• ರಘುವೀರ್ ಕಾಸರಗೋಡು

ಕಾಸರಗೋಡಿನಲ್ಲಿ ಇತ್ತೀಚೆಗೆ ನಡೆದ ಬಿಜೆಪಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಲವ್ ಜಿಹಾದ್ ಕುರಿತು ಕೇರಳ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲವ್ ಜಿಹಾದ್ ಎನ್ನುವ ಪದವನ್ನು ಯೋಗಿಯಷ್ಟು ಗಟ್ಟಿಯಾಗಿ ಬಿಜೆಪಿಯ ಇತರ ರಾಜಕಾರಣಿಗಳು ಹಿಡಿದುಕೊಂಡಿಲ್ಲ. ಹಾಗಾಗಿ ಯೋಗಿ ಹೆಸರಿಗೆ ಲವ್ ಜಿಹಾದ್ ಎಂಬ ಪದ ಅಂಟಿಕೊಂಡಬಿಟ್ಟಿದೆ.

ಯೋಗಿ ಆಡಳಿತ ನಡೆಸುತ್ತಿರುವ ಉತ್ತರ ಪ್ರದೇಶ, ಕಳೆದ ಕೆಲವು ವರ್ಷಗಳಿಂದ ಅಲ್ಲಿ ನಡೆಯುತ್ತಿರುವ ಭೀಕರ ಅತ್ಯಾಚಾರ ಪ್ರಕರಣಗಳಿಂದಾಗಿ ಸುದ್ದಿಯಲ್ಲಿರುವುದು. ಅದರ ಹೊರತಾಗಿ ಯೋಗಿ ಸಿಎಂ ಆಗಿ ಅಲ್ಲಿ ಅಭಿವೃದ್ಧಿ ಮಾಡಿದ್ದಾರೆ ಎಂಬ ಸುಳ್ಳಿಗಾಗಿ ಅಲ್ಲ(ಹಿಂದೆ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಭಕ್ತರು ಗುಜರಾತ್ ಸಿಟಿ ಬಗ್ಗೆ ರಂಗುರಂಗಿನ ಕತೆ ಕಟ್ಟಿ ಸಂಭ್ರಮಿಸುತ್ತಿದ್ದರು, ಪಾಪ). ಅಭಿವೃದ್ಧಿ ಮಾಡದೆಯೇ ಅಭಿವೃದ್ಧಿ ಮಾಡಿದ್ದೇವೆ ಎಂದು ಬೊಗಳೆ ಬಿಡುವ ಬಿಜೆಪಿಗರು, ಅಭಿವೃದ್ಧಿ ಮಾಡಿದ್ದನ್ನು ಹೇಳದಿರಲುಂಟೆ? ಅಸಾಧ್ಯ. ಹಾಗಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಮಾಡುತ್ತಿರುವ ಮಾಮೂಲಿ ಕೆಲಸ ಅಂದ್ರೆ ಇದ್ದಬದ್ದ ಗೋಡೆಗಳಿಗೆಲ್ಲ ಕೇಸರಿ ಬಣ್ಣ ಬಳಿಸುವುದು, ಕಂಡ ಕಂಡ ರಸ್ತೆಗಳ ಹೆಸರಿನ ಕೊನೆಯಲ್ಲಿ ‘ಬಾದ್’ ಅಂತ ಇದ್ದರೆ ಅಂತಹ ಹೆಸರುಗಳನ್ನು ಬದಲಿಸುವುದು. ಇದು ಯೋಗಿ ಅಭಿವೃದ್ಧಿ. ಇಂತಹ ಯೋಗಿ ಆದಿತ್ಯನಾಥ್ ಕಾಸರಗೋಡಿಗೆ ಬಂದು, ಕೇರಳ ಸರ್ಕಾರ ಕೊರೊನಾ ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಕುಕ್ಕುತ್ತಾರೆ. ಆದರೆ ಅದೇ ಕೇರಳ ಸರ್ಕಾರದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ, ಕೊರೊನಾ ಸಂದರ್ಭದ ಮುನ್ನೆಚ್ಚರಿಕಾ ಕ್ರಮಗಳನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿದ್ದಕ್ಕಾಗಿ ವಿಶ್ವದ ಗಮನ ಸೆಳೆದವರು. ಅಲ್ಲದೆ ಬ್ರಿಟನ್ ನ ಪ್ರಸಿದ್ಧ ಮ್ಯಾಗಜಿನ್ ಪ್ರೋಸ್ಪೆಕ್ಟ್ ವತಿಯಿಂದ ನೀಡಲಾಗುವ ವಿಶ್ವದ ಅತ್ಯುತ್ತಮ ಚಿಂತಕಿ/ ಪ್ರಭಾವಿ ಮಹಿಳೆ ಎಂಬ ಪ್ರಶಸ್ತಿ ಶೈಲಜಾ ಅವರ ಪಾಲಾಗಿದೆ. ನ್ಯೂಝಿಲೆಂಡ್ ನ ಪ್ರಧಾನಿ ಜೆಸಿಂತಾ ಅರ್ಡ್ರೆನ್ ಅವರನ್ನು ಹಿಂದಿಕ್ಕಿ ಈ ಪ್ರಶಸ್ತಿ ಶೈಲಜಾ ಅವರಿಗೆ ದಕ್ಕಿದೆ.
ಕೋವಿಡ್ ಸಂದರ್ಭದ ಕಾರ್ಯನಿರ್ವಹಣೆಗಾಗಿ ವಿಶ್ವಸಂಸ್ಥೆ ಶೈಲಜಾ ಅವರನ್ನು ಸಂವಾದಕ್ಕೆ ಆಹ್ವಾನಿಸಿದೆ. ಹೀಗೆ ಕೇರಳವನ್ನು ಈ ಹಿಂದೆ ನಿಫಾ ವೈರಸ್ ಬಂದಾಗಲೂ ಅತ್ಯಂತ ಸಮರ್ಥವಾಗಿ ಆ ಸನ್ನಿವೇಶಗಳನ್ನು ನಿಭಾಯಿಸಿದ್ದ ಕಮ್ಯುನಿಸ್ಟ್ ಸರ್ಕಾರದ ಶೈಲಜಾ ಅವರನ್ನು ಮರೆತು ಯೋಗಿ ಮಾತನಾಡಿದರೇ? ಕೊರೊನಾದಿಂದಾದ ಸಾವಿನ ಸಂಖ್ಯೆ ಉತ್ತರ ಪ್ರದೇಶಕ್ಕಿಂತ ಕೇರಳದಲ್ಲಿ ಕಡಿಮೆಯಿದೆ.
ಕೊರೊನಾ ವಿಚಾರ ಬಿಡಿ. ಲವ್ ಜಿಹಾದ್ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಕೇರಳ ಸರ್ಕಾರವನ್ನು ದೂಷಿಸುವ ಯೋಗಿಗೆ, ಕೇರಳದ ಜನಜೀವನದ ಅರಿವಿದೆಯೇ? ಅಷ್ಟಕ್ಕೂ ಯೋಗಿ ಆದಿತ್ಯನಾಥ್, 130ಕೋಟಿ ಜನಸಂಖ್ಯೆ ದಾಟಿದ ಇಡೀ ಭಾರತದಲ್ಲಿ ಒಟ್ಟು ಎಷ್ಟು ಲವ್ ಜಿಹಾದ್ ಪ್ರಕರಣಗಳನ್ನು ಪತ್ತೆಹಚ್ಚಿ ತೋರಿಸಬಲ್ಲರು? ಲವ್ ಜಿಹಾದ್ ಎನ್ನುವ ಒಂದು ಬ್ರಾಂಡ್ ಅನ್ನು ಹಿಡಿದುಕೊಂಡು ಸಮುದಾಯಗಳನ್ನು ವಿಭಜಿಸುವ, ಆ ಮೂಲಕ ಮತ ಹಿಂದೂಗಳ ಮತ ಗಟ್ಟಿಗೊಳಿಸುವ ಪ್ರಯತ್ನಕ್ಕೆ ಕೈ ಹಾಕುತ್ತ ಕೇರಳಕ್ಕೆ ಸಾಗಿದ ಯೋಗಿ, ಕೇರಳದ ಜನರ ಬಗ್ಗೆ ತಿಳಿದುಕೊಳ್ಳಬೇಕಿರುವುದು ಬಹಳ ಇದೆ. ದೇಶದಲ್ಲಿ ಅತ್ಯಂತ ಹೆಚ್ಚು ಸಾಕ್ಷರರನ್ನು ಹೊಂದಿರುವುದು ಇದೇ ಪುಟ್ಟ ರಾಜ್ಯ ಕೇರಳ. ಅಲ್ಲಿನ ಜನರು ಪ್ರಜ್ಞಾವಂತರು. ಅವರಿಗೆ ಆ ಪಕ್ಷ ಈ ಪಕ್ಷ ಎಂಬ ರೋಗ ಅಂಟಿಕೊಂಡಿಲ್ಲ. ಯಾರು ಸಮರ್ಥ ಆಡಳಿತ ನಡೆಸುತ್ತಾರೋ ಅವರಿಗೆ ಅಧಿಕಾರ ಕೊಡುವುದು, ಒಂದು ವೇಳೆ ಆಡಳಿತ ಕಳೆಪೆಯಾಗಿದ್ದಲ್ಲಿ, ಮುಂದಿನ ಅವಧಿಗೆ ಅವರನ್ನು ಕೆಳಗಿಳಿಸುವುದು ಇದುವರೆಗೆ ಕೇರಳದಲ್ಲಿ ನಡೆದುಬಂದ ಪ್ರಜಾಪ್ರಭುತ್ವದ ರೀತಿ. ಅಲ್ಲಿ ಆಹಾರದ ವಿಚಾರದಲ್ಲಾಗಲಿ, ಪ್ರೀತಿ ಪ್ರೇಮದ ವಿಚಾರದಲ್ಲಾಗಲಿ ಕೋಮುಭಾವನೆ ಸೃಷ್ಟಿಯಾಗುವುದಿಲ್ಲ. ಹಿಂಸಾಚಾರಗಳು ನಡೆಯಬಹುದು. ಅವು ರಾಜಕೀಯ ವಿಚಾರಕ್ಕಾಗಿ. ಆದರೆ ಅಂತರ್ಧರ್ಮೀಯ ಪ್ರೇಮಕ್ಕೆ, ವಿವಾಹಕ್ಕೆ ಕೇರಳದಲ್ಲಿ ಅಡ್ಡಿಯೇನಿಲ್ಲ. ಈ ಹಿಂದಿನಿಂದಲೂ ಅಲ್ಲಿ ಅನುಕೂಲಕರವಾಗಿಯೇ ಇವು ನಡೆಯುತ್ತ ಬಂದಿವೆ. ಯೋಗಿಯಂಥವರು ಅಲ್ಲಿ ತೆರಳಿ ವಿಷ ಕಕ್ಕಿದರೆ ಪ್ರಬಲ ಕಮ್ಯುನಿಸ್ಟ್ ವಿಚಾರಧಾರೆಗೆ ಒತ್ತಾಗಿರುವ ಆ ನಾಡಿನ ಜನತೆಯ ಮೇಲೆ ಅದು ಹೆಚ್ಚಿನ ಪ್ರಭಾವ ಬೀರದು.‌ ಲವ್ ಜಿಹಾದ್ ಬಗ್ಗೆ ಅರಚುವ ಯೋಗಿಗೆ ಕೇರಳ ಪ್ರೇಮದ ಪಾಠವನ್ನು ಕಲಿಸಬಹುದೇ ಹೊರತು ವಿಭಜಿಸುವ ವಿಷಕಾರಿ ಮನಸ್ಥಿತಿಯನ್ನು ಬೆಂಬಲಿಸದು‌.

