ರಿಯಾಜ್ ಅಹ್ಮದ್ 
ಕಾರ್ಯದರ್ಶಿ ,
ಶೈಕ್ಷಣಿಕ ಸಂಶೋಧನೆ ಮತ್ತು ವಿಶ್ಲೇಷಣಾ ಕೇಂದ್ರ, ಬೆಂಗಳೂರು

ಕರ್ನಾಟಕ ವಿಧಾನ ಸಭೆಯ ಕುರಿತು :

ವಿಧಾನಮಂಡಲ ಅಥವಾ ರಾಜ್ಯ ಸದನವು ರಾಜ್ಯದ ಶಿಕ್ಷಣದಿಂದ ಕಾನೂನು ಸುವ್ಯವಸ್ಥೆ ಮತ್ತು ಆರೋಗ್ಯದಿಂದ ಆರ್ಥಿಕತೆ ಯಂತಹ ಪ್ರಮುಖ ವಿಷಯಗಳನ್ನು ಒಳಗೊಂಡಂತೆ ಭಾರತದ ಸಂವಿಧಾನ 7ನೇ ಅನುಚ್ಛೇದದಲ್ಲಿ ನಮೂದಿಸಿರುವ ರಾಜ್ಯ ಪಟ್ಟಿಯಲ್ಲಿನ 66 ವಿಷಯಗಳನ್ನು ಸುದೀರ್ಘವಾಗಿ ಚರ್ಚಿಸುವ ಮತ್ತು ಆಲೋಚನೆ ಮಾಡುವ ವೇದಿಕೆಯಾಗಿದೆ. ರಾಜ್ಯದ ಆಡಳಿತ ದೃಷ್ಟಿಯಿಂದ ನೋಡುವುದಾದರೆ ಸದನದ ಪ್ರಾಮುಖ್ಯತೆಯು ಅತೀ ಮಹತ್ವದೆಂದು ನಮಗೆ ತಿಳಿಯುತ್ತದೆ. ಈ ಹಿನ್ನೆಲೆಯಲ್ಲಿ ನಾವು ನಮ್ಮ ಜನಪ್ರತಿನಿಧಿಗಳ ಭಾಗವಹಿಸುವಿಕೆಯನ್ನು ಗಮನಿಸಿದರೆ ಅದು ತೀರಾ ನಿರಾಶಾದಾಯಕವಾಗಿದೆ. 2015 ರಲ್ಲಿ 58 ದಿನಗಳು, 2016 ರಲ್ಲಿ 35 ದಿನಗಳು, 2017 ರಲ್ಲಿ ಕೇವಲ 40 ದಿನಗಳು ಸದನ ಸೇರಿದೆ. ಸದನದ ವ್ಯವಹಾರದಲ್ಲಿ ತೊಡಗಬೇಕಾದ ನಮ್ಮ ಜನಪ್ರತಿನಿಧಿಗಳ ದಕ್ಷತೆ ಹಾಗೂ ಕಾರ್ಯವೈಖರಿಯನ್ನು ಮೇಲಿನ ಅಂಶವು ಸಾದರಪಡಿಸುತ್ತದೆ.

