ಲೇಖಕರು – ರವಿ ನವಲಹಳ್ಳಿ (ಸಿಂಧನೂರು)

ಭಾರತದ ಸ್ವತಂತ್ರ ಹೋರಾಟ ಇತಿಹಾಸದಲ್ಲೇ ಒಬ್ಬನನ್ನು ಸಾಯಿಸಲು 80 ಜನ ಪೊಲೀಸರು ಬಂದಿದ್ದು ಇದೆ, ನೀವೇ ಯೋಚನೆ ಮಾಡಿ ಅಜಾದ್ ಕಂಡರೆ ಬ್ರಿಟಿಷರಿಗೆ ಎಷ್ಟು ಭಯವಿತ್ತು, ಕ್ರಾಂತಿಕಾರಿಗಳ ಬದುಕು ಹಾಗೆ ಗಾಂಧೀಜಿ ನಡೆಸಿದಂತೆ ಸುಲಭವಾಗಿ ಇರಲಿಲ್ಲ ಅವರ ಜೀವನ, ಎಲ್ಲೊ ಮಲಗೋದು, ಊಟ ನಿದ್ರೆ ಇಲ್ಲ , ಬ್ರಿಟಿಷರನ್ನ ಹೊಡೆಯಬೇಕು ಎನ್ನುವುದೊಂದೇ ಅವರ ಗುರಿ. ಇಂತಹ ಕ್ರಾಂತಿಕಾರಿ ಹೋರಾಟಗಾರರಲ್ಲಿ ಇಂದು ನಾನು ಹೇಳುತ್ತಿರುವುದು ಬ್ರಿಟಿಷರು ಅತಿ ಹೆಚ್ಚು ಭಯ ಪಟ್ಟಿದ್ದ ವ್ಯಕ್ತಿಯ ಬಗ್ಗೆ.

ಬಹುತೇಕ ಕ್ರಾಂತಿಕಾರಿಗಳಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಿದ ವ್ಯಕ್ತಿ ಚಂದ್ರಶೇಖರ್ ಅಜಾದ್, ಭಗತ್ ಸಿಂಗ್ ಅಂದ್ರೆ ಎಲ್ಲರಿಗೂ ಗೊತ್ತಿರುವ ವ್ಯಕ್ತಿ ಆದರೆ ಅಂತಹ ಭಗತ್ ಸಿಂಗ್ ಗೆ ಗುರು ಈ ಅಜಾದ್, ಭಗತ್ ಸಿಂಗ್ ಅಂದ್ರೇನೆ ಬ್ರಿಟಿಷರು ನಡುಗುತ್ತಿದ್ದರು ಅಂತದರಲ್ಲಿ ಅವನ ಗುರು ಚಂದ್ರಶೇಖರ್ ಅಜಾದ್ ಕಂಡ್ರೆ ಬ್ರಿಟಿಷರಿಗೆ ಹೇಗೆ ಉರಿತಿತ್ತು ನೀವು ಒಮ್ಮೆ ಯೋಚಿಸಿ.