ಉತ್ತರ ಪ್ರದೇಶದಲ್ಲಾದರೂ ಯೋಗಿ ಆದಿತ್ಯನಾಥ್, ಒಂದು ತಿಂಗಳಲ್ಲಿ ಎಷ್ಟು ಲವ್ ಜಿಹಾದ್ ಪ್ರಕರಣಗಳನ್ನು ಹುಡುಕಿ ಕೊಡಬಹುದು?(ನೆನಪಿರಲಿ, ಲವ್ ಜಿಹಾದ್ ಎಂಬ ಬಿಜೆಪಿಯ ನಕಲಿ ಬೋರ್ಡಿಗೂ, ನಿಜವಾದ ಅಂತರ್ಧರ್ಮೀಯ ಪ್ರೇಮ ಸಮಬಂಧಕ್ಕೂ ವ್ಯತ್ಯಾಸವಿದೆ) ಆದರೆ ಒಂದು ತಿಂಗಳಲ್ಲಿ ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಎಷ್ಟು ಎಂಬುದನ್ನು ಯೋಗಿ ಗಮನಿಸಿದ್ದಾರೆಯೇ? ಆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆಯೇ? ಅತ್ಯಾಚಾರಿಗಳ ವಿರುದ್ಧ ಕಿಡಿಕಾರಿದ್ದಾರೆಯೇ? ಅಥವಾ ಇವುಗಳ ಕುರಿತು ಮೌನ ವಹಿಸುವ ಮೂಲಕ ಅತ್ಯಾಚಾರಕ್ಕೆ ಸಮ್ಮತಿ ಸೂಚಿಸುತ್ತಿದ್ದಾರೆಯೇ? ಲವ್ ಜಿಹಾದ್ ಬಗ್ಗೆ ಅರಚುವ ಯೋಗಿಯ ನಾಲಿಗೆಯಲ್ಲಿ ತನ್ನ ರಾಮರಾಜ್ಯದಲ್ಲಿ ಕಾಮಿಗಳ ಅಟ್ಟಹಾಸಕ್ಕೆ ಬಲಿಯಾಗುವ (ಹೆಚ್ಚಾಗಿ ದಲಿತ ಸಮುದಾಯದ)ಹೆಣ್ಣುಗಳ ಪರವಾಗಿ ಯಾಕೆ ಒಂದಕ್ಷರವೂ ಹೊರಡುವುದಿಲ್ಲ? ಹಾಗಾದರೆ ಕಠಿಣ ಕಾನೂನು ಕ್ರಮ ಬೇಕಿರುವುದು ಅತ್ಯಾಚಾರಿಗಳ ವಿರುದ್ಧವೋ? ಪ್ರೇಮಿಗಳ ವಿರುದ್ಧವೋ?

ಅತ್ಯಾಚಾರ ಪ್ರಕರಣದಲ್ಲಿ ತನ್ನ ರಾಜ್ಯದ ತನ್ನದೇ ಪಕ್ಷದ ಶಾಸಕನನ್ನು ಉಳಿಸಿದ, ಹೆಣ್ಣಿನ ಬಗ್ಗೆ ನಿರ್ಲಕ್ಷ್ಯ ವಹಿಸುವ, ನಾಯಕರೆಂದು ಕರೆಸಿಕೊಳ್ಳುವ ಇಂತಹವರು ಮುಂದಿನ ಪ್ರಧಾನಿಯಾದರೆ ಭಾರತದ ಹೆಣ್ಣುಗಳ ಕತೆಯೇನು? ದಲಿತರ ಮನೆಯ ಅಮಾಯಕ ಹೆಣ್ಣುಗಳ ಬದುಕು ಏನಾದೀತು? ಮೋದಿಯನ್ನೇನೋ ಆಯ್ಕೆ ಮಾಡಿ ದಿವಾಳಿಯಾಗುತ್ತ ಬಂದಿದ್ದೇವೆ. ಮುಂದೆ ಈ ಯೋಗಿಯನ್ನು ಆಯ್ಕೆ ಮಾಡುವ ಮುನ್ನ ಯೋಚಿಸದಿದ್ದರೆ ಬದುಕು ಮಣ್ಣು ಮುಕ್ಕಿತು ಎಂದೇ ಲೆಕ್ಕ.

LEAVE A REPLY

Please enter your comment!
Please enter your name here