ಲೇಖಕರು : ಲೋಲಾಕ್ಷಿ. ಬಿ.ಸಿ ಸಂತ ಅಲೋಶಿಯಸ್ ಶಿಕ್ಷಣ ತರಬೇತಿ ಸಂಸ್ಥೆ, ಮಂಗಳೂರು.

ಬಿ. ಎಡ್ ಪದವಿಯಲ್ಲಿ ಇಂಟರ್ನಶಿಪ್ ಎಂಬ ಕಲಿಕಾ ಪ್ರಕ್ರಿಯೆಯು ಅತ್ಯಂತ ಮಹತ್ವಪೂರ್ಣವಾದ ಘಟ್ಟಗಳಲ್ಲಿ ಒಂದಾಗಿದೆ. ಬಿ. ಎಡ್ ಅಂತಿಮ ವರ್ಷದ ಕಲಿಕಾ ಪ್ರಕ್ರಿಯೆಯಲ್ಲಿ ಇಂಟರ್ನಶಿಪ್ ನ ಒಂದು ಹಂತವು ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮನ್ನು ತಾವು ತಮ್ಮ ತನವನ್ನು ಗುರುತಿಸಿಕೊಳ್ಳಲು ಒಂದು ಉತ್ತಮವಾದ ವೇದಿಕೆ ಎಂದು ಹೇಳಿದರೆ ತಪ್ಪಾಗಲಾರದು.

ಈ ಒಂದು ವಿಷಯಕ್ಕೆ ಸಂಬಂಧಿಸಿದಂತೆ 50 ದಿನಗಳ ಕಾಲದ ಇಂಟರ್ನಶಿಪ್ ಅನ್ನು ದಿನಾಂಕ 25/10/20210ರ ರಿಂದ ನಿಗದಿಪಡಿಸಿತು. ಇದರಂತೆಯೇ ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆಯ ಶಾಲೆಯ ಹೆಸರುಗಳನ್ನು ತಿಳಿಸಿ ನಂತರ ಕಾಲೇಜಿನಿಂದ ಒಪ್ಪಿಗೆ ಪತ್ರವನ್ನು ನೀಡಲಾಗಿತ್ತು. ನಾನು ಮಂಗಳೂರಿನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರೂ ಕೂಡ ನನಗೆ ನನ್ನದೇ ಊರಿನಲ್ಲಿ ಇಂಟರ್ನಶಿಪ್ ಮಾಡುವ ಒಳ್ಳೆಯ ಅವಕಾಶ ಸಿಕ್ಕಿತು. ನಾನು ಸಕಾ೯ರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಮೂಡಿಗೆರೆ ಈ ಶಾಲೆಯನ್ನು ಆಯ್ಕೆ ಮಾಡಿಕೊಂಡೆನು. ಇದಕ್ಕಾಗಿ ದೂರದ ಮಂಗಳೂರಿನಿಂದ ನನ್ನ ಊರದ ಮೂಡಿಗೆರೆಗೆ ಬಹಳ ಕುತೂಹಲದಿಂದ ಬಂದು ಇಳಿದೆ. ಮೊದಲನೆಯ ದಿನದ ಶಾಲೆಯ ಪ್ರವೇಶ ಒಬ್ಬ ಶಿಕ್ಷಕಿಯಾಗಿ ಆ ಒಂದು ಅನುಭವ ಚಿರಸ್ಮರಣೀಯ.