ಈ ಸೀಮಿತ ಅವಧಿಯಲ್ಲಿ ನಡೆದ ಚರ್ಚೆಗಳನ್ನು ಪರಿಗಣಿಸಿ,ಅದನ್ನು ಚರ್ಚೆಗೆ ತರುವ ಉದ್ದೇಶದಿಂದ ನಾವು ನಮ್ಮ ಜವಾಬ್ದಾರಿಯನ್ನು ಮುಂದಿಡುವುದು ಈ ವರದಿಯ ಸಾರಾಂಶವಾಗಿದೆ. ಜನಪ್ರತಿನಿಧಿಗಳ ಮತ್ತು ಸಂಸ್ಥೆಯ ಪವಿತ್ರತೆಯ ಹೊಣೆಗಾರಿಕೆಯನ್ನು  ತರುವುದು ಮತ್ತು ವಿಶೇಷವಾಗಿ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಕುರಿತು ವಿಧಾನ ಮಂಡಲದಲ್ಲಿ ನಡೆಯುವ ಚರ್ಚೆಯ ಕಾರ್ಯಸೂಚಿಗಳನ್ನು ಹೊಂದಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸುವಂತೆ ಮಾಡುವುದು ಈ ಚರ್ಚೆಯ ಅತ್ಯಂತ ಪ್ರಮೇಯವಾಗಿದೆ. ನಾವು ಕೈಗೊಳ್ಳುವ ಚರ್ಚೆಯ ಉದ್ದೇಶವೇ ಜನಪ್ರತಿನಿಧಿಗಳಲ್ಲಿ ಉತ್ತರದಾಯಿತ್ವದ ಅರಿವು ಮೂಡಿಸಿ ಪ್ರತ್ಯೇಕವಾಗಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಿಗೆ ಒಂದು ಸಕಾರಾತ್ಮಕ ದಿಕ್ಕಿನಲ್ಲಿ ಕಂಡುಕೊಳ್ಳಲು ಅನುವು ಮಾಡಿಕೊಡುವುದು. ಇಲ್ಲಿ ಇನ್ನೊಂದು ಮುಖ್ಯ ಪ್ರಶ್ನೆಯೆಂದರೆ ನಮ್ಮ ಪ್ರತಿನಿಧಿಗಳು ಈ ರೀತಿಯ ಅಸಮರ್ಥತೆ ಅಥವಾ ನಿರಾಶಾದಾಯಕ ಪ್ರದರ್ಶನ ಅಥವಾ ನಿರ್ವಹಣೆಯ ಹೊರತಾಗಿಯೂ ಜವಾಬ್ದಾರಿಯಿಂದ ಹೇಗೆ ದೂರ ಹೋಗುತ್ತಾರೆ ಎಂಬುದು, ಅವರು ಭಾರತದ ಸಂವಿಧಾನದ ಅನುಚ್ಛೇದ 174(1) ಉಲ್ಲೇಖಿಸುತ್ತಾರೆ. ಇದರ ಉಲ್ಲೇಖವೇನೆಂದರೆ ರಾಜ್ಯಪಾಲರು ತಾನೂ ಸೂಕ್ತವೆಂದು ಭಾವಿಸತಕ್ಕಂತಹ ಕಾಲದಲ್ಲಿ ಮತ್ತು ಸ್ಥಳದಲ್ಲಿ ರಾಜ್ಯದ ವಿಧಾನಮಂಡಲದ ಸದನವನ್ನು ಅಥವಾ ಪ್ರತಿಯೊಂದು ಸದನವನ್ನು ಕಾಲಕಾಲಕ್ಕೆ ಕರೆಯ ತಕ್ಕದ್ದು; ಆದರೆ ಒಂದು ಅಧಿವೇಶನದ ಕೊನೆಯ ಉಪವೇಶನದ ಮತ್ತು ಮುಂದಿನ ಅಧಿವೇಶನದ ಮೊದಲ ಉಪವೇಶನಕ್ಕೆ ಗೊತ್ತು ಮಾಡಿರುವ ದಿನಾಂಕ ಇವುಗಳ ನಡುವೆ ಆರು ತಿಂಗಳ ಅಂತರ ವಿರತಕ್ಕದ್ದಲ್ಲ . ಈ ಪಾರುಗಾಣಿಕೆ ಮಾರ್ಗದಿಂದ ಅವರು ಕಾನೂನು ಬದ್ಧವಾಗಿ ಹೊರಬಂದು ಇಡೀ ವರ್ಷದಲ್ಲಿ ಕೇವಲ ಎರಡು ಅವಧಿಗೆ ಭೇಟಿಯಾಗುತ್ತಾರೆ. ಇಂತಹ ದುರಂತ ನಿರ್ಲಕ್ಷದ ದುರ್ಬಳಕೆಯನ್ನು ತಪ್ಪಿಸಲು ಇದನ್ನು ಗಂಭೀರವಾಗಿ ನೋಡಬೇಕಾಗಿದೆ.

ಈ ಗಂಭೀರ ಸಮಸ್ಯೆಯನ್ನು ಪರಿಹರಿಸಲು ಮತ್ತು ದಕ್ಷತೆ ಹಾಗೂ ಪಾರದರ್ಶಕತೆಯನ್ನು ಮೂಡಿಸುವ ಸಲುವಾಗಿ ಕೆಲವು ಸಲಹೆಗಳು:

1. ಸದನದಲ್ಲಿ ನಡೆಯುವ ಎಲ್ಲ ಕಲಾಪಗಳ ನೇರಪ್ರಸಾರ;
ಇದರಿಂದ ಒಂದು ರೀತಿಯ ಜವಾಬ್ದಾರಿ ಮೂಡುತ್ತದೆ ಜೊತೆಗೆ ಚರ್ಚೆಗಳ ಗುಣಮಟ್ಟ ಖಂಡಿತವಾಗಿ ಮೇಲ್ದರ್ಜೆಗೇರುತ್ತದೆ, ಪ್ರಮುಖ ವಿಷಯಗಳ ಕುರಿತು ಚರ್ಚೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಒಟ್ಟಿನಲ್ಲಿ ಜವಾಬ್ದಾರಿಯ ಪ್ರಜ್ಞೆ ಹೆಚ್ಚಾಗಲಿದೆ.

2. ಸಾಂವಿಧಾನಿಕ ತಿದ್ದುಪಡಿ;
ಸಂವಿಧಾನದಲ್ಲಿ ಅಧಿವೇಶನದ ಕನಿಷ್ಠ ಅವಧಿಯ ಕುರಿತು ಯಾವುದೇ ಉಲ್ಲೇಖ ಇಲ್ಲದಿರುವುದರಿಂದ ಅಧಿವೇಶನದ ಕನಿಷ್ಠ ಅವಧಿಯನ್ನು ನಿಗದಿಪಡಿಸುವುದು ಹಾಗೂ ಕಾಲಕಾಲಕ್ಕೆ ರಾಜ್ಯ ಪಟ್ಟಿಯಲ್ಲಿರುವ 66 ವಿಷಯಗಳ ಚರ್ಚೆಗೆ ಬೇಕಾದ ಕನಿಷ್ಠ ಕಲಾಪಗಳ ಭೇಟಿ ಸಂಖ್ಯೆಗಳನ್ನು ನಿಗದಿಪಡಿಸುವುದು.

– ರಾಜ್ಯದ ನೀತಿಗಳನ್ನು ಕರಡು ಹಂತದ ಸಮಯದಲ್ಲಿ ಸಂಬಂಧಿತ ಭಾಗೀದಾರರನ್ನು ಒಳಗೊಳ್ಳುವಿಕೆ.