12 ನೇ ವಯಸ್ಸಿನಲ್ಲಿ ಈಗಿನ ಕಾಲದಲ್ಲಿ ಕ್ರಿಕೆಟ್ ಆಡೋ ವಯಸ್ಸು ಕಂಡ್ರಿ, ಆದರೆ ಈ ಚಂದ್ರಶೇಖರ್ ಅಜಾದ್ ಆ ವಯಸ್ಸಿನಲ್ಲೇ ಬ್ರಿಟಿಷರಿಗೆ ವೈರಿ ಆಗಿದ್ದ, ಒಂದು ದಿನ ಕಾಶಿ ವಿದ್ಯಾಪೀಠದ ಆವರಣದ ಹೊರಗೆ ವಂದೇ ಮಾತರಂ ಗೀತೆ ಮೊಳಗುತ್ತಿತ್ತು 12 ರ ಬಾಲಕ ಚಂದ್ರಶೇಖರ್ ತಿವಾರಿ (ಮೊದಲು ಅವರ ಹೆಸರು ತಿವಾರಿ) ಗುರುಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಶಾಲೆಯ ಕಂಪೌಂಡ್ ಎಗರಿ ಹೊರಗೆ ಬಂದ, ಅಲ್ಲಿ ಎಲ್ಲರೊಂದಿಗೆ ಜೋರಾಗಿ ವಂದೇ ಮಾತರಂ ಘೋಷಣೆ ಕೂಗಿದ. ಅಷ್ಟೋತ್ತಿಗಾಗಲೇ ಬ್ರಿಟಿಷರ ಪೊಲೀಸರು ಬಂದು ಸ್ವತಂತ್ರ ಹೋರಾಟದ ಘೋಷಣೆಗೆ ಅಡ್ಡಿ ಪಡಿಸಿದರು, ಒಬ್ಬ ಹೋರಾಟಗಾರನಿಗೆ ಪೊಲೀಸರು ಹೊಡೆದರು, ಅದನ್ನು ದೂರದಿಂದಲೇ ಗಮನಿಸುತ್ತಿದ್ದ ಬಾಲಕ ಚಂದ್ರಶೇಖರ್ ತಿವಾರಿ ಒಂದು ಕಲ್ಲನ್ನು ಜೋರಾಗಿ ಪೋಲೀಸರ ಮೇಲೆ ಎಸೆದು ಜೋರಾಗಿ ನಕ್ಕುಬಿಟ್ಟ ಅವತ್ತು ಅವನು ಪೋಲೀಸರ ಕೈಗೆ ಸಿಗಲಿಲ್ಲ ಮರುದಿನ ಅವನ ಶಾಲೆಗೆ ಬಂದು ಬ್ರಿಟಿಷರು ಅವನನ್ನು ಬಂಧಿಸಿ ಕೋರ್ಟ್ ನಲ್ಲಿ ನಿಲ್ಲಿಸಿದರು.

ನ್ಯಾಯಾಧೀಶರು ಕೋಪದಿಂದ ಏನು ನಿನ್ನ ಹೆಸರು ಅಂದರು ಅದಕ್ಕೆ ಅವನು ನನ್ನ ಹೆಸರು ಅಜಾದ್, ನನ್ನ ಮನೆ ಜೈಲು ಅಂದ, ಅಜಾದ್ ಅಂದರೆ ಸ್ವತಂತ್ರ ಅದನ್ನು ಕೇಳುತ್ತಲೇ ಕೆಂಡವಾದ ನ್ಯಾಯಾಧೀಶರು ಅವನಿಗೆ 12 ಛಡಿ ಏಟಿನ ಶಿಕ್ಷೆ ವಿಧಿಸಿದರು ಅದಕ್ಕೆ ಚಂದ್ರಶೇಖರ್ ಹೇಳುತ್ತಾನೆ ನಾನು ನನ್ನ ದೇಶಕ್ಕಾಗಿ ಬ್ರಿಟಿಷರ ತಲೆಗೆ ಕಲ್ಲು ಹೊಡೆದಿರುವೆ ನನಗೆ 12 ಛಡಿ ಏಟು ಸಾಲಲ್ಲ 24 ಏಟು ಕೊಟ್ಟರೆ ಅದಕ್ಕೆ ಒಂದು ಬೆಲೆ ಇದೆ ಅಂದ ಎಂತ ದೇಶಪ್ರೇಮ ಅಲ್ವ, ನೆನಪಿರಲಿ 12 ವರ್ಷದ ಬಾಲಕನಾಗಿದ್ದಾಗ ಒಂದೊಂದು ಛಡಿ ಏಟು ಬಿದ್ದಾಗಲೂ ವಂದೇ ಮಾತರಂ ಹೇಳುತ್ತಿದ್ದ ಚಂದ್ರಶೇಖರನ ದೇಶಪ್ರೇಮಕ್ಕೆ ಜೈಲಿನಲ್ಲಿದ್ದ ಕೈದಿಗಳ ದೇಶ ಪ್ರೇಮ ಉಕ್ಕುತ್ತಿತ್ತು ಅಂದಿನಿಂದ ಅವನ ಹೆಸರಿನ ಕೊನೆಯಲ್ಲಿ ತಿವಾರಿ ಹೋಗಿ ಅಜಾದ್ ಬಂತು. ಒಂದು ವಿಷಯ ನೆನಪಿರಲಿ ಅದೇ ಕೊನೆ ಮತ್ತೆ ಯಾವತ್ತೂ ಕೂಡ ಚಂದ್ರಶೇಖರ್ ಅಜಾದ್ ಬ್ರಿಟಿಷರ ಕೈಗೆ ಸಿಗಲಿಲ್ಲ, ಯಾಕೆಂದರೆ ಅವನ ಶಪಥ “ನಾನು ಹುಟ್ಟುವಾಗಲು ಸ್ವತಂತ್ರ ಸಾಯುವಾಗಲು ಸ್ವತಂತ್ರ” ಈ ಶಪಥ ಅವನು ಸಾಯುವ ಕೊನೆಗಳಿಗೆ ತನಕ ಉಳಿಸಿಕೊಂಡ .

