(ಅಕ್ಟೋಬರ್ 3, ಬ್ಯಾರಿ ಭಾಷಾ ದಿನಾಚರಣೆ. ಆ ಪ್ರಯುಕ್ತ ವಿಶೇಷ ಲೇಖನ)

ಲೇಖಕರು: ಇಸ್ಮತ್ ಫಜೀರ್

ಮುಸ್ಲಿಮರಿಗೂ ಸಾಹಿತ್ಯಕ್ಕೂ ಒಂದು ವಿಧದ ಅವಿನಾಭಾವ ಸಂಬಂಧವಿದೆ. ಯಾಕೆಂದರೆ ಮುಸ್ಲಿಮರ ಧರ್ಮಗ್ರಂಥ ಪವಿತ್ರ ಖುರ್‍ಆನ್‍ನ ಮೊಟ್ಟ ಮೊದಲ ಪದವೇ “ಇಕ್‍ರಅï” ಅರ್ಥಾತ್ ಓದಿರಿ.
ಬ್ಯಾರಿ ಭಾಷೆ ಹಲವು ಭಾಷೆಗಳ ಸಂಗಮದಿಂದ ಹುಟ್ಟಿಕೊಂಡ ಒಂದು ಭಾಷೆ. ಮಲಯಾಳಂ, ತುಳು, ತಮಿಳು, ಕನ್ನಡ, ಉರ್ದು, ಅರೆಬಿಕ್ ಭಾಷೆಗಳ ಸಂಗಮದಿಂದುಂಟಾದ ಭಾಷೆ ಬ್ಯಾರಿ ಭಾಷೆ. ಬ್ಯಾರಿ ಭಾಷೆಯು ದ್ರಾವಿಡ ಭಾಷಾ ಪರಿವಾರದ ಒಂದು ಭಾಷೆಯಾದರೂ ಬ್ಯಾರಿಗಳು ಮುಸ್ಲಿಮರಾಗಿರುವುದರಿಂದ ಬ್ಯಾರಿ ಭಾಷೆಯಲ್ಲಿ ಧಾರಾಳ ಅರಬಿ ಪದಗಳೂ ಇವೆ. ಕೆಲವೊಂದು ಅರಬಿ ಪದಗಳು ಬ್ಯಾರಿಗಳ ಮಾತಿನಲ್ಲಿ ಅಪಭ್ರಂಶಗೊಂಡು ಈಗ ಸ್ವತಂತ್ರ ಬ್ಯಾರಿ ಪದಗಳೇ ಎಂಬಷ್ಟರ ಮಟ್ಟಿಗೆ ಮಾರ್ಪಾಟಾಗಿವೆ. ಬ್ಯಾರಿ ಭಾಷೆಯ ಪುರಾತನ ಲಿಖಿತ ಸಾಹಿತ್ಯಗಳು ಬ್ಯಾರಿ-ಮಾಪ್ಲಾ ಮಿಶ್ರಭಾಷೆಯಲ್ಲಿವೆ. ಹಳೇ ಕಾಲದ ಬ್ಯಾರಿ ಲಿಖಿತ ಸಾಹಿತ್ಯಗಳು ಅರಬೀ-ಮಲಯಾಳಂ ಎಂಬ ಸಂಯುಕ್ತ ಲಿಪಿಯಲ್ಲಿವೆ. ಬ್ಯಾರಿ ಭಾಷೆಯ ಮೊಟ್ಟಮೊದಲ ಅಧಿಕೃತ ಕವಿ ತಲಪಾಡಿ (ಕೇರಳ ಕರ್ನಾಟಕ ಗಡಿ ಭಾಗದಲ್ಲಿರುವ ಕರ್ನಾಟಕದ ಊರು)ಯ ಖಾಝಿ ತಲಪಾಡಿ ಬಾಪಂಕುಂಞಿ ಮುಸ್ಲಿಯಾರ್. ಬ್ಯಾರಿ ಭಾಷೆಯ ಮೊಟ್ಟ ಮೊದಲ ಲಿಖಿತ ಸಾಹಿತ್ಯ “ಮದನಿ ಮಾಲೆ”. ಉಳ್ಳಾಲದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಭಾರತದ ಎರಡನೇ ಅತೀ ಪ್ರಸಿದ್ಧ ಸೂಫಿ ಸಂತ “ಅಸ್ಸೈಯ್ಯದ್ ಮುಹಮ್ಮದ್ ಶರೀಫುಲ್ ಮದನಿ” ಯವರ ಕೀರ್ತನೆಗಳೇ ಮದನಿ ಮಾಲೆ. ಈ ಕಾವ್ಯ ಬ್ಯಾರಿ-ಮಾಪ್ಲಾ ಮಿಶ್ರಭಾಷೆಯಲ್ಲಿದೆ. ಬ್ಯಾರಿ ಸಾಹಿತ್ಯ ಚರಿತ್ರೆಯ ಎರಡನೇ ಕವಿ ಎಂಬ ಕೀರ್ತಿ “ಮೊೈದಿನ್ ಕುಟ್ಟಿ ವೈದ್ಯರ್”ಗೆ ಸಲ್ಲುತ್ತವೆ. ಬ್ಯಾರಿ-ಮಲಯಾಳಂ ಮಿಶ್ರಿತ ಭಾಷೆಯಲ್ಲಿ ಇವರು ನೂರಾರು ಮಾಪ್ಲಾ ಪಾಟುಗಳನ್ನು ಬರೆದಿದ್ದಾರೆ. ಹಳೇ ಕಾಲದ ಬ್ಯಾರಿ ಮುಖಂಡರಲ್ಲೊಬ್ಬರಾದ ಮೊಗ್ರಾಲ್ ಕುಂಞ ಪಕ್ಕಿಯವರೂ ಇಂತಹದೇ ಮಿಶ್ರಭಾಷೆಯಲ್ಲಿ ಬ್ಯಾರಿ ಕಾವ್ಯಗಳನ್ನು ಬರೆದಿದ್ದಾರೆ. ಈ ಮೇಲೆ ಉಲ್ಲೇಖಿಸಿದ ಮೂವರೂ ಕವಿಗಳು ಇಪ್ಪತ್ತನೇ ಶತಮಾನದ ಮೊದಲಾರ್ಧದಲ್ಲಿ ಬಾಳಿ ಬದುಕಿದವರು. ಆದರೆ ಇವರು ಯಾವ ಯಾವ ಕಾವ್ಯಗಳನ್ನು ಯಾವ ಇಸವಿಗಳಲ್ಲಿ ಬರೆದರೆಂಬುವುದಕ್ಕೆ ದಾಖಲೆಗಳು ಲಭ್ಯವಿಲ್ಲ.
