ಲೇಖಕರು: ಮಹಮ್ಮದ್ ಪೀರ್ ಲಟಗೇರಿ, ಇಳಕಲ್, ಬಾಗಲಕೋಟೆ
ಜಗತ್ತಿನಾದ್ಯಂತ ಮುಸ್ಲಿಮ್ ಸಮುದಾಯದವರು ರಮಝಾನ್ ತಿಂಗಳಲ್ಲಿ ತಿಂಗಳು ಪೂರ್ತಿ ಉಪವಾಸ (ರೋಜಾ) ಅನ್ನು ಆಚರಿಸುತ್ತಾರೆ, ಈ ಬಗ್ಗೆ ಕುರ್ ಆನ್ ಮತ್ತು ಪ್ರವಾದಿ ಮುಹಮ್ಮದ್ (ಸ.ಅ.ಸ) ರವರ ಬದುಕು ಸ್ಪಷ್ಟವಾಗಿ ಮಾರ್ಗದರ್ಶನ ನೀಡುತ್ತದೆ.
ರಮಝಾನ್ ತಿಂಗಳಲ್ಲಿಯೇ ಉಪವಾಸ ಕೈಗೊಳ್ಳುವ ಕುರಿತು ಮತ್ತು ಅದರ ಹಿನ್ನೆಲೆ, ಉದ್ದೇಶ ಹಾಗೂ ಮಹತ್ವವನ್ನು ‘ಕುರ್ ಆನ್’ ನಲ್ಲಿ ಈ ರೀತಿಯಾಗಿ ವಿವರಿಸಲಾಗಿದೆ.
ಅಧ್ಯಾಯ 2: ಅಲ್ ಬಕರಃ
ಸೂಕ್ತ : 183
ಓ ಸತ್ಯವಿಶ್ವಾಸಿಗಳೇ, ಗತ ಪ್ರವಾದಿಗಳ ಅನುಯಾಯಿಗಳಿಗೆ ಕಡ್ಡಾಯಗೊಳಿಸಿದ್ದಂತೆಯೇ ನಿಮ್ಮ ಮೇಲೂ ಉಪವಾಸ ವ್ರತವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ “ಧರ್ಮನಿಷ್ಠೆ”ಯ ಗುಣವಿಶೇಷ ಉಂಟಾಗುವುದೆಂದು ಆಶಿಸಲಾಗಿದೆ.
ಸೂಕ್ತ : 184
ಎಣಿಕೆಯ ಕೆಲವೇ ದಿನಗಳ ಉಪವಾಸ ವ್ರತವದು. ನೀವೆಲ್ಲಾದರೂ ರೋಗಿಯಾಗಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಇತರ ದಿನಗಳಲ್ಲಿ ಅಷ್ಟೇ ಸಂಖ್ಯೆಯನ್ನು ಪೂರ್ತಿಗೊಳಿಸಿಕೊಳ್ಳಬೇಕು. ಉಪವಾಸವಿರಲು ಶಕ್ತರಾದವರು (ಉಪವಾಸವಿರದಿದ್ದರೆ) ಪ್ರಾಯಶ್ಚಿತ್ತವನ್ನು ಕೊಡಬೇಕು. ಒಂದು ದಿನದ ಉಪವಾಸದ ಪ್ರಾಯಶ್ಚಿತ್ತವು ಓರ್ವ ಬಡವನಿಗೆ ಆಹಾರ ನೀಡುವುದಾಗಿದೆ ಮತ್ತು ತನ್ನ ಇಚ್ಛೆಯಿಂದ ಇನ್ನಷ್ಟು ಸತ್ಕಾರ್ಯ ಮಾಡಿದರೆ ಇದು ಅವನಿಗೆ ಇನ್ನೂ ಉತ್ತಮ. ಆದರೆ ನೀವು ಅರಿಯುವವರಾಗಿದ್ದರೆ ಉಪವಾಸವಿರುವುದೇ ನಿಮಗೆ ಅತ್ಯುತ್ತಮ.
