ಶಿಕ್ಷಣ ರಂಗದ ಕಗ್ಗೊಲೆಗೆ ಜೀವಂತ ಸಾಕ್ಷ್ಯಗಳು-6

  • ನಿರೂಪಣೆ: ನಿಖಿಲ್ ಕೋಲ್ಪೆ

ದೇಶದ ಸಾರ್ವಜನಿಕ ಶಿಕ್ಷಣದ ಮೇಲೆ ಸರಕಾರಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ದಾಳಿಗಳ ಕುರಿತು ವಿಚಾರಣೆ ನಡೆಸಲು ಪೀಪಲ್ಸ್ ಕಮೀಷನ್ ಫಾರ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್‌ಡಿಎಸ್) ಸಂಘಟನೆಯು ನಿವೃತ್ತ ನ್ಯಾಯಾಧೀಶರುಗಳನ್ನೂ ಒಳಗೊಂಡ ಒಂದು ಜನತಾ ನ್ಯಾಯಮಂಡಳಿಯನ್ನು ರಚಿಸಿತ್ತು. ಅದರ ಮುಂದೆ ನೂರಾರು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸಾಕ್ಷ್ಯ ಹೇಳಿ ಹಸಿಹಸಿ ಸತ್ಯಗಳನ್ನು ಬಿಚ್ಚಿಟ್ಟಿದ್ದರು. ಅವುಗಳ ಆಧಾರದಲ್ಲಿ ಈ ವಿಶೇಷ ಸರಣಿಯನ್ನು ನಿರೂಪಿಸಲಾಗಿದೆ.


ಕ್ಯಾಂಪಸ್‌ಗಳಲ್ಲಿ ಹೆಚ್ಚುತ್ತಿರುವ ಕೋಮುವಾದ, ಇತಿಹಾಸ ಮತ್ತು ಪಠ್ಯಕ್ರಮಗಳ ತಿರುಚುವಿಕೆ, ಪಠ್ಯಗಳ ಬದಲಾವಣೆ ಮೂಲಕ ಜಾತ್ಯತೀತ ಸತ್ಯಗಳನ್ನು ಕಿತ್ತುಹಾಕುವುದು ಮತ್ತು ಬಲಪಂಥೀಯ ಸರಕಾರವು ಶಿಕ್ಷಣವನ್ನು ಕೇಸರೀಕರಣಗೊಳಿಸುವ ತನ್ನ ಯೋಜನೆಯನ್ನು ಜಾರಿಗೊಳಿಸುವ ಸಲುವಾಗಿ ಸಾಂಸ್ಥಿಕವಾಗಿ ವಿಶ್ವವಿದ್ಯಾಲಯಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದರಿಂದ ಅವುಗಳ ನೈಜ ಸ್ವಾಯತ್ತತೆ ಕಡಿತಗೊಳ್ಳುತ್ತಿರುವುದು ಮುಂತಾದವು ನ್ಯಾಯಮಂಡಳಿಯ ಮುಂದೆ ಮಂಡಿಸಲಾದ ಸಾಕ್ಷ್ಯಗಳಿಂದ ಮುಂದೆ ಬಂದ ಆತಂಕಕಾರಿ ವಿದ್ಯಮಾನಗಳು.

