ಉಮ್ಮೀದ್ ಡಿ ಎಡಿಕ್ಷನ್ ಅಂಡ್ ರಿಹಾಬ್ ಸೆಂಟರ್ ಅವರು ಪ್ರಸ್ತುತಪಡಿಸಿದ ಈ ಲೇಖನ ಯಾಸಿನ್ ಬೋಲಂಗಡಿ ಅವರು ಭಾಷಾಂತರ ಮಾಡಿರುತ್ತಾರೆ.
https://www.ummeedrehab.com/about-us/
ಮುಖ್ಯ ಪಾತ್ರದ ಭ್ರಮೆ ಎಂಬುದು ವ್ಯಕ್ತಿಯು ತನ್ನನ್ನೇ ಜೀವನದ ಕೇಂದ್ರಬಿಂದು ಎಂದು ಪರಿಗಣಿಸುವ ಪ್ರವೃತ್ತಿ. ಇಲ್ಲಿ ಪ್ರತಿಯೊಂದು ಘಟನೆ ಮತ್ತು ಪರಸ್ಪರ ಕ್ರಿಯೆಗಳನ್ನು ಅವರು ಒಂದು ಕಥೆಯ ನಾಯಕ ಅಥವಾ ನಾಯಕಿಯ ದೃಷ್ಟಿಕೋನದಲ್ಲೇ ವ್ಯಾಖ್ಯಾನಿಸುತ್ತಾರೆ. ಈ ಮನೋಭಾವವು ಅತಿಯಾದ ಆತ್ಮ-ಕೇಂದ್ರೀಕೃತ ನಡವಳಿಕೆಗೆ ಕಾರಣವಾಗುವುದಲ್ಲದೆ, ತಮ್ಮ ಅನುಭವಗಳು ಮತ್ತು ಭಾವನೆಗಳು ಇತರರಿಗಿಂತ ಹೆಚ್ಚು ಮಹತ್ವದವು ಅಥವಾ ನಾಟಕೀಯವಾದವು ಎಂಬ ನಂಬಿಕೆಯನ್ನು ಹುಟ್ಟುಹಾಕುತ್ತದೆ.
ಪ್ರಮುಖ ಅಂಶಗಳು:
ಅಹಂ ಪ್ರೇರಿತ ” ಕೇಂದ್ರಬಿಂದುವಾಗುವ ಹಪಾಹಪಿ”ಯು (Heroism) ನೈಜ ಆತ್ಮವಿಕಾಸವನ್ನು ಮರೆಮಾಡಬಹುದು.
ಸಾಮಾನ್ಯ ಜೀವನವು ನಮಗೆ ಕೀಳೆಂದು ಕಂಡಾಗ ‘ಅನಗತ್ಯ ಅರ್ಹತಾ ಭಾವನೆ’ (Entitlement) ಬೆಳೆಯುತ್ತದೆ.
ಜೀವನದ ಪರೀಕ್ಷೆಗಳು ಕಥೆಯ ತಿರುವುಗಳಲ್ಲ—ಅವು ತಾಳ್ಮೆಗೆ ನೀಡಿದ ಆಹ್ವಾನಗಳು.
ನಿಜವಾದ ಯಶಸ್ಸು ಇರುವುದು ವಿನಮ್ರ ಸ್ವಯಂ-ಹೊಣೆಗಾರಿಕೆಯಲ್ಲಿಯೇ ಹೊರತು ಸದಾ ಜನರ ಮೆಚ್ಚುಗೆಯಲ್ಲಿ ಇರುವುದಲ್ಲ.
ನಮ್ಮ ಕಾಫಿ ಕಪ್ಪಿನ ಬಣ್ಣ ಉಡುಪಿಗೆ ಹೊಂದಾಣಿಕೆಯಾಗಬೇಕು ಮತ್ತು ನಮ್ಮ ನೋವುಗಳು ಸಿನಿಮೀಯ ತಿರುವುಗಳನ್ನು ಹೊಂದಿರಬೇಕು ಎಂದು ಬಯಸುವ ಈ ಕಾಲದಲ್ಲಿ, “ಮುಖ್ಯ ಪಾತ್ರ” ಎಂಬ ಪರಿಕಲ್ಪನೆಯು ಕೇವಲ ಹಾಸ್ಯವಾಗಿ ಉಳಿಯದೆ ಒಂದು ಜೀವನಶೈಲಿಯಾಗಿ ಮಾರ್ಪಟ್ಟಿದೆ. ಆದರೆ, ದಿನನಿತ್ಯದ ಆತ್ಮಾಭಿನಂದನೆಗಳು ಮತ್ತು ಸುಂದರ ಭಾವಚಿತ್ರಗಳ ನಡುವೆ, ಈ ತೋರ್ಪಡಿಕೆಯ ಸೌಂದರ್ಯ ಪ್ರಜ್ಞೆಯು ವ್ಯಕ್ತಿತ್ವದ ಬಿಕ್ಕಟ್ಟಿಗೆ ದೂಡುತ್ತಿದೆ. ಇಲ್ಲಿ ಆಧ್ಯಾತ್ಮಿಕ ಬೆಳವಣಿಗೆಯ ಬದಲಿಗೆ “ಆಧ್ಯಾತ್ಮಿಕ ಆಡಂಬರ” ಮನೆಮಾಡುತ್ತಿದೆ. ನಾವು ಕರೆಯುವ ಈ “ಮೇನ್ ಕ್ಯಾರೆಕ್ಟರ್ ಎನರ್ಜಿ” ಎಂಬುದು ವಾಸ್ತವವಾಗಿ ಸ್ವಯಂ-ಪ್ರತಿಷ್ಠೆಗೆ ನೀಡಿದ ಹೊಸ ರೂಪವಷ್ಟೇ.
