• ನಸೀಬ ಗಡಿಯಾರ್

ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನಾಗಿ ಆಚರಿಸುತ್ತೇವೆ, ಈ ಆಚರಣೆಯ ಉದ್ದೇಶವೇನೆಂದರೆ ಜನರಿಗೆ ಪರಿಸರದ ಬಗ್ಗೆ ಅಲ್ಪ ಸ್ನೇಹ ,ಕಾಳಜಿ, ಪ್ರೀತಿಯನ್ನುಂಟು ಮಾಡುವುದಾಗಿದೆ…
ಈ ಸುಂದರ ಪರಿಸರವು ಸೃಷ್ಟಿಕರ್ತನ ಅದ್ಭುತ ಕೊಡುಗೆಯಾಗಿದೆ. ಜನರಿಗೆ ಪ್ರಾಕೃತಿಕವಾಗಿಯೇ ಸಾಕಷ್ಟು ಉಪಕಾರಗಳು ಮತ್ತು ಉಪಹಾರಗಳು ಪರಿಸರದಿಂದ ದೊರಕುತ್ತದೆ. ದಣಿದು ಆಯಾಸಗೊಂಡಾಗ ಹೆಮ್ಮರಗಳು ನೆರಳಾಗಿ ನಿಲ್ಲುತ್ತದೆ. ಬಾಯಾರಿಕೆಯಾದಾಗ ಶಾಂತವಾಗಿ ಹರಿದು ಮುನ್ನಡೆಯುವ ನದಿಯು ಸಾಕಷ್ಟು ನೀರನ್ನು ಕೊಡುತ್ತದೆ. ಮನಸ್ಸೊಳಗೆ ನೋವ ಅಡಗಿಸಿಟ್ಟು ಕೊರಗುತ್ತಿರುವಾಗ ಹಚ್ಚ ಹಸಿರೆಲೆಗಳ ದಟ್ಟ ಭವ್ಯ ಮರದಡೆಯಲಿ ಕಪ್ಪು ಕರಿ ಬಂಡೆಕಲ್ಲುಗಳ ಮೇಲೆ ಝರಿಯಂತೆ ಹರಿದುಬರುವ ಜಲಪಾತಗಳ ಸುಂದರ ನೋಟ, ಯಾವ ಗಾನಕ್ಕೂ ಹೋಲಿಸಲಾಗದ ಕೋಗಿಲೆಯ ಇಂಪಾದ ಧ್ವನಿ, ತನ್ನನೆ ಮೈ ತಂಪುಗೊಳಿಸುವ ಸ್ವಚ್ಛಂದ ಗಾಳಿ, ಮುಂಜಾವಿನ ಹನಿ ಮಂಜಿನ ಮಧ್ಯೆ ಕಣ್ಸೆಳೆದ ಅರುಣೋದಯದ ನೋಟ, ಇವೆಲ್ಲವೂ ನೋವನ್ನು ಮರೆಮಾಚಿ ಹೊಸ ಮಾನವನಾಗಿ ರೂಪುಗೊಳಿಸುವ ಶಕ್ತಿ ಪರಿಸರದ ವೈಭವಕ್ಕಿದೆ.

ಹೌದು ಸ್ನೇಹಿತರೆ ಪರಿಸರವೆಂಬುದು ಸೃಷ್ಟಿಕರ್ತನು ನಮಗೆಲ್ಲರಿಗೂ ನೀಡಿದ ಒಂದು ಉಚಿತವಾದ ಉಡುಗೊರೆ, ಅದನ್ನು ನೀವು ಹೇಗೆ ಬಳಸಿಕೊಳ್ಳುತ್ತೀರೋ ನಿಮಗೆ ಬಿಟ್ಟಿದ್ದು….