ಬ್ಯಾರಿ ಭಾಷೆಯಲ್ಲಿ ವಿಫುಲವಾದ ಜಾನಪದ ಸಾಹಿತ್ಯವಿತ್ತು. ಆದರೆ ಸುಮಾರು ಐದಾರು ದಶಕಗಳ ಹಿಂದಿನ ಬ್ಯಾರಿಗಳಲ್ಲಿ ಬಹುತೇಕರು ಅನಕ್ಷರಸ್ಥರಾದುದರಿಂದ ಬಹುಪಾಲು ಬ್ಯಾರಿ ಜಾನಪದ ಸಾಹಿತ್ಯವು ಅವುಗಳನ್ನು ತಿಳಿದವರೊಂದಿಗೇ ಕಾಲವಾಗಿ ಹೋಗಿವೆ. ಈ ಮೇಲೆ ಉಲ್ಲೇಖಿಸಿದ ಹಳೆತಲೆಮಾರಿನ ಮೂರು ಕವಿಗಳ ಬಳಿಕ ಬ್ಯಾರಿ ಸಾಹಿತ್ಯಗಳು ಬರೆದಿಡಲ್ಪಡಲೇ ಇಲ್ಲ ಎಂದರೆ ತಪ್ಪಲ್ಲ.
ಗತಕಾಲದ ಬ್ಯಾರಿ ಸಂಸ್ಕೃತಿಯನ್ನು ಅವಲೋಕಿಸುವಾಗ ಬ್ಯಾರಿಯಲ್ಲಿ ಧಾರಾಳ ಮೌಖಿಕ ಸಾಹಿತ್ಯವಿತ್ತು. ಬ್ಯಾರಿಗಳ ಪಾಟ್ (ಹಾಡು) ಗಳು ಹೆಚ್ಚಾಗಿ ಹಾಡಲ್ಪಡುತ್ತಿದ್ದುದು ಶುಭಸಮಾರಂಭಗಳಲ್ಲಿ ಮತ್ತು ಶ್ರಮಜೀವಿ ಬ್ಯಾರಿಗಳು ಕೆಲಸದ ಆಯಾಸ ಮರೆಸಲು.
ಬ್ಯಾರಿಗಳ ಶುಭಸಮಾರಂಭಗಳಲ್ಲಿ ಮದುವೆ, ಮದರಂಗಿ, ತಾಲ, ಒಪ್ಪನೆ, ಅಪ್ಪತೆಮಂಞಿಲ (ಸೀಮಂತ) ಸುನ್ನತ್ ಮಂಙÉಲ (ಮುಂಜಿ) ಮುಖ್ಯವಾದವುಗಳು. ಈ ಎಲ್ಲಾ ಶುಭಸಮಾರಂಭಗಳಿಗೆ ವಿವಿಧ ರೀತಿಯ ಹಾಡುಗಳು ಬ್ಯಾರಿಗಳಲ್ಲಿ ಚಾಲ್ತಿಯಲ್ಲಿತ್ತು. ಮಂಞಲಪಾಟ್‍ಗಳಲ್ಲಿ (ಮದುವೆ ಹಾಡುಗಳು) ಚಮೆಯಪ್ಪಾಟ್ (ಮದುಮಗಳನ್ನು ಸಿಂಗರಿಸುವಾಗ ಹಾಡುವ ಹಾಡುಗಳು), ಬಂದಿಪಾಟ್ (ಮದುಮಗ ಮದುಮಗಳಿಗೆ ಹಾರ ಹಾಕಲು ಹೋಗುವಾಗ ಹಾಡುವ ಹಾಡುಗಳು), ತಾಲಪ್ಪಾಟ್ (ಮದುಮಗ ಮೊದಲ ರಾತ್ರಿ ಹೆಣ್ಣಿನ ಮನೆಗೆ ಹೋಗುವಾಗ ಹಾಡುವ ಹಾಡುಗಳು), ಒಪ್ಪಣೆ ಪಾಟ್ (ಮದುಮಗಳನ್ನು, ಆಕೆಯ ಒಡವೆ ವಸ್ತುಗಳನ್ನು ಮದುವೆಯ ಮಾರನೇ ದಿನ ನೆರೆಯವರು ನೋಡಲು ಬರುವಾಗ ಹಾಡುವ ಹಾಡುಗಳು), ಅಪ್ಪತೆ ಮಂಞಿಲತ್ತೆ ಪಾಟ್ (ಸೀಮಂತದ ಹಾಡುಗಳು), ಪೇತ್‍ಪಾಟ್ (ಪ್ರಸವ ಸಂದರ್ಭದಲ್ಲಿ ಸುಖ ಪ್ರಸವವಾಗಲು ಹಾಡುವ ಪ್ರಾರ್ಥನೆಯ ಹಾಡುಗಳು), ತಾಲೋಲಪ್ಪಾಟ್ (ಮಗುವನ್ನು ಲಾಲಿಸಲು ಹಾಡುವ ಹಾಡುಗಳು), ಮೊೈಲಾಂಜಿಪ್ಪಾಟ್ (ಮದುಮಗಳ ಕೈಗೆ ಮದರಂಗಿ ಹಚ್ಚುವಾಗ ಹಾಡುವ ಹಾಡುಗಳು), ಸುನ್ನತ್ ಮಂಙಿಲತ್ತೆ ಪಾಟ್ (ಗಂಡು ಮಕ್ಕಳ ಮುಂಜಿ ಕಾರ್ಯಕ್ರಮದಲ್ಲಿ ಹಾಡುವ ಹಾಡುಗಳು) ಈ ರೀತಿ ನಾನಾ ವಿಧದ ಹಾಡುಗಳು ಬ್ಯಾರಿಗಳಲ್ಲಿ ಚಾಲ್ತಿಯಲ್ಲಿತ್ತು. ಇಂತಹ ಹಾಡುಗಳನ್ನು ಸಾಮಾನ್ಯವಾಗಿ ವಿವಿಧ ರೀತಿಯ ಚಪ್ಪಾಳೆಗಳೊಂದಿಗೆ ಹಾಡಲಾಗುತ್ತಿತ್ತು. ಇಂತಹ ಹಾಡುಗಳಿಗೆ ಕೈಕೊಟ್ಟು ಪಾಟ್‍ಗಳೆನ್ನಲಾಗುತ್ತಿತ್ತು. ಇವುಗಳೆಲ್ಲವೂ ಜನಪದ ಹಾಡುಗಳೇ ಆಗಿದ್ದವು. ಇವುಗಳನ್ನು ಯಾರು ರಚಿಸಿದರು ಎಂದು ಹೇಳಲಾಗದು. ತಲೆಮಾರಿನಿಂದ ತಲೆಮಾರಿಗೆ ಬಾಯ್ದೆರೆಯ ಮೂಲಕ ಈ ರೀತಿಯ ಹಾಡುಗಳು ಹರಿದು ಬಂದಿದೆ. ಕ್ರಮೇಣ ಇವುಗಳು ಮರೆತುಹೋಗುವ ಸಾಧ್ಯತೆ ಹೆಚ್ಚಿದ್ದುದರಿಂದ ಅವುಗಳನ್ನು ಅರೆಬಿ-ಮಲಯಾಳಂ ಸಂಯುಕ್ತ ಲಿಪಿಯಲ್ಲಿ ಕೈಬರಹದ ಮೂಲಕ ಬರೆದಿಡುವ ಪರಿಪಾಠ ಪ್ರಾರಂಭವಾಯಿತು. ಅವುಗಳಿಗೆ ಪಾಟ್‍ರೆ ಕಡ್ಲಾಸ್ (ಹಾಡಿನ ಕಾಗದ) ಎನ್ನಲಾಗುತ್ತಿತ್ತು. ಈ ಪಾಟ್‍ರೆ ಕಡ್ಲಾಸ್‍ಗಳನ್ನು ಕ್ರಮೇಣ ಅರಬಿ-ಮಲಯಾಳಂ ಲಿಪಿಯಿಂದ ಕನ್ನಡ ಲಿಪಿಯಲ್ಲಿ ಬರೆಯುವ ಪರಿಪಾಠ ಪ್ರಾರಂಭವಾಯಿತು. ಆಧುನಿಕ ಬ್ಯಾರಿ ಸಾಹಿತ್ಯದ ಉಗಮ ಇಲ್ಲಿಂದಲೇ ಪ್ರಾರಂಭವಾಗುತ್ತದೆ.
ಆಧುನಿಕ ಬ್ಯಾರಿ ಸಾಹಿತ್ಯದಲ್ಲಿ ಈ ಮೇಲಿನದ್ದು ಒಂದು ಹಂತವಾದರೆ ಆ ಬಳಿಕದ್ದು ಆಯಾ ಸಮಾರಂಭಗಳಿಗಾಗಿ ರಚಿಸಿ ಹಾಡುವ ಕಾಲ ಮುಂದೆ ಬಂತು.
1950-60ರ ದಶಕದ ಮಧ್ಯೆ ಮದುವೆ ಮೊೈಲಾಂಜಿ ಸಮಾರಂಭಗಳಲ್ಲಿ ಕೊಡಪಾನ, ಅಲ್ಯುಮಿನಿಯಂ ಪಾತ್ರೆಗಳನ್ನು ಬಡಿಯುತ್ತಾ ಅವುಗಳಿಗೆ ಚಪ್ಪಾಳೆಯ ತಾಳದ ಜುಗಲ್ಬಂದಿ ಮಾಡಿ ಹಾಡುವ ಹಿರಿಯರಿದ್ದರು. ಅವರಲ್ಲಿ ಗುರುಪುರ ಸಾಲೆಯ ತಂಟೆ ಬಾವಾಕ ಸಹೋದರರು, ಅರ್ಕುಳ ಗ್ರಾಮದ ಫಕೀರ ಬ್ಯಾರಿ ಪ್ರಮುಖರು. ಫಕೀರ ಬ್ಯಾರಿಯವರು ಮೈಸೂರು ಹುಲಿ ಟಿಪ್ಪು ಸುಲ್ತಾನರ ಕುರಿತಂತೆ ರಚಿಸಿ ಹಾಡುತ್ತಿದ್ದ ಹಾಡುಗಳಲ್ಲದೇ, ಲಾವಣೆಗಳೂ ಬಹಳ ಪ್ರಸಿದ್ಧವಾಗಿದ್ದವು. “ಅರಸರೆ ತಿರಿಯುಂ ಸರದೋ ಮೈಸ್‍ರ” ಎಂಬ ಹಾಡು ಅದ್ಭುತವಾಗಿತ್ತು. ಟಿಪ್ಪುವಿನ ದುರಂತ ಬದುಕು, ಪರಾಕ್ರಮ, ಧೈರ್ಯ, ಹೋರಾಟಗಳನ್ನು ಕೆಲವೇ ಪದಗಳಲ್ಲಿ ಕಟ್ಟಿ ಕೊಡುವ ಈ ಹಾಡು ದೇಶಪ್ರೇಮವನ್ನು ಉಕ್ಕಿಸುವಂತಹದ್ದು.