ಬಾಲ್ಯದಲ್ಲೇ ಅಷ್ಟು ದೇಶಪ್ರೇಮಿ ಅಜಾದ್, ತನ್ನ ಯೌವ್ವನದಲ್ಲಿ ತನ್ನ ಸುಖ ಸಂಸಾರವನ್ನು ಬಿಟ್ಟು ತನ್ನದೇ ಪಡೆ ಕಟ್ಟಿಕೊಂಡು ಗಾಂಧೀಜಿಯ ಅಹಿಂಸಾ ಮಾರ್ಗಕ್ಕೆ ವಿರುದ್ಧವಾಗಿ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟ, ತನ್ನ ಜೊತೆಗಿರುವ ಕಿರಿಯ ಸದಸ್ಯರು ಹೊಟ್ಟೆ ತುಂಬಾ ಊಟ ಮಾಡಿದ ನಂತರ ಉಳಿದರೆ ತಾನು ಊಟ ಮಾಡುತ್ತಿದ್ದ.

ಇವನ ತಂಡ ಸೇರಿಕೊಂಡ ಮತ್ತೊಬ್ಬ ದೇಶಭಕ್ತ ಭಗತ್ ಸಿಂಗ್ ಜೊತೆಗೆ ಸುಖದೇವ್ ರಾಜಗುರು ಇನ್ನಿತರರು
ಚಂದ್ರಶೇಖರ್ ಅಜಾದ್ ಕ್ರಾಂತಿಕಾರಿಗಳ ಮಾಸ್ಟರ್ ಮೈಂಡ್, ಯಾಕಂದ್ರೆ ಎಲ್ಲ ತರಬೇತಿ ಮುಂದಾಲೋಚನೆ ಪ್ರತಿದಿನದ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತಿದ್ದದ್ದು ಅಜಾದ್ ಅಪ್ಪಣೆಯಂತೆ ಭಗತ್ ಸಿಂಗ್ ಮತ್ತು ಇತರರು ಹೋರಾಟ ಮಾಡುತ್ತಿದ್ದರು.

ಅಜಾದ್ ಬ್ರಿಟಿಷರಿಗೆ ಎಷ್ಟು ತೊಂದರೆ ಕೊಟ್ಟಿದ್ದ ಅಂದರೆ
1) ಕಾಪೋಲಿ ರೈಲಿನಲ್ಲಿ ಬ್ರಿಟಿಷರ ವಸ್ತುಗಳ ಅಪಹರಣ.
2) ಬ್ರಿಟಿಷ್ ಖಜಾನೆ ಲೂಟಿ
3) ಸ್ಯಾಂಡರ್ಸ್ ಎಂಬ ಬ್ರಿಟಿಷ್ ಅಧಿಕಾರಿಯ ಹತ್ಯೆ.
4) ಪೋಲೀಸರ ಮೇಲೆ ಹಲ್ಲೆ 5) ಅಸೆಂಬ್ಲಿಯ ಒಳಗೆ ಬಾಂಬ್ ಎಸೆದದ್ದು
6) ಬ್ರಿಟಿಷರನ್ನು ಸಾಯಿಸಲು ದೇಶದೆಲ್ಲಡೆ ಬಾಂಬ್ ಫ್ಯಾಕ್ಟರಿ ಸ್ಥಾಪನೆ.
7) ಬಾಂಬ್ ತಯಾರಿಕೆಯಲ್ಲಿ ಮಾಸ್ಟರ್ ಮೈಂಡ್.
8) ಬಹುತೇಕ ಕ್ರಾಂತಿಕಾರಿಗಳಿಗೆ ಪ್ರೇರಣೆ, ಸಾವಿರಾರು ಕ್ರಾಂತಿಕಾರಿಗಳಿಗೆ ಗುರು.

