಾತನಾಡುವಾಗ ಹೇಳುತ್ತಿದ್ದರು. ” ಇಡೀ whatsap ನಲ್ಲಿ ಇದೇ ವಿಡಿಯೋ, ಜನ ಅವನು ಸಾಯುವುದನ್ನು ಕಾಯುತ್ತಾ ಇದ್ದ ಹಾಗೆ ಕಾಣುತ್ತಿದೆ. ಇನ್ನು ನಮ್ಮ area ದಲ್ಲಿ ಯಾರಾದರೂ ಸತ್ತಾಗ ಶವಸಂಸ್ಕಾರದ ವಿಡಿಯೋ ತೆಗೆದು tiktok ಮಾಡುವುದು ಕಂಡರೆ ಅವರನ್ನು ಹೆಣದ ಜೊತೆಗೆ ಕಾಟಕ್ಕೇ (ಬೆಂಕಿಗೆ) ಹಾಕಬೇಕು!”

We are celebrating the death

LEAVE A REPLY

Please enter your comment!
Please enter your name here