ಪರಿಸರ ದಿನಾಚರಣೆ ಎಂದು ನೆನಪಿಸಿದಾಗ ಥಟ್ಟನೆ ನನ್ನ ಮನಸ್ಸಿಗೆ ಬರುವ ಒಂದು ಹೆಸರು ಪ್ರವಾದಿ ಮಹಮ್ಮದ್ (ಸ. ಅ), ಹೌದು ಪ್ರವಾದಿಯವರು ಪರಿಸರ ಪ್ರೇಮಿಯಾಗಿದ್ದರು ಪರಿಸರ, ಗಿಡ,ಮರಗಳ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದರು. ಪ್ರವಾದಿ (ಸ. ಅ)ರವರು ಹೇಳುತ್ತಾರೆ: ನಾಳೆ ಪ್ರಳಯ ಆಗುತ್ತದೆ ಎಂದು ಗೊತ್ತಿದ್ದರೂ ಕೂಡ ಇವತ್ತು ಒಂದು ಗಿಡ ನೆಡಿ.
ಹೌದು ಸ್ನೇಹಿತರೇ, ಪ್ರವಾದಿಯವರಿಗೆ ಗಿಡ ಮರಗಳ ಮೇಲೆ ಇದ್ದ ಕಾಳಜಿ ಏನೆಂಬುದು ಈ ಒಂದು ಮಾತಿನಲ್ಲಿ ನಮಗೆ ಸಂಪೂರ್ಣವಾಗಿ ಮನದಟ್ಟಾಗುತ್ತದೆ. ಅವರು ನಮ್ಮ ಮುಂದಿನ ಜನತೆಯು ಕೂಡ ಅದನ್ನು ಅಳವಡಿಸಿಕೊಳ್ಳುವ ದೃಷ್ಟಿಕೋನದಿಂದ ಆ ಮಾತನ್ನು ಹೇಳಿದ್ದಾರೆ…. ಮರಗಿಡಗಳ ಬಗ್ಗೆ ಹೇಳುವಾಗ ಮತ್ತೊಂದು ಹೆಸರು ನೆನಪು ಮಾಡಿಸಿಕೊಳ್ಳಬೇಕಾದುವುದು
ಸಾಲುಮರದ ತಿಮ್ಮಕ್ಕ ಇವರು ಕರ್ನಾಟಕದಲ್ಲಿ ಜನಿಸಿರುವ ಭಾರತೀಯ ಪರಿಸರವಾದಿ. ಮಕ್ಕಳಿಲ್ಲದ ಕಾರಣ ರಸ್ತೆಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನು ಮಕ್ಕಳೆಂದು ಭಾವಿಸಿ ಬೆಳೆಸಿ ಹೆಮ್ಮರವಾಗಿಸಿದ ಓರ್ವ ಅನಕ್ಷರಸ್ಥೆಯಾಗಿದ್ದುಕೊಂಡು ಮರಗಿಡಗಳನ್ನು ಬೆಳೆಸುವುದರಲ್ಲಿ ಮಹತ್ತರವಾದ ಕಾರ್ಯನಿರ್ವಹಿಸಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗೌರವಿಸಿ ಸನ್ಮಾನ ಗಿಟ್ಟಿಸಿಕೊಂಡವರು, ಇದರಂತೆಯೇ ಬಹಳಷ್ಟು ಪರಿಸರ ಪ್ರೇಮಿಗಳ ಹೆಸರು ಇನ್ನೂ ಇದೆ ಆದರೆ ಇವರೆಲ್ಲರ ಉದ್ದೇಶ ಒಂದೇ ಆಗಿತ್ತು ಮುಂದಿನ ಪೀಳಿಗೆಗಾಗಿ ಎಂದು.
