
ಲೇಖಕರು: ಎಂ. ಅಶೀರುದ್ದೀನ್ ಆಲಿಯಾ, ಸಾರ್ತಬೈಲ್ (ಶಿಕ್ಷಕರು, ಸ್ನೇಹ ಪಬ್ಲಿಕ್ ಸ್ಕೂಲ್ ಪಕ್ಕಲಡ್ಕ, ಮಂಗಳೂರು)
ಕಲಿಸುವುದು ಜಗತ್ತಿನ ಅತ್ಯಂತ ಗೌರವಾನ್ವಿತ ಮತ್ತು ಅಮೂಲ್ಯವಾದ ವೃತ್ತಿಗಳಲ್ಲಿ ಒಂದಾಗಿದೆ, ಆದ್ದರಿಂದಲೇ ಸಾಮಾಜಿಕ ಅಭಿವೃದ್ಧಿ ಮತ್ತು ಪರಿಪೂರ್ಣತೆಯ ರಚನೆಯಲ್ಲಿ ಶಿಕ್ಷಕರು ಮೊದಲ ಇಟ್ಟಿಗೆಯಾಗಿದ್ದಾರೆ. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅನನ್ಯವಾದದ್ದು. ಪ್ರವಾದಿ ಮುಹಮ್ಮದ್ (ಸ) ರವರು ಬೋಧನೆಯನ್ನು ಒಂದು ವೃತ್ತಿಯಾಗಿ ಕಾಣದೆ ಅದನ್ನು ಸೇವೆಯ ರೂಪದಲ್ಲಿ ಗೌರವಿಸಿದ್ದಾರೆ. ನಿಜವಾಗಿಯೂ ಶಿಕ್ಷಕರು ಸಮಾಜ ನಿರ್ಮಾಣದ ಶಿಲ್ಪಿಗಳು ಅವರು ವಿದ್ಯಾರ್ಥಿಗಳಿಗೆ ಕೇವಲ ಪಾಠಗಳನ್ನು ಮಾತ್ರ ಬೋಧಿಸುವುವವರಲ್ಲ, ಮೌಲ್ಯವನ್ನು ಕಲಿಸುತ್ತಾರೆ ಉತ್ತಮ ವ್ಯಕ್ತಿತ್ವ, ನೀತಿ, ಶಿಸ್ತಿನ ಬದುಕು ನಡೆಸುವಂತೆ ನಿರಂತರವಾಗಿ ಪ್ರೇರೇಪಿಸುತ್ತಾರೆ. ಆದ್ದರಿಂದ ಪ್ರತಿಯೊಂದು ಧರ್ಮದಲ್ಲೂ ಶಿಕ್ಷಕರನ್ನು ಅತ್ಯಂತ ಗೌರವಾನ್ವಿತ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ.
“ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ।ಗುರು ಸಾಕ್ಷಾತ್ ಪರಮ ಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ।” ವೇದದಲ್ಲಿ ಗುರುವನ್ನು ಪರಮ ಸತ್ಯವೆಂದು ಗುರುತಿಸುತ್ತದೆ, (ಗುರುಗೀತಾ ಶ್ಲೋಕ 22).
