ಯೋಗೇಶ್ ಮಾಸ್ಟರ್
(ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ)

ಪ್ರಾಣಿಗಳಂತೆಯೇ ಮಗು ಎಂಬುದು ಕೂಡಾ ಬಹಳ ನೈಸರ್ಗಿಕವಾಗಿರುವಂತಹ ಜೀವಿ. ಮಾನವತೆಯನ್ನು ಉನ್ನತೀಕರಿಸುವ ಸಂದರ್ಭ ಬಂದಾಗ ಪಶುತ್ವ ಎಂಬುದನ್ನು ವಿರೋಧದ ಪದವನ್ನಾಗಿ ಬಳಸುವ ವಾಡಿಕೆ ಇದೆ. ನಿಜ, ಆದರೆ ಪಶುತ್ವ ಎನ್ನುವುದು ನೈಸರ್ಗಿಕ ಮತ್ತು ಮಾನವತೆ ಎಂಬುದು ಕೃತಕ.

ಕೃತಕ ಎಂದಾಕ್ಷಣ ನಕಾರಾತ್ಮಕವಾಗಿ ಯೋಚಿಸುವ ಅಗತ್ಯವಿಲ್ಲ. ಪ್ರಕೃತಿಯಲ್ಲಿನ ವಿದ್ಯಮಾನಗಳಿಂದ ನಿರ್ಮಿತವಾಗುವುದು, ರೂಪುಗೊಳ್ಳುವುದನ್ನೆಲ್ಲಾ ನೈಸರ್ಗಿಕ ಎನ್ನುವುದಾದರೆ, ಮಾನವ ನಿರ್ಮಿತವನ್ನೆಲ್ಲಾ ಕೃತಕ ಎನ್ನುವುದಕ್ಕೆ ಈ ಪದಬಳಕೆ.

ನೈಸರ್ಗಿಕವಾಗಿರಬೇಕು ಎನ್ನುವುದು ಸ್ವಾಭಾವಿಕತೆಯನ್ನು ಪ್ರೇಮಿಸುವ ಕೆಲವರ ಆದರ್ಶ. ಆದರೆ ಕೋಪ, ಕ್ರೌರ್ಯ, ಹಿಂಸೆ, ಹೋರಾಟ, ಕಬಳಿಸುವುದು, ತನಗೇ ಬೇಕೆಂಬ ಸ್ವಾರ್ಥ, ಶಕ್ತಿಯುಳ್ಳವನು ದುರ್ಬಲನನ್ನು ಬಗ್ಗು ಬಡಿಯುವುದು ಇತ್ಯಾದಿಗಳೆಲ್ಲವೂ ಕೂಡಾ ಪರಮ ನೈಸರ್ಗಿಕ.

ಹುಲ್ಲುಗಾವಲಿನಲ್ಲಿ ನಿಧಾನವಾಗಿ ಮೇಯುತ್ತಾ ತನ್ನ ಸುಂದರ ಕಣ್ಣುಗಳಿಂದ ಪಿಳಿಪಿಳಿ ನೋಡುತ್ತಾ ಓಡಾಡುತ್ತಿರುವ ಜಿಂಕೆಯೊಂದನ್ನು ಹುಲಿಯೊಂದು ಬೆಂಬತ್ತಿ ಹಿಡಿದು ಕೊಂದು ತಿನ್ನುವುದನ್ನು ನಾವು ಕ್ರೌರ್ಯ, ಹೇಯ, ಹಿಂಸೆ ಎನ್ನಲಾಗದು. ಆ ಹುಲಿಗೆ ಮಾನವತೆ ಇಲ್ಲ ಎಂದು ದೂರಲಾಗದು. ಹುಲಿಯ ಬೇಟೆಯನ್ನು ಕ್ರೌರ್ಯವೆನ್ನುವುದು, ಹುಲ್ಲೆಯನ್ನು ಸಾಧು, ಸಾತ್ವಿಕ ಎನ್ನುವುದು ನಮ್ಮ ಕೃತಕ ಪದಬಳಕೆಯಿಂದ ಗುರುತಿಸುವುದೇ ಹೊರತು ನಿಸರ್ಗದಲ್ಲಿ ಕ್ರೌರ್ಯವೂ ಇಲ್ಲ, ಸಾಧುತ್ವವೂ ಇಲ್ಲ. ಅವುಗಳು ಅವುಗಳ ಪ್ರಕೃತಿಯಂತೆ ಇರುತ್ತವೆ ಅಷ್ಟೇ.