ಮೊದಲನೆಯದಾಗಿ, ಸ್ವಯಂ-ವ್ಯಾಮೋಹದಿಂದ ಆಧ್ಯಾತ್ಮಿಕ ವಿಕಾಸದತ್ತ ಸಾಗುವ ಹಾದಿಯಲ್ಲಿ ಒಂದು ಬದಲಾವಣೆ ಕಂಡುಬರುತ್ತಿದೆ—ಅದೆಂದರೆ, ನಮ್ಮ ಚೇತರಿಕೆಯ ಪಯಣವನ್ನು (Healing journey) ಜಗತ್ತು ಕೊಂಡಾಡಬೇಕು ಮತ್ತು ಎಲ್ಲರೂ ನಮ್ಮ ಸುತ್ತಲೇ ಸುಳಿಯಬೇಕು ಎಂಬ ನಿರೀಕ್ಷೆ. ಯಾವಾಗ ಸ್ವಯಂ-ಪ್ರೀತಿಯು ಅಹಂಕಾರದ ಭಾಷಣದಂತೆ ಕೇಳಿಸತೊಡಗುತ್ತದೆಯೋ, ಆಗ ಸಮಸ್ಯೆ ಆರಂಭವಾಗಿದೆ ಎಂದರ್ಥ. ಪವಿತ್ರ ಕುರಾನ್ ಇದನ್ನು ಬಹಳ ಮಾರ್ಮಿಕವಾಗಿ ಹೀಗೆ ಎಚ್ಚರಿಸುತ್ತದೆ: “ಭೂಮಿಯ ಮೇಲೆ ಅಹಂಕಾರದಿಂದ ನಡೆಯಬೇಡ…” (17:37). ಅಂದರೆ, ನೀವು ಇಲ್ಲಿ ಸೃಷ್ಟಿಯನ್ನು ಮೀರಿಸಲು ಬಂದಿಲ್ಲ; ಪರಿಪೂರ್ಣ ನಾಳೆಗಾಗಿ ಇಂದಿನ ಅಮೂಲ್ಯ ಕ್ಷಣಗಳನ್ನು ವ್ಯರ್ಥ ಮಾಡಬೇಡಿ.
ನಂತರ ಬರುವುದೇ ಭ್ರಮೆಯ ಲೋಕ: ಜೀವನವು ನಮಗೆ ಸದಾ ವಿಶೇಷ ಗೌರವವನ್ನು ನೀಡಬೇಕು ಎಂಬ ನಂಬಿಕೆ. ನಾವು ಸಾಮಾನ್ಯಕ್ಕಿಂತ ಭಿನ್ನರು ಎಂದು ಭಾವಿಸಿದಾಗ, ಪ್ರತಿಯೊಂದು ಸಾಮಾನ್ಯ ದಿನವೂ ನಮಗೆ ಅವಮಾನದಂತೆ ಭಾಸವಾಗುತ್ತದೆ. ಇದರಿಂದ ಹತಾಶೆ ಮತ್ತು ಅತೃಪ್ತಿ ಮೂಡುತ್ತದೆ. ಅಲ್ಲಾಹನು ಮನುಷ್ಯನ ಸಹಜ ಸ್ವಭಾವವನ್ನು ಹೀಗೆ ನೆನಪಿಸುತ್ತಾನೆ: “ನಿಶ್ಚಯವಾಗಿಯೂ ಮನುಷ್ಯನು ಚಂಚಲ ಮನಸ್ಕನಾಗಿ ಸೃಷ್ಟಿಸಲ್ಪಟ್ಟಿದ್ದಾನೆ. ಕೇಡು ಸಂಭವಿಸಿದಾಗ ಆತಂಕಕ್ಕೊಳಗಾಗುತ್ತಾನೆ, ಒಳಿತು ಪ್ರಾಪ್ತವಾದಾಗ ಅದನ್ನು ಇತರರಿಗೆ ನೀಡದೆ ತಡೆಹಿಡಿಯುತ್ತಾನೆ” (70:19–21). ಅಂದರೆ, ನಾವು ಮೂಲತಃ ಸ್ವಲ್ಪ ನಾಟಕೀಯ ಪ್ರವೃತ್ತಿಯವರೇ!