ಚಂದ್ರಶೇಖರ್ ಅಜಾದ್ ಎಷ್ಟು ಬುದ್ದಿವಂತ ಅಂದರೆ ಹೈ ಸೆಕ್ಯೂರಿಟಿ ಇರುವ ಅಸೆಂಬ್ಲಿಯ ಒಳಗೆ ಬಾಂಬ್ ಹಾಕುವ ರೂಪುರೇಷೆ ಸಿದ್ದಪಡಿಸಿದ್ದ, ಎಲ್ಲ ಅಂದುಕೊಂಡಂತೆ ಆಗಿದ್ದರೆ ಅಜಾದ್ ಅವರೇ ಒಳಗೆ ಹೋಗಿ ಬಾಂಬ್ ಎಸೆಯಬೇಕಿತ್ತು ಆದರೆ ಅಜಾದ್ ಹೇಳುತ್ತಾನೆ ಭಗತ್ ಸಿಂಗ್ ಸುಖದೇವ್ ರಾಜಗುರು ನೀವು ಬಾಂಬ್ ಎಸೆಯಿರಿ ನೀವು ಏನಾದರೂ ಬ್ರಿಟಿಷರಿಗೆ ಸಿಕ್ಕಿದರೆ ನಿಮ್ಮನ್ನು ಜೈಲಿನಿಂದ ಹೊರಗೆ ತರಲು ನಾನು ಬೇಕಲ್ವಾ ಅದಕ್ಕೆ ನಾನು ಹೊರಗೆ ಇರ್ತೀನಿ ಅಂದ, ಭಗತ್ ಸಿಂಗ್, ಸುಖದೇವ್, ರಾಜಗುರು ಮೂವರು ಬಾಂಬ್ ಎಸೆದು ಪೊಲೀಸರಿಗೆ ಶರಣಾಗಿದ್ದರು ಚಂದ್ರಶೇಖರ್ ಅಜಾದ್ ಹೇಳಿದ ಸೂಚನೆಯಂತೆ ನಡೆದಿದ್ದರೆ ಆ ಮೂವರು ಪೊಲೀಸರಿಂದ ತಪ್ಪಿಸಿಕೊಳ್ಳಬಹುದಿತ್ತು ಆದರೆ ಭಗತ್ ಸಿಂಗ್ ಯೋಚನೆ ಏನೆಂದರೆ ನಾವು ಸತ್ತರೆ ಇನ್ನು ಸಾವಿರಾರು ಯುವಕರಿಗೆ ಪ್ರೇರಣೆ ಆಗಬಹುದು ಅಂತ ಶರಣಾದರು ನಂತರ ಗಲ್ಲುಶಿಕ್ಷೆ ಪ್ರಕಟವಾಯಿತು.

ಭಗತ್ ಸಿಂಗ್ ತಂಡವನ್ನು ಜೈಲಿನಿಂದ ಹೊರಗೆ ತರಲು ಅಜಾದ್ ತನ್ನ ಎಲ್ಲ ಶ್ರಮ ಹಾಕಿದ HSRA ಎಂಬ ಸಂಘಟನೆ ಕಟ್ಟಿ, ಗಾಂಧೀಜಿಯನ್ನು ನಂಬಿದರೆ ಭಗತ್ ಸಿಂಗ್ ಹೊರಗೆ ಬರೋದಿಲ್ಲ ಅಂತ ದೃಢ ಪಡಿಸಿಕೊಂಡ ಚಂದ್ರಶೇಖರ್ ಅಜಾದ್ ಭಗತ್ ಸಿಂಗ್ ಇದ್ದ ಜೈಲಿಗೆ ನುಗ್ಗಲು ಎದುರು ನೋಡುತ್ತಿದ್ದ ಅಂತಹ ಸಮಯದಲ್ಲೇ ವೀರ ಸೇನಾನಿ ಚಂದ್ರಶೇಖರ್ ಅಜಾದ್ ಒಬ್ಬ ದೇಶದ್ರೋಹಿಯ ಸಂಚಿಗೆ ಬಲಿಯಾಗಬೇಕಾಯಿತು.