ಸೂಕ್ತ : 185
ಮಾನವರಿಗೆ ಸಾದ್ಯಂತ ಸನ್ಮಾರ್ಗ, ಮಾರ್ಗದರ್ಶಕ ಮತ್ತು ಸತ್ಯಾಸತ್ಯಗಳಲ್ಲಿರುವ ಅಂತರವನ್ನು ಸುವ್ಯಕ್ತವಾಗಿ ತಿಳಿಸುವ ಶಿಕ್ಷಣಗಳನ್ನೊಳಗೊಂಡಿರುವ ‘ಕುರ್‍ಆನ್’ ಅವತೀರ್ಣಗೊಂಡ ತಿಂಗಳು ‘ರಮಝಾನ್’ ಆಗಿರುತ್ತದೆ. ಆದುದರಿಂದ ಯಾವನಾದರೂ ಈ ತಿಂಗಳನ್ನು ಹೊಂದಿದಾಗ ಅವನು ಆ ಸಂಪೂರ್ಣ ತಿಂಗಳ ಉಪವಾಸ ವ್ರತವನ್ನಾಚರಿಸಬೇಕು. ಯಾವನಾದರೂ ರೋಗಿಯಾಗಿದ್ದರೆ ಅಥವಾ ಪ್ರಯಾಣಿಕನಾಗಿದ್ದರೆ ಆತನು ಇತರ ದಿನಗಳಲ್ಲಿ ಉಪವಾಸ ದಿನಗಳ ಸಂಖ್ಯೆಯನ್ನು ಪೂರ್ತಿಗೊಳಿಸಬೇಕು. ಅಲ್ಲಾಹ್ ನಿಮಗೆ ಸೌಲಭ್ಯವನ್ನೀಯಲು ಬಯಸುತ್ತಾನೆ; ನಿಮ್ಮನ್ನು ಕಷ್ಟಕ್ಕೀಡು ಮಾಡಲು ಇಚ್ಛಿಸುವುದಿಲ್ಲ. ನೀವು ಉಪವಾಸದ ಸಂಖ್ಯೆಯನ್ನು ಪೂರ್ತಿಗೊಳಿಸಲು ಅನುಕೂಲವಾಗುವಂತೆಯೂ, ಸನ್ಮಾರ್ಗದರ್ಶನದ ಮೂಲಕ ನಿಮ್ಮನ್ನು ಪ್ರತಿಷ್ಠಿತಗೊಳಿಸಿದ ಅಲ್ಲಾಹನ ಮಹಿಮೆಯನ್ನು ಕೊಂಡಾಡುತ್ತಾ ಅವನಿಗೆ ಕೃತಜ್ಞರಾಗಿರಲಿಕ್ಕಾಗಿಯೂ ಈ ವಿಧಾನವನ್ನು ತೋರಿಸಿಕೊಡಲಾಗಿದೆ.
ಉಪವಾಸದ ವ್ರತದ ಬಹಳ ಪ್ರಾಥಮಿಕ ಉದ್ದೇಶವೂ ‘ತಕ್ವಾ’ ಅಂದರೆ ದೇವನಿಷ್ಠೆ ಅಥವಾ ದೇವಭಯವನ್ನು ಹೊಂದುವುದಾಗಿದೆ.
ತಕ್ವಾ’ ದ ಅರ್ಥವು ಬಹಳಷ್ಟು ವಿಶಾಲವಾಗಿದೆ, ಅರೇಬಿಕ್ ನಲ್ಲಿ ತಕ್ವಾ ಅನ್ನುವುದು ಎಚ್ಚರವಾಗಿರುವ ಸ್ಥಿತಿ ಅಥವಾ ‘ಜಾಗರೂಕತೆ’ಯನ್ನು ಮೈಗೂಡಿಸಿಕೊಳ್ಳುವುದಾಗಿದೆ. ನಾವು ಮಾಡುವ ಪ್ರತಿಯೊಂದು ಕಾರ್ಯವನ್ನು ಸೃಷ್ಟಿಕರ್ತನಾದ ಅಲ್ಲಾಹನು ವೀಕ್ಷಿಸುತ್ತಿದ್ದಾನೆ ಎನ್ನುವ ಮನೋಭಾವವನ್ನು ಬೆಳೆಸಿಕೊಳ್ಳುವುದಾಗಿದೆ.