ಈ ಸಾಕ್ಷ್ಯಗಳಿಂದ ಹೊರಬಂದ ಇನ್ನೊಂದು ನಿರ್ಣಾಯಕ ಅಂಶವೆಂದರೆ, ಶಿಕ್ಷಣ ವ್ಯವಸ್ಥೆಯನ್ನು ಬಾಧಿಸುತ್ತಿರುವ ಈ ಎಲ್ಲಾ ರೋಗಗಳು ಪರಸ್ಪರ ಸಂಬಂಧ ಹೊಂದಿರುವುದು. ನಾವು ಸಮಾಜವನ್ನು ಮುಂದಕ್ಕೆ ಕೊಂಡೊಯ್ಯುವ ಬಗ್ಗೆ, ಅದನ್ನು ಬದಲಿಸುವ ಬಗ್ಗೆ, ಆದನ್ನು ಆಧುನೀಕರಣಗೊಳಿಸುವ ಬಗ್ಗೆ ಮಾತನಾಡುವುದಿದ್ದರೆ ಶಿಕ್ಷಣವು ನಿರ್ಣಾಯಕ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣದ ಕೇಸರೀಕರಣವು ಅಪಾಯಕಾರಿಯಾಗಿ ಹೆಡೆಯೆತ್ತುತ್ತಿರುವುದು ಮತ್ತು ಇತಿಹಾಸ ಮತ್ತು ಪಠ್ಯಕ್ರಮವನ್ನು ತಿರುಚುತ್ತಿರುವುದು ಸಮಾಜದಲ್ಲಿ ಗಂಭೀರವಾದ ಬಿಕ್ಕಟ್ಟಿನ ಸಂಕೇತ ನೀಡುತ್ತದೆ.

ಮೊದಲಾಗಿಯೇ ಕನ್ನಯ್ಯ ಕುಮಾರ್ ಮತ್ತು ಪ್ರೊ. ಅಪೂರ್ವಾನಂದ ಇಬ್ಬರೂ ‘ಕೇಸರೀಕರಣ’ ಎಂಬ ಪದವನ್ನು ವಿರೋಧಿಸಿದರು. ಕನ್ನಯ್ಯ ಅವರು, ಅದು ಈಗ ನಿಜವಾಗಿಯೂ ನಡೆಯುತ್ತಿರುವ ಶಿಕ್ಷಣದ ಕೋಮುವಾದೀಕರಣವನ್ನು ತಪ್ಪಾಗಿ ಪ್ರತಿಬಿಂಬಿಸುತ್ತದೆ ಎಂದು ವಾದಿಸಿದರೆ, ಅಪೂರ್ವಾನಂದ ಅವರು, ಈಗ ನಿಜವಾಗಿ ನಡೆಯುತ್ತಿರುವ ಅಶ್ಲೀಲೀರಣವನ್ನು ಆ ಪದವು ಪ್ರಬಲವಾಗಿ ಪ್ರತಿಬಿಂಬಿಸುವುದಿಲ್ಲ ಎಂದು ವಾದಿಸಿದರು. ಅವರು ಅದನ್ನು ಘಟಿಯಾಕರಣ್ ಎಂದು ಕರೆದರು. (ಹಿಂದಿಯಲ್ಲಿ ಘಟಿಯಾ ಎಂದರೆ ತುಚ್ಛ, ಕೊಳಕು ಎಂದರ್ಥ).

ಪ್ರೊ. ಅಖಿಲ್ ರಂಜನ್ ದತ್ತಾ ಅವರು, ಇಂದು ನಡೆಯುತ್ತಿರುವ ಮೂಲಭೂತವಾದಿ ಪ್ರಭುತ್ವದ ಕಡೆಗಿನ ಬದಲಾವಣೆಯ ಪ್ರಕ್ರಿಯೆಯ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಂದರ್ಭವನ್ನು ಚರ್ಚಿಸಿದರು. ಕೇಸರೀಕರಣವು- ಬಲಪಂಥೀಯ ಶಕ್ತಿಗಳ ಬೆಳವಣಿಗೆ ಮತ್ತು ಬಲವರ್ಧನೆಯನ್ನು ಪ್ರಚೋದಿಸುವಂತಹ ‘ಹೊರಗಿಡುವ’ (non-inclusion) ಧೋರಣೆಗಳ ಪರಿಣಾಮವಾಗಿದೆ ಎಂದವರು ಹೇಳಿದರು. ಅಸ್ಸಾಂನಲ್ಲಿ ಅಲ್ಲಿನ ಸಂತ ಶಂಕರದೇವ್ ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ವು ತಾನು ಸ್ಥಾಪಿಸಿರುವ ಶಂಕರದೇವ್ ಶಿಶು ನಿಕೇತನಗಳಂತಹ ಶಾಲೆಗಳ ಮೂಲಕ ಹೇಗೆ ತಮ್ಮವರನ್ನಾಗಿ ಮಾಡಿಕೊಂಡಿದೆ ಎಂದು ಅವರು ನ್ಯಾಯಮಂಡಳಿಗೆ ವಿವರಿಸಿದರು. ಗುವಾಹಟಿ ವಿಶ್ವವಿದ್ಯಾಲಯದ ದೇಬಬ್ರತ ಸೈಕಿಯಾ ಮತ್ತು ದಿಬ್ರುಗಢ್ ವಿಶ್ವವಿದ್ಯಾಲಯದ ಬಿದ್ಯುತ್ ಸೈಕಿಯಾ ಎಂಬ ವಿದ್ಯಾರ್ಥಿಗಳು ಈ ಶಾಲೆಗಳಲ್ಲಿ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಜಾತಿ, ಧರ್ಮಗಳ ಬಗ್ಗೆ ಪೂರ್ವಗ್ರಹಗಳನ್ನು ಮಕ್ಕಳ ತಲೆಗೆ ತುಂಬಲಾಗುತ್ತಿದೆ ಎಂದು ತಿಳಿಸಿದರು.