-ಸೇರ್ಪಡೆ ಅಥವಾ ಒಳಗೊಳ್ಳುವಿಕೆ ನೀತಿ ರೂಪಿಸುವಿಕೆಗೆ ಒಳಗಾಗುವ ಪ್ರಯತ್ನವಾಗಬೇಕು.

ಸಮನ್ವಯ ಶಿಕ್ಷಣ (ವಿಶೇಷ ಶಿಕ್ಷಣ)

ರಾಜ್ಯ ಸರ್ಕಾರವು ಪ್ರಾಥಮಿಕ ಶಿಕ್ಷಣ, ಮೂಲಭೂತ ಸೌಕರ್ಯ, ಶಿಕ್ಷಕರ ನೇಮಕಾತಿ, ಶಾಲಾ ಅನುದಾನ,  ಯೋಜನೆಗಳು ಮತ್ತು ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಅಂಶಗಳನ್ನು ಒಳಗೊಳ್ಳುವ ಸರಿಸುಮಾರು ಯಶಸ್ವಿ ಕೊಂಡುಕೊಳ್ಳಲು ಯಶಸ್ವಿಯಾಗಿದ್ದರೂ, ಸರ್ಕಾರಕ್ಕೆ ಗಣನೀಯ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿರದ ಕ್ಷೇತ್ರವೆಂದರೆ ಸಮನ್ವಯ/ ವಿಶೇಷ ಶಿಕ್ಷಣವಾಗಿದೆ. 2017-18 ರಲ್ಲಿ ನಡೆದ ಕಲಾಪಗಳಲ್ಲಿ ಒಂದೇ ಒಂದು ಪ್ರಶ್ನೆಯನ್ನು ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಳಲಾಗಿಲ್ಲ.

2011 ಜನಗಣತಿಯ ಪ್ರಕಾರ ರಾಜ್ಯದಲ್ಲಿ 0-19 ವರ್ಷಗಳ ಒಳಗಿನ ಒಟ್ಟು 3,89,383 ಅಂಗವಿಕಲ ಮಕ್ಕಳಿದ್ದಾರೆ. ಅಂಗವಿಕಲ ಸಮುದಾಯದ ಜನಸಂಖ್ಯೆಗೆ (13,24,205) ಹೋಲಿಸಿದರೆ, ಅಂಗವಿಕಲ ಮಕ್ಕಳ ಪ್ರಮಾಣ ಶೇಕಡ 24.41 ರಷ್ಟಿದೆ. ಸರಿಸುಮಾರು 1 ಲಕ್ಷ ವಿಶೇಷ ಅಗತ್ಯವುಳ್ಳ ಮಕ್ಕಳು ಶಾಲೆಗೆ ಹೋಗುತ್ತಿರುವುದು ಗಮನಿಸಿದರೆ ರಾಜ್ಯದಲ್ಲಿ ಶಾಲೆಗೆ ಹೋಗುವ ಮಕ್ಕಳ ಸಂಖ್ಯೆಯ ಸರಾಸರಿಯಲ್ಲಿ ಕೇವಲ ಶೇಕಡ 1 ರಷ್ಟು ವಿಶೇಷ ಅಗತ್ಯವುಳ್ಳ ಮಕ್ಕಳು ವಿದ್ಯಾರ್ಥಿಗಳಾಗಿದ್ದಾರೆ. (ಮಾಹಿತಿ; 2015-16 ರ ಶಿಕ್ಷಣ ಇಲಾಖೆಯ ಡೈಸ್ ಮಾಹಿತಿ) ಇದು ಬಹಳ ವಿಸ್ಮಯಕಾರಿ ಸಂಗತಿಯಾಗಿದೆ. ಈ ಸಮನ್ವಯ ಶಿಕ್ಷಣದ ಒಟ್ಟು ವ್ಯವಸ್ಥೆಯತ್ತ ಗಮನ ಹರಿಸಿದಾಗ ಒಂದು ಭಯಾನಕ ಚಿತ್ರಣ ನಮ್ಮ ಮುಂದೆ ಬರುತ್ತದೆ. ಇವರ ಪಠ್ಯಕ್ರಮ, ಮೂಲಭೂತ ಸೌಕರ್ಯ, ಶಿಕ್ಷಕರ ತರಬೇತಿ, ಇತ್ಯಾದಿಯಲ್ಲಿಯೂ ಯಾವುದೇ ಬದಲಾವಣೆ ಕಂಡಿಲ್ಲ.  ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಇವುಗಳ ಬದಲಾವಣೆ ಅವಶ್ಯಕವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಕಲ ಚೇತನರ ಕಾಯಿದೆಗಳನ್ನು ರಚಿಸಿದ್ದೂ ಅವುಗಳನ್ನು ಪರಿಕ್ಕರಿಸಿದ್ದು ಅವುಗಳ ಮುಖ್ಯ ಗಮನ ಶಿಕ್ಷಣ, ಆರೋಗ್ಯ, ಉದ್ಯೋಗ, ಹಾಗೂ ಇತರ ಕ್ಷೇತ್ರಗಳೆಡೆಗೆ ಇವೆ. ಹಾಗಿರುವಾಗ ಉದ್ಭವಿಸುವ ಪ್ರಶ್ನೆ ಎಂದರೆ ಈ ಕ್ಷೇತ್ರದಲ್ಲಿ ಸರ್ಕಾರದ ಸಾಧನೆ ಎಷ್ಟು ?