ಶಾಲಾ ಶಿಕ್ಷಕರ ಕೊಠಡಿಯ ಒಳಗೆ ನನ್ನ ಪ್ರವೇಶ ಮತ್ತು ಅಲ್ಲಿನ ಶಿಕ್ಷಕರು ವರ್ತಿಸಿದ ರೀತಿ ನನ್ನನ್ನು ಮಂತ್ರ ಮುಗ್ಧಗೊಳ್ಳುವಂತೆ ಮಾಡಿತ್ತು. ಏಕೆಂದರೆ ನಾನು ಒಬ್ಬ ವಿದ್ಯಾರ್ಥಿ ಶಿಕ್ಷಕಿಯಾಗಿದ್ದರೂ ಕೂಡ ತಮ್ಮವರಲ್ಲಿಯೇ ಒಬ್ಬರಂತೆ ಎಂಬ ಉತ್ತಮ ಭಾವನೆಯಿಂದ ನೋಡಿಕೊಂಡ ರೀತಿ ಮನಸಿಗೆ ಮುಟ್ಟಿತು. ಶಿಕ್ಷಕರು ಎಲ್ಲರೂ ಕುಳಿತುಕೊಳ್ಳುವ ಕೋಣೆಯಲ್ಲಿಯೇ ಒಂದು ಟೇಬಲ್ ನ್ನು ಸಿದ್ಧಪಡಿಸಿ ನನ್ನನ್ನು ಅವರು ಕುಳಿತುಕೊಳ್ಳುವ ಕೋಣೆಯಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟರು. ಇದು ನನಗೆ ಸ್ವಲ್ಪ ಮುಜುಗರವನ್ನು ಉಂಟುಮಾಡಿತ್ತು. ಏಕೆಂದರೆ ಹಿರಿಯರು ಅನುಭವಿ ಶಿಕ್ಷಕರ ಮುಂದೆ ಒಬ್ಬ ವಿದ್ಯಾರ್ಥಿ ಶಿಕ್ಷಕಿಯಾಗಿ ಶಿಕ್ಷಕರ ಸಾಲಿನಲ್ಲಿ ನಿಂತುಕೊಳ್ಳುವುದಕ್ಕೆ ಹಾಗೂ ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ಈ ಒಂದು ಶಿಕ್ಷಕರ ದೊಡ್ಡ ಸಮೂಹದಲ್ಲಿ ನನ್ನ ಹೈಸ್ಕೂಲ್ ವಿದ್ಯಾಭ್ಯಾಸದ ಅವದಿಯಲ್ಲಿ ನಮಗೆ ಪಾಠವನ್ನು ಮಾಡಿದ ಶಿಕ್ಷಕಿಯು ಕೂಡ ಇದ್ದರು. ಇದರಿಂದಾಗಿ ನನಗೆ ಎಲ್ಲಾ ಶಿಕ್ಷಕರ ಒಟ್ಟಿಗೆ ಕುಳಿತು ಕೊಳ್ಳಲು ಸ್ವಲ್ಪ ಮಟ್ಟಿಗೆ ಮುಜುಗರ ಆಗುತ್ತಿತ್ತು. ಹೀಗೆ ದಿನಗಳು ಉರುಳುತ್ತಾ ಭೋದನಾ ಪ್ರಕ್ರಿಯೆಗೆ ಮುಂದಾದೆ.

