ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಭಾವ 01

ಯೋಗೇಶ್ ಮಾಸ್ಟರ್, ಬೆಂಗಳೂರು

ಮಕ್ಕಳನ್ನು ಪ್ರಭಾವಿಸಲು ಆಡಲು ಬಳಸುವ ಆಟಿಕೆಗಳಿಂದ ಹಿಡಿದು, ಶಿಕ್ಷಣ ಪಡೆಯುವ ಪಠ್ಯಕ್ರಮಗಳನ್ನೂ ಸೇರಿದಂತೆ ಅನೇಕಾನೇಕ ಸಂಪನ್ಮೂಲಗಳಿವೆ. ಪೋಷಕರು, ಶಿಕ್ಷಕರು ಮತ್ತು ಮಗುವಿನ ಜೊತೆ ಅಥವಾ ಮಗುವಿಗಾಗಿ ಕೆಲಸ ಮಾಡುವವರು ಇದನ್ನೆಲ್ಲಾ ಗಮನಿಸಬೇಕು. ಇವರೆಲ್ಲರ ಉದ್ದೇಶ ಮಗುವಿನ ಸಮಗ್ರ ಬೆಳವಣಿಗೆ, ಪ್ರಗತಿ ಮತ್ತು ವಿಕಾಸ. ಬೆಳವಣಿಗೆ, ಪ್ರಗತಿ ಮತ್ತು ವಿಕಾಸಗಳು ಸ್ಥೂಲಕ್ಕೆ ಒಂದರಂತೆ ಕಂಡರೂ ಅವು ಒಂದೇ ಅಲ್ಲ. ಬೆಳವಣಿಗೆಯು ಭೌತಿಕವಾಗಿರುವುದು. ಶಾರೀರಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಮತ್ತು ಶೈಕ್ಷಣಿಕವಾಗಿ ಸಹಜವಾಗಿ ಮುಟ್ಟಬೇಕಾದ ಮಟ್ಟಗಳನ್ನು ಗುರುತಿಸಲು ಸಾಧ್ಯವಾಗುವಂತಹ ಘಟ್ಟಗಳಿಂದ ಘಟ್ಟಗಳಿಗೆ ಸಾಗುವ ಕ್ರಿಯೆ. ಇದು ಕ್ರಿಯಾತ್ಮಕ ಮತ್ತು ಸ್ಥೂಲಸ್ತರದಲ್ಲಿ ಕಾಣುವ ಲಹರಿ.

ಪ್ರಗತಿಯೆಂದರೆ ಮಗುವಿಗೆ ಪರಿಚಯಿಸಿರುವ ಯಾವುದೇ ಒಂದು ವಿದ್ಯೆ, ಕೌಶಲ್ಯ ಇತ್ಯಾದಿಗಳನ್ನು ಕಲಿಕೆ, ತರಬೇತಿ, ಅಭ್ಯಾಸಗಳ ಮೂಲಕ ಮುಂದಿನ ಹಂತಗಳಿಗೆ ಸಾಗುವಂತಹ ಪ್ರಕ್ರಿಯೆ. ಇದರಲ್ಲಿಯೂ ಹಂತಗಳಿದ್ದರೂ ಅದು ಆಯಾ ಮಗುವಿನ ವೈಯಕ್ತಿಕ ಬೌದ್ಧಿಕ ಸಾಮರ್ಥ್ಯ, ಕಲಿಕೆಯಲ್ಲಿನ ಆಸಕ್ತಿ, ಗ್ರಹಿಸುವುದರಲ್ಲಿನ ಸೂಕ್ಷ್ಮತೆ; ಇತ್ಯಾದಿಗಳ ಮೇಲೆ ಅವಲಂಬಿತವಾಗಿರುತ್ತದೆ. ಮಗುವೊಂದು ಕಲಿಕೆಯಲ್ಲಿ ಪ್ರಗತಿಯನ್ನು ಹೊಂದುತ್ತಿದೆ ಎಂದರೆ ಅದು ಒಂದು ಸಮಯಕ್ಕೆ ಹೊಂದಿದ್ದ ಗುಣಮಟ್ಟಕ್ಕಿಂತ ಇನ್ನೂ ಹೆಚ್ಚಿನ ಗುಣಮಟ್ಟವನ್ನು ಹೊಂದಿದೆ. ಗುಣಮಟ್ಟದ ಬೆಳವಣಿಗೆಯಾಗುತ್ತಿದೆ ಎಂದು ಅರ್ಥ. ಪ್ರಗತಿಯಲ್ಲಿ ಅಳೆಯಬೇಕಾದ ವಿಷಯವೆಂದರೆ ಗುಣಮಟ್ಟ.

