• ಜಾವಿದ್ ಕಂದಗಲ್ಲ, ಇಳಕಲ್

ಮಹಾಮಾರಿ ಕೊರೋನಾ ಸೋಂಕು ಮತ್ತು ಅದರ ಹರಡುವಿಕೆಯನ್ನು ನಿಯಂತ್ರಿಸಲು ವಿಧಿಸಿದ್ದ ಲಾಕ್ಡೌನ್ ನಿಂದಾಗಿ ಇಡೀ ದೇಶದ ಜನರ ಜೀವನ ವ್ಯವಸ್ಥೆ ಕಷ್ಟದಲ್ಲಿ ಇರುವುದು ಸುಳ್ಳಲ್ಲ. ಇದರಿಂದ ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ತುಂಬಾ ಸಮಸ್ಯೆಗಳು ಉದ್ಭವವಾಗಿವೆ. ಅದರ ಭಾಗವಾಗಿ ಖಾಸಗಿ ಶಾಲಾ ಶಿಕ್ಷಕರ ಪರಿಸ್ಥಿತಿಯಂತೂ ತುಂಬಾ ಚಿಂತಾಜನಕವಾಗಿದೆ.

ಸಮಾಜದ ಉದಯೋನ್ಮುಖ ಪ್ರತಿಭೆಗಳಿಗೆ ವಿದ್ಯೆ ನೀಡಿ ಪೋಷಿಸುವ ಶಿಕ್ಷಕನ ಜೀವನ ಇವತ್ತು ಕಷ್ಟದಲ್ಲಿದೆ, ಅವರ ಬದುಕು ಜೀವ ಇದ್ದು ನಿರ್ಜೀವದಂತಾಗಿದೆ. ಹಲವಾರು ಸಂಕಷ್ಟಗಳ ಸರಮಾಲೆಗಳಲ್ಲಿ ಆತನು ಸಿಲುಕಿಕೊಂಡಿದ್ದಾನೆ. ಒಂದು ವರ್ಷದ ನಂತರ ಸರಕಾರವು ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಸಹಾಯ ಧನ ನೀಡುತ್ತಿರುವುದು ಸಮಾಧಾನಕರವೇ ಹೊರತು ಅದು ಸಂಪೂರ್ಣ ಪರಿಹಾರವಿಲ್ಲ. ಪ್ರತಿ ತಿಂಗಳು ಬರುತ್ತಿದ್ದ ತನ್ನ ಸಂಪಾದನೆಯಲ್ಲಿ ಇಡೀ ತಿಂಗಳು ಕಳೆಯುವುದೇ ಕಷ್ಟವಾಗಿರುವಾಗಿದ್ದ ದಿನಗಳು ಅವು ಆದರೆ ಲಾಕ್ಡೌನ್ ಆದಾಗಿನಿಂದ ಆ ಸಂಬಳವೂ ಸಿಗದೆ ಮತ್ತಷ್ಟು ಹೆಚ್ಚಿನ ಕಷ್ಟಕರ ದಿನಗಳನ್ನು ದೂಡುತ್ತಿದ್ದಾನೆ. ಸಮಾಧಾನವೆಂಬಂತೆ ಕೆಲವು ಸಮಾಜ ಪರ ಸಂಘಟನೆಗಳಿಂದ ಬಂದ ಸಣ್ಣಪುಟ್ಟ ಕಿಟ್ ಗಳಿಂದ ಜೀವನ ಸಾಗುತ್ತಿದೆ ಎಂದರೆ ಅದರಲ್ಲಿಯೂ ಕೆಲವರಿಗೆ ಕಿಟ್ ಸಿಕ್ಕಿದರೆ, ಇನ್ನು ಕೆಲವರಿಗೆ ಅದು ಕೂಡ ನಸೀಬಾಗಿಲ್ಲ. ಸ್ವಾಭಿಮಾನ ಬದುಕನ್ನು ನಡೆಸುತ್ತಿದ್ದ ಶಿಕ್ಷಕರು ತಮ್ಮ ಅಳಲನ್ನು ಯಾರ ಬಳಿ ತೊಡಿಕೊಳ್ಳಬೇಕು?. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅದು ಹೇಗೋ ಕೆಲವರು ತಮ್ಮ ಜೀವನವನ್ನು ಸಾಗಿಸಲು ತರಕಾರಿ ಹಣ್ಣು ಮಾರುವುದು, ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದಾರೆ ಇದರಲ್ಲಿ ಕೂಲಿ ಕೆಲಸವನ್ನು ಮಾಡಿದ ಉದಾಹರಣೆಯು ಇದೆ. ಅದರೊಂದಿಗೆ ಮಾಸ್ಕ್ ಮಾರುವ ಮುಂತಾದ ಕೆಲಸ ಮಾಡುತ್ತಾ ಪರಿವಾರದ ಹೊಟ್ಟೆಯನ್ನು ತುಂಬಿಸಲು ಅಗಲಿರುಳು ಶ್ರಮಿಸುತ್ತಿದ್ದಾರೆ. ಇನ್ನು ಕೆಲವರು ಇಂದಲ್ಲ ನಾಳೆ ಪರಿಸ್ಥಿತಿ ಸರಿಹೋಗಬಹುದು ಎಂಬ ನಿರೀಕ್ಷೆಯಲ್ಲಿ ಭವಿಷ್ಯನಿಧಿ ಸೇರಿದಂತೆ ಉಳಿತಾಯ ಖಾತೆಯ ಹಣವನ್ನು ಖಾಲಿ ಮಾಡಿಕೊಳ್ಳುತ್ತಿದ್ದಾರೆ ಇದು ಖಾಸಗಿ ಶಾಲಾ ಶಿಕ್ಷಕರ ಪಾಡಾದರೆ. ಇನ್ನೂ ಹೊಸದಾಗಿ ಪ್ರಾರಂಭಿಸಿದ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಡು ಇದಕ್ಕೆ ಹೊರತಾಗಿಲ್ಲ. ಆರ್ಥಿಕವಾಗಿ ಬಲಿಷ್ಠವಿರುವ ಕೆಲವು ದೊಡ್ಡ ದೊಡ್ಡ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿ ಕಾರ್ಯನಿರತ ಶಿಕ್ಷಕರಿಗೆ ಮತ್ತು ಸಿಬ್ಬಂದಿಗಳಿಗೆ ವೇತನ ನೀಡುವಷ್ಟು ಅನುಕೂಲವನ್ನು ಹೊಂದಿವೆ ಮತ್ತೆ ಕೆಲವು ಶಿಕ್ಷಣ ಸಂಸ್ಥೆಗಳು ಅರ್ಧದಷ್ಟು ವೇತನ ಪಾವತಿ ಮಾಡಲು ಮುಂದಾಗಿರುವುದು ನೆಮ್ಮದಿಯ ವಿಚಾರ. ಆದರೆ ಇನ್ನೂ ಕೆಲವು ಶಿಕ್ಷಣ ಸಂಸ್ಥೆಗಳು ಹಿಂದಿನ ವೇತನವನ್ನೇ ನೀಡಿಲ್ಲ, ಕಾರಣ ಕೇಳಿದರೆ, ಕಳೆದ ವರ್ಷದಿಂದ ಶಾಲಾ ಶುಲ್ಕ ಜಮಾ ಆಗಿಲ್ಲ, ಪಾಲಕರು ಪಾವತಿಸಿದ ಮೇಲೆ ನಿಮಗೆ ವೇತನ ನೀಡಲಾಗುವುದು ಎಂದು ಹೇಳುತ್ತಿವೆ. ಇವೆಲ್ಲವೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಸಮಸ್ಯೆಗಳಾಗಿವೆ.