‘ತಕ್ವಾ’ (ದೇವಭಯ) ಪ್ರತಿಯೊಂದು ಕರ್ಮವನ್ನು ಪ್ರಜ್ಞಾಪೂರ್ವಕವಾಗಿ ಮತ್ತು ಜಾಗ್ರತೆಯಿಂದ ಕೈಗೊಳ್ಳುವ ಅರಿವನ್ನು ಹೊಂದಿರುವ ಜೊತೆಗೆ ದೇವ ಸಂಪ್ರೀತಿ ಗಳಿಸುವ ಮತ್ತು ಆತನ ಕ್ರೋಧದಿಂದ ಪಾರಾಗುವ ಬಗೆಗೆ ಸದಾ ಕಾರ್ಯಶೀಲನಾಗಿರುವ ಸ್ಥಿತಿಯನ್ನು ಹೊಂದುವುದು ಪ್ರಮುಖವಾದುದು.
‘ತಕ್ವಾ’ದ ಮನೋಭಾವವು ಬಾಹ್ಯ ಮತ್ತು ಆಂತರಿಕವಾದುದು ಆದ್ದರಿಂದ ಆಂತರಿಕ ನೈತಿಕ ನಡವಳಿಕೆಗಳಾದ ಒಳ್ಳೆಯ ಚಿಂತನೆ, ಕಪಟ ಮತ್ತು ತೋರಿಕೆಯ ಉದ್ದೇಶವಿಲ್ಲದ ದೇವ ಸಂಪ್ರೀತಿಯ ಮೂಲಕ ಪರಲೋಕದ ಶಾಶ್ವತ ವಿಜಯದ ಸ್ಪೂರ್ತಿಯನ್ನು ಒಳಗೊಂಡಿದೆ, ನಾವು ಮಾಡುವ ಪ್ರತಿಯೊಂದರಲ್ಲೂ ಅಲ್ಲಾಹನ ಸಾನಿಧ್ಯವನ್ನು ಗಮನದಲ್ಲಿ (ಅಲ್ಲಾಹನ ಕಣ್ಗಾವಲಿನಲ್ಲಿ ನಾವಿದ್ದೇವೆ ಎಂಬ ಮನಸ್ಥಿತಿ ಬೆಳೆಸಿಕೊಳ್ಳಬೇಕು) ಇಟ್ಟುಕೊಳ್ಳುವುದು ಅದರ ಆಶಯವಾಗಿದೆ.
ಇದರೊಂದಿಗೆ ಪ್ರವಾದಿ ಮುಹಮ್ಮದ್ (ಸ.ಅ.ಸ) ರವರು ರಮಝಾನ್ ಉಪವಾಸ ಆಶಯದ ಕುರಿತು ಹೇಳಿರುವ ಮಾತುಗಳು ಗಮನಾರ್ಹವಾದುವು.
ಉಪವಾಸವು ದೇಹದ ಝಕಾತ್ ಆಗಿದೆ:
ಅಬೂ ಹುರೈರಾ (ರ) ಹೇಳುತ್ತಾರೆ, ಪ್ರವಾದಿ ಮುಹಮ್ಮದ್ (ಸ) ಹೇಳಿದರು, ಪ್ರತಿಯೊಂದು ಕೊಳಕನ್ನು ನಿವಾರಿಸಲು ಅಲ್ಲಾಹನು ಒಂದಿಲ್ಲೊಂದು ವಸ್ತುವನ್ನು ಸೃಷ್ಟಿಸಿದ್ದಾನೆ, ದೇಹವನ್ನು (ಆಧ್ಯಾತ್ಮಿಕ ಕೊಳಕು ಮತ್ತು ರೋಗಗಳಿಂದ) ಶುದ್ಧಗೊಳಿಸಲು ಇರುವ ಸಾಧನ ಉಪವಾಸವಾಗಿದೆ, ಉಪವಾಸ ತಾಳ್ಮೆಯ ಅರ್ಧಾಂಶವಾಗಿದೆ.