ಕೇವಲ ನೀತಿಗಳನ್ನು, ಕಾಯ್ದೆಗಳನ್ನು ರೂಪಿಸಿ ಅವುಗಳನ್ನು ಪರಿಷ್ಕರಿಸುವುದು ಬಿಟ್ಟರೆ ಅವುಗಳನ್ನು ಕಾರ್ಯರೂಪಕ್ಕೆ ತರುವ ಉದ್ದೇಶ ಇಲ್ಲದಿದ್ದಲ್ಲಿ ಏನು ಸಾಧನೆ? 2016 ರಲ್ಲಿ ಹೊಸದಾಗಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ಜಾರಿಯಾಗಿದ್ದರೂ ರಾಜ್ಯ ನಿಯಮಾವಳಿಗಳು ಇನ್ನು ಜಾರಿಯಾಗದೇ ಇರುವುದು ದುರದೃಷ್ಟಕರ. ಇದರ ಕುರಿತು ನಮ್ಮ ವಿಧಾನಮಂಡಲದಲ್ಲಿ ಯಾವುದೇ ರೀತಿಯ ಚರ್ಚೆಗಳು ನಡೆಯದೇ ಇರುವುದು ಮತ್ತು ಯಾವ ಪ್ರತಿನಿಧಿಯು ಈ ಕುರಿತು ಒಂದೇ ಒಂದು ಪ್ರಶ್ನೆ ಎತ್ತದೆ ಇರುವುದು ತೀವ್ರ ಅಸಮಾಧಾನದ ಸಂಗತಿಯಾಗಿದೆ. 2017-18 ರಲ್ಲಿ ನಡೆದ ಕಲಾಪಗಳಲ್ಲಿ ಒಂದೇ ಒಂದು ಪ್ರಶ್ನೆಯೂ ಸಮನ್ವಯ ಶಿಕ್ಷಣ ಮತ್ತು ವಿಶೇಷ ಅಗತ್ಯವುಳ್ಳ ಮಕ್ಕಳ ಕುರಿತು ಕೇಳದೆ ಇರುವುದು ನಮ್ಮ ಜನಪ್ರತಿನಿಧಿಗಳ ಈ ಕ್ಷೇತ್ರಕ್ಕೆ ಕಾಳಜಿ ತೋರಿಸುತ್ತದೆ.

ವಿಕಲಚೇತನರ ಬಗ್ಗೆ ಅವರ ಭೌಗೋಳಿಕ ಪ್ರಜ್ಞೆ, ಮೂಲಭೂತ ವಿಷಯಗಳಾದ ದಾಖಲಾತಿ ಪ್ರಮಾಣ, ಶಾಲೆ ಬಿಟ್ಟ ಮಕ್ಕಳ ಪ್ರಮಾಣ, ತೀರ ಅಪೌಷ್ಟಿಕತೆ ಹೊಂದಿರುವ ಮಕ್ಕಳ ಅನುಪಾತ ,ವಿಶೇಷ ಮಕ್ಕಳ ಅನುಕೂಲ, ಅಂಗನವಾಡಿಗಳ ಸಂಖ್ಯೆ ಹಾಗೂ ಇತರೆ ಅಸ್ವಸ್ಥವುಳ್ಳ ಮಕ್ಕಳ ಪ್ರಮಾಣದಂತಹ ಯಾವುದೇ ಮಾಹಿತಿ ಲಭ್ಯವಿಲ್ಲದೆ ಇರುವುದು ಗಮನಿಸಿದಾಗ ಅವರ ಎರಡನೇ ದರ್ಜೆಯ ನಾಗರಿಕ ಧೋರಣೆ ಬಹಳ ಸ್ಪಷ್ಟವಾಗಿ ಕಂಡುಬರುತ್ತದೆ.
ಅಂಗವಿಕಲ ಪದವೀಧರರು ವಿಶೇಷ ಉದ್ಯೋಗ ಯೋಜನೆಗಳು ಅಥವಾ ಇತರ ಜೀವನೋಪಾಯ ಯೋಜನೆಗಳನ್ನು ಹೊಂದಿರುವ ಜನರ ಉದ್ಯೋಗ ಸ್ಥಿತಿ ಕುರಿತು ಸರ್ಕಾರವು ಯಾವುದೇ ಮಾಹಿತಿಯನ್ನು ಹೊಂದಿಲ್ಲ. ಇದರಿಂದ ಕಂಡುಬರುವ ಮುಖ್ಯ ಅಂಶ ಏನೆಂದರೆ ಅವರ ಬಗ್ಗೆ ಯಾವುದೇ ಕಾಳಜಿ ಅಥವಾ ಅನುಕಂಪ ಇಲ್ಲದಿರುವುದು. ಸರ್ಕಾರದ ಕೆಲಸ ದೇವರ ಕೆಲಸ ಸರ್ಕಾರ ಈ ಸಮುದಾಯದ ಏಳಿಗೆಗಾಗಿ ಅವಶ್ಯಕವಾದ ಸವಲತ್ತುಗಳನ್ನು ಒದಗಿಸುವುದರ ಮೂಲಕ ಅವರ ಸ್ವಾವಲಂಬನೆಗೆ ಒತ್ತು ನೀಡಬೇಕು.