ಭೋದನಾ ಪ್ರಕ್ರಿಯೆಯು ಹೇಳಿದಷ್ಟು ಸುಲಭದ್ದಲ್ಲ. ಅದಕ್ಕೆ ಹೆಚ್ಚಿನ ಪ್ರಮಾಣದ ತಯಾರಿ, ಆಯಾ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳು, ಪ್ರಸ್ತುತ ಪಡಿಸುವ ಬಗೆ, ಭೋದನೋಪಕರಣಗಳು ಮೊದಲಾದವುಗಳು ಮುಖ್ಯವಾಗಿರುತ್ತದೆ. ಇದೆಲ್ಲದನ್ನು ಮೀರಿ ಮಕ್ಕಳನ್ನು ನೋಡಿಕೊಳ್ಳುವ ಬಗೆ ಜೊತೆಗೆ ನಾವು ಸಿದ್ಧ ಮಾಡಿಕೊಂಡು ಬಂದ ವಿಷಯ ಮಾಹಿತಿ ಬುತ್ತಿಯನ್ನು ಹೇಗೆ ಮಕ್ಕಳ ಮುಂದೆ ಪ್ರಸ್ತುತ ಪಡಿಸಬೇಕು ಎಂಬುದನ್ನು ಮೊದಲು ತಿಳಿದು ಮುನ್ನುಗ್ಗಬೇಕಾಗುತ್ತದೆ. ಒಬ್ಬ ಶಿಕ್ಷಕನಿಗೆ ವಾಕ್ಚಾತುರ್ಯ ಎಂಬುದು ಬಹಳ ಮುಖ್ಯವಾಗಿ ಇರಬೇಕಾಗುತ್ತದೆ. ಆದರೆ ನಾನು ಇದಕ್ಕೆ ಸಂಪೂರ್ಣ ತದ್ವಿರುದ್ಧ. ಮಾತು ಕಡಿಮೆ, ಮುಜುಗರ ಸ್ವಭಾವದ ವ್ಯಕ್ತಿತ್ವ. ಈ ಎಲ್ಲಾವೂ ಇಲ್ಲದ ನಾನು ತರಗತಿ ಕೋಣೆಗೆ ತೆರಳಿದಾಗ ನನ್ನ ಪರಿಸ್ಥಿತಿ ಹೇಳತಿರದು. ಒಂದು ತರಗತಿ ಕೋಣೆ ಎಂದರೆ 30-35 ವಿದ್ಯಾರ್ಥಿಗಳು ಇರುವ ಜಾಗ. ಹೇಗೆ ನಮ್ಮ ಕೈಬೆರಳುಗಳು ಒಂದಕ್ಕಿಂತ ಒಂದು ಸರಿಸಮವಾಗಿ ಇರುವುದಿಲ್ಲವೋ ಹಾಗೆ ಒಂದು ತರಗತಿ ಕೋಣೆಯ ವಿದ್ಯಾರ್ಥಿಗಳು ಒಬ್ಬರಂತೆ ಒಬ್ಬರು ಗುಣದಲ್ಲಿ ಆಗಲಿ ಸ್ವಭಾವದಲ್ಲಾಗಲಿ ತಾವು ಬೆಳೆದು ಬಂದ ರೀತಿ ಪರಿಸರ ಆಗಲಿ ಒಂದೇ ರೀತಿಯದ್ದಾಗಿರುವುದಿಲ್ಲ. ಈ ಒಂದು ಅಂಶವು ನನಗೆ ತುಂಬಾ ಸವಾಲಿನ ಸಂಗತಿಯಾಗಿತ್ತು. ಆದರೂ ಕೂಡ ಎದೆಗುಂದದೆ ಎಲ್ಲಾ ಮಕ್ಕಳ ಚಲನವಲನಗಳನ್ನು ಗಮನಿಸಿ ಅವರನ್ನು ಪಾಠದ ಕಡೆಗೆ ಗಮನ ಹರಿಸುವಂತೆ ಮಾಡಿ ನನಗೆ ನೀಡಿದ ತಲಾ 10-10 ತರಗತಿಗಳ ಜೊತೆಗೆ ನಾನು ಇದ್ದಂತಹ 50 ದಿನಗಳಲ್ಲಿ ಇನ್ನೂ ಕೆಲವು ಪಾಠಗಳನ್ನು ಮುಗಿಸಿದೆ. ಮಕ್ಕಳ ಮನಸಿನಲ್ಲಿ ಭಾಳ ಒಳ್ಳೇವ್ರ್ ನಮ್ ಮಿಸ್ಸು ಏನ್ ಹೇಳಿದ್ರೂ ಎಸ್ಸೆಸ್ಸು ನಗ್ತಾ ನಗ್ತಾ ಮಾತಾಡ್ತಾರೆ ಸ್ಕೂಲಿಗೆಲ್ಲ ಫೇಮಸ್ಸು ಎಬ್ಬಂತೆ ಅಭಿಪ್ರಾಯಗಳಿಸಿದೆ. ಮಕ್ಕಳು, ಶಿಕ್ಷಕವೃಂದ ಹಾಗೂ ಶಾಲಾ ಪರಿಸರದಿಂದ ಸಾಕಷ್ಟು ಪಾಠಗಳನ್ನು ಕಲಿತೇ.