ಜ್ಞಾನವನ್ನು ಪಡೆಯುವುದು ಪ್ರತಿಯೊಬ್ಬರ ಕರ್ತವ್ಯ, ಅದನ್ನು ಕಲಿಸುವ ಶಿಕ್ಷಕರಿಗೆ ಮಹತ್ತರ ಸ್ಥಾನ ನೀಡಲಾಗಿದೆ. ಪ್ರವಾದಿಯವರ ಸಹಚರ ಹಜರತ್ ಅಲಿ (ರ) ರವರು ಹೀಗೆ ಉಲ್ಲೇಖಿಸಿದ್ದಾರೆ: “ಶಿಕ್ಷಕರು ಅತ್ಯುನ್ನತ ಶ್ರೇಣಿಯಲ್ಲಿರುವವರು, ಶಿಕ್ಷಕರು ಜಗತ್ತಿನಲ್ಲಿ ಅತ್ಯಂತ ನಿಸ್ವಾರ್ಥ, ದಾನಶೀಲ, ಕಾಳಜಿಯುಳ್ಳ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. “ಕ್ರೈಸ್ತ ಧರ್ಮದಲ್ಲಿ ಯೇಸು ಕ್ರಿಸ್ತನನ್ನು “ಮಹಾ ಗುರು” ಎಂದು ಕರೆಯಲಾಗುತ್ತದೆ. ಬೈಬಲ್ ನಲ್ಲಿ ಹೀಗಿದೆ: “ಶಿಷ್ಯನು ತನ್ನ ಗುರುವಿಗಿಂತ ಶ್ರೇಷ್ಠನಲ್ಲ, ಆದರೆ ಪೂರ್ಣ ತರಬೇತಿ ಪಡೆದ ಪ್ರತಿಯೊಬ್ಬನೂ ತನ್ನ ಗುರುವಿನಂತೆ ಇರುತ್ತಾನೆ” (ಲೂಕ 6:40). ಬೌದ್ಧ ಧರ್ಮದಲ್ಲಿ ಶಿಕ್ಷಕರ ಸೇವೆಯನ್ನು ಪವಿತ್ರವೆಂದು ಪರಿಗಣಿಸಲಾಗಿದೆ ಬುದ್ಧನನ್ನು “ಶ್ರೇಷ್ಠ ಗುರು” ಎಂದು ಗೌರವಿಸುತ್ತಾರೆ, ಗುರುಗಳು ಒಬ್ಬ ವ್ಯಕ್ತಿಯ ಯಶಸ್ವಿನ ದಾರಿದೀಪರಾಗುತ್ತಾರೆ ಎಂದಿರುವರು. “ಗುರುವೇ ಬುದ್ಧ, ಗುರುವೇ ಧಮ್ಮ, ಮತ್ತು ಗುರುವೇ ಸಂಘ ಗುರುವೇ ಅದ್ಭುತ ವಜ್ರಧಾರ, ಈ ಜೀವನದಲ್ಲಿ ಗುರುವೇ ಜಾಗೃತಿಗೆ ಸಾಧನ. ಆದ್ದರಿಂದ, ಬುದ್ಧತ್ವದ ಸ್ಥಿತಿಯನ್ನು ಪಡೆಯಲು ಬಯಸುವ ಯಾರಾದರೂ ಗುರುವನ್ನು ಮೆಚ್ಚಿಸಬೇಕು. (ಗುಹ್ಯಾಸನಯ ಸಾಧನಮಾಲ 28)
ಪೈಗಂಬರ್ ಮುಹಮ್ಮದ್ (ಸ)ರು ಜ್ಞಾನ, ನೈತಿಕತೆ ಮತ್ತು ಮಾನವೀಯತೆಯ ಮಾರ್ಗದರ್ಶಕರಾಗಿ ಶಿಕ್ಷಕರನ್ನು ಗುರುತಿಸಿದ್ದಾರೆ. ಜಗತ್ತಿನಲ್ಲಿ ಅತೀ ಮಹತ್ವದ ವ್ಯಕ್ತಿಗಳು ಶಿಕ್ಷಕರಾಗಿದ್ದಾರೆ. ಆ ಕಾರಣಕ್ಕೆ ಕುರ್ ಆನ್ ಪ್ರವಾದಿಗಳನ್ನು ಶಿಕ್ಷಕರ ಸಾಲಿನಲ್ಲಿ ಸೇರಿಸಿದೆ. ಶಿಕ್ಷಕರಾಗಿ ಪರಿಚಯಿಸಿಕೊಂಡ ಕಾರಣ ಈ ವೃತ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅಲ್ಲಾಹನು ಪವಿತ್ರ ಕುರಾನ್‌ನಲ್ಲಿ ಹೀಗೆ ಹೇಳುತ್ತಾನೆ: “ನಾವು ನಿಮ್ಮೊಳಗಿಂದಲೇ ಓರ್ವ ಸಂದೇಶವಾಹಕನನ್ನು ಕಳುಹಿಸಿದೆವು ಅವರು ನಿಮಗೆ ನಮ್ಮ ವಚನಗಳನ್ನು ಓದಿ ಹೇಳುತ್ತಾರೆ ನಿಮ್ಮನ್ನು ಸಂಸ್ಕರಿಸುತ್ತಾರೆ ನಿಮಗೆ ಗ್ರಂಥ ಮತ್ತು ಯುಕ್ತಿಯ ಶಿಕ್ಷಣ ನೀಡುತ್ತಾರೆ ಮತ್ತು ನೀವು ಇಷ್ಟರ ತನಕ ತಿಳಿಯದಿದ್ದ ಸಂಗತಿಗಳನ್ನು ಬೋಧಿಸುತ್ತಾರೆ”. (ಅಧ್ಯಾಯ 2: ಅಲ್ ಬಕರಃ-ಸೂಕ್ತ : 151)
ಲೋಕದ ಜನರಿಗೆ ಜ್ಞಾನ ಮತ್ತು ಅಜ್ಞಾತ ವಿಷಯಗಳನ್ನು ಕಲಿಸಲು ಪ್ರವಾದಿಗಳನ್ನು ಕಳುಹಿಸಲಾಗಿದೆ. ಒಳಿತನ್ನು ಕಲಿಸಿ ಜನರನ್ನು ಸರಿ ದಾರಿಯಲ್ಲಿ ಮುನ್ನಡೆಸುವುದು ಪ್ರವಾದಿಗಳ ಕೆಲಸವಾಗಿದೆ.
