ಲೇಖಕರು – ಉಮೇರಾ ಬಾನು, ಮಂಗಳೂರು.

ಬಾಲ್ಯ ವಿವಾಹ ಎಂಬ ಪದ್ಧತಿ ನಮ್ಮ ಸಮಾಜದಲ್ಲಿ ಇಂದಿಗೂ ಒಂದು ಪಿಡುಗು ಆಗಿಯೆ ಉಳಿದಿದೆ. ಇದರ ವಿರುದ್ಧ ಎಷ್ಟೇ ಕಾಯ್ದೆ-ಕಾನೂನುಗಳು ಬಂದರೂ ಇದನ್ನು ತಡೆಯುವಲ್ಲಿ ಯಶಸ್ವಿಯಾಗಲಿಲ್ಲ, ಇನ್ನೂ ಕೆಲವು ಕುಟುಂಬಗಳಲ್ಲಿ ಬಾಲ್ಯ ವಿವಾಹ ಸಾಂಪ್ರದಾಯಿಕವಾಗಿ ನಡೆಯುತ್ತಾ ಇದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದರೂ ತೆರೆಮರೆಯಲ್ಲಿ ಬಾಲ್ಯ ವಿವಾಹ ಸದ್ದಿಲ್ಲದೆ ನಡೆಯುತ್ತಲೇ ಇದೆ. ಹೆಣ್ಣು ಎಂಬುದು ಒಂದು ಭಾರ ಎಂಬ ಮನೋಭಾವವು ಸಮಾಜದಲ್ಲಿ ಇಂದಿಗೂ ದೂರವಾಗದೆ ಉಳಿದಿರುವುದು ಇದಕ್ಕೆ ಕಾರಣ ಎನ್ನಬಹುದು. ಮದುವೆಯ ನಿರ್ದಿಷ್ಟ ವಯಸ್ಸಿಗೆ ಮೊದಲೇ ಬಾಲ್ಯ ವಿವಾಹ ಮಾಡಿಸಿ ಕೈ ತೊಳೆದುಕೊಳ್ಳುವ ರೂಢಿಯೂ ಹಲವು ಕುಟುಂಬಗಳಲ್ಲಿ ಇನ್ನೂ ಜೀವಂತವಾಗಿದೆ. (Say no to marriage) ಎಂಬ ಸ್ಲೋಗನ್ ಕೇಳಿದ್ದೇವೆ. ಆದರೆ ಇದನ್ನು ಉಚ್ಚರಿಸುವ ಸ್ವಾತಂತ್ರ್ಯ ಕೂಡ ಓರ್ವ ಹೆಣ್ಣು ಕಳೆದುಕೊಂಡಿದ್ದಾಳೆ ಎಂದು ಹಲವರು ಹೇಳುತ್ತಾರೆ. ಹೆಣ್ಣಿನ ಭವಿಷ್ಯದ ಬಗೆಗಿರುವ ಕಾಳಜಿ ಎಂಬಂತೆ ಹಲವು ಕಡೆಗಳಲ್ಲಿ ಅಜ್ಞಾನ ಮತ್ತು ಅರಿವಿನ ಕೊರತೆಯಿಂದಾಗಿ 18 ವರ್ಷಕ್ಕೆ ಮೊದಲೇ ಮಕ್ಕಳ ಮದುವೆ ಮಾಡಿಸುವ ಪೋಷಕರು ಅವರ ಬದುಕನ್ನು ಬಲಿಕೊಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿಯೂ ಕೂಡ ಈ ಪಿಡುಗು ಹಲವಾರು ಮನೆಯ ಬಾಗಿಲು ತಟ್ಟಿದೆ. ಕೊರೊನಾ ರೋಗವು ಇಡೀ ಪ್ರಪಂಚದಾದ್ಯಂತ ಸಾಂಕ್ರಾಮಿಕವಾಗಿ ಹರಡುತ್ತಾ ಮಾರಕವಾಗುತ್ತಿದ್ದಂತೆ ಮುಂಜಾಗ್ರತ ಕ್ರಮವಾಗಿ ಸರ್ಕಾರಗಳು ಲಾಕ್ ಡೌನ್ ಹೆರಿದವು ಈ ನಿಯಮಗಳಿಂದಾಗಿ ಹಲವಾರು ಸಮಸ್ಯೆಗಳು ಕುಟುಂಬದಲ್ಲಿ ಎದುರಾದವು. ಆರ್ಥಿಕತೆಯ ಕುಸಿತ, ಶಿಕ್ಷಣದ ಅಭಾವ ಹಾಗೂ ಮಕ್ಕಳ ಭವಿಷ್ಯದ ಕುರಿತು ಚಿಂತಾಜನಕ ಸ್ಥಿತಿ ನಿರ್ಮಾಣವಾಗಿತ್ತು ಇದರೊಂದಿಗೆ ಮಕ್ಕಳ ಶೈಕ್ಷಣಿಕ ವಿಚಾರದಲ್ಲಿ ಹಲವಾರು ಸಮಸ್ಯೆಗಳು ಉಂಟಾದವು. ಅವುಗಳಲ್ಲಿ ಪಾಲಕರ ದುಡುಕಿನ ನಿರ್ಧಾರಗಳಿಂದಾಗಿ ಹಲವಾರು ಹೆಣ್ಣು ಮಕ್ಕಳು ಬಾಲ್ಯ ವಿವಾಹಕ್ಕೆ ನೂಕಲ್ಪಟ್ಟರು.