ಅಂದು 1931 ರ ಫೆಬ್ರವರಿ 27 ಒಮ್ಮೆಯೂ ಬ್ರಿಟಿಷರ ಕೈಗೆ ಸಿಗದ ಅಜಾದ್ ಅಂದು ತನ್ನ ಪ್ರಾಣ ಸ್ನೇಹಿತ ವೀರಭದ್ರ ತಿವಾರಿ ಕುತಂತ್ರಕ್ಕೆ ಬಲಿಯಾದ ಆ ದಿನ ಎಂದಿನಂತೆ ಭಗತ್ ಸಿಂಗ್ ಸುಖದೇವ್ ರಾಜಗುರು ಎಲ್ಲರನ್ನು ಜೈಲಿನಿಂದ ಬಿಡಿಸಲು ಸೇನೆಯ ತಯಾರಿ ಮಾಡುತ್ತಿದ್ದ ಅಜಾದ್ ಅಲಹಾಬಾದ್ ನ ಆಲ್ಫ್ರೆಡ್ ಉದ್ಯಾನವನಕ್ಕೆ ಹೊರಟಿದ್ದ, ಎಂದಿನಂತೆ ತನ್ನ ಪ್ರಾಣಸ್ನೇಹಿತ ನ ಜೊತೆ ಕಿರಿಯ ಕ್ರಾಂತಿಕಾರಿ ಒಬ್ಬನ ಭೇಟಿಗೆ ಹೊರಟಿದ್ದ ಆದರೆ ಸ್ನೇಹಕ್ಕೆ ಬೆಲೆ ಕೊಡುವ ಅಜಾದ್ ಗೆ ಗೊತ್ತಿರಲಿಲ್ಲ ತನ್ನ ಪ್ರಾಣ ಸ್ನೇಹಿತ ನನ್ನ ಪ್ರಾಣ ತೆಗೆಯಲು ಬ್ರಿಟಿಷರ ಜೊತೆ ಶಾಮೀಲಾಗಿದ್ದಾನೆ ಎಂದು.

ಅಜಾದ್ ಭೇಟಿ ಮಾಡಲು ಕಿರಿಯ ಕ್ರಾಂತಿಕಾರಿಯೊಬ್ಬ ಬಂದ ಆದರೆ ಸ್ವಲ್ಪ ಹೊತ್ತಿನಲ್ಲೇ ವೀರಭದ್ರ ಆಲ್ಫ್ರೆಡ್ ಉದ್ಯಾನವನದ ಹೊರಗೆ ಓಡಿಹೋದ, ಮರುಕ್ಷಣ 80 ಸಿಪಾಯಿಗಳ ಪೊಲೀಸ್ ತಂಡ ಉದ್ಯಾನವನವನ್ನು ಸುತ್ತುವರಿದಿದ್ದರು, ಅಜಾದ್ ಗೆ ತನ್ನ ಸ್ನೇಹಿತನ ಕುತಂತ್ರ ತಿಳಿಯಿತು, ಆಲ್ಫ್ರೆಡ್ ಉದ್ಯಾನವನದ ಆಲದ ಮರದ ಕೆಳಗೆ ಕುಳಿತಿದ್ದ ಚಂದ್ರಶೇಖರ್ ಅಜಾದ್ ಕಡೆಗೆ 80 ಪೋಲೀಸರ ಗುಂಡುಗಳು ಹಾರಲು ಶುರು ಆದವು ಅಜಾದ್ ಗೆ ಆ ಮರವೇ ರಕ್ಷಣೆ ಕವಚ ಆಗಿತ್ತು, ತನ್ನ ಬಂದೂಕಿನಿಂದ ಗುಂಡು ಹೊಡೆಯಲು ಪ್ರಾರಂಭಿಸಿದ ಅಜಾದ್ ಗೆ ಭಾರತೀಯ ಸಿಪಾಯಿಗಳ ಮೇಲೆ ಗುಂಡು ಹರಿಸಲು ಇಷ್ಟವಿರಲಿಲ್ಲ ಅವನು ಅಲ್ಲೇ ಕೂಗಿ ಹೇಳಿದ ನಾನು ನಿಮಗಾಗಿ ಹೋರಾಡುತ್ತಿರುವೆ ಬಂದೂಕು ಇಳಿಸಿ ಅಂತ, ಬ್ರಿಟಿಷರ ಸಂಬಳಕ್ಕೆ ಸಿಪಾಯಿಗಳಾಗಿದ್ದ ಅವರು ಕೇಳಲಿಲ್ಲ, ಅಜಾದ್ ತನ್ನ ಹೋರಾಟ ಮುಂದುವರೆಸಿ 3 ಜನ ಸಿಪಾಯಿಗಳು ಅಜಾದ್ ನ ಗುಂಡೇಟಿಗೆ ಬಲಿ ಆದರು, ಅಜಾದ್ ನ ಬಳಿ ಕೊನೆಯ ಒಂದು ಗುಂಡು ಬಾಕಿಯಿತ್ತು ಜೊತೆಗೆ ತನ್ನ ನಂಬಿದ್ದ ಆ ಕಿರಿಯ ಕ್ರಾಂತಿಕಾರಿಯ ರಕ್ಷಣೆ ಮಾಡಿದ.