ಅದೇ ರೀತಿಯಲ್ಲಿಯೇ ಮಗುವೂ ಕೂಡಾ ಹುಟ್ಟಾ ನೈಸರ್ಗಿಕ ಪಶು. ಅದು ಬಹಳ ಸಹಜವಾಗಿ ಹುಲ್ಲೆಯಂತೆಯೋ, ಹುಲಿಯಂತೆಯೋ ಇರುತ್ತದೆ. ಹುಲ್ಲೆಯನ್ನು ಬಲಗೊಳಿಸುವುದು, ಹುಲಿಯನ್ನು ತಹಬಂದಿಗೆ ತರುವುದು ಮನುಷ್ಯರಾದವರ ಕೆಲಸವೆಂದು ಸಮಾಜವನ್ನು ಅರಿತಿರುವವರ ಅಂಬೋಣವಾಗಿದೆ.
ನೈಸರ್ಗಿಕವಾಗಿರುವ ಪ್ರಾಣಿಗಳ ಗುಂಪಿಗೂ, ಸಹಜವಾಗಿರುವ ಮನುಷ್ಯರ ಗುಂಪಿಗೂ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸಿಕೊಂಡು ನಮ್ಮನ್ನು ಸಾಮಾಜಿಕ ಪ್ರಾಣಿಗಳೆಂದು ಕರೆದುಕೊಂಡಿದ್ದೇವೆ. ನೈಸರ್ಗಿಕವಾಗಿರುವುದು ಮನುಷ್ಯರ ಗುಂಪಿನಲ್ಲಿ ಸರಿಹೋಗದೆಂದು ಕೆಲವು ಕಟ್ಟಳೆಗಳನ್ನು, ರೀತಿ, ನೀತಿ ಮತ್ತು ನಿಯಮಗಳನ್ನು ರೂಪಿಸಿಕೊಂಡಿದ್ದೇವೆ. ಆದರೆ ಅತಿದೊಡ್ಡ ವಿಪರ್ಯಾಸವೆಂದರೆ, ‘ನಾವು’ ಎಂದು ಮನುಕುಲದಲ್ಲಿ ಗುರುತಿಸಿಕೊಂಡವರೇ ನಿಯಮಗಳನ್ನು ಮಾಡುವುದು. ಅದೇ ‘ನಾವು’ ಎಂದು ಮನುಕುಲದಲ್ಲಿ ಗುರುತಿಸಿಕೊಂಡವರೇ ನಿಯಮಗಳನ್ನು ಮುರಿಯುವುದು. ಈ ನಿಯಮಗಳನ್ನು ರೂಪಿಸುವುದಕ್ಕಾಗಿಯೇ, ಪಾಲಿಸುವುದಕ್ಕಾಗಿಯೇ, ಪಾಲಿಸಿದವರ ದಂಡಿಸುವುದಕ್ಕಾಗಿಯೇ ಒಂದು ದೊಡ್ಡ ವ್ಯವಸ್ಥೆ ಇರುವುದು. ಆದರೆ, ಈ ನಿಯಮವಾಗಲಿ, ವ್ಯವಸ್ಥೆಯಾಗಲಿ ನೈಸರ್ಗಿಕ ನಿಯಮ ಮತ್ತು ವ್ಯವಸ್ಥೆಯಂತೇನೂ ಅಲ್ಲ. ಮನುಷ್ಯರ ಗುಂಪುಗಳು ಒಂದರಿಂದ ಮತ್ತೊಂದಕ್ಕೆ ವ್ಯತ್ಯಾಸವಿರುತ್ತದೆ. ಒಂದು ಗುಂಪಿನಲ್ಲಿ ಯಾವುದು ಪಾಲಿಸಲೇ ಬೇಕಾಗಿದೆಯೋ ಆ ನಿಯಮ ಇನ್ನೊಂದು ಗುಂಪಿಗೆ ಕಡ್ಡಾಯವೇನಾಗಿರುವುದಿಲ್ಲ. ಎಲ್ಲಿ ಯಾವ ನಿಯಮಕ್ಕೆ ಭಂಗ ಬಂದರೆ ಶಿಕ್ಷೆ ಕಾದಿರುವುದೋ, ಮತ್ತೊಂದು ಗುಂಪಿನಲ್ಲಿ ಅದು ಶಿಕ್ಷಾರ್ಹ ಅಪರಾಧವೇನೂ ಆಗಿರುವುದಿಲ್ಲ. ದೊಡ್ಡ ವಿಪರ್ಯಾಸವೆಂದರೆ, ನೈಸರ್ಗಿಕವಾಗಿ ಯಾರೊಬ್ಬರಿಗೂ ಇರಲಾಗದು, ವರ್ತಿಸಲಾಗದು. ಹಾಗಿರುವುದು ಮನುಷ್ಯನ ನಿಯಮಾವಳಿಯಲ್ಲಿ ಅಪರಾಧವಾಗುತ್ತದೆ.