ಇನ್ನು, “ಕಥೆಯ ನಾಯಕನಂತೆ ಬದುಕುವುದು” ಎಂಬ ಹುಚ್ಚು. ಇಲ್ಲಿ ದುಃಖವು ಕೇವಲ ‘ಕಂಟೆಂಟ್’ ಆಗುತ್ತದೆ ಮತ್ತು ನೋವುಗಳು ಸೌಂದರ್ಯಾತ್ಮಕವಾಗಿ ಪ್ರದರ್ಶಿಸಲ್ಪಡುತ್ತವೆ. ಆದರೆ ನೆನಪಿರಲಿ, ಪ್ರತಿಯೊಂದು ಕಷ್ಟವೂ ಸಾಮಾಜಿಕ ಜಾಲತಾಣದ ‘ಟ್ರ್ರೆಂಡಿಂಗ್ ಆಡಿಯೋ’ ಆಗಬೇಕಿಲ್ಲ. ಕೆಲವು ಸಂದರ್ಭಗಳಲ್ಲಿ ನಮಗೆ ಬೇಕಿರುವುದು ತಾಳ್ಮೆಯೇ ಹೊರತು ಪ್ರದರ್ಶನವಲ್ಲ. “ನಾವು ನಿಮ್ಮನ್ನು ಒಳ್ಳೆಯದು ಮತ್ತು ಕೆಟ್ಟದ್ದರ ಮೂಲಕ ಪರೀಕ್ಷಿಸುತ್ತೇವೆ” (21:35) ಎಂಬ ವಾಣಿಯಂತೆ, ಜೀವನವು ಒಂದು ಪರೀಕ್ಷೆಯೇ ಹೊರತು ಕೇವಲ ಒಂದು ರೀಲ್ ಅಲ್ಲ.
ಇವೆಲ್ಲದರ ನಡುವೆ, ಪ್ರವಾದಿ ಮುಹಮ್ಮದ್ (ಸ) ಅವರು ನಮಗೆ ಅತ್ಯುತ್ತಮ ಮಾದರಿಯಾಗಿದ್ದಾರೆ. ಅವರು ಸದಾ ಪ್ರಚಾರದ ಬೆಳಕಿಗಿಂತ ಸೇವೆಯನ್ನೇ ಆದ್ಯತೆಯಾಗಿರಿಸಿಕೊಂಡರು ಮತ್ತು ತಮ್ಮನ್ನು ತಾವು ಕೇವಲ ಒಬ್ಬ “ದಾಸ” ಎಂದು ಕರೆದುಕೊಂಡರು. ಅವರಿಗೆ ಯಾವುದೇ ನಾಟಕೀಯ ಕಥಾಹಂದರದ ಅಗತ್ಯವಿರಲಿಲ್ಲ, ಏಕೆಂದರೆ ಅವರು ಬದುಕಿದ್ದು ಚಪ್ಪಾಳೆಗಾಗಿ ಅಲ್ಲ, ಉದ್ದೇಶಕ್ಕಾಗಿ.
“ಇದು ನನ್ನ ಹಕ್ಕು” ಎನ್ನುವ ವರ್ಗವೊಂದಿದೆ. ಪ್ರತಿಯೊಂದು ಅನುಗ್ರಹವನ್ನೂ ತಮ್ಮದೇ ಸಾಧನೆ ಎಂದು ಭಾವಿಸಿದಾಗ, ಕೃತಜ್ಞತೆಗೆ ಅಲ್ಲಿ ಸ್ಥಾನವಿರುವುದಿಲ್ಲ. ಆದರೆ ಕುರಾನ್ ಹೇಳುತ್ತದೆ: “ನಿಮ್ಮಲ್ಲಿರುವ ಪ್ರತಿಯೊಂದು ಅನುಗ್ರಹವೂ ಅಲ್ಲಾಹನ ಕಡೆಯಿಂದ ಬಂದದ್ದಾಗಿದೆ” (16:53). ನೀವು ಕುಡಿಯುವ ಕಾಫಿಯೂ ನಿಮ್ಮ ಸಾಧನೆಯಲ್ಲ, ಅದು ನಿಮಗೆ ನೀಡಲಾದ ಒಂದು ಜೀವನೋಪಾಯ.