ಅವರನ್ನು ಮುಖ್ಯವಾಹಿನಿಗೆ ಸೇರಿಸಲು ;
ಸಮನ್ವಯ ಶಿಕ್ಷಣದ ಮಕ್ಕಳ ಅಗತ್ಯಗಳು ಮತ್ತು ಅಂಗವಿಕಲರ ಸಮಗ್ರ ಅಂಶಗಳನ್ನು ಒಳಗೊಂಡಂತೆ ಗಮನಾರ್ಹ ಚರ್ಚೆಗಳನ್ನು ಕೈಗೊಳ್ಳುವುದು ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತಂದು ಅದನ್ನು ನಿವಾರಿಸುವುದು.

ಪ್ರಾಥಮಿಕ ಶಿಕ್ಷಣ;
ಶಾಲೆಗಳ ಮೂಲಭೂತ ಸೌಕರ್ಯ, ಶಿಕ್ಷಕರ ನೇಮಕಾತಿ, ಅನುದಾನ, ಶಾಲೆಗಳ ಮಾಹಿತಿಯ ಕುರಿತು ಬಹಳಷ್ಟು ಪ್ರಶ್ನೆಗಳನ್ನು ಬಂದಿರುವುದು ಮತ್ತು ಚರ್ಚೆಗಳು ನಡೆದಿರುವುದು ಸಂತಸದಾಯಕವೆನ್ನಿಸಿದರು ಅದೇ ಸಮಯದಲ್ಲಿ  ಮೂಲಭೂತ ತತ್ವಗಳಾದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ, ಅದರ ಆವರ್ತಕ ಮೌಲ್ಯಮಾಪನ, ನಿರಂತರ ಸಾಧನೆ ಕ್ರಮಗಳು ಸಂಪೂರ್ಣವಾಗಿ ಕಾಣೆಯಾಗಿವೆ. ಇದಲ್ಲದೆ ಶಾಲೆಗಳಲ್ಲಿ ಬೋಧನಾ ಕಲೆಯ ಕುರಿತು, ಶಿಕ್ಷಣ ಕ್ಷೇತ್ರಕ್ಕೆ ಅರ್ಬುದ ರೋಗವಾಗಿ ಕಾಡುತ್ತಿರುವ ಶಿಕ್ಷಣದ ವ್ಯಾಪಾರಿಕರಣದ ಕುರಿತು ಯಾವುದೇ ಚರ್ಚೆ ನಡೆಯದೇ ಇರುವುದು ಬೇಸರದ ಸಂಗತಿ. ಶಿಕ್ಷಣದ ವ್ಯಾಪಾರಿಕರಣವು  ಎಲ್ಲರಿಗೂ ತಿಳಿದ ವಿಷಯ, ಆದರೂ ಈ ಗಂಭೀರ ವಿಷಯದ ಕುರಿತು ಪ್ರಶ್ನೆ ಕೇಳದೇ ಇರುವುದು ಸಾರ್ವಜನಿಕ ಶಿಕ್ಷಣ ಸಾವಿನೆಡೆಗೆ ಸಾಗುತ್ತಿರುವುದನ್ನು ಕಂಡೂ ಕಾಣದಂತೆ ವರ್ತಿಸಿದಂತಾಗಿದೆ.

ಮಾನ್ಯ ಮುಖ್ಯಮಂತ್ರಿಯಾದ ಎಚ್.ಡಿ ಕುಮಾರಸ್ವಾಮಿಯವರು ತಮ್ಮ ಮೊದಲ ಬಜೆಟ್ ಭಾಷಣದಲ್ಲಿ ಕಡಿಮೆ ಹಾಜರಾತಿ ಇರುವ 28,847 ಸರ್ಕಾರಿ ಶಾಲೆಗಳನ್ನು ವಿಲೀನ ಮಾಡುವ ಅಂದರೆ, ಮುಚ್ಚುವ ಪ್ರಸ್ತಾಪ ಮಾಡಿದ್ದರು. ಇದು ನಿಜಕ್ಕೂ ಆಘಾತಕಾರಿ ಮತ್ತು ಅಪಾಯಕಾರಿ. ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಗುಣಮಟ್ಟ ಕಾಪಾಡಿಕೊಳ್ಳಲಾಗದೆ ಇರುವ ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಲ್ಲಿ ಮುಚ್ಚುವುದು ಖಂಡನೀಯ. ಇಂತಹ ಆಘಾತಕಾರಿ ವಿಷಯದ ಕುರಿತು ಒಬ್ಬ ಜನಪ್ರತಿನಿಧಿ ಕೂಡ ಪ್ರಶ್ನೆ ಕೇಳದೇ ಇರುವುದು ದುರಾದೃಷ್ಟ.

ಸರ್ಕಾರ ರಚಿಸಿದಂತಹ ಸಮಿತಿಗಳು ವರದಿ ಸಲ್ಲಿಸಿದರೂ ಅದರ ಮೇಲೆ ಕಲಾಪಗಳಲ್ಲಿ ಯಾವುದೇ ಚರ್ಚೆ ನಡೆಯದಿರುವುದು ಒಂದು ಸೋಜಿಗದ ಸಂಗತಿ. ವರದಿಗಳ ಅನುಷ್ಠಾನಕ್ಕೆ ಏನೆಲ್ಲಾ ಕ್ರಮಗಳನ್ನು ಜರುಗಿಸಲಾಗಿದೆ ಎಂದು ಯಾರು ಕೂಡ ಕಲಾಪಗಳಲ್ಲಿ ಕೇಳುವವರಿಲ್ಲ. ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿಯ ವರದಿ ಕೇವಲ ಪುಟಗಳಿಗೆ ಸೀಮಿತವಾಯಿತು.