ಹೀಗಿರಬೇಕಾದರೆ ಸರಕಾರದ ವತಿಯಿಂದ ಮತ್ತೊಂದು ಸಂಕಷ್ಟ ಎದುರಾಗಿದೆ ಅದೇನೆಂದರೆ ಖಾಸಗಿ ಶಾಲೆಗಳು ಆನ್ಲೈನ್ ತರಗತಿಗಳನ್ನು ಆರಂಭಿಸಬೇಕು ಆದರೆ ವಿದ್ಯಾರ್ಥಿಗಳ ಪಾಲಕರಿಂದ ಶಾಲಾ ಶುಲ್ಕಕ್ಕಾಗಿ ಒತ್ತಾಯಿಸುವಂತಿಲ್ಲ, ಶಾಲಾ ಶುಲ್ಕವನ್ನು ಕಟ್ಟದಿದ್ದರೂ ಆನ್ಲೈನ್ ತರಗತಿಗಳಲ್ಲಿ ಅವಕಾಶ ಕಲ್ಪಿಸಬೇಕು ಎಂಬ ಸೂಚನೆ ನೀಡಿದ್ದಾರೆ. ಸರಿ ಸರ್ಕಾರದ ನಿರ್ಧಾರವನ್ನು ನಾವು ಪಾಲಿಸೊಣ ಹಾಗೆಯೇ ಆಗಲಿ, ಈ ತರಹದ ಸನ್ನಿವೇಶಗಳನ್ನು ದೊಡ್ಡ ದೊಡ್ಡ ಖಾಸಗಿ ಶಿಕ್ಷಣ ಸಂಸ್ಥೆಗಳು ಹೇಗೋ ನಿಭಾಯಿಸಿಕೊಳ್ಳಬಹುದು. ಆದರೆ ಸಣ್ಣಪುಟ್ಟ ಹಾಗೂ ಹೊಸದಾಗಿ ಪ್ರಾರಂಭಿಸಿರುವ ಖಾಸಗಿ ಶಾಲೆಗಳು ಅದನ್ನು ಸಮರ್ಥಿಸಿಕೊಳ್ಳುವುದು ಅಥವಾ ಅದನ್ನು ಒಪ್ಪುವುದು ತುಂಬಾ ಕಠಿಣವಾಗಿದೆ. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಮೊದಲೇ ಅತಿ ಕಡಿಮೆ ಶುಲ್ಕ ತೆಗೆದುಕೊಂಡು ನಡೆಸುತ್ತಿರುವಾಗ ಈ ರೀತಿಯ ನಿರ್ಬಂಧಗಳನ್ನು ಅವರ ಮೇಲೆ ಹಾಕಿದರೆ ತಮ್ಮ ಶಿಕ್ಷಕರಿಗೆ ಎಲ್ಲಿಂದ ತಾನೆ ವೇತನವನ್ನು ನೀಡಬೇಕು? ಇನ್ನು ಖಾಸಗಿ ಶಾಲಾ ಶಿಕ್ಷಕರ ಮಾಸಿಕ ವೇತನವೇ ಅತಿ ಕಡಿಮೆಯಾಗಿದ್ದು ಅದರಿಂದ ಇಡೀ ತಿಂಗಳು ಜೀವನ ನಡೆಸುವುದು ಕಷ್ಟಸಾಧ್ಯವಾಗಿತ್ತು. ಈಗ ಅದು ಇಲ್ಲದೆ ಅಥವಾ ಅರ್ಧ ಸಂಬಳದಲ್ಲಿ ಆನ್ಲೈನ್ ತರಗತಿಗಳನ್ನು ಆರಂಭಿಸಬೇಕು ಅಂತ ಹೇಳಿದರೆ ಅದು ಹೇಗೆ ಸಾಧ್ಯ? ಒಮ್ಮೆ ಯೋಚಿಸಿ ನೋಡಿ ಅತಿ ಕಡಿಮೆ ವೇತನದಲ್ಲಿ ಇಡೀ ಸಂಸಾರವನ್ನು ಸಾಗಿಸಬೇಕು ಮತ್ತು ವಿದ್ಯಾರ್ಥಿಗಳ ಆನ್ಲೈನ್ ಕ್ಲಾಸಿಗಾಗಿ ಅಂತರ್ಜಾಲದ ವ್ಯವಸ್ಥೆಯನ್ನು ಕೂಡ ಮಾಡಿಕೊಳ್ಳಬೇಕು ಅಂತ ಹೇಳಿದರೆ ತುಂಬಾ ಕಷ್ಟಾನೆ.