ಬ್ಯಾರಿಗಳ ಮದುವೆ, ಮೊೈಲಾಂಜಿ ಸಂದರ್ಭಗಳಲ್ಲಿ 70 ರ ದಶಕಕ್ಕಿಂತ ಹಿಂದೆ ಬ್ಯಾರಿ ಜಾನಪದ ಹಾಡುಗಳನ್ನೇ ಹಾಡಲಾಗುತ್ತಿತ್ತಾದರೂ ಮುಂದೆ ಆಯಾ ಸಮಾರಂಭಗಳಿಗೆ ಅಲ್ಲಿನ ಕೇಂದ್ರ ವ್ಯಕ್ತಿಗಳನ್ನು (ಮದುಮಗ-ಮದುವೆಗಳು) ಊರಿನ ಹೆಸರನ್ನು ಬಳಸಿ ಪದ್ಯ ರಚಿಸಿ ಹಾಡುವ ಕಾಲ ಶುರುವಾಯಿತು. ಈ ಕಾಲದಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿದ ನಾಲ್ಕು ಪ್ರಮುಖ ಕವಿಗಳೆಂದರೆ “ರಹೀಂ ಬಿ.ಸಿ.ರೋಡ್, ಇಬ್ರಾಹಿಂ ತಣ್ಣೀರುಬಾವಿ, ಬೊಬ್ಬಾಟಿ ಮುಹಮ್ಮದ್, ಕಾಟಿಪಳ್ಳ ಮಯ್ಯಾದ್ದಿಯಾಕ”. ಇವರನ್ನು ಆಧುನಿಕ ಬ್ಯಾರಿ ಸಾಹಿತ್ಯದ ನಾಲ್ಕು ಆಧಾರಸ್ತಂಭಗಳೆಂದರೆ ಅತಿಶಯೋಕ್ತಿಯಾಗದು. ಇವರೆಲ್ಲಾ ತಮ್ಮ ಸಾಹಿತ್ಯದ ಪ್ರದರ್ಶನಕ್ಕೆ ವೇದಿಕೆಯಾಗಿಸಿದ್ದು ಬ್ಯಾರಿಗಳ ಶುಭಸಮಾರಂಭಗಳನ್ನಾಗಿದೆ.
ರಹೀಂ ಬಿ.ಸಿ.ರೋಡ್ ಹೊಟ್ಟೆಪಾಡಿಗಾಗಿ ಮದುವೆ ಮನೆಗಳಲ್ಲಿ ಅಲ್ಯುಮಿನಿಯಂ ಪಾತ್ರೆಗಳನ್ನೇ ಸಂಗೀತೋಪಕರಣಗಳನ್ನಾಗಿಸಿ ಹಾಡುತ್ತಿದ್ದರು. ಇವರು ಮೊದಮೊದಲು ಬ್ಯಾರಿ ಜಾನಪದ ಹಾಡುಗಳನ್ನೇ ಹಾಡುತ್ತಿದ್ದರು. ಒಟ್ಟಿನಲ್ಲಿ ಬ್ಯಾರಿ ಜಾನಪದ ಹಾಡುಗಳಿಗೆ ಆಧುನಿಕ ಸ್ಪರ್ಶದ ಮುಖಾಂತರ ಜೀವಕೊಟ್ಟವರು. ಆಧುನಿಕ ಬ್ಯಾರಿ ಸಾಹಿತ್ಯದ ಆಧಾರಸ್ತಂಭಗಳೆಂದು ಈ ಮೇಲೆ ಗುರುತಿಸಲ್ಪಟ್ಟ ನಾಲ್ಕು ಕವಿಗಳು. ಆ ಬಳಿಕ ಅತ್ಯಂತ ಸರಳ ಭಾಷೆಯಲ್ಲಿ ತಮಾಷೆಯ, ವಿನೋದದ ಹಾಡುಗಳಲ್ಲದೇ, ನೈತಿಕ ಪಾಠಗಳನ್ನು ಬೋಧಿಸುವ ಹಾಡುಗಳನ್ನು ಸ್ವತಃ ರಚಿಸತೊಡಗಿದ್ದರು. ರಹೀಂ ಬಿ.ಸಿ.ರೋಡ್‍ರವರಂತೂ ಬೀಡಿ ಉದ್ಯಮದ ಜಾಹೀರಾತಿಗಾಗಿ ಬ್ಯಾರಿ ಹಾಡುಗಳನ್ನು ರಚಿಸಿ ಹಾಡುತ್ತಿದ್ದರು.