ಲಾಕ್ ಡೌನ್ ಸಂದರ್ಭದಲ್ಲಿ ಮದುವೆ ಸಮಾರಂಭಗಳನ್ನು ಸರಳವಾಗಿ ನಡೆಸಲು ಅನುಮತಿ ದೊರೆತಿದ್ದರಿಂದ ಪೋಷಕರು ತಮ್ಮ ಹೆಣ್ಣುಮಕ್ಕಳ ವಯೋಮಿತಿ 18 ಮೀರುವ ಮುಂಚೆಯೇ ಕಡಿಮೆ ಖರ್ಚಿನಲ್ಲಿ ಅವರ ವಿವಾಹ ಮಾಡಿ ಕಳುಹಿಸುತ್ತಿದ್ದಾರೆ. ಆದರೆ ಅವರಲ್ಲಿ ಗಂಡ-ಹೆಂಡತಿಯ ಸಂಬಂಧಗಳ ತಿಳುವಳಿಕೆ ಇರುವುದಿಲ್ಲ ಹಾಗೂ ಶಿಕ್ಷಣದ ಕೊರತೆ ಇರುವುದರಿಂದ ಪರಸ್ಪರರನ್ನು ಅರಿಯಲು ಸಾಧ್ಯವಾಗುವುದಿಲ್ಲ ಇದರೊಂದಿಗೆ ದಾಂಪತ್ಯ ಜೀವನದ ಪ್ರಾರಂಭಿಕ ಹಂತದಲ್ಲಿಯೇ ಕೌಟುಂಬಿಕ ಬಿರುಕುಗಳಂತಹ ಮುಂತಾದ ಸಮಸ್ಯೆಗಳು ಉದ್ಭವಿಸುತ್ತಿವೆ.

ಲಾಕ್ಡೌನ್ ವೇಳೆಯಲ್ಲಿ ಮನೆಯ ಬಳಿ ಸರಳವಾಗಿ ಕಡಿಮೆ ಖರ್ಚಿನಲ್ಲಿ ಮದುವೆಗೆ ಅವಕಾಶ ಇರುವುದರಿಂದ ಬಾಲ್ಯ ವಿವಾಹದ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವುದಕ್ಕೆ ಮುಖ್ಯ ಕಾರಣಗಳಲ್ಲಿ ಒಂದು.

2020ರ ಮಾರ್ಚ್ ನಿಂದ ಮೇ ತಿಂಗಳ ವರೆಗೆ ರಾಜ್ಯಾದ್ಯಂತ 1016 ಬಾಲ್ಯ ವಿವಾಹ ಪ್ರಕರಣಗಳು ಪತ್ತೆಯಾಗಿತ್ತು ಇದೀಗ ಅದರ ಸಂಖ್ಯೆ ಇನ್ನೂ ಹೆಚ್ಚಾಗಿದೆ ಆದರೆ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಈ ನಡುವೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಹೇಳಿಕೊಳ್ಳುವಂತಹ ಯಾವುದೇ ಗಂಭೀರ ಕ್ರಮಗಳನ್ನು ಕೈಗೊಳ್ಳಲು ಕಾರ್ಯ ಪ್ರವೃತ್ತರಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

2020ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 126 ಬಾಲ್ಯ ವಿವಾಹಗಳು ನಡೆದಿವೆ. 126 ಬಾಲ್ಯ ವಿವಾಹಗಳ ಪೈಕಿ 76 ಪ್ರಕರಣಗಳು ಮಾತ್ರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಳಿ ಇರುವ ಲೆಕ್ಕವಾಗಿದೆ. ಈ ಇಲಾಖೆಯ ಪ್ರಕಾರ ಬಳ್ಳಾರಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 199 ಮದುವೆ ತಡೆಹಿಡಿಯಲಾಗಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.