ಶಿಕ್ಷಕರೆಂದರೆ ಯಾರು…?
ಶಿಕ್ಷಕರು ವಿದ್ಯಾರ್ಥಿಯ ಆಧ್ಯಾತ್ಮಿಕ ತಂದೆಯಾಗಿದ್ದಾನೆ ಏಕೆಂದರೆ ಅವನು ಆಧ್ಯಾತ್ಮಿಕ ಪೋಷಣೆಯನ್ನು ಮಾಡುತ್ತಾನೆ ಮತ್ತು ಕಲಿಯುವವರ ನಡವಳಿಕೆಯನ್ನು ಸುಧಾರಿಸುತ್ತಾನೆ. ಹ. ಅಲೀ (ರ) ಹೀಗೆ ಹೇಳಿರುವರು: “ಒಬ್ಬ ವ್ಯಕ್ತಿ ನನಗೆ ಒಂದು ಪದವನ್ನು ಕಲಿಸಿದರೆ, ಅವನು ನನ್ನನ್ನು ಜೀವಿತಾವಧಿಯವರೆಗೆ ತನ್ನ ಸೇವಕನನ್ನಾಗಿ ಮಾಡಿಕೊಂಡಿದ್ದಾನೆ.” ಪವಿತ್ರ ಕುರಾನ್‌ನಲ್ಲಿ ಅಲ್ಲಾಹನು ಹೇಳುತ್ತಾನೆ: “ನಿಮ್ಮಲ್ಲಿ ನಂಬಿಗಸ್ತರು ಮತ್ತು ಜ್ಞಾನವನ್ನು ಪಡೆದವರನ್ನು ಅಲ್ಲಾಹನು ಉನ್ನತ ಸ್ಥಾನಗಳಿಗೆ ಏರಿಸುತ್ತಾನೆ” (ಕುರಾನ್, 58:11).
ಪೈಗಂಬರರು ಶಿಕ್ಷಕರ ಬಗ್ಗೆ ಹೀಗೆ ಹೇಳಿರುವರು “ವಿದ್ವಾಂಸರು ಪ್ರವಾದಿಗಳ ಉತ್ತರಾಧಿಕಾರಿಗಳು” ಎಂದು ಕರೆದಿದ್ದಾರೆ. ಏಕೆಂದರೆ ಅವರು ಪ್ರವಾದಿಗಳಂತೆ ಇತರರನ್ನು ಸತ್ಯ ಮತ್ತು ತಿಳುವಳಿಕೆಯ ಕಡೆಗೆ ಮಾರ್ಗದರ್ಶನ ಮಾಡುತ್ತಾರೆ. ಅವರು ಜ್ಞಾನ, ಬುದ್ಧಿವಂತಿಕೆ ಮತ್ತು ನೈತಿಕ ಮೌಲ್ಯಗಳನ್ನು ಹರಡುವ ಧ್ಯೇಯದೊಂದಿಗೆ ಜನರನ್ನು ಮುಂದಕ್ಕೆ ಸಾಗಿಸುತ್ತಾರೆ, ಶಿಕ್ಷಕರು ಮಹತ್ತರವಾದ ಕೊಡುಗೆಗಳನ್ನು ನೀಡಿದ್ದಾರೆ. ಪ್ರವಾದಿ ಮುಹಮ್ಮದ್ (ಸ) ರವರು ಸ್ವತಃ ಒಬ್ಬ ಶಿಕ್ಷಕರಾಗಿದ್ದರು, ಜನರಿಗೆ ಆಧ್ಯಾತ್ಮಿಕ ತರಗತಿಗಳನ್ನು ನಡೆಸಿಕೊಡುತ್ತಿದ್ದರು. ಪಠ್ಯ ಪದ್ಧತಿಗಳನ್ನು ಅಕ್ಷರ ಜ್ಞಾನವನ್ನು ಕಲಿಸಿದವರು