1983ರಲ್ಲಿ ಬ್ಯಾರಿ ಸಾಹಿತ್ಯ ಜಗತ್ತಿನಲ್ಲಿ ಬಿ.ಎ.ಶಂಸುದ್ದೀನ್ ಮಡಿಕೇರಿಯವರು ಹೊಸ ಯುಗವೊಂದಕ್ಕೆ ನಾಂದಿ ಹಾಡಿದರು. ಶಂಸುದ್ದೀನ್ ಮಡಿಕೇರಿಯವರ “ಪುದಿಯೆ ಬ್ಯಾರಿ ಪಾಟ್‍ಂಙ” ಎಂಬ ಶೀರ್ಷಿಕೆಯಡಿಯಲ್ಲಿ ಕ್ಯಾಸೆಟ್ (ಧ್ವನಿಸುರುಳಿ) ಬಿಡುಗಡೆಯಾಯಿತು. ಈ ಧ್ವನಿ ಸುರುಳಿಯ “ತೆಂಙïಡೊ ತೋಟತ್ತ್‍ಕಲಿಕುಂಬೊ” ಎಂಬ ಹಾಡು ಬಹಳ ಜನಪ್ರಿಯವಾಗಿತ್ತು. ಈ ಧ್ವನಿಸುರುಳಿಯ ಹೆಸರಿನಲ್ಲಿ “ಬ್ಯಾರಿ” ಎಂಬ ಪದವಿರುವ ಕಾರಣಕ್ಕೆ ಇದು ಬ್ಯಾರಿಗಳನ್ನು ಅವಮಾನ ಮಾಡಲು ಬಳಸಿದ ತಂತ್ರ ಎಂದು ಭಾರೀ ಪ್ರತಿರೋಧ ಕಂಡುಬಂತು. ಆದರೆ ಶಂಸುದ್ದೀನ್ ಇದ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ.
ಆ ಬಳಿಕ ರಹೀಂ ಬಿ.ಸಿ.ರೋಡ್ ಅವರು “ಇಂಗ್ಲಿಸ್ ಪಡ್ಚೋ ಪನ್ನ್” ಎಂಬ ಕ್ಯಾಸೆಟ್ ಹೊರತಂದರು. ಆ ಬಳಿಕ ಮುಹಮ್ಮದಾಲಿಯವರ ಬ್ಯಾರಿ ಬಾಸೆಲ್ ಇಲ್ಮೀ ಬೈತ್ ಎಂಬ ಹಾಡುಗಳ ಕ್ಯಾಸೆಟ್ ಹೊರಬಂತು. 1994 ರಲ್ಲಿ ಮುಹಮ್ಮದಾಲಿಯವರ “ಬ್ಯಾರಿಂಙ ಆರಂಙ” ಎಂಬ ಭಾಷಣದ ಕ್ಯಾಸೆಟ್, 1996 ರಲ್ಲಿ ಅವರು “ಲಾ ಇಲಾಹ ಇಲ್ಲಲ್ಲಾಹ್” ಎಂಬ ಹಾಡುಗಳ ಕ್ಯಾಸೆಟ್ ರಚಿಸಿದರು. ತನ್ಮಧ್ಯೆ ರಹೀಂ ಬಿ.ಸಿ.ರೋಡ್‍ರ ಹಾಡುಗಳ ಕೆಲವು ಕ್ಯಾಸೆಟ್‍ಗಳು ಹೊರಬಂದವು.
ಬ್ಯಾರಿ ಸಾಹಿತ್ಯ ಮುದ್ರಣ ಮಾಧ್ಯಮಕ್ಕೆ ಕಾಲಿಟ್ಟದ್ದು 20ನೇ ಶತಮಾನದ ಕೊನೆಯ ದಶಕದಲ್ಲಿ ಬೆಂಗಳೂರಿನ ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್‍ನ ಮುಖವಾಣಿ “ಬ್ಯಾರಿ ನ್ಯೂಸ್”, “ಬ್ಯಾರಿ ಟೈಂಸ್” ನಿಯತಕಾಲಿಕೆಗಳು ಪ್ರಾರಂಭವಾದವು. ಅವುಗಳಲ್ಲಿ ಬ್ಯಾರಿ ಅಂಕಣ ಬರಹಗಳು, ಗಾದೆಗಳು, ಒಗಟುಗಳು, ಧಾರವಾಹಿ, ನಗೆಬರಹ ಇತ್ಯಾದಿಗಳು ಪ್ರಕಟವಾದವು. ಬ್ಯಾರಿ ನ್ಯೂಸ್, ಬ್ಯಾರಿ ಟೈಂಸ್, ಕನ್ನಡ ಪತ್ರಿಕೆಗಳಾಗಿದ್ದವು. ಅವುಗಳಲ್ಲಿ ಬ್ಯಾರಿ ಸಾಹಿತ್ಯಗಳು ಪ್ರಕಟವಾಗುತ್ತಿದ್ದವಷ್ಟೆ. ಸಂಪೂರ್ಣ ಬ್ಯಾರಿ ಭಾಷೆಯ ಪತ್ರಿಕೆ “ಬ್ಯಾರಿ” ಎಂಬ ಮೊದಲ ಪತ್ರಿಕೆ ಹೊರತಂದ ಕೀರ್ತಿ ಅಕ್ಬರ್ ಉಳ್ಳಾಲರದ್ದು. ಅದರಲ್ಲಿ ಇಕ್ಬಾಲ್ ಕುತ್ತಾರ್‍ರವರು ವಿಫುಲವಾಗಿ ಬ್ಯಾರಿ ಸಾಹಿತ್ಯಗಳನ್ನು ಬರೆದರು. ಬಶೀರ್ ಬೈಕಂಪಾಡಿ ಮತ್ತು ರಹೀಂ ಉಚ್ಚಿಲ್ ಅವರು “ಬ್ಯಾರಿ ವಾರ್ತೆ” ಎಂಬ ನಿಯತಕಾಲಿಕ ಪ್ರಾರಂಭಿಸಿ ಅದರಲ್ಲಿ ಬ್ಯಾರಿ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದರು. ಪ್ರಸ್ತುತ ಬಶೀರ್ ಬೈಕಂಪಾಡಿಯವರ ಸಂಪಾದಕತ್ವದಲ್ಲಿ ಹೊಸ ರೋಪದಲ್ಲಿ ಬ್ಯಾರಿ ವಾರ್ತೆ ಮಾಸಿಕ ವೈವಿಧ್ಯಮಯ ಬರಹಗಳೊಂದಿಗೆ ಹೊರಬರುತ್ತಿದೆ. ಆ ಬಳಿಕ ಹುಸೈನ್ ಕಾಟಿಪಳ್ಳರವರ “ನಿಲಾವು” ಮಾಸಿಕ ಪ್ರಾರಂಭವಾಯಿತು. ಇದರಲ್ಲಿ ಬ್ಯಾರಿ ಭಾಷೆಯ ವೈಚಾರಿಕ ಸಾಹಿತ್ಯಗಳಿಗೆ ಹುಸೈನ್ ಕಾಟಿಪಳ್ಳ ಹೆಚ್ಚಿನ ಅವಕಾಶ ನೀಡಿದರು. ಜಯಕಿರಣ ಎಂಬ ಸಂಜೆ ದೈನಿಕದಲ್ಲಿ ವಾರಕ್ಕೊಮ್ಮೆ ಬ್ಯಾರಿ ಭಾಷೆಯ ಬರಹಗಳಿಗೆ ಅವಕಾಶ ನೀಡಲಾಗುತ್ತಿತ್ತು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾದ ಬಳಿಕ ಅವರ ಮುಖವಾಣಿ “ಬೆಲ್ಕಿರಿ”ಯಲ್ಲಿ ಧಾರಾಳವಾಗಿ ಬ್ಯಾರಿ ಸಾಹಿತ್ಯ ಪ್ರಕಟವಾಗಲಾರಂಭವಾದವು.