ಹೌದು ನಾನು ಐದನೇ ತರಗತಿಯಲ್ಲಿ ಪರಿಸರ ಅಧ್ಯಾಯ ದಲ್ಲಿಯೂ ಕೂಡ ಕಲಿತಂತ ಒಂದು ವಾಕ್ಯ ” ನಮ್ಮ ಮುಂದಿನ ಪೀಳಿಗೆಗಾಗಿ ಮರಗಿಡಗಳನ್ನು ಬೆಳಸಬೇಕು ಎಂದು. ಆದರೆ ಮುಂದಿನ ಪೀಳಿಗೆ ಎಂಬ ವಾಕ್ಯದ ಬೆಲೆಯೇ ನಮಗೆ ಅರ್ಥವಾಗಲಿಲ್ಲ ಸಾಕಷ್ಟು ವಾಕ್ಯಗಳು ಸಾಕಷ್ಟು ಬರವಣಿಗೆಯ ಮೂಲಕ ಕೇಳಿದ್ದು ನೋಡಿದ್ದು ಮರವನ್ನು ಬೆಳೆಸಿ ಪರಿಸರವನ್ನು ಉಳಿಸಿ, ಕಾಡು ಬೆಳೆಸಿ ನಾಡು ಉಳಿಸಿ, ಪರಿಸರ ಬೆಳೆಸಿ ಮನುಕುಲ ಉಳಿಸಿ ಇಂತಹ ಸಾಕಷ್ಟು ವ್ಯಾಕ್ಯಗಳು ನಾವು ಕೇಳಿದ್ದೇವೆ ಆದರೆ ,ಅದರ ಬೆಲೆ ನಮಗೆ ಅರಿವೇ ಆಗಲಿಲ್ಲ. ದಿನಕಳೆದಂತೆ ಮಾನವನ ಆಸೆ-ದುರಾಸೆ ಗಳು ಹೆಚ್ಚುತ್ತಾ ಹೋಯಿತು. ಪರಿಸರದ ಸರ್ವನಾಶಕ್ಕೆ ಮುಂದಾದನು ಭವ್ಯ ಕಟ್ಟಡಗಳು, ಮನೆ ಮಾಳಿಗೆಗಳನ್ನು ನಿರ್ಮಿಸಿದನು .ಎತ್ತ ನೋಡಿದರೂ ಆಕಾಶದೆತ್ತರ ನಿಂತಿರುವ ಕಟ್ಟಡಗಳು ಹೊರತು ಮರಗಿಡಗಳಿಲ್ಲ. ಹಣದ ಮೋಹದಲ್ಲಿ ಭವ್ಯ ಬಂಗಲೆಗಳನ್ನು ನಿರ್ಮಿಸುವ ಬರದಲ್ಲಿ ಪರಿಸರ ನಾಶದ ಪರಿಣಾಮ ಅಲ್ಪವೂ ಕೂಡ ಮನದಟ್ಟಾಗಲಿಲ್ಲ”

ಮಹಾತ್ಮ ಗಾಂಧೀಜಿಯವರು ಹೇಳುತ್ತಾರೆ:
“ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸಲು ಭೂಮಿಯು ಸಾಕಷ್ಟು ಒದಗಿಸುತ್ತದೆ, ಆದರೆ ಪ್ರತಿಯೊಬ್ಬ ಮನುಷ್ಯನ ದುರಾಸೆಗಳಿಗಲ್ಲ”
ಭೂಮಿಯು ಮನುಷ್ಯನ ಅಗತ್ಯಗಳಿಗೆ ಸಾಕಷ್ಟು ಒದಗಿಸಿಕೊಟ್ಟಿದೆ ,ಪರಿಸರವನ್ನು ನೀನೆಷ್ಟು ಪ್ರೀತಿಸುತ್ತಿಯೋ ಹಾಗೆಯೇ ಪರಿಸರವು ನಿನ್ನನ್ನು ಪ್ರೀತಿಸುತ್ತದೆ.
ಪರಿಸರ, ಮರ, ಗಿಡಗಳನ್ನು ನೀನು ಬೆಳೆಸಿ ಉಳಿಸಿದರೆ ಪರಿಸರ ನಿನ್ನ ಜೀವವನ್ನು ಉಳಿಸಲು ಮುಂದಾಗುತ್ತದೆ. ನಿನ್ನ ಕ್ರಿಯೆ ಹೇಗಿರುತ್ತದೆಯೋ ಅದರ ಪ್ರತಿಕ್ರಿಯೆ ಪರಿಸರ ಕೊಡುತ್ತದೆ.