[ಇಬ್ನ್ ಮಾಜಃ)
ದೇಹದ ಶುದ್ದಿ ಎಂದರೆ ಬಾಹ್ಯವಾಗಿ ಇರುವ ಅಂಗಾಂಗಳ ಶುದ್ದಿಯಲ್ಲ ಬದಲಾಗಿ ಮನಸ್ಸಿನ ಶುದ್ದಿಯಾಗಿದೆ, ಶಾರೀರಿಕವಾಗಿ ಶುದ್ಧರು ಮತ್ತು ಒಳ್ಳೆಯ ಗುಣ-ನಡತೆ ಉಳ್ಳವರಾಗಿದ್ದು, ಮನಸ್ಸಿನಲ್ಲಿ ಪರರ ಬಗ್ಗೆ ಪ್ರೀತಿ, ಸದ್ವಿಚಾರ ಮತ್ತು ಒಳಿತಿನ ಚಿಂತನೆಗಳು ಇರಬೇಕೆ ಹೊರತು ದ್ವೇಷ, ಅಸೂಯೆ ಮತ್ತು ಕೆಟ್ಟ ಚಿಂತನೆಗಳನ್ನು ಒಳಗೊಂಡಿರಬಾರದು ಎಂಬುದು ಪ್ರಮುಖ.
ಉಪವಾಸವನ್ನು ಕೆಡಿಸುವ ವಿಷಯಗಳು:
ಪ್ರವಾದಿ ಮುಹಮ್ಮದ್ (ಸ.ಅ.ಸ) ಹೇಳಿದರು: ಉಪವಾಸವು (ಕೆಡುಕು ಮತ್ತು ಪೈಶಾಚಿಕ ಕೆಲಸಗಳಿಂದ ತಡೆಯುವ) ಗುರಾಣಿಯಾಗಿದೆ, ನಿಮ್ಮಲ್ಲಿ ಯಾರಾದರೂ ಉಪವಾಸದಿಂದಿದ್ದರೆ ಅಶ್ಲೀಲ ಮಾತು ಆಡದಿರಲಿ, ಸದ್ದುಗದ್ದಲ ಮಾಡದಿರಲಿ, ಯಾರಾದರೂ ಅವನನ್ನು ಬೈದರೆ ಅಥವಾ ಅವನೊಂದಿಗೆ ಜಗಳವಾಡಿದರೆ ಉಪವಾಸಿಗನು ತಾನು ಉಪವಾಸದಿಂದಿದ್ದೇನೆ (ಆದ್ದರಿಂದ ಬೈಗುಳ ಅಥವಾ ಜಗಳಕ್ಕೆ ನಾನು ತಯಾರಿಲ್ಲ) ಎಂದು ಹೇಳಲಿ.
[ಬುಖಾರಿ, ಮುಸ್ಲಿಮ್]
ಉಪವಾಸಿಗನು ಸಹನೆ, ಸಹಾನುಭೂತಿ ಮತ್ತು ಸತ್ಕರ್ಮದ ಮೂಲಕ ಕೆಡುಕು ಹಾಗೂ ಪೈಶಾಚಿಕ ಕೃತ್ಯಗಳಿಂದ ಸದಾ ಉಳಿಯುವ ಹಾಗೂ ಸದ್ವರ್ತನೆ ಹೊಂದಿದವನಾಗಿರಬೇಕು.