ದೇರಳಕಟ್ಟೆ ಸುತ್ತಮುತ್ತಲ ಗ್ರಾಮೀಣ ಪರಿಸರದ ಬ್ಯಾರಿ ಸಾಹಿತಿ-ಕಲಾವಿದರು ಸೇರಿ ಕಟ್ಟಿದ ಸಂಘಟನೆ “ಮೇಲ್ತೆನೆ”. ಇವರು ಇಸ್ಮತ್ ಫಜೀರ್‍ರವರ ಸಂಪಾದಕತ್ವದಲ್ಲಿ ಮೇಲ್ತೆನೆ ಎಂಬ ಬ್ಯಾರಿ ಸಾಹಿತ್ಯಕ್ಕೆ ಮೀಸಲಾದ ದ್ವೈಮಾಸಿಕ ಜರ್ನಲ್ (ಇ-ಮ್ಯಾಗಝಿನ್) ಹೊರತರುತ್ತಿದ್ದಾರೆ. ಕತೆ, ಕವನ, ವೈಚಾರಿಕ ಬರಹಗಳನ್ನೊಳಗೊಂಡು ಪ್ರಕಟವಾಗುತ್ತಿರುವ ಮೇಲ್ತೆನೆ ಬ್ಯಾರಿ ಸಾಹಿತ್ಯಕ್ಕೆ ಹಲವಾರು ಯುವ ಲೇಖಕ-ಕವಿಗಳನ್ನು ಪರಿಚಯಿಸುತ್ತಿದೆ. ಹಲವಾರು ಮಹಿಳಾ ಲೇಖಕಿಯರನ್ನೂ ಮೇಲ್ತೆನೆ ಬೆಳಕಿಗೆ ತರುತ್ತಿದೆ.
ಅತ್ತ ಮುದ್ರಣ ಮಾಧ್ಯಮದಲ್ಲಿ ಬ್ಯಾರಿ ಸಾಹಿತ್ಯ ತಡವಾಗಿ ರೂಪುಗೊಳ್ಳುತ್ತಿದ್ದಂತೆಯೇ ಇತ್ತ ಕ್ಯಾಸೆಟ್‍ಗಳ ಭರಾಟೆಯೂ ಜೋರಾಯಿತು. ಈ ಮದ್ಯೆ ನೂರಾರು ಬ್ಯಾರಿ ಧ್ವನಿಸುರುಳಿಗಳು ಹೊರಬಂದವು. ಮೊದಮೊದಲು ಈ ಕ್ಯಾಸೆಟ್‍ಗಳಿಗೆ ಭಾರೀ ಬೇಡಿಕೆ ಇತ್ತು. ನಂತರದ ದಿನಗಳಲ್ಲಿ ಬೇಡಿಕೆಯ ಪ್ರಮಾಣದಲ್ಲಿ ಇಳಿಮುಖವಾಯಿತು. ಹೀಗೆ ಬಂದ ಕ್ಯಾಸೆಗಳಲ್ಲಿ ಹೆಚ್ಚಿನವುಗಳಿಗೆ ಸ್ವಂತ ಟ್ಯೂನ್‍ಗಳಿರಲಿಲ್ಲ. ಇದೀಗ ಬ್ಯಾರಿ ಟೆಲಿಚಿತ್ರ, ಬ್ಯಾರಿ ಕಿರುಚಲನಚಿತ್ರ, ಬ್ಯಾರಿ ಕಥಾಪ್ರಸಂಗ, ಬ್ಯಾರಿ ನಸೀಹತ್ ಮಜ್ಲಿಸ್ ಆಡಿಯೋ ವೀಡಿಯೋ ಸಿಡಿಗಳು ಹೊರಬರುತ್ತಲಿವೆ. ಬ್ಯಾರಿ ಕವನ ವಾಚನ, ಬ್ಯಾರಿ ಕವಿಗೋಷ್ಠಿ, ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮ, ಬ್ಯಾರಿ ಕವ್ವಾಲಿ, ಬ್ಯಾರಿ ಗಝಲ್, ಬ್ಯಾರಿ ಚಿರಿಕಲಿ, ಬ್ಯಾರಿ ಪ್ರಹಸನ, ಬ್ಯಾರಿ ರಸಪ್ರಶ್ನೆ ಕಾರ್ಯಕ್ರಮಗಳು ಜರಗುತ್ತಲಿವೆ. ಇವೆಲ್ಲಾ ಬ್ಯಾರಿ ಸಾಹಿತ್ಯದ ಬೆಳವಣಿಗೆಯ ಮಜಲುಗಳಾಗಿವೆ.
