• ಅರುಣ್ ಜೋಳದಕೂಡ್ಲಿಗಿ

ಕುತೂಹಲಕ್ಕೆ ಅಂಬೇಡ್ಕರ್ ಅವರು ತಮ್ಮ ಬರಹ ಮತ್ತು ಭಾಷಣಗಳಲ್ಲಿ ‘ಬ್ರಾಹ್ಮಣ’ ಎನ್ನುವ ಪದವನ್ನು ಅವರ ಚರ್ಚೆ ಸಂವಾದಗಳಲ್ಲಿ ಎಷ್ಟುಬಾರಿ ಉಲ್ಲೇಖಿಸಿರಬಹುದು ಎಂದು ಪರಿಶೀಲಿಸಿದರೆ, ಕನ್ನಡದಲ್ಲಿ ಪ್ರಕಟವಾದ 22 ಸಂಪುಟಗಳಲ್ಲಿ 3894 ರಷ್ಟು ಈ ಪದವನ್ನು ಉಲ್ಲೇಖಿಸಿ ಬೇರೆ ಬೇರೆ ನೆಲೆಯ ಚರ್ಚೆಗಳನ್ನು ಮಾಡಿದ್ದಾರೆ. ಇದನ್ನು 19 ಇಂಗ್ಲೀಷ್ ಸಂಪುಟಗಳ ಜತೆ ತಾಳೆ ನೋಡಿದರೆ 3399 ಬಾರಿ ಉಲ್ಲೇಖಿಸಿದ್ದಾರೆ. ಕನ್ನಡ ಅನುವಾದಕ್ಕೆ ಕೇವಲ ಇಂಗ್ಲೀಷ್ ಆಕರವನ್ನಷ್ಟೇ ಅಲ್ಲದೆ ಮರಾಠಿ ಭಾಷೆಯ ಬರಹ ಭಾಷಣಗಳನ್ನೂ/ಅಪ್ರಕಟಿತ ಹಸ್ತಪ್ರತಿಗಳನ್ನೂ ಹೆಚ್ಚುವರಿಯಾಗಿ ಒಳಗೊಂಡ ಕಾರಣ “ಬ್ರಾಹ್ಮಣ” ಉಲ್ಲೇಖ ಇಂಗ್ಲೀಷ್ ಸಂಪುಟಗಳಿಗಿಂತ ಹೆಚ್ಚಾಗಿರಲು ಸಾಧ್ಯವಿದೆ.
ಡಾ.ಬಾಬಾಸಾಹೇಬರು ಬಹುತೇಕ ಅಂದರೆ ಶೇ 80 ರಷ್ಟು ‘ಬ್ರಾಹ್ಮಣ’ ಪದವನ್ನು ಸನಾತನತೆ/ಅಸ್ಪೃಶ್ಯತೆಯ ಆಚರಣೆ/ ದಲಿತರ ಶೋಷಣೆ/ಜಾತಿಭೇದ/ತರತಮ ಉಚ್ಚ-ನೀಚ ಸಂಸ್ಕೃತಿ/ಮೌಢ್ಯದ ಹೇರಿಕೆ/ಪುರೋಹಿತ ಶಾಹಿಯ…ಕುರಿತಂತೆ ನಡೆಸಿದ ಚರ್ಚೆಯಲ್ಲಿ ಬಳಸಿದ್ದಾರೆ. ಇದರಲ್ಲಿ ಅಂಬೇಡ್ಕರ್ ಬಳಸಿದ ಸನಾತನ ಸಂಸ್ಕೃತಿ/ಬ್ರಾಹ್ಮಣ್ಯ/ ಮನುವಾದಿ/ಬ್ರಾಹ್ಮಣಶಾಹಿ/ವೈದಿಕ/ವೈದಿಕಶಾಹಿ ಪದ ಬಳಕೆಯನ್ನು ಪರಿಗಣಿಸಿಲ್ಲ. ಇವುಗಳನ್ನೂ ಒಳಗೊಂಡರೆ ಈ ಉಲ್ಲೇಖಗಳ ಸಂಖ್ಯೆ ಇನ್ನೂ ಹೆಚ್ಚಿದೆ. ಇವೆಲ್ಲ ಪರೊಕ್ಷವಾಗಿ ಬ್ರಾಹ್ಮಣ/ಬ್ರಾಹ್ಮಣ್ಯ/ಬ್ರಾಹ್ಮಣ ಶಾಹಿಯ ಕಟು ಟೀಕೆಗಳೇ ಆಗಿವೆ.

ಇತಿಹಾಸಪೂರ್ವ ಕಾಲದಿಂದಲೂ ಜನರ ತಲೆಯಲ್ಲಿ ಮೌಢ್ಯವನ್ನು ಬಿತ್ತಿ ಅದನ್ನೆ ಜನರ ನಂಬಿಕೆಗಳು ಎಂದು ಒಪ್ಪಿಸಿ ಅಸ್ಪೃಶ್ಯ/ ದಲಿತ/ದಮನಿತ/ಹಿಂದುಳಿದ/ಮಹಿಳೆ/ಕೆಳವರ್ಗದ ಜನರನ್ನು ರಾಜಶಾಹಿ ಮತ್ತು ಬ್ರಾಹ್ಮಣಶಾಹಿಯ ಈ ಕೂಡು ಹೊಂದಾಣಿಕೆಯು ಆಳುತ್ತಾ ಬಂದಿದೆ. ಇದು ಆಧುನಿಕ ಕಾಲದಲ್ಲಿಯೂ ಹೊಸ ಹೊಸ ಪಟ್ಟುಗಳೊಂದಿಗೆ ಜೀವಂತವಾಗಿಯೇ ಮುಂದುವರಿದಿದೆ. ಸನಾತನ ತರತಮ-ಉಚ್ಚನೀಚ ಭೇದಗಳು ಡಿಜಿಟಲ್ ಮಾಧ್ಯಮದಲ್ಲಿಯೂ ನಿರಂತರ ವೇಶ ಬದಲಿಸಿಕೊಂಡು ಜಾರಿಗೊಳ್ಳುತ್ತಲೇ ಇವೆ.