ಉಪವಾಸದ ಸ್ಪೂರ್ತಿ:
ಅಬೂ ಹುರೈರಾ (ರ) ಹೇಳುತ್ತಾರೆ- ಪ್ರವಾದಿ ಮುಹಮ್ಮದ್ (ಸ.ಅ.ಸ) ಹೇಳಿದರು: ಯಾರು (ಉಪವಾಸದ ಹೊರತಾಗಿಯೂ) ಸುಳ್ಳಾಡುವುದನ್ನು ಮತ್ತು ಅದರಂತೆ ವರ್ತಿಸುವುದನ್ನು ವರ್ಜಿಸುವುದಿಲ್ಲವೋ ಅಂಥವರು ಹಸಿವು ಮತ್ತು ಬಾಯಾರಿಕೆಯಿಂದ ಇರುವುದು ಅಲ್ಲಾಹನಿಗೇನೂ ಬೇಕಾಗಿಲ್ಲ
[ಬುಖಾರಿ ಮುಸ್ಲಿಮ್]
ಯಾವೆಲ್ಲ ಕೆಡುಕುಗಳನ್ನು ಮಾನವ ಸಮಾಜ ಒಪ್ಪಿದೆಯೋ ಅಂತಹ ಕೆಡುಕುಗಳಿಂದ ಉಳಿಯುವುದು ಮತ್ತು ಅವುಗಳನ್ನು ತ್ಯಜಿಸುವುದು ಹಾಗೂ ಸಾರ್ವಕಾಲಿಕವಾಗಿ ಯಾವೆಲ್ಲ ಒಳಿತುಗಳನ್ನು ಸಮಾಜ ಪುಷ್ಟೀಕರಿಸಿದೆಯೋ ಅವುಗಳನ್ನು ಅವಶ್ಯವಾಗಿ ಅನುಷ್ಠಾನಗೊಳಿಸುವುದು ಸಹ ಉಪವಾಸಿಗನ ನೈತಿಕ ಹೊಣೆಯಾಗಿದೆ.
ಮನಸ್ಸಿನ ನಿಯಂತ್ರಣವು ಉಪವಾಸದ ಬಹುಮುಖ್ಯ ಅಂಶವಾಗಿದೆ, ದೇಹೆಚ್ಛೆ ಮತ್ತು ಮನಸ್ಸಿಚ್ಛೆಗೆ ಅನುಗುಣವಾಗಿ ವರ್ತಿಸುವ ವ್ಯಕ್ತಿಯ ನಡವಳಿಕೆಯು ಅನೇಕ ಬಗೆಯ ಕೆಡುಕಿಗೆ ಮತ್ತು ನಷ್ಟಕ್ಕೆ ಕಾರಣವಾಗುತ್ತದೆ.
ಉಪವಾಸಿಗನು ಹಸಿವಿನಿಂದ ತಾಳ್ಮೆ ವಹಿಸಿ ತನ್ನಲ್ಲಿ ಸಹನಶೀಲತೆ ಅನ್ನು ಹಾಗೂ ಮೃದುತ್ವದಂತಹ ಸಹಾನುಭೂತಿಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುತ್ತಾನೆ, ಇದರೊಂದಿಗೆ ತನ್ನ ಮುಂದೆ ಅನ್ನ ಪಾನೀಯ ಗಳು ಇದ್ದರೂ ಸಹ ದೇವನು ನೋಡುತ್ತಿದ್ದಾನೆ ಎನ್ನುವ ಮನೋಭಾವವನ್ನು ಬೆಳೆಸಿಕೊಳ್ಳುತಾನೇ ಇದು ವ್ಯಕ್ತಿಯಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗೆ ಸಾಧ್ಯವಾಗುತ್ತದೆ.
ನಷ್ಟ ಮತ್ತು ಅಪಾಯದ ಸಂದರ್ಭದಲ್ಲಿ ವ್ಯಕ್ತಿಯೂ ಹೇಗೆ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಾನೆ ಅದೇ ರೀತಿ ಮನುಷ್ಯ ಜೀವಿತ ಅವಧಿಯಲ್ಲಿ ತಾನು ಮಾಡುವ ಪ್ರತಿಯೊಂದು ಒಳಿತು ಮತ್ತು ಕೆಡುಕಿನ ಕಾರ್ಯಗಳಿಗೆ ಪ್ರಶ್ನಿಸಲ್ಪಡುತ್ತಾನೆ ಹಾಗೂ ಸತ್ಕರ್ಮದ ಕಾರ್ಯಗಳಿಗೆ ಒಳಿತಿನ ಪ್ರತಿಫಲ ಮತ್ತು ದುಷ್ಕರ್ಮ ಕಾರ್ಯಗಳಿಗೆ ಕೆಡುಕಿನ ಶಿಕ್ಷೆಗೆ ಒಳಗಾಗುವುದರೊಂದಿಗೆ ಪರಲೋಕದ ಬದುಕು ನಿರ್ಧರಿತವಾಗುತ್ತದೆ ಎನ್ನುವ ಪರಿಕಲ್ಪನೆ ಹೊಂದಿ ಅದರಂತೆ ಸದಾ ಜಾಗೃತವಾಗಿರುವ ಮನೋಭಾವವನ್ನೇ ತಕ್ವಾ ಎನ್ನಲಾಗುತ್ತದೆ.