ಇಂದು ನಾವು ನೀವು ಎದುರಿಸುತ್ತಿರುವ ಕೊರೋನಾ ಎಂಬ ಮಹಾಮಾರಿಗೆ ಕಾರಣ ಜನರೇ ಹೊರತು ಬೇರಾರೂ ಅಲ್ಲ ,ಅದೇ ರೀತಿ ಆಕ್ಸಿಜನ್ ಗಾಗಿ ಪರದಾಡುವ ಪರಿಸ್ಥಿತಿಗೆ ಮಾನವನೇ ಕಾರಣ ಹೊರತು ಬೇರೆ ಯಾರು ಅಲ್ಲ. ಮರ ಗಿಡಗಳನ್ನು ನಾಶ ಮಾಡುವ ಮುನ್ನ ಅಲ್ಪ ಯೋಚಿಸಿದ್ದರು ಕೂಡ ಇಂದು ಆಕ್ಸಿಜನ್ ನ ಪರದಾಟ ಬರಲಸಾಧ್ಯ. ಅಂದು ನಿನ್ನಲ್ಲಿ ಲಕ್ಷಲಕ್ಷ ಹಣವಿತ್ತು ಹಾಗಾಗಿ ಭೂಮಿಯನ್ನೇ ಕೊಂಡುಕೊಂಡೆ, ಭವ್ಯ ಬಂಗಲೆಯನ್ನು ನಿರ್ಮಿಸಿದೆ, ಆದರೆ ಇಂದು ನಿನ್ನ ಪ್ರಾಣ ಪಕ್ಷಿ ಕೈಬಿಟ್ಟು ಹೋಗುತ್ತಿದೆ ಲಕ್ಷ-ಕೋಟಿ ಕೊಡುವೆ ಅಲ್ಪ ಉಸಿರಾಡಲು ಗಾಳಿ ಕೊಡಿ ಎಂದು ಕಾಡಿ ಬೇಡಿದರೂ ಕೊಡುವವರಿಲ್ಲ, ಇದಕ್ಕೆಲ್ಲ ಕಾರಣ ಏನು? ಮನುಷ್ಯನ ಅಂದಿನ ದುರಾಸೆ ಅಷ್ಟೇ.
ಅಂದು ಹೆಮ್ಮರಗಳ ಮೇಲೆ ರಭಸದ ಕೊಡಲಿಯೇಟು ಬೀಸಬೇಕಾದರೆ ಆ ಮರ ಕ್ಷಣಕ್ಷಣಕ್ಕೂ ಅತ್ತಿರಬಹುದು. “ನಿಲ್ಲಿಸಿ ಬಿಡು ಮಾನವ, ನಶಿಸದಿರು ನನ್ನ, ನನ್ನ ನಾಶ ನಿನಗೆ ಶಾಪ, ನಾನಿನ್ನ ಅಸ್ತ್ರ, ಮರೆಯದಿರು”
ಹೌದು ಆ ಮರಗಳ ಶಾಪವೇ ಆಗಿರಬಹುದೇ… ಏಕೆಂದರೆ ಇಂದು ಮಾನವ ಆಕ್ಸಿಜನ್ ಅನ್ನು ಹೆಗಲಮೇಲೆ ಹೊತ್ತು ನಡೆಯುತ್ತಿದ್ದಾನೆ ಆದರೆ ಮನೆಮುಂದೆ ಸುಂದರವಾಗಿ ನಿರ್ಮಿತವಾದ ಮರವನ್ನು ಕಡಿದಿದ್ದಾನೆ ಮಾನವನಿಗೆ ಈಗೀಗ “ಮುಂದಿನ ಪೀಳಿಗೆಗಾಗಿ ಮರ ಗಿಡಗಳನ್ನು ನೆಡಬೇಕು” ಎಂಬ ವಾಕ್ಯ ಮನದಟ್ಟಾಗಿರಬಹುದು….