ಜೀವನದ ಅತಿದೊಡ್ಡ ತಿರುವು ಏನೆಂದರೆ, ನಮ್ಮನ್ನು ನಾವೇ ನಾಯಕರೆಂದು ಬರೆದುಕೊಳ್ಳುವ ಈ ಕಥೆಯು ಕೊನೆಗೆ ಏಕಾಂಗಿತನದಲ್ಲಿ ಮುಕ್ತಾಯವಾಗುತ್ತದೆ. ಅತಿಯಾದ ಆತ್ಮ-ಕೇಂದ್ರೀಕೃತ ಗುಣವು ಕುಟುಂಬ, ಸಮುದಾಯ ಮತ್ತು ವಿನಯದಂತಹ ಪೋಷಕ ಪಾತ್ರಗಳನ್ನು ಮೂಲೆಗುಂಪು ಮಾಡುತ್ತದೆ. ಇಸ್ಲಾಂ ನಮಗೆ ನೆನಪಿಸುವುದೇನೆಂದರೆ: “ಒಬ್ಬ ವಿಶ್ವಾಸಿ ಇನ್ನೊಬ್ಬ ವಿಶ್ವಾಸಿಗೆ ಒಂದು ಕಟ್ಟಡವಿದ್ದಂತೆ, ಅದರ ಪ್ರತಿಯೊಂದು ಭಾಗವೂ ಪರಸ್ಪರ ಬೆಂಬಲ ನೀಡುತ್ತವೆ” (ಬುಖಾರಿ, ಮುಸ್ಲಿಂ). ಪ್ರವಾದಿಯವರು ತಮ್ಮ ಬೆರಳುಗಳನ್ನು ಒಂದಕ್ಕೊಂದು ಪೋಣಿಸಿ ತೋರಿಸುವ ಮೂಲಕ ನಾವು ಪರಸ್ಪರ ಬೆಂಬಲವಾಗಿ ನಿಲ್ಲಬೇಕೆಂದು ಬೋಧಿಸಿದರು. ಈ ಜಗತ್ತಿನಲ್ಲಿ ಶಕ್ತಿಯು ಏಕಾಂಗಿಯಾಗಿ ನಿಲ್ಲುವುದರಲ್ಲಿಲ್ಲ, ಒಟ್ಟಾಗಿ ನಿಲ್ಲುವುದರಲ್ಲಿದೆ.
ಅಂತಿಮವಾಗಿ, ಜೀವನದ ಉದ್ದೇಶವನ್ನು ಮರೆತು ಕೇವಲ “ಮುಖ್ಯ ಪಾತ್ರ”ದ ಭ್ರಮೆಯಲ್ಲಿ ಬದುಕುವುದು, ಸಂಭಾಷಣೆ ಇಲ್ಲದ ಚಿತ್ರದಲ್ಲಿ ನಟಿಸಲು ಹವಣಿಸಿದಂತೆ—ಅಲ್ಲಿ ಕೇವಲ ಆಡಂಬರವಿದೆ ಹೊರತು ಅರ್ಥವಿಲ್ಲ. ಅಹಂಕಾರವನ್ನು ಪೋಷಿಸುತ್ತಾ ದೈವಿಕ ಕೃಪೆಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ.ಹಳೆಯ ಗಾದೆ ಹೇಳುವಂತೆ, “ಕೈಯಲ್ಲಿರುವ ಬೆಣ್ಣೆಯನ್ನು ತಿನ್ನುತ್ತಾ, ಅದು ಹಾಗೆಯೇ ಇರಬೇಕೆಂದು ಬಯಸುವುದು ಮೂರ್ಖತನ” , ನೀವು ಅಹಂಕಾರವನ್ನೂ ಪೋಷಿಸಿಕೊಂಡು, ಜೊತೆಗೆ ದೈವಿಕ ಸಾಮೀಪ್ಯವನ್ನೂ ಬಯಸುವುದು ಅಸಾಧ್ಯ.* ನಿಮ್ಮ ಅಹಂಕಾರಕ್ಕೆ ಅಧಿಕಾರ ನೀಡಿ ಆತ್ಮದ ಬೆಳವಣಿಗೆಯನ್ನು ನಿರೀಕ್ಷಿಸಬೇಡಿ. ಪ್ರಚಾರದ ಬೆಳಕು ನಿಮ್ಮನ್ನು ಆಕರ್ಷಿಸಬಹುದು, ಆದರೆ ‘ತಝ್ಕಿಯಾ’ (ಆತ್ಮ ಸಂಸ್ಕರಣೆ) ಎಂಬ ಜವಾಬ್ದಾರಿಯುತ ಕಾರ್ಯ ಮಾತ್ರ ನಿಮ್ಮನ್ನು ನಿಜವಾಗಿ ಉನ್ನತ ಸ್ಥಾನಕ್ಕೇರಿಸಬಲ್ಲದು.




















