ಸಾಮಾಜಿಕ ಹಿನ್ನೆಲೆಯಲ್ಲಿ ರಮಝಾನ್ ತಿಂಗಳು ನೀಡುವ ಸಂದೇಶ:
ಹಸಿವು ಮತ್ತು ಆರ್ಥಿಕ ಅಸಮಾನತೆಯಿರುವ ಯಾವ ಸಮಾಜವೂ ಪ್ರಗತಿ ಮತ್ತು ಸಮೃದ್ಧ ಸಮಾಜದ ಲಕ್ಷಣವಲ್ಲ, ಉಪವಾಸವು ವ್ಯಕ್ತಿಯಲ್ಲಿ ಹಸಿವು ಮತ್ತು ಬಾಯಾರಿಕೆಯ ಮೌಲ್ಯವನ್ನು ತಿಳಿಸಿಕೊಡುತ್ತದೆ, ಇದರೊಂದಿಗೆ ಇತರರ ಹಸಿವು ಮತ್ತು ಬಾಯಾರಿಕೆಯನ್ನು ಅರಿತು ಅವರಿಗೆ ತನ್ನ ಕೈಲಾದಷ್ಟು ಸಹಾಯ ಮಾಡುವ ಮನಸ್ಥಿತಿ ಅಂದರೆ ಇತರರ ಕಷ್ಟಕ್ಕೆ ಸ್ಪಂದಿಸಲು ಮನೋಭಾವ ಬೆಳೆಯುತ್ತದೆ.
ವ್ಯಕ್ತಿಯೂ ಹಸಿವಿನ ಸಂದರ್ಭದಲ್ಲಿ ತೀರಾ ಅಸಹಾಯಕ ಸ್ಥಿತಿಗೆ ತಲುಪುತ್ತಾನೆ, ಆಗ ಆತನಲ್ಲಿರುವ ಅಹಂಕಾರ, ಸಿಟ್ಟು, ಮತ್ತು ಬಯಕೆಗಳನ್ನು ತಡೆಯುವ ಶಕ್ತಿಯನ್ನು ಹೊಂದುತ್ತಾನೆ. ಮನುಷ್ಯನು ಈ ಮೂರು ವಿಷಯಗಳಲ್ಲಿ ನಿಯಂತ್ರಣವನ್ನು ಕಳೆದುಕೊಂಡಾಗ ಆಗುವ ಅನಾಹುತಗಳು ನಮ್ಮ ದೈನಂದಿನ ಬದುಕಿನಲ್ಲಿ ನಾವು ನೋಡಿದ್ದೇವೆ, ಈ ನಿಟ್ಟಿನಲ್ಲಿ ಮನುಷ್ಯನ ವ್ಯಕ್ತಿತ್ವವನ್ನು ಮಾನವೀಯ ಮೌಲ್ಯಗಳ ಮೂಲಕ ರೂಪಿಸುವ ಕೆಲಸವನ್ನು ಉಪವಾಸ ವ್ರತವು ಮಾಡುತ್ತದೆ ಎನ್ನುವುದು ನಂಬಲರ್ಹ ವಾಸ್ತವ.
ಮನುಷ್ಯನಲ್ಲಿರುವ ಮಾನವೀಯ ಮೌಲ್ಯಗಳಾದ ಕರುಣೆ ಮತ್ತು ಸಹನೆ ಹಾಗೂ ಇತರರನ್ನು ತನ್ನಂತೆ ಬಗೆಯುವ ಮೌಲ್ಯಗಳನ್ನು ಉಪವಾಸಿಗನು ತನ್ನಲ್ಲಿ ಮೈಗೂಡಿಸಿಕೊಳ್ಳುತ್ತಾನೆ.