ಧರ್ಮ, ಅಪರಾಧ, ಮಾನವತೆ, ನೈತಿಕತೆ, ದೇವರು, ಸಂಬಂಧಗಳು, ಅನುಕಂಪ, ಸಹಾನುಭೂತಿ, ಕಾನೂನು, ನ್ಯಾಯ; ಈ ಯಾವುವೂ ನೈಸರ್ಗಿಕವಲ್ಲ. ಪ್ರಕೃತಿಯಲ್ಲಿ ತಾಯಿನಾಯಿ ಎಂಬುದಿಲ್ಲ. ನಾಯಿಯು ಮರಿಗಳನ್ನು ಈನುವುದಕ್ಕೆ ನಾವು ತಾಯಿನಾಯಿ ಎನ್ನುತ್ತೇವೆ. ಹೆಣ್ಣುನಾಯಿಯೊಂದು ತಾನು ಈನಿದ ಗಂಡುಮರಿಯು ದೊಡ್ಡದಾದಾಗ ಅದರೊಂದಿಗೆ ಕೂಡುವುದು, ಅದರಿಂದ ಮತ್ತೆ ಮರಿಗಳನ್ನು ಪಡೆಯುವುದು ನೈಸರ್ಗಿಕ. ಆದರೆ ಮನುಷ್ಯನ ಸಮಾಜದಲ್ಲಿ ಈಗ ಅದು ಸಾಮಾನ್ಯವಾಗಿ ಒಪ್ಪಿತವಲ್ಲ. ಆದರೆ ಮನುಷ್ಯ ತನ್ನ ಪಶುತ್ವದಲ್ಲಿ ನೈಸರ್ಗಿಕವಾಗಿದ್ದಾಗ ಈ ವ್ಯವಸ್ಥೆಯು ಯಾವ ಕಟ್ಟಳೆಯಿಂದಲೂ ನಿರ್ಬಂಧಕ್ಕೊಳಗಾಗಿರಲಿಲ್ಲ.
ಮಗುವೆಂಬುದು ನೈಸರ್ಗಿಕವಾಗಿ ಪಶು ಮಾತ್ರವಲ್ಲ. ನಮ್ಮ ಆದಿಮ ಕಾಲದ ಪೂರ್ವಜರ ನೆನಪೂ ಹೌದು.

ನಿಸರ್ಗದ ಸ್ವಾಭಾವಿಕ ನಿಯಮಗಳ ತುಲನೆಯಲ್ಲಿ ಪರಿಗಣಿಸುವುದಾದರೆ, ಒಬ್ಬ ವ್ಯಕ್ತಿ ಎಷ್ಟೆಷ್ಟು ಸಂಭಾವಿತನೆಂದೆನಿಸಿಕೊಳ್ಳುವನು ಅವನು ಅಷ್ಟಷ್ಟೇ ಕೃತಕನೂ ಕೂಡ ಎಂದು ಭಾವಿಸಬೇಕಾಗುತ್ತದೆ. ನಮಗೆ ಈ ಕೃತಕ ಎಂಬ ಪದ ಬಳಕೆ ಇಷ್ಟವಾಗದಿದ್ದಲ್ಲಿ, ಮನುಷ್ಯನ ಸ್ವಾಭಾವಿಕ ಗುಣಗಳು ಎಂದು ಮನುಷ್ಯರಾದವರಿಗೆಲ್ಲಾ ಆರೋಪಿಸಲು ಕೆಲವು ನಿಯಮಗಳನ್ನು, ನಡಾವಳಿಗಳನ್ನು ರೂಪಿಸಿಕೊಳ್ಳಬಹುದು. ಅದನ್ನೇ ಸ್ವಾಭಾವಿಕ ಅಥವಾ ಸಾಮಾನ್ಯ ಎನ್ನಲೂಬಹುದು. ಏಕೆಂದರೆ ನಮಗೆ ಅದು ಸಾಧ್ಯವಿದೆ. ಹೆಸರಿಸುವುದು, ವ್ಯಾಖ್ಯಾನಿಸುವುದು,

ಪರಿಕಲ್ಪನೆಗೊಳಪಡಿಸುವುದು ನಮ್ಮ ಶಕ್ತಿ. ಆದರೆ ಅದನ್ನು ನೈಸರ್ಗಿಕ ಎನ್ನಲಾಗದು. ಪಶುತ್ವ ನೈಸರ್ಗಿಕ, ಮಾನವತೆ ಕೃತಕ. ಈ ವಿಷಯದಲ್ಲಿ ನಾವು ನುಣುಚಿಕೊಳ್ಳಲಾರವು. ಮನುಷ್ಯನಿಗೆ ನೈಸರ್ಗಿಕವಾಗಿರುವುದನ್ನು ಮೀರಿರುವಂತಹ ಶಕ್ತಿ ಇರುವ ಕಾರಣದಿಂದಲೇ ಅವನು ನೈಸರ್ಗಿಕವಾಗಿಯೇ ಇರಲು ಸಾಧ್ಯವಿಲ್ಲ. ಆದರೆ ಅವನು ಯಾವ ಮಾದರಿಯನ್ನು ಅನುಸರಿಸಬೇಕು ಎಂಬುದು ಮಾತ್ರ ಇಂದಿಗೂ ಗೊಂದಲ ಮತ್ತು ಪ್ರಯೋಗಗಳ ಮಟ್ಟದಲ್ಲಿಯೇ ಇದೆ. ಅದನ್ನೊಪ್ಪಿಕೊಂಡೇ ಶಿಶುಪ್ರಧಾನದ ಸಮಾಜವನ್ನು ಇಲ್ಲಿ ಆಲೋಚಿಸುವ ಅಗತ್ಯವಿರುವುದು.

LEAVE A REPLY

Please enter your comment!
Please enter your name here