ಬ್ಯಾರಿ ಭಾಷೆಯಲ್ಲಿ ಹೊರಬಂದ ಕೆಲವೇ ಕೆಲವು ಸಿನಿಮಾಗಳಲ್ಲಿ, ಮಾಮಿ ಮರ್ಮೋಲು, ಬ್ಯಾರಿ, ಅಬ್ಬ ಮುಖ್ಯವಾದವುಗಳು.
ಅಲ್ತಾಫ್ ಚೊಕ್ಕಬೆಟ್ಟುರವರ
” ಬ್ಯಾರಿ ” ಎಂಬ ಸಿನಿಮಾಕ್ಕೆ ಪ್ರತಿಷ್ಠಿತ ಸ್ವರ್ಣ ಕಮಲ ಪ್ರಶಸ್ತಿಯೂ ಸಂದಿದೆ. ಎಂ.ಜಿ.ರಹೀಂ ನಿರ್ಮಿಸಿ, ನಿರ್ದೇಶಿಸಿರುವ ಇತ್ತೀಚೆಗಷ್ಟೆ ತೆರೆ ಕಂಡ ಅಬ್ಬ ನಿರೀಕ್ಷೆ ಮೂಡಿಸಿರುವ ಬ್ಯಾರಿ ಸಿನಿಮಾ.ಬಹುಭಾಷಾ ಸಾಹಿತಿ, ಕವಿ ಮುಹಮ್ಮದ್ ಬಡ್ಡೂರ್, ಬಹುಭಾಷಾ ನಟ ಎಂ.ಕೆ.ಮಠ ಇದರ ತಾರಾಗಣದಲ್ಲಿದ್ದಾರೆ.

ಬ್ಯಾರಿ ಕಾದಂಬರಿ:ಬ್ಯಾರಿ ಭಾಷೆಯಲ್ಲಿ ಇದುವರೆಗೆ ಪ್ರಕಟಗೊಂಡ ಕಾದಂಬರಿಗಳ ಸಂಖ್ಯೆ ಕೇವಲ ಮೂರು. ಮೊದಲ ಕಾದಂಬರಿ ಹಂಝ ಮಲಾರ್‌ರ “ಒರು ಪೆನ್ನ್‌ರೆ ಕಿನಾವು”
ಎರಡನೆಯದ್ದು ಕನ್ನಡದ ಪ್ರಸಿದ್ಧ ಕತೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿಯವರ “ಕಚ್ಚಾದ”. ಬ್ಯಾರಿಯಲ್ಲಿ ಪ್ರಕಟವಾದ ಮೂರನೇ ಕಾದಂಬರಿ ಯು.ಎ.ಖಾಸಿಂ ಉಳ್ಳಾಲರ ” ತರವಾಡ್”.
ಬ್ಯಾರಿ ಸಾಹಿತ್ಯದ ಇತರ ಪ್ರಕಾರಗಳಿಗೆ ಹೋಲಿಸಿದರೆ ಕಾದಂಬರಿಗಳ ಸಂಖ್ಯೆ ಅತೀ ಕಡಿಮೆ.

ಬ್ಯಾರಿ ಸಂಶೋಧನೆ:
ಬ್ಯಾರಿ ಭಾಷೆ ,ಜನಾಂಗ, ಸಂಸ್ಕೃತಿ , ಕಲೆ,ಜಾನಪದ ಇತ್ಯಾದಿಗಳ ಕುರಿತಂತೆ ಅಬೂ ರೈಹಾನ್ ನೂರಿ ಮೊಟ್ಟ ಮೊದಲ ಸಂಶೋಧಕ.‌ಅವರ “ಮೈಕಾಲ” ಸಂಶೋಧಕರಿಗೊಂದು ಶ್ರೇಷ್ಠ ಆಕರ ಗ್ರಂಥ.
ಬ್ಯಾರಿಯ ಕುರಿತಂತೆ ಈ ವರೆಗೆ ಮಂಡಿಸಲಾಗಿದ್ದು ಒಂದೇ ಒಂದು ಪಿ.ಎ‍.ಡಿ ಪ್ರಬಂಧ. ಅದು ಸುಶೀಲಾ ಉಪಾಧ್ಯಾಯರು 1969ರಲ್ಲಿ ಮುಂಬೈ ವಿಶ್ವವಿದ್ಯಾನಿಲಯಕ್ಕೆ ಮಂಡಿಸಿದ್ದು.‌
ಡಾ.ವಹಾಬ್ ದೊಡ್ಡಮನೆ ತುಳುನಾಡಿನ ಮುಸ್ಲಿಮರು ಸಂಶೋಧನಾ ಗ್ರಂಥ‌ ಪ್ರಕಟಿಸಿದ್ದಾರೆ.ಬಿ.ಎಂ. ಇಚ್ಲಂಗೋಡು ಅವರು ಇಂಗ್ಲಿಷ್ ‌ನಲ್ಲಿ Beary’s of Tulunadu ಎಂಬ ಗ್ರಂಥ ಪ್ರಕಟಿಸಿದ್ದಾರೆ.ಹಂಝ ಮಲಾರ್ ಅವರು “ಬ್ಯಾರಿ ಮುಸ್ಲಿಮರು- ಒಂದು ಅಧ್ಯಯನ” ಎಂಬ ಗ್ರಂಥ ಪ್ರಕಟಿಸಿದ್ದಾರೆ.