ಬೆಳಗಾವಿಯಲ್ಲಿ 114 ಮದುವೆಗಳನ್ನು ನಿಲ್ಲಿಸಲಾಗಿದೆ. ಮೈಸೂರು 18, ಹಾಸನದಲ್ಲಿ 17 ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ. ಪೋಕ್ಸೋ (POCSO) ಕಾಯ್ದೆಯಡಿ ಮೈಸೂರು ಜಿಲ್ಲೆಯಲ್ಲಿ 18 ಪ್ರಕರಣಗಳು ದಾಖಲಾಗಿದ್ದರೆ ಎರಡನೇ ಸ್ಥಾನದಲ್ಲಿರುವ ರಾಮನಗರ ಜಿಲ್ಲೆಯಲ್ಲಿ ಏಳು ಪ್ರಕರಣಗಳು ದಾಖಲಾಗಿವೆ. ಲಾಕ್ ಡೌನ್ ಸಂದರ್ಭದಲ್ಲಿ ಅಧಿಕಾರಿಗಳೆಲ್ಲರೂ ಕೊರೊನಾ ನಿಯಂತ್ರಿಸುವ ಕೆಲಸಗಳಲ್ಲಿ ನಿರತರಾಗಿದ್ದರಿಂದ ಇತರ ಚಟುವಟಿಕೆಗಳ ಕಡೆ ಗಮನ ಹರಿಸಲು ಅಧಿಕಾರಿಗಳಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಸಂದರ್ಭವನ್ನು ಬಳಸಿಕೊಂಡ ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದುವೆ ಮಾಡಿಸಿ ಕೊಟ್ಟಿದ್ದಾರೆ. ಈ ನಡುವೆ ಇದನ್ನು ತಡೆಗಟ್ಟಲು ಬಾಲ್ಯ ವಿವಾಹ ತಡೆ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ರಾಜ್ಯಾದ್ಯಂತ ಪ್ರಕರಣಗಳು ದಾಖಲಾಗಿವೆ.

ಒಟ್ಟಾರೆ ಕೆಲ ಮೂಢನಂಬಿಕೆಯಿಂದ ಹಾಗೂ ಪೋಷಕರು ತಮ್ಮ ಜವಾಬ್ದಾರಿ ಕಳೆದು ಕೊಳ್ಳುವ ನೆಪದಲ್ಲಿ ಮಕ್ಕಳ ಜೀವನದಲ್ಲಿ ಆಟವಾಡುತ್ತಿದ್ದಾರೆ.

ಈ ಬಾಲ್ಯ ವಿವಾಹದ ಪ್ರಕರಣಗಳು ಲಾಕ್ ಡೌನ್ ನಲ್ಲಿ ಹೆಚ್ಚಾಗಿರುವುದಂತು ಸತ್ಯ. ಮನೆಯ ಮುಂದೆ ಚಪ್ಪರ ಹಾಕಿ ಮದುವೆಯನ್ನು ನಡೆಸುವ ಅಗತ್ಯವಿಲ್ಲ. ಬಹಳ ತ್ವರಿತಗತಿಯಲ್ಲಿ ಮುಂಜಾನೆಯಲ್ಲಿಯೇ ಮದುವೆ ಸಮಾರಂಭಗಳನ್ನು ಮುಗಿಸಲಾಗುತ್ತಿದೆ. ಶಾಲಾ-ಕಾಲೇಜುಗಳು ಇಲ್ಲದಿರುವುದರಿಂದ ಈ ಬಾಲ್ಯವಿವಾಹ ಪ್ರಕರಣಗಳ ಬಗ್ಗೆ ಸರಿಯಾದ ಮಾಹಿತಿ ಪಡೆಯುವುದರಲ್ಲಿ ವಿಳಂಬವಾಗುತ್ತಿದೆ .

ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕುಟುಂಬಗಳ ಮನವೊಲಿಕೆ ಮಾಡಬೇಕಾಗಿದೆ‌. ಆದಷ್ಟು ಈ ರೀತಿಯ ಪ್ರಕರಣಗಳನ್ನು ಕಡಿಮೆಗೊಳಿಸಲು ಪ್ರಯತ್ನ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಡುವೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕೆಂದು ಸಾಮುದಾಯಿಕವಾಗಿ ಒತ್ತಡ ತರುವಲ್ಲಿ ಜನಸಮುದಾಯದ ಪಾಲ್ಗೊಳ್ಳುವಿಕೆ ಇಂದೆಂದಿಗಿಂತಲೂ ಹೆಚ್ಚು ಪ್ರಸ್ತುತ. ಇದರೊಂದಿಗೆ ಹೆಣ್ಣು ಶಿಕ್ಷಿತರಾದರೆ ಇಡೀ ಸಮಾಜವೇ ಶಿಕ್ಷಿತರಾದಂತೆ ಎಂಬ ನುಡಿಯನ್ನು ಸಾಕಾರಗೊಳಿಸಲು ಸರ್ಕಾರ ಹೆಚ್ಚು ಗಮನ ಹರಿಸಲು ಇದು ಹೆಚ್ಚು ಸೂಕ್ತ ಕಾಲವಾಗಿದೆ.

LEAVE A REPLY

Please enter your comment!
Please enter your name here