ಖಾಸಗಿ ಶಾಲೆಗಳ ನಂತರ ಕೇಂದ್ರ ಸ್ಥಳವನ್ನು ಆಕ್ರಮಿಸಿಕೊಳ್ಳುವ ಟ್ಯೂಷನ್ ಗಳು ದಿನೇ ದಿನೇ ಮೂಲೆಮೂಲೆಗಳಲ್ಲಿ ತಲೆಯೆತ್ತಿವೆ. “ಟ್ಯೂಶನ್ ಸೆಂಟರ್” ಬೋಧನಾ ಕೇಂದ್ರವು ಮಕ್ಕಳ ಎರಡನೇ ಶಾಲೆಗಳಾಗಿ ಮಾರ್ಪಟ್ಟಿವೆ. ಇಂತಹ ಸಂಸ್ಥೆಗಳಿಗೆ, ಸಮಾನಾಂತರ ಶೈಕ್ಷಣಿಕ ಮಾಫಿಯಾಗೆ ಯಾವುದೇ ನಿಯಂತ್ರಣವಿಲ್ಲ. ಒಂದು ಖಾಸಗಿ ಬೋಧನಾ ಕೇಂದ್ರಕ್ಕೆ ಸರಕಾರದ ನಿಯಮಗಳಿವೆ ಆದರೆ ವಾಸ್ತವದಲ್ಲಿ ಯಾವುದೇ ನಿಯಮಗಳನ್ನು  ಪಾಲಿಸಲಾಗುತ್ತಿಲ್ಲ. ಇಂತಹ ಜ್ವಲಂತ ಮತ್ತು ಗಂಭೀರ ವಿಷಯದ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಕೂಡಲೇ ಜನಪ್ರತಿನಿಧಿಗಳು ವಿಶೇಷವಾಗಿ ಶಿಕ್ಷಣ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದಿಂದ ಆರಿಸಿ ಬಂದ ಜನಪ್ರತಿನಿಧಿಗಳು ಈ ಕುರಿತು ಚರ್ಚಿಸಬೇಕು. ಸರ್ಕಾರದ ಮಾಹಿತಿ ಪ್ರಕಾರ ರಾಜಧಾನಿ ಬೆಂಗಳೂರಿನಲ್ಲಿ ನೋಂದಣಿಯಾಗಿರುವ ಖಾಸಗಿ ಟ್ಯೂಶನ್ ಗಳ ಸಂಖ್ಯೆ ಕೇವಲ 28. ಈ ಸಂಖ್ಯೆಯನ್ನು ಗಮನಿಸಿದಾಗ ಶಿಕ್ಷಣ ಅಧಿಕಾರಿಗಳ ಮತ್ತು ವಿಭಾಗದ ನಿರ್ಲಕ್ಷತನ ಸ್ಪಷ್ಟವಾಗಿ ಕಂಡುಬರುತ್ತದೆ.

ಸರ್ಕಾರ ಯಾವುದೇ ಒಂದು ಪ್ರಾಥಮಿಕ ಅಧ್ಯಯನ ನಡೆಸದೆ ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವುದಾಗಿ ಹೇಳಿದೆ. ಪ್ರಸ್ತುತ ಇರುವ ಸರ್ಕಾರಿ ಶಾಲೆಗಳಲ್ಲಿ  ಆಂಗ್ಲವನ್ನೂ ಒಂದು ಭಾಷೆಯಾಗಿ ಭೋದಿಸಲು ತರಬೇತಿಯುಳ್ಳ  ಶಿಕ್ಷಕರ ಕೊರತೆ ಇರುವಾಗ ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವ  ಸರ್ಕಾರ ಈ ರೀತಿ ಹೇಳಿಕೆಗಳನ್ನು ನೀಡುವುದು ನಿಜಕ್ಕೂ ಹಾಸ್ಯಾಸ್ಪದ.