ಮಾತ್ರ ಶಿಕ್ಷಕರಲ್ಲ ಎಲ್ಲಾ ರೀತಿಯ ಅರಿವುಗಳನ್ನು ಸಮರ್ಪಕವಾಗಿ ಕಲಿಸಿಕೊಡುವವರು ಕೂಡಾ ಶಿಕ್ಷಕರಾಗಿದ್ದಾರೆ. ಆಡುಗಳು ಬಗ್ಗೆ ಮಾಹಿತಿ ಕೊಡುವ ಕುರುಬ, ತನ್ನ ಅನುಯಾಯಿಗಳಿಗೆ ಮಾರ್ಗದರ್ಶನ ಮಾಡುವ ನಾಯಕ, ಕುಂಬಾರ, ಕೃಷಿಕ, ಬಡಗಿ, ಅಗಸ ಇತ್ಯಾದಿ. ತಮ್ಮಲ್ಲಿರುವ ಜ್ಞಾನವನ್ನು ಇತರರಿಗೆ ಧಾರೆಯೆರೆಯುವ ಪ್ರತಿಯೊಬ್ಬನನ್ನೂ ಪ್ರವಾದಿಯವರು ಶಿಕ್ಷಕರೆಂದೇ ಗೌರವಿಸಿದ್ದಾರೆ.
ಶಿಕ್ಷಕರು ಹೇಗಿರಬೇಕು
ಜಾಬಿರ್ ಇಬ್ನ್ ಅಬ್ದುಲ್ಲಾ ವರದಿ ಮಾಡುತ್ತಾರೆ, ಪ್ರವಾದಿ (ಸ) ಹೇಳಿದರು: “ಖಂಡಿತ, ಅಲ್ಲಾಹನು ನನ್ನನ್ನು ಕಠಿಣ ಅಥವಾ ಹಠಮಾರಿಯಾಗಿರಲು ಕಳುಹಿಸಲಿಲ್ಲ, ಬದಲಿಗೆ ಅವನು ನನ್ನನ್ನು ಕಲಿಸಲು ಮತ್ತು ನನಗೆ ಜನರನ್ನು ಸಮಾಧಾನಪಡಿಸಲು ಕಳುಹಿಸಿದನು.”(ಮುಸ್ಲಿಂ) ಅಲ್ಲಾಹನ ಸಂದೇಶವಾಹಕರು(ಸ) ಹೇಳಿದರು ಎಂದು ಅಬು ಹುರೈರಾ (ರ) ವರದಿ ಮಾಡಿದ್ದಾರೆ: ಬೋಧಕರು ಹೇಗಿರಬೇಕು ಎಂಬುದರ ಬಗ್ಗೆ ಸಂದೇಶವಾಹಕರು ಹೇಳಿದರು, “ಶಿಕ್ಷಕರು ಅತ್ಯುತ್ತಮರು ಸತ್ಯವನ್ನು ಮರೆತು ಹೋದಾಗಲೆಲ್ಲಾ, ಅವರೇ ಅದನ್ನು ಪುನರುಜ್ಜೀವನಗೊಳಿಸುವವರು” (ಅಹ್ಮದ್, ತಿರ್ಮಿದಿ)
ಇಂದು ನಮ್ಮಲ್ಲಿ ಅನೇಕ ರೀತಿಯ ಶಿಕ್ಷಕರಿದ್ದಾರೆ, ಅವರಲ್ಲಿ ಹೆಚ್ಚಿನವರು ತಮ್ಮ ಸೇವೆಯನ್ನು ವೃತ್ತಿಯಾಗಿಸಿದ್ದಾರೆ. ಪಠ್ಯ ಪುಸ್ತಕದ ಹೊರಗಿನ ಮೌಲ್ಯಗಳನ್ನು ಅವರು ವಿದ್ಯಾರ್ಥಿಗಳಿಗೆ ತಿಳಿಸಲು