ಈ ಶಾಲೆಗಳನ್ನು ವಾಸ್ತವವಾಗಿ ಆಳುವ ಪಕ್ಷದ ಸೈದ್ಧಾಂತಿಕ ಶಾಖೆಯಾಗಿರುವ ಆರೆಸ್ಸೆಸ್ ನಡೆಸುತ್ತಿದ್ದರೂ, 2016ರಲ್ಲಿ ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದ ತಕ್ಷಣವೇ ಬಿಜೆಪಿ ಸರಕಾರವು ಪ್ರತೀ ಶಂಕರದೇವ್ ಶಾಲೆಗೆ 10 ಲಕ್ಷ ರೂ. ನೀಡುವ ಪ್ರಸ್ತಾಪವೊಂದನ್ನು ಅಂಗೀಕರಿಸಿತು. ಆರೆಸ್ಸೆಸ್ ಈಗ ತನ್ನ ಮೂಲ ಸಿದ್ಧಾಂತಿ ದೀನದಯಾಳ್ ಉಪಾಧ್ಯಾಯರ ಹೆಸರಿನಲ್ಲಿ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಹಿಂದೂತ್ವವನ್ನು ಹೇರಲು ಯತ್ನಿಸುತ್ತಿದೆ. ಈ ಕಾಲೇಜುಗಳು ಗುವಾಹಟಿ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ಕೋರಿ ಅರ್ಜಿ ಸಲ್ಲಿಸುವ ಮೊದಲೇ ಕೋರ್ಸುಗಳನ್ನು ಆರಂಭಿಸಿತ್ತು ಎಂದು ವರದಿಯಾಗಿದೆ. ಒಬ್ಬ ಕೋಮುವಾದಿ ನಾಯಕನ ಹೆಸರಿನಲ್ಲಿ ಕಾಲೇಜುಗಳನ್ನು ಸ್ಥಾಪಿಸುವ ಈ ಕ್ರಮಕ್ಕೆ ವಿದ್ಯಾರ್ಥಿಗಳು ಬಲವಾದ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ಪ್ರತೀಕಾರದ ಭಯದಿಂದ ಅನಾಮಿಕವಾಗಿ ಲಿಖಿತ ಸಾಕ್ಷ್ಯ ಸಲ್ಲಿಸಿದ್ದು, ವಿವೇಕಾನಂದ, ಧನ್ವಂತರಿ, ಸರಸ್ವತಿ ಮುಂತಾದ ವಿಗ್ರಹಗಳ ಸ್ಥಾಪನೆ, ದಿನಚರಿ ಪುಸ್ತಕಗಳ ಒಳಗೆ ಕೇಸರಿ ರಿಬ್ಬನ್ ಅಳವಡಿಸುವುದೇ ಮುಂತಾದ ಸಣ್ಣ ಕ್ರಮಗಳಿಂದ ಸಾಂಕೇತಿಕ ಪ್ರತಿಮೆಗಳ ಮೂಲಕ ಹೆಚ್ಚುತ್ತಿರುವ ಹಿಂದೂತ್ವವಾದದ ಶಕ್ತಿ ತಮ್ಮ ಕ್ಯಾಂಪಸಿನಲ್ಲಿ ಕಂಡುಬರುತ್ತಿದೆ ಎಂದು ಹೇಳಿದ್ದಾರೆ. ವಿಶ್ವವಿದ್ಯಾಲಯದ ದಿನಚರಿ ಪುಸ್ತಕಗಳಲ್ಲಿ ಆರೆಸ್ಸೆಸ್‌ನ ಹಾಡೊಂದನ್ನು ಅಳವಡಿಸಲಾಗಿದ್ದು, ಇದೀಗ ‘ಜನ ಗಣ ಮನ’ವನ್ನು ಹಿಂತೆಗೆದು, ವಂದೇಮಾತರಂ ಅಳವಡಿಸುವ ಮಾತುಗಳು ಕೇಳಿಬರುತ್ತಿವೆ. ಯಾಕೆಂದರೆ, ಅದು ಬ್ರಿಟಿಷ್ ಆಡಳಿತದ ಆಚರಣೆ ಎಂದು ಅವರು ನಂಬಿದ್ದಾರೆ ಎಂದು ಈ ಪ್ರಾಧ್ಯಾಪಕರು ತಿಳಿಸಿದ್ದಾರೆ.