50 ದಿನಗಳ ಕಾಲದ ಇಂಟರ್ನ್ ಶಿಪ್ ನಲ್ಲಿ ನನಗೆ ವಹಿಸಿದ ತರಗತಿ 8ನೇ ಬಿ ಮತ್ತು 9ನೇ ಬಿ ವಿಭಾಗಳು. ಆದರೆ ನಾನು ಶಾಲೆಯ ಎಲ್ಲಾ ತರಗತಿಗಳಿಗೂ ತೆರಳಿ ಮಕ್ಕಳೊಂದಿಗೆ ಸಂವಹನ ನಡೆಸುತ್ತಿದೆ. ಈ ಅಂಶವು ನನಗೆ ತುಂಬಾ ಸಂತೋಷ ಹಾಗೂ ಹೆಚ್ಚಿನ ಅನುಭವಗಳನ್ನು ನೀಡುತ್ತಿತ್ತು. ಇಂಟರ್ನ್ ಶಿಪ್ ನ ಕೊನೆಯ ದಿನದಂದು 8ನೇ ಬಿ, 9ನೇ ಬಿ ವಿದ್ಯಾರ್ಥಿಗಳು ಮತ್ತು ಶಾಲಾ ಶಿಕ್ಷಕ ವೃಂದದಿಂದ ಬೀಳ್ಕೊಡುಗೆ ಸಮಾರಂಭವನ್ನು ಮಾಡಿ 50 ದಿನಗಳ ಕಾಲದ ಶಾಲೆಯಲ್ಲಿನ ಉಪಸ್ಥಿತಿಗೆ ಗೌರವವನ್ನು ಸಲ್ಲಿಸಿದರು. ಈ ಕಾರ್ಯಕ್ರಮವು ಭಾವನಾತ್ಮಕವಾಗಿತ್ತು. 50 ದಿನಗಳ ಕಾಲದ ಏಳುಬೀಳಿನ ಕಲಿಕಾ ಪ್ರಕ್ರಿಯೆಯಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಾಯ ಮಾಡಿದ ಶಾಲೆಯ ನನ್ನ ಮೇಲ್ವಿಚಾರಕರುಗಳಾದ ಸಮಾಜ ವಿಜ್ಞಾನ ಸಹ ಶಿಕ್ಷಕರಾದ ಲಕ್ಷ್ಮಣ್ ಸರ್ ಕನ್ನಡ ಸಹ ಶಿಕ್ಷಕರಾದ ತೇಜೋಮೂರ್ತಿ ಸರ್ ಹಾಗೂ ಶಾಲೆಯ ಉಪ ಪ್ರಾಂಶುಪಾಲರಾದ ರವೀಶ್ ಸರ್ ಮತ್ತು ಶಾಲಾ ಶಿಕ್ಷಕರು ಶಾಲಾ ಭೋಧಕೇತರ ವರ್ಗ ಇವರುಗಳ ಎಲ್ಲರ ಸಹಕಾರವು ಸಾಕಷ್ಟು ಕಲಿಕಾನುಭವಗಳ ಬುತ್ತಿಯನ್ನು ಹೊತ್ತು ನನ್ನ ಮುಂದಿನ ಜೀವನದ ದಾರಿಯಲ್ಲಿ ಸಾಗುವಂತೆ ಮಾಡುವ ಸ್ಪೂರ್ತಿದಾಯಕ ಮುನ್ನುಡಿ ಆಗಿದೆ.

LEAVE A REPLY

Please enter your comment!
Please enter your name here