ವಿಕಾಸವೆಂಬುದು ಬೆಳವಣಿಗೆ ಮತ್ತು ಪ್ರಗತಿ; ಈ ಎರಡಕ್ಕಿಂತ ಸೂಕ್ಷ್ಮ ಮತ್ತು ಮೌಲ್ಯವುಳ್ಳದ್ದು. ವಿಕಾಸದಲ್ಲಿ ಪಕ್ವತೆ ಮತ್ತು ಪ್ರಬುದ್ಧತೆಯು ಕೂಡಾ ಮುಖ್ಯ ಅಂಶಗಳಾಗಿರುತ್ತವೆ. ತನ್ನ ಹಳೆಯ ಭೌತಿಕ ಮತ್ತು ಬೌದ್ಧಿಕ ಮಟ್ಟದ ಬೆಳವಣಿಕೆ ಮತ್ತು ಪ್ರಗತಿಯು ಆಗುವುದರ ಜೊತೆಗೆ ಆ ವಿಷಯದಲ್ಲಿ ಪ್ರಬುದ್ಧತೆಯನ್ನೂ ಮತ್ತು ಸೂಕ್ಷ್ಮತೆಯನ್ನೂ ಹೊಂದಿರುವುದು. ಅದರ ಪರಿಧಿಯ ವ್ಯಾಪ್ತಿಯು ವಿಶಾಲವಾಗಿರುವುದು. ಹೀಗೆ ತಿಳಿದುಕೊಳ್ಳೋಣ. ವಿಶಾಲ ಎಂಬುದು ವ್ಯಾಪ್ತಿಯ ಭೌತಿಕ ಗ್ರಹಿಕೆಯಾದರೆ, ವಿಕಾಸ ಎಂಬುದು ವ್ಯಾಪ್ತಿಯ ಮೌಲಿಕ ಗ್ರಹಿಕೆ. ಯಾವುದೇ ವಿಷಯದಲ್ಲಿ ವ್ಯಕ್ತಿಯು ಪರಿಣಿತನಾದರೂ, ತಜ್ಞನಾದರೂ ಆ ವಿಷಯವಸ್ತುವಿನ ಮೌಲ್ಯವು ಅವನಲ್ಲಿ ಮಾನಸಿಕವಾದ, ಬೌದ್ಧಿಕವಾದ ಹಾಗೂ ಭಾವನಾತ್ಮಕವಾದ ಒಂದು ಪಕ್ವತೆಯನ್ನು ನೀಡಿರುತ್ತದೆ. ಅದು ಅವನ ದೃಷ್ಟಿಯನ್ನು, ಒಲವು, ನಿಲುವುಗಳನ್ನು, ಸ್ಪಂದಿಸುವ ರೀತಿಯನ್ನು, ಆಲೋಚಿಸುವ ಕ್ರಮವನ್ನು, ವರ್ತನೆ ಮತ್ತು ಪ್ರತಿವರ್ತನೆಗಳನ್ನು, ನಡವಳಿಕೆಗಳನ್ನು, ಕ್ರಿಯೆ ಮತ್ತು ಪ್ರತಿಕ್ರಿಯೆಗಳನ್ನು, ಸ್ಪಂದಿಸುವ ರೀತಿಗಳನ್ನು; ಹೀಗೆ ಒಟ್ಟಾರೆ ವ್ಯಕ್ತಿತ್ವದ ಅಭಿವ್ಯಕ್ತಿಯನ್ನೇ ಅದು ನಿರ್ಧರಿಸುತ್ತದೆ. ವಿಷಯದ ಅಥವಾ ತನ್ನ ಯಾವುದೇ ಸಾಮರ್ಥ್ಯದ ಮೇಲಿನ ಹಿಡಿತ ಮತ್ತು ಪರಿಣಿತಿ ಆ ವ್ಯಕ್ತಿಯ ಮೂಲಕ ಪ್ರದರ್ಶನವಾಗುವಾಗ ಆತ ಮಾನಸಿಕವಾಗಿ ಪ್ರಬುದ್ಧನಾಗಿದ್ದರೆ, ವಿಕಾಸ ಹೊಂದಿದ್ದರೆ; ಆ ಪ್ರದರ್ಶನವು ವಿನಯವಾಗಿಯೂ, ನಿರಹಂಕಾರವಾಗಿಯೂ ಪ್ರಕಟಗೊಳ್ಳುತ್ತದೆ. ಅಂತೆಯೇ ತನ್ನ ತಿಳುವಳಿಕೆ ಅಂತಿಮವಲ್ಲ ಎಂಬ ಎಚ್ಚರಿಕೆಯಿಂದ ವಿಮರ್ಶೆ ಮತ್ತು ವಿಶ್ಲೇಷಣೆಗಳನ್ನು ಸ್ವಾಗತಿಸುವಷ್ಟರ ಮಟ್ಟಿಗೆ ಮುಕ್ತತೆ ಇರುತ್ತದೆ. ಅಗಾಧವಾಗಿರುವ ವಿಷಯದ ಒಂದು ಭೌತಿಕ ಭಾಗ ಮಾತ್ರವೇ ತಾನು ಹೊರತು, ತನ್ನಿಂದ ಆ ವಿಷಯದ ಅಸ್ತಿತ್ವವಲ್ಲ ಎನ್ನುವಂತಹ ಪರಿಜ್ಞಾನ ಇರುತ್ತದೆ. ನನ್ನ ತಿಳುವಳಿಕೆಯನ್ನು ಮತ್ತು ತನ್ನ ಗ್ರಹಿಕೆಯ ವ್ಯಾಪ್ತಿಯನ್ನು ಮೀರಿರುವಷ್ಟು ಅಗಾಧ ಈ ವಿಷಯ ಎಂಬ ನಿರಹಂಕಾರ ಭಾವ ವಿಕಾಸಜ್ಞನ ಲಕ್ಷಣ. ಅವನಿಗೆ ವಿಕಾಸವು ನಿರಂತರ ಮತ್ತು ಪ್ರಕ್ರಿಯೆಯಿಂದ ಕೂಡಿರುವುದು ಎಂಬ ಸೂಕ್ಷ್ಮತೆ ಇರುತ್ತದೆ. ವಿಕಾಸಜ್ಞನಾಗಿರದಿದ್ದ ಪಕ್ಷದಲ್ಲಿ ವಿಷಯಕ್ಕಿಂತ ತಾನು ದೊಡ್ಡವನೆಂಬ ಭಾವ, ತಾನಿಲ್ಲದಿದ್ದರೆ ಈ ವಿಷಯವೆಲ್ಲಿ ಎಂಬ ಗರ್ವ, ತನ್ನಿಂದ ಈ ವಿಷಯದ ಅಸ್ತಿತ್ವ ಎನ್ನುವಂತಹ ಮನಸ್ಥಿತಿ; ಒಟ್ಟಾರೆ ವ್ಯಕ್ತಿಕೇಂದ್ರಿತ ಅಹಂಕಾರ. ಯಾವ ಟೀಕೆ, ವಿಮರ್ಶೆಗಳನ್ನೂ ಸಹಿಸುವುದಿಲ್ಲ, ಸಲಹೆ ಸೂಚನೆಗಳನ್ನು ಅವಗಾಹನೆಗೂ ಸ್ವೀಕರಿಸುವುದಿಲ್ಲ.