ಪಠ್ಯ ಬದಲಾವಣೆ

ದಿಲ್ಲಿ ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ 2017 ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತಿದ್ದಾಗ ಸರಕಾರವು ‘ವಿದ್ಯಾರ್ಥಿಗಳಿಗೆ ಅನುಕೂಲ’ ಎಂಬ ವೇಷದಲ್ಲಿ ಐಚ್ಛಿಕ ಭಾಷೆಗಳ ಪಟ್ಟಿಯಲ್ಲಿ ಇತರ ಭಾರತೀಯ ಆಧುನಿಕ ಭಾಷೆಗಳ ಜೊತೆ ಶಾಸ್ತ್ರೀಯ ಭಾಷೆಯಾದ ಸಂಸ್ಕೃತವನ್ನು ಸೇರಿಸಿ ಅದಕ್ಕೆ ಅನುಕೂಲ ಮಾಡಿಕೊಟ್ಟಿತು ಎಂದು ಪ್ರೊ. ಗ್ಯಾಬ್ರಿಯೆಲ್ ತೀರ್ಪುಗಾರರ ಮಂಡಳಿಗೆ ತಿಳಿಸಿದರು. ಹಿಂದಿನ ಬಿಜೆಪಿ ನೇತೃತ್ವದ ಸರಕಾರವು ಪಠ್ಯಪುಸ್ತಕಗಳನ್ನು ಬದಲಿಸುವುದರ ಮೂಲಕ ಮತ್ತು ಹಿಂದೂ ಪೌರೋಹಿತ್ಯ, ಕರ್ಮಖಾಂಡ, ಮತ್ತು ವೈದಿಕ ಜ್ಞಾನವನ್ನು ಉತ್ಪ್ರೇಕ್ಷಿಸುವ ಜ್ಯೋತಿರ್ವಿದ್ಯೆ ಮುಂತಾದ ಕೋರ್ಸುಗಳನ್ನು ಆರಂಭಿಸುವ ಮೂಲಕ ಆಗಲೇ ಕೇಸರೀಕರಣದ ಪ್ರಕ್ರಿಯೆಯನ್ನು ಆರಂಭಿಸಿತ್ತು ಎಂದು ಅವರು ಹೇಳಿದರು.

