ಮೌಲಾನ ವಹೀದುದ್ದೀನ್ ಖಾನ್
ಅನುವಾದ: ತಲ್ಹಾ ಇಸ್ಮಾಯಿಲ್ ಕೆ.ಪಿ

ಎಲ್ಲಾ ಯಾತ್ರೆಗಳಿಗಿಂತ ರೈಲು ಪ್ರಯಾಣವು ಹೆಚ್ಚು ಅನುಭವಗಳಿಂದ ತುಂಬಿರುತ್ತದೆ. ಮಾನವ ಕೋಟಿಯನ್ನು ಹೊತ್ತು ವೇಗಧೂತ ರೈಲು ಓಡುತ್ತದೆ. ರೈಲಿನ ಎರಡೂ ಕಡೆಗಳಲ್ಲೂ ಪ್ರಪಂಚದ ಸುಂದರ ದೃಶ್ಯಗಳು ನಮ್ಮ ಜೊತೆಗಿರುತ್ತದೆ. ಹೀಗೆ ರೈಲು ಕೂಡ ಜೀವನಯಾತ್ರೆಯ ಒಂದು ಸಂಕೇತದಂತಿದೆ. ದೃಷ್ಟಾಂತಗಳಿಂದ ತುಂಬಿರುವ ಈ ಲೋಕದಲ್ಲಿ ಮಾನವ ಸಂಚರಿಸುತ್ತಿದ್ದಾನೆ. ಆದರೆ, ಎರಡೂ ಬದಿಗಳಲ್ಲಿರುವ ನಯನ ಮನೋಹರ ದೃಶ್ಯಗಳಿಂದ ನಿರ್ಲಕ್ಷ್ಯನಾಗಿ ತನ್ನ ಸ್ವೇಚ್ಛೆಗಳಲ್ಲಿ ಅವನು ಮುಳುಗಿದ್ದಾನೆ. ಮಾನವನು ಈ ಲೋಕದಲ್ಲಿ ತನ್ನ ಸಂಪೂರ್ಣ ಜೀವನವನ್ನು ಸವೆಸುತ್ತಾನೆ. ಆದರೆ, ಅತಿ ವಿರಳ ಸಂದರ್ಭಗಳಲ್ಲಿ ದೇವನ ಈ ಲೋಕದಲ್ಲಿ ಹರಡಿರುವ ದೇವನ ದೃಷ್ಟಾಂತಗಳ ಕುರಿತು ಚಿಂತಿಸುತ್ತಾನೆ.

ಸೂರ್ಯನು ತನ್ನ ಪ್ರಕಾಶಮಯ ಮುಖದೊಂದಿಗೆ ಉದಯಿಸುತ್ತಾನೆ ಮತ್ತು ತನ್ನೊಂದಿಗೆ ಯಾವುದೋ ಸಂದೇಶವನ್ನು ಹೊತ್ತು ತಂದಿದ್ದಾನೆ ಎಂಬಂತೆ ಮಾನವರ ಮೇಲೆ ತನ್ನ ಪ್ರಕಾಶವನ್ನು ಬೀರುತ್ತಿದ್ದಾನೆ. ಆದರೆ, ಏನನ್ನೂ ಹೇಳುವ ಮೊದಲೇ ಮುಳುಗಿ ಬಿಡುತ್ತಾನೆ. ಮರಗಳು ತನ್ನ ಫಲಭರಿತ ರೆಂಬೆಗಳನ್ನು ಮಾನವನೆಡೆಗೆ ಚಾಚುತ್ತವೆ. ಸಮುದ್ರ ತನ್ನ ಅಲೆಗಳೊಂದಿಗೆ ಅಪ್ಪಳಿಸುತ್ತಲೇ ಇದೆ. ಇವೆಲ್ಲಾ ಮನುಷ್ಯನೊಡನೆ ಏನೋ ಹೇಳಲಿಚ್ಛಿಸುತ್ತಿವೆ. ಆದರೆ, ಮಾನವ ಅವುಗಳ ಯಾವ ಸಂದೇಶವೂ ತನ್ನ ಕಿವಿಗೆ ಬಿದ್ದಿಲ್ಲವೆಂಬಂತೆ ಜೀವನ ಕಳೆಯುತ್ತಿದ್ದಾನೆ. ಆಕಾಶಗಳ ಎತ್ತರ, ಭೂಮಿಯ ಮನಮೋಹಕತೆ ಎಲ್ಲವೂ ಸೇರಿ ದೊಡ್ಡದೊಂದು ಸಭೆಯ ಸಹಭಾಗಿಗಳಂತೆ ತೋರುತ್ತದೆ. ಆದರೆ, ಅವುಗಳೆಲ್ಲವೂ ನಿಶಬ್ಧವಾಗಿವೆ, ಮಾನವ ನೊಡನೆ ಮಾತನಾಡುತ್ತಿಲ್ಲ.