ನೋಡಿ, ಮಕ್ಕಳ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಬೆಳವಣಿಕೆ, ಪ್ರಗತಿ ಮತ್ತು ವಿಕಾಸ; ಈ ಎಲ್ಲಾ ಆಯಾಮಗಳನ್ನು ನಾವು ಕಲಿಕೆಯಲ್ಲಿ ಗಮನಿಸಲೇ ಬೇಕು. ಏಕೆಂದರೆ ಕಲಿಕೆಯೆಂಬುದು ಬರಿಯ ಯಾಂತ್ರಿಕ ಕ್ರಿಯೆಯಲ್ಲವಲ್ಲ. ಒಂದು ಮಗುವನ್ನು ವ್ಯಕ್ತಿಯಾಗಿಸುವ ವ್ಯಕ್ತಿತ್ವದ ವಿಕಾಸದ ಪ್ರಕ್ರಿಯೆ. ಮಗುವಿಗೆ ಮಾತನಾಡಲು, ಎಣಿಸಲು, ಬರೆಯಲು, ಓದಲು, ಚಿತ್ರ ಬಿಡಿಸಲು, ಪರಸ್ಪರ ಗೌರವಿಸಲು; ಇತ್ಯಾದಿಗಳನ್ನು ಕಲಿಸುತ್ತೇವೆ. ಈ ಕಲಿಕೆ ಪ್ರತ್ಯಕ್ಷವಾಗಿಯೂ ಆಗುತ್ತದೆ, ಪರೋಕ್ಷವಾಗಿಯೂ ಆಗುತ್ತದೆ. ಯಾವುದೇ ರೀತಿಯಲ್ಲಿ ಹಿರಿಯರು ಭಾಗವಾಗಿರುವಾಗುವಾಗ ಅವರು ಕೆಲವು ತಂತ್ರಗಳನ್ನು ಬಳಸಬೇಕು. ಏಕೆಂದರೆ, ಈ ಸಣ್ಣಪುಟ್ಟ ತಂತ್ರಗಳು ಮಗುವಿನ ಬೆಳವಣಿಗೆಯಲ್ಲಿ ಬಹಳ ಮಹತ್ತರವಾದ ವಿಷಯಗಳಾಗಿ ಮುಂದೆ ಅವರ ವ್ಯಕ್ತಿತ್ವದ ಪ್ರಕಟಣೆಯಾಗುತ್ತಿರುತ್ತದೆ.