ಆ ಸರಕಾರ ಉರುಳಿದ ಮೇಲೂ ಬಲಪಂಥೀಯ ಸಾಮಾಜಿಕ ಶಕ್ತಿ ಮತ್ತು ಪ್ರಭಾವ ಮುಂದುವರಿದಿತ್ತು ಎಂಬುದು 2011ರಲ್ಲಿ ದಿಲ್ಲಿ ವಿಶ್ವವಿದ್ಯಾಲಯದ ಇತಿಹಾಸ ಪಠ್ಯಕ್ರಮದಿಂದ ಎ.ಕೆ. ರಾಮಾನುಜನ್ ಅವರ ‘300 ರಾಮಾಯಣಾಸ್’ ಪುಸ್ತಕವನ್ನು ಕೈಬಿಟ್ಟುದರಿಂದಲೇ ಗೊತ್ತಾಗುತ್ತದೆ. 2014ರಲ್ಲಿ ಮೂರನೇ ಭಾಷೆಯಾಗಿ ಕೇಂದ್ರೀಯ ವಿದ್ಯಾಲಯಗಳಲ್ಲಿ ಜರ್ಮನ್ ಭಾಷೆಯನ್ನು ಕಲಿಸುವುದನ್ನು ನಿಲ್ಲಿಸುವುದರ ಮೂಲಕ ಪರಿಣಾಮಕಾರಿಯಾಗಿ ಸಂಸ್ಕೃತವನ್ನು ಕಡ್ಡಾಯ ಮಾಡಲಾಯಿತು- ಏಕೆಂದರೆ ಈ ಶಾಲೆಗಳಲ್ಲಿ ಬೇರೆ ಭಾಷೆಯ ಆಯ್ಕೆಯೇ ಇರಲಿಲ್ಲ ಎಂದು ಅವರು ತಿಳಿಸಿದರು. ಅವರು, ಪಠ್ಯಕ್ರಮದ ಕೋಮುವಾದಿಕರಣ ಮತ್ತು ಶಿಕ್ಷಣದ ಖಾಸಗಿಕರಣ ಕಾರ್ಯಕ್ರಮದ ನಡುವೆ ಸಂಬಂಧ ಕಲ್ಪಿಸಿದರು. ಖಾಸಗೀಕಣಕ್ಕೆ ಬೇಕಾದ ರಾಚನಿಕ ಬದಲಾವಣೆಗಳಿಗೆ ಪೂರಕವಾಗಿ ಮತ್ತು ಅದಕ್ಕೆ ಬರಬಹುದಾದ ವಿರೋಧವನ್ನು ದಮನಿಸುವ ಸಲುವಾಗಿ, ಹಿಂದೂತ್ವದ ರಾಷ್ಟ್ರೀಯವಾದಿ ಶಿಕ್ಷಣ ಕಾರ್ಯಕ್ರಮದ- ದಿಕ್ಕುತಪ್ಪಿಸುವ ಕಣ್ಕಟ್ಟಿನ ಅಗತ್ಯವಿರುತ್ತದೆ ಎಂದು ಪ್ರೊ. ಗ್ಯಾಬ್ರಿಯೆಲ್ ವಿವರಿಸಿದರು.

ಪಠ್ಯಪುಸ್ತಕಗಳನ್ನು ಉತ್ಪಾದಿಸುವ ಹಾಗೂ ಆ ಮೂಲಕ ಸಿದ್ಧಾಂತಗಳನ್ನು ಒದಗಿಸುವ ಮತ್ತು ಜನರ ಚಿಂತನೆಗೆ ದಿಕ್ಕು ನೀಡುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ)ಯು ಸರಕಾರದ ಪ್ರಭಾವಕ್ಕೆ ಒಳಗಾಗುತ್ತಿದ್ದು, ಇದರ ಪರಿಣಾಮವಾಗಿ ಅಧಿಕಾರದಲ್ಲಿರುವವರ ಮರ್ಜಿಗೆ ಅನುಗುಣವಾಗಿ ಪಠ್ಯಪುಸ್ತಕಗಳು ಬದಲಾಗುತ್ತವೆ ಎಂದು ಪ್ರೊ. ಥಾಪರ್ ಬಹಿರಂಗಪಡಿಸಿದರು. ವಿಶ್ವವಿದ್ಯಾಲಯಗಳನ್ನು ಸ್ವಾಯತ್ತಗೊಳಿಸುವ ಬದಲು ಎನ್‌ಸಿಇಆರ್‌ಟಿ ಮತ್ತು ಐತಿಹಾಸಿಕ ಸಂಶೋಧನಾ ಮಂಡಳಿ (ಸಿಎಚ್‌ಆರ್), ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿ (ಸಿಎಸ್‌ಎಸ್‌ಆರ್) ಮತ್ತು ತತ್ವಶಾಸ್ತ್ರೀಯ ಸಂಶೋಧನಾ ಮಂಡಳಿ (ಸಿಪಿಆರ್) ಮುಂತಾದ ಮಂಡಳಿಗಳಿಗೆ ಸ್ವಾಯತ್ತತೆ ನೀಡಬೇಕು ಎಂದು ಪ್ರೊ. ಥಾಪರ್ ಅಭಿಪ್ರಾಯಪಟ್ಟರು. ಶಿಕ್ಷಣದ ಕೋಮುವಾದೀಕರಣವನ್ನು ನಿರ್ದಿಷ್ಟ ಉದ್ದೇಶದಿಂದ ನಡೆಸಲಾಗುತ್ತಿದ್ದು, ಅದೆಂದರೆ, ಕೋಮುವಾದಿ ಪ್ರಚಾರಕ್ಕೆ ಅನುಕೂಲವಾಗುವಂತೆ ಪಠ್ಯಪುಸ್ತಕಗಳಿಂದ ಜಾತ್ಯತೀತ ಸತ್ಯಗಳನ್ನು ತೆಗೆದುಹಾಕುವುದು ಎಂದವರು ಹೇಳಿದರು.

ಕೋಮುವಾದೀಕರಣಕ್ಕೆ ಕುಮ್ಮಕ್ಕು ನೀಡುವ ಉದ್ದೇಶದಿಂದ ಶಾಲಾಪಠ್ಯಗಳಲ್ಲಿ ಮತ್ತು ಉನ್ನತ ಶಿಕ್ಷಣದಲ್ಲಿ, ಮುಖ್ಯವಾಗಿ ಸಮಾಜಶಾಸ್ತ್ರ, ಅರ್ಥಶಾಸ್ತ್ರ ಮತ್ತು ಇತಿಹಾಸದಲ್ಲಿ ವಿಷಯಗಳ (content) ಬದಲಾವಣೆ ನಡೆಯುತ್ತಿದೆ ಎಂದು ಪ್ರೊ. ಶಾ ಹೇಳಿದರು. ಬರಬಹುದಾದ ಪ್ರತೀಕಾರದ ಕಾರಣದಿಂದಾಗಿ ಈ ಬದಲಾವಣೆಗಳನ್ನು ಪ್ರಶ್ನಿಸಲು ಸಾಮಾನ್ಯವಾಗಿ ಹಿಂಜರಿಕೆ ಕಾಣುತ್ತಿದೆ ಎಂದವರು ಹೇಳಿದರು. ಗುಜರಾತ್ ರಾಜ್ಯ ಶಾಲಾ ಪಠ್ಯಪುಸ್ತಕ ಮಂಡಳಿಯ ಅರ್ಥಶಾಸ್ತ್ರ ಪಠ್ಯಕ್ರಮ ರಚನಾ ಸಮಿತಿಯಲ್ಲಿ ತನ್ನ ಪಾತ್ರಕ್ಕೆ- ತಾನು ಸರಕಾರದ ಬಹಿರಂಗ ಟೀಕಾಕಾರನಾದ ಕಾರಣಕ್ಕಾಗಿ- ಹೇಗೆ ದಿಢೀರನೇ ಮಂಗಳ ಹಾಡಲಾಯಿತು ಎಂಬುದನ್ನು ಅವರು ವಿವರಿಸಿದರು.