ಪವಿತ್ರ ರಮಝಾನ್ ತಿಂಗಳು ಮಾನವ ಕಲ್ಯಾಣಕ್ಕಾಗಿ ಮತ್ತು ಮಾನವ ಸನ್ಮಾರ್ಗಕ್ಕಾಗಿ ನೀಡಲ್ಪಟ್ಟ ಪವಿತ್ರ ‘ಕುರ್ ಆನ್’ ಅವತೀರ್ಣಗೊಂಡ ತಿಂಗಳು ಆದ್ದರಿಂದ, ಸೃಷ್ಟಿಕರ್ತನಾದ ಅಲ್ಲಾಹನ ಇರುವಿಕೆಯನ್ನು ಒಪ್ಪುವ ಪ್ರತಿಯೊಬ್ಬ ವ್ಯಕ್ತಿಯೂ ಕೃತಜ್ಞತೆಗಾಗಿ ಉಪವಾಸವಿರುದನ್ನು ಕಡ್ಡಾಯಗೊಳಿಸಲಾಗಿದೆ.
ರಮಝಾನ್ ತಿಂಗಳಲ್ಲಿ ಬಹಳ ಪ್ರಮುಖವಾಗಿ ಝಕಾತ್ (ಸಂಪತ್ತಿನ ನಿರ್ದಿಷ್ಟ ಅಂಶವನ್ನು ಬಡವರ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ದಾನ ನೀಡುವ ಕಡ್ಡಾಯ ಕರ್ಮ) ಅನ್ನು ನೀಡುವುದು ಸ್ಥಿತಿವಂತ ಪ್ರತಿಯೊಬ್ಬ ಮುಸ್ಲಿಮರಿಗೆ ಕಡ್ಡಾಯವಾಗಿದೆ.
ಝಕಾತ್ ಅನ್ನುವುದು ಶ್ರೀಮಂತರ ಸಂಪತ್ತಿನಲ್ಲಿರುವ ಬಡವರ ಹಕ್ಕು ಎಂದು ಇಸ್ಲಾಂ ಹೇಳುತ್ತದೆ, ಅಲ್ಲಾಹನು ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಮತ್ತು ಗಳಿಸಿದ ಸಂಪತ್ತಿನಲ್ಲಿ ಸಮೃದ್ಧಿಯನ್ನು ಹೊಂದಲು ಕಲ್ಪಿಸಿದ ವ್ಯವಸ್ಥೆಯಾಗಿದೆ. ಝಕಾತ್ ನೀಡುವುದು ಬಡವರ ಪಾಲನ್ನೇ ಹೊರತು ಅದು ಶ್ರೀಮಂತರ ಅಥವಾ ಸ್ಥಿತಿವಂತನ ಔದಾರ್ಯವಲ್ಲ, ಎಂಬುದು ಗಮನಾರ್ಹ.
ಇಡೀ ಮಾನವ ಕುಲಕ್ಕೆ ದಾರಿದೀಪವಾದ ಪವಿತ್ರ ‘ಕುರ್ ಆನ್’ ಅನ್ನು ರಮಝಾನ್ ತಿಂಗಳಲ್ಲಿ ಅವತೀರ್ಣಗೊಳಿಸಿದ ಸೃಷ್ಟಿಕರ್ತನಾದ ಅಲ್ಲಾಹನ ಈ ಉಪಕಾರವನ್ನು ಸ್ಮರಿಸಿ ಕೃತಜ್ಞತೆ ಭಾವದಿಂದ ಉಪವಾಸ ಆಚರಿಸುವುದು ಸೃಷ್ಟಿಕರ್ತನಾದ ಅಲ್ಲಾಹನು ಬಯಸಿದ ಬದುಕನ್ನು ಕಟ್ಟಿಕೊಳ್ಳಲು ಪ್ರೇರೆಪಿಸುವುದಾಗಿದೆ.