ಎಂ.ಬಿ.ಅಬ್ದುರ್ರಹ್ಮಾನ್ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಕಾಲದಲ್ಲಿ ವಿವಿಧ ಸಂಶೋಧಕರ ಕಿರು ಸಂಶೋಧನಾ ಪ್ರಬಂಧಗಳ ಸಂಕಲನ “ಪೆರಿಮೆ” ಪ್ರಕಟಿಸಿದ್ದಾರೆ.

ಬ್ಯಾರಿ ಕತೆಗಳು: ಒಂದೊಮ್ಮೆ ಬ್ಯಾರಿ ಕಥಾ ಕ್ಷೇತ್ರದಲ್ಲಿ ಹಂಝ ಮಲಾರ್, ಯು.ಎ.ಖಾಸಿಮ್ ಉಳ್ಳಾಲ್, ಮರ್ಯಂ ಇಸ್ಮಾಯಿಲ್ ಉಳ್ಳಾಲ್ ಬೈಲ್, ರಝಿಯಾ ಎಸ್‌ಜೆಬಿ ಎಂಬ ಬೆರಳೆಣಿಕೆ ಹೆಸರುಗಳು ಮಾತ್ರ ಕೇಳಿ ಬರುತ್ತಿತ್ತಾದರೂ ಇತ್ತೀಚಿನ ದಿನಗಳಲ್ಲಿ ಪ್ರವಾಹೋಪಾದಿಯಲ್ಲಿ ಹೊಸ ಹೊಸ ಕತೆಗಾರರು/ ಕತೆಗಾರ್ತಿಯರು ಬ್ಯಾರಿಯಲ್ಲಿ ಕತೆ ಬರೆಯುತ್ತಿದ್ದಾರೆ.

ಬ್ಯಾರಿ ಕಾವ್ಯ : ಒಂದು ಕಾಲದಲ್ಲಿ ರಹೀಂ ಬಿ.ಸಿ.ರೋಡ್, ಸಂಶುದ್ದೀನ್ ಮಡಿಕೇರಿ,ಮುಹಮ್ಮದ್ ಬಡ್ಡೂರ್, ಬಶೀರ್ ಕಿನ್ಯ, ಇಬ್ರಾಹಿಂ ತಣ್ಣೀರು ಬಾವಿ, ಹುಸೈನ್ ಕಾಟಿಪಳ್ಳರಂತಹ ಬೆರಳೆಣಿಕೆಯ ಕವಿಗಳಿದ್ದರು ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಸಂಖ್ಯೆಯ ಬ್ಯಾರಿ ಕವಿಗಳು ಕಾವ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮಹಿಳಾ ಸಾಹಿತಿಗಳು: ಇತ್ತೀಚಿನ ದಿನಗಳಲ್ಲಿ ಹಲವಾರು ಬ್ಯಾರಿ ಮಹಿಳಾ ಸಾಹಿತಿಗಳು ಬೆಳಕಿಗೆ ಬಂದಿದ್ದಾರೆ. ಅವರಲ್ಲಿ ಮರ್ಯಂ ಇಸ್ಮಾಯಿಲ್,ಶಮೀಮಾ ಕುತ್ತಾರ್, ಮಿಸ್ರಿಯಾ. ಐ.ಪಜೀರ್, ಆಯಿಶಾ.ಯು.ಕೆ., ಝುಲೇಖಾ ಮುಮ್ತಾಝ್ ಮುಂತಾದವರು ನಿರಂತರವಾಗಿ ಬ್ಯಾರಿ ಭಾಷೆಯಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಲ್ಲದೇ ಆಗೊಮ್ಮೆ,ಈಗೊಮ್ಮೆ ಬರೆಯುವ ಅನೇಕ
ಲೇಖಕಿಯರು ಬ್ಯಾರಿ ಭಾಷೆಯಲ್ಲಿ ಅನೇಕರಿದ್ದಾರೆ.

ಲೇಖಕರ ಪರಿಚಯ;

ಲೇಖಕ ಇಸ್ಮತ್ ಪಜೀರ್ ಬ್ಯಾರಿ ಭಾಷೆ,ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲೆ ಕೆಲಸ ಮಾಡುತ್ತಿರುವ ಪ್ರಮುಖ ಯುವ ವಿದ್ವಾಂಸರು. ಕನ್ನಡದಲ್ಲಿ‌ ಏಳು, ಬ್ಯಾರಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ತಲಾ ಒಂದೊಂದು ಕೃತಿ ರಚಿಸಿರುತ್ತಾರೆ. ಇವರ “ಅಕ್ಷರ ಸಂತ :ಹರೇಕಳ ಹಾಜಬ್ಬ ” ಎಂಬ ವ್ಯಕ್ತಿ ಚಿತ್ರವು ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಯೆನೆಪೋಯ ವಿಶ್ವವಿದ್ಯಾನಿಯದ ಬಿ.ಕಾಂ.ಪದವಿಗೆ ಪಠ್ಯವಾಗಿದೆ.
ಇವರು ಇನ್ನೊಂದು‌ ಪ್ರಬಂಧವನ್ನು ಕೇರಳ ಸರಕಾರದ ಎಂಟನೇ ತರಗತಿಯ ಕನ್ನಡ ಪಠ್ಯದಲ್ಲೂ‌ ಅಳವಡಿಸಲಾಗಿದೆ. ವಾರ್ತಾಭಾರತಿ ಪತ್ರಿಕೆಯಲ್ಲಿ ಅಂಕಣ ಬರಹಗಳನ್ನು ಬರೆಯುತ್ತಿದ್ದಾರೆ ಮಾತ್ರವಲ್ಲದೇ,ಗೌರಿ ಲಂಕೇಶ್ ಪತ್ರಿಕೆಯಲ್ಲೂ ನಿರಂತರವಾಗಿ ಬರೆಯುತ್ತಿದ್ದರು.

LEAVE A REPLY

Please enter your comment!
Please enter your name here