ಸರಕಾರ ಇದರ ಕುರಿತು ಗಂಭೀರವಾಗಿ ಯೋಚಿಸಬೇಕಾಗಿದೆ. ಮತ್ತು ಖಾಸಗಿ ಶಾಲಾ ಶಿಕ್ಷಕ ಮತ್ತು ಸಿಬ್ಬಂದಿಗಳಿಗೆ ಕೊರೋನಾ ಮಹಾಮಾರಿ ತೊಲಗಿ ಜನಜೀವನ ಸರಿದೂಗಿ, ಮಕ್ಕಳು ಶಾಲೆಗೆ ಸರಿಯಾಗಿ ಬರುವ ತನಕ ಹಾಗೂ ಯಾವುದೇ ರೀತಿಯ ಗೊಂದಲಗಳಿಲ್ಲದೆ ನಿರ್ಭೀತರಾಗಿ ಜನ ಓಡಾಡುವ ತನಕ ಸರಕಾರವು ಖಾಸಗಿ ಶಾಲಾ ಶಿಕ್ಷಕರಿಗೆ ಮತ್ತು ಸಿಬ್ಬಂದಿಗಳಿಗೆ ಕನಿಷ್ಠ ಧನಸಹಾಯವನ್ನು ನೀಡಬೇಕು. ಈಗಾಗಲೇ ಸರ್ಕಾರ ಘೋಷಿಸಿರುವ ಸಹಾಯವು ಪ್ರತಿಯೊಬ್ಬರಿಗೂ ಇನ್ನೂ ತಲುಪಿಲ್ಲ ಮತ್ತು ಅದು ಕುಟುಂಬವನ್ನು ನಿರ್ವಹಿಸಲು ಸಾಕಾಗುವುದಿಲ್ಲ ಇದರೊಂದಿಗೆ ಎರಡು ಮೂರು ತಿಂಗಳಿಗೆ ಬೇಕಾಗುವಷ್ಟು ದಿನಸಿ ಆಹಾರದ ಕಿಟ್ ಅನ್ನು ವಿತರಣೆ ಮಾಡುವುದರಿಂದ ಬಹಳಷ್ಟು ಸಹಾಯವಾಗುತ್ತದೆ ಎಂಬುದು ಖಾಸಗಿ ಶಾಲಾ ಶಿಕ್ಷಕರ ಬೇಡಿಕೆಯಾಗಿದೆ. ಹಾಗೆಯೇ ಹಳೆಯ ಖಾಸಗಿ ಶಿಕ್ಷಣ ಸಂಸ್ಥೆಯವರು ದಯವಿಟ್ಟು ಶಾಲಾ ಶುಲ್ಕಕ್ಕಾಗಿ ಪಾಲಕರಿಗೆ ಒತ್ತಾಯ ಮಾಡಬೇಡಿ, ಏಕೆಂದರೆ ಕೋವಿಡ್ 19 ರ ಮಹಾಮಾರಿಯಿಂದಾಗಿ ಕೇವಲ ಖಾಸಗಿ ಶಾಲಾ ಶಿಕ್ಷಕರಲ್ಲದೆ ಸಮಾಜದ ಹಲವಾರು ವರ್ಗದ ಜನರು ಆರ್ಥಿಕವಾಗಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಪರಿಸ್ಥಿತಿಯನ್ನು ಅರಿತುಕೊಂಡು ಅವರ ಬಗ್ಗೆಯೂ ಕಾಳಜಿ ವಹಿಸಬೇಕಾಗ ಸಾಮಾಜಿಕ ಹೊಣೆಗಾರಿಕೆಯು ನಮ್ಮ ಮೇಲಿದೆ.

LEAVE A REPLY

Please enter your comment!
Please enter your name here