ರಾಜ್ಯದಲ್ಲಿ ಆರ್.ಟಿ.ಇ(R.T.E) ಕಾಯ್ದೆ ಜಾರಿಯಾಗಿ ಸುಮಾರು 6 ವರ್ಷಗಳಾದರೂ ಇದರ ಯಾವುದೇ ಒಂದು ಮೌಲ್ಯಮಾಪನ ನಡೆಸಿಲ್ಲ. ಆರ್.ಟಿ.ಇ ಅಂದರೆ ಕೇವಲ 25% ಸೀಟುಗಳಿಗೆ  ಸೀಮಿತಗೊಂಡಂತೆ ವ್ಯವಹರಿಸುತ್ತಿರುವುದು ಖಂಡನೀಯ.
ಆರ್.ಟಿ.ಇ ಕಾಯ್ದೆಯ ಎಲ್ಲಾ ಆಯಾಮಗಳನ್ನು ಸಮಗ್ರವಾಗಿ ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ಶೇಕಡ 25ರಷ್ಟು ಸೀಟಿಗೆ 2012-13 ರಲ್ಲಿ 22 ಕೋಟಿ 49,282 ಮಕ್ಕಳಿಗೆ, 2013-14 ರಲ್ಲಿ 73 ಕೋಟಿ 1.22 ಲಕ್ಷ ಮಕ್ಕಳಿಗೆ, 2014-15 ರಲ್ಲಿ 165 ಕೋಟಿ 2.16 ಲಕ್ಷ ಮಕ್ಕಳಿಗೆ, 2015-16 ರಲ್ಲಿ 204 ಕೋಟಿ 3.16 ಲಕ್ಷ ಮಕ್ಕಳಿಗೆ, 2016-17 ರಲ್ಲಿ 226 ಕೋಟಿ 4.14 ಲಕ್ಷ ಮಕ್ಕಳಿಗೆ, ಒಟ್ಟು 685 ಕೋಟಿ ರೂಪಾಯಿಗಳನ್ನು ಸರ್ಕಾರ ಖಾಸಗಿ ಶಾಲೆಗಳಿಗೆ ನೀಡಿದೆ. ಇದರ ಹೊರತಾಗಿ ಆ ಖಾಸಗಿ ಶಾಲೆಗಳಲ್ಲಿ ಆರ್.ಟಿ.ಇ ಕಾಯ್ದೆಯ ಬೇರೆ ಆಯಾಮಗಳು ಜಾರಿಯಾಗಿವೆ ಎಂದು ಪರೀಕ್ಷಿಸಲು ಸೋತಿದೆ. ಶಿಕ್ಷಣ ಮೂಲಭೂತ ಹಕ್ಕು ಕಾಯ್ದೆಯ ಉಲ್ಲಂಘನೆ ಕಡೆಗೆ ಪ್ರತಿನಿಧಿಗಳು ಗಮನಹರಿಸಬೇಕು. ಸಮಗ್ರ ಕಾಯ್ದೆ ರಾಜ್ಯದ ಪ್ರತಿಯೊಂದು ಶಾಲೆಯಲ್ಲಿ ಜಾರಿಯಾಗುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು. ಕಲಾಪಗಳಲ್ಲಿ ಇನ್ನಷ್ಟು ಗಂಭೀರ ಚರ್ಚೆಗಳಾಗಬೇಕಾಗಿದೆ. ಕಳೆದ 2017-18ರಲ್ಲಿ ನಡೆದ ಸದನದ ಕಲಾಪಗಳಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಇರುವ ಯೋಜನೆಗಳ ಕುರಿತು 7 ಪ್ರಶ್ನೆ ಬಂದಿರುವುದು ಸಂತಸದ ಸಂಗತಿ. ಇದರಲ್ಲಿ ಹೆಚ್ಚಿನ ಪ್ರಶ್ನೆಗಳು ಅನುದಾನದ ನಿರ್ವಹಣೆಗೆ ಸಂಬಂಧಿಸಿದ ಇದರ ಜೊತೆಗೆ ಇದರ ಮೌಲ್ಯ ಮಾಪನದ ಕುರಿತು ಚರ್ಚೆಯಾದರೆ ಸೂಕ್ತ.

ಉನ್ನತ ಶಿಕ್ಷಣ:
ಉನ್ನತ ಶಿಕ್ಷಣದ ಬಗ್ಗೆ ಚರ್ಚೆಗೆ ಹೆಚ್ಚಿನ ಮೌಲ್ಯವನ್ನು ಸೇರಿಸುವಂತಹ ಎರಡು ಪ್ರಮುಖ ಅಂಶಗಳಿವೆ.

1. ವಿದ್ಯಾರ್ಥಿ ಸಂಘಟನೆ ಚುನಾವಣೆ; ಕುರಿತ ಲಿಂಗ್ಡೋ ಆಯೋಗದ ಜಾರಿಗೆ ಈಗಾಗಲೇ ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿನಾಂಕ 22 ಸಪ್ಟೆಂಬರ್ 2006ರಂದು ಆದೇಶಿಸಿದ್ದು ರಾಜ್ಯದಲ್ಲಿ ಇನ್ನೂ ಜಾರಿಯಾಗಿಲ್ಲ. ರಾಜ್ಯ ಸರ್ಕಾರವು ಕೆಲವು ದಿನಗಳ ಹಿಂದೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳು ತರುವುದಾಗಿ ಹೇಳಿದೆಯಾದರೂ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಸಿಲ್ಲ. ವಿದ್ಯಾರ್ಥಿ ಸಂಘದ ಚುನಾವಣೆ ಕುರಿತು ಈವರೆಗೂ ಸದನದಲ್ಲಿ ಯಾವುದೇ ರೀತಿಯ ಚರ್ಚೆ ಆಗದಿದ್ದರೂ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ. ಈಗಿರುವ ರಾಜಕೀಯ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ರಾಜಕೀಯ ಪಕ್ಷಗಳಿಗೆ ಬಲಿಯಾಗದೆ ಸಾಂವಿಧಾನಿಕವಾಗಿ ಮೌಲ್ಯಾಧಾರಿತವಾಗಿ ಭವಿಷ್ಯದ ನಾಯಕರು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಬೇಕಾಗುವಂತಹ ಎಲ್ಲಾ ರೀತಿಯ ಚರ್ಚೆಗಳು ನಡೆಯಬೇಕು.