ಮಗುವಿನ ಬೆಳವಣಿಗೆಯು ಯಾವಾಗಲೂ ಸಕ್ರಿಯವಾಗಿಯೂ, ಸಂವಾದಾತ್ಮಕವಾಗಿಯೂ ಇರುವುದರಿಂದ ಕಲಿಕೆಯ ಪಕ್ರಿಯೆಯು ಕಲಿಸುವವರ ಮತ್ತು ಕಲಿಯುವವರ ಮಧ್ಯೆ ಪರಸ್ಪರ ಕಾರ್ಯ ನಡೆಸುವಂತದ್ದು. ಪರಸ್ಪರ ಪ್ರಭಾವ ಬೀರುವಂತದ್ದು. ಪರಸ್ಪರ ಪರಿಣಾಮ ಸಾಧಿಸುವಂತದ್ದು.

ಕಲಿಯುವ ಮಗು ಮತ್ತು ಕಲಿಸುವವರು ಇಬ್ಬರಿಗೂ ಮಾನಸಿಕವಾದ ಕ್ರಿಯೆಗಳು ನಡೆಯುತ್ತಿರುತ್ತದೆ. ಪರಸ್ಪರರಲ್ಲಿ ಭಾವನೆಗಳು ಉಂಟಾಗುತ್ತಿರುತ್ತದೆ. ಇಬ್ಬರಲ್ಲಿಯೂ ಗ್ರಹಿಕೆಯು ಉಂಟಾಗುತ್ತಿರುತ್ತದೆ. ಆದರೆ ಕಲಿಸುವವರಲ್ಲಿ ಐಚ್ಛಿಕ. ಕಲಿಯುವವರಲ್ಲಿ ಅನೈಚ್ಛಿಕ. ನಾವು ಏನನ್ನೇ ಕಲಿಸುತ್ತಿದ್ದರೂ ಅವರ ವ್ಯಕ್ತಿತ್ವದ ವಿಕಾಸಕ್ಕೆ ಪೋಷಣೆ ನೀಡುತ್ತಿದ್ದೇವೆ ಮತ್ತು ಅವರ ಮನೋಭಾವದ ವಿಕಸನಕ್ಕೆ ಕಾರಣವಾಗುತ್ತಿದ್ದೇವೆ ಎಂಬುದರ ಬಗ್ಗೆ ಎಚ್ಚರವಹಿಸಿರಬೇಕು. ಪ್ರತಿಯೊಂದು ಮಗುವೂ ತನ್ನ ಸುತ್ತಲಿನ ಪ್ರಪಂಚಕ್ಕೆ ಸ್ಪಂದಿಸುವ, ವಿಷಯಗಳನ್ನು ಗ್ರಹಿಸುವ, ಸ್ವೀಕರಿಸುವ, ತಿರಸ್ಕರಿಸುವ ರೀತಿಗಳಲ್ಲಿ ತನ್ನದೇ ಆದಂತಹ ಒಲವು ನಿಲುವುಗಳನ್ನು ಹೊಂದಿರುತ್ತದೆ. ಆ ಒಲವು ನಿಲುವುಗಳು ಕೆಲವೊಮ್ಮೆ ಸ್ವಾಭಾವಿಕ, ಮತ್ತೆ ಕೆಲವು ಸಲ ರೂಢಿಯ ಪ್ರಭಾವದಿಂದಾಗಿರುತ್ತದೆ. ಅದೇನೇ ಆದರೂ ಮಗುವು ಮುಂದೆ ವ್ಯಕ್ತಿಯಾಗಿ ಆಲೋಚಿಸುವ ಮತ್ತು ವರ್ತಿಸುವ ರೀತಿ ನೀತಿಗೆ ತಮ್ಮಿಂದ ಕೊಡುಗೆಗಳು ಸಲ್ಲುತ್ತಿರುತ್ತವೆ ಎಂಬುದನ್ನು ಗಮನಿಸಬೇಕು. ವ್ಯಕ್ತಿಯೊಬ್ಬನ ಆಲೋಚಿಸುವ ಮತ್ತು ವರ್ತಿಸುವ ರೀತಿನೀತಿಗಳೇ ಅವನ ವ್ಯಕ್ತಿತ್ವದ ಗುಣಮಟ್ಟವನ್ನು ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ನಿರ್ಧರಿಸಲಾಗುವುದು. ಅದು ಸಾಧಕವೋ ಬಾಧಕವೋ ವ್ಯಕ್ತಿಗೂ ಮತ್ತು ಅವನ ಸುತ್ತಮುತ್ತಲಿನವರಿಗೂ ಅನುಭವಕ್ಕೆ ಬರುವುದು.

(ಮುಂದುವರಿಯುವುದು)

LEAVE A REPLY

Please enter your comment!
Please enter your name here