ಆಸಕ್ತರಾಗಿರುವುದಿಲ್ಲ. ಅವರ ವೈಯಕ್ತಿಕ ಜೀವನವೂ ಮಾದರಿಪೂರ್ಣವೂ ಆಗಿರುವುದಿಲ್ಲ ಅಂತಹ ಶಿಕ್ಷಕರು ಪ್ರವಾದಿಯ ಈ ನುಡಿ ಗಮನದಲ್ಲಿಡಬೇಕು ಪ್ರವಾದಿ ಮುಹಮ್ಮದ್ (ಸ) ಹೇಳಿದರು, “ನಿಜಕ್ಕೂ, ಅಲ್ಲಾಹ್, ಅವನ ದೇವಚರರು, ಸ್ವರ್ಗ ಮತ್ತು ಭೂಮಿಯ ನಿವಾಸಿಗಳು, ಬಿಲದಲ್ಲಿರುವ ಇರುವೆ ಮತ್ತು ಮೀನುಗಳು ಸಹ ಜನರಿಗೆ ಒಳ್ಳೆಯದನ್ನು ಕಲಿಸುವವನ ಮೇಲೆ ಸ್ತುತಿವಚನಗನ್ನು ಹೇಳುತ್ತಿರುತ್ತದೆ.” (ತಿರ್ಮಿದಿ). ಪಠ್ಯದ ಜೊತೆಗೆ ಮೌಲ್ಯವನ್ನು ಕಲಿಸುವ ಶಿಕ್ಷಕರಾಗಬೇಕು ಆಗ ಮಾತ್ರ ಕಲಿತ ವ್ಯಕ್ತಿ ಸಮಾಜಕ್ಕೆ ಒಬ್ಬ ಪ್ರಯೋಜನಕಾರಿಯಾಗಿ ಬದಲಾಗುತ್ತಾನೆ.
ಕಲಿಸುವುದು ಒಂದು ದಾನ
ಶಾಶ್ವತ ದಾನಕ್ಕೆ “ಸದಕತುಲ್ ಜರಿಯಾ” ಎನ್ನಲಾಗುತ್ತದೆ. ಜ್ಞಾನ ವ್ಯಕ್ತಿಯಲ್ಲಿ ಶಾಶ್ವತವಾಗಿ ನೆಲೆನಿಲ್ಲುವಂತಹ ಕರ್ಮವಾದ್ದರಿಂದ ಕಲಿಸುವುದು ಕೂಡಾ “ಸದಕತುಲ್ ಜರಿಯಾ” ಪಟ್ಟಿಯಲ್ಲಿ ಸೇರುತ್ತದೆ. ಶಿಕ್ಷಕರು ನೀಡುವ ಶಿಕ್ಷಣ ಇತರರಿಗೆ ನಿರಂತರವಾಗಿ ಪ್ರಯೋಜನವನ್ನು ನೀಡುವುದರಿಂದ ಪರಲೋಕದಲ್ಲಿ ಉತ್ತಮ ಪ್ರತಿಫಲ ಸಿಗುತ್ತದೆ. ಶಿಕ್ಷಕರ ಸೇವೆ ಎನ್ನುವುದು ಒಂದು ಪುಣ್ಯದ ಕೆಲಸ ಅವರಿಗೆ ವೇತನ ನಿಶ್ಚಯಿಸಲು ಸಾಧ್ಯವಿಲ್ಲ ಬದಲಾಗಿ ಗೌರವವನ್ನು ಕೊಡಬಹುದು ಅವರಿಗೆ ನೀಡಲಾಗುವ ಪ್ರತಿಫಲಗಳು ಐಹಿಕ ಜೀವನವನ್ನು ಮೀರಿ ಪರಲೋಕಕ್ಕೂ ವಿಸ್ತರಿಸುತ್ತವೆ ಎಂದು ಪ್ರವಾದಿ (ಸ) ತಿಳಿಸಿದ್ದಾರೆ.