ತನ್ನ ಲಿಖಿತ ಸಾಕ್ಷ್ಯದಲ್ಲಿ ಆಹಮದಾಬಾದ್‌ನ ಸರ್ದಾರ್ ಪಟೇಲ್ ಇನ್‌ಸ್ಟಿಟ್ಯೂಟ್ ಆಫ್ ಇಕಾನಮಿಕ್ ಎಂಡ್ ಸೋಷಿಯಲ್ ರಿಸರ್ಚ್‌ನ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ರೋಹಿತ್ ಶುಕ್ಲಾ ಅವರು, ಸಂಶೋಧನಾತ್ಮಕ, ತಾರ್ಕಿಕ ಮತ್ತು ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸುವ ಬದಲು, ಸಂಪೂರ್ಣವಾಗಿ ಹಿಮ್ಮುಖ ನಡೆಯಲ್ಲಿ ಗುಜರಾತಿನ ಶಿಕ್ಷಣ ವ್ಯವಸ್ಥೆಯು ಅಧ್ಯಾತ್ಮ, ಪುರಾಣ ಮತ್ತು ಅನಾಧುನಿಕತೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದ್ದಾರೆ. ಇದು ಪ್ರಪಂಚದಾದ್ಯಂತ ನಡೆಯುತ್ತಿರುವುದಕ್ಕೆ ವ್ಯತಿರಿಕ್ತವಾಗಿದ್ದು, ಅಲ್ಲಿ ಅವರು ತಮ್ಮ ಹಳೆಯ ಪುರಾಣಗಳಿಂದ ದೂರ ಸರಿಯುತ್ತಾ, ವಾಸ್ತವಿಕತೆ ಮತ್ತು ಆಧುನಿಕ ಮೌಲ್ಯಗಳತ್ತ ಗಮನ ಕೇಂದ್ರೀಕರಿಸುತ್ತಿದ್ದಾರೆ ಎಂದವರು ಹೇಳಿದ್ದಾರೆ.

ಆಹಮದಾಬಾದ್‌ನ ಶ್ರೀ ಎಚ್‌.ಕೆ. ಆರ್ಟ್ಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ಸಂಜಯ್ ಶ್ರೀಪಾದ ಭಾವೆ ಅವರು ಲಿಖಿತ ಸಾಕ್ಷ್ಯ ಸಲ್ಲಿಸಿ, ಶಿಕ್ಷಣವು ಕೇಸರಿಕರಣ ಮತ್ತು ಕೋಮುಭಾವನೆಗಳ ವಿರುದ್ಧ ಜನರನ್ನು ಎಚ್ಚರಿಸುವಲ್ಲಿ ಮುಂಚೂಣಿಯ ಪಾತ್ರವಹಿಸಬೇಕಿತ್ತು. ಆದರಿಲ್ಲಿ ಅವು ಶಿಕ್ಷಣವನ್ನೇ ಜೊತೆಗೆ ಎಳೆದೊಯ್ಯುತ್ತಿವೆ ಎಂದು ಹೇಳಿದ್ದಾರೆ.

ಇದು ಪರೋಕ್ಷವಾಗಿ ನಡೆಯುತ್ತಿರುವ ಕೇಸರೀಕರಣವಾಗಿದ್ದು, ನೇರವಾಗಿ ಕ್ಯಾಂಪಸಿನೊಳಗೆ ನಡೆಯುತ್ತಿರುವ ಕೇಸರಿ ಪಡೆಗಳ ಗೂಂಡಾಗಿರಿಯ ಬಗ್ಗೆಯೂ ನ್ಯಾಯ ಮಂಡಳಿಯ ಮುಂದೆ ಸಾಕ್ಷ್ಯ ನುಡಿಯಲಾಗಿರುವುದು ವಿಷಯದ ಗಂಭೀರತೆಯನ್ನು ಸೂಚಿಸುತ್ತದೆ.

(ಕೃಪೆ: ವಾರ್ತಾಭಾರತಿ)

LEAVE A REPLY

Please enter your comment!
Please enter your name here