ಇಂದು ಮನುಷ್ಯನ ಅನೇಕ ಕೆಡುಕಿನ ಕಾರ್ಯಗಳಿಗೆ ಮತ್ತು ಅನ್ಯಾಯ, ಅಕ್ರಮ ಹಾಗೂ ದುಷ್ಕೃತ್ಯಗಳಿಗೆ ಭಯಪಡುವ ಹಾಗೂ ಈ ಕರ್ಮಗಳಿಗಾಗಿ ಪ್ರಶ್ನೆಗೊಳಪಡುವ ತೀರಾ ಖಾಸಗಿ ನಂಬಿಕೆಯನ್ನು ಜಗತ್ತಿನಲ್ಲಿ ಇಸ್ಲಾಂ ಮಾತ್ರ ನೀಡಿದೆ, ಈ ಬಗೆಯ ದೈವಿಕ ಪರಿಕಲ್ಪನೆಯ ಮೂಲಕ ಪ್ರತಿಯೊಬ್ಬ ವ್ಯಕ್ತಿಗೂ ಮರಣಾನಂತರ ದೇವನ ಬಳಿ ಮರಳಿ ಹಾಜರಾಗಲಿಕ್ಕಿದೆ ಹಾಗೂ ಆತನು ಮಾಡಿದ ಕರ್ಮಗಳ ಅನುಸಾರ ಆತನೊಂದಿಗೆ ಪುನರುತ್ಥಾನ ದಿನದಂದು ವ್ಯವಹರಿಸಲಾಗುವುದು ಎಂಬುದು ಇಸ್ಲಾಮಿನ ಪ್ರಾಥಮಿಕ ನಂಬಿಕೆಗಳಲ್ಲಿ ಒಂದು.
ಈ ಬಗೆಯ ಅದೃಶ್ಯ ಸಂಗತಿಗಳ ಮೇಲೆ ವಿಶ್ವಾಸ ತಾಳುವ ಮೂಲಕ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಕೆಡುಕಿನ ಮೇಲೆ ನಿಯಂತ್ರಣ ಸಾಧಿಸುವಲ್ಲಿ ರಮಝಾನ್ ತಿಂಗಳ ಉಪವಾಸ ಬಹಳ ಪ್ರಮುಖವಾಗಿದೆ ಮತ್ತು ಅದು ತರಬೇತಿ ನೀಡುವ ಹಾಗೂ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಬದಲಾವಣೆ ತರುವ ತಿಂಗಳಾಗಿದೆ ಎಂಬುದನ್ನು ಮನಗಂಡು ಅದರಂತೆ ಈ ಪವಿತ್ರ ತಿಂಗಳಲ್ಲಿ ದೇವನ ಬಳಿ ಕರುಣೆ, ಪಶ್ಚಾತ್ತಾಪ ಹಾಗೂ ಸಮೃದ್ಧಿಯನ್ನು ಪಡೆದುಕೊಳ್ಳುವುದು ಈ ತಿಂಗಳ ಸರಿಯಾದ ಸದ್ಭಳಕೆಯಾಗಿದೆ.
ಉಪವಾಸವು ವ್ಯಕ್ತಿಯ ಮನಸ್ಸಿನ ನಿಯಂತ್ರಣ ಮತ್ತು ಆತ್ಮ ಶುದ್ಧಿ ಹಾಗೂ ವ್ಯಕ್ತಿತ್ವ ವಿಕಸನದ ಮೂಲಕ ಆಧ್ಯಾತ್ಮಿಕ ಬೆಳವಣಿಗೆ ಆದರೆ, ಇನ್ನೊಂದೆಡೆ ಹಸಿವಿನ ಮೌಲ್ಯ ಮತ್ತು ಪರೋಪಕಾರಿ ಗುಣಗಳ ಮೂಲಕ ಸಾಮಾಜಿಕ ಮೌಲ್ಯದ ಹಾಗೂ ಝಕಾತ್ ಮೂಲಕ ಆರ್ಥಿಕ ಸಮಾನತೆಯನ್ನು ಸಾಧಿಸುವ ಬಹುದೊಡ್ಡ ಸಾಧನವಾಗಿದೆ.


















