ಪ್ರವಾದಿವರ್ಯರು ಹೇಳುತ್ತಾರೆ “ಒಬ್ಬ ಮನುಷ್ಯನು ಮರಣಾನಂತರ ಬಿಟ್ಟು ಹೋಗಿರುವ ವಸ್ತುಗಳಲ್ಲಿ ಮೂರು ಅತ್ಯುತ್ತಮವಾದದ್ದಾಗಿದೆ, ಅವುಗಳೆಂದರೆ: ಅವನಿಗಾಗಿ ಪ್ರಾರ್ಥಿಸುವ ಸಜ್ಜನ ಮಕ್ಕಳು, ಶಾಶ್ವತ ದಾನ ಮತ್ತು ಅವನು ಕಲಿಸಿದ ಜ್ಞಾನ.” (ಸುನಾನ್ ಇಬ್ನ್ ಮಾಜಾ) ಪ್ರಯೋಜನಕಾರಿಯಾದ ಜ್ಞಾನವನ್ನು ಕಲಿಸುವುದರಿಂದ ಮರಣದ ನಂತರವೂ ಪ್ರತಿಫಲವನ್ನು ಗಳಿಸಬಹುದು ಎಂದು ಪ್ರವಾದಿ ಮುಹಮ್ಮದ್ (ಸ) ಉಲ್ಲೇಖಿಸಿದ್ದಾರೆ. ಪೈಗಂಬರರು ನಿರಂತರವಾಗಿ ಶಿಕ್ಷಕರನ್ನು ಹೊಗಳುತ್ತಿದ್ದರು ಮತ್ತು ಅವರು ಉನ್ನತ ಮಟ್ಟದಲ್ಲಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದರು. ಅಬು ಉಮಾಮಾ ರವರು ವರದಿ ಮಾಡುತ್ತಾರೆ ಪ್ರವಾದಿ (ಸ) ಹೇಳಿದರು: “ಯಾರು ಮಾರ್ಗದರ್ಶನದ ಕಡೆಗೆ ಕರೆಯುತ್ತಾರೋ ಅವರಿಗೆ ಅವರನ್ನು ಅನುಸರಿಸುವವರಿಗೆ ಪ್ರತಿಫಲ ಸಿಗುತ್ತದೆ, ಅವರ ಪ್ರತಿಫಲದಲ್ಲಿ ಯಾವುದೇ ಕಡಿತವಾಗುವುದಿಲ್ಲ…”
ಶಿಕ್ಷಕರನ್ನು ಗೌರವಿಸಬೇಕು
ಗುರುವನ್ನು ಗೌರವಿಸದವನು ಎಲ್ಲಿಯೂ ಸಲ್ಲದವನು ಎಂಬುವುದು ಸತ್ಯವಾದ ಮಾತು. ಒಂದಕ್ಷರ ಕಲಿಸಿದವರು ಯಾರೆ ಆಗಲಿ ಅವರನ್ನು ಅತ್ಯಂತ ಗೌರವದಿಂದ ಕಾಣಬೇಕೆಂದು ಪ್ರವಾದಿ ಹೇಳುತ್ತಾರೆ, ಆಯಿಷಾ (ರ) ರವರು ಹೀಗೆ ವಿವರಿಸಿದ್ದಾರೆ, ಪ್ರವಾದಿ (ಸ) ಹೇಳಿದರು: “ಸದ್ಗುಣದ ಗುರುವಿಗೆ ಎಲ್ಲವೂ ಕ್ಷಮೆ ಕೇಳುತ್ತದೆ, ಸಮುದ್ರದಲ್ಲಿನ ಮೀನು ಕೂಡ.” (ಮುಸ್ನದ್)
ಹಾಗೆಯೇ ಪುರಂದರದಾಸರು ಒಂದು ಕಡೆ ಹೀಗೆ ಹೇಳುತ್ತಾರೆ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಪರಿ ಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯ್ತು ಭಕುತಿ. ನಮ್ಮ ಜೀವನದಲ್ಲಿ ಒಂದು ಅತೀ ಮುಖ್ಯವಾದ ಮತ್ತು ಅಗತ್ಯವಿರುವ ವಿಷಯವನ್ನು ಯಾರಿಂದಲಾದರೂ ಕಲಿತಿರುತ್ತೇವೆ ಆ ಕಾರಣಕ್ಕೆ ಆ ವ್ಯಕ್ತಿಯನ್ನು ಗೌರವದಿಂದ ಕಾಣಬೇಕು. ಒಮ್ಮೆ ಕರ್ಮ ಶಾಸ್ತ್ರದ ಪ್ರಮುಖ ಪಂಡಿತರಾದ ಇಮಾಮ್ ಶಾಫಿಯವರು ಒಬ್ಬ ಸಾಮಾನ್ಯ ವ್ಯಕ್ತಿ ಹಾದುಹೋಗುವಾಗ ಎದ್ದು ನಿಂತರು ಈ ಕುರಿತು ಶಿಷ್ಯರು ವಿಚಾರಿಸಿದಾಗ ಇಮಾಮರು ಹೀಗೆಂದರು “ಆ ವ್ಯಕ್ತಿ ನನ್ನ ತಿಳುವಳಿಕೆಯಲ್ಲಿಲ್ಲದೆ ಜ್ಞಾನವನ್ನು ಕಲಿಸಿದರು ನಾಯಿ ಯಾವಾಗ ಪ್ರಬುದ್ಧತೆ ಹೊಂದುತ್ತದೆ ಎಂದು ನನಗೆ ತಿಳಿದಿರಲಿಲ್ಲ ಎಂದರು. ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯುಳ್ಳ, ಸಹಾನುಭೂತಿಯುಳ್ಳ, ಪರಸ್ಪರ ತಿಳುವಳಿಕೆ, ಸಹಕಾರಿ ಮತ್ತು ಗೌರವವುಳ್ಳ ವ್ಯಕ್ತಿಗಳಾಗಿದ್ದಾರೆ. ಎಷ್ಟೇ ದೊಡ್ಡ ದಡ್ಡನಾದರೂ, ಪೋಲಿಯಾದರೂ, ಪೋಕಿರಿಯಾದರೂ ದುರ್ಗುಣವಂತ ಮತ್ತು ಅನುಚಿತ ನಡವಳಿಕೆ ಇರುವವನೊಳಗೆ ಹುದುಗಿ ಹೋದ ಕಲೆಯನ್ನು ಮತ್ತು ಅರಿವನ್ನು ಎಳೆದು ಹೊರ ಹಾಕಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ. ಶುದ್ಧ ಉದ್ದೇಶದಿಂದ ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ನಡೆಸಿಕೊಳ್ಳುತ್ತಾರೆ, ಅಂತಹ ಶಿಕ್ಷಕರನ್ನು ಗೌರವಿಸುವುದು ಪ್ರತಿ ವಿದ್ಯಾರ್ಥಿಗಳ ಬಾಧ್ಯತೆಯಾಗಿದೆ. ಪ್ರವಾದಿ ಮುಹಮ್ಮದ್ (ಸ) ಹೇಳಿದರು “ಜ್ಞಾನವನ್ನು ಅರಸಿ ಮತ್ತು ಜ್ಞಾನವನ್ನು ಅರಸುತ್ತಾ ಘನತೆ ಮತ್ತು ಶಾಂತವಾಗಿರಲು ತರಬೇತಿ ನೀಡಿ, ಮತ್ತು ನೀವು ಯಾರಿಂದ ಕಲಿಯುತ್ತೀರೋ ಅವರೊಂದಿಗೆ ವಿನಮ್ರವಾಗಿರಿ” (ತಬರಾನಿ).
ಶಿಕ್ಷಕರಿಗಾಗಿ ಪ್ರಾರ್ಥನೆ
ಒಬ್ಬ ವ್ಯಕ್ತಿಗೆ ತನ್ನ ಜೀವನದಲ್ಲಿ ಶಾಶ್ವತವಾಗಿ ಪ್ರಭಾವ ಬೀರುವ ಸಕಾರಾತ್ಮಕ ಕಲಿಕೆಯನ್ನು ಶಿಕ್ಷಕರು, ಪಂಡಿತರು, ಗುರುಗಳು, ವಿದ್ವಾಂಸರು ಬದ್ಧತೆಯಿಂದ ನೀಡಿರುತ್ತಾರೆ. ಅಂತಹ ಶಿಕ್ಷಕರಿಗಾಗಿ ಅವರ ಪ್ರಭಾವಗಳಿಂದ ನಿಮ್ಮ ಜೀವನ ಹೇಗೆ ಪ್ರಭಾವಿತವಾಗಿದೆ ಎಂಬುದನ್ನು ಸ್ಮರಿಸಿ. ಅವರಿಗಾಗಿ ಪ್ರಾರ್ಥಿಸಲು ಪ್ರವಾದಿ ಮುಹಮ್ಮದ್ ಅನೇಕ ಪ್ರಾರ್ಥನೆಗಳನ್ನು ಕೂಡಾ ಕಲಿಸಿದ್ದಾರೆ.
ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.-
“ಓ ಅಲ್ಲಾಹ್, ನನ್ನ ಶಿಕ್ಷಕರಿಗೆ ಅವರ ಕೆಲಸದಲ್ಲಿ ಸಹಾಯ ಮಾಡಿ ಮತ್ತು ಅವರಿಗೆ ಉತ್ತಮ ಆರೋಗ್ಯವನ್ನು ನೀಡು”.
“ಓ ಅಲ್ಲಾಹ್ ನನ್ನ ಶಿಕ್ಷಕರಿಗೆ ದೀರ್ಘಾಯುಷ್ಯವನ್ನು ಕೊಡು, ಏಕೆಂದರೆ ಅವರು ತಮ್ಮ ಕೆಲಸದಲ್ಲಿ ಪ್ರಾಮಾಣಿಕ ಮತ್ತು ನಿಷ್ಠಾವಂತ ವ್ಯಕ್ತಿಗಳಾಗಿದ್ದಾರೆ”.
“ಓ ಅಲ್ಲಾಹ್, ನನ್ನ ಕರೆಗೆ ಓಗೊಡಿ ನನ್ನ ಶಿಕ್ಷಕರಿಗೆ ಯಶಸ್ಸು, ಒಳಿತನ್ನು ಮತ್ತು ಹೇರಳವಾಗಿ ಆಹಾರವನ್ನು ನೀಡು”.- “ಓ ನನ್ನ ಅಲ್ಲಾಹ್, ನನ್ನ ಗುರುಗಳು ನನಗೆ ದೊಡ್ಡ ಉಪಕಾರ ಮಾಡಿದ್ದಾರೆ, ಅವರು ನನಗೆ ಅನೇಕ ಮಾಹಿತಿಯನ್ನು ನೀಡಿದ್ದಾರೆ, ಆದ್ದರಿಂದ ಅವರು ತಮ್ಮ ಜೀವನದಲ್ಲಿ ಸಂತೋಷವಾಗಿರಲಿ ಎಂದು ನಾನು ನಿನ್ನಲ್ಲಿ ಪ್ರಾರ್ಥಿಸುತ್ತೇನೆ”.
ಓ ಅಲ್ಲಾಹ್, ನನ್ನ ಶಿಕ್ಷಕರಿಗೆ ಹೆಚ್ಚಿನ ಯಶಸ್ಸನ್ನು ನೀಡು. ನನ್ನ ಶಿಕ್ಷಕರಿಲ್ಲದಿದ್ದರೆ ನಾನು ಯಶಸ್ವಿಯಾಗುತ್ತಿರಲಿಲ್ಲ.
“ವಿದ್ವಾಂಸರು ಪ್ರವಾದಿಗಳ ಉತ್ತರಾಧಿಕಾರಿಗಳು” ಎಂಬ ನುಡಿಯು ಶಿಕ್ಷಕರ ಸ್ಥಾನ ಉನ್ನತಕ್ಕೇರಿಸಿದಂತೆ ಜವಾಬ್ದಾರಿಯನ್ನು ಹೆಚ್ಚಿಸಿದೆ. ಶಿಕ್ಷಕರು ಸಮಾಜದ ದೀಪಸ್ತಂಭರು. ಅವರ ಮಾರ್ಗದರ್ಶನ, ತ್ಯಾಗ ಮತ್ತು ಪ್ರೇರಣೆಯಿಂದಲೇ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಗಳಾಗಿ ಬೆಳೆದು ಕೀರ್ತಿಯನ್ನು ಹೆಚ್ಚಿಸುತ್ತಾರೆ. ಆದ್ದರಿಂದ, ಗುರುಗಳಿಗೆ ಕೃತಜ್ಞತೆ ಸಲ್ಲಿಸಿ, ಅವರ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಜೀವನದಲ್ಲಿ ನಿಜವಾದ ಯಶಸ್ಸು ಲಭಿಸುತ್ತದೆ.