ಆ ಒಂದು ಗುಂಡು ಕೈಯಲ್ಲಿ ಹಿಡಿದ ಚಂದ್ರಶೇಖರ್ ಅಜಾದ್ ತನ್ನ ಶಪಥ ನೆನಪಿಸಿಕೊಂಡ ನಾನು ಬ್ರಿಟಿಷರಿಗೆ ಎಂದೂ ಸಿಗುವುದಿಲ್ಲ ಹುಟ್ಟುವಾಗಲು ಅಜಾದ್ ಸಾಯುವಾಗಲು ಅಜಾದ್ ಎಂದುಕೊಂಡು ತನ್ನ ಹಣೆಗೆ ತಾನೇ ಗುಂಡು ಹೊಡೆದ ಭಾರತದ ಕ್ರಾಂತಿ ಕಿಡಿ ಒಂದು ಆರಿ ಹೋಯಿತು ಬ್ರಿಟಿಷರಿಗೆ ಎಷ್ಟು ಭಯವಿತ್ತು ಅಂದರೆ ಆ ಮರದ ಕೆಳಗೆ ಗುಂಡು ಹೊಡೆದುಕೊಂಡು ಬಿದ್ದಿದ್ದ ಅಜಾದ್ ದೇಹದ ಮೇಲೆ ಮತ್ತೆ ಗುಂಡು ಹಾರಿಸಿ ಅವನು ಸತ್ತಿರುವುದು ದೃಢ ಆದಮೇಲೆ ಅವನ ಹತ್ತಿರ ಬಂದರು.

ದೇಶದ್ರೋಹಿ ಯ ಕುತಂತ್ರ ಇಲ್ಲದಿದ್ದರೆ ಭಗತ್ ಸಿಂಗ್ ಅವರನ್ನು ಅಜಾದ್ ಬಿಡಿಸುತ್ತಿದ್ದ ಅಲ್ವ ??? ನಮ್ಮ ದೇಶದ ದುರದೃಷ್ಟ ನೋಡಿ ದೇಶದ್ರೋಹಿಗಳು ಯಾವಾಗಲು ಇರ್ತಾರೆ ಅವರಿಗೆ ಸಾವಿಲ್ಲ. ಅಜಾದ್ ಸಾವನ್ನಪ್ಪಿದ ಕೆಲವು ದಿನಗಳ ನಂತರ ಗುಂಡುಗಳು ಹೊಕ್ಕಿದ್ದ ಆ ದೊಡ್ಡ ಮರದ ಬಳಿ ಸಾವಿರಾರು ಕ್ರಾಂತಿಕಾರಿಗಳು ಬಂದು ಪೂಜೆ ಮಾಡುವುದನ್ನು ಕಂಡ ಬ್ರಿಟಿಷ್ ನಾಯಿಗಳು ಆ ಮರವನ್ನು ಕಡಿದರು, ಆದರೆ ಅದೇ ಜಾಗದಲ್ಲಿ ಈಗ ಬೇರೆ ಮರವನ್ನು ನೆಡಲಾಗಿದೆ ಹಾಗೂ ಅಲಹಾಬಾದ್ ನ ಆಲ್ಫ್ರೆಡ್ ಉದ್ಯಾನವನದ ಅದೇ ಜಾಗದಲ್ಲಿ ಚಂದ್ರಶೇಖರ್ ಅಜಾದ್ ಅವರ ಪುತ್ಥಳಿ ನಿರ್ಮಿಸಲಾಗಿದೆ.

ಗ್ರಂಥ ಋಣ –

ಜೀವನಚರಿತ್ರೆ ‘ಅಜೇಯ’ (ಕನ್ನಡದಲ್ಲಿ “ಗೆಲ್ಲಲಾಗದ” ಎಂದರ್ಥ) ಬಾಬು ಕೃಷ್ಣಮೂರ್ತಿ ಎಂಬ ಲೇಖಕರ ಕೃತಿಯಿಂದ.

LEAVE A REPLY

Please enter your comment!
Please enter your name here