ಮನುಷ್ಯನಿಗಿದ್ದ ಬರೀ ಹಣದ ಮೋಹ ದುರಾಸೆಯ ಕಾರಣದಲ್ಲಿ ಅನ್ಯಾಯವಾಗಿ ನಾಶವಾದ ಪರಿಸರದ ಪರಿಣಾಮವೇ ಇಂದು ನಾವು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆಯೇ ಪ್ರಕೃತಿ ವಿಕೋಪಗಳು, ಆಗಾಗ ಸುನಾಮಿ ಸುಂಟರಗಾಳಿಗಳು, ಕಾಡ್ಗಿಚ್ಚುಗಳು, ಕಾಲಕಾಲಕ್ಕೆ ಮಳೆ ಇಲ್ಲ ,ಮಳೆ ಇಲ್ಲದೆ ರೈತನ ಬದುಕಿಗೆ ಹೊಡೆತಬಿದ್ದು ಬೆಲೆಯು ಹಾಳಾಗಿದೆ, ಆದರೆ ಮಳೆ ಬಂದರೆ ಪ್ರತಿಯೊಂದು ಕೊಚ್ಚಿ ಹೋಗುವಂತೆ ಬರುವ ಮಳೆಗಳಿಗೂ ಕಾರಣ ಮನುಷ್ಯನೇ ಹೊರತು ಬೇರಾರೂ ಅಲ್ಲ. ಮಳೆ ನೀರು ಹರಿದುಹೋಗಲು ಜಾಗವಿಲ್ಲ , ಆದ್ದರಿಂದ ಮಳೆ ನೀರು ಮನೆಗಳಿಗೆ ನುಗ್ಗಿ ಪ್ರಾಣ ಹಾನಿ ಉಂಟಾಗುತ್ತದೆ. ಇನ್ನು ನಾವು ಕೇಳಿರುವಂತಹ ವಿಷಯವೇನೆಂದರೆ’ ವ್ಯಾಗ್ರ ಪ್ರಾಣಿಗಳು ಮದ್ದಾನೆಗಳು ನಾಡಿಗೆ ನುಗ್ಗಿ ಪ್ರಾಣ ಹಾನಿ’ ಇದಕ್ಕೂ ಕಾರಣ ಮನುಷ್ಯನೇ ಹೊರತು ಆ ಪ್ರಾಣಿಗಳಲ್ಲ. ಏಕೆಂದರೆ ಅವುಗಳ ಉಳಿವಿಗೆ ಕಾಡುಗಳೇ ಇಲ್ಲ ಮತ್ತೆ ನಾಡುಗಳಿಗೆ ಬರೆದೆ ಇನ್ನೆಲ್ಲಿ ಹೋಗಬೇಕು?,
ಹೌದು ಸ್ನೇಹಿತರೆ ,…
ನಾವು ಎದುರಿಸುತ್ತಿರುವ ಪ್ರತಿಯೊಂದು ಸಮಸ್ಯೆಯು ನಾವೇ ಮಾಡಿದ ತಪ್ಪಿಗೆ ಶಿಕ್ಷೆ. ಪರಿಸರ ನಾಶವನ್ನು ಮಾಡದೆ ಇನ್ನಾದರೂ ಮರಗಳನ್ನು ಬೆಳೆಸಲು ಪ್ರಯತ್ನಿಸೋಣ ನಮಗಾಗಿ, ನಮ್ಮ ಉಳಿವಿಗಾಗಿ ನಾವು ಪರಿಸರವನ್ನು ಬೆಳೆಸೋಣ.
ಇಂದು ಪರಿಸರ ದಿನದ ಅಂಗವಾಗಿ ಎಲ್ಲರೂ ಗಿಡಗಳನ್ನು ನೆಟ್ಟು ಹಾಗೂ ಪರಿಸರದ ಮಹತ್ವವನ್ನು ಅರಿತು ಇನ್ನು ಮುಂದೆ ಪರಿಸರ ಪ್ರೇಮಿಗಳಾಗಿ ಬದುಕಲು ಪ್ರಯತ್ನಿಸೋಣ…

LEAVE A REPLY

Please enter your comment!
Please enter your name here