ಹಾಗಾಗಿ ಬ್ರಾಹ್ಮಣ/ಬ್ರಾಹ್ಮಣಶಾಹಿ/ಸನಾತನ/ಪುರೋಹಿತಶಾಹಿಯ ಹುನ್ನಾರಗಳನ್ನು ಬಯಲು ಮಾಡಲು ಈ ಪದಬಳಕೆಯು ಈಗ ಗುರುತಿಸಿಕೊಳ್ಳುವ ‘ಬ್ರಾಹ್ಮಣ’ ಜಾತಿಯನ್ನು ಪ್ರತಿನಿಧಿಸುವ ಜನರನ್ನು ಆಧರಿಸಿರದೆ, ಕ್ರಿಸ್ತಪೂರ್ವ ಕಾಲದಿಂದಲೂ ಬ್ರಾಹ್ಮಣ್ಯದ ಹೆಸರಲ್ಲಿ ಮೌಢ್ಯ ಬಿತ್ತಿದ ಒಂದು ದೊಡ್ಡ ಪರಂಪರೆಯನ್ನು ಆಧರಿಸಿದೆ. ಹಾಗಾಗಿ ಸನಾತನ ಮೌಢ್ಯದ ಚರ್ಚೆಗೆ ಬ್ರಾಹ್ಮಣ/ಬ್ರಾಹ್ಮಣ್ಯದ ಉಲ್ಲೇಖಗಳು ಎಂದಿಗೂ/ಎಂದಿಗೂ ಸಂಶೋಧನೆ/ಅಧ್ಯಯನಗಳ ‘ಆಕರ’ವಾಗಿರುತ್ತವೆ. ಹಾಗಾಗಿ ಕೇವಲ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ಈ ಚಾರಿತ್ರಿಕ ಸತ್ಯಗಳನ್ನು ಅಲ್ಲಗಳೆಯಲಾಗದು/ಅಲ್ಲಗಳೆಯಬಾರದೂ ಕೂಡ. ಈ ವಿಷಯದಲ್ಲಿ ಸ್ವತಃ ‘ಬ್ರಾಹ್ಮಣ’ ಸಮುದಾಯದಲ್ಲಿ ಹುಟ್ಟಿದ ಜನರೂ ಸಹಾ ಪಾರಂಪರಿಕ ಬ್ರಾಹ್ಮಣ್ಯದ ಮೌಢ್ಯವನ್ನು ಎಲ್ಲರ ಜೊತೆ ಸೇರಿ ವಿರೋಧಿಸಬೇಕು. ಅರಿತೋ ಅರಿಯದೆಯೋ/ಪ್ರಜ್ಞಾಪೂರ್ವಕವಾಗಿಯೋ/ಅಪ್ರಜ್ಞಾಪೂರ್ವಕವಾಗಿಯೋ ಈ ಮೌಢ್ಯಗಳನ್ನು ವಯಕ್ತಿಕ ಮಟ್ಟದಲ್ಲಿ ಪಾಲಿಸುತ್ತಿದ್ದರೆ ಅದನ್ನವರು ಬಿಟ್ಟು ಈ ಪಾರಂಪರಿಕ ಮೌಢ್ಯದ ಸನಾತನ ವಾರಸುದಾರಿಕೆಯಿಂದ ಹೊರಬರಬೇಕು.

ಹೀಗಾಗಿ ಪಾರಂಪರಿಕ ಬ್ರಾಹ್ಮಣ್ಯದ ಸನಾತನತೆಯನ್ನು ವಿರೋಧಿಸುವಾಗ ಈಗಿನ ‘ಬ್ರಾಹ್ಮಣ’ ಸಮುದಾಯವನ್ನು ಗುರಿಮಾಡುವುದು ಹೇಗೆ ಅಪರಾಧವೋ.. ಇದೇ ಪಾರಂಪರಿಕ ಬ್ರಾಹ್ಮಣ್ಯದ ಮೌಢ್ಯಗಳ ಹೇರಿಕೆಯನ್ನು ಬೆಂಬಲಿಸುತ್ತಾ ತನ್ನ ‘ಬ್ರಾಹ್ಮಣ’ ಜಾತಿಯನ್ನು ಸಮರ್ಥಿಸುವುದು ಕೂಡ ಅಷ್ಟೇ ಅಪರಾಧವಾಗುತ್ತದೆ. ಈ ಸೂಕ್ಷ್ಮಗಳನ್ನು ಈಗಿನ ಬ್ರಾಹ್ಮಣ್ಯ-ಬ್ರಾಹ್ಮಣಶಾಹಿ ಕುರಿತ ಚರ್ಚೆ ಸಂವಾದಗಳಲ್ಲಿ ಗಮನಿಸಬೇಕಿದೆ.

ಅಜೋ

LEAVE A REPLY

Please enter your comment!
Please enter your name here