2. ಇತ್ತೀಚೆಗೆ 2017-18 ರಲ್ಲಿ ನಡೆದ ಅಧಿವೇಶನಗಳಲ್ಲಿ 17 ವಿಶ್ವವಿದ್ಯಾಲಯಗಳ ಮಸೂದೆಗಳಿಗೆ ಅನುಮೋದನೆ ದೊರೆತಿದೆ. ಇವುಗಳಲ್ಲಿ ಹೆಚ್ಚಿನವು ಖಾಸಗಿ ಸಂಸ್ಥೆಗಳು. ಅನುಮೋದನೆ ದೊರೆತ ವಿಶ್ವವಿದ್ಯಾಲಯಗಳು ಇಂತಿವೆ;

1. The Rai Technology University, Bengaluru(Amendment 2018)
2. Karnataka State Law University bill 2018
3. Shree Dharmasthala Manjunatheshwara University Bill 2018
4. Khaja Bande Nawaz university Bill 2018
5. The Bangalore Dr B.R Ambedkar School of Economics University Bill
6. Sri Sathyasai University for Human Excellence Bill 2018
7. Amity University Bill- 2018
8. Jagath University Bill- 2018
9. The Karnataka State University 2017
10. The Karnataka Private Medical Establishment Bill – 2017
11. The Institute of Trans-Disciplinary Health Science & Technology (Amendment) Bill 2017
12. Karnataka Rajya Dr Gangubai Hangal Sangeetha mattu Pradashaka Kalegala Vishwavidyalaya
(Amendment Bill) 2017
13. The Karnataka State Higher Education Council Bill 2017
14. The National Law School of India Bill 2017
15. The Karnataka Appropriation Bill 2017
16. The Karnataka Professional Education Institution Bill 2017
17. The Karnataka State Education Bill 2017

ಈ ಅನುಮೋದನೆ ನೀಡಿರುವ ಹಿನ್ನಲೆಯಲ್ಲಿ ಇವುಗಳನ್ನು ಮೌಲ್ಯಮಾಪನ ಮಾಡಿರುವ ಮಾನದಂಡಗಳ ಕುರಿತು ಕಲಾಪದಲ್ಲಿ ಕೇಳಿದ ಯಾವುದೇ ಪ್ರಶ್ನೆಗಳು ಲಭ್ಯವಿರುವುದಿಲ್ಲ. ಈ ಕುರಿತು ಚರ್ಚೆಯಾದ ಮಾಹಿತಿಯೂ ಇರುವುದಿಲ್ಲ. ಇಷ್ಟೊಂದು ಪ್ರಮಾಣದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳಿಗೆ ಅನುಮೋದನೆ ನೀಡುತ್ತಿರುವುದು ಸರ್ಕಾರವು ಶಿಕ್ಷಣದ ವ್ಯಾಪಾರೀಕರಣಕ್ಕೆ ಅನುವು ಮಾಡಿ ಕೊಡುತ್ತಿರುವಂತೆ ಭಾಸವಾಗುತ್ತದೆ. ಕೂಡಲೇ ಮಾನ್ಯ ಪ್ರತಿನಿಧಿಗಳು ಮುಂದಿನ ಕಲಾಪಗಳಲ್ಲಿ ಈ ಕುರಿತು ಚರ್ಚಿಸಬೇಕಾಗಿದೆ.

ವಿದ್ಯಾರ್ಥಿಗಳ ಕಲಿಕೆ ಮತ್ತು ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಪ್ರಾಥಮಿಕ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಬಗ್ಗೆ ಶಾಸಕರು ಹೆಚ್ಚಿನ ಕಾಳಜಿ ವಹಿಸಿ ಅವರ ಕುರಿತು ಸದನದ ಕಲಾಪಗಳಲ್ಲಿ ಗಂಭೀರತೆಯಿಂದ ಚರ್ಚಿಸಬೇಕು. ನಾಡಿನ ಭವಿಷ್ಯದ ನಾಗರಿಕರ ಬೆಳವಣಿಗೆಗೆ ಹೆಚ್ಚು ಚಿಂತೆ ಮಾಡಬೇಕು.

www.ceraindia.in

9 COMMENTS

  1. ಸದನದ ನಡುವಳಿಕೆ ಹಾಗು ಶಿಕ್ಷಣದ ಕುರಿತು ನಡೆಯುವ ಚರ್ಚೆಗಳ ಉತ್ತಮ ಲೇಖನ. ಧನ್ಯವಾದಗಳು

  2. ಲೇಖಕರು ಆಚ್ಚು ಕಟ್ಟಾಗಿ ಲೇಖನವನ್ನು ಪ್ರಸ್ತುತಪಡಿಸಿದ್ದಾರೆ.

  3. Dear Riaz.
    I read your article. It is thought provoking and eye opener to our MLAs. It must reach all concerned people.
    You touched all relevant issues related to children. Good Luck.

  4. Dear Riaz.
    I read your article. It is thought provoking and eye opener to our MLAs. It must reach all concerned people.
    You touched all relevant issues related to children. Would love to read you in future, Good Luck.

  5. Very thoughtful article. Raised major concerns about our representative quality and focus on Educational discussion in legislative houses. Love read the author in future…

Leave a Reply to Dayanand Cancel reply

Please enter your comment!
Please enter your name here