ಈ ವಿಶಾಲ ಲೋಕವು ಮೂಗ ಅರಸರುಗಳ ವಸ್ತು ಸಂಗ್ರಹಾಲಯವಲ್ಲ. ಬದಲಾಗಿ, ಅವೆಲ್ಲವುಗಳಲ್ಲಿ ದೇವನ ಸಂದೇಶವಿದೆ. ಈ ಸತ್ಯವನ್ನು ಅವು ಅದರ ಭಾಷೆಯಲ್ಲಿ ಬಿತ್ತರಿಸುತ್ತಿವೆ. ಆದರೆ ಮಾನವ ಬೇರೆ ಶಬ್ದಗಳಿಂದಾಗಿ ಈ ಪ್ರಪಂಚದ ಯಾವುದೇ ಶಬ್ಧ ಕೇಳುತ್ತಿಲ್ಲವೋ ಎಂಬಂತೆ ಮಗ್ನನಾಗಿ ಬಿಟ್ಟಿದ್ದಾನೆ. ನಾವು ಒಂದು ತಂಗುದಾಣದಲ್ಲಿ ನಮಾಝಿಗಾಗಿ ಇಳಿದೆವು. ಅಲ್ಲಿದ್ದ ಜನರೊಡನೆ ನಾವು ಕೇಳಿದೆವು ಪಶ್ಚಿಮ ದಿಕ್ಕು ಯಾವ ಕಡೆ? ಆದರೆ ಆ ಜನರಿಗೆ ಈ ಸಾಮಾನ್ಯ ಪ್ರಶ್ನೆಯ ಉತ್ತರ ತಿಳಿದಿರಲಿಲ್ಲ. ನಾನು ಯೋಚಿಸಿದೆ ಸೂರ್ಯನು ತನ್ನ ಪ್ರಕಾಶದ ದೃಷ್ಟಾಂತದೊಂದಿಗೆ ಪೂರ್ವದಲ್ಲಿ ಉದಯಿಸುತ್ತಾನೆ ಮತ್ತು ಪಶ್ಚಿಮದಲ್ಲಿ ಅಸ್ತಮಿಸುತ್ತಾನೆ. ಆದರೆ, ಮಾನವರು ತಮ್ಮದೇ ಕೆಲಸ ಕಾರ್ಯಗಳಲ್ಲಿ ಇಷ್ಟೊಂದು ಮಗ್ನರಾಗಿದ್ದಾರೆಂದರೆ ಪೂರ್ವ-ಪಶ್ಚಿಮದ ಅರಿವೂ ಅವರಿಗಿಲ್ಲ. ಹಾಗಾದರೆ ಅವರು ಈ ಪ್ರಪಂಚದ ಸೂಕ್ಷ್ಮ ಸಂಕೇತಗಳನ್ನು ಹೇಗೆ ತಿಳಿಯಬಲ್ಲರು?

ನಮ್ಮ ರೈಲು ಒಂದು ತಂಗುದಾಣದಲ್ಲಿ ನಿಂತಿತು. ನಾನು ರೈಲಿನಿಂದ ಇಳಿದು ಪ್ಲಾಟ್‍ಫಾರ್ಮ್‍ನಲ್ಲಿ ನಿಂತೆನು. ಆಗಲೇ ಸೂರ್ಯ ಮುಳುಗಿದ್ದನ್ನು ಹರಿತ ವರ್ಣದ ವೃಕ್ಷಗಳು ಅವುಗಳ ಹಿಂದಿನಿಂದ ಕೆಂಪು ಮಿಶ್ರಿತ ಪ್ರಕಾಶ ಮತ್ತು ಆದರ ಮೇಲೆ ತುಂಬಿಕೊಂಡ ಮೋಡದ ರಾಶಿಗಳು ಒಂದು ವಿಸ್ಮಯಕಾರಿ ಚಿತ್ರಣವನ್ನೇ ಧಾರೆ ಎರೆಯುತ್ತಿತ್ತು. ಅವುಗಳ ಉನ್ನತಿಯು ಈ ಸೌಂದರ್ಯವನ್ನು ಬಿತ್ತರಿಸುತ್ತಿತ್ತು. ನಾನು ಯೋಚಿಸಿದೆ, ಮಾನವ ಈ ಉನ್ನತಿಯತ್ತ ಸಾಗಲು ತಯಾರಿಲ್ಲ. ಅವನು ಈ ವೃಕ್ಷಗಳು ವಾಸಿಸುವ ನೆಲೆಯಲ್ಲಿ ವಾಸಿಸಲು ಸಿದ್ಧನಿಲ್ಲ. ಅದಕ್ಕೆ ತದ್ವಿರುದ್ಧವಾಗಿ ಕ್ಷುಲ್ಲಕ್ಕ ಪ್ರಯೋಜನಗಳನ್ನು ಪಡೆದು ಜೀವಿಸುತ್ತಾನೆ, ಕೃತಕ ಗೆಳೆತನ, ಕೃತಕ ಶತ್ರುತ್ವದೊಂದಿಗೆ ಜೀವಿಸುತ್ತಾನೆ, ಪ್ರಪಂಚದೊಂದಿಗೆ ಪ್ರಯಾಣಿಸುವ ಬದಲು ತನ್ನನ್ನು ಸ್ವಂತಿಕೆಯ ಗೆರೆಟೆಯೊಳಗೆ ಬಂಧಿಸುತ್ತಿದ್ದಾನೆ. ಸ್ವರ್ಗದ ವಾತಾವರಣ ಅವನನ್ನು ನಿರೀಕ್ಷಿಸುತ್ತಿರುವಾಗ, ತನ್ನನ್ನು ನರಕದ ಆವರಣದೊಳಗೆ ಸೇರಿಸುತ್ತಿದ್ದಾನೆ. ಮಾನವನ ಪಥನದ ನೈಜ ಕಾರಣ ಇದುವೇ ಆಗಿದೆ. ಆತನು ಸುಸಂಸ್ಕøತನಾಗಿ ಜೀವನ ನಡೆಸಲು ಸಿದ್ಧನಾಗಿದ್ದರೆ ಪ್ರಕೃತಿಯಲ್ಲಿ ಕಂಡ ಆ ಸೌಂದರ್ಯದ ಹೊಂಗಿರಣಗಳನ್ನು ಅವನು ಜೀವನದಲ್ಲೂ ಅನುಭವಿಸಬಹುದಾಗಿತ್ತು.

LEAVE A REPLY

Please enter your comment!
Please enter your name here